RSS

Monthly Archives: ಏಪ್ರಿಲ್ 2013

ರಸಧಾರೆ – ೩೯೦

ಸುಳ್ಳಲ್ಲ ಕಥೆಯ ತಿರುಕನು ಕಂಡ ಸವಿಗನಸು ।

ಚೆಲ್ಲಿತಲ್ಲವೆ ಹಿಟ್ಟು ಘಟವನವನೊದೆಯೆ ॥
ಜಳ್ಳು ಸುಖದುಃಖವಿರಬಹುದಾದೊಡದರ ಮೊನೆ।
ಮುಳ್ಳಹುದು ಜೀವಕ್ಕೆ – ಮಂಕುತಿಮ್ಮ

ಚೆಲ್ಲಿತಲ್ಲವೆ =ಚೆಲ್ಲಿತು + ಅಲ್ಲವೆ, ಘಟವನವನೊದೆಯೆ=ಘಟವನು+ಅವನು+ಒದೆಯೆ, ಸುಖದುಃಖವಿರಬಹುದಾದೊಡದರ=ಸುಖ+ದುಃಖವು+ಇರಬಹುದು+ಆದೊಡೆ+ಅದರ,ಮುಳ್ಳಹುದು = ಮುಳ್ಳು+ಅಹುದು,

ಘಟವನು=ಮಡಕೆಯನು

ಮುಪ್ಪಿನ ಷಡಕ್ಷರಿ ಎಂಬ ಕವಿಯ "ತಿರುಕನ ಕನಸು" ಎಂಬ ಕವಿತೆಯ ಕಥೆಯನ್ನು ಉಲ್ಲೇಖ ಮಾಡುತ್ತಾ ಮಾನ್ಯ ಗುಂಡಪ್ಪನವರು ‘ಅವನು ಕಂಡದ್ದು ಕನಸೇ ಆದರೂ ಕನಸಿನ ಅಂತ್ಯದಲ್ಲಿ ಅವನು ತಾನು ತಿರುಪೆ ಎತ್ತಿ ತಂದಿದ್ದ ಹಿಟ್ಟಿನ ಮಡಕೆಯನ್ನು ಒದ್ದದ್ದು ವಾಸ್ಥವವಲ್ಲವೇ? ಹಾಗೆಯೇ ನಮ್ಮ ಜೀವನದಲ್ಲಿ ನಡೆಯುವ ಎಲ್ಲ ಘಟನೆಗಳೂ ಕನಸಂತೆ ಕಂಡರೂ ಅ ಘಟನೆಗಳಿಂದಾಗುವ ಪರಿಣಾಮಗಳು ನಮ್ಮ ಸ್ವಭಾವಕ್ಕೆ ಸೇರಿಕೊಂಡು ‘ಆತ್ಮದ’ ಗುಣವಾಗುತ್ತದೆ’ ಎಂದು ಕರ್ಮಶೇಷದ ಪ್ರಯಾಣದ ವಿಚಾರವನ್ನು ಮಂಡಿಸಿದ್ದಾರೆ, ಈ ಮುಕ್ತಕದಲ್ಲಿ.

ನಮಗೆ ಜೀವನದಲ್ಲಿ ನಡೆಯುವ ಘಟನೆಗಳು ಸಾವಿರಾರು. ಕೆಲವು ನಮ್ಮ ಪ್ರಮೇಯದಿಂದ ಮತ್ತೆ ಕೆಲವು ಪ್ರಮೇಯವಿಲ್ಲದೆ. ಅದಕ್ಕೆ ಕರ್ಮ, ಹಣೆಬರಹ,ವಿಧಿ ಎಂದು ಹಲವಾರು ವಿವರಣೆಗಳನ್ನು ನೀಡುತ್ತಾರೆ. ಆದರೆ ಈ ಘಟನೆಗಳು ಕೇವಲ ಘಟನೆಗಳಾಗಿ ಕನಸಿನಂತೆ ನಡೆದು ಹೋಗುತ್ತವೆ. ಅದರಿಂದಾದ ಪರಿಣಾಮಗಳು ನಮ್ಮ ಮನಸ್ಸು ಬುದ್ಧಿಗಳ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ. ಹಾಗೆ ಆದ ಪ್ರಭಾವ ಸೂಕ್ಷ್ಮ ಮತ್ತು ತಾತ್ಕಾಲಿಕ ಪ್ರಭಾವವಾಗಿರಬಹುದು ಅಥವಾ ಗಾಢ ಮತ್ತು ಧೀರ್ಘಕಾಲಿಕವಾಗಿರಬಹುದು. ಎಷ್ಟೋ ಬಾರಿ ಘಟನೆಗಳನ್ನು ನಾವು ಮರೆತೇ ಹೋದರೂ ಘಟನೆಗಳಿಂದಾಗುವ ಪರಿಣಾಮ ಮತ್ತು ಪ್ರಭಾವ ನಮ್ಮ ಸ್ವಭಾವದೊಳಕ್ಕೆ ಹೊಕ್ಕು, ಹಲವು ಬಾರಿ, ಅದು ನಮ್ಮ ಗುಣವೇ ಆಗಿಬಿಡುತ್ತದೆ. ಆ ಗುಣ ‘ ಸುಗುಣವೂ’ ಆಗಬಹುದು ಅಥವಾ ‘ಕುಗುಣವೂ’ಆಗಬಹುದು.ಯಾವುದನ್ನೂ ಹೀಗೇ ಆಗುತ್ತದೆ ಎಂದು ಹೇಳಲಾಗುವುದಿಲ್ಲ.

