RSS

Monthly Archives: ಆಗಷ್ಟ್ 2012

ರಸಧಾರೆ -೧೯೧

ಪೊಡೆಯುಣಿಸ ಮಿಗಹಕ್ಕಿಹುಳುಗಳಂದದಿ ನರನು
ತಡಕುವನು; ತನ್ನಾತ್ಮದುಣಿಸ ಮರೆಯುವನು
ಒಡಲಿನಬ್ಬರವೇನು? ಆತುಮದ ನಾಣ್ಚೇನು
ಪೊಡವಿಗೆದೆ ದುಮ್ಮಾನ – ಮಂಕುತಿಮ್ಮ

ಪೊಡೆಯುಣಿಸ = ಪೊಡೆ+ ಉಣಿಸ // ಮಿಗಹಕ್ಕಿಹುಳುಗಳಂದದಿ= ಮಿಗ+ಹಕ್ಕಿ +ಹುಳು+ ಗಳಂದದಿ// ತನ್ನಾತ್ಮದುಣಿಸ = ತನ್ನ+ ಆತ್ಮದ+ಉಣಿಸ// ಒಡಲಿನಬ್ಬರವೇನು = ಒಡಲಿನ + ಅಬ್ಬರವು+ ಅದೇನು // ಪೊಡವಿಗೆದೆ = ಪೋದವಿಗೆ+ ಅದೆ

ಪೊಡೆಯುಣಿಸ = ಹೊಟ್ಟೆಯಾಹಾರ, ನಾಣ್ಚೇನು= ಸಂಕೋಚ// ಒಡಲು = ದೇಹ// ಪೊಡವು = ಹೊಳಪು ಅಥವಾ ತೇಜಸ್ಸು.

ಮನುಷ್ಯನು, ಪ್ರಾಣಿ, ಹಕ್ಕಿ ಹುಳುಗಳ ರೀತಿ ತನ್ನ ಹೊಟ್ಟೆಪಾಡಿಗಾಗಿ ಆಹಾರಕ್ಕಾಗಿ ತಡಕಾಡುತ್ತಾನೆ. ಆದರೆ ಆತ್ಮಕ್ಕೆ ಬೇಕಾದ ಆಹಾರವನ್ನು ಕೊಡಬೇಕಾದ ಆಹಾರವನ್ನು ಕೊಡದೆ, ಅದನ್ನು ಸೊರಗಿಸುತ್ತಿದ್ದಾನೆ. ತೆಜೋರೂಪವಾದ ಆತ್ಮವು ಕಡೆಗಣಿಸಲ್ಪಟ್ಟಿದೆ. ಇದು ತೀರ ದುಃಖದ ವಿಚಾರ ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡಿದ್ದಾರೆ.

ಮನುಷ್ಯನನ್ನು ಬಿಟ್ಟು ಬೇರೆ ಎಲ್ಲಾ ಅನ್ಯ ಪ್ರಾಣಿಗಳು, ಕೇವಲ ತಮ್ಮ ಆಹಾರವನ್ನು ಹುಡುಕುವುದು, ತಮ್ಮನ್ನು ತಾವು ಕಾಪಾಡಿಕೊಳ್ಳುವುದು ಮತ್ತು ತಮ್ಮ ಸಂತತಿಯನ್ನು ಬೆಳೆಸುವ ಕಾರ್ಯದಲ್ಲಿ ಮಾತ್ರ ನಿರತರು. ಮನುಷ್ಯ ಮಾತ್ರ ಭಿನ್ನವಾಗಿ ಆಧ್ಯಾತ್ಮದ ದಾರಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನ ಮೂಲವಾದ ಪರಮಾತ್ಮನನ್ನು ಸೇರಲು ಪ್ರಯತ್ನ ಪಡುವ ಸಾಮರ್ತ್ಯವನ್ನು ಹೊಂದಿದ್ದಾನೆ. ಅನ್ಯ ಪ್ರಾಣಿಗಳಿಗಿಂತ ಮನುಷ್ಯ ಎಷ್ಟೊಂದು ರೀತಿಯಲ್ಲಿ ಭಿನ್ನ ಎನ್ನುವದು ಸರ್ವರಿಗೂ ವೇಧ್ಯ. ಆ ಕಾರಣಕ್ಕಾಗಿಯೇ ಮನುಷ್ಯ ಬೇರೆ ಪ್ರಾಣಿಗಳಂತೆ ಅಲ್ಲದೆ ಊರ್ಧ್ವಮುಖನಾಗಿದ್ದಾನೆ. “ತಾನು ಆತ್ಮ” ಎಂದು ಅರಿತುಕೊಳ್ಳಲು ಪ್ರಯತ್ನ ಪಡಲು ಅವನಿಗೆ ಸಾಮರ್ತ್ಯವನ್ನು ಪರಮಾತ್ಮ ಕೊಟ್ಟಿದ್ದಾನೆ.

ಆತ್ಮಕ್ಕೆ ದೇಹವಿಲ್ಲದೆ ಇದ್ದರೆ ಅಸ್ಥಿತ್ವವೇ ಇಲ್ಲ. ಅಂದರೆ ಆತ್ಮವು ತನ್ನ ಪೂರ್ವ ಕರ್ಮಗಳನ್ನು ಕಳೆದುಕೊಳ್ಳಲು ಪುನಃ ಜನ್ಮ ಪಡೆದುಕೊಳ್ಳುವುದಕ್ಕೆ ಒಂದು ಕಾಯ ಅಥವಾ ದೇಹದ ಅವಶ್ಯಕತೆ ಇದೆ. ಅತ್ಮೋದ್ಧಾರಕ್ಕೆ ದೇಹ ಒಂದು ಉಪಕರಣವಷ್ಟೇ. ಆದರೆ ಮನುಷ್ಯ ಈ ದೇಹಕ್ಕಷ್ಟೇ ಪ್ರಾಮುಖ್ಯತೆಯನ್ನು ನೀಡಿ ಆತ್ಮಕ್ಕೆ ನೀಡಬೇಕಾದ ಗಮನವನ್ನು ಕೊಡುತ್ತಿಲ್ಲ ಎನ್ನುವುದೇ ವಿಷಾದದ ಸಂಗತಿ.
” ಇದಂ ಶರೀರಂ, ಪರಿಣಾಮ ಪೇಶಲಂ ಪತತ್ಯವಶ್ಯಂ ಶ್ಲಥ ಸಂಧಿ ಜರ್ಜರಂ” ಎಂದು ಕುಲಶೇಖರ ಆಳ್ವಾರರು ಹೇಳುತ್ತಾರೆ. ಎಂದರೆ ಕಾಲದ ಪರಿಣಾಮಗಳಿಗೊಳಗಾಗಿ ಈ ಶರೀರ ಬಿದ್ದು ಹೋಗುವುದು ಖಂಡಿತ ಎಂದು. ಇಂತಹ ದೇಹವನ್ನು ಕಾಪಾಡಿಕೊಳ್ಳುವುದಕ್ಕೋಸ್ಕರ, ಏನೆಲ್ಲಾ ಸಾಹಸ ಮಾಡುತ್ತಾನೆ ಮನುಷ್ಯ. ಈ ದೇಹಕ್ಕೆ ಎಷ್ಟೊಂದು ಪ್ರಾಮುಖ್ಯತೆ ಎಷ್ಟೊಂದು ರೀತಿಯ ಅಲಂಕಾರ. ಆದರೆ ನಿರಂತರವಾದ, ನಿತ್ಯವಾದ ತನ್ನ ಆತ್ಮವನ್ನು ಕಾಪಾಡಿಕೊಳ್ಳಲು ಆತ್ಮದ ಉನ್ನತಿಗೆ, ಏನನ್ನೂ ಮಾಡುವುದಿಲ್ಲ.

