RSS

Monthly Archives: ಏಪ್ರಿಲ್ 2012

ರಸಧಾರೆ – ೭೮

ತರುಣಿ ತನ್ನೊಡವೆಗಳ ತಳೆಯುತ್ತ ತೆಗೆಯುತ್ತ |
ಪರಿಕಿಸುತೆ ಮುಕುರದಲಿ ಸೊಗಸುಗಳ ಪರಿಯ ||

ಮರೆತೆಲ್ಲವನು ವಿಲಸಿಪಂತೆ ತಾಂ ವಿಶ್ವದಲಿ |

ಮೆರೆಯುವನು ಪರಬೊಮ್ಮ – ಮಂಕುತಿಮ್ಮ ||

ತಳೆಯುತ್ತ = ಧರಿಸುತ್ತ , ಪರಿಕಿಸುತೆ = ಪರೀಕ್ಷಿಸುತ್ತಾ , ಮುಕುರದಲಿ = ಕನ್ನಡಿಯಲಿ, ಸೊಗಸುಗಳ = ಅಂದ ಚೆಂದಗಳ, ಪರಿಯ = ವಿಧಗಳನ್ನು ವಿಲಸಿಪಂತೆ = ವಿಲಾಸದಿಂದ ( ಆನಂದದಿಂದ) 

ಒಂದು ಹೆಣ್ಣು ಹೇಗೆ ತೊಟ್ಟ ಒಡವೆಗಳನ್ನು ತೆಗೆದು ಮತ್ತೆ ತೊಟ್ಟು ಕನ್ನಡಿಯಲಿ ತನ್ನ ಅಂದ ಚೆಂದವನ್ನು ನೋಡಿಕೊಳ್ಳುತ್ತಾ ಮೈ ಮರೆಯುತ್ತಾಳೋ, ಹಾಗೆ ತಾನೆ ಸೃಜಿಸಿದ ಈ ಜಗತ್ತಿನಲ್ಲಿ ಬೇರೆ ಬೇರೆ ದೇಹಗಳನ್ನು ಧರಿಸಿ ಅದರಲ್ಲಿ ಸಿಗುವ ಹತ್ತು ಹಲವಾರು ಭಾವನೆಗಳ ಆನಂದದಿಂದ ಅನುಭವಿಸುತ್ತಾ ಮೈ ಮರೆತಿದ್ದಾನೋ ಏನೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. 

ಸಾಮಾನ್ಯ ತಿಳುವಳಿಕೆ ಏನೆಂದರೆ ಎಲ್ಲ ಪ್ರಾಣಿಗಳೂ ಹುಟ್ಟುತ್ತವೆ, ಕೆಲಕಾಲ ಬದುಕಿ ಸಾಯುತ್ತವೆ ಎಂದು. ಆದರೆ ವಾಸ್ತವಿಕತೆಯೇ ಬೇರೆ ಅಲ್ಲವೇ? ಹುಟ್ಟು ಸಾವುಗಳೆಂಬುದು ಕೇವಲ ನಮ್ಮ ಪರಿಭಾಷೆಗಳಷ್ಟೇ ಎಂದು ಅನಿಸುತ್ತದೆ. ಇದನ್ನು ರೂಪಾಂತರವೆಂದರೆ ಹೆಚ್ಚು ಸೂಕ್ತವೆಂದು ಅನಿಸುತ್ತದೆ. ಬೇರೆ ಬೇರೆ ಮೂಲಗಳಿಂದ ಬಂದ ದೇಹ ಮನಸ್ಸು ಬುದ್ಧಿ ಆತ್ಮಗಳು ಒಂದಾದಾಗ ಒಂದು ಪ್ರಾಣಿಯ ಆವಿರ್ಭಾವ. ಗಿಡ ಮರಗಳಿಗೂ ಇದು ಅನ್ವಯಿಸುತ್ತದೆ. ಆ ಎಲ್ಲ ಮೂಲಗಳಿಗೂ ಮೂಲ ಒಂದೇ. 

ಹಾಗಾಗಿ ಒಂದೇ ಬೃಹತ್ ಚೇತನ ತನ್ನ ಮೂಲದಲ್ಲಿ ಇದ್ದುಕೊಂಡು ತಾನು ಬೇರೆ ಬೇರೆ ರೂಪಗಳಿಗೆ ಹೊಂದುವಂತೆ ತನ್ನನ್ನು ತಾನು ತನ್ನ ಮೂಲ ಗುಣವನ್ನು ಬಿಡದೆ, ಬದಲಾಯಿಸಿಕೊಳ್ಳುತ್ತಾ. ರೂಪಾಂತರಗೊಳ್ಳುತ್ತಾ, ಎಲ್ಲ ರೂಪಗಳಲ್ಲೂ ತಾನಿದ್ದುಕೊಂಡು ಎಲ್ಲ ರೂಪಗಳಲ್ಲಿ ಆಗಬಹುದಾದ ಅನುಭವ ಆನಂದ ಮುಂತಾದ ಎಲ್ಲ ಭಾವಗಳನ್ನೂ ಅನುಭವಿಸುತ್ತಾ ಆನಂದದಿಂದ ತನ್ಮಯವಾಗಿದೆ. ಇದನ್ನು ಅರಿಯದೆ ನಾವು ” ನಾನು ಸುಖವಾಗಿದ್ದೇನೆ” ನನಗೆ ದುಃಖವಾಗಿದೆ” “ನನಗೆ ನೋವಾಗುತ್ತದೆ” ಎಂದು ಹೇಳುತ್ತಾ ಪ್ರಾಕೃತ ಭಾವದಿಂದ ಮಾತನಾಡುತ್ತೇವೆ. 

