RSS

Monthly Archives: ನವೆಂಬರ್ 2012

ರಸಧಾರೆ – ೨೬೨

ಒಂದು ಕಣ್ಣಳುವಂದು ಮತ್ತೊಂದ ತಳ್ಕೈಸಿ
ಅಂದ ಚೆಂದಗಳ ಜನವರಸುವುದು ಬಾಳೊಳ್
ಬಂದು ಮೋಹವೋ ಯಶವೋ ವೈರವೋ ವೈಭವವೋ
ಬಂದಿಪುದು ಜಗಕವರ – ಮಂಕುತಿಮ್ಮ.

ಕಣ್ಣಳುವಂದು = ಕಣ್ಣ + ಅಳುವೊಂದು

ತಳ್ಕೈಸಿ = ತಬ್ಬಿಕೊಂಡು // ಜನವರಸುವುದು = ಜನರು ಹುಡುಕುವುದು.

ಒಬ್ಬರು ಅಳುತ್ತಿದ್ದರೆ ಮತ್ತೊಬ್ಬರು ಅವರನ್ನು ತಬ್ಬಿಕೊಂಡು ಸಂತೈಸಿ ಸಾಂತ್ವನಗೊಳಿಸುತ್ತಾರೆ. ಇದು ಒಂದು ರೀತಿಯ ಬಂಧ. ಹೀಗೆಯೇ ಜನರು ಬಾಳಿನಲ್ಲಿ ಅಂದ ಚೆಂದಗಳ ಅರಸುತ್ತಾರೆ. ಮೋಹ, ಯಶಸ್ಸು, ಪರಾಭವ, ದ್ವೇಷ ಮುಂತಾದ ಭಾವನೆಗಳಿಂದ ಒಬ್ಬರಿಗೊಬ್ಬರು ಬಂಧಿತರಾಗಿ ತನ್ಮೂಲಕ ಈ ಜಗತ್ತಿಗೆ ಅಂಟಿಕೊಂಡಿರುತ್ತಾರೆ, ಈ ಜಗದ ಮನುಜರು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಹುಟ್ಟಿನಿಂದ ತಂದೆ ತಾಯಿ ಮತ್ತು ಮನೆ ಮಂದಿಯಲ್ಲರೊಂದಿಗೆ ನಂಟು. ಪರಸ್ಪರ ಪ್ರೀತಿ ಮತ್ತು ಇತರೆ ಭಾವನೆಗಳ ಬಂಧ. ಬೆಳೆಬೆಳೆಯುತ್ತಾ ಸಮಾಜ, ಪರಿಸರ, ಊರು, ದೇಶದೊಂದಿಗೆ ಬಂಧನ. ಹತ್ತಿರದವರೊಡನೆ ನಿಕಟ ಬಂಧ. ಅನ್ಯರೊಡನೆ ಸಾಮಾಜಿಕ ಬಂಧ. ಹೀಗೆ ಹತ್ತು ಹಲವಾರು ರೀತಿಯಲ್ಲಿ ನಾವು ಈ ಜಗತ್ತಿನ ಎಲ್ಲದರೊಂದಿಗೆ ಸಂಪರ್ಕ ಸಂಬಂಧವನ್ನು ಇಟ್ಟುಕೊಂಡಿರುತ್ತೇವೆ. ಈ ರೀತಿಯ ಬಂಧನಗಳು ಇಲ್ಲದ ವ್ಯಕ್ತಿ ನಮಗೆ ಎಲ್ಲೂ ಕಾಣಸಿಗುವುದಿಲ್ಲ. ನಮಗೆ ಬೇಕೋ ಬೇಡವೋ, ಒಳ್ಳೆಯದೋ ಕೆಟ್ಟದೋ, ಅರಿತೋ ಅರಿವಿಲ್ಲದೆಯೇ, ಇಷ್ಟಪಟ್ಟೋ ಇಷ್ಟವಿಲ್ಲದೆಯೋ ನಾವು ಹೊಸ ಹೊಸ ಸಂಬಂಧಗಳನ್ನು ಅರಸುತ್ತೇವೆ ಮತ್ತು ಕಟ್ಟಿಕೊಳ್ಳುತ್ತೇವೆ. ಮೊದಮೊದಲು ಸುಂದರವಾಗಿರುವ ಸಂಬಂಧಗಳು ಕಾಲಾಂತರದಲ್ಲಿ ಕೆಟ್ಟು ಹೋಗುತ್ತವೆ. ಹಾಗೆ ಕೆಡಲು ಕಾರಣ, ಕೇವಲ ನಮ್ಮ "ಸ್ವಾರ್ಥ" ಭಾವನೆ.

