RSS

Monthly Archives: ಜುಲೈ 2012

ರಸಧಾರೆ – ೧೬೨

ಟಗರೆರಡ ಬೆಳೆಸಿ ಕೊಬ್ಬಿಸಿ ಕೆಣಕಿ ಹುರಿಗೊಳಿಸಿ I
ಜಗಳವಾಡಿಸಿ ದೈವಜೀವಗಳ ಪೆಸರಿಂ II
ನಗುತಲಿರುವನು ನೋಡಿ ಪರಬೊಮ್ಮನೇಂ ಬಿನದಿ I
ಬಿಗಿಯದಿರು ನೀಂ ಬೀಗಿ – ಮಂಕುತಿಮ್ಮII

ಪೆಸರಿಂ = ಹೆಸರಿಂದ // ಬಿನದಿ = ಸಂತೋಷದಿಂದ// ಬಿಗಿಯದಿರು = ಗರ್ವಪಡದಿರು// ಬೀಗಿ= ಅಹಂಕಾರದಿಂದ

ವಿಧಿಯ ರೂಪದಲ್ಲಿ ಆ ದೈವ ಮತ್ತು ನಿನ್ನ ರೂಪದಲ್ಲಿ ಈ ಜೀವ ಇವೆರಡನ್ನೂ ಕೊಬ್ಬಿದ ಟಗರುಗಳಂತೆ ಬೆಳೆಸಿ ಒಂದು ಇನ್ನೊಂದರ ಮೇಲೆ ಸೆಣಸಾಡಿಸುತ್ತಾ, ಆ ಪರಮಾತ್ಮ ನಗುತ್ತಿದ್ದಾನೆ. ನೀನು ನಿನ್ನ ಅಹಂಕಾರದಿಂದ ಗರ್ವ ಪಡದಿರು, ಎಂದು ಗುಂಡಪ್ಪನವರು ಒಂದು ಸಂದೇಶ ಮತ್ತು ಒಂದು ಆದೇಶವನ್ನು ಕೊಡುತ್ತಾರೆ ಈ ಕಗ್ಗದಲ್ಲಿ.

ಒಂದು ಆ ಪರಮಾತ್ಮನಿಂದ ನಿಯಮಿಸಲ್ಪಟ್ಟ ವಿಧಿ. ನಮ್ಮನ್ನಾಡಿಸುವ ವಿಧಿ. ನಮ್ಮ ಪೂರ್ವ ಕರ್ಮಗಳ ಲೆಕ್ಕವಿಟ್ಟು ನಮ್ಮ ಪ್ರತೀ ಕೆಲಸ ಕಾರ್ಯಗಳಲ್ಲಿ ತನ್ನ ಪ್ರಭಾವವನ್ನು ಬೀರುತ್ತಾ ನಮ್ಮನ್ನಾಡಿಸುವ ವಿಧಿ . ಅದು ಒಂದು ಕೊಬ್ಬಿದ ಟಗರು. ಇನ್ನೊಂದು ನಾವು. ನಮಗೆ ನಮ್ಮ ಪೂರ್ವಕರ್ಮಗಳ ಪರಿಚಯವೂ ಇಲ್ಲ ಮತ್ತು ಲೆಕ್ಕವೂ ಇಲ್ಲ. ನಾವು ನಮ್ಮ ” ಅಹಂ” ನ್ನು ಇಟ್ಟುಕೊಂಡು ಇಲ್ಲಿ ಜೀವನವನ್ನು ನಡೆಸುವ ಹೋರಾಟ ಮಾಡುತ್ತಿದ್ದೇವೆ.
ಏಳು- ಬೀಳುಗಳು, ಸುಖ ದುಃಖಗಳು, ನೋವು – ನಲಿವುಗಳು, ಪ್ರೀತಿ -ದ್ವೇಷಗಳು ಮುಂತಾದ ಭಾವಗಳನ್ನು ಹೊತ್ತು ಹುಟ್ಟಿದಾರಭ್ಯ ಸಾಯುವತನಕ ಹೋರಾಡುತ್ತಲೇ ಇರುವ ನಾವು ಇನ್ನೊಂದು ಟಗರು. ಈ ಜಗತ್ತಿನ ನಮ್ಮ ಬದುಕೇ ಇವೆರಡರ ನಡುವಿನ ತಿಕ್ಕಾಟ. ನಾವು ನಮ್ಮ ಅಜ್ಞಾನದಿಂದ ಮತ್ತು ಅಹಂಕಾರದಿಂದ ವಿಧಿಯೊಡನೆ ಹೋರಾಡುವ ಪ್ರಯತ್ನ ಮಾಡುತ್ತೇವೆ. ಎದುರಿಗಿದ್ದರೆ ಹೋರಾಡಬಹುದು. ನಮ್ಮ ಕಣ್ಣಿಗೆ ಕಾಣದೆ ಮರೆಯಲ್ಲಿ ನಿಂತು ನಮ್ಮನ್ನು ಹೋರಾಟಕ್ಕೆ ಕರೆಯುವ ಈ ವಿಧಿಯೊಡನೆ ಹೋರಾಡಲು ಸಾಧ್ಯವೇ? ಇದು ಆ ಪರಮಾತ್ಮನ ಆಟ. ಅವನು ತನ್ನ ವಿನೋದಕ್ಕಾಗಿಯೇ ತಾನೇ ರಚಿಸಿಕೊಂಡ ಒಂದು ನಾಟಕ.

ಪರಿಹಾರವನ್ನು ಗುಂಡಪ್ಪನವರು ಸೂಚಿಸಿದ್ದಾರೆ. “ಬಿಗಿಯದಿರು ನೀಂ ಬೀಗಿ” ಎಂದರು ಅಹಂಕಾರಭಾವದಿಂದ ಗರ್ವ ಪಡದೆ ಆ ಪರಮಾತ್ಮನಿಗೆ ಶರಣಾಗಿಬಿಟ್ಟರೆ, ಪೂರ್ವ ಕರ್ಮ ಸವೆಸಲು, ಹೊಸಕರ್ಮಗಳನ್ನು ಕಟ್ಟಿಕೊಳ್ಳದೆ ಇರಲು, ಕ್ರಮೇಣ ಕರ್ಮ ಶೇಷವನ್ನು ಅಳಿಸಲು ಶಕ್ತಿಯನ್ನು ಅವನೇ ಕೊಡುತ್ತಾನೆ. ಆಗ ದ್ವಂದ್ವಗಳ ಸುಳಿಯಿಂದ ನಾವು ಹೊರಬಂದು, ಆನಂದದಿಂದ ಇರಬಹುದು.

