RSS

Monthly Archives: ಜನವರಿ 2013

ರಸಧಾರೆ – ೩೨೧

ಜೀವನದ ಪರಿಪೂರ್ಣದರ್ಶನವದೊಂದಿಹುದು ।ದು।
ಭೂವ್ಯೋಮ ವಿಸ್ತರದ ಮಿತಿಯ ಮೀರ್ದಿದದು ।।
ದೇವ ನರ ಪಶು ಸಸಿಗಳೆಲ್ಲ ಕುಣಿಯುವರಲ್ಲಿ ।
ಭಾವಿಸಾ ಚಿತ್ರವನು – ಮಂಕುತಿಮ್ಮ ।।

ಪರಿಪೂರ್ಣದರ್ಶನವದೊಂದಿಹುದು = ಪರಿಪೂರ್ಣ+ದರ್ಶನವು+ಅದು+ಒಂದು+ಇಹುದು, ಮೀರ್ದಿದದು = ಮೀರ್ದಿದ+ಅದು, ಕುಣಿಯುವರಲ್ಲಿ =ಕುಣಿಯುವರು+ಅಲ್ಲಿ, ಭಾವಿಸಾ= ಭಾವಿಸು+ ಆ

ಭೂವ್ಯೋಮ= ಭೂಮಿ ಮತ್ತು ಆಕಾಶ, ಮೀರ್ದಿದ = ಮೀರಿದ

ಜೀವನಕ್ಕೆ ಪರಿಪೂರ್ಣವಾದ ಒಂದು ದರ್ಶನವಿದೆ ಅಥವಾ ಇಡೀ ಬದುಕಿಗೆ ಒಂದು ಪೂರ್ಣವಾದ ಚಿತ್ರವಿದೆ. ಅದು ಭೂಮಿ ಆಕಾಶದ ವಿಸ್ತಾರವನ್ನು ಮೀರಿ ಇದೆ. ಅಲ್ಲಿ ದೇವತೆಗಳು, ನರರು, ಪಶುಗಳು ಗಿಡ ಮರಗಳು ಎಲ್ಲವೂ ನಲಿದಾಡುತ್ತಾರೆ.ಅಂತಹ ಚಿತ್ರವನ್ನು ಭಾವಿಸು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಮ್ಮ ಬದುಕಿನಲ್ಲಿ ನಮಗೆ ಯಾವುದರ ಪೂರ್ಣ ಚಿತ್ರವೂ ಅರಿವಾಗುವುದೇ ಇಲ್ಲ. ಉದಾಹರಣೆಗೆ, ನಮಗೆ ನಮ್ಮ ಮನೆಯಲ್ಲಿರುವ ವ್ಯಕ್ತಿಗಳ ಪರಿಚಯ ಎಷ್ಟಿದೆ ಎಂದು ಯೋಚನೆ ಮಾಡಿದರೆ, ನಾವು ಅವರನ್ನು ಶೇಕಡಾ ೧೦ರಷ್ಟೂ ಅರಿತಿಲ್ಲ ಎಂಬುದು ನಮಗೆ ಅರ್ಥವಾಗುವುದು. ಹೀಗೆ ನಮ್ಮೊಡನೆ ಹುಟ್ಟಿದ ಅಣ್ಣ ತಮ್ಮಂದಿರನ್ನೋ, ಅಕ್ಕ ತಂಗಿಯರನ್ನೋ ಅಥವಾ ನಮಗೆ ಜನ್ಮ ಕೊಟ್ಟ ತಂದೆ ತಾಯಿಯರನ್ನೋ ಅಥವಾ ನಾವು ಕಟ್ಟಿಕೊಂಡವರನ್ನೋ ಅರ್ಥಮಾಡಿಕೊಳ್ಳಲಾಗದ ನಾವು, ಇಷ್ಟು ವಿಶಾಲವಾದ ಜಗತ್ತನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ. ನಮಗೆ ಅರ್ಥವಾಗದಿದ್ದರೂ ಅದಕ್ಕೆ ಒಂದು ಪೂರ್ಣ ಚಿತ್ರವಿದೆ.

ಜೀವನದಲ್ಲಿ ನಾವು ನಮ್ಮ ಸುತ್ತ ಭಾಷೆ, ವರ್ಣ, ಬಣ್ಣ, ಜಾತಿ ಮತ್ತು ಅಹಂಕಾರ ಮುಂತಾದ ಗೆರೆಗಳನ್ನು ಎಳೆದುಕೊಂಡು ನಾವು ನೋಡುವ ದೃಷ್ಟಿಯನ್ನು ಮತ್ತು ಆಲೋಚಿಸುವ ಬುದ್ಧಿಯನ್ನು ಸಂಕುಚಿತವಾಗಿಸಿ, ನಮ್ಮ ಪ್ರಪಂಚ ಇಷ್ಟೇ, ಇದಕ್ಕಿಂತ ಇನ್ನೇನೂ ಇಲ್ಲ, ಇದನ್ನು ಬಿಟ್ಟು ಬೇರೇನಾದರೂ ಇದ್ದರೆ ಅದನ್ನು ನಾನು ಒಪ್ಪುವುದಿಲ್ಲ ಎಂಬ ಮೂರ್ಖತನದ ಮತ್ತು ಭಂಡತನದ ಭಾವವನ್ನು ವ್ಯಕ್ತಪಡಿಸುತ್ತಾ " ಕೂಪಸ್ಥ ಮಂಡೂಕ" ಗಳ ತರೆಹೆ ನಾವು ಜೀವಿಸುತ್ತಾ ಇದ್ದೇವೆ.