ಏನಾದರಾಗಲಿ, ಈ ಜಗತ್ತಿನೊಂದಿಗೆ ನಮಗೆ ಸೂಕ್ಷ್ಮವಾದ ಅಥವಾ ಸ್ಥೂಲವಾದ, ವೈಯಕ್ತಿಕ, ಭಾವನಾತ್ಮಕ ಅಥವಾ ಸಾಮಾಜಿಕ ಸಂಬಂಧಗಳು ಇರುತ್ತವೆ. ಜಗತ್ತಿನೊಂದಿಗಿನ ನಮ್ಮ ಈ ಸಂಭಂದಗಳೇ ನಮ್ಮನ್ನು ಈ ಜಗತ್ತಿ ನೊಂದಿಗೆ ನಂಟನ್ನು ಉಂಟುಮಾಡಿ ಒಂದು ವ್ಯಾಮೋಹವನ್ನು ನಮ್ಮ ಮನಸ್ಸುಗಳಲ್ಲಿ ಹುಟ್ಟಿಸುತ್ತದೆ, ಎಂಬುವುದೇ ಈ ಕಗ್ಗದ ಹೂರಣ. ಆದರೆ ನಮ್ಮ ಬದುಕು, ನಾವು ಈ ಜಗತ್ತಿನೊಂದಿಗೆ ಎಂತಹ ರೀತಿಯ ಸಂಬಂಧವನ್ನು ಇಟ್ಟುಕೊಂಡಿದ್ದೇವೆ, ಎನ್ನುವುದರ ಮೇಲೆ ಅಧಾರಪಟ್ಟಿರುತ್ತದೆ ನಾವೆಲ್ಲಾ ಒಂದು ಆತ್ಮಾವಲೋಕನಕ್ಕೆ ನಮ್ಮನ್ನು ನಾವು ತೊಡಗಿಸಿಕೊಂಡಾಗ, "ನಮ್ಮ ಅರಿವು" ನಮಗೆ ಆಗುತ್ತದೆ. ಸುಧಾರಣೆಗೆ ಅವಕಾಶವಿದ್ದರೆ, ಸುದಾರಿಸಿಕೊಳ್ಳಲು ಮಾರ್ಗವಾಗುತ್ತದೆ.

Advertisements
 

ರಸ ಚೆನ್ನುಡಿ

ಶಿಸ್ತು ಯಶಸ್ಸಿಗೆ ಕಾರಣವಾಗುತ್ತದೆ. ಆಲಸ್ಯ ಸೋಲಿಗೆ ಕಾರಣವಾಗುತ್ತದೆ.
ಆಯ್ಕೆ ಮಾಡುವ ವಿವೇಕ ಎಲ್ಲರಿಗೂ ಉಂಟು. ಯಾರು ಯಾವುದನ್ನು ಆಯ್ದುಕೊಂಡರೆ ಅವರಿಗೆ ಅಂಥಾ ಫಲ – ಅನಾಮಿಕ

 

ರಸಧಾರೆ – ೨೬೧

ಆಟವೋ ಮಾಟವೋ ಕಾಟವೋ ಲೋಕವಿದು
ಊಟ ಉಪಚಾರಗಳ ಬೇಡವೆನ್ನದಿರು
ಪಾಟವವು ಮೈಗಿರಲಿ ನೋಟ ತತ್ವದೊಳಿರಲಿ
ಪಾಠಿಸು ಸಮನ್ವಯವ-ಮಂಕುತಿಮ್ಮ.

ಮೈಗಿರಲಿ = ಮೈಗೆ + ಇರಲಿ// ತತ್ವದೊಳಿರಲಿ = ತತ್ವದೊಳು + ಇರಲಿ

ಪಾಟವವು = ಪಟುತ್ವ, ದೇಹಾರೋಗ್ಯ.

