RSS

Monthly Archives: ಮಾರ್ಚ್ 2012

ರಸಧಾರೆ – ೪೮

ಒಂದಿಹುದುಪಾಯವೋರೊರ್ವನರೆಗಣ್ಣುಗಳು
ವೊಂದೊಂದು ಸತ್ಯಾಂಶಕಿರಣಗಳ ಪಿಡಿದು
ಒಂದುಗೂಡಿದೊಡವರ್ಗಳರಿವನೆಲ್ಲವನಾಗ
ಮುಂದುಸಾಗುವೆವಿನಿತು – ಮಂಕು ತಿಮ್ಮ

ಒಂದಿಹುದುಪಾಯವೊರೊರ್ವನರೆಗಣ್ಣುಗಳು = ಒಂದು+ಇಹುದು+ಉಪಾಯ+ವೋರೊರ್ವನ +ಅರೆಗಣ್ಣುಗಳು /
ಒಂದುಗೂಡಿದೊಡವರ್ಗಳರಿವನೆಲ್ಲವನಾಗ = ಒಂದು+ ಕೂಡಿದೊಡೆ + ಅವರ+ ಅರಿವನೆಲ್ಲವ + ಆಗ

ಅರೆಗಣ್ಣುಗಳು= ಅರೆಬರೆ ಜ್ಞಾನ, ಇನಿತು = ಸ್ವಲ್ಪ.

ಒಂದು ಇಹುದು ಉಪಾಯ ಓರೋರ್ವನ ಅರೆಗಣ್ಣುಗಳು ಒಂದೊಂದು ಸತ್ಯಾಂಶ ಕಿರಣಗಳ ಪಿಡಿದು
ಒಂದು ಕೂಡಿದೊಡೆ ಅವರ್ಗಳ ಅರಿವನೆಲ್ಲವ ಆಗ ಮುಂದು ಸಾಗುವೆ ಇನಿತು ಮಂಕುತಿಮ್ಮ

ಎಲ್ಲರಲ್ಲೂ ಅವರವರ ಭಾವಕ್ಕೆ ಅನುಗುಣವಾಗಿ ಅಲ್ಪ ಸ್ವಲ್ಪ ಜ್ಞಾನವಿರುತ್ತದೆ. ಜ್ಞಾನಶೂನ್ಯ ಎಂಬುವವನು ಇರಲು ಸಾಧ್ಯವೇ ಇಲ್ಲ. ಹಾಗೆ ಎಲ್ಲರಿಗೂ ಇರುವ ಅಲ್ಪಸ್ವಲ್ಪ ಜ್ಞಾನಗಳನ್ನೆಲ್ಲ, ಎಲ್ಲರ ಮನದಲ್ಲಿರುವ ಸತ್ಯವಾದ ವಿಚಾರಗಳನ್ನು ಒಂದು ಕಡೆ ಸೇರಿಸಿ ಎಲ್ಲರೂ ತಮ್ಮ ಮತವೆ ಉತ್ತಮವಾದದ್ದು ಎಂಬ ಭಾವನೆ ತೊರೆದು ಒಮ್ಮತದಿಂದ ಮುಂದೆ ಹೋದರೆ, ಎಲ್ಲರೂ ಪರಮಸತ್ಯವನ್ನರಿಯುವ ಹಾದಿಯಲ್ಲಿ ಒಂದಿಷ್ಟು ಮುಂದಕ್ಕೆ ಹೋಗಬಹುದು ಎನ್ನುವುದು ಈ ಕಗ್ಗದ ಮೂಲಕ ಮಾನ್ಯ ಗುಂಡಪ್ಪನವರ ಪ್ರಸ್ತಾಪ.

ನೋಡಿ ಪ್ರತಿಯೊಂದು ವಿಷಯದಲ್ಲೂ ಪ್ರತಿಯೊಬ್ಬರೂ ಅವರವರದೇ ಅದಂತ ಅಭಿಪ್ರಾಯಗಳನ್ನು ಇಟ್ಟುಕೊಂಡಿರುತ್ತಾರೆ. ಬಹಳ ಕಡಿಮೆ ಸಂದರ್ಭದಲ್ಲಿ ಇಬ್ಬರ ಅಭಿಮತ ಸೇರುತ್ತದೆ. ಆದರೆ ಪ್ರತಿಯೊಬ್ಬರ ಅಭಿಮತವನ್ನೂ ಬೇರೆ ಬೇರೆಯಾಗಿ, ಪೂರ್ವಾಗ್ರಹವಿಲ್ಲದೆ, ನೋಡಿದರೆ ಎಲ್ಲವೂ ಸರಿಯೆಂದು ಕಾಣುತ್ತದೆ. ಇದೇ ರೀತಿ ಆ ಪರಮಾತ್ಮನನ್ನು ಅರಿಯುವ ಪರಿಯಲ್ಲೂ ಪ್ರತಿಯೊಬ್ಬರಿಗೂ ಅವರವರದೇ ಆದಂತ ಅಭಿಪ್ರಾಯಗಳಿರುತ್ತದೆ.ಅದು ಅವರವರ ಭಾವಕ್ಕೆ ಬಂದದ್ದು. ಅಲ್ಲಗೆಳೆಯುವಂತಿಲ್ಲ. ಆದರೆ ಯಾವುದೂ ಸಂಪೂರ್ಣ ಸತ್ಯದೆಡೆಗೆ ನಮ್ಮನ್ನು ಕೊಂಡುಹೋಗುವಲ್ಲಿ ಅಸಮರ್ಥವಾಗಿರುತ್ತದೆ.

ಈ ಜಗತ್ತಿನಲ್ಲಿರುವ ಎಲ್ಲ ಮತಗಳೂ ಹೇಗೆಯೇ. ಹತ್ತು ಹಲವಾರು. ಉದ್ದೇಶ್ಯ ಒಂದೇ ಆದರೂ ಮಾರ್ಗಗಳು ಬೇರೆ ಬೇರೆ. ಕೆಲವರದು ವಿಸ್ತಾರ, ಮತ್ತೆ ಕೆಲವರದು ಕ್ಲುಪ್ತ. ಕೆಲವರದು ಸುಲಭ, ಮತ್ತೆ ಕೆಲವರದು ಕ್ಲಿಷ್ಟ. ಗುಂಪು ಗುಂಪುಗಳಾಗಿ ಜನರು, ತಮ್ಮ ಯೋಚನಾ ಸಾಮರ್ಥ್ಯಕ್ಕೆ ತಿಲಾಂಜಲಿ ಕೊಟ್ಟು ಕೆಲವರನ್ನು ಮತ್ತು ಕೆಲವರ ಅಭಿಮತವನ್ನು, ನಂಬುತ್ತಾರೆ. ಅದನ್ನು ಅಂಧಾನುಕರಣೆ ಎನ್ನುತ್ತೀರೋ ಅಥವಾ ಮೂಢನಂಬಿಕೆ ಎನ್ನುತೀರೋ ವಾಚಕರ ಅಭಿಮತಕ್ಕೆ ಬಿಟ್ಟದ್ದು. ಈ ಮತ ಪ್ರತಿಪಾದಕರು ತಮ್ಮ ಮತವೆ ಉತ್ತಮ, ಉತ್ಕೃಷ್ಟ, ಬೇರೆಲ್ಲವೂ ಸರಿಯಿಲ್ಲ ಎನ್ನುವ ಬೇಧವನ್ನು ಅವರ ಅನುಯಾಯಿಗಳ ಮನದಲ್ಲಿ ಬಿತ್ತಿ, ತಮ್ಮ ಅನುಯಾಯಿಗಳ ಸಂಖ್ಯೆಯನ್ನು ಬೆಳೆಸಿಕೊಳ್ಳುವುದರಲ್ಲಿ ನಿರಂತರ ನಿರತರು. ಹಾಗಾಗಿಯೇ ಇಷ್ಟೊಂದು ಮತಗಳು, ಮತಬೇಧಗಳು ಮತ್ತು ಮತೀಯ ಕಲಹಗಳು.

ಅಜ್ಞಾನದ ಪರಮಾವದಿ !!!! ನಾವೇನು ಮಾಡಬೇಕು ಎಂದರೆ, ಮೊದಲು ನಮ್ಮ ಮನದಿಂದ ದ್ವೇಷವನ್ನು ತೆಗೆಯಬೇಕು. ಅಹಂಕಾರವನ್ನು ತೆಗೆಯಬೇಕು. ಪರರನ್ನು ಸಹಿಸಿಕೊಳ್ಳುವ ಮನೋಭಾವ ಬೆಳೆಸಿಕೊಂಡು ವೃದ್ಧಿಸಿಕೊಳ್ಳಬೇಕು. ಆಗ ನಮಗೆ ಪ್ರತಿಯೊಬ್ಬರ ಮತದಲ್ಲೂ ಒಂದು ಮೂಲ ಸತ್ಯದ ದರ್ಶನವಾಗುತ್ತದೆ. ಹಾಗೆ ಎಲ್ಲರಲ್ಲೂ ಕಾಣುವ ಒಂದು ಸಮಾನ ಸತ್ಯಾಂಶವನ್ನು ತೆಗೆದುಕೊಂಡು ಅದನ್ನು ನಮ್ಮೆಲ್ಲರ ನಡಿಗೆಯ ಪ್ರಾರಂಭ ಬಿಂದುವನ್ನಾಗಿ ಗುರುತಿಸಿಕೊಂಡು ಅಲ್ಲಿಂದ ಮುಂದಕ್ಕೆ ಹೋದರೆ, ನಾವೆಲ್ಲರೂ ಏಕಮತದಿಂದ ಪರಮಾತ್ಮನನ್ನು ಅರಿಯುವ ನಮ್ಮ ಪ್ರಯತ್ನದಲ್ಲಿ ಸಫಲತೆಯನ್ನು ಪಡೆಯಬಹುದು ಅಲ್ಲವೆ? ಆದರೆ ಎಲ್ಲಿಯತನಕ, ಅಸಹಿಷ್ಣುತೆ ಮತ್ತು ಅಹಂಕಾರಗಳು ಇರುತ್ತವೆಯೋ ಅದು ಅಸಾಧ್ಯ.

ಹಾಗಾಗಿ ನಾವು ಅಹಂಕಾರವನ್ನು ಮತ್ತು ಅಂಧಾನುಕರಣೆಯನ್ನು ತೊರೆದು ಜಾತಿ, ಮತ, ವರ್ಣ, ಲಿಂಗ ಬೇಧಗಳನ್ನು ಅಳಿಸಿ ಒಮ್ಮತದಿಂದ ನಮ್ಮೆಲ್ಲರ ಅಂತಃಸತ್ಯವನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಮಾಡಿ ತನ್ಮೂಲಕ ಪರಮ ಸತ್ಯದ ಅರಿವಿನೆಡೆಗೆ ಹೋಗೋಣ. ನಾನು ಹೊರಟೆ ನೀವೂ ಬರುವಿರಾ?

Advertisements
 

ಚೆನ್ನುಡಿ

ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬಹದು
ಆದರೆ ನಮ್ಮ ಚಿತ್ರ ವಿಚಿತ್ರವಾದ ಯೋಚನೆ ಮತ್ತು ಆಲೋಚನೆಗಳೇ
ನಮ್ಮ ಸಾಧನೆಯ ಹಾದಿಯಲ್ಲಿ ನಮ್ಮನ್ನು ತಡೆಯುತ್ತವೆ.

 

ರಸಧಾರೆ – ೪೭

ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು ?
ಅರೆಬೆಳಕು ಧರೆಯೊಳೆಂದೊರಲಿ ಸುಖವೇನು?
ಇರುವ ಕಣ್ಣಿರುವ ಬೆಳಕಿನೊಳಾದನಿತ ನೋಡಿ
ಪರಿಕಿಸಿದೊಡದು ಲಾಭ – ಮಂಕುತಿಮ್ಮ.

ಧರೆಯೊಳೆಂದೊರಲಿ = ಧರೆಯೊಳು + ಎಂದು + ಒರಲಿ. ಬೆಳಕಿನೊಳಾದನಿತ = ಬೆಳಕಿನೊಳು+ಆದ+ಇನಿತ.

ಅರೆಗಣ್ಣು = ಅರ್ದಂಬರ್ದ ಜ್ಞಾನ. ಅರೆಬೆಳಕು = ಅರ್ಧಬೆಳಕು. ಒರಲಿ = ಕೂಗಿ. ಇನಿತ= ಒಂದಿಷ್ಟು, ಪರಿಕಿಸಿದೊಡದು = ಪರೀಕ್ಷಿಸಿದರೆ ಅದು

ಅರೆಗಣ್ಣು ನಮದು ಎಂದು ಕೊರಗಿ ಕೊರಗಿ ಫಲವೇನು? ಅರೆ ಬೆಳಕು ಧರೆಯೊಳು ಎಂದು ಒರಲಿ ಸುಖವೇನು?
ಇರುವ ಕಣ್ಣಿರುವ ಬೆಳಕಿನೊಳು ಆದ ಇನಿತ ನೋಡಿ ಪರಿಕಿಸಿದೊಡದು ಅದು ಲಾಭ ಮಂಕುತಿಮ್ಮ

ನಮಗೆ ತಿಳಿದಿರುವುದು ಅರೆ ಬರೆ. ಈ ಅರೆ ಬರೆ ಜ್ಞಾನವನ್ನು ಇಟ್ಟುಕೊಂಡು ನಾವು ಪೂರ್ಣ ಸತ್ಯವನ್ನು ಪಡೆಯುವುದು ಹೇಗೆ ಎಂದು ಗೋಳಾಡದೆ ಇರುವ ಅರಿವಿನಿಂದ ಸಂಪೂರ್ಣ ಜ್ಞಾನವನ್ನು ಪಡೆದುಕೊಳ್ಳಲು ಪ್ರಯತ್ನಿಸಿದರೆ ಅದು ಲಾಭಧಾಯಕವೆನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ಜಗತ್ತಿನ ಯಾವುದೇ ಭಾಗದಲ್ಲಿ ದಿನದ ಅರ್ಧಭಾಗ ಬೆಳಕು ಇನ್ನರ್ಧಭಾಗ ಕತ್ತಲು. ಬೆಳಕಿನಲ್ಲಿ ನಾವು ನಮ್ಮ ಕೆಲಸ ಕಾರ್ಯಗಳು ಮಾಡುವಹಾಗೆ, ಇರುವ ಜ್ಞಾನವನ್ನು ಉಪಯೋಗಿಸಿದರೆ ಲಾಭ ಎನ್ನುತ್ತಾರೆ. ಮಾನ್ಯ ಗುಂಡಪ್ಪನವರು.

ಒಬ್ಬ ಒಂದು ರಾತ್ರಿ ಎಲ್ಲೋ ಹೋಗಬೇಕಿತ್ತು. ಕತ್ತಲೆ. ಕೈನಲ್ಲಿ ಒಂದು ಲಾಟೀನು. ಅವನು ಹೋಗಬೇಕಾದ ದೂರ ಹತ್ತು ಮೈಲು. ಅಯ್ಯೋ ಈ ಕಡಿಮೆ ಬೆಳಕಿನ ಲಾಟೀನು ಇಟ್ಟುಕೊಂಡು ಅಷ್ಟು ದೂರ ನಾ ಹೇಗೆ ಸವೆಸುವುದು ಎಂದು ಯೋಚಿಸುತ್ತಾ ಕುಳಿತಿದ್ದ. ಆಗ ಅವನಿಗೆ ಒಬ್ಬರು ಒಂದು ಸೂಚನೆಯನ್ನು ಕೊಟ್ಟರು. ” ನಿನ್ನ ಲಾಟೀನಿನ ಬೆಳಕು ಹತ್ತು ಹೆಜ್ಜೆಗೆ ಸಾಕಾಗುವಷ್ಟು ಬೆಳಕನ್ನು ನೀಡುತ್ತದೆ. ಹಾಗಾಗಿ ಮೊದಲ ಹತ್ತು ಹೆಜ್ಜೆ ಆ ಬೆಳಕಿನ ಸಹಾಯದಿಂದ ನಡೆ. ಮುಂದಕ್ಕೆ ಇನ್ನೂ ಹತ್ತು ಹೆಜ್ಜೆ ನಿಚ್ಚಳವಾಗಿ ಕಾಣುವುದು. ಇದೇ ರೀತಿ ನೀ ಸವೆಸಬೇಕೆಂದಿರುವ ಹತ್ತೂ ಮೈಲಿಗಳನ್ನು ದಾಟಬಹುದು” ಎಂದು. ಅವರ ಮಾತ ಕೇಳಿ ಅವ ಹತ್ತೂ ಮೈಲಿಗಳನ್ನು ಸುನಾಯಾಸವಾಗಿ ದಾಟಿದ.