ಇದನ್ನು ಬಿಟ್ಟು ನಮ್ಮ ದೃಷ್ಟಿಕೋನವನ್ನು ವಿಸ್ತರಿಸಿ ಒಂದು ಸಮಗ್ರ ಚಿತ್ರವನ್ನು ನೋಡಲು ಪ್ರಯತ್ನಪಟ್ಟರೆ, ಆಗ ನಾವು ಎಳೆದುಕೊಂಡ ಸಂಕುಚಿತಬುದ್ಧಿಯ ಗೆರೆಗಳು ಅಳಿಸಿಹೋಗಿ, " ದೇವ ನರ ಪಶು ಸಸಿಗಳೆಲ್ಲ ಕುಣಿಯುವರಲ್ಲಿ’ ಎಂದು ಗುಂಡಪ್ಪನವರು ಹೇಳುವಂತೆ, ಸಕಲ ಚರಾಚರಗಳೂ ಆನಂದವಾಗಿ ಜೀವಿಸುವ ಒಂದು ಬೃಹತ್ ಜಗತ್ತಿನ ಚಿತ್ರ ಮೂಡುತ್ತದೆ. ಅಲ್ಲಿ ಜಾತಿ,ಮತ,ವರ್ಣ,ದೇಶ,ಭಾಷೆ,ಬಣ್ಣಗಳನ್ನು ಬೇರೆಯಾಗಿಸುವ ಅಹಂಕಾರದ ರೇಖೆಗಳಲ್ಲಾ ಅಳಿಸಿ ಹೋಗುತ್ತದೆ. ಅಲ್ಲಿ ನಮಗೆ ಒಂದು ಸುಂದರ ಜಗತ್ತಿನ ಸಮಗ್ರ ಚಿತ್ರಣ ಕಾಣುತ್ತದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಮನಗಳಲ್ಲಿ ಎಳೆದುಕೊಂಡ ಸಂಕುಚಿತ ಭಾವನೆಯ ಗೆರೆಗಳನ್ನು ಅಳಿಸಿಹಾಕಿ ವಿಶಾಲ ಜಗಚ್ಚಿತ್ರವನ್ನು ನೋಡಬೇಕು. ಇದನ್ನೇ ಮಾನ್ಯ ಗುಂಡಪ್ಪನವರು " ಭಾವಿಸಾ ಚಿತ್ರವನು" ಎಂದು ಒಂದು ಆದೇಶ ನೀಡಿದ್ದಾರೆ. ವಾಚಕರೆ ಪ್ರಯತ್ನ ಪಟ್ಟರೆ ನಮಗೂ ಅಂತಹ ಮುಕ್ತ ಜಗತ್ತಿನ ಚಿತ್ರ ಕಾಣಬಹುದು. ಪ್ರಯತ್ನ ಪಡಬೇಕು ಅಷ್ಟೇ.

Advertisements
 

ರಸ ಚೆನ್ನುಡಿ

ಜೀವನದ ನಮ್ಮ ದೃಷ್ಟಿಕೋನವನ್ನು ಬದಲಾಯಿಸಲು ಮತ್ತು ಹೊಸ ಹೊಸ ಗುರಿಗಳನ್ನು ಇಟ್ಟುಕೊಳ್ಳಲು ಹೆದರಬಾರದು.
ನಮ್ಮ ಸುತ್ತ ಇರುವ ಸೀಮಾರೇಖೆಗಳನ್ನು ಅಳಿಸಿ ಮುನ್ನುಗ್ಗಿದರೆ ಅಸಾಧ್ಯವೆಂದೆನಿಸಿದ ಕೆಲಸಗಳನ್ನೂ ಸಾಧಿಸಿಬಿಡಬಹುದು – ಅನಾಮಿಕ

 

ರಸಧಾರೆ – ೩೨೦

ಪಂಚಕವೊ, ಪಂಚ ಪಂಚಕವೊ;ಮಾಭೂತಗಳ ।
ಹಂಚಿಕೆಯನರಿತೇನು? ಗುಣವ ತಿಳಿದೇನು ?।।
ಕೊಂಚ ಕೊಂಚಗಳರಿವು ಪೂರ್ಣದರಿವಾದೀತೇ?।
ಮಿಂಚಿದದು ಪರತತ್ವ-ಮಂಕುತಿಮ್ಮ ।।

ಹಂಚಿಕೆಯನರಿತೇನು=ಹಂಚಿಕೆಯನು+ಅರಿತೇನು,ಕೊಂಚಗಳರಿವು=ಕೊಂಚಗಳ+ಅರಿವು,ಪೂರ್ಣದರಿವಾದೀತೇ=ಪೂರ್ಣದ+ಅರಿವು+ಆದೀತೆ,ಮಿಂಚಿದದು=ಮಿಂಚಿದ್ದು+ಅದು .

