RSS

Monthly Archives: ಅಕ್ಟೋಬರ್ 2012

ರಸ ಚೆನ್ನುಡಿ

ಪ್ರತೀ ಸಂಕಷ್ಟದ ಸ್ಥಿತಿಯನ್ನೂ ಎದುರಿಸುವಾಗ, ಸೋಲನ್ನೊಪ್ಪಿಕೊಳ್ಳಬೇಡಿ.
ಪ್ರತೀ ಸೋಲೂ ಸಮಯಕಳೆದಂತೆ ಒಂದು ಉತ್ತಮ ದಿನವನ್ನು ನಿಮ್ಮ ಪಾಲಿಗೆ ತರುತ್ತದೆ – ಅನಾಮಿಕ.

Advertisements
 

ರಸಧಾರೆ – ೨೪೪

ಒಲ್ಲೆನೆನುವುದದಾರ್ ಅಹಿಂಸೆತತ್ವದ ಸೊಬಗ

ಸಲ್ಲಿಸುವೆನಾ ವ್ರತವನೆನಲೊಂದು ತೊಡಕು

ಹುಲ್ಲೆಯನು ತಿನುವ ಹುಲಿಯೊಣ ಹುಲ್ಲನುಣಲಹುದೆ

ಎಲ್ಲಿ ಸೃಷ್ಟಿಯಲಿ ದಯೆ ? ಮಂಕುತಿಮ್ಮ

ಒಲ್ಲೆನೆನುವುದದಾರ್ = ಒಲ್ಲೆನು+ಎನುವುದು+ ಅದು + ಯಾರ್//ಸಲ್ಲಿಸುವೆನಾ= ಸಲ್ಲಿಸುವೆ + ನಾ// ವ್ರತವನೆನಲೊಂದು = ವ್ರತವನು+ ಎನಲು+ಒಂದು//

ಹುಲಿಯೊಣ = ಹುಲಿ+ ಒಣ// ಹುಲ್ಲನುಣಲಹುದೆ = ಹುಲ್ಲನು + ಉಣಲು+ ಅಹುದೇ.