ವಾಚಕರೆ, ಎಲ್ಲ ಮಾನವರಿಗೂ ಒಂದಿನಿತು ಜ್ಞಾನವಿರುತ್ತದೆ. ಅದರ ಬೆಳವಣಿಗೆ ಮತ್ತು ವಿಸ್ತಾರ, ಅವರು ಹುಟ್ಟಿಬಂದ ಮನೆಯ ವಾತಾವರಣ, ಅವರಿರುವ ಸಮಾಜ, ಅವರಿಗೆ ದೊರೆತ ವಿಧ್ಯಾಭ್ಯಾಸ, ಅವರಿಗೆ ದೊರೆತ ಸಾಂಗತ್ಯ ಅವರು ಓದುವ ಪುಸ್ತಕ, ಹೀಗೆ ಹಲವಾರು ವಿಷಯಗಳ ಮೇಲೆ ಅಧಾರವಾಗಿರುತ್ತೆ. ಹಾಗಾಗಿಯೇ ಜನರಲ್ಲಿ ಅರಿವಿನ ಪ್ರಮಾಣದ ವ್ಯತ್ಯಾಸ ಮತ್ತು ಅರಿವಿನ ವ್ಯತ್ಯಯ. ಅಯ್ಯೋ ಅವರಿಗೆ ಎಷ್ಟು ವಿಷಯ ಗೊತ್ತು,ನನಗೇನೂ ಗೊತ್ತಿಲ್ಲ ಎಂದು ಹಲುಬುವುದಕ್ಕಿಂತ, ನಮಗೆ ಗೊತ್ತಿರುವ ವಿಚಾರಗಳನ್ನೇ ಚಿಂತಿಸಿ, ಅಂತರಂಗದಲ್ಲಿ ಮಥಿಸಿ, ಜ್ಞಾನಿಗಳೊಡಗೂಡಿ, ಆಲಿಸಿ, ಸಂದೇಹಗಳನ್ನು ನಿವಾರಿಸಿಕೊಂಡು, ನಮ್ಮೊಳಗೇ ನಾವೇ ವಿಚಾರಮಂಥನ ಮಾಡಿಕೊಂಡರೆ, ನಮ್ಮ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳಬಹುದು.

ಹಾಗಾಗಿ, ನಾವು ಸತ್ಯವಾಗಿ ನಮ್ಮ ನಮ್ಮ ಅರಿವಿನ ಸ್ಥರವನ್ನು ಅರಿತುಕೊಳ್ಳಬೇಕು. ಅರಿತಿದ್ದನ್ನು ಸಂದೇಹವಿಲ್ಲದೆ ಗಟ್ಟಿಮಾಡಿಕೊಳ್ಳಬೇಕು. ಮೇಲೆ ಹೇಳಿದ ವಿಧಾನದಲ್ಲಿ ಅದನ್ನು ವಿಸ್ತರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಾಗೆ ಮಾಡಿದರೆ ನಮಗೆ ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಲಾಭವಾಗುತ್ತೆ ಎನ್ನುವುದೇ ಈ ಕಗ್ಗದ ಹೂರಣ.

ನಾನು ಆ ಮಾರ್ಗದಲ್ಲಿ ನಡೆಯಲಿಚ್ಚಿಸುತ್ತೇನೆ. ನೀವು ಬರುವಿರಾ ನನ್ನ ಜೊತೆಗೆ. ?

 

ಚೆನ್ನುಡಿ

ಬುದ್ಧಿವಂತನಾದ ವ್ಯಕ್ತಿ ತನ್ನ ಕಾರ್ಯ ಸಾಧನೆಯನ್ನೆಲ್ಲ ಆನಂದವನ್ನು ಪಡೆಯುವುದಕ್ಕಾಗಿ ಅಲ್ಲದೆ
ಆನಂದವನ್ನು ತನ್ನ ಎಲ್ಲ ಗುರಿಗಳನ್ನು ಸಾಧಿಸಲಿಕ್ಕೆ ಉಪಯೋಗಿಸುತ್ತಾನೆ.

 

ರಸಧಾರೆ – ೪೬

ಇರಲಿ ಜೀವರಹಸ್ಯವರೆಪರದೆಯೊಳಗಡಗಿ I
ಅರಸಿ ವರಿಸುವರಾರು ಬೀದಿಬತ್ತಲಿಯ ? II
ಅರಳಿಪುದದಡಗಿರ್ದೊಡಾಗ ನಮ್ಮೆದೆಗಣ್ಣ I
ಸುರಸತೆಯ ಕುತುಕದಿಂ- ಮಂಕುತಿಮ್ಮ II

ಜೀವರಹಸ್ಯವರೆಪರದೆಯೊಳಗಡಗಿ = ಜೀವ+ರಹಸ್ಯ+ಅರೆಪರದೆ+ಒಳಗೆ+ಅಡಗಿ. ಅರಳಿಪುದದಡಗಿರ್ದೊಡಾಗ = ಅರಳಿಪುದು+ಅದು+ಅಡಗಿ+ಇರ್ದೊಡೆ +ಆಗ. ನಮ್ಮೆದೆಗಣ್ಣ= ನಮ್ಮ + ಎದೆಗಣ್ಣು

ಇರಲಿ ಜೀವರಹಸ್ಯ ಅರೆಪರೆದೆಯ ಒಳಗೆ ಅಡಗಿ ಅರಸಿ ವರಿಸುವರಾರು ಬೀದಿ ಬತ್ತಲಿಯ? ಅರಳಿಪುದು ಅದು ಅಡಗಿ ಇರ್ದೊಡೆ ಆಗ ನಮ್ಮೆದೆಗಣ್ಣ ಸುರಸತೆಯ ಕೌತುಕದಿಂ – ಮಂಕುತಿಮ್ಮ.

