RSS

Monthly Archives: ಫೆಬ್ರವರಿ 2013

ರಸಧಾರೆ – ೩೪೫

ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು ।
ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು ॥
ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು ।
ಬದುಕೆಂಬುದಿದು ತಾನೆ? – ಮಂಕುತಿಮ್ಮ

ತಡವಿಕೊಂಡೇಳುವುದು = ತಡವಿಕೊಂಡು+ಏಳುವುದು, ಮತಿದಪ್ಪುವುದು = ಮತಿ+ತಪ್ಪುವುದು,ತಪ್ಪನೊಪ್ಪೆನ್ನುವುದು = ತಪ್ಪನು+ಒಪ್ಪು+ಎನುವುದು,
ಬದುಕೆಂಬುದಿದು = ಬದುಕು+ಎಂಬುದು+ಇದು

ಇಡುವ ಹೆಜ್ಜೆ ಜಾರಿ ಕೆಳಗೆ ಬೀಳುವುದು,ಮತ್ತೆ ಸಾವರಿಸಿಕೊಂಡು ಮೇಲೆ ಏಳುವುದು, ಸಿಹಿ ಕಡುಬ ತಿನ್ನುವುದು, ತಿಂದದ್ದು ಹೆಚ್ಚಾಗಿ ಹೊಟ್ಟೆ ನೊಂದರೆ, ಕಹಿಯಾದ ಔಷಧಿಯನ್ನು ಕುಡಿಯುವುದು, ದುಡುಕಿ ಏನೋ ತಪ್ಪ ಮಾಡುವುದು, ಮಾಡಿದ ತಪ್ಪನ್ನು ‘ನಾ ಮಾಡಿದ್ದೇ ಸರಿ’ಎಂದು ಸಾಧಿಸುವುದು, ಹೀಗೆ ಸಾಗುವುದೇ ನಮ್ಮ ಜೀವನವೆಂದು, ಬದುಕಿನಲ್ಲಿನ ವಾಸ್ತವಿಕತೆಯ ಒಂದು ಚಿತ್ರವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ದುಡುಕಿನಿಂದ ತಪ್ಪು ಮಾಡುವುದು ಮಾನವ ಸಹಜ ಪ್ರವೃತ್ತಿ. ಏನಾದರೂ ಮಾಡುವಾಗ, ಮಾಡುವ ಕೆಲಸ, ಅದನ್ನು ಮಾಡುವ ಕ್ರಮ ಮತ್ತು ಅದರಿಂದಾಗುವ ಪರಿಣಾಮಗಳ ಅರಿವು ಎಲ್ಲ ಸಮಯದಲ್ಲೂ ಇರುವುದಿಲ್ಲ. ಹಾಗಾಗಿ ತಪ್ಪು ನಡೆಯಬಹುದು. ತಪ್ಪು ಮಾಡುವಾಗ ಮನುಷ್ಯನ ಬುದ್ಧಿಯಲ್ಲಿನ ‘ವಿವೇಕ’ ಕೆಲಸ ಮಾಡುವುದಿಲ್ಲ. ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನವನ್ನು ಮಾಡಲೂಬಹುದು ಮತ್ತು ತಿದ್ದಿಕೊಳ್ಳಲೂಬಹುದು. ಮತ್ತೆ ಅದೇ ತಪ್ಪನ್ನು ಮಾಡಲೂಬಹುದು ಮತ್ತೆ ತಿದ್ದಿಕೊಳ್ಳಬಹುದು.ಇದು ಸರ್ವೇ ಸಾಮಾನ್ಯ ನಮ್ಮ ನಿಮ್ಮಲ್ಲಿ ನಡೆಯಬಹುದು. ಆದರೆ ತಪ್ಪು ಮಾಡಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವವರನ್ನು, ತಾವು ತಪ್ಪೇ ಮಾಡಿಲ್ಲವೆಂದೂ ಅಥವಾ ತಾವು ಮಾಡಿದ್ದು ತಪ್ಪೇ ಅಲ್ಲವೆಂದೂ ವಾದಿಸುವವರನ್ನೂ ನಾವು ನಮ್ಮ ಸುತ್ತ ಮುತ್ತಲಿರುವವರಲ್ಲಿ ನೋಡಿರುತ್ತೇವೆ. ಇದು ಸಹಜ ಮತ್ತು ಇದನ್ನೇ ಬದುಕು ಎಂದಿದ್ದಾರೆ ಮಾನ್ಯ ಗುಂಡಪ್ಪನವರು.