ದೇಹವನ್ನು ಕಾಪಾಡಿಕೊಳ್ಳುವುದು ಅವಶ್ಯ. ಆದರೆ ಅದನ್ನು ಒಂದು ಉಪಕರಣ ಎಂದು ಅರಿತು, ಅದಕ್ಕೆ ಸೀಮಿತ ಪ್ರಾಮುಖ್ಯತೆಯನ್ನು ನೀಡಿ, ದೇಹವನ್ನು ಉಪಯೋಗಿಸಿಕೊಂಡು, ಆತ್ಮವನ್ನು ಅರಿಯಲು ಪ್ರಯತ್ನಪಡಬೇಕು. ಆ ದಾರಿಯಲ್ಲಿ ಮುಂದೆ ಸಾಗಲು ನಮ್ಮ ಪೂರ್ವಜರು ಸಾವಿರಾರು ಮಾರ್ಗಗಳನ್ನು ಸ್ವಾನುಭವದಿಂದ ನಮಗೆ ತೋರಿಸಿದ್ದಾರೆ. ಆದರೆ ನಾವು ಅದನ್ನು ಕಡೆಗಣಿಸಿದ್ದೇವೆ. ಒಂದು ದಿನದ ೨೪ ಗಂಟೆಗಳಲ್ಲಿ ನಮಗೆ ೫ ನಿಮಿಷವೂ ಧ್ಯಾನಮಾಡುವ ಸಮಯವಿರುವುದಿಲ್ಲ. ನಮಗೆ ಸದಾಕಾಲ ನಮ್ಮ ಬಾಹ್ಯವಾದ ಈ ದೇಹ, ಮನಸ್ಸು ಬುದ್ಧಿಗಳ ಮೂಲಕ ಈ ಜಗತ್ತಿನೊಂದಿಗೆ ಸಂಪರ್ಕ, ಜಗತ್ತಿನ ಮೇಲೆ ಅತೀವ ಮೋಹ ಮತ್ತು ಅತೀ ರಸಿಕತೆ. ನಮಗೆ ಬೇಡದೆ ಇರುವ ವಿಷಯವೇ ಇಲ್ಲ. ನಾವು ಸದಾಕಾಲ ಬಾಹ್ಯಮುಖಿಗಳು.ಎಲ್ಲವೂ ತೋರಿಕೆ, ಆಡಂಬರ ಮತ್ತು ಡಂಬಾಚಾರ. ಅಂತರ್ಮುಖಿಗಳಾಗುವುದೇ ಇಲ್ಲ. ಇದರಿಂದ ಸತ್ಯವಾದ ಆನಂದಸ್ವರೂಪಿಯಾದ ಆತ್ಮ ಸಂಕೋಚದಿಂದ ಸೊರಗಿಹೋಗಿದೆ. ” ಆತ್ಮ”!!! ಹಂಗಂದರೇನು? ಎಂದು ಕೇಳುವ ಕಾಲ ಬಂದಿದೆ. ಇದು ವಿಷಾದನೀಯವಲ್ಲವೇ?

ವಾಚಕರೆ, ಈ ದೇಹ ಕೇವಲ ಒಂದು ಉಪಕರಣ.ಅದನ್ನು ಆರೋಗ್ಯವಾಗಿಟ್ಟುಕೊಳ್ಳಬೇಕು. ಏಕೆಂದರೆ ಈ ದೇಹದಿಂದಲೇ ಆತ್ಮಕ್ಕೆ ಮುಕ್ತಿ. ಆದ್ದರಿಂದ ಆತ್ಮವನ್ನು ಸೊರಗಲು ಬಿಡಬಾರದು, ಅಂತರ್ಮುಖಿಗಳಾಗಿ ಅದಕ್ಕೂ ಆಗಾಗ ಆಹಾರವನ್ನು ಕೊಡುತ್ತಲೇ ಇರಬೇಕು. ಅಂತಹ ಪ್ರಯತ್ನವನ್ನು ನಾವೆಲ್ಲಾ ಮಾಡೋಣ.

Advertisements
 

ರಸಧಾರೆ -೧೯೦

ಅಮೃತಕಣವಂ ಮರ್ತ್ಯಮೃದ್ಘಟದಿ ಬಯ್ತಿರಿಸಿ
ವಿಮೃಶಬುದ್ಧಿಗೆ ಮೋಹದುಪನೇತ್ರವಿಡಿಸಿ
ಸಾಮ್ರಾಜ್ಯಮಧ್ಯದಲಿ ದುರ್ಭಿಕ್ಷವಾಗಿಪುದು
ಕ್ರಮತೆಯೋ ನಮ್ರತೆಯೋ – ಮಂಕುತಿಮ್ಮ.

ಅಮೃತಕಣವಂ = ಅಮೃತ + ಕಣವಂ// ಮರ್ತ್ಯಮೃದ್ಘಟದಿ = ಮರ್ತ್ಯ + ಮೃತ್+ಘಟದಿ// ಬಯ್ತಿರಿಸಿ = ಬಯ್ತು+ಇರಿಸಿ// ಮೋಹದುಪನೇತ್ರವಿಡಿಸಿ = ಮೋಹದ + ಉಪ+ ನೇತ್ರ+ ಇಡಿಸಿ//

ಅಮೃತ = ಸಾವಿಲ್ಲದ// ಕಣವಂ = ಕಣವನ್ನು // ಮರ್ತ್ಯ = ನಾಶವಾಗುವ // ಮೃತ್=ಮಣ್ಣಿನ// ಘಟದಿ=ಮಡಿಕೆಯಲ್ಲಿ// ಬಯ್ತು= ಬಚ್ಚಿಟ್ಟು// ವಿಮೃಶಬುದ್ಧಿಗೆ= ವಿಮರ್ಶಾತ್ಮಕವಾದ ಬುದ್ಧಿ// ಮೋಹದ = ಮಮಕಾರದ// ಉಪನೇತ್ರ = ಒಳನೋಟವನ್ನು// ಸಾಮ್ರಾಜ್ಯಮಧ್ಯದಲಿ = ಜೀವನವೆನ್ನುವ ಸಾಮ್ರಾಜ್ಯದಮಧ್ಯದಲಿ// ದುರ್ಭಿಕ್ಷವಾಗಿಪುದು = ಏನೂ ಇಲ್ಲದಂತಾಗಿಸುವುದು// ಕ್ರಮತೆಯೋ = ವಿಧಾನವೋ// ನಮ್ರತೆಯೋ = ಪ್ರಲೋಭನೆಯೋ

ನಾಶವಿಲ್ಲದ ಆತ್ಮ ಅಥವಾ ಚೇತನನನ್ನು, ನಾಶವಾಗುವಂಥಾ ಈ ದೇಹವೆಂಬ ಮಣ್ಣಿನ ಮಡಿಕೆಯಲ್ಲಿ ಬಚ್ಚಿಟ್ಟು, ವಿಮರ್ಶೆಮಾಡುವಂತಾ ಬುದ್ಧಿಶಕ್ತಿಯನ್ನೂ ಕೊಟ್ಟು ವಿವೇಚನೆಯಿಂದಲೋ ಅಥವಾ ಮೋಹದಿಂದಲೋ ತನ್ನ ಬೇಕು ಬೇಡಗಳ ವಿಮರ್ಶೆಮಾಡುತ್ತಾ ಈ ಜಗತ್ತಿಗೆ ಅಂಟಿಕೊಳ್ಳುವಂತಾ ಮನವನಿತ್ತು, ಎಲ್ಲವೂ ಇರುವಾಗ ಇದ್ದಕ್ಕಿದ್ದಂತೆಯೇ, ಏನೂ ಇಲ್ಲದಂತಾಗಿಸುವುದು, ಇದೇನು ವಿಧಾನವೋ ಅಥವಾ ಮಾನವರಿಗೆ ಒಂದು ಪ್ರಲೋಭನೆಯೋ ಎಂದು ವಿಚಾರಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಮಣ್ಣಿಂದ ಆದ ದೇಹ. ಆ ದೇಹದೊಳಗೆ ಒಂದು ಆತ್ಮ. ಈ ದೇಹಾತ್ಮ ಸಂಬಂಧಕ್ಕೆ ಪೂರಕವಾಗಿ ಪಂಚ ಭೂತಗಳಿಂದಾದ, ಮನಸ್ಸು ಬುದ್ಧಿಗಳು. ಈ ನಾಲ್ಕರಿಂದ ನಮ್ಮ ಅಸ್ಥಿತ್ವ. ಪ್ರಕೃತಿ ಸಂಬಂಧದಿಂದ, ಮನಸ್ಸು ಬುದ್ಧಿಗಳ ಪ್ರಲೋಭನೆಯಿಂದ ನಾವು ಈ ಜಗತ್ತಿಗೆ ಅಂಟಿಕೊಂಡು, ಈ ಜಗತ್ತನ್ನು ಮೋಹಿಸುತ್ತಾ ಇಲ್ಲಿರುವ ಎಲ್ಲ ವಸ್ತುಗಳನ್ನೂ ರಸಿಕತೆಯಿಂದ ಅನುಭವಿಸುತ್ತಾ ಜೀವಿಸುತ್ತೇವೆ. ನಮ್ಮ ಜೀವನಕ್ಕೆ ಒಂದು ಅಂತ್ಯ ಉಂಟು, ಎಲ್ಲವನ್ನೂ ಬಿಟ್ಟು, ಈ ದೇಹವನ್ನು ತೊರೆದು ನಾವು ಹೋಗಲೇಬೇಕೆಂದು ಅರಿತಿದ್ದರೂ, ಇಲ್ಲಿ ಜೀವಿಸುವವರೆಲ್ಲರೂ,ಈ ಜಗತ್ತಿನಲ್ಲಿ ನಾವು ನಿರಂತರವಾಗಿ ಜೀವಿಸಿರುತ್ತೇವೆ ಎಂದು ಅಂದುಕೊಳ್ಳುತ್ತೇವೆ. ಈ ಜಗತ್ತನ್ನು ಬಿಟ್ಟು ಹೋಗುವಾಗಲೂ ” ಅಯ್ಯೋ ಬಿಟ್ಟು ಹೋಗಬೇಕಲ್ಲ ” ಎಂದು ಕೊರಗುತ್ತಾ ಹೋಗುವವರೇ ಎಲ್ಲರೂ. ಇದೇ ನಮಗಿರುವ ಈ ಜಗತ್ತಿನ ಮೋಹ. ಈ ಮೋಹವನ್ನು ಕೊಟ್ಟವನೇ ಆ ಪರಮಾತ್ಮ. ಇದು ಅವನಿಗೊಂದು ಆಟ. ನಮಗೆ ಇದನ್ನೆಲ್ಲಾ ಕೊಟ್ಟು, ನಾವು ಪಡುವ ಪಾಡು ಅವನಿಗೆ ವಿನೋದ ಅಥವಾ ಈ ಜಗತ್ತನ್ನು ನಡೆಸುವ ಅವನ ವಿಧಾನವಿರಬಹುದು.