ಈ ಜಗತ್ತಿನಲ್ಲಿ ನೀನು ಬಂದಮೇಲೆ ಜೀವನವನ್ನು ಒಂದು ಆಟವಾಗಿಯೋ, ಶ್ರಮವಾಗಿಯೋ, ಹಿಂಸೆಯಾಗಿಯೋ ಅನುಭವಿಸಲೇ ಬೇಕು. ಬೇರೆ ದಾರಿಯಿಲ್ಲ, ಇದೇ ಪ್ರಪಂಚ. ಇದು ನನಗೆ ಇಷ್ಟವಿಲ್ಲ ಎಂದು ನೀನು ನಿರಾಹಾರನಾಗಿ ದೇಹವನ್ನು ದಂಡಿಸಬೇಡ. ದೇಹ ದೃಢವಾಗಿರಲಿ. ಮನಸ್ಸು ಬುದ್ಧಿಗಳು ಪರಮಾತ್ಮನನ್ನು ಚಿಂತಿಸುತ್ತ ಇಹ ಮತ್ತ ಪರಗಳೆರಡರ ನಡುವೆ ಒಂದು ಸಮನ್ವಯವನ್ನು ಸಾಧಿಸು ಎಂದು ಒಂದು ಆದೇಶ ನೀಡುತ್ತಾರೆ ಮಾನ್ಯ ಗುಂಡಪ್ಪನವರು.

ದೇಹವೊಂದು ಉಪಕರಣ.(tool) ಮನಸ್ಸು ಬುದ್ಧಿ ಗಳ ಅವಾಸಸ್ಥಾನ. "ಒಂದು ಸದೃಢ ದೇಹದಲ್ಲಿ ಒಂದು ಸದೃಢ ಮನಸ್ಸು"(A healthy mind in a Healthy body) ಎಂದು ನಾವೆಲ್ಲಾ ಕೇಳಿದ್ದೇವೆ. ಹಾಗೆ ನಾವೇನೇ ಕೆಲಸಮಾಡುತ್ತಿದ್ದರೂ, ಶ್ರಮಪಡುತ್ತಿದ್ದರೂ, ಹಿಂಸೆಪಡುತ್ತಿದ್ದರೂ, ಸುಖಪಡುತ್ತಿದ್ದರೂ, ದುಃಖವನ್ನೋ ಅಥವಾ ಆನಂದವನ್ನೋ ಅನುಭವಿಸುತ್ತಿದ್ದರೂ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು. ಏಕೆಂದರೆ ದೇಹವೊಂದು
ಉಪಕರಣವಾಗಿರುವಾಗ, ಮತ್ತು ನಮ್ಮ ಎಲ್ಲ ಭಾವನೆಗಳನ್ನು ಈ "ಇಂದ್ರಿಯ"ಗಳಿಂದ ಕೂಡಿದ ದೇಹದ ಮೂಲಕವೇ ಅನುಭವಿಸಬೇಕಾಗಿರುವುದರಿಂದ, ದೇಹ ಆರೋಗ್ಯವಾಗಿರಲೇ ಬೇಕು.