ಒಲ್ಲೆನು = ಬೇಡ// ತೊಡಕು = ತೊಂದರೆ // ಹುಲ್ಲೆ= ಜಿಂಕೆ

ಅಹಿಂಸೆಯ ಪ್ರತಿಪಾದನೆಯನ್ನು ಬೇಡವೆನ್ನುವವರು ಯಾರು. ಆದರೆ ಅಹಿಂಸಾ ವ್ರತ ಪಾಲನೆಯಲ್ಲಿ ತೊಡಕಿದೆ. ತನ್ನ ಆಹಾರಕ್ಕೆ ಜಿಂಕೆ ಮತ್ತಿತರ ಮೇಲೆ ಅಧಾರ ಪಟ್ಟಿರುವ, ಹುಲಿಯು ಹುಲ್ಲ ತಿಂದು ಜೀವಿಸಲಿಕ್ಕೆ ಆಗುತ್ತದೆಯೇ. ಈ ಸೃಷ್ಟಿಯಲಿ ದಯೆ ಎಲ್ಲಿದೆ? ಎಂದು ಪ್ರಶ್ನೆಯನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಬಹುಶಃ ಈ ಜಗತ್ತಿನಲ್ಲಿರುವ ಸಕಲ ಪ್ರಾಣಿಗಳಿಗೂ ನಿಗದಿತ ಆಹಾರವನ್ನು ಆ ಪರಮಾತ್ಮ ಸೃಷ್ಟಿಸಿದ್ದಾನೆ. ಬೇರೆ ಬೇರೆ ಪ್ರಾಣಿಗಳ ಆಹಾರ ಪದ್ದತಿಯನ್ನು ನೋಡಿದರೆ ನಮಗೆ ಬಹಳ ಸೋಜಿಗವೆನಿಸುತ್ತದೆ. ನೋಡಿ ಬೃಹತ್ತಾದ ಆನೆ ತಿನ್ನುವುದು ಸೊಪ್ಪು ಸೊದೆ. ಒಂದು ಪುಟ್ಟ ಹಲ್ಲಿ ತಿನ್ನುವುದು ಹುಳ – ಹುಪ್ಪಟೆ, ಕೀಟ – ಕ್ರಿಮಿಗಳನ್ನು. ಸ್ವಾಭಾವಿಕವಾಗಿ ವಿಧಿಸಲ್ಪಟ್ಟ ಆಹಾರವನ್ನು ತಿನ್ನುವುದು ಆಯಾ ಪ್ರಾಣಿಗಳಿಗೆ ಸಹಜವಾಗೇ ಇದೆ. ಅಂತಹ ಆಹಾರವನ್ನು ಸಂಪಾದಿಸಲು ಆ ಪ್ರಾಣಿಗಳು ಮಾಡುವ ಪ್ರಾಮಾಣಿಕ ಪ್ರಯತ್ನವನ್ನು " ಹಿಂಸೆ " ಎಂದರೆ ಅದು ಧರ್ಮವಲ್ಲ. ಏಕೆಂದರೆ ಮಾನ್ಯ ಗುಂಡಪ್ಪನವರು ಹೇಳುವಂತೆ ಜಿಂಕೆ ಹುಲ್ಲು ತಿನ್ನುತ್ತದೆ. ಹಾಗಂದು ಹುಲಿಯೂ ಹುಲ್ಲ ತಿನ್ನಲಾಗುವುದೇ? ಸಮುದ್ರದಲ್ಲಿನ ದೊಡ್ಡ ಮೀನುಗಳು ತಮಗಿಂತ ಸಣ್ಣ ಮೀನುಗಳನ್ನು ತಿಂದೇ ಜೀವಿಸಬೇಕು. ಏಕೆಂದರೆ ಅವಕ್ಕೆ ಬೇರೆ ಆಹಾರವನ್ನು ಆ ಪರಮಾತ್ಮ ಸೃಷ್ಟಿಸಿಯೇ ಇಲ್ಲ ಅದನ್ನು "ಹಿಂಸೆ" ಎನ್ನಲಾಗುವುದೇ? ಹಾಗಾಗಿ ನೈಸರ್ಗಿಕವಾಗಿ ಯಾವ ಯಾವ ಪ್ರಾಣಿಗೆ ಸ್ವಾಭಿವಿಕವಾಗಿ ಯಾವುದು ಆಹಾರವೋ ಅದನ್ನು ಪಡೆಯುವ ಪ್ರಯತ್ನವನ್ನು ಹಿಂಸೆ ಎನ್ನಬಾರದು

"ಅಹಿಂಸಾ ಪರಮೋ ಧರ್ಮ:" ಎನ್ನುವುದು ಎಲ್ಲರಿಗೂ ಗೊತ್ತಿರುವ ಒಂದು ಪರಮೋಚ್ಚ ಉಕ್ತಿ. ಆದರೆ ಹಿಂಸೆ ಎಂದರೇನು? ಇದು ಜಿಜ್ಞಾಸೆಗೆ ಒಳಪಡುವಂಥಾ ವಿಚಾರ. ಮಾನವ ಪ್ರಪಂಚದಲ್ಲಿ ಮಾತ್ರ ಈ "ಹಿಂಸೆ " "ಅಹಿಂಸೆ" ಎಂಬ ಪದಗಳಿಗೆ ಬಹಳ ಮಹತ್ವ ಉಂಟು. ಮನುಷ್ಯ ಸಂಗ ಜೀವನವನ್ನು ಶುರುಮಾಡಿದಮೇಲೆ, ಹೆಚ್ಚು ಹೆಚ್ಚು ಸುಸಂಸ್ಕೃತನಾದಹಾಗೆ, ಮನುಷ್ಯಪ್ರಪಂಚದಲ್ಲಿ ಶಾಂತಿಯನ್ನು ಕಾಪಾಡಲು " ಅಹಿಂಸೆಯ" ಪಾತ್ರ ಹೆಚ್ಚುತ್ತಾ ಹೋಯಿತು. ತನ್ನ ಕ್ರೌರ್ಯ ತನಗೆ ಅಸಹ್ಯವೆನಿಸಿದಾಗ ಮಾನವ ಅಹಿಂಸೆಯನ್ನು ಪ್ರತಿಪಾದಿಸುತ್ತಾ ಹೋದ. ಆದರೆ ಹಿಂಸೆಯಂದರೆ ಕೇವಲ ದೈಹಿಕ ಹಿಂಸೆಗೆ ಮಾತ್ರ ಸೀಮಿತಗೊಳಿಸಬಾರದು. ಜಾತಿ, ಧರ್ಮ, ಭಾಷೆ, ವರ್ಣ ಮುಂತಾದ ವಿಷಯಗಳಿಗೆ ಸಂಬಂಧಪಟ್ಟ ಮಾನಸಿಕ, ಸಾಂಸ್ಕೃತಿಕ ಅತ್ಯಾಚಾರವನ್ನೂ"ಹಿಂಸೆ"

ಯಂದೇ ಪರಿಗಣಿಸಬೇಕು.