ಹಾಗೆ ಕನಸಿನಂತ ಬದುಕಿನಿಂದಾಗುವ ಪರಿಣಾಮಗಳ ಕೊಂಡಿಗಳು ನಮ್ಮನ್ನು ಈ ಜಗತ್ತಿಗೆ ಅಂಟಿಸಿಬಿಡುತ್ತದೆ.ಈ ಅಂಟಿನಿಂದ ಜೀವ ಅಥವಾ ಆತ್ಮದ ಊರ್ಧ್ವಮುಖ ಪ್ರಯಾಣ ಕುಂಠಿತವಾಗಿಬಿಡುತ್ತದೆ.ಮತ್ತೆ ಅದೇ ಚಕ್ರದಲ್ಲೇ ತಿರು ತಿರುಗಿ ಉರುಳಾಟ.ಬಿಡುಗಡೆಯಿಲ್ಲದ ಬದುಕು.

‘ಮುಳ್ಳಹುದು ಜೀವಕ್ಕೆ’ ಎಂದು ಜೀವಕ್ಕೆ ಇದು ಹಾನಿಕರ ಎಂದು ಗುಂಡಪ್ಪನವರು ಹೇಳಿದ್ದಾರೆ. ಈ ಹಾನಿಯಿಂದ ಆತ್ಮದ ‘ರಕ್ಷಣೆ’ ಯಾಗಬೇಕಾದರೆ, ಜೀವಿಸಿದ್ದು ಕನಸಿನಂತ ಬದುಕೇ ಆದರೂ, ಅದರ ಪ್ರಭಾವ ನಮ್ಮ ಮೇಲೆ ಗಾಢವಾಗಿ ಬೀಳದಂತೆ ಒಂದು ‘ನಿರ್ಲಿಪ್ತತೆ’ಯ ಕವಚವನ್ನು ಹೊದಿಸಬೇಕು.ಬದುಕಿನ ಘಟನೆಗಳು ನಮ್ಮ ಮೇಲೆ ಪ್ರಭಾವ ಬೀರದ ಹಾಗೆ ನೋಡಿಕೊಂಡರೆ ಪ್ರಯಾಣ ಸುಗಮವಾಗುತ್ತದೆ.ಮನಸ್ಸು ಬುದ್ಧಿಗಳು ಪಕ್ವವಾದರೆ ಅಂತಹ ಪ್ರಭಾವದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ಆ ಪಕ್ವತೆಯನ್ನು ಪಡೆಯಲು ಸಾಧನೆಯ ಪ್ರಯತ್ನ ಮಾಡಬೇಕು.

Advertisements
 

ರಸ ಚೆನ್ನುಡಿ

ಕೆಲವೊಮ್ಮೆ ಏನೂ ಆಗದೆ ಮತ್ತೆ ಕೆಲವೊಮ್ಮೆ ಎಲ್ಲವೂ ಒಮ್ಮೆಗೇ ಆಗಿ

ನಮ್ಮ ಮನೋಧಾರ್ಡ್ಯ ಮತ್ತು ತಾಳ್ಮೆಯನ್ನು ಪರೀಕ್ಷಿಸುವ ವ್ಯವಸ್ಥೆ ಈ ಬದುಕಿನಲ್ಲಿ ಇದೆ – ಅನಾಮಿಕ

 

ರಸ ಚೆನ್ನುಡಿ

ಮಿತಿಗಳು ನಮ್ಮ ಮನಸ್ಸಿನಲ್ಲಿರುತ್ತವೆ.
ನಮ್ಮ ಕಲ್ಪನೆಯ ಲೋಕವನ್ನು ವಿಸ್ತರಿಸಿದರೆ
ನಮ್ಮ ಸಾಧನೆಯ ಸಾಧ್ಯತೆಗಳು ಅನಂತವಾಗುತ್ತವೆ – ಅನಾಮಿಕ

 