ಮನಸ್ಸಿನ ಒಂದು ಬಾಗದಲ್ಲಿ ದೇಹವನ್ನು ಕಾಪಾಡಿಕೊಳ್ಳುವ ವಿಚಾರವನ್ನು ಸೀಮಿತವಾಗಿಟ್ಟುಕೊಂಡು, ಸಂಪೂರ್ಣವಾಗಿ ಪರಮಾತ್ಮ ಚಿಂತನೆಯಲ್ಲಿ ಕಳೆಯಬೇಕು ಎನ್ನುವುದೇ ಈ ಕಗ್ಗದ ಹೂರಣ. ಮನಸ್ಸು ಬುದ್ಧಿಗಳು ಪ್ರಕಟಗೊಳ್ಳುವುದೇ ಈ ದೇಹದ ಮೂಲಕ. ಹಾಗಾಗಿ ಈ ದೇಹ ಮನಸ್ಸು ಬುದ್ಧಿ ಎಲ್ಲವೂ ಆತ್ಮೋದ್ಧಾರಕ್ಕೆ ಪೂರಕವಾದ ಉಪಕರಣಗಳು ಎಂದು ಅರಿಯಬೇಕು. ಇವು ಇಹದಲ್ಲಿ ನಮಗೆ ಪರವನ್ನು ತಲುಪಲು ಸಹಾಯಮಾಡುವಂಥಾ ಉಪಕರಣಗಳು. ಇವುಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು. ತತ್ವ ಚಿಂತನೆಯಲ್ಲಿ ಮತ್ತು ತತ್ವವನ್ನು ಅರಿತು ಸತ್ಯವನ್ನು ಅರಿತು ಜೀವನವನ್ನು ಸಾರ್ಥಕ್ಯದಿಂದ ಕಳೆಯಬೇಕು. ಇಹವನ್ನು ಅಂದರೆ ನಮ್ಮ ಇಂದಿನ ಬದುಕನ್ನು ಸರಿಯಾಗಿ ಬದುಕಿ, ಈ ಬದುಕಿನ ಮೂಲಕವೇ ಈ ಬದುಕನ್ನು ಬಿಟ್ಟು ಪರವನ್ನು ಸಾಧಿಸಿ, ಇಹ ಮತ್ತು ಪರಗಳ ನಡುವೆ ಒಂದು ಸಮನ್ವಯವನ್ನು ಸಾಧಿಸಬೇಕು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. ಅಂತಹ ಪ್ರಯತ್ನವನ್ನು ನಾವೆಲ್ಲರೂ ಮಾಡಲೇ ಬೇಕು.

 

ರಸ ಚೆನ್ನುಡಿ

ದ್ವೇಷದ ಬೆಂಕಿಯನ್ನು ಮನದುಡಿಯಲ್ಲಿ ಕಟ್ಟಿಕೊಂಡರೆ ದ್ವೇಷಿಸುವವನ ಮನ ಸುಡುತ್ತದೆ,
ಎಂದೋ ನಡೆದ ಘಟನೆಗಳ ವಿಚಾರವನ್ನೇ ಕಾರಣವಾಗಿಟ್ಟುಕೊಂಡು ಧೀರ್ಗಕಾಲ ದ್ವೇಷಿಸುವುದು ಕೇವಲ ಮೂರ್ಖತನವಷ್ಟೇ! – ಅನಾಮಿಕ.

 

ರಸ ಚೆನ್ನುಡಿ.

ದೇಹ ಮನಸ್ಸು ಬುದ್ಧಿ ಮತ್ತು ಆತ್ಮಗಳ ಸಮ್ಮಿಲನದಿಂದಾದ ನಮ್ಮ ಅಸ್ತಿತ್ವದಲ್ಲಿ
" ನಾನು " ಎಂಬುದು ಸೇರಿಕೊಂಡು ನಮ್ಮನ್ನು ಪೀಡಿಸುತ್ತದೆ. ಅದನ್ನು ಬಿಟ್ಟರೆ ನಮಗೆ ಸುಖ – ಅನಾಮಿಕ

 

ರಸಧಾರೆ – ೨೬೦

ದ್ರಾಕ್ಶಿರಸವೇನಲ್ಲ ಜೀವನದ ತಿರುಳಾರ್ಗುಂ
ಇಕ್ಶುದಂಡದವೊಲದು ಭೋಜನವೆ
ದಕ್ಷತೆಯಿನಿಡಿಯುವಂಗೊಂದೆರಡು ಗುಟುಕು ರಸ
ಮಾಕ್ಷಿಕರು ಮಿಕ್ಕೆಲ್ಲ – ಮಂಕುತಿಮ್ಮ.