ಆದರೆ ನಾವು ಮಾಡಿದ್ದು ತಪ್ಪು ಎಂದು ಅರಿತುಕೊಳ್ಳುವುದು, ಅರಿತಿದ್ದನ್ನು ಒಪ್ಪಿಕೊಳ್ಳುವುದು, ಒಪ್ಪಿಕೊಂಡು ತಿದ್ದಿಕೊಳ್ಳುವುದು ಮಾಡಿದರೆ ಆಗ ನಮ್ಮ ಸ್ವಭಾವದಲ್ಲಿ ಒಂದು ಬದಲಾವಣೆ ಬಂದಂತೆ ಅಲ್ಲವೇ? ತಪ್ಪು ಮಾಡುವುದು ಸಹಜವೇ ಆದರೂ ಅದನ್ನು ಒಪ್ಪಿಕೊಂಡು ತಮ್ಮನ್ನು ತಾವು ತಿದ್ದಿಕೊಂಡರೆ ಮತ್ತು ‘ದುಡುಕ’ ನ್ನು ಬಿಟ್ಟರೆ ಮತ್ತೆ ಆ ತಪ್ಪನ್ನು ಮಾಡದೆ ಇರಬಹುದು. ಆತುರ,ಆವೇಶ ಮತ್ತು ದುಡುಕುಗಳು ನಮ್ಮಲ್ಲಿ ಕಡಿಮೆಯಾದರೆ ನಾವು ತಪ್ಪು ಮಾಡುವ ಸಾಧ್ಯತೆಗಳು ಕ್ರಮೇಣ ಕಡಿಮೆಯಾಗುತ್ತವೆ ಅಲ್ಲವೇ?

Advertisements
 

ರಸ ಚೆನ್ನುಡಿ

ಚಿಂತೆಗೂ ಚಿತೆಗೂ ಒಂದು ಸೊನ್ನೆ ಮಾತ್ರ ವ್ಯತ್ಯಾಸ.
ಚಿತೆ ಜೀವವಿಲ್ಲದ ಹೆಣವನ್ನು ಸುಡುತ್ತದೆ. ಚಿಂತೆ ಮನುಷ್ಯನನ್ನು ಜೀವಂತ ಸುಡುತ್ತದೆ – ಸುಭಾಷಿತ ಮಂಜರಿ.

 

ರಸಧಾರೆ – ೩೪೪

ಮಿಡಿಚೇಪೆಕಾಯಿಗಳ ತಡಬಡದೆ ನುಂಗುವುದು ।
ಕಡಿಯೆ ಹೊಟ್ಟೆಯಲಿ ಹರಳೆಣ್ಣೆ ಕುಡಿಯುವುದು ॥
ಬಿಡುತಿರಲು ನೋವಾಗ ಸುಖವೀಗಳೆನ್ನುವುದು ।
ಪೊಡವಿಗಿದೆ ಭೋಗವಿಧಿ – ಮಂಕುತಿಮ್ಮ. ॥