“ಸ ಏಕಾಕೀ ನ ರಮತ” ಅವನು ಒಬ್ಬನೇ ಇದ್ದ. ಬೇಜಾರಾಯಿತೋ ಏನೋ ಈ ಜಗತ್ತನ್ನು ಸೃಷ್ಟಿಸಿದ. ತನ್ನ ಶಕ್ತಿಯಿಂದಲೇ ಇದನ್ನು ಸೃಷ್ಟಿಸಿದ. ಈ ಜಗತ್ತಿನಲ್ಲಿರುವ ಎಲ್ಲದರಲ್ಲೂ ಚೇತನಾ ಸ್ವರೂಪದಲ್ಲಿ ಸೇರಿ ಆಯಾಯಾ ವಸ್ತುಗಳನ್ನು ಅನುಭವಿಸುತ್ತಾ ಆನಂದದಿಂದ ಇದ್ದಾನೆ. 

ಎಲ್ಲವೂ ಅವನಿಂದಲೇ. ಎಲ್ಲವೂ ಅವನೇ. ಎಲ್ಲವೂ ಅವನಿಗಾಗಿಯೇ ಎಂದು ನಾವು ಯೋಚಿಸಿದಾಗ, ನಾವೂ ಅವನ ಆ ಬೃಹತ್ ರೂಪದ ಒಂದು ಅಂಶವೆಂದುಕೊಂಡಾಗ, ವಸ್ತು, ವ್ಯಕ್ತಿ ವಿಷಯ ಸಂಬಂಧವಾದ ಭಾವನೆಗಳು ನಶಿಸಿ ಅವುಗಳ ಬಗ್ಗೆ ಒಂದು ನಿರ್ಲಿಪ್ತತೆ ಬೆಳೆದಾಗ, ಮನಸ್ಸು ನಿರ್ಮಲವಾಗಿ, ಅನಂದವಾಗಿರಬಹುದು. 

Advertisements
 

ಚೆನ್ನುಡಿ

ಮತ್ತೊಬ್ಬರ ಒಪ್ಪು-ತಪ್ಪುಗಳನ್ನು ವಿಮರ್ಶೆಮಾಡುವುದು ಬಹಳ ಸುಲಭ.

ಆದರೆ,ನಮ್ಮ ತಪ್ಪುಗಳ ಅರಿವು ನಮಗಿದ್ದರೂ,ಒಪ್ಪಿಕೊಳ್ಳಲು ನಮ್ಮ”ಅಹಂ”ಅಡ್ಡ ಬರುತ್ತದೆ-ಅನಾಮಿಕ.

 

ರಸಧಾರೆ – ೭೭

ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ |

ರನ್ನವೋ ಬ್ರಹ್ಮ; ನೋಡವನು – ನಿಜಪಿಂಛ ||

ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲಿನೊಲು |
ತನ್ಮಯನೋ ಸೃಷ್ಟಿಯಲಿ – ಮಂಕುತಿಮ್ಮ || 

ನಿಜಪಿಂಛ = ನೈಜ ಬಣ್ಣಗಳ ನವಿಲುಗರಿ, ವರ್ಣದೆಣಿಕೆಯಲಿ = ಬಣ್ಣಗಳ ಎಣಿಕೆಯಲಿ, ನವಿಲಿನೊಲು = ನವಿಲಿನಂತೆ 

ತನ್ನ ಹೊಳಹೊಳಪುಗಳ ತಾನೇ ನೆನೆನೆನೆದು ಮೈ ಮರೆತಂತ ರತ್ನವೋ ಆ ಬ್ರಹ್ಮ. ಅಲ್ಲಿ ನೋಡು ಅವನು ಒಂದು ನವಿಲು ತನ್ನ ಗರಿಗಳನ್ನೆಲ್ಲ ಕೆದರಿ ನೃತ್ಯ ಮಾಡುವಾಗ ತನ್ನ ಗರಿಗಳ ಬಣ್ಣ ಗಳನ್ನೂ ಕಂಡು ತನ್ಮಯವಾಗುವಂತೆ, ತನ್ನಿಂದ ಆದ, ತಾನೇ ಆದ ಈ ಸೃಷ್ಟಿಯನ್ನು ಅನುಭವಿಸುವಾಗ ಆ ಪರಮಾತ್ಮನೂ ತನ್ಮಯನೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ . ಇಡೀ ಜಗತ್ತು, ಸೃಷ್ಟಿ ಆದದ್ದೇ ಆ ಪರಮ ಶಕ್ತಿಯಿಂದ. ಆ ಪರಮ ಶಕ್ತಿಯೇ ಜಡವನ್ನೂ ಸೃಷ್ಟಿಸಿ, ಆ ಜಡದೊಳಗೆ ಚೇತನವಾಗಿ ಪ್ರವೇಶಿಸಿ ಜಡಕ್ಕೆ ಚೈತನ್ಯವನ್ನು ತುಂಬಿ ಆಯಾಯಾ ಜಡಗಳ ಗುಣಗಳನ್ನು ತಾನೂ ಅನುಭವಿಸುತ್ತ ಆ ಅನುಭವದಲ್ಲಿ ಆ ಪರಮಾತ್ಮನೂ ಮಗ್ನನೋ? ಎನ್ನುವ ಪ್ರಶ್ನೆ. 

