RSS

Monthly Archives: ಡಿಸೆಂಬರ್ 2012

ರಸಧಾರೆ – ೨೯೨

ತಿದ್ದಿಕೊಳೊ ನಿನ್ನ ನೀಂ; ಜಗವ ತಿದ್ದುವುದಿರಲಿ
ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು
ಉದ್ದ ನೀಂ ಬೆರಳನಿತು ಬೆಳೆದೇಯೆ ಸಾಮಿಂದ
ಸ್ಪರ್ಧಿಯೇ ತ್ರಿವಿಕ್ರಮಗೆ? – ಮಂಕುತಿಮ್ಮ

ತಿದ್ದುವುದಿರಲಿ= ತಿದ್ದುವುದು + ಇರಲಿ //ತಿದ್ದಿಕೆಗಮೊಂದು = ತಿದ್ದಿಕೆಗೆಂ +ಒಂದು// ಬೆರಳನಿತು = ಬೆರಳ್ +ಇನಿತು// ಮಿತಿಯುಂಟು = ಮಿತಿ+ಉಂಟು

ಬೆರಳನಿತು = ಬೆರಳಷ್ಟು// ಸಾಮಿಂದ = ಸ್ವಪ್ರಯತ್ನದಿಂದ

ಪುರಾಣದಲ್ಲಿ "ಮಹಾವಿಷ್ಣು" ವು ವಾಮನಾವತಾರದಲ್ಲಿ ತನ್ನ ಸ್ವಶಕ್ತಿಯಿಂದ ತ್ರಿವಿಕ್ರಮನಾಗಿ ಬೆಳೆದು ಭೂಮ್ಯಾಕಾಶವನ್ನು ಎರಡು ಹೆಜ್ಜೆಗಳಲ್ಲಿ ಅಳೆದು, ಮೂರನೇ ಹೆಜ್ಜೆಯನ್ನು’ಬಲಿ’ಯ ಶಿರದ ಮೇಲಿರಿಸಿ ಅವನಿಗೆ ಪಾತಾಳದಲ್ಲಿ ಸ್ಥಳ ಕಲ್ಪಿಸಿದ ಕಥೆಯಿದೆ. ನೀನು ಅವನಿಗೆ ಸ್ಪರ್ಧಿಯಾಗಲು ಸಾಧ್ಯವೇ? ಏಕೆಂದರೆ ನೀನು ಎಷ್ಟೇ ಪ್ರಯತ್ನಪಟ್ಟರೂ ಒಂದು ಬೆರಳುದ್ದ ಬೆಳೆಯಬಹುದು. ನಿನ್ನ ಬೆಳವಣಿಗೆಗೆ ಒಂದು ಮಿತಿಯುಂಟು. ನೀನು ನಿನ್ನ ಮಿತಿಯಲ್ಲಿರು. ಜಗತ್ತಿನ ಡೊಂಕನ್ನು ತಿದ್ದಲು ನಿನಗೆ ಸಾಧ್ಯವೇ? ಬದಲಾಗಿ ‘ನಿನ್ನನ್ನೇ ‘ ನೀನು ತಿದ್ದಿಕೋ ಎಂದು ಒಂದು ಸ್ಪಷ್ಟ ಆದೇಶ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ.
ಸಾವಿರಾರು ನ್ಯೂನತೆಗಳನ್ನು ನಮ್ಮಲ್ಲೇ ಇಟ್ಟುಕೊಂಡು ಅನ್ಯರ ದೋಷಗಳನ್ನು ಎತ್ತಿ ತೋರುವುದು ಸರಿಯೇ? ‘ಇವನ ಎಲೇಲಿ ಆನೆ ಸತ್ ಬಿದ್ದಿದ್ರೂ ಬೇರೇವ್ರ ಎಲೇಲಿ ನೊಣ ತೋರಿಸ್ತಾನೆ’ ಎನ್ನುವ ಮಾತು ನಾವು ಬಹಳಷ್ಟು ಬಾರಿ ಕೇಳುತ್ತೇವೆ. ನಮ್ಮ ಕೊರತೆಗಳೇ ನಮ್ಮಲ್ಲಿ ಸಾಕಷ್ಟು ಇರುವಾಗ ಅವುಗಳನ್ನು ಸರಿಪಡಿಸಿಕೊಳ್ಳದೆ ಅಥವಾ ಸರಿಪಡಿಸಿಕೊಳ್ಳುವ ಪ್ರಯತ್ನವನ್ನೂ ಮಾಡದೆ ಪರರ ದೋಷಗಳನ್ನು ಎತ್ತಿ ತೋರುವುದು,ಅದರ ಬಗ್ಗೆ ಚರ್ಚೆ ಮಾಡುವುದು ಮತ್ತು ಅವರಿಗೆ ಪುಕ್ಕಟ್ಟೆಯಾಗಿ ಸಲಹೆಗಳನ್ನು ಕೊಡುವುದು ನಮ್ಮಲ್ಲೆರಲ್ಲೂ ಸರ್ವೇ ಸಾಮಾನ್ಯವಾಗಿ ಕಾಣುವಂತಾ ಗುಣ. ಇದು ಖಂಡಿತಾ ಸರಿಯಲ್ಲ.