Advertisements
 

ರಸಧಾರೆ – ೧೬೧

ವಿಧಿಯ ಹೊರೆಗಳನು ತಪ್ಪಿಸಿಕೊಳ್ಳುವನೆಲ್ಲಿಹನು I
ಬೆದರಿಕೆಯನದರಿಂದ ನೀಗಿಪನು ಸಖನು II
ಎದೆಯನುಕ್ಕಾಗಿಸಾನಿಸು ಬೆನ್ನ – ತುಟಿಯ ಬಿಗಿ I
ವಿಧಿಯಗಸ , ನೀಂ ಕತ್ತೆ – ಮಂಕುತಿಮ್ಮ

ತಪ್ಪಿಸಿಕೊಳ್ಳುವನೆಲ್ಲಿಹನು = ತಪ್ಪಿಸಿಕೊಳ್ಳುವನು + ಎಲ್ಲಿಹನು // ಬೆದರಿಕೆಯನದರಿಂದ = ಬೆದರಿಕೆಯನು + ಅದರಿಂದ // ಎದೆಯನುಕ್ಕಾಗಿಸಾನಿಸು = ಎದೆಯನು+ಉಕ್ಕಾಗಿಸಿ +ಆನಿಸು

ನೀಗಿಪನು = ಹೋಗಲಾಡಿಸುವನು // ಸಖನು = ಸ್ನೇಹಿತನು

ಈ ಜಗತ್ತಿನಲ್ಲಿ ಅನಾದಿಕಾಲದಿಂದಲೂ ಹುಟ್ಟಿದವರು ಮತ್ತು ಕಾಲವಾದವರು ಯಾರೂ ಸಹ ಈ ವಿಧಿಯು ಹೇರಿಸುವ ಹೊರೆಗಳ ಭಾರಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಈ ಹೊರೆಯನ್ನು ಹೊರುವ ಹೆದರಿಕೆಯನ್ನು ನೀಗಿಸುವವನೇ ನಮ್ಮ ನಿಜವಾದ ಸ್ನೇಹಿತ. ನಮ್ಮ ಮನಸ್ಸನ್ನು( ಎದೆಯನ್ನು) ಕಬ್ಬಿಣದಂತೆ ಗಟ್ಟಿಯಾಗಿಸಿ, ಬೆನ್ನ ಮೇಲೆ ಹೊರೆ ಹೊತ್ತು, ತುಟಿಪಿಟಕ್ಕೆನ್ನದೆ ಮುಂದೆ ಸಾಗು. ಏಕೆಂದರೆ, ವಿಧಿಯು ಅಗಸನಾದರೆ ನೀನು ಕತ್ತೆಯಂತೆ ಎಂದು ಒಂದು ಸುಂದರ ಉಪಯೊಂದಿಗೆ ವಾಸ್ತವದ ಸತ್ಯವನ್ನು ಪ್ರಸ್ತಾಪಿಸಿದ್ದಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.

ಈ ” ವಿಧಿ” ಯ ಹೊರೆಯನ್ನು ಮತ್ತು ಅದರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ಅನುಭವಿಸಿ ತೀರಿಸಬೇಕು. ಹಿಂದಿನಿಂದ ತಂದದ್ದನ್ನು ಅನುಭವಿಸುವಾಗ ಮತ್ತಷ್ಟನ್ನು ಕಟ್ಟಿಕೊಳ್ಳುವುದು ನಮ್ಮೆಲ್ಲರ ಪರಿ. ಹೀಗೆ ನಾವು ನಮ್ಮ ನಮ್ಮ ವಿಧಿ ಲಿಖಿತವನ್ನು ಅನುಭವಿಸುವಾಗ ನಮಗೆ ಯಾರಾದರೂ ಒಂದೆರಡು ಸಾಂತ್ವನದ ಮಾತುಗಳಾಡಿದರೆ ಅವರೇ ನಮ್ಮ ನಿಜವಾದ ಸ್ನೇಹಿತರು. ನೀವು ಅಕಸ್ಮಾತ್ ಈ ವಿಧಿ ಲಿಖಿತದಲ್ಲಿ ಸುಖವನ್ನು ಅನುಭವಿಸುತ್ತಿದ್ದರೆ, ನಿಮ್ಮ ಸುಖದಲ್ಲಿ ಭಾಗಿಯಾಗಲು ಎಲ್ಲರೂ ಹಾತೊರೆಯುತ್ತಾರೆ. ಆದರೆ ನೀವು ಕಷ್ಟದಲ್ಲಿದ್ದಾಗ, ನಿಮ್ಮನ್ನು “ಮೂಸಲೂ” ಯಾರೂ ಬರುವುದಿಲ್ಲ. ಅಂತಹ ಸ್ಥಿತಿಯಲ್ಲೂ ನಿಮಗೆ ವಸ್ತುರೂಪದಲ್ಲಿ ಯಾವ ಸಹಾಯವನ್ನು ಮಾಡದಿದ್ದರೂ ನಿಮ್ಮೊಡನೆ ಇದ್ದು ನಿಮಗೆ ಸಾಂತ್ವನದ ಮಾತುಗಳನ್ನಾಡಿದರೆ ಅವರೇ ನಮ್ಮ ನಿಜವಾದ ಸ್ನೇಹಿತರು.

ಅನುಭವಿಸಿ ತೀರಿಸಬೇಕು ಎಂದು ಹೇಳಿದೆ. ಅನ್ಯ ಮಾರ್ಗವಿಲ್ಲ. ಇಂದು ಅನುಭವಿಸದಿದ್ದರೆ ನಾಳೆ ಅನುಭವಿಸಬೇಕಾಗುತ್ತದೆ. ಉದಾಹರಣೆಗೆ, ನಿಮ್ಮ ಬಳಿ ಒಂದು ರೂಪಾಯೂ ಇಲ್ಲ. ನಾಳೆ ಹತ್ತು ಸಿಗುವುದು. ಇಂದು ಹಸಿವು. ಇಂದು ಯಾರ ಬಳಿಯಲ್ಲಾದರೂ ಹತ್ತು ಸಾಲ ತೆಗೆದುಕೊಂಡು ಉಂಡರೆ, ಅದು ವಿಧಿ ಲಿಖಿತದ ಅನುಭವನ್ನು ಮುಂದೂಡಿದಂತಾಗುತ್ತದೆ, ತೀರಿಸಿದಂತಾಗುವುದಿಲ್ಲ. ಅಲ್ಲದೆ ಇಂದು ಹಸಿದಿದ್ದು, ಆ ನೋವನ್ನು ಅನುಭವಿಸಿ, ನಾಳೆ ನಮ್ಮ ಹತ್ತರಿಂದ ಉಂಡರೆ, ಸುಖ. ಹೀಗೆಯೇ ಜೀವನದಲ್ಲಿ ಬರುವ ಎಲ್ಲವನ್ನೂ ಅನುಭವಿಸಿಯೇ ತೀರಿಸಬೇಕು. ಇಲ್ಲದಿದ್ದರೆ ಮತ್ತೊಂದು ಜನ್ಮಕ್ಕೆ, ಮಗದೊಂದು ಜನ್ಮಕ್ಕೆ ಹೊತ್ತು ಹೋಗಬೇಕು. ಒಂದು ಕಡಲೆ ಕಾಯಿ ಬೀಜವನ್ನು ಹಾಗೆ ನೆಟ್ಟರೆ ಸಸಿ. ಹುರಿದು ಬಿಟ್ಟರೆ ಮತ್ತೆ ಮೊಳಕೆ ಒಡೆಯುವುದೇ ಇಲ್ಲ. ಹಾಗೆ ನಮ್ಮ ಕರ್ಮವನ್ನು ನಿಷ್ಯೇಶವಾಗಿ ಸುಟ್ಟರೆ ಮುಕ್ತಿ, ಇಲ್ಲದಿದ್ದರೆ ಮತ್ತೆ ಮತ್ತೆ ಕರ್ಮದ ಸಂಕೋಲೆಗಳ ಜೀವನದ ಸುಳಿಯಲ್ಲೇ ಇರಬೇಕು.