ರಸ ಚೆನ್ನುಡಿ

ಜೀವನದುದ್ದಕ್ಕೂ ನಮ್ಮನ್ನು ಅನ್ಯರು ಅವಮಾನಿಸಿದರೂ, ಕೆಟ್ಟದಾಗಿ ನಡೆಸಿಕೊಂಡರೂ ವಿಚಲಿತರಾಗಬಾರದು. ಅವರಂತೆಯೇ ನಾವೂ ಪ್ರತಿಕ್ರಿಯೆ ನೀಡಿದರೆ ನಮಗೆ ನಾವೇ ಅಧಿಕ ಹಾನಿಯನ್ನು ಮಾಡಿಕೊಳ್ಳುತ್ತೇವೆ- ಅನಾಮಿಕ

 

ರಸಧಾರೆ – ೩ ೮ ೯

ಕಾಯವನು ಮೃದ್ಭಾಂಡ ಮಾಂಸಪಿಂಡವೆನ್ನುತ್ತೆ।
ಹೇಯವೆಂದೆಂದೊಡಾತ್ಮಂಗಪ್ಪುದೇನು ?॥
ಅಯುಧವದನು ತೊರೆದಾತ್ಮನೇಂಗೈದಪನು ।
ನ್ಯಾಯ ತನುವಿಗಿರಲಿ – ಮಂಕುತಿಮ್ಮ. ॥

ಹೇಯವೆಂದೆಂದೊಡಾತ್ಮಂಗಪ್ಪುದೇನು= ಹೇಯವು+ಎಂದು+ಎಂದೊಡೆ+ಆತ್ಮಂಗೆ +ಅಪ್ಪುದೇನು,
ಅಯುಧವದನು= ಆಯುದವು + ಅದನು, ತೊರೆದಾತ್ಮನೇಂಗೈದಪನು=ತೊರೆದು+ಆತ್ಮನು+ಏಂ+ಗೈದಪನು,ತನುವಿಗಿರಲಿ = ತನುವಿಗೆ+ಇರಲಿ.

ಮೃದ್ಭಾಂಡ = ಮಣ್ಣ ಮಡಕೆ, ಹೇಯ=ಹೀನ, ಅಪ್ಪುದೇನು=ಆಗುವುದೇನು, ಗೈದಪನು=ಮಾಡುವನು, ತನುವಿಗೆ=ದೇಹಕ್ಕೆ

ನಮ್ಮ ದೇಹವನ್ನು ಕೇವಲ ಮಣ್ಣಿಂದ ಆದ ಮಡಕೆ ಅಥವಾ ಮೂಳೆ ಮಾಂಸದ ತಡಿಕೆ ಎಂದು ಅಸಹ್ಯ ಪಟ್ಟುಕೊಂಡರೆ ಆತ್ಮನಿಂದ ಏನೂ ಮಾಡಲಾಗುವುದಿಲ್ಲ. ಆತ್ಮನಿಗೆ ದೇಹವೊಂದು ಆಯುಧ. ಅದನ್ನು ತೊರೆದು ಆತ್ಮನೇನು ಮಾಡಬಲ್ಲ? ಹಾಗಾಗಿ ದೇಹಕ್ಕೂ ನ್ಯಾಯವನ್ನು ಒದಗಿಸು, ಅದನ್ನು ಸೊರಗಿಸಬೇಡ ಎನ್ನುವ ಅರ್ಥದಲ್ಲಿ ಈ ಮುಕ್ತಕದಲ್ಲೂ ದೇಹಾತ್ಮ ಸಂಬಂಧವನ್ನು ಕುರಿತು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

‘ ಮಾನವಾ ಮೂಳೆ ಮಾಂಸದ ತಡಿಕೆ’ ಎಂದು ಯಾರೋ ಅಂದರು. ‘ಮಣ್ಣಿಂದ ಕಾಯ ಮಣ್ಣಿಂದ’ ಎಂದು ಮತ್ಯಾರೋ ಅಂದರು " ಇದಂ ಶರೀರಂ ಪರಿಣಾಮ ಪೇಶಲಂ ಪತ್ಯತ್ ಅವಶ್ಯಂ" ಪರಿಣಾಮಗಳಿಗೊಳಗಾಗಿ ಈ ಶರೀರವು ನಿಶ್ಚಯವಾಗಿ ಬಿದ್ದು ಹೋಗುತ್ತದೆ" ಎಂದು ಇನ್ಯಾರೋ ಅಂದರು. ಹೌದು ಈ ಶರೀರಕ್ಕೆ ಪ್ರಾಯ ಮೂಡಿ ಜರ್ಜರಿತವಾಗಿ ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ಆದರೆ ಅಲ್ಲಿಯ ತನಕ ