RSS

Monthly Archives: ಮೇ 2012

ರಸಧಾರೆ – ೧೦೭

ಅನಂತ ಚೌಕಟ್ಟು- ಸಾಂತ ಚಿತ್ರ.
====
ಅಜ್ಞಾತವಾದುದನುಭಾವವೆನೆ ನಾಸ್ತಿಕನು |
ಅಜ್ಞೇಯವೆಂದದಕೆ ಕೈ ಮುಗಿಯೆ ಭಕ್ತ ||
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ |
ಸ್ವಜ್ಞಪ್ತಿ ಶೋಧಿ ಮುನಿ – ಮಂಕುತಿಮ್ಮ. ||

ಅಜ್ಞಾತವಾದುದನುಭಾವವೆನೆ = ಅಜ್ಞಾತವಾದುದನು+ ಅಭಾವವೆನೆ// ಅಜ್ಞೇಯವೆಂದದಕೆ= ಅಜ್ಞೇಯ+ಎಂದು+ ಅದಕೆ // ಜಿಜ್ಞಾಸ್ಯವೆಂದು= ಜಿಜ್ಞಾಸ್ಯವು+ಎಂದು // ಪರಿಕಿಸತೊಡಗೆ = ಪರಿಕಿಸ+ ತೊಡಗೆ//

ಅಜ್ಞಾತವಾದುದು = ಅರಿವಿಗಿಲ್ಲದ್ದು, ಅಭಾವ=ಇಲ್ಲದ್ದು, ಅಜ್ಞೇಯವೆಂದು= ಅರಿಯಲಾಗದ್ದು, ಜಿಜ್ಞಾಸ್ಯ = ಜಿಜ್ಞಾಸೆಗೆ ಒಳಪಡಿಸಬಹುದಾದ್ದು.
ಸ್ವಜ್ಞಪ್ತಿ ಶೋಧಿ = ತನ್ನ ಸ್ವಂತ ಆಲೋಚನೆ ಮತ್ತು ಅನುಭವದಿಂದ ಅರಿಯಲು ಪ್ರಯತ್ನಪಡುವವನು.

ನಮ್ಮ ಅರಿವಿಗಿಲ್ಲದ್ದು, ಗೊತ್ತಿಲದ್ದು, ತಿಳಿಯದಿರುವುದು ಎಂದು “ನಾಸ್ತಿಕ” ದೇವರನ್ನು ನಂಬುವುದಿಲ್ಲ. ಅವನಿಗೆ ದೇವರಲ್ಲಿ ನಂಬಿಕೆ ಇಲ್ಲ. ಏಕೆಂದರೆ ಅವನಿಗೆ ಗೋಚರವಾಗುವುದಿಲ್ಲ ಮತ್ತು ಅನುಭವಕ್ಕೂ ಬರುವುದಿಲ್ಲ. ಆದರೆ ಅದರ ಅರಿವಿಲ್ಲದಿದ್ದರೂ ಅದರಲ್ಲಿ ನಂಬಿಕೆ ಇಟ್ಟಿರುವವನು ಭಕ್ತ. ಇರಲಿ ನಾನು ಇದನ್ನು ವಿಚಾರಕ್ಕೆ ಒರೆ ಹಚ್ಚಿ ನಿರ್ಣಯಿಸಬೇಕು,ಪರಿಕಿಸಿ ನೋಡಬೇಕು ಎಂದು ಹೇಳುವವನೇ ವಿಜ್ಞಾನಿ. ನಂಬಿದ್ದನ್ನು ಅಂತರ್ಯದಲ್ಲಿ ಚಿಂತನ, ಮನನ , ಧ್ಯಾನ , ತಪಸ್ಸು ಮಾಡಿ ಆ ಪರಮಾತ್ಮ ವಸ್ತುವನ್ನು ಅರಿತುಕೊಳ್ಳಲು ಪ್ರಯತ್ನಪಡುವವನೆ ಮುನಿ ಅಥವಾ ಋಷಿ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಾನೊಮ್ಮೆ ಒಂದು ಟ್ರೈನ್ ನಲ್ಲಿ ಪ್ರಯಾಣ ಮಾಡುತ್ತಿದ್ದೆ. ನಾ ಕುಳಿತ ಭೋಗಿಯಲ್ಲಿ ಕೆಲ ಯುವಕರ ಚರ್ಚೆ ತೀವ್ರವಾಗಿ ಸಾಗಿತ್ತು.” ದೇವರಿದ್ದಾನೆ, ಇಲ್ಲ, ನನಗೆ ನಂಬಿಕೆ ಇಲ್ಲ”. ಹೀಗೆ ಸಾಗಿತ್ತು ಅವರ ವಾಗ್ವಾದ. ಸುಮಾರು ಹೊತ್ತು ಇದನ್ನು ಆಲಿಸುತ್ತಿದ್ದ, ಒಬ್ಬ ಮುಸಲ್ಮಾನ ಸಜ್ಜನರು, ಶುದ್ಧ ನಾಸ್ತಿಕನಂತೆ ಕಾಣುತ್ತಿದ್ದವನನ್ನು ಕುರಿತು ” ಅಯ್ಯ ಕಡೆ ಪಕ್ಷ ನೀನು ನಿಮ್ಮ ಅಪ್ಪನ ಮಗನೆ ಎಂದು ನಂಬುತ್ತೀಯಾ” ಎಂದಾಗ ಅಲ್ಲಿ ಸ್ಥಬ್ಧತೆ ಅಥವಾ ನೀರವತೆ ಆವರಿಸಿತು. ಹೌದು ವಾಚಕರೆ ನಂಬಿಕೆ ಬೇಕು, ಇಲ್ಲದಿದ್ದರೆ ಜೀವನ ನರಕವಾಗಿಬಿಡುತ್ತದೆ. ಆಲೋಚಿಸಿ,”ನಮ್ಮ ಅಪ್ಪ ಯಾರು” ಎಂದು ನಮ್ಮ ಸಂದೇಹ ಮನಸ್ಸಿಗೆ ಬಂದರೆ, ನಮ್ಮ ಮನಸ್ಸಿನ ಸ್ಥಿತಿ ಹೇಗಿರಬಹುದೆಂದು ಊಹಿಸಿದ್ದೀರಾ? ನಾವಿದ್ದೇವೆ ಎಂದರೆ ನಮ್ಮ ಅಸ್ತಿತ್ವಕ್ಕೆ ಕಾರಣ ಇರಲೇಬೇಕಲ್ಲವೇ? ನಾಸ್ತಿಕರು “ನಾವು ದೇವರನ್ನು ನಂಬುವುದಿಲ್ಲ” ಎನ್ನುತ್ತಾರೆ. ಅಂದರೆ “ “ದೇವರು” ಎನ್ನುವ ವಸ್ತುವೊಂದು ಇದೆ ಅದನ್ನು ನಾನು ನಂಬುವುದಿಲ್ಲ” ಎಂದು ಅರ್ಥವಾಗಬಹುದಲ್ಲವೇ? ಹಾಗಾಗಿ ನಂಬಬೇಕು ನಂಬಿಕೆಯೆ ಜೀವನದ ಅಧಾರ. ವಿಚಾರಗಳನ್ನು, ವಿಷಯಗಳನ್ನು ವ್ಯಕ್ತಿಗಳನ್ನು ನಂಬಬೇಕು. ಅಂದರೆ ಅಂಧವಾಗಿ ನಂಬಬಾರದು . ವಿಚಾರದ ಒರೆಗೆಹಚ್ಚಿ ನಂಬ ಬೇಕು. ನಂಬಲರ್ಹವಲ್ಲದೆ ಇದ್ದರೆ ಅದನ್ನು ನಿರಾಕರಿಸಬೇಕು. ಆದರೆ ಅಪನಂಬಿಕೆ ಇರಬಾರದು.

ವಿಜ್ಞಾನದ ಮಾರ್ಗ ಬಹಳ ನಿಧಾನ. ಏಕೆಂದರೆ ಈ ಪರಮಾತ್ಮ ಚೇತನದ ಕಾರ್ಯ ವೈಖರಿ ವಿಜ್ಞಾನದ ಪರೀಕ್ಷಾ ಕೊಠಡಿಗಳ ಪರಿಧಿಯಲ್ಲಿ ಸಿಲುಕುವಂಥಾದ್ದಲ್ಲ. ಭಾರತೀಯ ವೇದ, ಉಪನಿಷತ್ತು, ಪುರಾಣ, ಭಾಗವತ ಮುಂತಾದವುಗಳಲ್ಲಿ ನಿಖರವಾಗಿ ” ಸಹಸ್ರ ಶೀರ್ಷಾ ಪುರುಷಃ, ಸಹಸ್ರಾಕ್ಷ; ಸಹಸ್ರಪಾತ್, ಸ ಭೂಮಿಂ ವಿಶ್ವತೋ ವೃತ್ವಾ ಅತ್ಯತ್ತಿಷ್ಟತ್ ದಶಾಂಗುಲಂ”.ಎಂದು ಎಂದೋ ಹೇಳಿದ್ದನ್ನು ” ಹೌದು, ಇರಬಹುದು’ ಅದೇ ಸತ್ಯ” ಎಂದು ವಿಜ್ಞಾನಿಗಳು ಈಗೀಗ ತೊದಲುನುಡಿಗಳನ್ನು ನುಡಿಯುತ್ತಿದ್ದಾರೆ. ಅವರಿಗೆ ಒಟ್ಟಾರೆ ಅರಿವಿಗೆ ಬಂದಿರುವುದೆಷ್ಟು, ಕೋಟಿಯಲ್ಲಿ ಒಂದು ಬಾಗವೂ ಅಲ್ಲ. ಇರಲಿ ಅವರ ವೈಖರಿ ಅವರಿಗೆ.

ಇನ್ನು ಋಷಿ ಮುನಿಗಳ ಮಾರ್ಗವೂ ನಮಗೆ ಬಹಳ ಕಠಿಣ . ಏಕೆಂದರೆ “ ಯಮ ನಿಯಮಗಳ “ ತೀವ್ರತೆಗೆ, ವಿಷಯಾಸಕ್ತರಾಗಿ ಇಂದಿರಿಯಲೋಲರಾದ ಸಾಮಾನ್ಯರಾದ ನಾವುಗಳು ಒಳಪಡುವುದು ಬಹಳ ಕಷ್ಟ. ಹಾಗಾಗಿ ನಾವು ನಿರ್ಮಲ ಮನಸ್ಸಿನಿಂದ, ಶುದ್ಧವಾಗಿ ನಿಸ್ಸಂಶಯವಾಗಿ ನಂಬಬೇಕು. ” ಸಂಶಯಾತ್ಮಾ ವಿನಶ್ಯತಿ” ಎಂದು ಹೇಳಿದೆ ಭಗವದ್ಗೀತೆ.

“ನಂಬಿ ಕೆಟ್ಟವರಿಲ್ಲವೋ“ ಇದು ದಾಸರ ಉಕ್ತಿ. ನಾವು ನಂಬಿದರೆ ಸುಖ, ಶಾಂತಿ, ನೆಮ್ಮದಿ. ಸಂಶಯದಿಂದ ಅಶಾಂತಿ, ತೊಳಲಾಟ, ಇತ್ಯಾದಿ. ನಮಗೆ ಏನು ಬೇಕೋ ಅದನ್ನು ಆರಿಸಿಕೊಳ್ಳಬೇಕು, ನಮ್ಮ ಆಯ್ಕೆಯಿಂದ ಏನು ಲಭಿಸುವುದೋ ಅದನ್ನು ಅನುಭವಿಸಬೇಕು.


Advertisements
 

ರಸಧಾರೆ – ೧೦೬

ಅನಂತ ಚೌಕಟ್ಟು- ಸಾಂತ ಚಿತ್ರ
======
ಚೌಕಟ್ಟನಂತವದರೊಳು ಚಿತ್ರಪಟ ಸಾಂತ
ಸಾಕಾರ ಘನತತಿ ನಿರಾಕಾರ ನಭದಿ
ಲೌಕಿಕದ ಮೌಲ್ಯ ನಿರ್ಲೌಕಿಕದ ನಾಣ್ಯದಲಿ
ಲೆಕ್ಕ ತಾತ್ವಿಕನಿಗಿದು – ಮಂಕುತಿಮ್ಮ,

ಚೌಕಟ್ಟನಂತವದರೊಳು = ಚೌಕಟ್ಟು + ಅನಂತವು+ ಅದರೊಳು,/ ತಾತ್ವಿಕನಿಗಿದು = ತಾತ್ವಿಕನಿಗೆ+ ಅದು.

ಚೌಕಟ್ಟು = ಗೋಡೆ, ಆಧಾರ,/ನಿರ್ಲೌಕಿಕದ = ಪಾರಮಾರ್ಥಿಕ/, ಸಾಂತ = ಅಂತ್ಯವಿರುವ,/ ತಾತ್ವಿಕ= ತತ್ವ ಶಾಸ್ತ್ರಜ್ಞ,

ಹಿಂದಿನ ಕಗ್ಗದ ವಿವರಣೆಯನ್ನೇ ಮುಂದುವರೆಸಿ ನೋಡಿದರೆ, ಈ ಪರಮ ಚೇತನದ ಚೌಕಟ್ಟು, ಅನಂತ,ಅಂದರೆ ಅಂತವೇ ಇಲ್ಲದ್ದು . ಹಾಗೆ ಅನಂತವಾಗಿರುವ ಚೌಕಟ್ಟಿನಲ್ಲಿ ಅಂತ್ಯಗೊಳ್ಳುವ ಚಿತ್ರ. ಹೇಗೆ ಅನಂತ ಆಕಾಶದಲ್ಲಿ ಹಲವು ಆಕಾರಗಳ, ಆದರೆ ತನ್ನ ಆಕಾರವನ್ನು ಘಳಿಗೆ ಘಳಿಗೆಗೆ ಬದಲಾಯಿಸಿಕೊಳ್ಳುವ ಮೋಡಗಳಂತೆ, ನಮ್ಮ ಲೌಕಿಕ ಜೀವನವೂ ಈ ಅನಂತ ವಿಶ್ವದ ಭಿತ್ತಿಯಲ್ಲಿ ಸಾಂತ, ಅಂದರೆ ಬದಲಾಗುವ ಜೀವನದ ಚಿತ್ರ. ಆದರೆ ಈ ಲೌಕಿಕದ ಜೀವನದ ಮೌಲ್ಯಗಳನ್ನು, ಪಾರಮಾರ್ಥದ ಒರೆಗೆಹಚ್ಚಿ ನೋಡುವವನೆ ತತ್ವಜ್ಞಾನಿ, ಎಂದು ಆ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು.

ವಿಶಾಲವಾದ, ಈ ಜಗತ್ತು ಒಂದು ಅಂತ್ಯವೇ ಇಲ್ಲದ ಚೌಕಟ್ಟು.ಈ ಚೌಕತ್ತಿನಲ್ಲಿರುವುದು ಅಂತ್ಯಗೊಳ್ಳುವ ರೂಪಾಂತರಗೊಳ್ಳುವ ಚಿತ್ರ. ನಾವು ಆಕಾಶವನ್ನು ನೋಡಿದರೆ, ಅದರ ಅಂತ್ಯ ನಮಗೆ ಗೋಚರವಾಗುವುದಿಲ್ಲ. ಆದರೆ ಆ ನಭೋ ಮಂಡಲದಲ್ಲಿ ಮೂಡುವ ಮೋಡಗಳು ಚಿತ್ತಾರ ಚಿತ್ತಾರವಾಗಿರುತ್ತವೆ. ಆದರೆ ಆ ಮೋಡಗಳ ಆಕಾರ ಕ್ಷಣಕ್ಷಣಕ್ಕೂ ಬದಲಾಗುತ್ತಾ ಇರುತ್ತದೆ. ಹಾಗೆಯೇ ಈ ಜಗತ್ತಿನ ಭಿತ್ತಿಯಲ್ಲಿ ಮೂಡುವ ಚಿತ್ರ ಮತ್ತು ಚಿತ್ತಾರಗಳೂ ಸಹ ಆ ಮೋಡಗಳಂತೆಯೇ, ಬದಲಾಗುತ್ತಾ ಇರುತ್ತದೆ.

ಇಲ್ಲಿರುವ ಅಂತ್ಯವಾಗುವ ಚಿತ್ರ ಲೌಕಿಕದ ಚಿತ್ತಾರ. ಆದರೆ ಆ ಚಿತ್ರ ಮೂಡಿರುವುದು ಅನಂತ ಪಾರಮಾರ್ಥದಲಿ. ಲೌಕಿಕಕ್ಕೆ ಒಂದು ಮೌಲ್ಯ ಮತ್ತು ಪಾರಮಾರ್ಥಕ್ಕೆ ಒಂದು ಮೌಲ್ಯ. ಲೌಕಿಕದ ಮೌಲ್ಯಗಳು ಪರಮಾರ್ಥಕ್ಕೆ ಅನ್ವಯವಾಗದಿದ್ದರೂ ತತ್ವಜ್ಞಾನಿಯಾದವನು ಈ ಲೌಕಿಕದ ಮೌಲ್ಯಗಳನ್ನು ಪರಮಾರ್ಥ ಸಾಧನೆಗೆ ಮೆಟ್ಟಿಲಾಗಿಸಿಕೊಳ್ಳುತ್ತಾನೆ. ಲೌಕಿಕದ ಚಿತ್ರ ಮತ್ತು ಪರಮಾರ್ಥ ಎರಡೂ ಒಂದಕ್ಕೊಂದು ಪೂರಕ. ಒಂದು ಇನ್ನೊಂದಕ್ಕೆ ಅಧಾರ. ಮತ್ತೊಂದು ಮೊದಲಿನದಕ್ಕೆ ಅಲಂಕಾರ. ನೋಡಿ, ನಮ್ಮ ಮನಸ್ಸೂ ಸಹ ಅನಂತ. ಅಂದರೆ ನಮ್ಮ ಮನಸ್ಸಿನಲ್ಲೂ ಅನಂತವಾದ ಆಲೋಚನೆಗಳು ಬರುತ್ತವೆ, ಆ ಪರಮಾರ್ಥದಂತೆಯೇ ಅರ್ಥವಾಗದ ಆಲೋಚನೆಗಳು ಬರುತ್ತವೆ. ಆದರೆ ಆಲೋಚನೆಗೆ ಬಂದದ್ದೆಲ್ಲ ಸಾಕಾರಗೊಳ್ಳುವುದಿಲ್ಲ. ಸಾಕಾರಗೊಂಡರೆ ಒಂದು ಆಕಾರ ಅಥವಾ ಚಿತ್ರ ಮೂಡುತ್ತದೆ. . ಆ ಚಿತ್ರವೂ ಸಹ ನಮ್ಮ ಮನಸ್ಸಿನ ಅನಂತ ಆಲೋಚನಾ ಲಹರಿಯ ಬಿತ್ತಿಯಲ್ಲಿ ಮೂಡಿದ್ದೇ ಅಲ್ಲವೇ? ಹಾಗಾಗಿ ನಾವು ಒಂದು ಚಿತ್ರವಾದರೆ, ನಾವು ಇರುವುದೂ ಸಹ ಅನಂತ ಪರಮಾತ್ಮ ತತ್ವದ ಆಧಾರದ ಮೇಲೆ ಅಲ್ಲವೇ? ನಮ್ಮೊಳಗೇ ಒಂದು ಅನಂತ(ಮನಸ್ಸು) ಅದರೊಳಗೆ ಹಲವಾರು ಕ್ಷಣಕ್ಷಣಕ್ಕೂ ಬದಲಾಗುವ ಚಿತ್ರಗಳು.

ಬೇರೆ ಬೇರೆ ರೂಪಗಳನ್ನು ಹೊಂದಿದ ಈ ಚಿತ್ರಗಳು ಲೌಕಿಕವಾದದು. ಆತ್ಮಜ್ಞಾನವನ್ನು ಪಡೆಯಲು, ತತ್ವಜ್ಞಾನಿಯಾದವನು ಈ ಚಿತ್ರದ ಭಾವದಿಂದ ಹೊರಬಂದು ಅನಂತ ವಿಶ್ವದ ಭಾವವನ್ನು ತುಂಬಿಕೊಂಡು, ಲೌಕಿಕದಿಂದ ಪರಮಾರ್ಥದೆಡೆಗೆ ಹೋಗಲು ಪ್ರಯತ್ನಮಾಡುತ್ತಾನೆ. ಅಂದರೆ ಆಕಾರದಿಂದ ನಿರಾಕಾರದೆಡೆಗೆ ಹೋಗುವುದೇ ಅಧ್ಯಾತ್ಮಿಕ ಪ್ರಯಾಣ. ಅಂತಹ ಪ್ರಯಾಣದ ಪ್ರಯತ್ನವನ್ನು ತತ್ವಜ್ಞಾನಿ ಮಾಡುತ್ತಾನೆ. ವಾಚಕರೆ ಚಿತ್ರ ಅಂದರೆ ಲೌಕಿಕ, ಬಲುಸೊಗಸು. ಇಂದ್ರಿಯಾನಂದವನ್ನು ಕೊಡುತ್ತದೆ. ಆದರೆ ಅದು ಕ್ಷಣಿಕಾನಂದ. ಇದರಲ್ಲಿ ರಕ್ತಿಯಿರುವರಿಗೆ ಅಧ್ಯಾತ್ಮ ಅಥವಾ ಪರಮಾರ್ಥ ನೀರಸ, ಆದರೆ ಅದ್ಯಾತ್ಮ ನಿತ್ಯಾನಂದ ಅಥವಾ ಶಾಶ್ವತಾನಂದ.

ಇಲ್ಲಿ ಎರಡೂ ಉಂಟು. ನಮಗೇನು ಬೇಕೋ ಅದನ್ನು ಆಯ್ದುಕೊಳ್ಳಬಹುದು.

 

ಚೆನ್ನುಡಿ

ಒಂದು ವರ್ಷದಲ್ಲಿ ನೂರು ಜನರೊಂದಿಗೆ ಸ್ನೇಹ ಬೆಸೆಯುವುದಕ್ಕಿಂತ
ನೂರುವರ್ಷ ಒಬ್ಬರೊಂದಿಗೆ ನಿಜ ಸ್ನೇಹ ನಿಭಾಯಿಸುವುದು ಸೂಕ್ತ – ಅನಾಮಿಕ

 

ರಸಧಾರೆ – ೧೦೫

ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು |
ಚಿತ್ರವಿಲ್ಲದ ಭಿತ್ತಿ ಸೊಗಸಹುದೆಂತು ||
ನಿತ್ಯಸತ್ವವೆ ಭಿತ್ತಿ, ಜೀವಿತ ಕ್ಷಣಚಿತ್ರ |
ತತ್ವವೀ ಸಂಬಂಧ – ಮಂಕುತಿಮ್ಮ ||

ಭಿತ್ತಿಯೊಂದಿಲ್ಲದಿರೆ = ಬಿತ್ತಿ +ಒಂದು+ಇಲ್ಲದಿರೆ,/ ಚಿತ್ರವೆಂತಿರಲಹುದು = ಚಿತ್ರವೂ + ಎಂತೆ+ಇರಲು+ಅಹುದು, ಚಿತ್ರವಿಲ್ಲದ = ಚಿತ್ರವೂ+ ಇಲ್ಲದ/ಸೊಗಸಹುದೆಂತು = ಸೊಗಸು+ಅಹುದು+ ಎಂತು

ಭಿತ್ತಿ = ಗೋಡೆ.

ಒಂದು ಚಿತ್ರ ಬರೆಯಲು ಗೋಡೆಯೊಂದು ಬೇಕು. ಗೋಡೆಯಿಲ್ಲದೆ ಚಿತ್ರವಿರಲು ಸಾಧ್ಯವಿಲ್ಲ. ಹಾಗೆಯೇ ಚಿತ್ರವಿಲ್ಲದ ಗೋಡೆಗೆ ಸೊಗಸೂ ಇರುವುದಿಲ್ಲ. ಈ ಜಗತ್ತಿನ ಗೋಡೆಯಾದ ಆ ಪರಮಾತ್ಮ ಸತ್ವವು ನಿತ್ಯ ಮತ್ತು ಸತ್ಯವಾದ ಗೋಡೆಯಾಗಿರಲು, ನಮ್ಮ ಜೀವನವು ಆ ಗೋಡೆಯಮೇಲೆ ಬರೆದ ಒಂದು ಚಿತ್ರವಷ್ಟೇ. ಈ ತತ್ವದಿಂದಲೇ ನಮ್ಮ ಮತ್ತು ಪರಮಾತ್ಮನ ಸಂಬಂಧವಿರುತ್ತದೆ ಎನ್ನುವುದೇ ಗುಂಡಪ್ಪನವರ, ಈ ಕಗ್ಗದ ಹೂರಣ.

ಒಂದು ಚಿತ್ರ ಬರೆಯಲು ಒಂದು ಆಧಾರಬೇಕು . ಅದು ಒಂದು ಗೋಡೆಯಾಗಿರಬಹುದು, ಒಂದು ಫಲಕವಾಗಿರಬಹುದು, ಒಂದು ಬಟ್ಟೆಯಾಗಿರಬಹುದು. ಹೀಗೆ ಯಾವುದಾದರೊಂದು ಆಧಾರವಿಲ್ಲದೆ ಚಿತ್ರಬರೆಯಲು ಸಾಧ್ಯವಿಲ್ಲ. ಹಾಗಲ್ಲದೆ ನಮ್ಮ ಊಹೆಯಲ್ಲಿ ಬರೆದ ಚಿತ್ರ ಕೇವಲ ನಮ್ಮ ಮನಸ್ಸಿನಲ್ಲಿ ಅಲ್ಪ ಕಾಲ ಇದ್ದು ಮಾಯವಾಗುತ್ತದೆ. ಹಾಗಾಗಿ ಚಿತ್ರಕ್ಕೆ ಒಂದು ಆಧಾರ ಬೇಕು.

ಇಡೀ ಜಗತ್ತೇ ಒಂದು ಚಿತ್ರ. ಈ ಚಿತ್ರಕ್ಕೆ ಆಧಾರವೇ ಪರಮಾತ್ಮ ತತ್ವ. ನಿರಂತರವಾದ ನಿತ್ಯವಾದ ಆ ಪರಮಾತ್ಮ ತತ್ವವೇ ಭಿತ್ತಿ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು. ಅಂದರೆ ಇಡೀ ಜಗತ್ತು ಚಿತ್ರವಾದರೆ ಅದಕ್ಕೆ ಆಧಾರವೇ ಪರಮಾತ್ಮ. ನಮ್ಮ ಭುವಿಯ ಯಾವುದೇ ಒಂದು ಭಾಗವನ್ನು ಒಂದು ಚೌಕಟ್ಟಿನಲ್ಲಿ ನಿಲ್ಲಿಸಿದರೆ ಅದೇ ಒಂದು ಸುಂದರ ಚಿತ್ರದಂತೆ ಕಾಣುತ್ತದೆ. . ಇಡೀ ಭುವಿಯನ್ನೇ ನೋಡಿದರೆ ಆ ಪರಮಾತ್ಮ ತತ್ವದಿಂದ ಸೃಷ್ಟಿಯಾದ ಈ ಜಗತ್ತಿನಲ್ಲಿ ಈ ಭುವಿಯೂ ಒಂದು ಚಿತ್ರ. ಹಾಗೆಯೇ ಎಲ್ಲವೂ, ಅಂದರೆ ಸೌರ ಮಂಡಲಗಳು, ಕ್ಷೀರಪಥಗಳು, ಆಕಾಶಗಂಗೆಗಳು ಎಲ್ಲವೂ ಒಂದೊಂದು ಚಿತ್ರದಂತೆ ಕಾಣುವುದಲ್ಲವೇ? ಹಾಗೆಯೇ ಒಂದೊಂದನ್ನಲ್ಲದೆ ಇಡೀ ವಿಶ್ವವನ್ನೇ ನೋಡಿದರೆ ಸಮಗ್ರವಾಗಿ ಒಂದೇ ಚಿತ್ರವನ್ನು ಕಾಣಬಹುದಲ್ಲವೇ. ಆದರೆ ಈ ಒಂದು ವಿಶ್ವದ ಚಿತ್ರ ನಿಂತಿರುವುದೇ ಆ ಪರಮ ಚೇತನದ ಆಧಾರದ ಮೇಲೆ. ಹಾಗಾಗಿ ಪರಮಾತ್ಮ ಒಂದು ಭಿತ್ತಿ ಮಿಕ್ಕೆಲ್ಲವೂ ಒಂದು ಚಿತ್ರ.