ದೌರ್ಭಾಗ್ಯವೆಂದರೆ ಎಲ್ಲ ಪ್ರಾಣಿಗಳಿಗಿಂತ ಸಂಸ್ಕಾರಗಳಲ್ಲಿ ಬುದ್ಧಿಶಕ್ತಿಯಲ್ಲಿ ಕ್ರಿಯಾಶೀಲತೆಯಲ್ಲಿ ಔನ್ನತ್ಯವನ್ನು ಪಡೆದ ಪ್ರಾಣಿಯಾದ ನಮ್ಮ ಮನುಷ್ಯ, ರಾಕ್ಷಸ ಪ್ರವೃತ್ತಿಯಿಂದ, ಈ ಜಗತ್ತಿನಲ್ಲಿರುವುದೆಲ್ಲವೂ ನನಗೆ ಆಹಾರವಾಗಿದೆ ಎಂದು ಬೀಗಿ, ಎಲ್ಲ ಪ್ರಾಣಿಗಳನ್ನೂತಿನ್ನುವ ಅಭ್ಯಾಸ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲ ಅವುಗಳ ಎಲ್ಲ ಭಾಗಗಳನ್ನೂ ಹಲವಾರು ರೀತಿಯ ಉಪಯೋಗಕ್ಕೆ ಬಳಸಿಕೊಂಡಿದ್ದಾನೆ. ಹಾಗಾಗಿ ಪ್ರಾಣಿ ಸಂಕುಲದ ಸಂಖ್ಯೆ ಕಡಿಮೆಯಾಗುತ್ತಿದೆ. ಇವನು ಮಾಡುವುದು ಹಿಂಸೆ. ಆದರೆ ತನ್ನ ಅತೀ ಬುದ್ಧಿವಂತಿಕೆಯಿಂದ ತಾನು ಮಾಡುವ ಕ್ರೌರ್ಯಕ್ಕೆ ಸಮರ್ಥನೆಯನ್ನು ನೀಡುವ ಹಲವಾರು ವಿಧಾನಗಳು ಇವನಿಗೆ ಗೊತ್ತು. ಈ ಜಗತ್ತಿನಲ್ಲಿ ಎಲ್ಲ ಪ್ರಾಣಿಗಳಿಗಿಂತ ಮನುಷ್ಯನೇ ಅತೀ ದುಷ್ಟ. ಏಕೆಂದರೆ ಅನ್ಯ ಪ್ರಾಣಿಗಳು ತಮ್ಮ ಅಸ್ಥಿತ್ವಕ್ಕೆ ಹಿಂಸೆಯಲ್ಲಿ ತೊಡಗಿದರೆ ಮನುಷ್ಯ ಮಾತ್ರ ಅವಶ್ಯಕತೆ ಇಲ್ಲದಿದ್ದರೂ ತನ್ನ ಸ್ವಾರ್ಥಸಾಧನೆಗೆ ಹಿಂಸೆಯಲ್ಲಿ ತೊಡಗುತ್ತಾನೆ ಪ್ರಾಣಿಗಳ ಹಿಂಸೆ " ಅಧರ್ಮ"ವಲ್ಲ ಆದರೆ ಮನುಷ್ಯನ ಹಿಂಸೆ ಶುದ್ಧ "ಅಧರ್ಮ."

ಆದ್ದರಿಂದ ನಾವು ನಮ್ಮ ನಡವಳಿಕೆ ಯಾರಿಗಾದರೂ ಹಿಂಸೆಯಾಗುವುದೋ ಇಲ್ಲವೋ ಎಂದು ನಮ್ಮ ಪ್ರತೀ ಹೆಜ್ಜೆಯಲ್ಲೂ ಜಾಗರೂಕರಾಗಿ ನಡೆದುಕೊಂಡು ನಮ್ಮಿಂದ ಯಾರಿಗೂ ಹಿಂಸೆಯಾಗದಿದ್ದರೆ ನಮ್ಮ ಜೀವನ ಸಾರ್ಥಕವಾಗುತ್ತದೆ.