ಪಂಚಪಂಚಕ=ಇಪ್ಪತ್ತೈದು,ಮಾಭೂತಗಳ=ಮಹಾಭೂತಗಳ,ಹಂಚಿಕೆ=ಯುಕ್ತಿ ಅಥವಾ ಸಂಚು,ಮಿಂಚಿದ್ದು=ಉನ್ನತವಾದದ್ದು,ಪರತತ್ವ=ಪರಮಾತ್ಮತತ್ವ,

ಪಂಚಭೂತಗಳೆಂಬ ಈ ಮಹಾ ಭೂತಗಳು ಐದೋ,ಇಪ್ಪತ್ತೈದೋ,ಅದರ ಲೆಕ್ಕವನ್ನು ಅರಿತು ಏನು ಪ್ರಯೋಜನ? ಅವುಗಳ ಗುಣಗಳನ್ನು ನಾವು ತಿಳಿದುಕೊಂಡು ಏನಾಗಬೇಕಿದೆ? ಅದರ ಸಮಗ್ರ ಅಥವಾ ಸಂಪೂರ್ಣ ಅರಿವು ನಮಗಾಗುವುದಿಲ್ಲ. ಅಲ್ಪಸ್ವಲ್ಪ ಅದನ್ನು ತಿಳಿದುಕೊಂಡರೆ, ಪೂರ್ಣದ ಅರಿವು ನಮಗೆ ಆಗುತ್ತದೆಯೇ?. ಈ ಪರಮಾತ್ಮನ ಮತ್ತು ಅವನ ಸೃಷ್ಟಿಯ ಜ್ಞಾನ,ನಮ್ಮ ಅರಿತುಕೊಳ್ಳುವ ಕ್ಷಮತೆಗೆ ಮಿಂಚಿದ್ದು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಪಂಚಭೂತಗಳಲ್ಲಿ ಒಂದಾದ ಆಕಾಶವನ್ನು ನಾವು ಅಳೆಯಲಾಗುವುದಿಲ್ಲ,ಅರಿಯಲಾಗುವುದಿಲ್ಲ. ಬೃಹದಾರಣ್ಯಕ ಉಪನಿಷತ್ತಿನಲ್ಲಿ " ಆಕಾಶವು " ಯಾವುದರಿಂದ ಆಗ ಮಾಡಲ್ಪಟ್ಟಿದೆ ಎಂದು ಗಾರ್ಗಿ ಕೇಳುವ ಪ್ರಶ್ನೆಗೆ ಯಾಜ್ಞವಲ್ಕ್ಯನು ಆಕಾಶವನ್ನು"ಅಕ್ಷರ,ಅಸ್ಥೂಲ,ಅಹ್ರಸ್ವ,ಅಧೀರ್ಘ,ಆಲೋಹಿತ,ಅಸ್ನೇಹ"ಮುಂತಾದಾಗಿ ವಿವರಿಸುತ್ತಾನೆ.ನೋಡಿ ನಮಗೇನಾದರೂ ಅರ್ಥವಾಗುತ್ತದೆಯೇ? ಇಲ್ಲ!!! ಹೀಗೆಯೇ ಇತರ ಭೂತಗಳಾದ ವಾಯು,ಅಗ್ನಿ,ನೀರು ಮತ್ತು ಭೂಮಿಗಳನ್ನೂ ನಾವು ಸಂಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ.

ನಾವು ಗಾಳಿಯನ್ನು ಉಸಿರಾಡುತ್ತೇವಾದ್ದರಿಂದ ಬದುಕಿದ್ದೇವೆ. ನಮಗೆ ಆ ಗಾಳಿಯ ಉಗಮ ಮತ್ತು ಸ್ವರೂಪ,ಅದರಲ್ಲಿ ಮಿಶ್ರಣಗೊಂಡ ಅನ್ಯ ಅನಿಲಗಳ ಪರಿಚಯವಿಲ್ಲದಿದ್ದರೂ ಉಸಿರಾಡುತ್ತೇವೆ ಮತ್ತ ಅದರಿಂದ ಬದುಕಿದ್ದೇವೆ. ಹಾಗೆಯೇ ಮಿಕ್ಕ ಭೂತಗಳ ಪರಿಚಯ ಮತ್ತು ಉಪಯೋಗ ನಮಗೆ ಇದ್ದರೂ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲಾಗುವುದಿಲ್ಲ. ಇಲ್ಲಿ ಮಾನ್ಯ ಗುಂಡಪ್ಪನವರು ‘ಹಂಚಿಕೆಯನರಿತೇನು, ಗುಣವ ತಿಳಿದೇನು" ಎಂದು ಹೇಳುತ್ತಾ ಅವು ಅರ್ಥವಾಗದ ಹಾಗೆ ಏಕೆ ಇದೆ ಎಂದಾಗಲೀ ಮತ್ತು ಅವುಗಳ ಗುಣವನ್ನು ಅರಿತು ನಮಗೆ ಏನಾಗಬೇಕಾಗಿದೆ ಎಂದು ಹೇಳುತ್ತಾರೆ.