ಹಾಗೆಯೇ ನಮ್ಮ ಜೀವನವನ್ನು ನಾವು ಅವಲೋಕಿಸಿದರೆ, ಹುಟ್ಟಿನಂದಿನಿಂದ ನಮ್ಮ ಈ ರೂಪದ ಅಂತ್ಯದವರೆಗೆ, ನಾವೂ ಒಂದು ಚಿತ್ರವಲ್ಲವೇ? ನಮ್ಮ ಜೀವನವೂ ಆ ಪರಮಾತ್ಮ ತತ್ವವನ್ನು ಆಧರಿಸಿ ನಡೆಯುವ ಒಂದು ಚಲನ ಚಿತ್ರವೆಂದರೆ ಅತಿಶಯೋಕ್ತಿಯಾಗಲಾರದು. ಒಬ್ಬೊಬ್ಬರದು ಒಂದೊಂದು ಚಿತ್ರ. ಚಿತ್ರಗಳ ವ್ಯತ್ಯಾಸಗಳಿಗೆ ಸಾವಿರಾರು ಕಾರಣಗಳು. ಒಂದಕ್ಕಿಂತ ಒಂದು ಭಿನ್ನವಾಗಿದ್ದರೂ ಎಲ್ಲವೂ ಆ ಪರಮ ಚೇತನದ ಆಧಾರದಮೇಲೆ ನಿಂತ ಚಿತ್ರಗಳಲ್ಲವೇ?

ನಮ್ಮ ಚಿತ್ರಗಳಿಗೆ ಗೋಡೆಯಾಗಿರುವ, ಆಧಾರವಾಗಿರುವ ಆ ಪರಮ ಚೇತನಕ್ಕೂ, ಮತ್ತು ಚಿತ್ರಕ್ಕೂ ಅಂದು ಅವಿನಾಭಾವ ಸಂಬಂಧ. ಚಿತ್ರ ಬದಲಾಗುತ್ತಿರುತ್ತದೆ. ಪ್ರಕೃತಿಯಲ್ಲಿ ಋತುಮಾನಗಳಿಗೆ ತಕ್ಕಂತೆ ಬದಲಾವಣೆ ಬಂದು ಪ್ರತಿಬಾರಿಯೂ ನಮಗೆ ಹೊಸ ಹೊಸ ಚಿತ್ರಗಳು ಕಾಣುವುದಿಲ್ಲವೇ? ಹಾಗೆ ನಮ್ಮ ಜೀವನದ ಚಿತ್ರಗಳೂ ಕ್ಷಣದಿಂದ ಕ್ಷಣಕ್ಕೆ, ದಿನದಿಂದ ದಿನಕ್ಕೆ, ಜನ್ಮದಿಂದ ಜನ್ಮಕ್ಕೆ ಬದಲಾಗುತ್ತಿರುತ್ತದೆ. ನೋಡುವವರಿಗೆ ಹೊಸ ಹೊಸ ಚಿತ್ರಗಳು ಮೂಡುತ್ತವೆ. ಈ ಜೀವನಕ್ಕೂ ಮತ್ತು ಈ ಜೀವನಕ್ಕೆ ಆಧಾರವಾದ ಆ ಪರಮ ಚೇತನಕ್ಕೂ ಇರುವ ಗಾಢ ಸಂಬಂಧವೇ ಈ ಕಗ್ಗದ ಅಂತರ್ಯ.

ನಾವೂ ಸಹ ಒಂದು ಚಿತ್ರವಾಗಿ ಅನ್ಯ ಚಿತ್ರಗಳನ್ನು ನೋಡುವ ಭಾಗ್ಯಶಾಲಿಗಳು ಅಲ್ಲವೇ?