ಸುಖವೀಗಳೆನ್ನುವುದು = ಸುಖವು + ಈಗಳೇ+ ಎನ್ನುವುದು,

ಮಿಡಿಚೇಪೇಕಾಯಿಗಳು = ಕಸಗಟ್ಟು ಸೀಬೆ ಕಾಯಿಗಳು,ಕಡಿಯೆ= ತೊಂದರೆ ಮಾಡಿದರೆ, ಪೊಡವಿ= ಪೃಥ್ವಿ,

ಇನ್ನೂ ಮಾಗದ ಸಣ್ಣ ಸಣ್ಣ ಹಸೀ ಸೀಬೇಕಾಯಿಗಳನ್ನು ಆಸೆಯಿಂದ ಕಡಿದು, ಸಂಪೂರ್ಣ ಜಗಿಯದೆ ಆತುರಾತುರವಾಗಿ ನುಂಗಿ, ಹೊಟ್ಟೆನೋವು ಬರಿಸಿಕೊಂಡು, ಆ ನೋವ ನಿವಾರಣೆಗೆ, ಹರಳೆಣ್ಣೆ ಕುಡಿದು, ಆ ನೋವು ಕಡಿಮೆಯಾಗುವಾಗ, ಆಹಾ! ಇದೇ ಸುಖ ಎನ್ನುವಂತೆ ಇದೆ, ಮನುಷ್ಯರು ಈ ಜಗತ್ತಿನಲ್ಲಿ ಸುಖಗಳನ್ನು ಅನುಭವಿಸುವ ರೀತಿ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಇಲ್ಲಿ ಸೀಬೇಕಾಯಿ ಕೇವಲ ಒಂದು ದೃಷ್ಟಾಂತವಷ್ಟೆ. ನಮ್ಮ ನಮ್ಮ ಜೀವನಗಳಲ್ಲೂ ಯಾವುದೋ ಒಂದು ವಸ್ತುವನ್ನು ಆಸೆ ಪಡುತ್ತೇವೆ. ಅದು ನಮಗೆ ಹಿತವೊ, ಅಹಿತವೋ ಎಂದು ಯೋಚಿಸದೆ ಪಡೆದು ಅನುಭವಿಸ ತೊಡಗುತ್ತೇವೆ. ಮೊದಲು ಕೆಲ ಸಮಯ ಹಿತವೆನಿಸಿದರೂ ನಮ್ಮ ಸ್ವಭಾವ ಅದನ್ನು ಒಪ್ಪಿಕೊಳ್ಳದಾದಾಗ, ಅದರಿಂದ ಬಿಡುಗಡೆಗೆ ಪ್ರಯತ್ನ ಪಡುತ್ತೇವೆ. ಬಿಡುಗಡೆ ಸಿಕ್ಕಾಗ, ಅಬ್ಬ! ಪೀಡೆ ಬಿಟ್ಟಿತು ಎಂದು ಸಂತೋಷಪಡುತ್ತೇವೆ. ಇದು ಸರ್ವೇ ಸಾಮಾನ್ಯ ಎಲ್ಲ ಮಾನವರ ಪರಿಸ್ಥಿತಿಯೂ ಹೌದು.

ಮನುಷ್ಯನಿಗೆ ಸದಾ ಯಾವುದೋ ಅಸೆ ಕಾಡುತ್ತಿರುತ್ತದೆ. ಏನನ್ನೋ, ಯಾರನ್ನೋ, ಪಡೆಯಬೇಕು. ಅದನ್ನು ಪಡೆದರೆ ನನಗೆ ಸುಖ ಎನ್ನುವ ಭಾವ. ನಾವು ಪಡೆಯಬೇಕೆಂದುಕೊಳ್ಳುವ ವಸ್ತು ವಿಷಯ ಅಥವಾ ವ್ಯಕ್ತಿಗಳ ಕಿಂಚಿತ್ ಪರಿಚಯವೂ ಇಲ್ಲದೆ ಪಡೆದಾಗ,ಅದರಿಂದುಂಟಾಗುವ ತೊಂದರೆಗಳನ್ನು ಅನುಭವಿಸಲೇ ಬೇಕು. ಹಾಗೆ ಅನುಭವಿಸಲಾಗದಿದ್ದರೆ ಅದರಿಂದ ಬಿಡುಗಡೆಯನ್ನು ಹೊಂದಬೇಕು. ಕೆಲವು ಬಾರಿ ಆ ಬಿಡುಗಡೆಗೆ ನಾವು ಪ್ರಯತ್ನಪಡದಿದ್ದರೂ ಕಾಲವೇ ಪರಿಹಾರ ಸೂಚಿಸುತ್ತದೆ.