ಈ ಸೃಷ್ಟಿಯ ರಹಸ್ಯವು ತನ್ನ ನಿಜರೂಪವ ತೋರದೆ, ಒಂದು ಮಸುಕಾದ ಪರದೆಯೊಳಗೆ ಅಡಗಿದ್ದರೆ ಇರಲಿ. ನಮಗೆ ನಿಜವಾದ ಜ್ಞಾನವನ್ನು ಕೊಡಬೇಕಾದ ವಸ್ತು ಹೀಗೆ ಅಡಗಿ ಕುಳಿತ್ತಿದ್ದರೆ, ಹಾದಿಯಲ್ಲಿ ಹೋಗುವ ಓರ್ವ ಹುಚ್ಚಿಯನ್ನು ಯಾರಾದರೂ ಹುಡುಕಿಕೊಂಡು ಹೋಗಿ ಹೇಗೆ ವರಿಸುವುದಿಲ್ಲವೋ ಹಾಗೆ, ನಮ್ಮ ಅಂತಃಚಕ್ಷು ಕಾತರದಿಂದ ಅದನ್ನು ಅರಿಯಲು ಕಾಯುತ್ತಿರುತ್ತದೆ ಎಂದು ಪರಮಾತ್ಮನನ್ನು ಅರಿತುಕೊಳ್ಳುವ ವಿಚಾರವನ್ನು ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

ಹೌದು ನಮಗೆ ಅರಿವಾಗುವುದಿಲ್ಲ. ನಮಗೆ ಎಲ್ಲವೂ ಮಸುಕು. ಯಾವುದೂ ನಿಚ್ಚಳವಿಲ್ಲ. ನಾವೆಲ್ಲಾ ಬಹಳ ವಿಚಲಿತರಾಗಿದ್ದೇವೆ. ಏಕೆಂದರೆ ನಮ್ಮೆದುರಿಗೆ ಹಲವಾರು ರೂಪಗಳ ವಿವರಣೆ ಇದೆ. ಹಲವಾರು ಸಿದ್ಧಾಂತಗಳು ಹಲವಾರು ಬೇಧಗಳು ಮತ್ತು ಪ್ರಬೇಧಗಳು. ಯಾವುದನ್ನು ನಂಬುವುದು, ಯಾವುದನ್ನು ಹಿಡಿದುಕೊಳ್ಳುವುದು, ಯಾವುದನ್ನು ಬಿಡುವುದು. ಎಲ್ಲವೂ ಮಸುಕು ಮಸುಕು. ಎಲ್ಲವೂ ನಮಗೆ ಸಮರ್ಪಕವಾಗೆ ಕಾಣುತ್ತದೆ. ಏಕೆಂದರೆ ನಮ್ಮನ್ನು ಸತ್ಯವಾದ ಜ್ಞಾನದೆಡೆಗೆ ಕೊಂಡೊಯ್ಯಬೇಕಾದ ವಸ್ತುವೇ ಅಡಗಿ ಕುಳಿತಿದೆ. ” ಅರಳಿಪುದು ಅದು ಅಡಗಿ ಇರ್ದೊಡೆ” ಹಾಗಿರುವಾಗ ನಾವು ಏನು ಮಾಡಬೇಕು. ಆ ಸತ್ಯದ ಅರಿವಾಗುವತನಕ ಹೃದಯದ ಕಣ್ಣನ್ನು ತೆರೆದಿಟ್ಟುಕೊಂಡು ಮನಸ್ಸಿನ ಕಣ್ಣನ್ನು ತೆರೆದಿಟ್ಟುಕೊಂಡು ಕಾತರದಿ ಕಾಯುವುದನ್ನು ಬಿಟ್ಟರೆ ಬೇರೆ ಏನು ದಾರಿ ಎನ್ನುವ ಭಾವ ವ್ಯಕ್ತವಾಗಿದೆ ಈ ಕಗ್ಗದಲ್ಲಿ.

ನೋಡಿ ನಮ್ಮ ಸಮಾಜದಲ್ಲಿ ಏನಲ್ಲ ನಂಬಿಕೆಗಳುಂಟು. ಆದರೆ ಯಾವುದೂ ಸಹ “ಇದೆ ಪರಮ ಸತ್ಯ”ವೆನ್ನುವ ಗುಂಪಿಗೆ ಸೇರಲಾರದು. ಏಕೆಂದರೆ ಪರಮ ಸತ್ಯದ ಅರಿವು ನಮಗಿಲ್ಲ. ಹಾಗೆ ಇದ್ದಿದ್ದರೆ, ಇಷ್ಟು ಬೇಧಗಳು ಇರುತ್ತಿರಲಿಲ್ಲ ಅಲ್ಲವೇ? ಕೆಲವರಿಗೆ , ಶಿವರೂಪ, ಕೆಲವರಿಗೆ ವಿಷ್ಣುರೂಪ , ಕೆಲವರಿಗೆ ಎರಡೂ. ಕೆಲವರಿಗೆ “ಒಂದು” ( ಅದ್ವೈತ) ಕೆಲವರಿಗೆ ಯಾವುದೋ ವಿಶೇಷವಾದ ” ಒಂದು” ( ವಿಶಿಷ್ಟಾದ್ವೈತ) ಕೆಲವರಿಗೆ ಒಂದಲ್ಲ
ಎರಡು (ದ್ವೈತ). ಕೆಲವರಿಗೆ ” ಕರ್ತಾರ ” ಕೆಲವರಿಗೆ “ಅಲ್ಲಾ ” . ಹೀಗೆ ಬೇರೆ ಬೇರೆ ಜನರಿಗೆ ಬೇರೆಯಾದರೆ, ಒಂದೇ ಸತ್ಯದ ದರ್ಶನವಾಗಿಲ್ಲವೆಂದೇ ಅರ್ಥವಲ್ಲವೇ?