‘ನಿನ್ನನ್ನು ನೀನು ಮೊದಲು ತಿದ್ದಿಕೊಳ್ಳೋ’ ಎಂದು ಆದೇಶ ನೀಡಿದ್ದಾರೆ ಇಲ್ಲಿ. ಹೌದು ನಮ್ಮ ಮನಸ್ಸು ಬುದ್ಧಿಗಳನ್ನು ಶುದ್ದಿಮಾಡಿಕೊಳ್ಳಬೇಕು. ಸದಾಕಾಲ ಆತ್ಮಾವಲೋಕನ ಮಾಡಿಕೊಳ್ಳುತ್ತಿರಬೇಕು. ಈ ಕ್ರಮದಲ್ಲಿ ನಾವು ಆಂತರಿಕವಾಗಿ ಬೆಳೆಯಬೇಕು. ನಾವು ಹುಟ್ಟಿನಿಂದ ಹೊತ್ತುತಂದ ಗುಣಗಳನ್ನು ಸರಿಪಡಿಸಿಕೊಂಡು ಮತ್ತು ಇಲ್ಲಿ ಸರಿಯಾದ ಗುಣಗಳನ್ನು ನಾವು ನಮ್ಮ ಸ್ವಪ್ರಯತ್ನದಿಂದ ಆರ್ಜಿಸಿದರೂ ನಾವು ‘ಒಂದಿಷ್ಟು’ ಬೆಳೆಯಬಹುದು. ಆದರೆ ಅದು ಅನ್ಯರ ದೋಷಗಳನ್ನು ಎತ್ತಿತೋರುವುದಕ್ಕಾಗಲೀ ಅಥವಾ ಅವುಗಳನ್ನು ತಿದ್ದುವುದಕ್ಕಾಗಲೀ ಸಾಲದು. ಅದು ಕೇವಲ ನಮ್ಮನ್ನು ಇನ್ನಷ್ಟು ಬೆಳೆಯಲು ಸಹಾಯ ಮಾಡಬೇಕು. ಹಾಗಾಗಿ ನಾವು ಅನ್ಯರ ದೋಷಗಳನ್ನು ಎತ್ತಿತೋರಬಾರದು.

ನಮ್ಮ ದೋಷಗಳನ್ನು ಅರಿತುಕೊಂಡು, ಒಪ್ಪಿಕೊಂಡು, ತಿದ್ದಿಕೊಂಡರೆ ಪೂರ್ವ ವಾಸನೆಯಿಂದ ಬಂದ ದೋಷಗಳನ್ನು ಅಳಿಸಿಹಾಕಿ, ಹೊಸ ಮತ್ತು ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಎಷ್ಟೇ ನಾವು ‘ಸುಧಾರಿಸಿದ್ದೇವೆ’ ಎಂದರೂ ಇನ್ನೂ ಎಲ್ಲೋ ದೋಷಗಳು ಎದ್ದು ಕಾಣುತ್ತಲೇ ಇರುತ್ತವೆ. ಹಾಗಾಗಿ ಅನ್ಯರ ದೋಷಗಳನ್ನು ತೋರುವುದಾಗಲೀ, ಅನ್ಯರನ್ನು ವಿಮರ್ಶೆ ಮಾಡುವುದಾಗಲೀ ಸಜ್ಜನರು ಮಾಡುವುದಿಲ್ಲ ಮತ್ತು ಮಾಡಬಾರದು. ನಾವೂ ಸಹ ಅಂತಹ ಸಜ್ಜನರಾಗುವ ಪ್ರಯತ್ನ ಪಡಬೇಕು.

Advertisements
 

ರಸ ಚೆನ್ನುಡಿ

ಬಿರುಗಾಳಿಯ ರಭಸಕ್ಕೆ ಮರಗಳು ಅಲ್ಲಾಡುತ್ತವೆ ಬೆಟ್ಟಗಳು ಅಲುಗಾಡುವುದಿಲ್ಲ.
ಕಷ್ಟದ ಮತ್ತು ದುಃಖದ ಸಮಯದಲ್ಲಿ ನಾವು ಮರದಂತೆ ಅಲ್ಲದೆ ಬೆಟ್ಟದಂತಾಗಬೇಕು – ಅನಾಮಿಕ.

 

ರಸಧಾರೆ – ೨೯೧

ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ
ಕೈಸೋಕದಿರೆ ಕೈಯ ಸಪ್ಪುಳಾದೀತೆ
ವಾಸನೆಯೆ ಮಾತೆಯಾಶೆಗೆ ಪಿತನು ಸಂದರ್ಭ
ದೋಷವೊಳಗೋ ಹೊರಗೋ ? – ಮಂಕುತಿಮ್ಮ.

ಬೀಸಿದಲ್ಲದೆ = ಬೀಸಿದ+ಅಲ್ಲದೆ// ಕಿಡಿಯುರಿದೀತೆ = ಕಿಡಿ+ಉರಿದೀತೆ// ಸಪ್ಪುಳಾದೀತೆ = ಸಪ್ಪಳ+ಆದೀತೆ// ಮಾತೆಯಾಶೆಗೆ = ಮಾತೆ+ಆಶೆಗೆ// ದೋಷವೊಳಗೋ= ದೋಷವು+ಒಳಗೋ

ಬೂದಿ ಮುಚ್ಚಿದ ಕೆಂಡಕ್ಕೆ ಗಾಳಿಬೀಸಿದರೆ ಮತ್ತೆ ಉರಿಯುತ್ತದೆ. ಹಾಗೆಯೇ ಎರಡೂ ಕೈಗಳು ಸೋಕಿದರೆ ಸಪ್ಪಳವಾಗುತ್ತದೆ. ಇದರಂತೆಯೇ ನಮ್ಮ ಪ್ರತೀ ಕ್ರಿಯೆಗೂ ನಾವು ಹೊತ್ತು ತಂದ ವಾಸನೆಯೇ ತಾಯಿ ಮತ್ತು ನಾವು ಇರುವ ಸಂದರ್ಭವೇ ತಂದೆ. ಇದರಲ್ಲಿ ದೋಷವು ಹೊತ್ತು ತಂದದ್ದರಲ್ಲೋ ಅಥವಾ ಇಲ್ಲಿ ಗಳಿಸಿಕೊಂಡದ್ದರಲ್ಲೋ ಎಂದು ಒಂದು ಗಹನವಾದ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ ಮಾನ್ಯ ಗುಂಡಪ್ಪನವರು.

ನಮ್ಮ ಬದುಕಿನಲ್ಲಿ ನಡೆಯುವ ಕಾರ್ಯಗಳನ್ನು ವಿಶ್ಲೇಸಿಸುತ್ತಾ, ನಮ್ಮ ಮೂಲ ಸ್ವಭಾವ ಅಥವಾ ಗುಣಗಳು ನಾವು ಪೂರ್ವಜನ್ಮದಿಂದ ಹೊತ್ತು ತಂದಿರುತ್ತೇವೆ ಎನ್ನುತ್ತಾರೆ. ಆ ರೀತಿ ಹೊತ್ತು ತಂದ ವಾಸನೆಗಳೇ ನಮ್ಮ ಮನಸ್ಸುಗಳಲ್ಲಿ ಆಶೆಗಳು ಉದ್ಭವವಾಗಲು ಕಾರಣ, ಹಾಗಾಗಿ ಆವಾಸನೆಗಳೇ ನಮ್ಮ ಆಸೆಗಳ ತಾಯಿ. ಹೊತ್ತುಕೊಂಡು ಬಂದಾಕ್ಷಣ ಪ್ರಕಟವಾಗಲು ಸಾಧ್ಯವಿಲ್ಲ. ಅದಕ್ಕೆ ಸರಿಯಾದ ಕ್ಷೇತ್ರ ಬೇಕು. ಆ ಕ್ಷೇತ್ರವೇ ನಮ್ಮ ಬದುಕಿನಲ್ಲಿ ಬರುವ ಸಂದರ್ಭಗಳು. ನಮ್ಮ ಪೂರ್ವ ವಾಸನೆಗಳು ಮತ್ತು ನಮಗೆ ಈಗ ಸಿಗುವ ಸಂದರ್ಭಗಳು ಎರಡರ ಸಂಮಿಲನದಿಂದಾಗುವ ನಮ್ಮ ಕೆಲಸಗಳು. ಹಾಗಾಗಿ ವಾಸನೆ ತಾಯಿ ಮತ್ತು ಸಂದರ್ಭ ತಂದೆ ಎಂದು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

ನಮಗೆ ಬಹಳಷ್ಟು ಬಾರಿ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಉದ್ಭವವಾಗುತ್ತವೆ. ‘ ಏಕೆ ಹೀಗೆ ‘ ಎಂಬುದು ಒಂದು ಮುಖ್ಯ ಪ್ರಶ್ನೆ. ಪ್ರತೀ ಬಾರಿಯೂ ನಮಗೆ ಈ ಪ್ರಶ್ನೆಗೆ ಉತ್ತರವಿರುವುದಿಲ್ಲ. ಏಕೆಂದರೆ ನಮಗೆ ಅರ್ಥವಾಗದ ಪೂರ್ವ ಜನ್ಮದ ವಾಸನೆಗಳು, ಈ ಜನ್ಮದಲ್ಲಿ ನಾವು ಹುಟ್ಟಿನಂದಿನಿಂದ ನಡೆದ ಘಟನೆಗಳು ನಮ್ಮ ಮನಸ್ಸಿನ ಮಾಡಿದ ಮೇಲಿನ ಪ್ರಭಾವ ಮತ್ತು ಇವೆರಡರ ಸಂಮಿಲನದಿಂದಾಗುವ ನಮ್ಮ ಕ್ರಿಯೆ ಅಥವಾ ನಡವಳಿಕೆ. ಹೇಗೆ ಇದನ್ನು ಅರ್ಥಮಾಡಿಕೊಳ್ಳುವುದು. ಸಾಧ್ಯವೇ ಇಲ್ಲ. ಆದ್ದರಿಂದಲೇ ನಮ್ಮ ಪೂರ್ವಜರು, ಜ್ಞಾನಿಗಳು, ಋಷಿಮುನಿಗಳು ನಮಗೆ ಜೀವನದ ಹಾದಿಯಲ್ಲಿ ಏನು ಮಾಡಬೇಕು, ಏನು ಮಾಡಬಾರದು, ನಮ್ಮನ್ನು ನಾವು ಅರಿತುಕೊಳ್ಳುವುದು ಹೇಗೆ, ನಮ್ಮನ್ನು ‘ನಾವೇ’ ತಿದ್ದಿಕೊಳ್ಳುವುದು ಹೇಗೆ, ಎಂದು ಒಂದು ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ. ನಮ್ಮ ಪೂರ್ವ ವಾಸನೆಗಳನ್ನು ತಿದ್ದಿಕೊಳ್ಳುವುದು, ಅಳಿಸಿಹಾಕುವುದು, ಹೊಸ ಮತ್ತು ಸೂಕ್ತ ಸ್ವಭಾವವನ್ನು ಹೇಗೆ ಬೆಳೆಸಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಮಾರ್ಗ ತೋರಿದ್ದಾರೆ.

ಆದರೆ ಇಂದು ನಮಗದಾವುದೂ ಬೇಕಿಲ್ಲ. ಯಾಂತ್ರಿಕ ಜೀವನದಲ್ಲಿ ಅದನ್ನೆಲ್ಲಾ ಅರಿತುಕೊಳ್ಳಲು ಯಾರಿಗೂ ಸಮಯವಿಲ್ಲ. ಸಮಯವಿದ್ದರೂ ಅದನ್ನೆಲ್ಲ ಅರಿತುಕೊಳ್ಳಲು ಮನಸ್ಸಿಲ್ಲ. ಇರುವುದನ್ನು ಬದಲಾಯಿಸಿಕೊಳ್ಳಲು ನಮಗೆ ‘ಭಯ’ವಾಗುತ್ತದೆ. ಇರುವುದು ಒಂದು ಬದುಕು, ಚೆನ್ನಾಗಿ ‘ಮಜಾ’ ಮಾಡಿ ಹೋಗುವಾ ಎನ್ನುವ ಅನಿಸಿಕೆ. ಹಾಗಾಗಿ ಬದಲಾವಣೆ ಸಾಧ್ಯವಿಲ್ಲ. ಸತ್ಯವಾಗಿ ಯಾರಾದರೂ ತಮ್ಮನ್ನು ತಾವು ಅರಿತುಕೊಳ್ಳಲು, ಬದಲಾಯಿಸಿಕೊಳ್ಳಲು ಪ್ರಯತ್ನಪಟ್ಟರೆ ‘ ನಾವೂ ಸಹ ಬೂದಿ ಮುಚ್ಚಿದ ಕೆಂಡ ಗಾಳಿಬೀಸಿದರೆ ಹೇಗೆ ಹೇಗೆ ಪ್ರಜ್ವಲವಾಗಿ ಉರಿಯುತ್ತದೋ, ಹಾಗೆ ಪ್ರಜ್ವಲಿಸಬಹುದು, ಬೆಳಗಬಹುದು.