 

ರಸ ಚೆನ್ನುಡಿ.

ನೀವು ನಿಮ್ಮ ಹೃದಯವಂತಿಕೆಯನ್ನು ಜಗತ್ತಿನೊಂದಿಗೆ ಹಂಚಿಕೊಂಡಾಗ ನೀವು ಖಂಡಿತ ಜೀವನದಲ್ಲಿ ಗೆಲ್ಲುತ್ತೀರಿ

ನಿಮ್ಮ ಹೃದಯವಂತಿಕೆ ಜಗತ್ತಿನಲ್ಲಿ ಪ್ರತಿಧ್ವನಿಸಿ ನೀವು ಕೊಟ್ಟದ್ದು ನಿಮ್ಮನ್ನೇ ಬಂದು ಸೇರುತ್ತದೆ – ಅನಾಮಿಕ .

 

ರಸ ಚೆನ್ನುಡಿ

ಮನುಷ್ಯ ಸಮಾಜ ಮುಖಿಯಾಗಿರಬೇಕು. ಎಲ್ಲರೊಳಬ್ಬನಂತೆ ಇರಬೇಕು.
"ನಾನು ನನ್ನದು" ಎಂಬ "ನಾನತ್ವ"ದಿಂದ ಹೊರಬಂದರೆ ಮಾತ್ರ ಅದು ಸಾಧ್ಯ – ಅನಾಮಿಕ

 

ರಸಧಾರೆ – ೨೪೩

ಸಮವರ್ತಿಗಳು ಜಗದೊಳಿಬ್ಬರೇ ದಿಟವರಿಯೆ
ಯಮರಾಜನೊಬ್ಬ ಜಾಠರರಾಜನೊಬ್ಬ
ಶ್ರಮವನನುದಿನಮುಮಾಗಿಪನೊಬ್ಬನೆಲ್ಲವನು
ಶಮಿಸಿ ಮುಗಿಸುವನೊಬ್ಬ – ಮಂಕುತಿಮ್ಮ

ಜಗದೊಳಿಬ್ಬರೇ= ಜಗದೊಳು+ಇಬ್ಬರೇ// ದಿಟವರಿಯೆ = ದಿಟವ + ಅರಿಯೆ// ಶ್ರಮವನನುದಿನಮುಮಾಗಿಪನೊಬ್ಬನೆಲ್ಲವನು = ಶ್ರಮವನು+ಅನುದಿನಮುಂ+ ಆಗಿಪನು+ಒಬ್ಬನು+ ಎಲ್ಲವನು// ಮುಗಿಸುವನೊಬ್ಬ = ಮುಗಿಸುವವನು + ಒಬ್ಬ.

ದಿಟವ=ಸತ್ಯವನು// ಅರಿಯೆ = ತಿಳಿದುಕೋ//ಜಾಠರ= ಜಠರ,ಹೊಟ್ಟೆ// ಶ್ರಮವನು = ದುಡಿಮೆಯನು// ಅನುದಿನಮುಂ = ಪ್ರತಿನಿತ್ಯವೂ// ಆಗಿಪನು= ಆಗುವಂತೆ ಮಾಡುವನು// ಶಮಿಸಿ = ಶಮನಗೊಳಿಸಿ