ಏಕೆಂದರೆ ಇದು ಪರಮಾತ್ಮನಿಂದಾದ ಪಂಚಭೂತಗಳು. ಇದು ಪರತತ್ವಕ್ಕೆ ಸಂಬಂಧಪಟ್ಟದ್ದು. ನಮ್ಮ ಅರಿವಿಗೆ ಮಿಂಚಿದ್ದು. ಹಾಗಾಗಿ ಈ ಪಂಚಭೂತಗಳು ಹೇಗಾದರೂ ಆಗಿರಲಿ, ಹೇಗಾದರೂ ಇರಲಿ, ಹೇಗಾದರೂ ಕ್ರಿಯಾಶೀಲವಾಗಿರಲಿ, ನಾವು ಅದರ ಸಮಗ್ರ ಅರಿವಿಗೆ ಪ್ರಯತ್ನಿಸದೆ, ಆ ಪರಮಾತ್ಮನಿಂದ ಆದ ಈ ಪಂಚಭೂತಗಳು, ಈ ಜಗತ್ತಿನಲ್ಲಿ ನಮ್ಮ ಬದುಕಿಗೆ ಹೇಗೆ ಪೂರಕವಾಗಿವೆ ಎಂಬುದನ್ನು ಅರಿತು, ಅವುಗಳಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಾ, ಧರ್ಮದಿಂದ ಅವುಗಳನ್ನು ಅನುಭವಿಸುತ್ತಾ, ಅವುಗಳನ್ನು ನಮ್ಮ ದುರ್ಬುದ್ಧಿಯಿಂದ ಹಾಳುಮಾಡದೆ ಬದುಕಿದರೆ ನಮ್ಮ ಬದುಕು ಸುಂದರವಾಗಿರುವುದಲ್ಲದೆ ಮುಂದಿನ ಪೀಳಿಗೆಗಳೂ ಸಹ ಬದುಕಲು ಅನುವು ಮಾಡಿಕೊಟ್ಟಂತಾಗುತ್ತದೆ. ಅಂತಹ ಪ್ರಯತ್ನವನ್ನು ನಾವು ಮಾಡಿದರೆ,ಆ ಪರಮಾತ್ಮನ ಸೃಷ್ಟಿಗೆ ತನ್ನ ಸ್ವರೂಪ ಉಳಿಸಿಕೊಳ್ಳಲು ಸಹಾಯಮಾಡಿದಂತಾಗುತ್ತದೆ.

 

ರಸ ಚೆನ್ನುಡಿ

‘ನಾ’ ಒಬ್ಬನೇ ‘ನನ್ನನ್ನು’ ಸಂಪೂರ್ಣವಾಗಿ ಅರಿಯಲು ಸಾಧ್ಯ. ನನ್ನ ಗುಣಗಳು ಮತ್ತು ದೋಷಗಳು ನನಗೊಬ್ಬನಿಗೇ ಗೊತ್ತು.
ಹಾಗಾಗಿ ನನ್ನನ್ನು ಪರರು ವಿಶ್ಲೇಷಣೆ ಮಾಡುವುದಕ್ಕಿಂತ ನಾನೇ ವಿಶ್ಲೇಷಣೆ ಮಾಡಿಕೊಂಡರೆ ನಾ ಬೆಳೆಯಲು, ನನ್ನನ್ನು ತಿದ್ದಿಕೊಳ್ಳಲು ಸಾಧ್ಯ – ಅನಾಮಿಕ

 

ಮಂಕುತಿಮ್ಮನ ಕಗ್ಗ – ೩೧೯

ಪಂಚಭೂತಗಳಂತೆ; ಪಂಚೇಂದ್ರಿಯಗಳಂತೆ
ಪಂಚವೇಕೆ? ಚತುಷ್ಕ ಷಟ್ಕವೇಕಲ್ಲ?
ಹೊಂಚುತಿಹನಂತೆ ವಿಭು; ಸಂಚವನದೇನಿಹುದೋ
ವಂಚಿತರು ನಾವೆಲ್ಲ – ಮಂಕುತಿಮ್ಮ

ಷಟ್ಕವೇಕಲ್ಲ = ಷಟ್ಕವು + ಏಕಲ್ಲ, ಹೊಂಚುತಿಹನಂತೆ = ಹೊಂಚುತಿಹನು+ಅಂತೆ, ಸಂಚವನದೇನಿಹುದೋ = ಸಂಚು+ಅವನದು+ಏನು+ಇಹುದೋ