 

ರಸ ಚೆನ್ನುಡಿ

ನಮಗೆ ಪ್ರೀತಿ ಪಾತ್ರರಾದವರು, ನಮಗೆ ಏನನ್ನೂ ಮಾಡದೆ ಇದ್ದರೂ ಕೇವಲ ಅವರ ಸಾಮೀಪ್ಯದಿಂದಲೇ ನಮ್ಮ ದುಃಖವನ್ನು ಹೋಗಲಾಡಿಸುತ್ತಾರೆ. ಅದೇ ಪ್ರೀತಿಯಲ್ಲಿನ ಮಹತ್ತರ ಗುಣ – ಸುಭಾಷಿತ ಮಂಜರಿ

 

ರಸಧಾರೆ – ೨೯೦

ಸಕ್ಕರೆಯ ಭಕ್ಷ್ಯವನು ಮಕ್ಕಳೆದುರಿಗೆ ಕೈಗೆ
ಸಿಕ್ಕಿವಂತಿರಿಸಿ ಕದ್ದರೆ ಗದ್ದರಿಪುದೇಂ ?
ತಕ್ಕುದಲ್ಲದಪೇಕ್ಷೆಗೇಕೆ ಮದ್ಯವ ಕುಡಿಸು-
ತುಕ್ಕಿಸುವನದನು ವಿಧಿ – ಮಂಕುತಿಮ್ಮ.

ಮಕ್ಕಳೆದುರಿಗೆ=ಮಕ್ಕಳ+ಎದುರಿಗೆ//ಸಿಕ್ಕಿವಂತಿರಿಸಿ=ಸಿಕ್ಕುವಂತೆ+ಇರಿಸಿ//ಗದ್ದರಿಪುದೇಂ=ಗದ್ದರಿಪುದು+ಅದೇಂ//ತಕ್ಕುದಲ್ಲದಪೇಕ್ಷೆಗೇಕೆ=ತಕ್ಕುದು+ ಅಲ್ಲದ+ ಅಪೇಕ್ಷೆಗೆ+ ಏಕೆ// ಕುಡಿಸುತುಕ್ಕಿಸುವನದನು= ಕುಡಿಸುತ+ಉಕ್ಕಿಸುವನು+ಅದನು

ತಕ್ಕುದಲ್ಲದ= ಯೋಗ್ಯವಲ್ಲದ

ಸಿಹಿಯಾದ ಮಿಠಾಯಿಯನ್ನು ಮಕ್ಕಳ ಎದುರಿಗೆ ಇರಿಸಿ, ಅವರು ಅದನ್ನು ಕದ್ದು ತಿಂದರೆ ಗದರಿಸುವಂತೆ ಯೋಗ್ಯವಲ್ಲದ ಆಸೆಗಳಿಗೆ ನಮ್ಮ ಮನಸ್ಸುಗಳಲ್ಲಿ ಇಂಬುಕೊಡುವಂತೆ ಈ ಜಗತ್ತಿನಲ್ಲಿ ಎಲ್ಲ ವಿಷಯಗಳನ್ನು ಇಟ್ಟು, ಅವುಗಳನ್ನು ಪಡೆಯಲು ನಮ್ಮ ಮನಸ್ಸನ್ನು ಹೆಂಡಕುಡಿದವನಂತೆ ಆಡಿಸುತ್ತಿದೆ ‘ವಿಧಿ’ ಎಂದು ಜೀವನದ ವಾಸ್ತವವನ್ನು ಪ್ರಸ್ತುತ ಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಈ ಜಗತ್ತಿನಲ್ಲಿ ಎಲ್ಲ ವಸ್ತುಗಳನ್ನೂ ಸೃಷ್ಟಿಮಾಡಿ, ನಮ್ಮನ್ನೂ ಸೃಷ್ಟಿಮಾಡಿ, ಆ ವಸ್ತುಗಳಲ್ಲಿ ನಮಗೆ ಆಸೆಯನ್ನೂ ಇಟ್ಟು, ಹಾಗೆ ನಾವು ವಸ್ತು ವಿಷಯ ಮತ್ತು ವ್ಯಕ್ತಿಗಳನ್ನು ಆಸೆಪಟ್ಟಾಗ " ಆಸೆಪಡುವುದು ಸರಿಯಲ್ಲ" "ಆಸೆಯೇ ದುಃಖಕ್ಕೆ ಮೂಲ" " ಕಾಮಾತುರಾಣಾಂ ನ ಭಯಂ ನ ಲಜ್ಜಾ " ಮುಂತಾದವುಗಳಾಗಿ ನಮ್ಮನ್ನು ಹೆದರಿಸುವುದೇತಕ್ಕೆ ಎಂಬುದು ಒಂದು ಗಂಭೀರವಾದ ಪ್ರಶ್ನೆ.