ಈ ಜಗದಲ್ಲಿ ಸಮಭಾವವಿರುವವರು ಇಬ್ಬರೇ. ಒಬ್ಬ ಜಠರರಾಜ.ಇನ್ನೊಬ್ಬ ಯಮರಾಜ. ಒಬ್ಬ ನಮ್ಮೆಲ್ಲರನ್ನೂ ಹೊಟ್ಟೆಯ ಹಸಿವನ್ನು ನೀಗಿಸಿಕೊಳ್ಳಲು ಪ್ರತಿನಿತ್ಯ ಶ್ರಮಪಡುವಂತೆ ಪ್ರೇರೇಪಿಸುವ, ಜಠರದಲ್ಲಿ ಅಡಗಿರುವ ರಾಜ, "ವೈಶ್ವಾನರ" ಮತ್ತು ನಮ್ಮ ಜೀವನದ ಶ್ರಮವನ್ನೆಲ್ಲ ಶಮನಗೊಳಿಸಿ ಜೀವ ಮತ್ತು ದೇಹದ ಸಂಬಂಧವನ್ನು ಅಂತ್ಯಗೊಳಿಸುವವನು ಆ ಯಮರಾಜ. ಈ ಸತ್ಯವನ್ನು ನಾವು ಅರಿತುಕೊಳ್ಳಬೇಕು ಎಂದು ಒಂದು ಜಗತ್ ಸೂಕ್ಷ್ಮವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಪ್ರತಿಯೊಬ್ಬ ಜೀವಿಯೂ ತನ್ನ ದೇಹಧಾರಣೆಗೆ ಆಹಾರವನ್ನು ಸೇವಿಸಲೇಬೇಕು. ಆ ಆಹಾರವನ್ನು ಪಡೆಯಲು ಶ್ರಮಪಡಲೇಬೇಕು. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಜೀವಿಗಳ ಜಠರದಲ್ಲಿ ನಾನು " ವೈಶ್ವಾನರ" ರೂಪದಲ್ಲಿ ಇದ್ದೇನೆ ಎಂದಿದ್ದಾನೆ. ಜಠರದಲ್ಲಿರುವುದು ಒಂದು ಪ್ರಭಲ ಆಮ್ಲ(concentrated ಹೈಡ್ರೋಕ್ಲೋರಿಕ್ ಆಸಿಡ್). ಅದನ್ನು ಜಠರಾಗ್ನಿ ಎನ್ನುತ್ತಾರೆ. ನಾವು ಊಟಮಾಡುವುದು ಒಂದು ಯಜ್ಞಪ್ರಕ್ರಿಯೆ. ಆ ಜಠರಾಗ್ನಿಗೆ ಆಹುತಿಯಂತೆ ಆಹಾರವನ್ನು ಕೊಟ್ಟಾಗ, ಆ ಅಗ್ನಿ ಆಹಾರವನ್ನು ಜೀರ್ಣವಾಗಿಸಿ, ಉತ್ಪತ್ತಿಯಾದ ಸತ್ವವನ್ನು ಶಕ್ತಿಯಂತೆ ನಮ್ಮ ದೇಹದ ಎಲ್ಲಾ ಭಾಗಗಳಿಗೂ ಕಳುಹಿಸುತ್ತದೆ, ಹೋಮದಲ್ಲಿ ಅಗ್ನಿಯ ಮೂಲಕ ದೇವತೆಗಳಿಗೆ ಹವಿಸ್ಸನ್ನು ಸಮರ್ಪಿಸಿದಂತೆ. ಇದನ್ನೇ ಮಾನ್ಯ ಗುಂಡಪ್ಪನವರು "ಜಠರರಾಜ" ನೆಂದಿದ್ದಾರೆ. ಆ ಆಹಾರ ಸಂಪಾದನೆಗೆ, ಮೇಲು ಕೀಳೆಂಬ ಭಾವಿಲ್ಲದೆ, ಸಮತೆಯಿಂದ ಎಲ್ಲರೂ ಪ್ರತಿನಿತ್ಯ ಶ್ರಮವಹಿಸಬೇಕು. ಹಾಗಾಗಿ ಈ ಅಗ್ನಿ ಸಮತೆಯನ್ನು ಹರಡುವ "ಸಮವರ್ತಿ". ಎಂದು ಸೂಕ್ತವಾಗಿ ಹೇಳಿದ್ದಾರೆ