ಇನ್ನೂ ಸ್ವಲ್ಪ ಆಳವಾಗಿ ಹೋದರೆ, ಆ ಒಂದನ್ನೂ ಅಥವಾ ಎರಡನ್ನೂ ಅರಿಯುವ ಪರಿಯಾದರೂ ಒಂದೇ ಇದೆಯೋ ಎಂದರೆ, ಅದೂ ಇಲ್ಲ. ವೈಷ್ಣವರಲ್ಲಿ ಶ್ರೀ ವೈಷ್ಣವರು, ಮಾದ್ವರು, ಸ್ಮಾರ್ಥರು, ಗೌಡೀಯರು, ಸ್ವಾಮೀ ನಾರಾಯಣ ಪಂಥದವರು, ಇನ್ನು ಶೈವರಲ್ಲಿ ” ಸ್ಥಾವರ” ಲಿಂಗವನ್ನು ಪೂಜಿಸುವ ಶೈವರು, ” ಜಂಗಮ” ಲಿಂಗವನ್ನು ಪೂಜಿಸುವ ವೀರಶೈವರು. ಈ ಎಲ್ಲ ಪಂಗಡಗಳಲ್ಲೂ ಒಳಪಂಗಡಗಳು ಮತ್ತು ಆ ಒಳಪಂಗಡಗಳಲ್ಲಿ ಒಳಪಂಗಡಗಳು. ಈ ಬೆಧಗಳ ಬಗ್ಗೆ ಬರೆದರೆ ಒಂದು ಗ್ರಂಥವನ್ನೇ ಬರೆಯಬಹುದು. ಆದರೆ ಆ ಪರಮ ಸತ್ಯದ ಬಗ್ಗೆ ಬರೆಲು ಒಂದು ಪುಟದಷ್ಟೂ ಗೊತ್ತಿಲ್ಲ. ಇದೆಲ್ಲ ಏಕೆ, ಏನು ಎಂದು ಆಲೋಚನೆ ಮಾಡಿದರೆ, ನಮಗೆ ಇನ್ನಷ್ಟು ಗೊಂದಲವುಂಟಾಗುತ್ತದೆ.

ಕೆಲವರಿಗೆ ವಾರಕ್ಕೊಂದು ದೇವರು. ದಿನಕ್ಕೊಂದು ದೇವರು. ಆ ದೇವರುಗಳಿಗೆ ಬೇರೆ ಬೇರೆಯಾದ ವ್ರತ ನೇಮಗಳು. ಕೆಲವರಿಗೆ ಇದ್ದಾನೆ ಕೆಲವರಿಗೆ ಇಲ್ಲ.ಕೆಲವರಿಗೆ ಗೊತ್ತಿಲ್ಲ. ಯಾರೂ ಒಬ್ಬ ಅವನ ಅನುಭವದ ಸೀಮಿತ ಮಿತಿಯಿಂದ ಏನನ್ನೋ ಹೇಳುತ್ತಾನೆ. ನಾವು ಯೋಚನೆ, ಚಿಂತನೆ ಮಾಡಲು ಅಸಮರ್ಥರು. ಅವನ ಬಾಲ ಹಿಡಿದು ಅವನು ಹೇಳಿದ್ದನ್ನು ನಂಬುತ್ತೇವೆ. ಅವನ ದರ್ಶನವನ್ನು ನಮ್ಮ ದರ್ಶನವೆಂದು ಹೇಗೆ ನಂಬುವುದು. ಹೀಗೆ ಇಷ್ಟೊಂದು ಬೇಧಗಳಿರುವಾಗ, ಒಂದು ಸತ್ಯವು ಇನ್ನೂ ಪ್ರಕಟವಾಗದೆ, ಅಡಗಿ ಕುಳಿತಂತೆ ಅಲ್ಲವೇ? ಯಾವುದೂ ” ಇದೇ-ಇದು ” ಎಂದು ನಿಷ್ಕರ್ಷೆಯಾಗದಿರುವಾಗ, ನಾವು ಯಾವುದನ್ನೋ ಒಂದನ್ನು ಹಿಡಿದುಕೊಂಡು ಹೋದರೆ ದಾರಿಯಲ್ಲಿ ಹೋಗುವ ಹುಚ್ಚಿಯನ್ನು ಇಷ್ಟಪಟ್ಟು ಮಾಡುವೆ ಮಾಡಿಕೊಂಡಹಾಗೆ ಎನ್ನುತ್ತಾರೆ
ಶ್ರೀ. ಡಿ .ವಿ. ಜಿ.ಯವರು.

ಹಾಗಾಗಿ ವಾಚಕರೆ, ನಾವು ಏನು ಮಾಡಬೇಕು ಎಂದರೆ, ಅಂತರ್ಮುಖಿಗಳಾಗಬೇಕು. ನಮ್ಮ ಒಳಗಿರುವ ಜ್ಞಾನದ ಕಣ್ಣನ್ನು ಉದ್ದೀಪನಗೊಳಿಸಬೇಕು, ಒಬ್ಬ ಸರಿಯಾದ ಗುರುವನ್ನು ಆಶ್ರಯಿಸಬೇಕು ಮತ್ತು ನಮಗೆ ಆ ಪರಮ ಸತ್ಯದ ಅರಿವಾಗುವವ ತನಕ ಕಾಯಬೇಕು. ಎಂದೋ ಒಂದು ದಿನ ನಮಗೂ ಅರಿವು ಮೂಡುತ್ತದೆ ಮತ್ತು ಆ ಪರಮ ಶಕ್ತಿಯ ನಿಜ ಸ್ವರೂಪದ ದರ್ಶನವಾಗುತ್ತದೆ. ಹಾಗೆಂದರೆ, ನಾಲ್ಕು ಕೈಗಳಿಂದ, ಶಂಖ ಚಕ್ರಗಳಿಂದ ಅಲಂಕೃತನಾದ ವಿಷ್ಣುವೋ ಅಥವಾ ತ್ರಿಶೂಲಪಾಣಿಯಾಗಿ, ವಿಷಕಂಠನಾದ ಶಿವನೋ ಕಾಣುತ್ತಾರೆಂದಲ್ಲ. ಆ ರೂಪದ ಹಿಂದಿರುವ ತತ್ವದ ದರ್ಶನವಾಗುತ್ತದೆ. ಅದೇ ಆಧ್ಯಾತ್ಮ ಸಾಧನೆಯ ಉದ್ದೇಶ್ಯ.

ಬನ್ನಿ ನಾವೆಲ್ಲರೂ ಈ ನಿಟ್ಟಿನಲ್ಲಿ ನಮ್ಮ ಹೃದಯದ ಕಣ್ಣುಗಳನ್ನು ತೆರೆಯಲು ಪ್ರಯತ್ನಪಟ್ಟು ಸತ್ಯದ ಮತ್ತು ಸತ್ವಭಾರಿತವಾದ ತತ್ವದ ದರ್ಶನಕ್ಕಾಗಿ ಕಾಯೋಣ.