ಆ ಪರಮಾತ್ಮ ಈ ಜಗತ್ತಿನ ಎಲ್ಲ ವಸ್ತುಗಳನ್ನೂ ಸೃಷ್ಟಿಸಿರುವುದು ತನ್ನ ಆನಂದಕ್ಕಾಗಿಯೇ ಎನ್ನುವ ವಾದ ಉಂಟು. ನಮ್ಮನ್ನೂ ಸಹ ಇತರ ಪ್ರಾಣಿಗಳಂತೆ ಅಥವಾ ಜೀವಿಗಳಂತೆ ಸೃಷ್ಟಿಸಿದ್ದಾನೆ. ಎಲ್ಲ ಪ್ರಾಣಿಗಳಲ್ಲಿಯೂ ಆ ಪರಮಾತ್ಮನೇ ಚೈತನ್ಯ ರೂಪದಲ್ಲಿದ್ದು ಈ ಜಗತ್ತಿನ ಎಲ್ಲವನ್ನೂ ಅನುಭವಿಸುತ್ತಿದ್ದಾನೆ. ಇದೇ ಅರ್ಥದಲ್ಲಿಯೇ ‘ಈಶಾವಾಸ್ಯಮಿದಂ ಸರ್ವಂ ಯತ್ಕಿನ್ಚಿಂತ್ ಜಗತ್ಯಾಂ ಜಗತ್। ತೇನ ತ್ಯಕ್ತೇನ ಭುಂಜೀತಾ ಮಾ ಗೃದಃ ಕಸ್ಯಸ್ವಿದ್ಧನಂ" ಎನ್ನುತದೆ ಈಶಾವಾಸ್ಯೋಪನಿಶತ್ತು.

ಆದರೆ ಮನುಷ್ಯ "ಈ ಜಗತ್ತಿನ ಎಲ್ಲವೂ ತನ್ನ ಉಪಯೋಗಕ್ಕಾಗಿಯೇ ಸೃಷ್ಟಿಸಲ್ಪಟ್ಟಿದೆ" ಎಂದುಕೊಂಡಿದ್ದಾನೆ. ಇದು ಅಹಂಕಾರ ಜನಿತವಾದ ಭಾವ. ಈ ಅಹಂಕಾರವೇ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಹೇಳುವ " ಮದ್ಯ". ಹೀಗೆ ಈ ಅಹಂಕಾರವೆಂಬ ಮದ್ಯವನ್ನು ನಮಗೆ ಕುಡಿಸಿ, ಆ ‘ವಿಧಿ’ ನಮ್ಮನ್ನೆಲ್ಲ ಆಸೆಗಳಿಗೆ ದಾಸರನ್ನಾಗಿಸಿ, ನಮ್ಮನ್ನು ಒಂದು ಬಿಡಿಸಲಾಗದ ಸಂಕೋಲೆಯಲ್ಲಿ ಸಿಕ್ಕಿಸಿಬಿಟ್ಟಿದೆ. ಇದು ಬಹಳ ಭಯಾನಕ. ಇದರಿಂದ ಹೊರಬರುವ ಪ್ರಯತ್ನವೇ ಒಟ್ಟು ಆಧ್ಯಾತ್ಮದ ಗುರಿ. ನಾವು ಎಲ್ಲವನ್ನೂ ಒಂದು ಸಮರ್ಪಣಾ ಭಾವದಿಂದ ಸ್ವೀಕರಿಸಿದಾಗ " ಅಹಂ" ಕಾರದ ಪ್ರಭಾವ ಕಡಿಮೆಯಾಗಿ ನಮಗೆ ದುಃಖದ ಕಾರಣವೂ ಇಲ್ಲದಂತಾದಾಗುತ್ತದೆ. ಆಸೆಗಳಿಂದ ಉದ್ಭವವಾಗುವ ದುಃಖದ ಪ್ರಮಾಣ ಮತ್ತು ಪರಿಣಾಮ ಕಡಿಮೆಯಾಗಬೇಕಾದರೆ, ಅಂತಹ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು.