ಚತುಷ್ಕ = ನಾಲ್ಕು, ಷಟ್ಕ = ಆರು, ವಿಭು = ಪರಮಾತ್ಮ,

ಈ ಜಗತ್ತನ್ನು ನಡೆಸುವುದು ಪಂಚಭೂತಗಳಂತೆ ಮತ್ತು ನಮಗೆ ಪಂಚೇಂದ್ರಿಯಗಳಿವೆಯಂತೆ. ಐದೇ ಏಕೆ, ನಾಲ್ಕು ಅಥವಾ ಆರು ಏಕಿರಬಾರದು?. ಪರಮಾತ್ಮ ಈ ಜಗತ್ತನ್ನು ಯಾರಿಗೂ ಅರ್ಥವಾಗದ ರೀತಿಯಲ್ಲಿ ಸೃಜಿಸಿದ್ದಾನೆ, ಇದರಲ್ಲಿ ಅವನ ಸಂಚು ಏನಿರಬಹುದು. ನಮಗೆ ಇದೆಲ್ಲ ಅರಿಯದಂತೆ ಈ ಜಗತ್ತನ್ನಿಟ್ಟು ನಮ್ಮನ್ನೆಲ್ಲ ವಂಚಿಸಿದ್ದಾನೋ ಆ ಪರಮಾತ್ಮ ಎಂದು, ಇನ್ನೂ ಸಂದೇಹವಾಗಿಯೇ ಉಳಿದಿರುವ ವಿಷಯವನ್ನು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು, ಈ ಕಗ್ಗದಲ್ಲಿ.

ನಾವಿರುವ ಭೂಮಿಯ ಅಸ್ಥಿತ್ವಕ್ಕೆ ಆ ಪರಮಾತ್ಮ ಸೃಷ್ಟಿಸಿದ ಪಂಚಭೂತಗಳು ಕಾರಣವೆಂದು ನಮಗೆ ಸ್ಥೂಲವಾಗಿ ಗೊತ್ತು. "ಆಕಾಶಾತ್ ವಾಯು: ವಾಯೋರಗ್ನಿ: ಅಗ್ನೇರಾಪಃ ಅದ್ಭ್ಯಃ ಪೃಥಿವೀ ಪೃತಿವ್ಯಾ ಓಷದಯಃ ಓಷಧೀಭ್ಯೋನ್ನಂ ಅನ್ನಾತ್ ಪುರುಷಃ " ಎಂದು ಈ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಈ ಭೂಮಿಗಳ ಪ್ರಭಾವ ಈ ಜಗತ್ತಿನ ಸಕಲ ಚರಾಚರಗಳ ಅಸ್ಥಿತ್ವದ ಮೇಲೆ ಎಷ್ಟಿದೆ ಎಂದು ವಿವರಿಸುತ್ತದೆ. ಹಾಗಾಗಿ ನಾವು ಇಲ್ಲಿ ಇರುವುದಕ್ಕೆ " ಪಂಚ "ಭೂತಗಳು ಕಾರಣ.

ಹಾಗೆಯೇ ಈ ಜಗತ್ತಿನೊಂದಿಗೆ ಸಂಪರ್ಕವನ್ನು ಕಲ್ಪಿಸಿಕೊಳ್ಳಲು ನಮಗೆ ಕಿವಿ, ಚರ್ಮ, ಕಣ್ಣು, ನಾಲಗೆ ಮತ್ತು ಮೂಗು ಎಂಬ " ಪಂಚ" ಇಂದ್ರಿಯಗಳು ಇವೆ. ಇವುಗಳು ನಮಗೆ ಶಬ್ದ, ಸ್ಪರ್ಶ ರೂಪ ರಸ ಮತ್ತು ಗಂಧಗಳ ಜ್ಞಾನವನ್ನು ಉಂಟುಮಾಡುತ್ತವೆ. ಈ ಶಬ್ದ, ಸ್ಪರ್ಶ ರೂಪ ರಸ ಮತ್ತು ಗಂಧಗಳೂ ಸಹ ಆ ಪಂಚ ಭೂತಗಳ ಸಹಾಯದಿಂದಲೇ ಆಗುತ್ತದೆ. ಶಬ್ಧಕ್ಕೆ ಆಕಾಶ, ಸ್ಪರ್ಶಕ್ಕೆ ವಾಯು ರೂಪಕ್ಕೆ ಅಗ್ನಿ, ರಸಕ್ಕೆ ನೀರು ಮತ್ತು ಗಂಧಕ್ಕೆ ಭೂಮಿಯ ಸಹಾಯ. ಆದರೆ ಈ ಜ್ಞಾನವೆಲ್ಲವೂ ನಮಗೆ ನಮ್ಮ ಮನಸ್ಸಿನ ಮೂಲಕವೇ ಆಗಬೇಕಾದ್ದರಿಂದ " ಮನಸ್ಸಿಗೆ" ಆರನೇ ಇಂದ್ರಿಯದ ಸ್ಥಾನವನ್ನು ಭಗವದ್ಗೀತೆಯಲ್ಲಿ ಕೊಡಲ್ಪಟ್ಟಿದೆ. ಇವೆಲ್ಲವೂ ನಮಗೆ ಗೊತ್ತಿರುವ ವಿಷಯವಾದರೂ, ಇವು ಐದೇ ಏಕೆ ನಾಲ್ಕು ಏಕಿರಬಾರದು ಎಂದು ಯೋಚನೆ ಮಾಡಿದರೆ ನಮಗೆ ಸಮರ್ಪಕವಾದ ಉತ್ತರ ಸಿಗುವುದಿಲ್ಲ. ಅವುಗಳನ್ನು ಸಂಪೂರ್ಣವಾಗಿ ಅರಿಯುವುದೂ ಸಾಧ್ಯವೇ ಇಲ್ಲ. ಹಾಗೆ ಅವುಗಳ ಸ್ವರೂಪ ನಮ್ಮ ಅರಿವಿಗೆ ಬಾರದಂತೆ ಒಂದು ನಿಗೂಢತೆಯನ್ನು ಇಟ್ಟಿದ್ದಾನೆ ಆ ಪರಮಾತ್ಮ, ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. ಹಾಗೆ ಮಾಡಿ ನಮ್ಮನ್ನು ಅವುಗಳ ಸಂಪೂರ್ಣ ಜ್ಞಾನದಿಂದ ವಂಚಿತರನ್ನಾಗಿಸಿದ್ದಾನೆ ಎಂದೂ ಸಹ ಹೇಳುತ್ತಾರೆ.