ಜೀವಿಗಳಿಗೆ ಈ ಮೋಹವನ್ನು ಕೊಟ್ಟದ್ದರಿಂದಲೇ ಈ ಜಗತ್ತಿನ ವೈವಿಧ್ಯಮಯ ಜೀವನದ ಆಟ ನಡೆಯುತ್ತಿದೆ. ಇಲ್ಲದಿದ್ದರೆ ಜಗತ್ತು, ಬಾಳು, ಜೀವನ ಎಲ್ಲವೂ ನೀರಸವಾಗಿ, ಇಡೀ ಜಗತ್ತೇ ಒಂದು ಬೆಂಗಾಡಿನಂತಿರುತ್ತಿತ್ತು. ಇದರೊಳಗೆ ರಕ್ತಿಯಿಂದ ಇರುವುದು ಒಂದು ಹಂತದ ತನಕ ಸರಿ. ಆದರೆ ಜೀವನವಿಡೀ ಈ ಮೋಹಕ್ಕೆ ಅಂಟಿಕೊಂಡಿದ್ದರೆ ಇದನ್ನೆಲ್ಲಾ ಬಿಟ್ಟು ಹೋಗುವಾಗ ತೀವ್ರ ನೋವು ಮತ್ತು ಸಂಕಟವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದಲೇ, ಈ ಮೋಹವೆಂಬುದು ಪರಮಾತ್ಮ ಸೃಷ್ಟಿಯೇ ಆದರೂ ನಮ್ಮ ಹಿರಿಯರು ಸಾಧು ಸಂತರು, ಭಕ್ತ ಶಿಖಾಮಣಿಗಳ ಬೋಧನೆಯು ಮತ್ತು ನಮ್ಮ ವೇದ,ಉಪನಿಷತ್ತುಗಳು, ಪುರಾಣಗಳು, ಹೀಗೆ ಎಲ್ಲವೂ ಈ ಮೋಹವನ್ನು ಬಿಟ್ಟರೆ ಆತ್ಮನಿಗೆ ಸುಖವೆಂದು ಬೋಧಿಸಿದ್ದಾರೆ. ಹಾಗಾಗಿ ಅಶಾಶ್ವತವಾದ ಇಂದ್ರಿಯ ಸುಖಕ್ಕಿಂತ ನಿತ್ಯವಾದ ಸತ್ಯವಾದ ಆತ್ಮಾನಂದ ಬೇಕಾದರೆ ಈ ಮೋಹವನ್ನು ಬಿಡಬೇಕೆಂದು ನಮ್ಮ ಸನಾತನ ಧರ್ಮದ ಅಭಿಪ್ರಾಯ. ಆದರೆ ಈ ಜಗತ್ತಿನಲ್ಲಿ ರಕ್ತಿಯಿಂದಿರುವುದೋ ಅಥವಾ ವಿರಕ್ತಿಯಿಂದಿರುವುದೋ ಎನ್ನುವುದು ಪ್ರತಿಯೊಬ್ಬರ ಸ್ವಂತ ವಿಚಾರಕ್ಕೆ ಬಿಟ್ಟದ್ದು.

 

ರಸಧಾರೆ -೧೮೯

 

ಪರಿಪರಿಯ ರೂಪಕಾಂತಿಗಳ ಕಣ್ಣಾಗಿಸುವ
ಪರಿಪರಿಯ ಫಲಮಧುರಗಳ ರಸನೆಗುಣಿಪ
ಪರಿಪರಿಯ ಕಂಠರವಗಳ ಕಿವಿಗೆ ಸೋಕಿಸುವ
ಗುರು ಸೃಷ್ಟಿ ರಸಿಕತೆಗೆ – ಮಂಕುತಿಮ್ಮ.

ರಸನೆಗುಣಿಪ = ರಸನೆಗೆ+ ಉನಿಪ // ರಸನೆಗುಣಿಪ = ರಸನೆಗೆ+ ಉಣಿಪ// ಕಂಠರವಗಳ = ಕಂಠ + ರವಗಳ //

ರಸನೆ= ನಾಲಿಗೆ// ಉಣಿಪ = ಉಣಬಡಿಸುವ// ಕಂಠರವ = ಕಿವಿಯಾಲಿಸುವ ನಾದ//

ಪರಿ ಪರಿಯಾದ ರೂಪ ಕಾಂತಿಗಳು, ಹೂಗಳು ಹಣ್ಣುಗಳು ತಿಂಡಿ ತಿನಿಸುಗಳು, ಪರಿಪರಿಯಾದ ಮಧುರ ನಾದಗಳು ಇವುಗಳನ್ನೆಲ್ಲ ಸೃಷ್ಟಿಸಿ ನಮ್ಮ ಮನಸ್ಸಿಗೆ ಆನಂದವೀಯುವ ಈ ಪ್ರಕೃತಿಯೇ, ಸೃಷ್ಟಿಯೇ ನಮ್ಮ ರಸಿಕತೆಗೆ ಗುರು ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಯಾವುದಾದರೂ ಒಂದು ವಸ್ತುವಿನಲ್ಲಿರುವ ಗುಣ, ರುಚಿ, ರೂಪ, ನಾದ ಮುಂತಾದವುಗಳನ್ನು ನೋಡಿ ಸವಿದು ಆಸ್ವಾದಿಸಿ ಮೆಚ್ಚುವುದು, ರಸಿಕತೆ. ಈ ರಸಿಕತೆ, ಸರ್ವೇ ಸಾಮಾನ್ಯ ಎಲ್ಲರಲ್ಲಿಯೂ ಇರುತ್ತದೆ. ಇಲ್ಲದವರೂ ಇದ್ದಾರೆ. ಆದರೆ ಈ ರಸಿಕತೆ ಎನ್ನುವುದು ಕೆಲವರಿಗೆ ಕೆಲ ವಿಷಯಗಳಲ್ಲೋ ಅಥವಾ ಯಾವುದೋ ಒಂದು ವಿಷಯದಲ್ಲೋ ಇರುತ್ತದೆ. ಕೆಲವರಿಗೆ ಸಂಗೀತ ಕೇಳುವುದರಲ್ಲಿ ರಸಿಕತೆ, ಕೆಲವರಿಗೆ ಹಾಡುವುದರಲ್ಲಿ ರಸಿಕತೆ,
ಕೆಲವರಿಗೆ ಚಿತ್ರ ಕಲೆ, ಕೆಲವರಿಗೆ ಶಿಲ್ಪಿ ಕಲೆ, ಕೆಲವರಿಗೆ ರುಚಿ ರುಚಿಯಾದ ಹಣ್ಣುಗಳನ್ನೂ ಅಥವಾ ತಿಂಡಿ ತಿನಿಸುಗಳನ್ನು ತಿಂದು ಆಸ್ವಾದಿಸುವುದರಲ್ಲಿ ರಸಿಕತೆ. ನಮ್ಮಲ್ಲಿ ಒಬ್ಬರು, ಕಾಫೀ ಕುಡಿದು, ೧೫ ನಿಮಿಷ ಬಾಯಿ ಮುಚ್ಚಿ ಕುಳಿತಿರುತ್ತಿದ್ದರು. ಏಕೆಂದು ಕೇಳಿದರೆ, “ಮಾತನಾಡಿದರೆ ಕಾಫಿಯ ಸುಗಂಧ ಬಾಯಿಂದ ಹೊರ ಹೋಗುತ್ತದೆಂದು” ಅವರ ಅಂಬೋಣ. ಈ ರೀತಿಯ ರಸಿಕರೂ ಇದ್ದಾರೆ. ಕೆಲವರು ಕಾಫೀ ಕುಡಿದಾಕ್ಷಣ ಬಾಯಿ ಮುಕ್ಕಳಿಸುವವರೂ ಇದ್ದಾರೆ. ಹೀಗೆ ಬೇರೆ ಬೇರೆಯವರಿಗೆ ಬೇರೆ ಬೇರೆಯಾದ ಅಭಿರುಚಿ.