 

ರಸ ಚೆನ್ನುಡಿ

ನಾನು, ನನ್ನದು ಎಂಬ ಅಭಿಮಾನದಿಂದುಂಟಾದ, ಕಾಮ ದುರಾಸೆ ಮೊದಲಾದ ಕೊಳೆಗಳಿಂದ
ಮನಸ್ಸು ಯಾವಾಗ ಬಿಡಲ್ಪಟ್ಟು,ಶುದ್ಧವಾಗುತ್ತದೆಯೋ ಆಗ ಸುಖವಾಗಲೀ, ದುಃಖವಾಗಲೀ, ಸಮವೆನಿಸುತ್ತದೆ- ಸುಭಾಷಿತ ಮಂಜರಿ

 

ರಸಧಾರೆ – ೨೮೯

ಆಳನೀಳಗಳ ಕಾಣಲ್ಕಾಗಿಸದೆ ಮೊರೆವ
ಬಾಳ ಕಡಲೊಳು ಮುಳುಗಿ ತಳದಿಂದಲೆದ್ದು
ಪೇಳುವರದಾರು ನ್ಯಾಯಾನ್ಯಾಯ ವಿವರಗಳ
ಗಾಳಿಗಾಬರಿಯೆಲ್ಲ – ಮಂಕುತಿಮ್ಮ.

ಕಾಣಲ್ಕಾಗಿಸದೆ = ಕಾನಲ್ಕೆ+ ಆಗಿಸದೆ// ತಳದಿಂದಲೆದ್ದು = ತಳದಿಂದಲಿ+ ಎಂದದು// ಪೇಳುವರದಾರು= ಪೇಳುವವರು + ಅದಾರು// ನ್ಯಾಯಾನ್ಯಾಯ = ನ್ಯಾಯ+ ಅನ್ಯಾಯ.

ಜೀವನವನ್ನು ಸಾಗರ ಎಂದಿದ್ದಾರೆ. ಹೇಗೆ ಯಾರೂ ಕಡಲ ಒಳಹೊಕ್ಕು ಅದರ ಆಳ, ಉದ್ದ ಮತ್ತು ಅಗಲವನ್ನು ಕಂಡು ಹೇಳಲು ಸಾಧ್ಯವಿಲ್ಲವೋ, ಹಾಗೆಯೇ ಬದುಕೆಂಬ ಸಾಗರದ ಆಳಕ್ಕೆ ಹೊಕ್ಕು ಇದು ನ್ಯಾಯ, ಇದು ಅನ್ಯಾಯ ಎಂದು ಹೇಳುವವರಾರು. ಹಾಗೆ ಯಾರಾದರೂ ಹೇಳಿದರೆ, ಅದು ಕೇವಲ ಊಹಾಪೋಹ ಅಥವಾ ಹೆದರಿಕೆಯಿಂದ ಹೇಳಿದ ಮಾತು ಎಂದು ತಿಳಿಯಬೇಕು ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಿರಂತರ ಬದಲಾಗುತ್ತಿರುವ ಮಾನವನ ಬದುಕಿನ ಪರಿಯನ್ನು ಯಾರೂ ಹೀಗೇ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಈ ಜೀವನಕ್ಕೆ ರೂಪಕೊಡುವುದು ಏನು ಎಂದು ನೋಡೋಣ. ಮನುಷ್ಯರ ಮನಸ್ಸಿನಲ್ಲಿ ನಡೆಯುವ ವಿಚಾರಗಳೇ ಈ ಜಗದ್ವ್ಯಾಪಾರವನ್ನು ರೂಪಿಸುತ್ತದೆ. ಅತೀ ಗೋಜಲು ಗೋಜಲಾದ ಮನುಜರ ಮನಸ್ಸುಗಳು ಮತ್ತು ಅಂತಹ ಕೋಟಿ ಕೋಟಿ ಮನುಷ್ಯರ ಮನಸ್ಸುಗಳು ರೂಪಿಸುವ ಈ ಜಗದ್ವ್ಯಾಪಾರ ಇನ್ನೆಷ್ಟು ಗೋಜಲಾಗಿರಬೇಕು. ಅಂತಹ ಸಿಕ್ಕುಸಿಕ್ಕಾದ ಜಗದ್ವ್ಯಾಪಾರವನ್ನೇ ‘ಭವಸಾಗರ’ ಎಂದಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಸಾಧ್ಯವೇ ಇಲ್ಲ