ಮತ್ತೊಬ್ಬ ಸಮವರ್ತಿ ಯಮ. ಯಮನೆಂದರೆ ಕಾಲ. ಈ ಸೃಷ್ಟಿಯಲ್ಲಿ ಜನಿಸಿದ ಪ್ರತಿಯೊಂದು ಜೀವಿಗೂ ಒಂದು ನಿರ್ಧಿಷ್ಟವಾದ ಆಯಸ್ಸು ಉಂಟು. ಅದು ಮುಗಿದಮೇಲೆ ಎಲ್ಲರ ಜೀವನವೂ ಕೊನೆಯಾಗಲೇಬೇಕು. ಈ ಯಮನು, ಪ್ರತಿಯೊಂದು ಜೀವಿಯನ್ನೂ, ಬಡವ – ಬಲ್ಲಿದ, ಸ್ತ್ರೀ – ಪುರುಷ, ಜ್ಞಾನಿ – ಅಜ್ಞಾನಿ, ಮನುಷ್ಯ – ಇತರೆ ಪ್ರಾಣಿ, ಎಂಬ ಬೇಧಭಾವವಿಲ್ಲದೆ ಶುದ್ಧ ನಿಸ್ಪ್ರುಹತೆಯಿಂದ, ನಮ್ಮ ನಮ್ಮ ಕಾಲ ಬಂದಾಗ, ನಮ್ಮ ಜೀವನವನ್ನು "ಶಮನ" ಮಾಡುತ್ತಾನೆ. ಅಂದರೆ ಅಂತ್ಯಗೊಳಿಸುತ್ತಾನೆ. ಹಾಗಾಗಿ ಅವನೂ ಒಬ್ಬ "ಸಮವರ್ತಿ".

ಹೀಗೆ ಜಗತ್ತಿನ ಹಲವಾರು ಅಸಮತೆಗಳಲ್ಲಿ ಈ ಇಬ್ಬರು "ಸಮವರ್ತಿ"ಗಳನ್ನು ಗುರುತಿಸಿದ್ದಾರೆ ಮಾನ್ಯ ಗುಂಡಪ್ಪನವರು.ಈ ಸತ್ಯವನ್ನು ಅರಿತುಕೊಳ್ಳಬೇಕು ಎಂದು ಆದೇಶವನ್ನೂ ಮಾಡಿದ್ದಾರೆ. ನಮ್ಮ ವೇದಾಧಾರಿತ ಗ್ರಂಥಗಳಲ್ಲಿ ಇದರ ಉಲ್ಲೇಖ ವಿಫುಲವಾಗಿ ಸಿಗುತ್ತದೆ. ಅದನ್ನು ಅರಿಯುವ ಪ್ರಯತ್ನವನ್ನು ನಾವೂ ಸಹ ಮಾಡೋಣವೆ?

 

ರಸಧಾರೆ -೨೪೨

ಐಕ್ಯ ನಾನಾತ್ವಗಳು ನಿಯತಿ ಸ್ವತಂತ್ರಗಳು

ತರ್ಕ್ಯ ನಿಸ್ತರ್ಕ್ಯಗಳು ಬೆರೆತು ಚಿತ್ರದಲಿ
ಶಕ್ಯಮುಂ ಪುರುಷತಂತ್ರಕ್ಕಶಕ್ಯಮುಮಾದ
ಸಿಕ್ಕುಗಳ ಕತೆ ಜಗ – ಮಂಕುತಿಮ್ಮ

ಪುರುಷತಂತ್ರಕ್ಕಶಕ್ಯಮುಮಾದ = ಪುರುಷ + ತಂತ್ರಕ್ಕೆ+ಆಶಕ್ಯಮುಂ+ ಆದ.

ಐಕ್ಯ=ಒಂದಾದ// ನಾನಾತ್ವ=ಬೇರೆ ಬೇರೆಯಾದ// ನಿಯತಿ=ನಿಯಮಕ್ಕೊಳಗಾದ// ತರ್ಕ್ಯ=ತರ್ಕಕ್ಕೆ ಒಳಪಡುವಂತ//ನಿಸ್ತರ್ಕ್ಯ+ ತರ್ಕದ ಪರಿಧಿಯೊಳಗಿಲ್ಲದ//ಶಕ್ಯಮುಂ= ಸಾಧ್ಯವಾದ//ಪುರುಷತಂತ್ರಕ್ಕೆ = ಜೀವಿಗಳಪ್ರಯತ್ನಕ್ಕೆ//