ಹಾಗೆ ನಾವು ಸ್ವಪ್ರಯತ್ನದಿಂದ, ಹರಳೆಣ್ಣೆ ಕುಡಿದು ಹೊಟ್ಟೆ ನೋವನ್ನು ಕಡಿಮೆ ಮಾಡಿಕೊಂಡಹಾಗೆ, ನಮ್ಮ ಸಮಸ್ಯೆಗಳಿಗೆ ಉಮಶಮನವನ್ನು ತಂದುಕೊಳ್ಳಬಹುದು. ಆದರೆ ನಮ್ಮ ಮನಸ್ಸು ಮತ್ತೆ ಅದೇ ರೀತಿಯ ತಪ್ಪನ್ನು ಮಾಡುವುದಿಲ್ಲ ಎಂದು ಹೇಗೆ ಹೇಳುವುದು. ಮತ್ತೆ ಮತ್ತೆ ಅದೇ ರೀತಿಯ ತಪ್ಪನ್ನು ಮಾಡುತ್ತಿರುವುದು, ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನಪಡುವುದು, ಈ ತಪ್ಪು ಸರಿಗಳ ವೃತ್ತದಲ್ಲಿ ಒಂದು ಬಗೆಯ ಆನಂದ, ಬೇಸರ, ಹಿಂಸೆಗಳನ್ನು ಅನುಭವಿಸುವುದೇ ಜೀವನವೆನ್ನುವುದು ಈ ಮುಕ್ತಕದ ಹೂರಣ. ಯಾವುದಕ್ಕೂ ಅತಿಯಾಗಿ ಅಂಟದೆ, ಆಸೆ ಪಡದೆ ಸಿಕ್ಕಿದ್ದನ್ನುಅನುಭವಿಸುತ್ತಾ, ಒಂದು ಮಾನಸಿಕ ನಿರ್ಲಿಪ್ತತೆಯನ್ನು ಬೆಳೆಸಿಕೊಂಡರೆ ನೆಮ್ಮದಿಯಾಗಿರಬಹುದು. ಆಯ್ಕೆ ನಮ್ಮ ಕೈಯಲ್ಲೇ ಇದೆ ಅಲ್ಲವೇ?

 

ರಸ ಚೆನ್ನುಡಿ

ಅರೆ ಜ್ಞಾನದಿಂದ ಅನ್ಯರ ಜರಿಯುವುದು ಸರಿಯಲ್ಲ.
ಸರಿ ಜ್ಞಾನವಿದ್ದರೆ ಪರರ ಜರಿಯುವ ಅವಶ್ಯಕತೆ ಇರುವುದಿಲ್ಲ – ಅನಾಮಿಕ

 

ರಸಧಾರೆ – ೩೪೩

ಸಾಕು ಸಾಕೆನಿಸುವುದು ಲೋಕಸಂಪರ್ಕಸುಖ ।
ಸೋಕಿದೆಡೆ ತುರಿಯನೆಬ್ಬಿಸುವ ತುರುಚಿಯದು ॥
ಮೂಕನವೆ ತುರಿಸದಿರೆ,ತುರಿಯುತಿರೆ ಹುಣ್ಣುರಿತ ।
ಮೂಕನಪಹಾಸ್ಯವದು – ಮಂಕುತಿಮ್ಮ. ॥

ಸೋಕಿದೆಡೆ = ಸೋಕಿದ+ಎಡೆ, ತುರಿಯನೆಬ್ಬಿಸುವ = ತುರಿಯನು+ಎಬ್ಬಿಸುವ, ತುರುಚಿಯದು = ತುರಚಿಯು+ ಅದು, ಹುಣ್ಣುರಿತ = ಹುಣ್ಣು+ಉರಿತ, ಮೂಕನಪಹಾಸ್ಯವದು = ಮೂಕನ+ಅಪಹಾಸ್ಯವದು.