ಮಾನವ ಮಾತ್ರರಾದ ನಮಗೆ, ಅಗಾಧವಾದ ಪಂಚಭೂತಗಳನ್ನು ಅರಿಯಲು ಸಾಮರ್ಥ್ಯವೂ ಇಲ್ಲ, ಯೋಗ್ಯತೆಯೂ ಇಲ್ಲ. ಹಿಂದೆ ಬಹಳ ಹಿಂದೆ ಮಹಾನ್ ಋಷಿ ಮುನಿಗಳು ಅರಿತಿದ್ದರಂತೆ. ಅವರ ಆ ಜ್ಞಾನವನ್ನೇ ನಮಗೆ ವೇದಗಳಲ್ಲಿ ತುಂಬಿಕೊಟ್ಟಿದ್ದಾರೆ. ಅದನ್ನು ಅರಿತರೆ ಸಾಕು. ಅಷ್ಟೇ ಅಲ್ಲ. ಆ ಪರಮಾತ್ಮ ಈ ಪಂಚ ಭೂತಗಳನ್ನೂ ಮತ್ತು ಪಂಚೇಂದ್ರಿಯಗಳನ್ನೂ ನಮ್ಮ ಈ ಬದುಕಿಗೆ ಪೂರಕವಾಗಿ ಕೊಟ್ಟಿದ್ದಾನೆ. ಅವುಗಳನ್ನು ಗೌರವಿಸಬೇಕು, ಸೂಕ್ತವಾಗಿ ಉಪಯೋಗಿಸಿಕೊಳ್ಳಬೇಕು. ಇಂದು ನಾವು ಇವುಗಳನ್ನು ಹಾಳುಗೆಡವಿಕೊಂಡು, ಅಂತರ್ಜಲದ ಅಭಾವ, ವಾಯು ಮಾಲಿನ್ಯ, ಶಬ್ದ ಮಾಲಿನ್ಯವೆಂದು ಪಂಚ ಭೂತಗಳ ದುರುಪಯೋಗದ ಫಲವನ್ನು ಅನುಭವಿಸುತ್ತಿದ್ದೇವೆ. ಆದರೆ ಈ ಪಂಚಭೂತಗಳು ಎಷ್ಟುಬಲಶಾಲಿಗಳೆಂದರೆ, ಅವು ತಮ್ಮನ್ನು ತಾವು ಸರಿಪಡಿಕೊಳ್ಳುವ ಒಂದು ವ್ಯವಸ್ಥೆಯನ್ನೂ ಪರಮಾತ್ಮ ಸೃಜಿಸಿದ್ದಾನೆ. ನಮಗೆ ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂಬ ಕಿಂಚಿತ್ ಪರಿಜ್ಞಾನ ನಮಗಿದ್ದರೆ ಸಾಕು.

 

ರಸ ಚೆನ್ನುಡಿ

ಜೀವನದಲ್ಲಿ ಸೋಲು ಎಂಬುದೇ ಇಲ್ಲ. ಅದು ಕೇವಲ ಫಲಿತಾಂಶಗಳ ಮಹಾಪೂರ.
ನಿಮಗೆ ಸಿಕ್ಕ ಫಲಿತಾಂಶಗಳಿಂದ ಕಲಿಯಲು ಮತ್ತು ಬೆಳೆಯಲು ನಿಮಗೆ ಸಂಪೂರ್ಣ ಹಕ್ಕು ಉಂಟು – ಅನಾಮಿಕ

 

ರಸಧಾರೆ – ೩೧೮

ಹಾಸ್ಯಗಾರನೊ ಬೊಮ್ಮ; ವಿಕಟ ಪರಿಹಾಸವದು
ಆಸ್ಯ ಗಂಭೀರ; ಬೆರಲಿಂದ ಚಕಳಗುಳಿ
ವಿಶ್ವಾಸದುಪಚಾರ; ಹುಣಿಸೆಮೆಣಸಾಹಾರ
ವಿಶ್ವಪಾಲನೆಯಿಂತು – ಮಂಕುತಿಮ್ಮ