ವಾಚಕರೆ ನೋಡಿ ನಾವು ನಮ್ಮ ದೇಹದ ಭಾಗಗಳನ್ನು ಹೇಗೆ ಹೇಳುತ್ತೇವೆ ಎಂದು. ” ನನ್ನ ಕೈ” ನನ್ನ ಕಾಲು” ನನ್ನ ತಲೆ” ನನ್ನ ಮನಸ್ಸು ” ನನ್ನ ಬುದ್ಧಿ ” ಹೀಗೆ ಎಲ್ಲಕ್ಕೂ “ನನ್ನ” ಎಂದು ಸೇರಿಸುತ್ತೇವೆ . ನಮ್ಮಲಿರುವ ಒಂದು ಪುಸ್ತಕಕ್ಕೂ “ನನ್ನ ಪುಸ್ತಕ” ಎನ್ನುತ್ತೇವೆ. ನಾವು ಪುಸ್ತಕವನ್ನು ಹೊಂದಿದ್ದೇನೆ ಆದ್ದರಿಂದ” ನನ್ನ ಪುಸ್ತಕ” ಹಾಗೆಯೇ ” ಕೈ, ಕಾಲು, ಮೈ, ತಲೆ, ಮನಸ್ಸು, ಬುದ್ಧಿ”ಗಳನ್ನು ನಾನು ಹೊಂದಿದ್ದೇನೆ ಆದ್ದರಿಂದ ” ನನ್ನ” ಸೇರಿಸುತ್ತೇವೆ. ಹಾಗಾದರೆ ಇವನ್ನೆಲ್ಲ ಹೊಂದಿರುವ ಆ ” ನಾನು ” ಯಾರು ಎಂದರೆ, ಅದೇ ಆ ಬೃಹತ್ ಚೇತನದ ಒಂದು ಅಂಶ. ಅಂದರೆ ಆ ಬೃಹತ್ ಚೇತನವೇ ಇವನ್ನೆಲ್ಲ ಹೊಂದಿ “ನನ್ನದು ನನ್ನದು” ಎಂದು ಹೇಳುತ್ತಾ ಅದರಿಂದ ಉಂಟಾಗಬಹುದಾದ ನೋವು ನಲಿವು ಆನಂದ ದುಃಖಗಳಂಥಾ ಅನುಭವಗಳನ್ನು ಅನುಭವಿಸುತ್ತಾ ಈ ಸೃಷ್ಟಿಯಲ್ಲೇ ಮಗ್ನವಾಗಿದೆ. ಆ ಬೃಹತ್ ಚೇತನವನ್ನು ನಮ್ಮ ಶಿವನಸಮುದ್ರದಲ್ಲಿ ಉಂಟಾಗುವ ವಿಧ್ಯುತ್ತಿಗೆ ಹೋಲಿಸಿದರೆ, ನಮ್ಮನ್ನು ನಾವು ನಮ್ಮ ಮನೆಗಳಲ್ಲಿ ಬೆಳಗುವ ಒಂದು ಸಣ್ಣ ಬಲ್ಬ್ ಹೋಲಿಸಿಕೊಳ್ಳಬಹುದು. ಇಲ್ಲಿ ಬೆಳಗುವುದು ಯಾವುದೆಂದರೆ ಅಲ್ಲಿನ ವಿಧ್ಯುತ್. ಆದರೆ ಅದು ಬೆಳಗಲು ಸಾಧನ ಈ ಸಣ್ಣ ಬಲ್ಬ್. ಇಡೀ ದೇಶದಲ್ಲಿ ಬೆಳಗುವ ಮತ್ತು ಕೆಲಸ ಮಾಡುವ ಎಲ್ಲ ವಿಧ್ಯುತ್ ಉಪಕರಣಗಳಿಗೂ ಆ ವಿಧ್ಯುತ್ತಿನ ಮೂಲ ಒಂದೇ. ಹಾಗೆಯೇ ಈ ಸೃಷ್ಟಿಯಲ್ಲಿ ನಾವೆಲ್ಲಾ ಒಂದೊಂದು ಬಲ್ಬಗಳು.ನಮ್ಮಲ್ಲಿ ಬೆಳಗುವ ಆ ಜ್ಯೋತಿಯೇ ಆ ಪರಮ ಚೇತನ. 