 

ಚೆನ್ನುಡಿ

ಈ ಜಗತ್ತಿನಲ್ಲಿ ನಮಗೆ ಎಲ್ಲರನ್ನೂ ಮೆಚ್ಚಿಸಲು ಮತ್ತು ತೃಪ್ತಿಪಡಿಸಲು ಸಾಧ್ಯವೇ ಇಲ್ಲ.
ನಾವು ನಮ್ಮ ಅಂತರಾತ್ಮವನ್ನು ಮೆಚ್ಚಿಸಿ, ತೃಪ್ತಿಪಟ್ಟುಕೊಂಡರೆ, ನಮಗೆ ನೆಮ್ಮದಿ – ದಾಸಾನುದಾಸ

 

ರಸಧಾರೆ – ೧೦೪

ಅನಂತ ಚೌಕಟ್ಟು – ಸಾಂತ ಚಿತ್ರ.
=======
ಕಾಲವಕ್ಷಯದೀಪವದರ ಪಾತ್ರೆಯಪಾರ |
ಬಾಳ್ ಅದರಿನಾದೊಂದು ಕಿರುಹಣತೆ ಮಿಣುಕು ||
ಗಾಳಿಯಾರಿಪುದೊಂದನಿನ್ನೊಂದ ಹೊತ್ತಿಪುದು
ತೈಲಧಾರೆಯಖಂಡ – ಮಂಕುತಿಮ್ಮ

ಕಾಲವಕ್ಷಯದೀಪವದರ = ಕಾಲವು+ಅಕ್ಷಯದೀಪ + ಅದರ / ಪಾತ್ರೆಯಪಾರ = ಪಾತ್ರೆಯು ಅಪಾರ/ ಅದರಿನಾದೊಂದು = ಅದರಿನ+ ಒಂದು/ ಗಾಳಿಯಾರಿಪುದೊಂದನಿನ್ನೊಂದ = ಗಾಳಿ+ಆರಿಪುದು+ಒಂದ+ಇನ್ನೊಂದ / ತೈಲಧಾರೆಯಖಂಡ = ತೈಲಧಾರೆಯು+ ಅಖಂಡ,

ಕಾಲವೆಂಬುದು ಅವ್ಯಾಹತವಾಗಿ, ನಿರಂತರ ಉರಿಯುವ ದೀಪ. ಅದರ ಪಾತ್ರ ಬಹಳ ದೊಡ್ಡದು. ಒಂದು ಕ್ಷಣ ಮುಗಿದರೆ ಮತ್ತೊಂದು ಕ್ಷಣ ನಮ್ಮ ಬಾಳು ಕಾಲದ ಈ ಅವ್ಯಾಹತ ಪ್ರವಾಹದಲ್ಲಿ ಉರಿಯುವ ಒಂದು ಸಣ್ಣ ಹಣತೆಯಂತೆ. ಗಾಳಿಯು ಒಂದು ಹಣತೆಯನ್ನು ಆರಿಸಿದರೆ ಇನ್ನೊಂದು ದೀಪ ಹೊತ್ತಿಕೊಳ್ಳುವುದು. ಜೀವನದ ತೈಲಧಾರೆಗೆ ಅಂತ್ಯವೇ ಇಲ್ಲವೆಂಬುದೆ ಈ ಕಗ್ಗದ ಹೂರಣ.

ಈ ಜಗತ್ತಿನಲ್ಲಿರುವ ಎಲ್ಲ ಪ್ರಾಣಿಗಳ ಜೀವನ ಎಂದು ಆರಂಭವಾಯಿತೋ ಗೊತ್ತಿಲ್ಲ. ಅದರ ಕಾಲವನ್ನು ಕೇವಲ ಅಂದಾಜು ಮಾಡುತ್ತಾರೆ, ಮಾನವ ಶಾಸ್ತ್ರಜ್ಞರು. ಇಲ್ಲಿ ಜೀವನ ಎಂದೂ ಮುಗಿಯುವುದೇ ಇಲ್ಲ. ನಿರಂತರವಾಗಿ ನಡೆದೇ ಇದೆ. ಸಮಯ ಕಳೆಯುತ್ತೆ ಹೊರತು ಎಂದೂ ಮುಗಿಯುವುದೇ ಇಲ್ಲ . ನಮ್ಮ ಬಾಳು ಈ ಕಾಲಪ್ರವಾಹದಲ್ಲಿ ಒಂದು ಹನಿ ನೀರಷ್ಟೇ. ಆದರೆ ಈ ಅವ್ಯಾಹತ ಕಾಲದ ಹರವಿನಲ್ಲಿ, ನಮ್ಮ ಉಸಿರು ಆಡುತ್ತಿದ್ದರೆ ಬಾಳು ಅಥವಾ ಜೀವನ, ಅದು ನಿಂತರೆ ಮರಣ, ಸಾವು. ನಾವು ತಾಯಿಯ ಗರ್ಭದಲ್ಲಿ ಬಿದ್ದೊಡನೆಯೇ, ನಮ್ಮ ಗಣತಿ ಶುರುವಾಗುತ್ತದೆ. “೩ ತಿಂಗಳು ೬ ತಿಂಗಳು ೯ ತಿಂಗಳ ೯ ದಿನ” ಎಂದು. ಅದು ಗರ್ಭಸ್ಥ ಜೀವನದ ಗಣತಿ. ನಮ್ಮ ಭೂ ಪತನವಾದೊಡನೆ, ಮತ್ತೆ ಗಣತಿ ಶುರು, ೩ ತಿಂಗಳು, ಒಂದು ವರ್ಷ” ಹೀಗೆ.