ಪರಿಹಾಸವದು = ಪರಿಹಾಸವು + ಅದು, ವಿಶ್ವಾಸದುಪಚಾರ= ವಿಶ್ವಾಸದ + ಉಪಚಾರ, ಮೆಣಸಾಹಾರ = ಮೆಣಸ + ಆಹಾರ, ವಿಶ್ವಪಾಲನೆಯಿಂತು= ವಿಶ್ವ + ಪಾಲನೆಯು +ಇಂತು

ವಿಕಟ=ಮನೋವಿಕಾರದ ಹಾಸ್ಯ, ಆಸ್ಯ = ಮುಖ, ವದನ,

ನಮ್ಮನ್ನು ಸೃಷ್ಟಿಸಿದ ಆ ಬ್ರಹ್ಮ ವಿಕಟತೆಯಿಂದ ಕೂಡಿದ ಹಾಸ್ಯಗಾರನೋ? ಅವನ ಮುಖ ಮಾತ್ರ ಗಂಭೀರವಾಗಿದ್ದರೂ, ಬೆರಳಿಂದ ಕಚಗುಳಿ ಇಡುತ್ತಾ ನಮ್ಮನ್ನು ನಗಿಸಲು ಪ್ರಯತ್ನಿಸುವ ಅಥವಾ ಬಹಳ ವಿಶ್ವಾಸದಿಂದ ನಮಗೆ ಉಪಚಾರ ಮಾಡುತ್ತಾ ಭೋಜನವ ಬಡಿಸಿ ಊಟದಲ್ಲಿ ಹುಣಸೆಯ ಹುಳಿಯನ್ನೂ, ಮೆಣಸಿನ ಖಾರವನ್ನೂಇಟ್ಟಂತೆ, ನಮಗೆ ಜೀವನದಲ್ಲಿ ಗುಣ-ಅವಗುಣ, ಸಂತೋಷ – ದುಃಖ, ಹೀಗೆ ಒಂದಕ್ಕೊಂದು ವಿರೋಧವಾದದ್ದನ್ನು ಇಟ್ಟು ನಮ್ಮ ಪರಿಸ್ಥಿತಿ ನೋಡಿ ತಾನು ಆನಂದವನ್ನು ಅನುಭವಿಸುತ್ತಿದ್ದಾನೋ ಆ ಬ್ರಹ್ಮ ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಆ ಪರಮಾತ್ಮ ನಮಗೆ ಜೀವನದಲ್ಲಿ ಸಂತೋಷಪಡಲು ಮತ್ತು ದುಃಖಪಡಲು ಕಾರಣಗಳನ್ನು ಕೊಟ್ಟಿದ್ದಾನೆ . ಅವನೇನೋ ಜಗದ್ರಕ್ಷಕನ ರೂಪದಲ್ಲಿ ಬಲು ಗಂಭೀರ. ಆದರೆ ಅವನು ಸೃಷ್ಟಿಸಿದ ಈ ಜಗತ್ತಿನಲ್ಲಿ ಕೇವಲ ಗಂಭೀರವೇ ಇಲ್ಲ. ಇಲ್ಲಿ ಹಾಸ್ಯ,ನಲಿವು,ಪ್ರೇಮ,ಪ್ರೀತಿ,ದ್ವೇಷ,ಅಸೂಯೆ,ಕೋಪ,ಸಹಜತೆ,ನಟನೆ ಹೀಗೆ ಒಂದಕ್ಕೊಂದು ಪೂರಕವಾದ ಮತ್ತು ಒಂದಕ್ಕೊಂದು ಮಾರಕವಾದ ಭಾವನೆಗಳನ್ನು ನಮ್ಮಲ್ಲಿ ತುಂಬಿದ್ದಾನೆ ಅಥವಾ ನಾವು ಇಂತಹ ಭಾವನೆಗಳನ್ನು ತುಂಬಿಕೊಂಡಿದ್ದೇವೆ. ಆದರೆ ನಮ್ಮ ಯಾವ ಭಾವವೂ ಶಾಶ್ವತವಲ್ಲ. ಈ ಜಗತ್ತು ಇರುವುದೇ ಹೀಗೆ. ತನ್ನ ಆನಂದಕ್ಕಾಗಿ ಸೃಷ್ಟಿಸಿಕೊಂಡ ಈ ಜಗತ್ತಿನಲ್ಲಿ ತನಗೆ ಬೇಕಾದ ಎಲ್ಲವನ್ನೂ ಇಟ್ಟು ನಮಗೆ ಅದರೊಳಗೆ ಆಸಕ್ತಿಯನ್ನು ಹುಟ್ಟಿಸಿ, ಒಂದು ಕಡೆ ಸುಖವನ್ನೂ ಮತ್ತೊಂದು ಕಡೆ ದುಃಖವನ್ನೂ ಅನುಭವಿಸುವಂತೆ ಮಾಡುತ್ತಾನೆ. ನಮ್ಮ ಮೂಲಕ ಆ ಪರಬ್ರಹ್ಮನೇ ಇದನ್ನೆಲ್ಲಾ ಅನುಭವಿಸುತ್ತಾ ಆನಂದಿಸುತ್ತಿದ್ದಾನೆ ಎನ್ನುವುದು ನಮ್ಮ ಸನಾತನ ನಂಬಿಕೆ.