ಮತ್ತೆ ಕೆಲವರಿಗೆ, ಪ್ರಕೃತಿಯ ಅಥವಾ ಪ್ರಕೃತಿಯಲ್ಲಿನ ಸೃಷ್ಟಿಯ ರೂಪ ಲಾವಣ್ಯಗಳನ್ನು ಕಂಡು ಅಭಿನಂದಿಸುವ, ಆರಾಧಿಸುವ, ಅಸ್ವಾಧಿಸುವ, ಪಡೆದುಕೊಳ್ಳಬೇಕೆಂದುಕೊಳ್ಳುವ ಅಥವಾ ಪಡೆದುಕೊಳ್ಳುವ, ಹೀಗೆ ಹತ್ತು ಹಲವಾರು ವಿಧದ ರಸಿಕತೆ ಇರುತ್ತದೆ. ಈ ರಸಿಕತೆ ಮಾನವನಿಗೆ ಆ ಪರಮಾತ್ಮ ನೀಡಿದ ಒಂದು ಶ್ರೇಷ್ಠ ವರ. ಬಹುಶಃ ಯಾವ ಅನ್ಯ ಜೀವಿಗೂ ಇಲ್ಲದ ಮತ್ತು ಕೇವಲ ಮಾನವನಿಗೆ ಇರುವ ಒಂದು ಗುಣವೇ ಈ ರಸಿಕತೆ.
ಈ ಪ್ರಕೃತಿಯಲ್ಲಿ ರೂಪ, ರಸ, ಗಂಧ, ನಾದ, ರುಚಿ, ಭಾವ, ಎಲ್ಲವನ್ನೂ ರಸಿಕತೆಯಿಂದ ಆಸ್ವಾಧಿಸುವ ಕ್ಷಮತೆಯನ್ನು ಮಾನವನಿಗೆ ಕೊಟ್ಟ ಸೃಷ್ಟಿಯೇ ಮನುಷ್ಯನಿಗೆ ” ರಸಿಕತೆಯ ಗುರು” ಎಂದು ಮಾನ್ಯ ಗುಂಡಪ್ಪನವರು ಹೇಳುತ್ತಾರೆ.

ವಾಚಕರೆ, ಈ ರಸಿಕತೆ ನಮ್ಮಲ್ಲಿ ಇಲ್ಲದೆ ಇದ್ದಿದ್ದರೆ ಜೀವನ ಎಷ್ಟೊಂದು ಬರಡಾಗಿ, ನೀರಸವಾಗಿರುತ್ತಿತ್ತು ಎಂದು ನಾ ಬೇರೆ ಹೇಳಬೇಕೇ. ಹಾಗಾಗಿ ಆ ರಸಿಕತೆಯನ್ನು ನಮಗೆ ನೀಡಿದ ಈ ಸೃಷ್ಟಿಗೆ ಮತ್ತು ಆ ಸೃಷ್ಟಿಕರ್ತನಿಗೆ ನಮ್ಮ ನಮನಗಳನ್ನು ಸಲ್ಲಿಸೋಣ.

 

 

 

 

 

ರಸಧಾರೆ -೧೮೮

ರಸರುಚಿಗಳನು ಕಲಿಸಿ ಪಕ್ವಾನಗಳ ಪಚಸಿ
ರಸನೆಯಲಿ ನೀರಿಳಿಸಿ ಬಿಸಿಯುಸಿರ ಬಿಡಿಸಿ
ದಶದಿಶೆಗಳಿಂ ಮುತ್ತಿ ಬರುವ ಪ್ರಕೃತಿಗದಾರು
ವಶನಾಗದಿಹ ನರನು? – ಮಂಕುತಿಮ್ಮ.

ಪ್ರಕೃತಿಗದಾರು + ಪ್ರಕೃತಿಗೆ+ ಅದಾರು // ವಶನಾಗದಿಹ = ವಶನು + ಆಗದಿಹ ರಸನಾ= ನಾಲಿಗೆ

ರುಚಿರುಚಿಯಾದ ರಸಭರಿತವಾದ ಅಡುಗೆಗಳನ್ನು ಮಾಡಲು ಕಲಿಸಿ, ಇವುಗಳನ್ನು ಸವಿಯುವ ತವಕದಲಿ ನಾಲಿಗೆಯಲಿ ನೀರಿಳಿಸಿ,ಹಲವಾರು ರೀತಿಯ ಪಕ್ವಾನ್ನಗಳನ್ನು ಜೀರ್ಣಿಸಿಕೊಂಡು, ಜಿಹ್ವಾ ಚಾಪಲ್ಯವನ್ನು ತೀರಿಸಿಕೊಳ್ಳಲು ಅನುವಾಗುವಂತೆ ಮತ್ತೆ ಮತ್ತೆ ಆಸೆಪದುವಂತೆ, ಪ್ರಕೃತಿಯೇ ಹತ್ತಾರು ಕಡೆಗಳಿಂದ ನಮ್ಮನ್ನು ಸೆಳೆಯುತ್ತಿರುವಾಗ ಇದಕ್ಕೆ ವಶನಾಗದವನು ಯಾರು ಎಂದು ಕೇಳುತ್ತಾರೆ ಮಾನ್ಯ ಗುಂಡಪ್ಪನವರು.

ಆಹಾರವನ್ನು ತಿನ್ನುವುದು ಸ್ವಾಭಾವಿಕ. ಅದನ್ನು ರುಚಿರುಚಿಯಾಗಿ ಮಾಡಿ ತಿನ್ನುವುದು ರಸಿಕತೆ. ಹಾಗೆ ವಿಧ ವಿಧವಾದ ರುಚಿ ರುಚಿಯಾದ ಆಹಾರವನ್ನು ಮಾಡಲು ಬೇಕಾದ ಆಸೆ, ಆಸ್ಥೆ, ಅದಕ್ಕೆ ಬೇಕಾದ ಪರಿಕರಗಳು, ಆ ಪರಿಕರಗಳನ್ನು ಪ್ರಯೋಗಿಸಿ ಸೂಕ್ತವಾಗಿ ಉಪಯೋಗಿಸುವ ಕಲೆ ಎಲ್ಲವೂ ನಮಗೆ ಪ್ರಕೃತಿದತ್ತವಾಗಿ ಬಂದಿದೆ. ಹಾಗೆ ಬಂದ ಕಲೆಯನ್ನು ನಾವು ಮನುಷ್ಯರು ಪ್ರತಿ ನಿತ್ಯ ನೂತನ ವಿನೂತನವಾದ ಪ್ರಯೋಗಗಳನ್ನು ಮಾಡಿ ಹೊಸ ಹೊಸ ರುಚಿಕರವಾದ ಆಹಾರಗಳ ಆವಿಷ್ಕರಿಸುವ ಕೆಲಸ ಜಗತ್ತಿನಾದ್ಯಂತ ನಿರಂತರವಾಗಿ ಮಾಡುತ್ತಲೇ ಇದ್ದೇವೆ. ಇವುಗಳನೆಲ್ಲ ಅನುಭವಿಸದೆ ಇವುಗಳಿಂದ ಆಕರ್ಷಿತರಾಗೆದೆ ಇರುವವರು ಈ ಜಗತ್ತಿನಲ್ಲಿ ವಿರಳ. ಇಂದು ಜಗತ್ತಿನಲ್ಲಿ ಪಾಕಶಾಸ್ತ್ರವೇ ಒಂದು ಪ್ರಮುಖ ವ್ಯಾಪಾರೀ ಉಧ್ಯಮವಾಗಿದೆ.