ಆದರೆ ಇದು ಸಾವು ನಿಜ ಸ್ವರೂಪದಲ್ಲಿ ಅಂತ್ಯವೇ ಎಂದು ನೋಡಿದರೆ, ಅಲ್ಲ. ಇದು ಕೇವಲ ರೂಪಾಂತರ ಅಷ್ಟೇ. ಏಕೆಂದರೆ ಪಂಚಭೂತಗಳಿಂದಾದ ಮನಸ್ಸು ಬುದ್ಧಿ ದೇಹಗಳು, ಮತ್ತು ದೈವಾ೦ಶವಾದ ಆತ್ಮ ಒಂದೆಡೆ ಸೇರಿದಾಗ ಒಂದು ಜೀವಿಯ ಆವಿರ್ಭಾವ. ಇವೆಲ್ಲವೂ ಒಂದಿಷ್ಟು ಕಾಲ ಇದ್ದು ಜೀವಿಸಿ, ಮತ್ತೆ ಬೇರೆ ಬೇರೆಯಾಗಿ ತಮ್ಮ ಸ್ವಸ್ಥಾನ ಸೇರಲು ಹೊರಟಾಗ, ಆ ಜೀವಿಯ ಅಂತ್ಯ. ಅದನ್ನು ನಾವು, ಮರಣ, ಸಾವು ಎಂದು ಕರೆಯುತ್ತೇವೆ. ಆದರೆ ಇಲ್ಲಿ ಯಾವುದರ ಅಂತ್ಯವೂ ಆಗುವುದಿಲ್ಲ, ಎಲ್ಲವೂ ರೂಪಾಂತರವಷ್ಟೇ.

ವಾಚಕರೆ, ಕಾಲದ ಅವ್ಯಾಹತ ಮತ್ತು ನಿರಂತರ ಪ್ರವಾಹಕ್ಕೆ ಅಣೆಕಟ್ಟುಗಳನ್ನು ಕಟ್ಟಲು ಸಾಧ್ಯವೇ? ನಾವು ನಮ್ಮ ಜೀವನಕ್ಕೆ, ಅನುಕೂಲಕ್ಕೆ ಇದನ್ನು ಕ್ಷಣ , ನಿಮಿಷ, ಗಂಟೆ, ದಿನ, ವಾರ, ತಿಂಗಳು ವರ್ಷಗಳೆಂದು ವಿಭಾಗಿಸಿ, ಲೌಕಿಕ ಜೀವನಕ್ಕೆ ಅನುಗುಣವಾಗಿ ಕಾಲವನ್ನು ಎಣಿಸುತ್ತೇವೆ. ಆದರೆ ವಾಸ್ತವವಾಗಿ ಕಾಲವನ್ನು, ವಿಭಾಗಿಸಲು ಸಾಧ್ಯವೇ ಇಲ್ಲ. ಈ ವಿಭಾಗಗಳೆಲ್ಲ ಕೇವಲ ಕಾಲ್ಪನಿಕ ಮಾತ್ರ. ಈ ಕಾಲದ ಪ್ರವಾಹದಲ್ಲಿ ಎಷ್ಟೋ ಜೀವಿಗಳು ಬರುತ್ತಾರೆ ಹೋಗುತ್ತಾರೆ ಮತ್ತು ಈ ಬಂದು ಹೋಗುವ ಪ್ರಕ್ರಿಯೆ ನಿರಂತರ ನಡೆಯುತ್ತಲೇ ಇರುತ್ತದೆ. ಕಾಲಾನುಕಾಲಕ್ಕೆ ಸಣ್ಣವರು ಬೆಳೆದು ದೊಡ್ಡವರಾಗಿ, ದೊಡ್ಡವರು ಮುದುಕರಾಗಿ, ಜೀವ ಧಾರಣೆ ಮಾಡಿದ ದೇಹ ಜರ್ಜರಿತವಾಗಿ, ಮರದಿಂದ ತರಗೆಲೆಗಳು ಉದುರುವಂತೆ ಉದುರು ಹೋಗುತ್ತಾರೆ. ಮರದಿಂದ ಹಾಗೆ ಉದುರಿದ ಎಲೆಗಳ ಹಿಂಬದಿಯಿಂದ ಹೇಗೆ ಹೊಸ ಚಿಗುರು ಬರುತ್ತದೋ ಹಾಗೆಯೇ ಭುವಿಯಲ್ಲಿ ಹೊಸ ಹೊಸ ಜೀವಿಗಳ ಆವಿರ್ಭಾವವಾಗುತ್ತದೆ. ಇದು ನಿರಂತರ, ನಮ್ಮ ಭುವಿಯಲ್ಲಿ ಕೋಟ್ಯಾಂತರ ವರ್ಷಗಳಿಂದ ನಡೆದು ಬರುತ್ತಲೇ ಇದೆ, ಎನ್ನುವುದೇ ಈ ಕಗ್ಗದ ಹೂರಣ.

ಆ ಪರಮಾತ್ಮನ ಲೀಲಾವಿನೋದದಲ್ಲಿ ಇದೂ ಸಹ ಒಂದು ಅದ್ಭುತ ಬಾಗ. ನಮಗೂ ಈ ಲೀಲಾವಿನೋದದ ಒಂದು ಪಾತ್ರ ಸಿಕ್ಕ ಸಂತೋಷವನ್ನು ಅನುಭವಿಸೋಣ.

 

ಚೆನ್ನುಡಿ

ಒಂದು ಬಾಣವನ್ನು ಹಿಂದಕ್ಕೆಳೆದು ಬಿಟ್ಟರೆ ಮುಂದೆ ಹೋಗುತ್ತದೆ.
ಬಂದೂಕಿನ ಕುದುರೆಯನ್ನು ಹಿಂದಕ್ಕೆಳೆದು ಬಿಟ್ಟರೆ ಗುಂಡು ಮುಂದೆ ಹೋಗುತ್ತದೆ.
ನಮ್ಮ ಬದುಕಿನ ಸಮಸ್ಯೆಗಳು ನಮ್ಮನ್ನು ಜೀವನದಲ್ಲಿ ಗುರಿಮುಟ್ಟುವುದಕ್ಕೆ ಮುಂದಕ್ಕೆ ತಳ್ಳುತ್ತವೆ – ಅನಾಮಿಕ.