ಇಲ್ಲಿ ನಾನು ಎನ್ನುವ ಭಾವ ಇದೆ. ಹಾಗಾಗಿ ನಾನು ನೋಡುತ್ತೇನೆ, ಮಾಡುತ್ತೇನೆ, ಓದುತ್ತೇನೆ, ಓಡುತ್ತೇನೆ…. ಇತ್ಯಾದಿಗಳ ಪ್ರಯೋಗ ಮಾಡುತ್ತೇವೆ. ಎಂದು ” ನಾನು” ಎನ್ನುವ ಭಾವವಿಲ್ಲವೋ ಅಂದು ನಾವೂ ಸಹ ಆ ಬೃಹತ್ ಚೇತನದ ರೀತಿಯೇ ಇಲ್ಲಿ ಆನಂದದಿಂದ ಮಗ್ನರಾಗಿರಬಹುದು. ಎರಡೆ೦ದುಕೊಂಡರೆ ಬೇಧ ಮತ್ತು ಅದಕ್ಕನ್ವಯಿತ ಭಾವ. ಒಂದೇ ಆದರೆ ಬೇಧವಿಲ್ಲ. ನವಿಲು ತನ್ನ ಮೈಮೇಲಿನ ಗರಿಗಳ ವಿವಿಧ ಬಣ್ಣಗಳನ್ನು ಕಂಡು ಆನಂದದಿಂದ ಮಗ್ನವಾಗಿ ಹೇಗೆ ನಾಟ್ಯ ಮಾಡುತ್ತದೋ ಹಾಗೆಯೇ ಆ ಪರಮಾತ್ಮ ತನ್ನಿಂದ ಆದ, ತಾನೇ ಇರುವ ಈ ಜಗತ್ತಿನ ಎಲ್ಲದರೊಳಗೂ ಇದ್ದು ಆ ಎಲ್ಲ ವಸ್ತುಗಳಲ್ಲಿ ಉಂಟಾಗುವ ಎಲ್ಲ ಭಾವಗಳನ್ನೂ ತಾನೇ ಅನುಭವಿಸುತ್ತಾ ಮತ್ತನಾಗಿ , ತನ್ಮಯನಾಗಿ ಆನಂದದಿಂದ ಇದ್ದಾನೆ ಎನ್ನುವುದೇ ಈ ಕಗ್ಗದ ಹೂರಣ. 

ನಾನು ನಾನು ಅನುಭವಿಸುತ್ತಿದ್ದೇನೆ ಎಂದು ಭಾವಿಸದೆ, ಎಲ್ಲವೂ ಆ ಪರಮಾತ್ಮನಿಗೆ ಸೇರಿದ್ದು ಎನ್ನುವ ಭಾವ ತಳೆದಾಗ, ನಮ್ಮಲ್ಲಿರುವ ಅಹಂಕಾರವೂ ಕಡಿಮೆಯಾಗಬಹುದು ಅಲ್ಲವೇ ವಾಚಕರೆ? 

 

ಚೆನ್ನುಡಿ

ಯಶಸ್ಸು ಶಾಶ್ವತವಲ್ಲ ಮತ್ತು ಸೋಲು ಅಂತಿಮವಲ್ಲ.
ಯಶಸ್ಸು ಕಂಡ ಮೇಲೂ ಶ್ರಮ ನಿಲ್ಲದಿರಲಿ.
ಸೋಲುಂಡಮೇಲೂ ಪ್ರಯತ್ನ ಮುಂದುವರೆಯಲಿ. – ಅನಾಮಿಕ

 

ರಸಧಾರೆ – ೭೬

ಪಾಲ್ ಬ್ರಹ್ಮ- ನೊರೆ ಸೃಷ್ಟಿ 

ಬಹುವಾಗಲೆಳಸಿ ತಾನೊಬ್ಬಂಟಿ ಬೊಮ್ಮ ನಿಜ | 
ಮಹಿಮೆಯಿಂ ಸೃಜಿಸಿ ವಿಶ್ವವನಲ್ಲಿ ನೆಲೆಸಿ ||
ವಹಿಸಿ ಜೀವತೆಯ ಮಾಯೆಯ ಸರಸವಿರಸದಲಿ |
ವಿಹರಿಪನು ನಿರ್ಲಿಪ್ತ – ಮಂಕುತಿಮ್ಮ. 