ವಾಚಕರೆ ಈ “ವಿಧಿ”ಯನ್ನುವುದು ನಮ್ಮ ಮೇಲೆ ನಮ್ಮ ಪೂರ್ವಕರ್ಮಗಳ ಮೂಟೆಯನ್ನು ಹೊರಿಸುವ ಅಗಸನಂತೆ, ನಾವು ಅದನ್ನು ಹೊರುವ ಕತ್ತೆಗಳಂತೆ. ನಾವೇ ತೊಳೆದುಕೊಳ್ಳಬೇಕು, ಅನುಭವಿಸಿ ನೀಗಿಸಿಕೊಳ್ಳಬೇಕು.ಅದಕ್ಕೆ ಹಲ ಮಾರ್ಗಗಳುಂಟು. ಮುಖ್ಯವಾಗಿ ” ಸತ್ಸಂಗ”ವೇ ಇದಕ್ಕೆ ಮಾರ್ಗ. ಎಂದು ನಮ್ಮ ಕರ್ಮಗಳ ಗಂಟು ಕರಗುತ್ತದೋ ಅಂದು ನಮಗೆ ಮುಕ್ತಿ.

 

ರಸಧಾರೆ – ೧೬೦

ಆವ ಬೇಳೆಯದಾವ ನೀರಿನಲಿ ಬೇಯುವುದೋ I
ಆವ ಜೀವದ ಪಾಕವಾವ ತಾಪದಿನೋ II
ಆ ವಿವರವನ್ನು ಕಾಣದಾಕ್ಷೇಪಣೆಯದೇನು I
ದೈವಗುಟ್ಟದು ತಿಳಿಯೆ – ಮಂಕುತಿಮ್ಮ II

ಬೇಳೆಯದಾವ = ಬೇಳೆಯು + ಅದಾವ// ಕಾಣದಾಕ್ಷೇಪಣೆಯದೇನು = ಕಾಣದ + ಆಕ್ಷೇಪಣೆ+ ಅದೇನು

ಯಾವ ಬೇಳೆ ಯಾವ ನೀರಿನಲಿ ಬೇಯುವುದೋ ಗೊತ್ತಿಲ್ಲವಲ್ಲ ಹಾಗೆಯೇ ಪ್ರತಿಯೊಬ್ಬರೂ ಪಕ್ವವಾಗಲು ಯಾವ ಕರ್ಮಗಳನ್ನು ಅನುಭವಿಸಿ, ಸುಟ್ಟು, ಬೆಂದು, ತೋಯ್ದು, ನೋಡು ಎಷ್ಟುದಿನ ಅನುಭವಿಸಬೇಕೋ ಯಾರಿಗೂ ಅರ್ಥವಾಗದು. ಪ್ರತಿಯೊಬ್ಬರೂ ಈ ಅನುಭವದ ಯಾವುದೋ ಸ್ಥರದಲ್ಲಿರುತ್ತಾರೆ, ಹಾಗಾಗಿ ಮತ್ತೊಬ್ಬರನ್ನು ವಿಮರ್ಶೆ ಅಥವಾ ಆಕ್ಷೇಪಣೆ ಮಾಡಬೇಡ, ಏಕೆಂದರೆ ಇದು ದೈವ ಅಥವಾ ವಿಧಿಯ ರಹಸ್ಯ, ಇದನ್ನು ಅರಿತುಕೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಾವು ನಮ್ಮ ಸುತ್ತ ಮುತ್ತ ನೋಡಿದಾಗ, ಒಬ್ಬೊಬ್ಬರದು ಒಂದೊಂದು ಸ್ವಭಾವ ಮತ್ತು ಪ್ರತಿಯೊಬ್ಬರಿಗೂ ಅವರವರದೇ ಸಮಸ್ಯೆ ಮತ್ತು ಆ ಸಮಸ್ಯೆಗಳಿಗೆ ಅವರವರದೇ ಕಾರಣಗಳು. ಯಾರಿಗೋ ಏನೋ ಆದ್ರೆ ನಾವು ತಕ್ಷಣ ಅದನ್ನು ವಿಶ್ಲೇಷಣೆ ಮಾಡುತ್ತಾ ನಮ್ಮ ಪೂರ್ವಾಗ್ರಹಪೀಡಿತ ಅಥವಾ ವಿವೇಚನಾರಹಿತವಾದ ತೀರ್ಮಾನವನ್ನು ಮಾಡಿ ಬಿಡುತ್ತೇವೆ. ಆದರೆ ಒಬ್ಬ ವ್ಯಕ್ತಿ ಯಾವುದೋ ಒಂದು ಸ್ಥಿತಿಯಲ್ಲಿದ್ದಾನೆಯೆಂದು ಅವನು” ಅದೇ” ಎಂದಾಗಲೀ, ಅವನು ಸದಾಕಾಲ “ಹಾಗೆಯೇ” ಎಂದಾಗಲೀ ತೀರ್ಮಾನಿಸಲಾಗುವುದಿಲ್ಲ ಮತ್ತು ಹಾಗೆ ತೀರ್ಮಾನಿಸುವುದು ತಪ್ಪು.