 

ಚೆನ್ನುಡಿ

ತಪ್ಪು ಮಾಡಿದರೆ ನೀರು ನೆಲದಲ್ಲಿ ಚೆಲ್ಲಿಹೋದಂತೆ, ತಪ್ಪು ತಿದ್ದಲಾಗುವುದಿಲ್ಲ.
ಆದರೆ ಮುಂದೆ ಅಂತಹ ತಪ್ಪುಮಾಡದಂತಾ, ಕಲಿಕೆಯ ಶಕ್ತಿ ಮತ್ತು ಸಾಮರ್ಥ್ಯದಿಂದ ನಮಗಿದೆ.
ನಾವು ಅದನ್ನು ಉದ್ದೀಪಿಸಿಕೊಳ್ಳಬೇಕು.

 

ರಸಧಾರೆ – ೪೫

ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು I
ಮಂಕುವಿಡಿಸಲು ಸಾಕು ಮಣ್ಣು೦ಡೆ ಕಣ್ಗೆ II
ಶಂಕೆಗೆಡೆಯಿರದು ಕತ್ತಲೆಯೇ ಜಗವನು ಕವಿಯೆ I
ಬೊಂಕುದೀವಿಗೆ ತಂಟೆ – ಮಂಕುತಿಮ್ಮ. II

ಶಂಕೆಗೆಡೆಯಿರದು= ಶಂಕೆಗೆ+ಎಡೆ+ಇರದು

ಬೆಂಕಿಯುಂಡೆ=ಸೂರ್ಯ, ಬೆಣ್ಣೆಯುಂಡೆ= ಚಂದ್ರ, ವಿಡಿಸಲು – ಬಿಡಿಸಲು, ಮಣ್ಣು೦ಡೆ= ಹಣತೆ , ಶಂಕೆಗೆಡೆಯಿರದು = ಸಂಶಯಕ್ಕೆ ಸ್ಥಳವಿರದು, ಬೊಂಕುದೀವಿಗೆ = ಅಸತ್ಯವಾದ ಜ್ಞಾನ.

ಸೂರ್ಯನ ಬೆಳಕಗಾಲೀ ಅಥವಾ ಚಂದ್ರನ ಬೆಳಕಗಾಲೀ ಅಥವಾ ಒಂದು ಪುಟ್ಟ ಹಣತೆಯಾದರೂ ಸಹ ನಮಗೆ ನೋಡಲು ಅನುವು ಮಾಡಿಕೊಡುತ್ತದೆ. ಆದರೆ ಜಗತ್ತನ್ನು ಸಂಪೂರ್ಣ ಕತ್ತಲೆ ಆವರಿಸಿದರೆ, ನೋಡುವ ಪ್ರಶ್ನೆಯೇ ಬರುವುದಿಲ್ಲ. ಆದರೆ ಒಂದು ಅರ್ದಂಬರ್ದವಾಗಿ ಕತ್ತಲೆ ಬೆಳಕಿನಾಟ ಕೇವಲ ತೊಂದರೆಯನ್ನು ಕೊಡುತ್ತದೆ ಎಂದು ಸೂಚ್ಯವಾಗಿ ಒಂದು ಗಹನವಾದ ವಿಷಯವನ್ನು ಪ್ರಸ್ತಾಪ ಮಾಡುತ್ತಾರೆ, ಮಾನ್ಯ ಗುಂಡಪ್ಪನವರು.

ವಾಚಕರೆ ನೋಡಿ ಸತ್ಯವನ್ನು ಅರಿಯಲು ಅಥವಾ ನೋಡಲು ನಮಗೆ ಬೆಳಕು ಜ್ಞಾನದ ರೂಪದಲ್ಲಿ ಬೇಕು. ಆ ಬೆಳಕು ಪ್ರಖರವಾದ ಮತ್ತು ಜ್ಞಾನಕ್ಕೆ ಪ್ರತೀಕವಾದ ಸೂರ್ಯನ ಬೆಳಕಿನಂತ ಜ್ಞಾನವಾಗಬಹುದು. ಹೆಚ್ಚು ತೀಕ್ಷ್ಣವಲ್ಲದ ಬೆಳಕನ್ನು ನೀಡುವ ಚಂದ್ರನಂತೆ, ಶಾಂತ ಜ್ಞಾನವಾಗಬಹುದು ಅಥವಾ ಎಲ್ಲಕಡೆಯೂ ಕತ್ತಲಿದ್ದರೂ ಸಮೀಪದ ವಸ್ತುಗಳನ್ನು ನಿಚ್ಚಳವಾಗಿ ತೋರುವ ಹಣತೆಯ ಬೆಳಕಂತೆ ಕ್ಲುಪ್ತವಾದರೂ ಸತ್ಯವಾದ ಜ್ಞಾನವನ್ನು ನೀಡುವ ಬೆಳಕಾದರೂ ಸಾಕು. ನಮಗೆ ಸತ್ಯದ ಅರಿವಾಗುತ್ತದೆ.

ಬೆಳಕಿನಲ್ಲಿ ವಸ್ತು ವಿಷಯಗಳನ್ನು ಕಂಡರೆ ತಾನೇ ವಸ್ತುಗಳಲ್ಲಿ ವ್ಯತ್ಯಾಸ ಕಾಣುವುದು ಮತ್ತು ಅರಿತುಕೊಳ್ಳುವ ಅಪೇಕ್ಷೆ ಮತ್ತು ಪ್ರಕ್ರಿಯೆ ನಡೆಯುತ್ತದೆ. ಆದರೆ ಸಂಪೂರ್ಣ ಕತ್ತಲೆಯೇ ಆಗಿಬಿಟ್ಟರೆ, ನಮಗೆ ಶಂಕೆಯೇ ಇರದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಅಂದರೆ ಸಂಪೂರ್ಣ ಕತ್ತಲೆಯೆಂತೆ, ಸಂಪೂರ್ಣ ಅಜ್ಞಾನವೇ ತುಂಬಿಬಿಟ್ಟರೂ ” ಇದೋ, ಅದೋ, ಅಥವಾ ಯಾವುದು” ಎನ್ನುವ ಶಂಕೆ ಬರುವುದಿಲ್ಲ.