ತಾನೊಬ್ಬಂಟಿ = ಒಬ್ಬನೇ ಇದ್ದವನು , ಬಹುವಾಗಲೆಳಸಿ= ಬಹಳವಾಗಬೇಕೆಂದೆಣಿಸಿ , ಬೊಮ್ಮ = ಪರಬ್ರಹ್ಮ, ನಿಜಮಹಿಮೆಯಿಂ = ತನ್ನ ನಿಜ ಮಹಿಮೆಯಿಂದ ಸೃಜಿಸಿ = ಸೃಷ್ಟಿಸಿ , ವಿಶ್ವವನಲ್ಲಿನೆಲೆಸಿ = ವಿಶ್ವವ + ಅಲ್ಲಿ + ನೆಲೆಸಿ ಜೀವತೆಯ = ಜೀವನವ , ಸರಸವಿರಸದಲಿ = ಸರಸ ಮತ್ತು ವಿರಸದಲ್ಲಿ , ವಿಹರಿಪನು ನಿರ್ಲಿಪ್ತ = ತಾನು ನಿರ್ಲಿಪ್ತನಾಗಿ ವಿಹರಿಸುತ್ತಿದ್ದಾನೆ. 

ಆ ಮಹಾ ಶಕ್ತಿ ಒಂದೇ ಇತ್ತು. ಅದು ತಾನೇ ಹಲವಾಗಿ ಪ್ರಕಟಗೊಳ್ಳಬೇಕೆಂದು, ತನ್ನ ಸಂಕಲ್ಪದಿಂದ , ತನ್ನದೇ ಆದ ಪರಮ ಶಕ್ತಿಯಿಂದ ಈ ವಿಶ್ವವನ್ನು ಸೃಷ್ಟಿಸಿ, ತನ್ನ ಶಕ್ತಿಯನ್ನು ಪ್ರತಿಯೊಂದರಲ್ಲೂ ಇರಿಸಿ ತನ್ನ ಇರವನ್ನು ನಿಗೂಢವಾಗಿರಿಸಿಕೊಂಡು, ತಾನು ಮಾತ್ರ ನಿರ್ಲಿಪತೆತೆಯಿಂದ ಈ ಜಗವನ್ನು ನಡೆಸಿಕೊಂಡು ಹೋಗುತ್ತಿದ್ದಾನೆ ಎನ್ನುತ್ತಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು. 

ಒಂದೇ ಇದ್ದ ಆ ಭೃಹತ್ ಚೇತನ ಹಲವಾಗಿ ಆ ಹಲವು ಬಹಳವಾಗಿ ಪ್ರಕಟಗೊಂಡು, ಬೇರೆ ಬೇರೆ ರೂಪಗಳನ್ನು ಪಡೆದುಕೊಂಡು ಬೇರೆ ಬೇರೆ ಕಾರ್ಯಗಳನ್ನು ವಹಿಸಿಕೊಂಡು ಜಗತ್ತಿನ ಎಲ್ಲ ಚಿತ್ರ ವಿಚಿತ್ರಗಳಲ್ಲೂ ತಾನೇ ಇದ್ದುಕೊಂಡು ಒಂದು ರೂಪವಿಲ್ಲದೆ ಹಲವಾರು ರೂಪಗಳಿಂದ ಈ ಜಗತ್ತಿನಲ್ಲಿ ಪ್ರಕಟವಾಗಿದೆ, ಎಂಬುವುದು ವಿಜ್ಞಾನವೂ ಹೌದು ವೇದಾ೦ತವೂ ಹೌದು. ವೇದಾಂತ ಮತ್ತು ವಿಜ್ಞಾನ ಬೇರೆ ಅಲ್ಲ. ಅಧುನಿಕ ವಿಜ್ಞಾನ ಮಾತ್ರ ವೇದಾಂತದ ಜ್ಞಾನಕ್ಕಿಂತ ಬಹಳ ಹಿಂದಿದೆ, ಅಷ್ಟೇ. 

ಈ ಪರಮಾತ್ಮನ ಸೃಷ್ಟಿ, ಎಷ್ಟು ಅಗಾಧವೆಂದರೆ , ಎಲ್ಲ ಆಯಾಮಗಳನ್ನೂ ನೋಡಲಾಗದೆ, ನಾವು ನೋಡಿದ್ದೇ ಸತ್ಯವೆಂಬ ಭ್ರಮೆಯಲ್ಲಿರುತ್ತೇವೆ, ಅದೇ ಮಾಯೆ. ನಮ್ಮ ದಿನಂದಿನ ಕೆಲಸಗಳು ಪ್ರೀತಿ, ಪ್ರೇಮ, ಸ್ನೇಹ , ವೈರ, ದಯೆ, ಕರುಣೆ , ಕೋಪ ತಾಪ, ಎಲ್ಲವೂ ಒಂದು ಭ್ರಮೆಯಷ್ಟೇ!! ಇಂಥ ಭ್ರಮೆಗೆ ಕಾರಣ ಸತ್ಯದರಿವಿನ ಅಭಾವ. ಮನುಷ್ಯರಷ್ಟೇ ಅಲ್ಲ ಸಕಲ ಜಗತ್ತು ಈ ಮಾಯೆಯಲ್ಲಿ ನಿಂತಿದೆ. ಅದಕ್ಕೆ ದಾಸರೆಂದರು ” ನೀ ಮಾಯೆಯೋ? ನಿನ್ನೊಳು ಮಾಯೆಯೋ? ” ಎಂದು. ಆ ಪರಮ ಪುರುಷನನ್ನು ಅರಿಯಲು ಮಾಯೆಯ ಪರದೆ ಅಡ್ಡ. ಈ ಮಾಯೆಯನ್ನು ಅರಿಯಲು ಅಹಂಕಾರದ ಪರದೆ ಅಡ್ಡ. ಪರದೆ ಸುಲಭವಾಗಿ ಸರಿಯೋಲ್ಲ. ಅದಕ್ಕೆ ಸಾಧನೆ ಬೇಕು ಕಷ್ಟಪಟ್ಟು ಸರಿಸಬೇಕು. ಮತ್ತೆ ಮತ್ತೆ ಹಿಂದಕ್ಕೆ ಬರುವ ಈ ಪರದೆ ಬಹಳ ಗಟ್ಟಿ. ನಾವು ಅದಕ್ಕಿಂತ ಗಟ್ಟಿಯಾದರೆ, ಪರದೆ ಸರಿಯುತ್ತದೆ. ಪರದೆ ಸರಿದರೆ ಸತ್ಯದರ್ಶನ . 