ಒಂದು ಬಾರಿ ನಾವು ನಮಗೆ ಇಂದು ಇರುವ ಅಡುಗೆಯ ವಿಧಾನಗಳು ಮತ್ತು ತಯಾರಾಗುವ ವಿಧ ವಿಧವಾದ ಪಕ್ವಾನಗಳ ಯಾದಿಯನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಅಷ್ಟು ದೊಡ್ಡದಾಗುತ್ತದೆ ಆ ಪಟ್ಟಿ. ಯಾರು ಯಾರಿಗೆ ಏನೇನು ಬೇಕೋ ಅದೆಲ್ಲವೂ ಇದೆ. ಪ್ರತಿಯೊಬ್ಬರನ್ನೂ ತೃಪ್ತಿಪಡಿಸುವ ಸಲಕರಣೆಗಳನ್ನು ಆ ಪರಮಾತ್ಮ ಪ್ರಕೃತಿಯ ಮೂಲಕ ನಮಗೆ ಒದಗಿಸಿದ್ದಾನೆ. ಇರಲಿ ಇದರ ಬಗ್ಗೆ ಬಹಳ ಬರೆಯಬಹುದು. ಅದೊಂದು ಸಂಶೋಧನಾ ಗ್ರಂಥವೇ ಆಗುವುದು.

ಆದರೆ ನಾವುಣ್ಣುವುದೆಲ್ಲವನ್ನೂ ನಾಲಿಗೆ ರುಚಿ ನೋಡಿ ಚೆನ್ನವೆಂದೋ ಚೆನ್ನಾಗಿಲ್ಲವೆಂದೋ ಒಂದು ನಿರಧಾರಕ್ಕೆ ಬರುತ್ತದೆ. ಆದರೆ ನಾಲಿಗೆ ಇರುವುದೇ ಮೂರು ಅಂಗುಲ. ಆ ಮೂರು ಅಂಗುಲದಲ್ಲಿ ಮೂರುಭಾಗಗಳು. ಮೊದಲನೆಯದು ಖಾರ, ನಂತರ, ಸಿಹಿ, ಕಡೆಗೆ ಕಹಿ. ಹೀಗೆ ನಮ್ಮ ನಾಲಿಗೆಯ ಮೇಲಿರುವ ರುಚಿ ಗುಳ್ಳೆಗಳು ಬೇರೆ ಬೇರೆ ರುಚಿಗಳನ್ನು ಅನುಭವಿಸಿ ತಿಳಿಸುತ್ತದೆ. ನಮಗೆ, ಯಾವುದೇ ಆಹಾರ ನಮ್ಮ ನಾಲಿಗೆಗೆ ಸಾಕುವ ತನಕ ಅದರ ರುಚಿ ಗೊತ್ತಿರುವುದಿಲ್ಲ. ಈ ನಾಲಿಗೆಯನ್ನು, ಅಂದರೆ ನಾಲಿಗೆಯ ಮೂರೂ ಭಾಗಗಳನ್ನು ದಾಟಿ ಗಂಟಲ ಬಳಿ ಬರುವಾಗ ನಾವು ತಿಂದ ಆಹಾರ ತನ್ನ ರೂಪ, ಸ್ವರೂಪ, ಹೆಸರುಗಳನ್ನೂ ಕಳೆದುಕೊಂಡು ನಮ್ಮ ಹೊಟ್ಟೆಯೊಳಕ್ಕೆ ಹೋಗಿಬಿಡುತ್ತದೆ, ಕಳೆದು ಹೋಗಿಬಿಡುತ್ತದೆ. ಅಂದರೆ ಇಷ್ಟೊಂದು ಕಷ್ಟಪಟ್ಟು ತಯಾರಿಸಿದ ಆ ಆಹಾರದ ಪ್ರಯಾಣದ ಕಾಲ ಒಂದು ನಿಮಿಷಕೂಡ ಇಲ್ಲ.

ಆದರೂ ಪ್ರತಿ ನಿತ್ಯ ನಮಗೆ ಈ ಆಹಾರದಲ್ಲಿ ಮತ್ತು ಅದರ ರುಚಿಯಲ್ಲಿ ಇಷ್ಟೊಂದು ಆಸೆ ಅಕ್ಕರೆಯನ್ನು ಪ್ರಕೃತಿ ನಮ್ಮಲ್ಲಿ ಉಂಟುಮಾಡುತ್ತದೆ ಮತ್ತು ನಮ್ಮನ್ನು ಈ ಆಕರ್ಷಣೆಗೆ ಒಳಪಡಿಸುತ್ತದೆ.ಇದನ್ನು ಪಡೆಯಲು ನಮ್ಮನ್ನು ಪರದಾಡಿಸುತ್ತದೆ, ಗೋಳಾಡಿಸುತ್ತದೆ,ಬೆವರಿಳಿಸುತ್ತದೆ. ಆದರೂ ಇಡೀ ಜಗತ್ತಿನಲ್ಲಿ ಈ ಆಹಾರದ, ಪಕ್ವಾನಗಳ, ರುಚಿಯ ಮತ್ತು ಆಹಾರದ ಸುವಾಸನೆಯಿಂದ ಆಕರ್ಷಿತರಾಗದೆ ಇರುವವರು ಯಾರೂ ಇಲ್ಲ

 

ರಸಧಾರೆ -೧೮೭

ನುಡಿಗಟ್ಟಿನಾಟದಕ್ಕರಚೀಟಿಯೊಟ್ಟಿನಲಿ
ತಡಕಿ ನಾವಾಯ್ದಾಯ್ದು ನುಡಿಜೋಡಿಪಂತೆ
ಬಿಡಿಜೀವ ಸಂಗಾತಿಜೀವಗಳನರಸಿ
ಪಡೆದಂದು ಪೂರ್ಣವದು – ಮಂಕುತಿಮ್ಮ

“ನುಡಿಕಟ್ಟು”ಎನ್ನುವುದು ಒಂದು ಆಟ. ಸೂಕ್ತ ಅಕ್ಷರಗಳ ಜೋಡಣೆಯನ್ನು ಮಾಡುತ್ತಾ, ಪದಗಳ ವಿನ್ಯಾಸವನ್ನು ಮಾಡುವುದು. ಅದನ್ನಾಡುವುದಕ್ಕೆ ಉಪಯೋಗಿಸುವ ಅಕ್ಷರಗಳನ್ನು ಬರೆದ ಚೀಟಿಗಳನ್ನು ನಾವು ಆಯುವಂತೆ, ಜೀವನದಲ್ಲೂ ನಮಗೆ ಬೇಕಾದ ಸೂಕ್ತ ಸಂಗಾತಿ ಜೀವಗಳನ್ನಾರಿಸಿಕೊಂಡರೆ ಅಂದು ನಮ್ಮ ಜೀವನದ ವಿನ್ಯಾಸದ ಜೋಡಣೆ ಪೂರ್ಣವಾಗುವುದೆಂದು ಅಪ್ಪಣೆ ಕೊಡಿಸಿದ್ದಾರೆ ಮಾನ್ಯ ಗುಂಡಪ್ಪನವರು. ಈ ಕಗ್ಗದಲ್ಲಿ.

ಆ ನುಡಿಗಟ್ಟಿನಾಟದಲಿ ಅಕ್ಷರಗಳು ಸರಿಯಾಗಿ ಸಿಗದೇ ಹೋದರೆ ಪದವೂ ಆಗುವುದಿಲ್ಲ ವಿನ್ಯಾಸವೂ ಸರಿಯಾಗುವುದಿಲ್ಲ. ಸರಿಯಾದ ಅಕ್ಷರಗಳು ಸಿಕ್ಕರೆ ಪದ ಸರಿಯಾಗುತ್ತದೆ. ಹಾಗೆಯೇ ನಮ್ಮ ಜೀವನದಲ್ಲೂ ನಾವು ನಮಗೆ ಸರಿಹೊಂದುವಂತ ಜೀವಿಗಳನ್ನು ಹುಡುಕುತ್ತೇವೆ ಮತ್ತು ನಿರಂತರವಾಗಿ ಹುಡುಕುತ್ತಲೇ ಇರುತ್ತೇವೆ. ಸಿಕ್ಕರೆ ಸಂತೋಷ, ಸಿಗದಿದ್ದರೆ ಮತ್ತೆ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಅರಿಯದೆ ಕೆಲವರನ್ನು ಹುಡುಕಿ ಸೇರುತ್ತೇವೆ. ಸ್ವಲ್ಪದಿನವಾದ ನಂತರ ಬೇಡವೆನಿಸುತ್ತದೆ. ಆಗ ಆ “ಪದ” ಗಳಿಂದ ಎಲ್ಲ ಅಕ್ಷರಗಳನ್ನು ತೆಗೆದುಕೊಂಡು ಮತ್ತೆ ಹೊಸ ಅಕ್ಷರಗಳನ್ನು ಹುಡುಕಿ ಮತ್ತೆ ಹೊಸ ಪದ ಜೋಡಣೆಯ ಕೆಲಸ.