ಅವರವರ ಪೂರ್ವ ಕರ್ಮಗಳಿಗನುಸಾರವಾಗಿ ಮತ್ತು ಅವರ ಇಂದಿನ ಸ್ವಭಾವ ಮತ್ತು ಕೆಲಸಗಳಿಗನುಸಾರವಾಗಿ ಕೆಲಕೆಲವರು ಕೆಲಕೆಲ ಅನುಭವಗಳನ್ನು ಪಡೆಯುತ್ತಿರುತ್ತಾರೆ. ಇದಕ್ಕೆಲ್ಲ ಆ ವಿಧಿಯ ಕೈವಾಡ. ಇದು ದೇವ ರಹಸ್ಯ. ಇದು ಅರ್ಥವಾಗುವುದಿಲ್ಲ ಮತ್ತು ಇದನ್ನು ಚೇಧಿಸುವ ಪ್ರಯತ್ನವೂ ವ್ಯರ್ಥ. ಪ್ರತಿಜೀವಿಯೂ ಆ ವಿಧಿಯೊಡ್ಡುವ ಹಲವಾರು ಕಷ್ಟ ನಷ್ಟ ನೋವು ಸಂಕಟಗಳ ಒತ್ತಡದ ಅನುಭವಗಳಿಂದ ಪ್ರತಿನಿತ್ಯ, ಜನ್ಮ ಜನ್ಮಾಂತರದಿಂದಲೂ ಪಕ್ವವಾಗುತ್ತಲೇ ಇರುತ್ತಾನೆ. ಇಂದು ಅವನಿರುವುದು ಒಂದು ಹಂತ. ಅದಕ್ಕೆ ಕಾರಣಗಳು ಸೂಕ್ಷ್ಮಾತಿ ಸೂಕ್ಷ್ಮ. ಇದು ಎಲ್ಲರ ಪರಿಸ್ಥಿತಿ. ಹಾಗಾಗಿ ಒಬ್ಬರು ಇನ್ನೊಬ್ಬರನ್ನು ಆಕ್ಷೇಪಣೆ ಮಾಡುವುದಾಗಲೀ ಅಥವಾ ವಿಶ್ಲೇಷಣೆ ಮಾಡುವುದಾಗಲೀ ಮಾಡಬಾರದು. ಅದು ಅಪರಾಧ. ನಾವೂ ಸಹ ಪಕ್ವವಾಗುವ ಯಾವುದೋ ಒಂದು ಸ್ಥರದಲ್ಲಿದ್ದೇವೆ. ಎಂದು ನಾವೋ ಸಂಪೂರ್ಣ ಪಕ್ವವಾಗುತ್ತೇವೋ ಅಂದು ನಾವು ಈ ಸುಖ ದುಃಖದ ಸಂಕೋಲೆಗಳಿಂದ ಮುಕ್ತರಾಗುತ್ತೇವೆ ಎನ್ನುವುದು ಹಿರಿಯರ ಆದೇಶ. ನಮ್ಮನ್ನು ಪಕ್ವವಾಗಿಸುವ ಆ ” ವಿಧಿ” ಗೆ ಮತ್ತು ಆ ವಿಧಿಯ ಮಾಲೀಕ ಆ ಪರಮಾತ್ಮನಿಗೆ ಶರಣಾಗಿ ಬರುವುದನ್ನೆಲ್ಲ ಅನುಭವಿಸಿ ಶೀಘ್ರವಾಗಿ ” ಪಕ್ವವಾಗುವ ” ಪ್ರಯತ್ನವನ್ನು ಮಾಡೋಣವೆ?

 

ರಸಧಾರೆ – ೧೫೯

 

ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ |
ಭೂಪುಟದಿ ಜೀವರಸಗಳ ಪಚಿಸುವಂತೆ II
ಪಾಪಿಯಂ ಪ್ರೋತ್ಸಾಹಿಸಿ ಸುಕ್ರುತಿಯ ಪರೀಕ್ಷಿಸುತ |
ವೇಪಿಪನು ವಿಧಿ ನಮ್ಮ – ಮಂಕುತಿಮ್ಮ ಈ

ತಾಪಿಸುತೆ = ಸುಡುತ್ತಾ// ತಣಿಯಿಸುತೆ= ತೊಯಿಸುತ್ತಾ// ಕುಲುಕಿಸುತೆ= ಅಲುಗಿಸುತ್ತಾ // ಋತುವೈದ್ಯ = ಬದಲಾಗುವ ಋತುಮಾನ// ಭೂಪಟದಿ = ಭೂಮಿಯ ಮೇಲೆ// ಪಚಿಸುವಂತೆ = ಜೀರ್ಣವಾಗಿಸುವಂತೆ//
ಸುಕ್ರುತಿಯ = ಒಳ್ಳೆಯ ಕೆಲಸವನ್ನು ಮಾಡುವವನು// ವೇಪಿಪನು = ನಡುಗಿಸುತ್ತಾನೆ.

ಬಿಸಿಲಲ್ಲಿ ಸುಟ್ಟು, ಮಳೆಯಲ್ಲಿ ನೆನೆಸಿ, ಚಳಿಗಾಲದಲ್ಲಿ ನಡುಗಿಸಿ, ಋತು ಬದಲಾವಣೆಯಿಂದ ಈ ಭೂಮಿಯಲ್ಲಿ ಜೀವರಸಗಳ ಪಾಕ ಮಾಡಿ ಪಕ್ವ ಮಾಡುವಂತೆ, ನಮ್ಮನ್ನು ವಿಧಿಯು ಹಲಬಗೆಯ ಪರೀಕ್ಷೆಗಳಿಗೊಡ್ಡಿ, ದುಷ್ಟನನ್ನು ಪ್ರೋತ್ಸಾಹಿಸಿ, ಒಳ್ಳೆಯಕೆಲಸ ಮಾಡುವವರನ್ನು ಇನ್ನೂ ಪರೀಕ್ಷೆಗೆ ಒಳಪಡಿಸುತ್ತಾ, ನಮ್ಮನ್ನು ನಡುಗಿಸುತ್ತಾನೆ ಎನ್ನುವುದೇ ಈ ಕಗ್ಗದ ಹೂರಣ.

ಈ ಜಗತ್ತಿನಲ್ಲಿ, ಮನುಷ್ಯನನ್ನೂ ಸೇರಿ ಎಷ್ಟು ಪ್ರಾಣಿಗಳಿವೆಯೋ ಎಲ್ಲವನ್ನೂ ಏಕಕಾಲದಲ್ಲಿ ಅವರವರ ಪೂರ್ವಕರ್ಮಗಳಿಗನುಸಾರವಾಗಿ, ವಿಧಿ ಆಟ ಆಡಿಸುತ್ತದೆ. ಸಂಕಷ್ಟಗಳ ಬಿಸಿಲಿನ ಬೇಗೆಯಲ್ಲಿ ಸುಡುತ್ತಾ, ದುಃಖದ ಕಡಲಿನಲ್ಲಿ ನೆನೆಸುತ್ತಾ, ಅಕಸ್ಮಾತ್ತಾಗಿ ನಡೆಯುವ ಸಂಭವಗಳಿಂದ ನಡುಗಿಸುತ್ತಾ, ನಲುಗಿಸುತ್ತಾ ಕಾಲಕಾಲಕ್ಕೆ ಋತುಗಳು ಬದಲಾಗುವಂತೆ ನಮ್ಮ ಪರಿಸ್ಥಿತಿಯನ್ನೂ ಬದಲಾಯಿಸುತ್ತಲೇ ಇರುತ್ತದೆ. ಹಲಬಾರಿ ಸುಖ, ಹಲಬಾರಿ ದುಃಖ, ಹಲಬಾರಿ ನಿರಾಸೆ, ಹಲಬಾರಿ ನಿರ್ಲಿಪ್ತತೆಯಂತ ಸ್ಥಿತಿಗಳಲ್ಲಿ ನಮ್ಮನ್ನು ನೂಕಿ, ಋತುಪರಿವರ್ತನೆಯಿಂದ ಭೂಮಿಯಲ್ಲಿ ಮತ್ತು ವಾತಾವರಣದಲ್ಲಿ ಆಗುವ ಬದಲಾವಣೆಯಂತೆ, ನಮ್ಮ ಸ್ಥಿತಿಯೂ ಬದಲಾಗುತ್ತಿರುತ್ತದೆ.