ಲೋಕ ಸಂಪರ್ಕದ ಸುಖ ಹಲವು ಬಾರಿ ಸಾಕು ಸಾಕೆನಿಸುತ್ತದೆ. ಸಂಪರ್ಕಗಳು, ತುರಿಕೆ ಸೊಪ್ಪು ಸೋಕಿದಾಗ ಆಗುವಂತಾ ಉರಿಯನ್ನು ನೀಡುತ್ತವೆ.
ತುರಿಸಿಕೊಂಡರೆ ಹುಣ್ಣಾಗಿ ಮತ್ತಷ್ಟು ನವೆಯಾಗುತ್ತದೆ ಮತ್ತು ತುರಿಸಿಕೊಳ್ಳದಿದ್ದರೆ ಒಂದು ಮೂಕವೇದನೆಯನ್ನು ನೀಡುತ್ತದೆ.ಇದು ಹೇಗಿದೆಯಂದರೆ, ಒಬ್ಬ ಮೂಕ, ಆದರೂ ಅಪಹಾಸ್ಯಮಾಡಬೇಕೆಂದುಕೊಂಡಾಗ ಮಾತನಾಡಲಾಗದೆ ಬರೀ ಕೈಸನ್ನೆಯಲ್ಲೇ ಮಾಡುವಂಥಾ ಚೇಷ್ಟೆಯನ್ನೆ ಮಾಡುತ್ತೇವೆ ನಾವು ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಈ ಲೋಕದಲ್ಲಿನ ಪರಸ್ಪರ ಸಂಬಂಧ ಮತ್ತು ಸಂಪರ್ಕಗಳೇ ಹಾಗೆ. ಇಷ್ಟಪಟ್ಟು ಕಟ್ಟಿಕೊಂಡ ಸಂಬಂಧಗಳು, ಮೊದಮೊದಲು ಹಿತವಾಗಿದ್ದರೂ ಕ್ರಮೇಣ ಕಿರಿಕಿರಿಯನ್ನುಂಟುಮಾಡುತ್ತಾ ಅಸಹನೀಯವಾಗುತ್ತದೆ.ಅದರೊಂದಿಗೆ ಹೋರಾಡಲು ಹೊರಟರೆ,ಘರ್ಷಣೆಯಾಗಿ ಸಂಬಂಧಗಳು ಗಾಯಗೊಂಡು ವ್ರುಣವಾಗುತ್ತದೆ.
ಅತೀವ ನೋವನ್ನುಂಟುಮಾಡುತ್ತದೆ.

ಅಕಸ್ಮಾತ್ ನಾವು ಆ ಕಿರಿಕಿರಿಯನ್ನು ತಡೆದುಕೊಂಡು ಇರಲು ಸಹನೆಯನ್ನು ತಂದುಕೊಂಡರೆ, ಹೇಳಿಕೊಳ್ಳಲೂ ಆಗದೆ, ಸುಮ್ಮನಿರಲೂ ಆಗದೆ, ಒಳಗೊಳಗೇ ಹಿಂಸೆ ಅನುಭವಿಸಬೇಕು. ಇದು ಯಾವರೀತಿ ಇರುತ್ತದೆಂದರೆ ಒಬ್ಬ ಮೂಕ ಹಾಸ್ಯಮಾಡಬೇಕೆಂದುಕೊಂಡರೂ, ಮಾತನಾಡಲಾಗದೆ ಮತ್ತು ಸುಮ್ಮನಿರಲಾಗದೆ ಮಾಡುವ ಮೂಕ ಚೇಷ್ಟೆಗಳಂತೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ನಾವು ಎಲ್ಲಿಯತನಕ ಈ ಜಗತ್ತಿಗೆ ಮತ್ತು ಈ ಜಗತ್ತಿನ ಸಂಬಂದಗಳಿಗೆ ಎಷ್ಟು ಹೆಚ್ಚಾಗಿ ಆಂಟಿಕೊಳ್ಳುತ್ತೇವೆಯೋ ಅಲ್ಲಿಯ ತನಕ ಅವುಗಳು ಮಾಡುವ ತುರಿಕೆ,
ಒಳಗುದಿ, ನೋವುಗಳನ್ನೂ ಅನುಭವಿಸಲೇಬೇಕು. ಆಡಿಯಾದರೂ ಅನುಭವಿಸಬೇಕು ಅಥವಾ ಮೂಕ ವೇದನೆಯನ್ನಾದರೂ ಅನುಭವಿಸಬೇಕು. ಅನ್ಯದಾರಿ ಇಲ್ಲ. ಹಾಗೆ ನಾವು ಅಂಟೀ ಅಂಟದ ಹಾಗೆ ಇದ್ದರೆ, ಈ ನವೆ ಮತ್ತು ಗಾಯಗಳು ಮಾಡುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಪಡೆದುಕೊಳ್ಳಬಹುದು.