ಹಾಗಾದರೆ , “ಈ ಪರಮಾತ್ಮ ಇದನೆಲ್ಲ ಯಾಕೆ ಸೃಷ್ಟಿ ಮಾಡಿದ ? ಅವನಿಗೇನು ಮಾಡೋಕೆ ಬೇರೆ ಕೆಲಸ ಇರಲಿಲ್ಲವೇ? ಸೃಷ್ಟಿ ಮಾಡಿ ನಮಗೆಲ್ಲ ಈ ಕೆಲಸಕ್ಕೆ ಬಾರದ ಭಾವನೆಗಳನ್ನು ಕೊಟ್ಟು, ಮಾಯೆ ಎಂಬ ಪರದೇನೂ ಇಟ್ಟು, “ಸಾಧ್ಯವಾದರೆ ಸರಿಸಿಕೊಂಡು ಬನ್ನಿ” ಅಂತ ನಮ್ಮನ್ನೆಲ್ಲ ನಮ್ಮ ಪಾಡಿಗೆ ಬಿಟ್ಟು ನಿರ್ಲಿಪ್ತನಾಗಿ ಏಕೆ ಕುಳಿತಿದ್ದಾನೆ ?” ಎಂದರೆ, ಇದು ಅವನ ” ಲೀಲಾ ವಿನೋದ” ಹಾಗೆ ನಮ್ಮ ಮನಸ್ಸಿಗೆ ಬರುವುಕ್ಕೆ ಕಾರಣ ಇಲ್ಲಿ “ನಾವು” ಇದ್ದೇವೆ ಎಂದುಕೊಂಡರೆ ಮಾತ್ರ . ಎಲ್ಲವೂ ಅವನೇ ಎಂದಾಗ ಆ ಪ್ರಶ್ನೆ ಉದ್ಭವವಾಗುವುದಿಲ್ಲ. ” ಈಶಾವಾಸ್ಯಮಿದಂ ಸರ್ವಂ ಯತ್ಕಿಂಚಿತ್ ಜಗತ್ಯಾಂ ಜಗತ್” ಎಂದು ಈಶಾವಾಸ್ಯ ಉಪನಿಷತ್ತು ಹೇಳುವಂತೆ ಎಲ್ಲವೂ ಆ ಪರಮಾತ್ಮನೇ. ಚಿಕ್ಕದು ,ದೊಡ್ಡದು, ಕಾಣುವುದು, ಕಾಣದ್ದು, ಗಿಡ, ಮರ ,ಬೆಟ್ಟ ಗುಡ್ಡ, ಆಕಾಶ ,ನದಿ ,ಗ್ರಹಗಳು ,ನಕ್ಷತ್ರಗಳು ,ಪ್ರಾಣಿಗಳು, ಪಕ್ಷಿಗಳು ಹೀಗೆ ನಾವೇನೇನು ಕಾಣುತ್ತೆವೇಯೋ, ಊಹಿಸಿಕೊಳ್ಳುತ್ತೆವೆಯೋ, ನಾವು ಏನು ಕಾಣಲಾರೆವೋ ಯಾವುದನ್ನು ಊಹಿಸಿಕೊಳ್ಳಲಾರೆವೋ ಅದೆಲ್ಲವೂ ಆ ಬೃಹತ್ ಚೇತನವೇ ಆಗಿದೆ. 

ಹಾಗಾಗಿ ವಾಚಕರೆ , ನೋಡಿ, ಯೋಚಿಸಿ, ಊಹಿಸಿ , ಅನುಭವಿಸಿ ಈ ಜಗತ್ತು ಸತ್ಯವೋ, ನಮ್ಮ ಇರವು ಸತ್ಯವೋ ಎಂದು ಅರಿತು ಸತ್ಯವಾವುದು ಎಂದು ಅರಿಯಲು ನಾವು ಪ್ರಯತ್ನ ಪಡೋಣ. ನಿರಂತರ ಪ್ರಯತ್ನದಿಂದ ನಮಗೆ ಅದರ ಅರಿವು ಮೂಡಬಹುದು. 