ದಾಸರು” ಸತ್ಯವಂತರಿಗಿದು ಕಾಲವಲ್ಲ, ದುಷ್ಟಜನರಿಗೆ ಇದು ಸುಭಿಕ್ಷಕಾಲ” ಎಂದು ಈಗ್ಗೆ ಆರೇಳು ಶತಮಾನಗಳ ಹಿಂದೆಯೇ ಹಾಡಿದ್ದರು. ಈ ವಿಧಿ ಸಜ್ಜನರನ್ನು ” ಇವರೆಷ್ಟು ಗಟ್ಟಿ ಇದ್ದಾರೆಯೋ ನೋಡಿಯೇ ಬಿಡೋಣ” ಎನ್ನುವಂತೆ ಸದಾಕಾಲ ಸಂಕಷ್ಟಗಳ ಮಾಲೆಗಳನ್ನು ಹಾಕುತ್ತಾ ಪರೀಕ್ಷಿಸುತ್ತಿರುತ್ತದೆಯಂತೆ, ಇವರಿಗೆ ಇನ್ನಷ್ಟು ಗಟ್ಟಿಯಾಗುವುದಕ್ಕೆ ಪ್ರೇರಕವಾಗಿರುತ್ತದಂತೆ. ಹಾಗೆಯೇ ದುಷ್ಟರಿಗೆ ಮತ್ತಷ್ಟು ದುಷ್ಕಾರ್ಯಗಳನ್ನು ಮಾಡಲು ಸದಾಕಾಲ ಪ್ರೇರೇಪಿಸುತ್ತಾ, ಅವರನ್ನು ಪಾಪದ ಕೂಪಕ್ಕೆ ತಳ್ಳುತ್ತಾ, ಆ ದುಷ್ಟರಿಗೆ ” ಅಯ್ಯೋ ನಾವು ಮಾಡುವುದು ತಪ್ಪು ” ಎಂದು ಅರಿವಾಗಿಸಿ ಮತ್ತು ಅವರು ಬದಲಾಗುವ ತನಕ ಅವರಿಗೆ ಸಹಾಯಮಾಡುತ್ತಲೇ ಇರುತ್ತದಂತೆ. ಇದು ವಿಧಿಯ ಆಟ.

ಇವೆಲ್ಲ ಆಗುವುದು ನಾವು ಈ ಸಂಸಾರಕ್ಕೆ ಮತ್ತು ಈ ಜಗತ್ತಿಗೆ ಅಂಟಿಕೊಂಡಿರುವ ತನಕ ಅಥವಾ ನಾವು ಇಲ್ಲಿನ ಆಗುಹೋಗುಗಳಿಗೆ ಪ್ರತಿಕ್ರಿಯೆ ನೀಡುತ್ತಿರುವ ತನಕ. ಎಂದು ನಾವು ನಿರ್ಲಿಪ್ತ ಭಾವವನ್ನು ಬೆಳೆಸಿಕೊಳ್ಳುತ್ತೇವೋ, ಈ ಸಂಸಾರದಲ್ಲಿ ಇದ್ದೂ ಇಲ್ಲದಹಾಗೆ ಇದ್ದರೆ, ಈ ವಿಧಿಯ ಯಾವ ಆಟವೂ ನಮ್ಮ ಮುಂದೆ ನಡೆಯುವುದಿಲ್ಲ. ಬಾಳು” ತಾವರೆ ಎಲೆಯಮೇಲಿನ ನೀರ ಹನಿಯಂತಿರಬೇಕು” ಎಂದು ಭಗವದ್ಗೀತೆಯ ಉಲ್ಲೇಖ. ಹಾಗಿದ್ದರೆ ಈವಿಧಿಯ ಆಟವನ್ನು ಎದುರಿಸುವಲ್ಲಿ ನಮಗೆ ಜಯ ಸಿಗುತ್ತೆ.

 

 

ರಸಧಾರೆ – ೧೫೮

ಕರವೆರಡದೃಷ್ಟ್ಟಕ್ಕೆ ನರನ ಪೂರ್ವಿಕವೊಂದು I
ಪೆರತೊಂದು ನವಸೃಷ್ಟಿಸತ್ವವಾ ಬೊಗಸೆ II
ಧರಿಸಿಹುದು ಮನುಜಜೀವಿತವನದರೊತ್ತಡದೆ I
ಪರಿದಾಟ ನಮಗೆಲ್ಲ – ಮಂಕುತಿಮ್ಮ

ಕರವೆರಡದೃಷ್ಟ್ಟಕ್ಕೆ = ಕರವು+ಎರಡು+ಅದೃಷ್ಟ್ಟಕ್ಕೆ // ಪೂರ್ವಿಕವೊಂದು = ಪೂರ್ವಿಕವು+ ಒಂದು // ಪೆರತೊಂದು = ಪರೆತು + ಒಂದು // ಮನುಜಜೀವಿತವನದರೊತ್ತಡದೆ = ಮನುಜಜೀವಿತವನು+ ಅದರ + ಒತ್ತಡದೆ/

ಕರವು = ಕೈಗಳು // ಪೂರ್ವಿಕವು = ಹಿಂದಿಂದ ಬಂದದ್ದು // ಪರೆತು = ದೊಡ್ದದ್ದಾದ, ಮಹತ್ತಾದ // ನವಸೃಷ್ಟಿಸತ್ವವಾ = ಹೊಸದೊಂದು ಸೃಷ್ಟಿಗೆ ಹೂರಣ//

ನಮ್ಮ ಪೂರ್ವಜನ್ಮದ ರೇಖೆಗಳನ್ನು ಹೊತ್ತ ಎಡಗೈ ಮತ್ತು ನಮ್ಮ ಈ ಜನ್ಮದ ಆಗು ಹೋಗುಗಳನ್ನು ಬಿತ್ತರಿಸುವ ನಮ್ಮ ಬಲಗೈಯ ರೇಖೆಗಳು . ಎರಡು ಕೈಗಳು. ಈ ಎರಡೂ ಕೈಗಳನ್ನು ಜೋಡಿಸಿದಾಗ ಒಂದು ಬೊಗಸೆಯಾಗುತ್ತದೆ. ಈ ಬೊಗಸೆಯಿಂದ ನಾವು ಹೊಸ ಹೊಸ ಕೆಲಸವನ್ನು ಮಾಡುತ್ತಾ ಇಲ್ಲಿನ ಒತ್ತಡಗಳನ್ನು ಅನುಭವಿಸುತ್ತಾ ನಾವು ಪರದಾಡುತ್ತಿರುತ್ತೇವೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