ದ್ರಾಕ್ಶಿರಸವೇನಲ್ಲ = ದ್ರಾಕ್ಷಿ+ರಸವು+ಏನಲ್ಲ// ತಿರುಳಾರ್ಗುಂ = ತಿರುಳು+ಆರುಗುಂ// ಇಕ್ಶುದಂಡದವೊಲದು = ಇಕ್ಷು+ದಂಡದ+ವೊಲು+ಅದು// ದಕ್ಷತೆಯಿನಿಡಿಯುವಂಗೊಂದೆರಡು = ದಕ್ಷತೆಯನು+ಇಡಿಯುವಂಗೆ + ಒಂದೆರಡು//

ಇಕ್ಷುದಂಡ = ಕಬ್ಬಿನ ಜಲ್ಲೆ // ಮಾಕ್ಷಿಕರು = ನೊಣದಂತವರು

ಬಾಯಿಗಿಟ್ಟ ತಕ್ಷಣ ಸಿಗುವ ದ್ರಾಕ್ಷಿಹಣ್ಣಿನ ರಸದ ರುಚಿಯಂತೆ ಅಲ್ಲ, ಅದು ಕಬ್ಬಿನ ಜಲ್ಲೆಯನ್ನು, ಬಾಯಲ್ಲೇ ಸಿಪ್ಪೆ ತೆಗೆದು ಅಗಿದಾಗ ಮಾತ್ರ ಸಿಗುವ ಸಿಹಿರಸದ ಎರಡು ಹನಿಯಂತೆ ಈ ಜೀವನದ ಸ್ವಾರಸ್ಯವೂ ಯಾರಿಗೂ ಸುಲಭವಾಗಿ ಲಭ್ಯವಾಗುವುದಿಲ್ಲ. ಕಷ್ಟಪಡಬೇಕು. ಹಾಗೆ ಪಡದಿದ್ದ ಪಕ್ಷದಲ್ಲಿ, ಕಬ್ಬಿನ ಜಲ್ಲೆಯಮೇಲೆ ಕುಳಿತ ನೊಣಗಳಿಗೆ ಹೇಗೆ ರಸ ಸಿಗುವುದಿಲ್ಲವೋ ಹಾಗೆ, ಬದುಕಿನ ಅನುಭವ, ಸ್ವಾರಸ್ಯ ಯಾವುದೂ ಸಿಗುವುದಿಲ್ಲ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಕಬ್ಬಿನ ರಸದ ರುಚಿಯ ಅನುಭವಕ್ಕೆ ಆ ಕಬ್ಬಿನ ಜಲ್ಲೆಯನ್ನು ಹಲ್ಲಿನಿಂದ ಕಡಿದು ಸಿಪ್ಪೆಯನ್ನು ಕಿತ್ತು ಒಳಗಿನ ತಿರುಳನ್ನು ಜಗಿದಾಗ ಅದರ ರಸದ ಸವಿಯನ್ನು ಪಡೆಯಬಹುದು. ಕೇವಲ ಕೈಯಲ್ಲಿಟ್ಟುಕೊಂಡರೋ ಅಥವಾ ಕೇವಲ ನೆಕ್ಕಿದರೋ ಅದರ ರುಚಿ ಬರುವುದಿಲ್ಲ. ಜೀವನವೂ ಹಾಗೆಯೇ ಇಳಿಯಬೇಕು, ಘಟನೆಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು, ಆಳಕ್ಕೆ ಇಳಿಯಬೇಕು, ಅನುಭವಿಸಬೇಕು. ಹಾಗಾದಾಗ ಮಾತ್ರ ನಮಗೆ ಜೀವನದ ನಿಜ ಅನುಭವವಾಗುತ್ತದೆ. ನಂತರ ರಕ್ತಿಯೋ,ಮೋಹವೋ, ವ್ಯಾಮೋಹವೋ ಅಥವಾ ನಿರ್ಲಿಪ್ತತೆಯೋ, ವಿರಕ್ತಿಯೋ, ವೈರಾಗ್ಯವೋ ಉಂಟಾಗಬಹುದು. ಅನುಭವವೇ ಆಗದಿದ್ದರೆ, ಯಾವುದನ್ನೂ ಪಡೆಯದಿದ್ದರೆ, ಬಿಡುವುದು ಏನನ್ನು? ಹಾಗಾಗಿ ಬದುಕನ್ನು ಕೇವಲ ಸುಲಭವಾಗಿ ದ್ರಾಕ್ಷಿ ಹಣ್ಣನ್ನು ತಿಂದಹಾಗೆ ಸವಿಯದೆ, ಕಷ್ಟಪಟ್ಟು ಕಡಿದು ಜಗಿದು ರಸಾಸ್ವಾದನೆ ಮಾಡುವ ಕಬ್ಬಿನ ಜಲ್ಲೆಯನ್ನು ತಿಂದಹಾಗೆ ಬದುಕಬೇಕು.