 

ಚೆನ್ನುಡಿ

ದ್ವೇಷವಿಲ್ಲದ ಹೃದಯ
ಮಾಸದ ಮುಗುಳ್ನಗೆ
ಘಾಸಿಗೊಳಿಸದ ಸ್ಪರ್ಶ .ಇದ್ದರೆ
ಈ ಜಗತ್ತು ಬಾಳಲು ಒಂದು ಸುಂದರ ತಾಣವಾಗುತ್ತದೆ.

 

ರಸಧಾರೆ – ೭೫

ಪಾಲ್ ಬ್ರಹ್ಮ – ನೊರೆಸೃಷ್ಟಿ.
=========== 

ಮರ ತನ್ನ ಹೆತ್ತ ಬೀಜವನಿಲ್ಲವೆನಿಸಿ  |

ವಿಸ್ತರಿಸುವಂದದಿ ಸೃಷ್ಟಿ ತನ್ನ ಮೂಲವನು ||

ಮರೆಮಾಚಿ ತಾನೇ ಮೆರೆಯುತ್ತಿಹುದು ಕಣ್ಗಳಿಗೆ |

ನೊರೆಸೃಷ್ಟಿ ಪಾಲ್ ಬ್ರಹ್ಮ  – ಮಂಕುತಿಮ್ಮ. ||

ಮರ ತನ್ನ ಹೆತ್ತ ಬೀಜನು ಇಲ್ಲವೆನಿಸಿ ವಿಸ್ತರಿಸುವಂದದಿ ಸೃಷ್ಟಿ ತನ್ನ ಮೂಲವನು

ಮರೆಮಾಚಿ ತಾನೇ ಮೆರೆಯುತ್ತಿಹುದು ಕಣ್ಗಳಿಗೆ ನೊರೆಸೃಷ್ಟಿ ಪಾಲ್ ಬ್ರಹ್ಮ – ಮಂಕುತಿಮ್ಮ. 

ಒಂದು ಮರ ತನ್ನ ಮೂಲವಾದ ಬೀಜವನ್ನು ಇಲ್ಲವಾಗಿಸಿ ತಾನು ಬೆಳೆದು ರೆಂಬೆ ಕೊಂಬೆಗಳಿಂದ ವಿಸ್ತಾರವಾಗಿ ಬೆಳೆವಂತೆ ಈ ಜಗತ್ತೂ ಸಹ ತನ್ನ ಮೂಲವಾದ ಆ ಅಗ್ನಿಗೋಳವನ್ನು ಇಲ್ಲವಾಗಿಸಿ ಮೆರೆಯುತ್ತಿದೆ ಮತ್ತು ನಮಗೆ ಕಾಣುತ್ತಿದೆ. ಇದು ಹೇಗಿದೆ ಎಂದರೆ ಆ ಪರಬ್ರಹ್ಮ ಹಾಲಾದರೆ ಅತೀ ಉಷ್ಣತೆಯಿಂದ ಕಾದು ಕಾದು ಉಕ್ಕುವ ಹಾಲಿನ ನೊರೆಯಂತೆ ಈ ಸೃಷ್ಟಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. 

ಒಂದು  ಬೀಜದೊಳಗೆ  ಒಂದು  ಜೀವಕಣ  ಅದಕ್ಕೆ ಒಂದು ಹೊದಿಕೆ. ಹೊದಿಕೆ ಪೂರಕ. ಸರಿಯಾದ    ಪಾತ್ರ ದೊರಕಿದರೆ ಆ ಬೀಜ ಮೊಳೆತು ಸಸಿಯಾಗಿ ಗಿಡವಾಗಿ ಮರವಾಗಿ ತನ್ನ ಸ್ಥಾನದಲ್ಲೇ ಹರಡಿಕೊಳ್ಳುತ್ತದೆ. ಆದರೆ ಆ ಮರಕ್ಕೆ ಮೂಲವಾದ ಬೀಜ ತನ್ನನ್ನು ತಾನು ಇಲ್ಲವಾಗಿಸಿಕೊಂಡು,  ತನ್ನ ಶಕ್ತಿಯಿಂದಲೇ ಆ ಮರದಲ್ಲಿ ಕೋಟ್ಯಾಂತರ ಬೀಜಗಳಿಗೆ ಕಾರಣವಾಗುತ್ತದೆ. ಈ ಜಗತ್ತಿನ ಸೃಷ್ಟಿಯೂ ಹಾಗೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. 