 

ರಸ ಚೆನ್ನುಡಿ

ನೀವು ಮತ್ತಷ್ಟು ಉತ್ತಮರಾಗಲು,ನಿಮಗೆ ನೀವೇ ಸವಾಲು ಹಾಕಿಕೊಳ್ಳಿ.
ನೆನಪಿಡಿ,ಪ್ರಸ್ತುತ ಸ್ಥಿತಿಯಿಂದ ಮೇಲೇರಬೇಕೆಂಬ ನಿಮ್ಮ ನಿರ್ಧಾರದಿಂದಲೇ,ನಿಮ್ಮ ಉನ್ನತಿ ಮೊದಲಾಗುತ್ತದೆ.- ಅನಾಮಿಕ.

 

ರಸಧಾರೆ – ೩೪೨

ಪೂಸರದಿ ಕಾಂತಿ ಸೌರಭ ಮೊದಲನೆಯ ತಾಸು।
ವಾಸನೆಯ ಹಳಸು ಕೊಳಕೊಳಚೆಯಾ ಬಳಿಕ॥
ಮಾಸಿ ನಲುನಲುಗಿ ಮುಳ್ಳಹುದು ಮೂರನೇ ತಾಸು ।
ಸಂಸಾರಕಥೆಯದುವೆ – ಮಂಕುತಿಮ್ಮ

ಪೂಸರದಿ = ಪೂ+ಸರದಿ, ಮುಳ್ಳಹುದು = ಮುಳ್ಳು+ಅಹುದು, ಸಂಸಾರಕಥೆಯದುವೆ = ಸಂಸಾರ+ಕಥೆಯು+ಅದುವೆ

ಪೂಸರದಿ = ಹೂ ಮಾಲೆಯಲ್ಲಿ, ಕಾಂತಿ = ಹೊಳಪು, ಸೌರಭ = ಸುವಾಸನೆ,

ಆಗತಾನೆ ಪೋಣಿಸಿದ ಹೂಮಾಲೆಯಲ್ಲಿ ನವ ನವೀನತೆ ಇರುತ್ತದೆ ಮತ್ತು ಪರಿಮಳದ ಘಮಲು ಎಲ್ಲೆಲ್ಲೂ ಪಸರಿಸುತ್ತದೆ. ಆದರೆ ಸ್ವಲ್ಪ ಸಮಯದ ಬಳಿಕ ಅದು ಬಾಡುತ್ತಾ ತನ್ನ ಸುಗಂಧ ಮತ್ತು ನಾವೀನ್ಯವನ್ನು ಕಳೆದುಕೊಳ್ಳುತ್ತದೆ. ಸಮಯ ಕಳೆದಂತೆ ನಲುಗಿ, ಕೊಳೆತು ಸುಗಂಧ ದುರ್ಗಂಧಕ್ಕೆ ಎಡೆಮಾಡಿಕೊಡುತ್ತದೆ. ಸಂಜೆಯಹೊತ್ತಿಗೆ ಅದರ ವಾಸನೆ ಅಸಹನೀಯವಾಗಿ ಬಿಸುಡುವ ಮನಸ್ಸಾಗುತ್ತದೆ. ನಮ್ಮೆಲ್ಲರ ಜೀವನದ ಕಥೆಯೂ ಇಷ್ಟೇ ಎಂದು ಬದುಕಿನ ವಾಸ್ತವಿಕತೆಯನ್ನು ಉಪಮಾ ಸಹಿತ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಮ್ಮೆಲ್ಲರ ಬದುಕೂ ಅಷ್ಟೇ. ಹೂವು ತನ್ನ ಬೇರಿನಿಂದ ಕಾಂಡದಿಂದ ಕೊಂಬೆ ಎಲೆಗಳಿಂದ ಸಾರವನ್ನು ಸೆಳೆದು ತನ್ನ ಸೌಂದರ್ಯ ಮತ್ತು ಸುಗಂಧವನ್ನು ಪಡೆದು, ವೃದ್ಧಿಸಿಕೊಂಡು ಹೊರಸೂಸುತ್ತದೋ, ಅದೇ ರೀತಿ ನಾವೂ ಸಹ ನಮ್ಮ ಪೂರ್ವಜರ ಬದುಕಿನಿಂದ, ತಂದೆ ತಾಯಿಯರಿಂದ, ಒಡಹುಟ್ಟಿದವರಿಂದ ಏನೆಲ್ಲಾ ಕಲಿತು ಬೆಳೆದು ಎಳೆಯವಯಸ್ಸಿನಲ್ಲಿ ಆಕಾಶದಷ್ಟು ಆಸೆ ಆಕಾಂಕ್ಷೆಗಳನ್ನೂ ಹೊತ್ತು ಥಳಥಳಿಸುತ್ತೇವೆ, ಯವ್ವನದಲ್ಲಿ ಹಾರಾಡುತ್ತೇವೆ.