ಹಸ್ತಸಾಮುದ್ರಿಕಾ ಶಾಸ್ತ್ರದ ಪ್ರಕಾರ ನಮ್ಮ ಎಡಗೈನ ರೇಖೆಗಳು ನಮ್ಮ ಪೂರ್ವ ಜನ್ಮದ ವೃತ್ತಾಂತವನ್ನು ಹೇಳುತ್ತವೆಯಂತೆ ಮತ್ತು ಬಲಗೈನ ರೇಖೆಗಳು ನಮ್ಮ ಈ ಜನ್ಮದ ಅದೃಷ್ಟವನ್ನು ತಿಳಿಸುತ್ತವೆಯಂತೆ. ಅದೃಷ್ಟವೆಂದರೆ ನಮಗೆ ಕಾಣದ್ದು. ಹಾಗೆ ನೋಡಿದರೆ, ಹಿಂದಿನ ಜನ್ಮದ ವೃತ್ತಾಂತವೂ ನಮಗೆ ಗೊತ್ತಿಲ್ಲ ಮತ್ತು ಈ ಜನ್ಮದಲ್ಲಿ ಆಗುವ ವಿಷಯಗಳೂ ನಮಗೆ ಗೊತ್ತಿಲ್ಲ. ಎರಡೂ ಅದೃಷ್ಟವೇ. ಅಂದರೆ ನಮಗೆ ಗೊತ್ತಿರದ ಪೂರ್ವ ಕರ್ಮ ಮತ್ತು ನಮ್ಮ ಭವಿಷ್ಯ, ಇವೆರಡನ್ನೂ ಒಟ್ಟಾಗಿಸಿ ಒಂದು ಬೊಗಸೆಯಾಗಿಸಿ ನಮ್ಮ ಕಾರ್ಯಗಳನ್ನು ಮಾಡಿ ನಮ್ಮ ಜೀವನದಲ್ಲಿ ಆನಂದವನ್ನು ಕಾಣಲು ಪ್ರಯತ್ನಿಸುವ ನಾವು ಸದಾಕಾಲ ಒಂದು ರೀತಿಯ ಒತ್ತಡದಲ್ಲೇ ಇರುತ್ತೇವೆ ಎಂಬುದೇ ಈ ಕಗ್ಗದ ಹೂರಣ.

ಮುಖ್ಯ ತತ್ವ ಮತ್ತು ಸತ್ವವೇನೆಂದರೆ, ನಾವು ಹಿಂದಿನಿಂದ ತಂದ ಪೂರ್ವ ಕರ್ಮ,( ಎಡಗೈ) ಮತ್ತು ಇಂದು ನಮ್ಮ ಜ್ಞಾನ ಮತ್ತು ಕೃಷಿಯಿಂದ ನಡೆಯುವ ಈಗಿನ ಕಾರ್ಯಗಳು(ಬಲಗೈ). ಇವೆರಡನ್ನೂ ಜೋಡಿಸಿ ನಾವು ಈ ಜಗತ್ತಿನಲ್ಲಿ ಕೆಲಸ ಮಾಡುವಾಗ ಬಹಳ ಒತ್ತಡಕ್ಕೊಳಗಾಗುತ್ತೇವೆ. ಆಗ ಈ ಜೋಡಿಸಿದ ಕೈಗಳನ್ನು ಪರಮಾತ್ಮನೆಡೆಗೆ ಮಾಡಿ ಅವನ ಕೃಪೆಯನ್ನು ಯಾಚಿಸಿದರೆ ಮತ್ತು ಅವನಿಗೆ ಶರಣಾದರೆ ಬದುಕಿನ ಜಂಜಡವನ್ನು ತಡೆದುಕೊಳ್ಳಬಹುದು. ಇಂದು ಬೆಳಗ್ಗೆ ಏಳುವಾಗ ಕೈಜೋಡಿಸಿ ಭೂತ ಭವಿಷ್ಯತ್ತುಗಳನ್ನು ಒಟ್ಟಿಗೆ ಸೇರಿಸಿ ಎರಡನ್ನೂ ಪರಮಾತ್ಮನ ಚರಣಗಳಿಗೆ ಅರ್ಪಿಸಿ “ಇಂದಿನ ದಿನ ನಿನ್ನ ಕೃಪೆ ಇರಲಿ ತಂದೆ” ಎಂದು ನಿವೇದನೆ ಮಾಡಿ ಅಂದಿನ ಕೆಲಸಕಾರ್ಯಗಳಲ್ಲಿ ನಿಮಗ್ನರಾಗಬೇಕು ಮತ್ತೆ ನಾಳೆ ಅದೇ ಪ್ರಕ್ರಿಯೆ. ಇದರಲ್ಲಿ ನೆಮ್ಮದಿ ಉಂಟು ಶಾಂತಿ ಉಂಟು.

 

 

 

 

ರಸಧಾರೆ – ೧೫೭

 

ಪರಬೋಮ್ಮನಾ ವಿಧಿಯ ನೇಮಿಸಿಹುದೇತಕೆನೆ |
ನರಜಾತಿ ಸಾನುಭೂತಿಯ ಕಲಿಯಲೆಂದೆ ||
ಪರರೆಂಬರಿಲ್ಲ ಆತ್ಮಾಂಶರೆಲ್ಲರೆನುತೆ |
ಬೆರೆ ನೀನು ವಿಶ್ವದಲಿ – ಮಂಕುತಿಮ್ಮ

ಪರಬೋಮ್ಮನಾ = ಪರಬೊಮ್ಮ್ಬನು+ಆ // ನೇಮಿಸಿಹುದೇತಕೆನೆ = ನೇಮಿಸಿಹುದು+ಏತಕೆ+ಎನೆ// ಪರರೆಂಬರಿಲ್ಲ = ಪರರು + ಎಂಬರು+ಇಲ್ಲ// ಆತ್ಮಾಂಶರೆಲ್ಲರೆನುತೆ = ಆತ್ಮ + ಅಂಶರು+ಎಲ್ಲರು+ಎನುತೆ //

ಸಾನುಭೂತಿಯ = ಸಹಾನುಭೂತಿ // ಪರರು = ಅನ್ಯರು

ಆ ಪರಬ್ರಹ್ಮನು ಆ “ವಿಧಿ”ಯನ್ನು ಏಕೆ ನೇಮಿಸಿದ್ದಾನೆ ? ಎಂದರೆ, ಮನುಷ್ಯರು ಪರಸ್ಪರ ಸಹಾನುಭೂತಿಯನ್ನು ಕಲಿಯಲಿ ಎಂದು ಮತ್ತು ಪರರು ಯಾರೂ ಇಲ್ಲ, ಎಲ್ಲರೂ ಆತ್ಮದ ಒಂದು ಅಂಶವೆಂದು ಅರಿತು ನೀನೂ ಬೆರೆತು ಈ ವಿಶ್ವದಲಿ ಬಾಳು ಎಂದು ಒಂದು ಆದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