ಆಶಕ್ಯಮುಂಆದ= ಅಸಾಧ್ಯವಾದ// ಸಿಕ್ಕುಗಳ= ಗಂಟುಗಳ

ನಮ್ಮ ಜಗತ್ತುಒಟ್ಟಾದ , ಬೇರೆ ಬೇರೆಯಾದ, ನಿಯಂತ್ರಕ್ಕೊಳಗಾದ, ಸ್ವತಂತ್ರವಾದ, ತರ್ಕಿಸಬಹುದಾದ, ತರ್ಕಕ್ಕೆ ನಿಲುಕದ ವಿಷಯಗಳು ಚಿತ್ರವಿಚಿತ್ರವಾಗಿ ಸಮ್ಮಿಶ್ರವಾಗಿ ಮತ್ತು ಮಾನವರಿಗೆ ಸಾಧ್ಯವಾದ ಮತ್ತು ಅಸಾಧ್ಯವಾದ ವಿಷಯಮತ್ತು ಕಾರ್ಯಗಳಿಂದ ಕೂಡಿದ ಒಗಟು ಒಗಟಾದ, ಗಂಟು ಗಂಟಾದ ವಿಷಯಗಳಿಂದ ಕೂಡಿದೆ ಎಂದು ಹಲವು ವೈವಿಧ್ಯತೆಗಳನ್ನು ಈ ಕಗ್ಗದಲ್ಲಿ ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

ಈ ಜಗತ್ತಿನಲ್ಲಿ ಇರುವುದು, ಪ್ರಾಣಿಸಂಕುಲ, ಕೀಟ ಜಗತ್ತು, ಸಸ್ಯವರ್ಗ, ಪಕ್ಷಿಗಳ ಗುಂಪು.ಪುಷ್ಪ ಸಮೂಹ ಮತ್ತು ಜಲಚರಗಳ ಗುಂಪು.ಇವೆಲ್ಲವನ್ನೂ ಒಟ್ಟಾರೆ ತೆಗೆದುಕೊಂಡರೆಒಂದೊಂದೂ ಒಂದೊಂದುಗುಂಪಿನಂತೆ. ಆದರೆ ಒಂದೊಂದು ಗುಂಪಿನಲ್ಲೂ ಆಕಾರದ, ಬಣ್ಣದ, ಸ್ವಭಾವದ ವೈವಿಧ್ಯತೆ ಇರುವುದರಿಂದ ಒಂದು ಮತ್ತೊಂದರಿಂದ ಬೇರೆ ಬೇರೆಯಾಗಿ ತೋರುತ್ತದೆ. ಇವೆಲ್ಲವೂ ಪ್ರಕೃತಿಯ ನಿಯಂತ್ರಣದಲ್ಲಿ ಇದ್ದರೂ ಸೃಷ್ಟಿಯ ಪ್ರತಿಯೊಂದಕ್ಕೂ ಕಿಂಚಿತ್ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ, ಆ ಪರಮಾತ್ಮ.

ಸೃಷ್ಟಿಯ ಕೆಲವನ್ನು ವಿಚಾರದಿಂದ, ತರ್ಕದಿಂದ ನಾವು ಅರಿತುಕೊಳ್ಳಬಹುದು.ಉದಾಹರಣೆಗೆ, ವಸ್ತುವಿಷಯಗಳ ಪರಿಚಯ ನಮಗೆ ಮೇಲ್ನೋಟಕ್ಕೆ ಆಗುತ್ತದೆ. ಅವುಗಳ ಸ್ವಭಾವ ಮತ್ತು ಉಪಯೋಗಗಳು ವಿಚಾರದಿಂದ ತಿಳಿಯುತ್ತದೆ. ಆದರೆ "ಅವು ಏಕೆ "ಹೀಗೇ " ಇವೆ " ಹಾಗೇಕೆ" ಇಲ್ಲ" ಎಂಬ ಪ್ರಶ್ನೆ ಬಂದಾಗ, ಅದು ನಮ್ಮ ತರ್ಕ ಮತ್ತು ವಿಚಾರದ ಪರಿಧಿಯನ್ನು ದಾಟಿ ಹೋಗುತ್ತದೆ. ಆಗ ಅದು ಗುಂಡಪ್ಪನವರು ಹೇಳುವಂತೆ " ನಿಸ್ತರ್ಕ್ಯ"ಆಗಿಬಿಡುತ್ತದೆ .