ಆದರೆ ನಾವು ಹುಡುಕುವ ಮತ್ತು ಆಯ್ದುಕೊಳ್ಳುವ ಅಕ್ಷರಗಳೇ ಸರಿಯಾಗಿಲ್ಲದಿದ್ದರೆ, ಪದ ದೋಷಪೂರಿತವಾಗಿರುತ್ತದೆ. ಹಾಗೆಯೇ ನಮ್ಮ ಆಯ್ಕೆ ಸರಿಯಿಲ್ಲದಿದ್ದರೆ ಅನ್ಯರೊಡನೆ ನಮ್ಮ ಸಂಬಂಧಗಲ್ಲೂ ಸರಿಯಾಗಿರುವುದಿಲ್ಲ. ಆಗ ನಾವು ಸಾಮಾನ್ಯವಾಗಿ ನಮ್ಮ ಆಯ್ಕೆಯನ್ನು ದೂರದೆ ಅಕ್ಷರವನ್ನು ದೂರುತ್ತೇವೆ, ಪದಗಳನ್ನು ದೂರುತ್ತೇವೆ, ಅಂದರೆ ನಾವು ಮಾಡಿ ಆಯ್ಕೆ ಸರಿಯಾಗಲಿಲ್ಲವೆಂದುಕೊಳ್ಳದೆ ನಾವು ಆಯ್ಕೆ ಮಾಡಿದ ವಸ್ತುವನ್ನೋ ವಿಷಯವನ್ನೂ ಅಥವಾ ವ್ಯಕ್ತಿಯನ್ನೂ ದೂರುತ್ತೇವೆ. ಆದರೆ ಜೀವನದಲ್ಲಿ ನಮಗೆ ಸಂಪೂರ್ಣವಾಗಿ ಸರಿಹೊಂದುವಂಥಾ ವ್ಯಕ್ತಿಗಳು ಸಿಗಲು ಸಾಧ್ಯವೇ? ಬಹಳ ದುರ್ಲಭ. ಏಕೆಂದರೆ ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯ ವ್ಯಕ್ತಿತ್ವ, ಭಾವನೆಗಳನ್ನು ಹೊಟ್ಟೆ ಹುಟ್ಟಿರುತ್ತಾರೆ. ಅದು ಅವರ ಸ್ವಾಭಾವವೆನ್ನಬಹುದು. ಸ್ವಭಾವ ಅಷ್ಟು ಸುಲಭವಾಗಿ ಬದಲಾಗುವುದಿಲ್ಲ. ಹಾಗಾಗಿ ಒಬ್ಬರಿಗೊಬ್ಬರು ಸಂಪೂರ್ಣ ಹೊಂದಾಣಿಕೆ ಸಾಧ್ಯವೇ ಇಲ್ಲ !!!!!

” ಇಬ್ಬರು ವ್ಯಕ್ತಿಗಳಿದ್ದರೆ – ಮೂರು ಅಭಿಪ್ರಾಯಗಳಿರುತ್ತವೆ ” ಎನ್ನುವ ಒಂದು ಮಾತಿದೆ. ಹಾಗೆ ನಮಗೆ ನಮ್ಮ ಭಾವನೆಗಳಿಗೆ ಸಂಪೂರ್ಣ ಎಕೀಭಾವ ತೋರುವ ವ್ಯಕ್ತಿ ಸಿಕ್ಕರೆ ಮತ್ತು ಅಂಥವರ ಸಾಂಗತ್ಯ ನಮಗೆ ಜೀವನ ಪೂರ್ತಿ ಲಭ್ಯವಾದರೆ ಅದು ನಮ್ಮ ಸೌಭಾಗ್ಯವೇ ಸರಿ ಆದರೆ ವಾಚಕರೆ ಅಂತಹ ಒಂದು ಆದರ್ಶ (Ideal ) ಸ್ಥತಿ ಸಾಧ್ಯವೇ ಇಲ್ಲ. ಪ್ರತಿಯೊಬ್ಬರೂ ಮತ್ತೊಬ್ಬರೊಂದಿಗೆ ಬಹಳಷ್ಟು ಹೊಂದಿಕೊಂಡು ತಮ್ಮ ಅವಶ್ಯಕತೆಗಳನ್ನು ಬದಿಗೊತ್ತಿ ತಮ್ಮ ಭಾವನೆಗಳಿಗೆ ಅತೀ ಮಹತ್ವಕೊಡದೆ, ಅನ್ಯರ ಕೊರತೆಗಳನ್ನು ಕಡೆಗಣಿಸುತ್ತಾ ಹೊಂದಿಕೊಂಡು ಹೋದರೆ ಒಂದು ಸಾಮರಸ್ಯ ಜೀವನ ಮಾಡಬಹುದು. ಇಲ್ಲದಿದ್ದರೆ ಪ್ರತಿ ನಿತ್ಯ ಸಮರಸದ ಕೊರತೆಯಿಂದ ಕೇವಲ ” ಸಮರವೇ” ಆಗುತ್ತದೆ.

 

ರಸಧಾರೆ -೧೮೬

ತಡಕಾಟ ಬದುಕೆಲ್ಲವೇಕಾಕಿಜೀವ ತ
ನ್ನೊಡನಾಡಿ ಜೀವಗಳ ತಡಕಿ ಕೈಚಾಚಿ
ಪಿಡಿಯಲಲೆದಾಡುಗುಂ, ಪ್ರೀತಿ ಋಣ ಮಮತೆಗಳ
ಮಡುವೊಳೋಲಾಡುತ್ತೆ – ಮಂಕುತಿಮ್ಮ.

ಬದುಕೆಲ್ಲವೇಕಾಕಿಜೀವ = ಬದುಕು+ ಎಲ್ಲ+ ಏಕಾಕಿ + ಜೀವ // ತನ್ನೊಡನಾಡಿ = ತನ್ನ + ಒಡನಾಡಿ// ಪಿಡಿಯಲಲೆದಾಡುಗುಂ = ಪಿಡಿಯಲು+ಅಲೆದಾಡುಗುಂ // ಮಡುವೊಳೋಲಾಡುತ್ತೆ = ಮಡುವೊಳು+ಒಲಾಡುತ್ತೆ

ಮಡುವೊಳು = ಸುಳಿಯೊಳು.

ಒಂದು ಜೀವ ಬದುಕಲ್ಲಿ ಏಕಾಕಿಯಾಗಿದ್ದು ಒಡನಾಡಿ ಜೀವಗಳ ಹುಡುಕಿ ಹಿಡಿದು, ಪ್ರೀತಿ, ಕರ್ಮಶೇಷ, ಮತ್ತು ಅಪ್ಯಾಯತೆಗಳ ಬಂಧನಗಳ ಸುಳಿಯಲ್ಲಿ ಸಿಕ್ಕು ಜೀವಿಸುತ್ತದೆ ಎಂಬುದೇ ಈ ಕಗ್ಗದ ಹೂರಣ.

ಪ್ರತಿ ಜೀವಿಯೂ ಮೂಲರೂಪದಲ್ಲಿ ಏಕಾಕಿ. ತಾಯಿಯ ಗರ್ಭದಲ್ಲಿ ಸೃಷ್ಟಿಯಾದ ಭ್ರೂಣದೊಳಗೆ ಬಂದು ಸೇರಿಕೊಂಡು ಈ ಜಗತ್ತಿಗೆ ಒಂದು ರೂಪದೊಂದಿಗೆ ಬಂದು ಎರಗುತ್ತದೆ. ಎರಗಿದಾಕ್ಷಣ, ತನ್ನ ಅಸ್ತಿತ್ವವನ್ನು ಪಡೆದು, ತಾಯಿ, ತಂದೆ, ಅಣ್ಣ, ತಮ್ಮ, ಅಕ್ಕ, ತಂಗಿ, ಎನ್ನುವ ಬಾಂಧವ್ಯದಲ್ಲಿ ಮೊಟ್ಟಮೊದಲಿಗೆ ತನ್ನ ಸಂಬಂಧವನ್ನು ಈ ಜಗತ್ತಿನಲ್ಲಿ ಬೆಳೆಸಿಕೊಳ್ಳುತ್ತದೆ. ಬೆಳೆದು ದೊಡ್ಡದಾಗುತ್ತಾ, ಸುತ್ತಲಿನ ಪರಿಸರದೊಂದಿಗೆ, ಗಿಡ, ಮರ, ಬಳ್ಳಿ, ಪಕ್ಷಿ, ಕೀಟ ಕ್ರಿಮಿ, ನದಿ, ಬೆಟ್ಟ, ಗುಡ್ಡ, ಹೀಗೆ ತನ್ನ ಸಂಪರ್ಕ-ಸಂಬಂಧದ ಜಾಲವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತದೆ. ನೆರೆ ಹೊರೆ, ಸ್ನೇಹಿತರು, ಅನ್ಯ ಪ್ರಾಣಿಗಳು, ಪರಸರದಲ್ಲಿ ಇರುವ ಎಲ್ಲದರೊಟ್ಟಿಗೆ ಒಂದು ಭಾವನಾತ್ಮಕವಾದ ಸಂಬಂಧವನ್ನು ಕಟ್ಟಿಕೊಳ್ಳುತ್ತದೆ.