ಆದರೆ ಅರ್ದಂಬರ್ದ ಬೆಳಕು ಅಥವಾ ಸುಳ್ಳಾದ, ಬೆಳಕಲ್ಲದ ಬೆಳಕು ಬಂದಾಗ, ಅಂದರೆ, ಸತ್ಯವಾದ ಜ್ಞಾನವಲ್ಲದೆ ಇದ್ದರೆ ಅಸತ್ಯ ವಾದವನ್ನು ಪ್ರತಿಪಾದಿಸುವ “ಪದವಿದರು” ತಮ್ಮ ತಮ್ಮ ಸಿದ್ಧಾಂತಗಳಿಂದ ಜನರಲ್ಲಿ ಇನ್ನಷ್ಟು ಶಂಕೆ, ಗೊಂದಲ ಮತ್ತು ತಂಟೆ ಉಂಟುಮಾಡುತ್ತಾರೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ಯಾವುದೇ ವಿಷಯದಬಗ್ಗೆ ಒಂದೇ ಒಂದು ಸತ್ಯವಿರುತ್ತದೆ. ಎರಡು ಸತ್ಯವಿರಲು ಸಾಧ್ಯವಿಲ್ಲ. ಹಾಗೆ ಆ ಸತ್ಯವನ್ನು ಅರಿತುಕೊಳ್ಳಲು ಜ್ಞಾನ ಬೇಕು. ಅದು ಪ್ರಖರವಾದ ಶಾಸ್ತ್ರಾಧಾರಿತ ಜ್ಞಾನವಾಗಬಹುದು, ಅಥವಾ ಶಾಂತ ಸ್ವರೂಪದ, ಕೇಳಿದ, ಚಿಂತಿಸಿ ಕಂಡುಕೊಂಡ, ಅನುಭವದ ಜ್ಞಾನವಾಗಬಹುದು ಅಥವಾ ನಮ್ಮ ಪರಿಮಿತ ಅರಿವಿಗೆ ಬಂದ ಸತ್ಯದ ರೂಪವಿರಬಹುದು. ಯಾವುದಾದರೂ ಸರಿಯೇ ಅದು ಜ್ಞಾನ ಮತ್ತು ಸತ್ಯವಾದ ಜ್ಞಾನವಾಗಿರಬೇಕು.

ಅಕಸ್ಮಾತ್ ನಾವು ಈ ಜ್ಞಾನದ ಮತ್ತು ಜ್ಞಾನವನ್ನು ಪಡೆದುಕೊಂಡು ಸತ್ಯದ ಶೋಧಕ್ಕೆ ಹೋಗದೆ ಅಜ್ಞಾನಿಗಳಾಗಿ ಉಳಿದರೆ ನಮಗೆ ಶಂಕೆಯೇ ಬರುವುದಿಲ್ಲ. ಆದರೆ ತಂಟೆ ಎಲ್ಲಿದೆಯಂದರೆ, ಎಡಬಿಡಂಗಿ ಜ್ಞಾನ, ಶಾಸ್ತ್ರವನ್ನು ಓದಿಕೊಂಡು( ಅರಿತುಕೊಂಡು ಅಲ್ಲ) ತಾನೇ ಮಹಾ ಪಂಡಿತ ಎಂದು ಕೊಚ್ಚಿಕೊಳ್ಳುವ ಅರಜ್ಞಾನಿಗಳು ಪ್ರತಿಪಾದಿಸುವ ತತ್ವಗಳು ಭಿನ್ನ ಭಿನ್ನವಾಗಿ ಜನರನ್ನು ಗೊಂದಲಕ್ಕೆ ಈಡುಮಾಡುತ್ತದೆ ಮತ್ತು ಬೇಧಗಳನ್ನು ಉಂಟುಮಾಡಿ ತಂಟೆಗೆ ಕಾರಣವಾಗುತ್ತದೆ.

ವಾಚಕರೆ, ಒಟ್ಟಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದ ಮೂಲಕ ನಮಗೆ ಒಂದು ಸಂದೇಶವನ್ನು ಕೊಡುತ್ತಾರೆ. ಅದೇನೆಂದರೆ, ಅಜ್ಞಾನಿಗಳಾಗಿ, ಶಂಕೆಯಿಲ್ಲದೆ ಇರುವುದು, ವಿಷಯಗಳನ್ನು ತಪ್ಪು ತಪ್ಪಾಗಿ ತಿಳಿದುಕೊಂಡು ತಾವೂ ಕೆಟ್ಟು ಲೋಕವನ್ನು ಕೆಡಿಸುವ ತಂಟೆ ಮಾಡುವುದಕ್ಕಿಂತ ಮೇಲು. ಆದರೆ ಪ್ರಖರವಾಗೋ, ಶಾಂತವಾಗೋ ಅಥವಾ ಅಲ್ಪವಾಗೋ ತಿಳಿದುಕೊಳ್ಳುವುದನ್ನು ಸರಿಯಾಗಿ ಅಥವಾ ಸತ್ಯವಾದುದನ್ನೇ ತಿಳಿದುಕೊಳ್ಳಬೇಕು ಎಂದು.

ಅಂತಹ ಸತ್ಯವಾದ ಜ್ಞಾನವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನಮ್ಮ ಪ್ರಯತ್ನವೂ ನಡೆಯಲಿ ಎಂದು ಹೇಳುತ್ತಾ ಮುಂದಿನ ಕಗ್ಗಕ್ಕೆ ಹೋಗೋಣವೆ ?