ಆದರೆ ಒಂದು ವಿಷಯ. ಆ ಪರಮಾತ್ಮನೇ ಎಲ್ಲವನ್ನೂ ತನ್ನಿಂದಲೇ ಸೃಷ್ಟಿಸಿ ಜಗತ್ತನ್ನು ರಚಿಸಿ, ಆ ಜಗತ್ತಿಗೆ ಜಡ ಮತ್ತು ಚೇತನದ ರೂಪವೂ ಅವನೇ ಆಗಿ ಅವನೇ ಇವುಗಳನ್ನೆಲ್ಲ ತಾನೇ ಅನುಭವಿಸಿ ಆನಂದಪಡುತ್ತಿದ್ದಾನೆ ಎಂದಮೇಲೆ ಇಲ್ಲಿ ನಾವು ಅನುಭವಿಸುವುದೆಂತು ಮತ್ತ್ತು ನಾವು ಅನುಭವಿಸುವುದೇನು? ಎಂಬ ಒಂದು ತಾತ್ವಿಕವಾದ ಪ್ರಶ್ನೆ ಬರುತ್ತದೆ. ‘ನಾವು ಅಥವಾ ನಾನು’ ಎಂದು ‘ನಮ್ಮನ್ನು’ ನಾವು ಈ ಇಂದ್ರಿಯ ಪ್ರಚೋದಕವಾದ ಮತ್ತು ಪ್ರೇರಿತವಾದ ಜಗತ್ತಿನೊಂದಿಗೆ ಗುರುತಿಸಿಕೊಳ್ಳುವ ತನಕ ನಾವು ಈ ಎಲ್ಲ ಭಾವಗಳನ್ನೂ ಅನುಭವಿಸುತ್ತಿರುತ್ತೇವೆ ಮತ್ತು ಪರರಿಗೆ ಆ ಅನುಭವಗಳನ್ನು ಕೊಡುತ್ತಿರುತ್ತೇವೆ. ಆದರೆ ಆ ‘ನಾನು’ ಮತ್ತು ‘ನಾವು’ ಎಂಬ ಭಾವ ಹೋಗಿ ಎಲ್ಲವೂ ಆ ಪರಮಾತ್ಮನೇ ಎನ್ನುವ ಭಾವ ಸ್ಥಿರವಾಗಿ ನಮ್ಮೊಳಗೆ ಬೇರೂರಿದರೆ ಆಗ ಎಲ್ಲವೂ ಪರಮಾತ್ಮನೇ ಎಂಬ ಭಾವ ಬಂದರೆ ಎಲ್ಲವನ್ನೂ ಆ ಪರಮಾತ್ಮನೇ ಅನುಭವಿಸುತ್ತಿದ್ದಾನೆ, ನಾನು ಕೇವಲ ನಿಮಿತ್ತ ಎನ್ನುವುದು ಅರಿವಾಗುತ್ತದೆ.

"ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ ‘ ಎನ್ನುವುದು ಈಶಾವಾಸ್ಯೋಪನಿಷತ್ತಿನ ಉಕ್ತಿ. ಹಾಗೆ ಎಲ್ಲವೂ ಅವನು ಎಂದಾಗ ಯಾರನ್ನೂ ದ್ವೇಷಿಸುವ ಅಥವಾ ಟೀಕಿಸುವ ಮತ್ತು ಎಲ್ಲವೂ ಅವನಿಗೆ ಸೇರಿದ್ದು ಎಂದು ಒಪ್ಪಿಕೊಂಡಾಗ ಪರರ ವಸ್ತುವಿಗೆ ಆಸೆಪಡುವ, ಪ್ರಮೇಯವೂ ಬರುವುದಿಲ್ಲ. ಆಗ ಎಲ್ಲರನ್ನೂ ಸಮಭಾವದಿಂದ ಮತ್ತು ಎಲ್ಲವನ್ನೂ ಸಮನ್ವಯದಿಂದ ನೋಡುವ ಪ್ರವೃತ್ತಿ ನಮ್ಮಲ್ಲಿ ಬೆಳೆಯುತ್ತದೆ. ನಮ್ಮ ಎಲ್ಲ ಓದು, ವಿದ್ಯಾಭ್ಯಾಸ, ಸಂಸ್ಕಾರ, ಸಾಧನೆಗಳೆಲ್ಲಾ ಅಂತ ಭಾವವನ್ನು ಸಂಪೂರ್ಣವಾಗಿ ನಮ್ಮದಾಗಿಸಿಕೊಳ್ಳುವುದಕ್ಕೆ ಪೂರಕವಾಗಿದ್ದರೆ ಒಳಿತು. ಪ್ರಯತ್ನ ಪಡಬೇಕು.