ಒಂದೇ ಜೀವಿಯಾದರೂ, ಹಲವರೊಡನೆ ಮತ್ತು ಹಲವೊಡನೆ ತಾನು ಕಟ್ಟಿಕೊಳ್ಳುವ ಸಂಬಂಧದ ರೂಪಗಳು ಅನೇಕ. ಪ್ರೀತಿಯ, ಪ್ರೇಮದ, ಕೋಪದ, ದ್ವೇಷದ, ಅಹಂಕಾರದ, ಅಸೂಯೆಯ, ಹೀಗೆ ಹಲವಾರು ಭಾವನೆಗಳ ತಂತುವಿನೊಂದಿಗೆ ತನ್ನ ಸಂಪರ್ಕವನ್ನು ಕಟ್ಟಿಕೊಳ್ಳುತ್ತದೆ. ಅಷ್ಟೇ ಅಲ್ಲ, ಆ ಜೀವಿಯ ಸಂಬಂಧದ ರೂಪ, ಕಾಲಕಾಲಕ್ಕೆ, ಕಾಲಧರ್ಮಕ್ಕನುಗುಣವಾಗಿ, ವಯೋಧರ್ಮಕ್ಕನುಗುಣವಾಗಿ ಮತ್ತು ಬೇರೆ ಬೇರೆ ಕಾರಣಗಳಿಗೆ, ಬೇರೆ ಬೇರೆ ರೂಪಗಳನ್ನು ತಾಳುತ್ತದೆ. ಇದೊಂದು ಸುಳಿ. ನದಿಯ ಮಡುವಿನಲ್ಲಿ ಹೇಗೆ ನೀರು ಸುತ್ತುತ್ತಾ ಇರುತ್ತದೋ ಹಾಗೆಯೇ ಜೀವಿಯೂ ಈ ಭೂಮಿಯಲ್ಲಿ ಇರುವ ತನಕ, ಎಲ್ಲರೊಂದಿಗೆ ಮತ್ತು ಎಲ್ಲದರೊಂದಿಗೆ ಚಿತ್ರ ವಿಚಿತ್ರವಾದ ಸಂಬಂಧಗಳನ್ನು ಪಡೆದುಕೊಂಡು ಸುತ್ತುತ್ತಾ ಇರುತ್ತದೆ. ಹಾಗೆ ಸುತ್ತುವುದೇ ಜೀವನ. ಇದೇ ಬದುಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಈ ಸಂಬಂಧಗಳ ಮಡುವಿನ ಸುತ್ತಾಟ ಜೀವಿಗೆ ನಿರಂತರವಾಗಿ ನಡೆದೇ ಇರುತ್ತದೆ. ಜನ್ಮಜನ್ಮಾಂತರಗಳಲ್ಲೂ ಅವ್ಯಾಹತವಾಗಿ ಸುತ್ತುತ್ತಲೇ ಇರುತ್ತದೆ. ಈ ಬಂಧನಗಳಿಂದ ಮುಕ್ತರಾಗುವ ಪ್ರಯತ್ನವೇ ಅಧ್ಯಾತ್ಮ. ಅಂದರೆ ವಾಸನಾ ರಹಿತವಾಗಿ ಮೊಟ್ಟಮೊದಲಿಗೆ ಈ ಜಗತ್ತಿನ ಸಂಪರ್ಕಕ್ಕೆ ಬಂದ ಜೀವಿ ಮತ್ತೆ ವಾಸನಾ ರಹಿತವಾಗಿ, ಕರ್ಮ ಶೇಷ ರಹಿತವಾಗಿ, ಸಂಬಂಧಗಳ ಬಂಧನದಿಂದ,ಬಂಧಿಸಿರುವ ಸಂಕೋಲೆಯ ಪ್ರತೀ ಕೊಂಡಿಯನ್ನು ಕಳಚಿಕೊಂಡು ಮತ್ತೆ ತನ್ನ ಸ್ವಸ್ಥಾನ ಸೇರುವುದೇ ಅಧ್ಯಾತ್ಮದ ಗುರಿ. ಆಗ ಇಲ್ಲಿ ಇದ್ದರೂ ಇಲ್ಲದ ಹಾಗೆ, ಅಂಟದ ಹಾಗೆ ಇರಲು ಆದರೆ, ಅದೇ ಅಧ್ಯಾತ್ಮ ಸಾಧನೆಯ ಫಲ. ಮಾತುಗಳಲ್ಲಿ ವರ್ಣಿಸಲು, ಪದಗಳಲ್ಲಿ ಬರೆಯಲು ಸುಲಭ ಆದರೆ ಆ ಸ್ಥಿತಿಯನ್ನು ತಲುಪುವುದಕ್ಕೆ ದೀರ್ಘಕಾಲದ ಸಾಧನೆ ಬೇಕು. ಅಸಾಧ್ಯವಲ್ಲ ಆದರೆ ಕಷ್ಟ ಸಾಧ್ಯ.

 

ರಸಧಾರೆ -೧೮೫

ಲೋಕ ಸಹವಾಸ

ಹೃದಯಜೀವನಕಿನಿತು ಬೆಲೆಯಿರದೆ? ಫಲವಿರದೆ?
ಮಧುರಭಾವ ಪ್ರೇಮ ದಯೆಯಲ್ಲ ಬರಿದೆ?
ವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆ
ಬದುಕಿನಲಿ ತಿರುಳೇನು – ಮಂಕುತಿಮ್ಮ.

ಹೃದಯಜೀವನಕಿನಿತು = ಹೃದಯ+ಜೀವನಕೆ+ಇನಿತು// ವಿಧಿಯಂಗಡಿಯೊಳದನು = ವಿಧಿಯ + ಅಂಗಡಿಯೋಳು + ಅದನು ಇನಿತು = ಸ್ವಲ್ಪವೂ// ತಿರುಳೇನು = ಸ್ವಾರಸ್ಯವೇನು

ಹೃದಯವಂತಿಕೆಯಿಂದ ನಡೆಸುವ ಜೀವನಕೆ ಬೆಲೆಯೇ ಇಲ್ಲವೇ? ಅದಕ್ಕೇನೂ ಪ್ರಯೋಜನವಿಲ್ಲವೆ? ಪರಸ್ಪರ ಸವಿಯಾದ ಭಾವನೆಗಳು,ಪ್ರಮಾನುರಾಗಗಳು ದಯೆ ದಾಕ್ಷಿಣ್ಯಗಳು ಕೇವಲ ಪೊಳ್ಳೆ? ವಿಧಿಯ ಆಟದಲ್ಲಿ ಇದನ್ನೆಲ್ಲಾ ಕೆಲಸಕ್ಕೆ ಬಾರದ್ದು ಎಂದು ತಿರಸ್ಕರಿಸುವಹಾಗಿದ್ದರೆ, ಈ ಜೀವನದ ಸ್ವಾರಸ್ಯವೇನು ಎಂದು ಒಂದು ಪ್ರಶ್ನಾ ರೂಪದ ಪ್ರಸ್ತಾಪವನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಮಾಡುತ್ತಾರೆ.