ನಂತರ ಬಂಧಗಳು, ಸಂಬಂಧಗಳು, ಅನುಬಂಧಗಳು, ಹೀಗೆ ಏನೇನನ್ನೋ ಕಟ್ಟಿಕೊಂಡು ಹತ್ತು ಹಲವಾರು ಆಯಾಮಗಳನ್ನು ಸೃಷ್ಟಿಸಿಕೊಳ್ಳುತ್ತಾ,ಬದುಕಿನ ಜಂಜಾಟದಲ್ಲಿ ಮುಳುಗಿ ತೇಲಾಡುತ್ತಾ, ಮನೆ ಮಕ್ಕಳು, ಅವರ ಬೆಳವಣಿಗೆಗಳ ನಡುವೆ ನಾವು ನಮ್ಮ ಅಸ್ತಿತ್ವವನ್ನು ಬೆಳೆಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ಪರದಾಡುತ್ತೇವೆ.

ವೃದ್ಧಾಪ್ಯದಲ್ಲಿ, ಹೂವಂತೆ ಬಾಡಿ, ನಮ್ಮ ಬದುಕೇ ನಮಗೆ ಭಾರವಾಗಿ ರೋಗ ರುಜಿನಗಳಿಗೆ ತುತ್ತಾಗಿ ಕೊಳೆತು ನಾರುತ್ತಾ, ನಾವೂ ತೊಳಲಾಡುತ್ತಾ, ಅನ್ಯರಿಗೂ ಅಸಹನೀಯವಾಗಿ ಬದುಕು ಸಾವುಗಳ ಮಧ್ಯೆ ಹೋರಾಡುತ್ತೇವೆ.

ಹೀಗೆ ಯವ್ವನದಲ್ಲಿ ಹಾರಾಡಿ, ಪ್ರೌಡಾವಸ್ಥೆಯಲ್ಲಿ ಹಾರಾಡಿ, ವೃದ್ಧಾಪ್ಯದಲ್ಲಿ ಹೋರಾಡಿ ಅಂತ್ಯಗೊಳ್ಳುವುದೇ ನಮ್ಮ ಜೀವನವೆಂದು ಅರಿಯುವುದೇ ಈ ಮುಕ್ತಕದ ಹೂರಣ. ಅರಿತರೆ ಸಾಲದು, ಬದುಕನ್ನು ಒಂದು ನಿರ್ಲಿಪ್ತ ಭಾವದಿಂದ ಬದುಕಿದರೆ, ಈ ಎಲ್ಲ ಅವಸ್ಥೆಗಳಲ್ಲಿ ಉಂಟಾಗುವ ನೋವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಆ ನೋವನ್ನು ಸಹಿಸುವ ಶಕ್ತಿಯನ್ನು ಪಡೆದುಕೊಳ್ಳಬಹುದು.