ಏಕೆಂದರೆ ಮಿತವಾದ ಜ್ಞಾನ ಮತ್ತು ಬುದ್ಧಿಶಕ್ತಿಯನ್ನು ಹೊಂದಿರುವ ನಾವು ಅಗಾಧವಾದ ಮತ್ತು ಪ್ರತಿ ನಿತ್ಯ, ಪ್ರತಿ ಘಳಿಗೆ ಬದಲಾಗುತ್ತಿರುವ ಈ ಬದುಕಿನ ಆಳವನ್ನಾಗಲೀ ಅಗಲವನ್ನಾಗಲೀ ಅಳೆದು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಇದು ಅರ್ಥವೇ ಆಗದಿದ್ದಮೇಲೆ ಇದು ಸರಿ ಅಥವಾ ಇದು ತಪ್ಪು ಎಂದು ಹೇಳುವುದು ಹೇಗೆ? ನಮಗೆ ಯಾವುದೂ ಸಂಪೂರ್ಣ ಅರ್ಥವಾಗದೆ, ನಾವೇ ಅಯೋಮಯ ಸ್ಥಿತಿಯಲ್ಲಿದ್ದೇವೆ. ಹಾಗಿದ್ದಮೇಲೆ ಇದು ನ್ಯಾಯ ಇದು ಅನ್ಯಾಯ ಎಂದು ಹೇಳುವುದು ಸರಿಯೇ? ಹಾಗೆ ಏನಾದರೂ ಹೇಳಿದರೆ, ಅದು ಅರೆಬರೆ ತಿಳುವಳಿಕೆಯಿಂದ ಹೇಳುವ, ಯಾರೋ ಹೇಳಿದ ಗಾಳಿ ಮಾತಿನಂತೆ ಇರುತ್ತದೆ. ಇದು ಸರಿಯಲ್ಲ. ಏಕೆಂದರೆ ಅಂತಹ ವಿಚಾರಗಳು ಜನಮಾನಸದಲ್ಲಿ ಗಾಬರಿಯನ್ನು ಉಂಟುಮಾಡುತ್ತದೆ.

ಹಾಗಾಗಿ ಇಲ್ಲಿ ನಡೆಯುವ ವಿದ್ಯಮಾನಗಳಿಗೆ ಅರೆಬರೆ ತಿಳುವಳಿಕೆಯಿಂದ ವ್ಯಾಖ್ಯಾನವನ್ನು ಮಾಡುವುದು ಬುದ್ಧಿವಂತರ ಲಕ್ಷಣವಲ್ಲ. ಏಕೆಂದರೆ ನಾವು ನೋಡುವ ಮತ್ತು ಅರಿತುಕೊಳ್ಳುವ ವಿಷಯಕ್ಕೆ ಬೇರೆ ಬರೆ ಆಯಾಮಗಳೂ ಇರಬಹುದಲ್ಲವೇ? ಸಮಗ್ರವಾಗಿ ಅರಿಯದೆ ವಿಶ್ಲೇಷಣೆ ಮಾಡುವುದು ತಪ್ಪು ಮತ್ತು ಅದು ಅನರ್ಥಗಳಿಗೆ ಕಾರಣವಾಗುತ್ತದೆ. ವಿಚಾರವನ್ನು ಸಂಪೂರ್ಣ ಅರಿಯಬೇಕು. ನಮ್ಮ ಅನುಭವಕ್ಕೆ ತಂದುಕೊಳ್ಳಬೇಕು ಮತ್ತು ನಮಗೆ ಅದು ಸಂಪೂರ್ಣ ಸತ್ಯವೆಂದು ಅರಿವಾದಾಗ ಮಾತ್ರ ಅದನ್ನು ಹೇಳಬೇಕು. ಅಂತಹ ಪ್ರಯತ್ನ ನಮ್ಮಲ್ಲಿ ಸದಾಕಾಲ ನಡೆಯಬೇಕು