ಕೊಂಚಮಟ್ಟಿಗೆ ಇನ್ನೂ ನಮ್ಮ ಭಾರತೀಯ ಅಸ್ಮಿತೆಯ ಬೇರುಗಳು ಭದ್ರವಾಗಿದ್ದ ಕಾಲಕ್ಕೇ, ಇಂತಹ ಒಂದು ಪ್ರಶ್ನೆಯನ್ನು ಕೇಳುವ ಗುಂಡಪ್ಪನವರು ಇಂದು ಏನು ಹೇಳುತ್ತಿದ್ದರೋ? ಆ ಭಗವಂತನೇ ಬಲ್ಲ!!! ಇರಲಿ, ನಾವು ಇಂದಿನ ಪರಿಸ್ಥ್ತಿಯನ್ನು ನೋಡುವ . ಲಕ್ಷಕ್ಕೊಬ್ಬರಂತೆ ಯಾರಾದರೂ ಹೃದಯವಂತರು, ಸ್ವಾರ್ಥರಹಿತರು, ಮಧುರವಾದ ಪ್ರೇಮಾನುರಾಗಗಳ ಶುದ್ಧ ಭಾವವನ್ನು ಇಟ್ಟುಕೊಂಡಿರುವವರು ನಮಗೆ ಈ ಲೋಕದಲ್ಲಿ ಸಿಗಬಹುದು. ಆದರೆ ಒಟ್ಟಾರೆ ಸಮಾಜದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಅವರು ಉಲ್ಲೇಖ ಮಾಡುವ ಆ ಹೃದಯವಂತಿಕೆ, ಪ್ರೇಮ,ದಯೆ, ಮಧುರಭಾವದ ಸ್ಥಳವನ್ನು ಸ್ವಾರ್ಥ, ಅಸೂಯೆ , ನಿರ್ದಯೆ, ಕಾಠಿಣ್ಯ, ನಿರ್ಲಕ್ಷ್ಯ ಮುಂತಾದವು ಆಕ್ರಮಿಸಿಕೊಂಡುಬಿಟ್ಟಿದೆ. ಕಾರಣವನ್ನು ಯಾವುದೋ ಒಂದು ನಿರ್ಧಿಷ್ಟ ವ್ಯಕ್ತಿಗೋ, ಘಟನೆಗೋ ಆರೋಪಿಸಲಾಗುವುದಿಲ್ಲ. ಕಾಲಕ್ರಮೇಣ ಎಲ್ಲವೂ ಬದಲಾಗಿದೆ. ಜೀವನ ಶೈಲಿ ಬದಲಾಗಿದೆ.

ನಮ್ಮ ದೇಶದಮೇಲೆ ಪರಕೀಯರ ಆಕ್ರಮಣದ ಕಾರಣ ಕಾಲ ಕ್ರಮಣದಲ್ಲಿ ಹತ್ತು ಹಲವಾರು ಪ್ರಭಾವಗಳಿಂದ ಸಮಾಜದಲ್ಲಿನ ವ್ಯಕ್ತಿಗಳ ಪರಸ್ಪರ ಸಂಬಂಧಗಳಲ್ಲಿ ಬದಲಾವಣೆಗಳು ಬಂದಿವೆ. ಹಣದ ಪ್ರಾಮುಖ್ಯತೆ ಹೆಚ್ಚಾಗಿದೆ, ಸಂಬಂಧಗಳೆಲ್ಲ ವ್ಯವಹಾರಗಳಾಗಿವೆ. ಪ್ರಾಪಂಚಿಕ ಭೋಗಲೋಲುಪತೆಯೇ ಹೆಚ್ಚಾಗಿ, ವಸ್ತು ವಿಷಯ ಮತ್ತು ವ್ಯಕ್ತಿಗಳನ್ನು ಪಡೆಯುವ, ಅವುಗಳ ಮೇಲೆ ಸ್ವಾಮಿತ್ವವನ್ನು ಸ್ಥಾಪಿಸುವ ಮತ್ತು ನಿರಂತರವಾಗಿ ತಮ್ಮದಾಗಿಸಿಕೊಂಡು ಅನುಭವಿಸುವ ಭಾವಗಳಿಂದ ನಮ್ಮ ಸಮಾಜ ಮತ್ತು ಸಂಸ್ಕಾರಗಳ ವಿಧ್ಯಮಾನಗಳು ತುಂಬಿಹೋದವು. ನಮ್ಮ ಭಾರತೀಯ ಸಮಾಜದ ಮೂಲ ತತ್ವಗಳಾದ, ಸತ್ಯ ಧರ್ಮ ನ್ಯಾಯ ನೀತಿಗಳು ನೇಪತ್ಯಕ್ಕೆ ಸರಿಯತೊಡಗಿದವು. ಇಂದು ಬಹಳ ಸತ್ಯವಂತ, ಬಹಳ ಧರ್ಮಿಷ್ಠ ನಿಗೆ ” ಹುಚ್ಚ” ನೆಂಬ ಬಿರುದನ್ನು ಕೊಡಲಾಗುತ್ತೆ. ” ಋತಂಚ ಸ್ವಾಧ್ಯಾಯ ಪ್ರವಚನೇಚ, ಸತ್ಯಂಚ ಸ್ವಾಧ್ಯಾಯ ಪ್ರವಚನೇಚ ” ಎನ್ನುವ ಉಪನಿಷತ್ತಿನ ವಾಕ್ಕುಗಳಿಗೆ ಅರ್ಥವೇ ಇಲ್ಲದಾಗಿದೆ. ಜೀವನದಲ್ಲಿ ಸ್ವಾರಸ್ಯವಿಲ್ಲದಾಗಿದೆ.

ಇಂದು ತಂದೆ ತಾಯಿ ಮತ್ತು ಮಕ್ಕಳ ನಡುವೆಯಾಗಲಿ, ಅಣ್ಣತಮ್ಮ, ಅಕ್ಕಾ ತಂಗಿಯರ ನಡುವೆಯಾಗಲೀ ಬಂಧುಬಳಗದೊಡನೆಯಾಗಲೀ, ಸ್ನೇಹಿತರೊಡನೆಯಾಗಲೀ ಪರಸ್ಪರ ಬಾಂಧವ್ಯವೇ ಇಲ್ಲ. ಎಲ್ಲ ವ್ಯವಹಾರವಾಗಿಬಿಟ್ಟಿದೆ. ಪ್ರೀತಿ – ಪ್ರೇಮಗಳು, ಸ್ನೇಹ – ಸೌಹಾರ್ದತೆಗಳು, ಮಮತೆ – ಅನುರಾಗಗಳು ಕೇವಲ ಬೂಟಾಟಿಕೆಯಾಗಿಬಿಟ್ಟಿದೆ. ಇದರ ವಿಷಯ ಮಾತನಾಡಿದರೆ, ” ಏನು ಸ್ವಾಮಿ ಮಾಡುವುದು, ಕಲಿಕಾಲ” ಎನ್ನುವ ಮಾತು ನಮಗೆ ಕೇಳಬರುತ್ತದೆ. ಬಹುಶಃ ಆ ಪರಮಾತ್ಮನಿಗೆ ಜನರನ್ನು ಬದಲಾಯಿಸುವ ಅಥವಾ ಮಾರ್ಪಾಡು ಮಾಡುವ ತಂತ್ರವಿರಬಹುದು. ವಿಧಿಯೇ ಈ ರೀತಿಯಿರಬಹುದು. ಆದರೂ ಇಂದಿಗೂ ಸತ್ಯ, ಧರ್ಮ, ನ್ಯಾಯ, ನೀತಿ, ಪ್ರೇಮ, ಅನುರಾಗ, ಮುಂತಾದ ಸದ್ಭಾವಗಳಿಗೆ ಬೆಲೆ ಇದೆ ಎಂದು ಅರಿತು ಅವುಗಳನ್ನು ಉಳಿಸಿಕೊಂಡು ಬೆಳೆಸಿಕೊಂಡರೆ, ಕಾಲಕ್ರಮೇಣ ಎಲ್ಲ ಬದಲಾಗಿ ಮತ್ತೆ ಈ ಜಗತ್ತು ಸುಂದರವಾಗಬಹುದು. ಆದರೆ ಇಡೀ ಸಮಾಜವೇ ಬದಲಾಗಬೇಕಾದರೆ ಒಂದು ದೊಡ್ಡ ಶತ್ರ ಚಿಕಿತ್ಸೆಯೇ ಬೇಕಾಗಿದೆ ಎಂದು ಅನ್ನಿಸುತ್ತದೆ. ಅದನ್ನು ಮಾಡುವವನೇ ಆ ಪರಮಾತ್ಮ. ಅವನಕೃಪೆಗಾಗಿ ಕಾಯುತ್ತಾ ಇರಬೇಕು.

ಹಾಗಾಗಿ ನಾವು ” ಸರ್ವೇ ಜನಾಃ ಸುಜನಾ ಭವಂತು ಸರ್ವೇ ಸುಜನಾಃ ಸುಖಿನಃ ಸಂತು” ಎಂದು ಹಾರೈಸುತ್ತಾ ಮುಂದಿನ ಕಗ್ಗಕ್ಕೆ ಹೋಗೋಣ.