“ವಿಧಿ” ಯನ್ನು ಆ ಪರಮಾತ್ಮ ನಿಯಮಿಸಿರುವುದು. ಪ್ರತಿಯೊಬ್ಬರಿಗೂ ಬೇರೆ ಬೇರೆ ವಿಧಿಯನ್ನು ನಿಯಮಿಸಿ ಎಲ್ಲರನ್ನೂ ಬೇರೆ ಬೇರೆಯಾಗಿ ನಿರ್ಮಿಸಿ, ” ನಾನು ಅನ್ಯರಿಂದ ಬೇರೆ “ಎನ್ನುವ ಭಾವವನ್ನು, ನಮ್ಮ ಮನಸ್ಸು ಮತ್ತು ಸ್ವಭಾವಗಳಲ್ಲಿ ತುಂಬಿ ಈ ಜಗನ್ನಾಟಕವನ್ನು ಆಡಿಸುತ್ತಿದ್ದಾನೆ ಆ ಪರಮಾತ್ಮ. ಆ ಪರಮ ಚೇತನ ಜಗತ್ತಿನ ಎಲ್ಲ ಪ್ರಾಣಿಗಳೂ ಬೇರೆ ಬೇರೆ ರೂಪಗಳನ್ನು ಧರಿಸಿದೆ ಎಂಬುದು ಸಿದ್ಧಾಂತ. ಬಾಹ್ಯ ರೂಪಗಳು ಬೇರೆ ಬೇರೆ ಆದರೂ ಚೇತನದ ಸಾಮ್ಯವಿದೆ ಎಂದು “ತಿಳಿ”ದರೂ ಸಹ “ಅರಿ”ಯದೆ ನಾವುಗಳು ನಮ್ಮನ್ನು ನಮ್ಮ ಬಾಹ್ಯರೂಪದಿಂದ ಗುರುತಿಸಿಕೊಳ್ಳುತ್ತೇವೆ. ಇದೆ ” ಮಾಯೆ” !!!!

ಬಾಹ್ಯ ರೂಪ ಅಶಾಶ್ವತ. ಅಂತರ್ಯದ ಚೇತನ ಮಾತ್ರ ನಿರಂತರ, ಅನಂತ ಮತ್ತು ಶಾಶ್ವತ. ಹಾಗಾಗಿ ಅದೇ ಸತ್ಯ. ಏಕೆಂದರೆ ಯಾವುದು ನಿತ್ಯವೋ ಅದು ಸತ್ಯ. ನಾವು ಸತ್ಯವನ್ನು ಅರಿತು ಅನುಭವಿಸಿದರೆ ನಮಗೆ ಎಲ್ಲ ಜೀವಿಗಳಲ್ಲಿ ಇರುವ, ಒಂದೇ ರೂಪದ ಆ ಪರಮ ಚೇತನದ ಅಸ್ತಿತ್ವ ಅರ್ಥವಾಗುವುದು.

” ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಷ್ಯತಿ I ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ II (ಈಶಾವಾಸ್ಯ-೬) ಎಂದು ಬಹಳ ಸುಂದರವಾಗಿ ಈಶಾವಾಸ್ಯೋಪನಿಷತ್ತಿನಲ್ಲಿ ಉಲ್ಲೇಖ ಮಾಡಲಾಗಿದೆ. ಯಾರು ಎಲ್ಲಾ ಭೂತಗಳನ್ನೂ ( ಭೂತ= ಭವತಿ ಇತಿ ಭೂತಃ, ಅಂದರೆ ಯಾವುದು ಇದೆಯೋ, ಅದು ಭೂತ) ಆತ್ಮನಲ್ಲಿ ನೋಡುವರೋ ಮತ್ತು ಯಾರು ಎಲ್ಲ ಭೂತಗಳಲ್ಲಿಯೂ ಆತ್ಮನನ್ನೇ ಕಾಣುವರೋ ಅವರಲ್ಲಿ ಭೇದಭಾವದ ಸ್ವಭಾವವಿರುವುದಿಲ್ಲ. ಇದನ್ನೇ ” ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ ” ಎಂದು ಸರ್ವಜ್ಞನ ವಚನ ಹೇಳುತ್ತದೆ. ನಾವು ಯಾರನ್ನಾದರೂ ಕಂಡಾಗ ” ನಮಸ್ಕಾರ” ಎನ್ನುತ್ತೇವೆ. ಆ ನಮಸ್ಕಾರ ಹೊರ ರೂಪಕ್ಕಲ್ಲ, ಆದರೆ ಆ ರೂಪವನ್ನು ಧರಿಸಿರುವ ಪರಮಾತ್ಮ ಸ್ವರೂಪ ಆತ್ಮಕ್ಕೆ. ಇದೇ ಸತ್ಯ.

ಹಾಗಾಗಿ ವಾಚಕರೆ ಪರಮಾತ್ಮನು ನಮ್ಮನ್ನು ಬೇರೆ ಬೇರೆ ರೂಪದಲ್ಲಿ ಈ ಭೂಮಿಗೆ ತಂದಿದ್ದರೂ ಒಳಗಿರುವ ಚೇತನದ ಸಾಮ್ಯತೆಯನ್ನು ಮನಗಂಡು ನಾವು, ನಾವೆಲ್ಲಾ ಒಂದೇ ಎಂದು ಮನಗಂಡು, ಪರಸ್ಪರ ಪ್ರೀತಿ ವಿಶ್ವಾಸ ಸಹಬಾಳ್ವೆ, ಸೌಹಾರ್ದಯುತ ಬಾಳನ್ನು ನಡೆಸಿದರೆ ಈ ಜಗತ್ತೇ ಎಷ್ಟು ಸುಂದರವಾಗಿರುತ್ತದೆ ಅಲ್ಲವೇ?

 

 

ರಸಧಾರೆ – ೧೫೬

ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ |
ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ||
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ |
ಬಾಯ ಚಪ್ಪರಿಸುವನು – ಮಂಕುತಿಮ್ಮ ||