ಒಂದು ನೊಣ ಆ ಕಬ್ಬಿನ ಜಲ್ಲೆಯಮೇಲೆ ಕುಳಿತುಕೊಂಡರೆ ಅದಕ್ಕೆ ಆ ಕಬ್ಬಿನ ಸಿಹಿರಸದ ಸವಿ ಸಿಗುವುದೇ? ಖಂಡಿತ ಇಲ್ಲ. ಅದೇ ರೀತಿ ನಮಗೂ ಸಹ ಜೀವನದ ಸತ್ಯವಾದ ಅನುಭವ ಆಗಬೇಕಾದರೆ ನಾವು ನಮ್ಮನ್ನು ಈ ಜೀವನದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಧ್ಯ. ಕೆಲವರಿಗೆ ಈ ತೊಡಗಿಸಿಕೊಳ್ಳುವ ಭಾಗ್ಯ ಬಯಸದೆಯೇ ಬರುತ್ತದೆ. ಕೆಲವರಿಗೆ ಸಂದರ್ಭಗಳ ಒತ್ತಡದಿಂದ ಬರುತ್ತದೆ. ಕೆಲವರಿಗೆ ಬರುವುದೇ ಇಲ್ಲ. ಯಾರ್ಯಾರು ಎಷ್ಟೆಷ್ಟು ತಮ್ಮನ್ನು ತಾವು ತೊಡಗಿಸಿಕೊಂಡರೆ ಅವರವರಿಗೆ ಅಷ್ಟಷ್ಟು ಅನುಭವ ಸಿಗುತ್ತದೆ. ಕಬ್ಬಿನ ಜಲ್ಲೆಯ ಮೇಲಿನ ನೊಣದಂತೆ ಇದ್ದರೆ ಯಾವ ಅನುಭವವೂ ಆಗದೆ ಹೇಗೆ ಬಂದೆವೋ ಹಾಗೆಯೇ ಈ ಜಗತ್ತಿನಿಂದ ನಿರ್ಗಮಿಸಬೇಕಾಗುತ್ತದೆ. ಇರಬೇಕು, ಇದ್ದಂತೆ ಇರಬೇಕು, ಅನುಭವವನ್ನು ಪಡೆಯಬೇಕು. ಕಬ್ಬಿನ ರಸವನ್ನು ಮಾತ್ರ ನುಂಗಿ, ಸಾರವನ್ನು ಒಳಗೆಳೆದುಕೊಂಡು, ಸಿಪ್ಪೆಯನ್ನು ಉಗಿದರೆ, ಸುಖ. ಹಾಗೆಯೇ ಜೀವನದ ರಸಾನುಭವ ಪಡೆಯಬೇಕು, ಸ್ವಾರಸ್ಯವನ್ನು ಅನುಭವಿಸಬೇಕು, ಅಷ್ಟೇ ಸಾರವನ್ನೆಳುದುಕೊಂಡು ಸಿಪ್ಪೆಯನ್ನು ಉಗಿದಹಾಗೆ ಬದುಕಿನ ಸಂಪೂರ್ಣ ಸ್ವಾರಸ್ಯವನ್ನು ಅನುಭವಿಸಿ, ಮತ್ತೊಂದು ಜಲ್ಲೆಯನ್ನು ಹುಡುಕುತ್ತಾ ಹೊರಟುಬಿಡಬೇಕು. ಪ್ರಯತ್ನ ಪಡಬೇಕು. ಖಂಡಿತ ರಸಾನುಭವ ಸಿಗುತ್ತದೆ.

 

ರಸ ಚೆನ್ನುಡಿ

ಸತ್ಯದ ಅರಿವಾದಾಗ, ನಿರಂತರ ಟೀಕೆಯನ್ನು ವಿರೋಧಿಸದೆ
ಧೀರ್ಘಕಾಲ ಸಹಿಸಿಕೊಳ್ಳುವುದೇ ವ್ಯಕ್ತಿಯ ಔನ್ನತ್ಯದ ಪ್ರಮಾಣ- ಅನಾಮಿಕ