ಒಂದು ಗೋಳ. ಒಳಗೆ ಭಯಂಕರ ಶಾಖ. ಬೀಜ ತನ್ನೊಳಗಿನ ಶಕ್ತಿ ಮತ್ತು ಹೊರಗಿನ ಶಕ್ತಿಯ ಕ್ರಿಯೆಯಿಂದ ಸಿಡಿದು ಸಸಿಯಾದಂತೆ , ಆ ಗೋಳವೂ ಸಿಡಿದು ಈ ಜಗತ್ತೆಂಬ ಮಹಾವೃಕ್ಷವಾಗಿದೆ ಎನ್ನುವುದು ವಿಜ್ಞಾನ. ಕಾದ ಹಾಲು ಉಕ್ಕುವಂತೆ ಉಕ್ಕಿ ನೊರೆಯಲ್ಲ ಹರಡುವಂತೆ ಈ ಜಗತ್ತು ಊಹಾತೀತವಾದ ವಿಸ್ತಾರಕ್ಕೆ ಹರಡಿದೆ. ಹೇಗೆ ಬೆಳೆದ ಮರವೂ ಸಹ ತನ್ನ ಅಸ್ತಿತ್ವಕ್ಕೆ ಒಳಗಿನಿಂದ ಮತ್ತು ಹೊರಗಿನಿಂದ ಸಾರ ಹೀರುತ್ತದೆಯೋ ಹಾಗೆಯೇ ಈ ಜಗತ್ತಿನ ಎಲ್ಲವೂ ತನ್ನ ಮೂಲವಾದ ಆ ಪರಮ ಚೇತನದ ಆಧಾರದ ಮೇಲೆ ನಿಂತಿದೆ. ಒಳಗೂ ಅದೇ ಚೇತನ ಹೊರಗೂ ಅದೇ ಚೇತನ. ” ಯತಃ ಸರ್ವಾಣಿ ಭೂತಾನಿ  ಭವಂತ್ಯಾದಿ ಯುಗಾಗಮೆ”  ಯಾವುದರಿಂದ ಯುಗದ  ಆದಿಯಲ್ಲಿ ಎಲ್ಲವೂ ಪ್ರಕಟಗೊಂಡವೋ  ಅದೇ ಆ ಬೃಹತ್ ಚೇತನ. ಈ ಜಗತ್ತಿನ ಎಲ್ಲವನ್ನೂ ಒಂದು ಸೂತ್ರದಲ್ಲಿ ಹಿಡಿದಿಟ್ಟಿರುವ ಆ ಬೃಹತ್ ಚೇತನವೇ ಆ ಪರಮ ಶಕ್ತಿ. ಅದನ್ನೇ ಪರಬ್ರಹ್ಮ, ದೇವರು ಪರಮಾತ್ಮ ಎನ್ನುವ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತೇವೆ.   

ಹಾಗಾದರೆ ನಮಗೆಲ್ಲ ಒಂದು ಪ್ರಶ್ನೆ ಇದೆ ಅಲ್ಲವಾ? ಅದು ” ನಾವು ಯಾರು”? ಎಂಬುದು . ನಾವೆಲ್ಲಾ ಒಂದು ರೂಪದಿಂದ ಇನ್ನೊಂದು  ರೂಪಕ್ಕೆ ಹೋಗುವ ಆ ಬೃಹತ್ ಚೇತನದ ಒಂದು ಸೂಕ್ಷ್ಮ ಕಣವಷ್ಟೇ!!!!!. ಹಾಲ ಮೇಲಿನ ನೊರೆಯಂತೆ. ಮನಸ್ಸು ಬುದ್ಧಿ ದೇಹಾತ್ಮಗಳ ಒಂದು ಗೂಡು. ಈ ನಾಲ್ಕೂ ಒಂದು ಕಡೆ ಸೇರಿರುವ ಒಂದು ಮನೆ.  ಸೃಷ್ಟಿಯ ಎಲ್ಲಕ್ಕೂ ಇದು ಅನ್ವಯ. ಪ್ರಮಾಣ ಮತ್ತು ಪರಿಮಾಣ ಬೇರೆ ಬೇರೆ ಅಷ್ಟೇ. ಮೇಲೆ ಕೊಂಚ ಅಹಂಕಾರ. ಅದು ನಮ್ಮನ್ನು ಈ ಜಗತ್ತಿನಲ್ಲಿ ಆಡಿಸುತ್ತದೆ. ನಮ್ಮ ಭಾಗಗಳಾದ ದೇಹ ಮನಸ್ಸು ಬುದ್ಧಿ ಮತ್ತು ಆತ್ಮಗಳ  ಮೂಲವನ್ನು ಅರಿಯುವುದೇ ಆಧ್ಯಾತ್ಮ. ಆ ಪರಮಾತ್ಮನ ಲೀಲಾವಿನೋದವನ್ನು ಅರ್ಥಮಾಡಿಕೊಳ್ಳುವುದೇ ಆಧ್ಯಾತ್ಮದ ಗುರಿ. 

ವಾಚಕರೆ ಈ ಜಗತ್ತಿನಲ್ಲಿ ನಡೆಯುವ ಪ್ರತಿಯೊಂದು ವಿಧ್ಯಮಾನವೂ ಆ ಬೃಹತ್ ಚೇತನದ ಕಾರಣದಿಂದಲೇ ನಡೆಯುತ್ತದೆ. ಅದು ಹಾಲಾದರೆ ಈ ಜಗತ್ತು ನೊರೆ. ಇದು ಚಿಂತನೆ ಮತ್ತು ಮನನಕ್ಕೆ ಒಂದು ಸೂಕ್ತ ವಿಚಾರ.