ಈ ಜಗತ್ತು ಎಷ್ಟು ಚಿತ್ರ ವಿಚಿತ್ರಗಳಿಂದ ಕೂಡಿದೆಎಂದರೆ, ನಾವು ಎಷ್ಟು ದೂರ ಬೇಕಾದರೂ ಯೋಚಿಸಬಹುದು. ಏನನ್ನಾದರೂ ಮಾಡಬಹುದೆಂದು ಯೋಜನೆ ಹಾಕಬಹುದು.ಆದರೆನಮ್ಮ ಸಾಧನೆಗೆ ಒಂದು ಮಿತಿಯಿರುತ್ತದೆ. ಅದನ್ನು ದಾಟಿ ನಾವು ಮುಂದಕ್ಕೆ ಹೋಗಲಾರೆವು. ಮನುಷ್ಯ ಪ್ರಯತ್ನಕ್ಕೂ ಒಂದು ಮಿತಿಯಿರುತ್ತದೆ. ಪ್ರತಿ ಮನುಷ್ಯನಿಗೂ ಅವನವನದೇ ಆದ ಮಿತಿಯಿರುತ್ತದೆ.ಇದಕ್ಕೆ ಕಾರಣಗಳು ಹತ್ತು ಹಲವಾರು. ದೇಹಬಲ, ಮನೋಬಲ, ಸ್ವಭಾವ, ಬುದ್ಧಿಬಲಗಳ ಮೇಲೆ ಒಂದು ವ್ಯಕ್ತಿಯ ಸಾಧನೆಯ ಮಿತಿ ಇರುತ್ತದೆ.

ಇದು ಅನ್ಯ ಪ್ರಾಣಿ ಮತ್ತು ಇತರೆ ಗುಂಪುಗಳಿಗೂ ಅನ್ವಯವಾಗುತ್ತದೆ. ಸೃಷ್ಟಿಯ ಎಲ್ಲಕ್ಕೂ ಒಂದು ಮಿತಿ ಇದೆ.ಹಾಗೆಯೇ ನಮ್ಮ ಸಾಮರ್ಥ್ಯಕ್ಕೂ ಒಂದು ಮಿತಿ ಇದೆ. ಇಂತಹ ಜಗತ್ತು ಗೋಜಲುಗೋಜಲಾಗಿದೆ, ಕಗ್ಗಂಟಾಗಿದೆ. ನಮ್ಮ ಪರಿಮಿತ ಮತಿಯಿಂದ ಇಲ್ಲಿರುವುದನ್ನೆಲ್ಲ ಅರ್ಥಮಾಡಿಕೊಳ್ಳುವುದು ಅಸಾಧ್ಯ.

ಆದರೆ ಸೃಷ್ಟಿಕರ್ತನಿಗೆ ಮಿತಿಯಿಲ್ಲದ ಸಾಮರ್ಥ್ಯ. ಅಂತ ಮಿತಿಯಿಲ್ಲದ ಸಾಮರ್ಥ್ಯದಿಂದ ಹಲವಾರು ಮಿತಿಗಳಿಂದ, ರಹಸ್ಯಗಳಿಂದ, ವೈವಿಧ್ಯತೆಯಿಂದ, ವರ್ಣಮಯವಾಗಿ ಈ ಜಗತ್ತನ್ನು ಸೃಷ್ಟಿಸಿದ, ಮತ್ತು ನಮ್ಮನ್ನು ಇಲ್ಲಿ, ಈ ಎಲ್ಲ ವೈವಿಧ್ಯತೆಗಳನ್ನೂ ನೋಡುತ್ತಾ ಅನುಭವಿಸುತ್ತಾ,, ನಮ್ಮ ನಮ್ಮ ಮಿತಿಗಳಲ್ಲಿ ಸಾಧಿಸುತ್ತಾ ಆನಂದದಿಂದ ಜೀವಿಸಲು ಅನುವು ಮಾಡಿಕೊಟ್ಟ ಆ ಪರಮಾತ್ಮನಿಗೆ ನಮಿಸೋಣ, ಕೃತಜ್ಞತೆಯನ್ನು ಸಲ್ಲಿಸೋಣ.

 

ರಸ ಚೆನ್ನುಡಿ

ನಮ್ಮ ಬಂಧುಗಳ, ಸೇವಕ ವರ್ಗದ,ಬುದ್ಧಿಯ ಮತ್ತು ಧೈರ್ಯದ
ನಿಜ ರೂಪ ನಾವು ಅಪ್ಪತ್ತಿನಲ್ಲಿ ಸಿಕ್ಕಿಕೊಂಡಾಗ ಬಯಲಾಗುತ್ತದೆ.- ಸುಭಾಷಿತ ಮಂಜರಿ.