ಈಯವನಿಯೊಲೆಯೊಳೆಮ್ಮಯ = ಈ + ಅವನಿ + ಒಲೆಯೊಳು + ಎಮ್ಮಯ// ಬಾಳನಟ್ಟು = ಬಾಳನು + ಅಟ್ಟು

ಈ ವಿಧಿ ಅನ್ನುವುದು ನಮ್ಮನ್ನು ಈ ಭೂಮಿ ಎನ್ನುವ ಒಲೆಯೊಳು, ನೆನೆಸುತ್ತ, ಬೇಯಿಸುತ, ಹೆಚ್ಚುತ್ತ , ಕೊಚ್ಚುತ್ತ, ಕಾಯಿಸುತ, ಕರಿಯುತ್ತ, ಹುರಿಯುತ್ತ, ಸುಡುತ್ತ, ನಮ್ಮನ್ನು ಆಡಿಸುತ್ತ, ತಾನು ಒಂದು ರುಚಿಯಾದ ಪಕ್ವಾನ್ನವನ್ನು ತಿಂದು ಆಸ್ವಾದಿಸುವನಂತೆ ಬಾಯಿ ಚಪ್ಪರಿಸುತ್ತಿದ್ದಾನೆ ಎಂದು ಒಂದು ಗಹನವಾದ ವಿಷಯವನ್ನು ವಿನೋದವಾಗಿ ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಾವು ಒಂದು ತರಕಾರಿಯನ್ನು ಮನೆಗೆ ತಂದರೆ ಮೊದಲು ಅದನ್ನು ತೊಳೆದು( ತೋಯಿಸುತ್ತ) ಹೆಚ್ಚಿ ಅಥವಾ ಕೊಚ್ಚಿ, ಬೇಯಿಸಿಯೋ ಅಥವಾ ಎಣ್ಣೆಯಲ್ಲಿ ಕರೆದೊ ಅಥವಾ ಹುರಿದೋ ಅಥವಾ ಸುಟ್ಟೋ ಒಂದು ಪಲ್ಯವನ್ನೋ ಅಥವಾ ಹುಳಿಯನ್ನೋ ಮಾಡಿ ಬಾಯಿ ಲೊಟ್ಟೆ ಹೊಡೆಯುತ್ತಾ ತಿಂದು ಆನಂದ ಪಡುವುದಿಲ್ಲವೇ? ಹಾಗೆಯೇ ಆ ಪರಮ ಚೇತನ “ವಿಧಿ”ಯ ವೇಷಧರಿಸಿ,ನಮ್ಮನ್ನು ಈ ಭೂಮಿಗೆ ತಂದು ಶೈಶವ, ಬಾಲ್ಯ, ಕೌಮಾರ್ಯ, ವಯಸ್ಕ, ಪ್ರೌಢ ಮತ್ತು ವೃದ್ಧಾಪ್ಯದ ಮಜಲುಗಳಲ್ಲಿ ಅಡ್ಡಾಡಿಸಿ, ಹೊರಳಾಡಿಸಿ, ಪರದಾಡಿಸಿ, ತಿಣುಕಾಡಿಸಿ, ನಗಿಸಿ, ಅಳಿಸಿ, ದರ್ಪದಿಂದ, ದೈನ್ಯತೆಯಿಂದ, ರಾಜನಂತೆ, ಬಿಕಾರಿಯಂತೆ, ಸುಂದರಾಗಿಸಿ, ರೂಪಗೆಡಿಸಿ, ಇನ್ನೂ ಏನೇನೋ ಅವಸ್ಥೆಗಳಲ್ಲಿ ನಮ್ಮ ಜೀವನದ ಬಂಡಿಯನ್ನು ಎಗ್ಗಾಮುಗ್ಗಾ ಓಡಿಸಿ ನಮ್ಮನ್ನು ಮಂಗನಾಟ ಆಡಿಸಿ ತಾನು ನೋಡಿ ಕೇಕೆಹಾಕಿ ಅಟ್ಟಹಾಸದ ನಗುವ ನಗುತ್ತ ಸಂತಸಪಡುತ್ತಾನೆ, ಎನ್ನುವುದೇ ಈ ಕಗ್ಗದ ಹೂರಣ.

ನಾವು ನಮ್ಮ ಸುತ್ತಲಿನ ಪ್ರಪಂಚವನ್ನು ನೋಡಿದರೆ, ಪ್ರತಿಯೊಬ್ಬರ ಜೀವನವೂ ಬೇರೆ ಬೇರೆ ರೀತಿಯದ್ದಾಗಿರುತ್ತದೆ. ಅದಕ್ಕೆ ಕಾರಣವನ್ನು ಹುಡುಕಲು ಸಾಧ್ಯವಿಲ್ಲ. ಹಾಗೆ ನಮಗೆ ಕೆಲವು ಕಾರಣಗಳು ಕಂಡರೂ ಆ ಕಾರಣಕ್ಕೆ ಏನು ಕಾರಣ ಎಂದು ಒಂದು ಪ್ರಶ್ನೆ ಕೇಳಿದರೆ” ಅಯ್ಯೋ ಬಿಡಿ ಹಣೆಬರಹಕ್ಕೆ ಯಾರು ಹೊಣೆ” ಅಂತಲೋ ” ಪ್ರಾರಬ್ಧ ಕರ್ಮ ಯಾರೂ ತಪ್ಪಿಸಕ್ಕಾಗಲ್ಲ” ಎನ್ನುವ ಉದ್ಘಾರವೋ ಉತ್ತರವಾಗಿ ಸಿಗುತ್ತದೆ. ಒಬ್ಬ ಕುಂಟ, ಒಬ್ಬ ಕುರುಡ, ಒಬ್ಬ ಧನಿಕ, ಒಬ್ಬ ಬಡವ, ಒಬ್ಬ ಒಳ್ಳೆಯವ, ಒಬ್ಬ ಪಾತಕಿ, ಒಬ್ಬ ಜ್ಞಾನಿ ಮತ್ತೊಬ್ಬ ಅಜ್ಞಾನಿ ಹೀಗೆ ಸಾವಿರಾರು ವೈವಿದ್ಯೆತೆಗಳ ಬಾಳನ್ನು ಆ ಪರಮಾತ್ಮ ವಿಧಿ ರೂಪದಲ್ಲಿ ಎಲ್ಲರಿಗೂ ಕೊಟ್ಟಿದ್ದಾನೆ.

” ವಿಧಿ ” ಎಂದರೆ ಮೊದಲೇ ನಿರ್ಧರಿಸಿದ್ದು ಎಂದು ಒಂದು ಅರ್ಥ.ನಮ್ಮ ಜೀವನದ ಪರಿ ಮೊದಲೇ ನಿರ್ಧಾರಿತವಾಗಿರುತ್ತದೆ. ಆದರೆ ನಮಗೆ ಆಗುವುದನ್ನು ನಾವು ನಮಗೆ ಆ ಪರಮಾತ್ಮ ಕೊಟ್ಟ ಜ್ಞಾನದಿಂದ ಮತ್ತು ನಮ್ಮ ಪ್ರಯತ್ನದಿಂದ, ಮತ್ತು ನಾವು ನಂಬಿದ ಆ ಪರಮಾತ್ಮನ ಕೃಪೆಯಿಂದ ಕೊಂಚಮಟ್ಟಿಗೆ ಬದಲಾಯಿಸಿಕೊಳ್ಳಬಹುದು ಎಂಬುದೂ ಸಹ ಅಭಿಪ್ರಾಯವಿದೆ. ಅದಕ್ಕೆ ಬೇಕಾದ ಹತ್ತು ಹಲವಾರು ಮಾರ್ಗಗಳನ್ನೂ ಚತುರೋಪಾಯಗಳನ್ನೂ ನಮಗೆ ನಮ್ಮ ವೇದ, ಪುರಾಣ, ಭಾಗವತ, ಭಗದ್ಗೀತೆ, ಪುರಾಣಗಳು ಮುಂತಾದವುಗಳಿಂದಲೂ ದೊರೆಯುತ್ತೆ. “ಲಭ್ಯ” ವನ್ನು ಅನುಭವಿಸುತ್ತಾ, ತೃಪ್ತಿಯಿಂದ ಸಂತೋಷದಿಂದ ಅನುಭವಿಸುತ್ತಾ ಇರಬೇಕು. ಬೇರೆ ಮಾರ್ಗವಿಲ್ಲ. ಇದು ನಿರಾಶಾವಾದವಲ್ಲ. ವಾಸ್ತವವಾದ. ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ತೃಪ್ತಿಯ ಜೀವನ ಮಾಡಿದರೆ ಸುಖ.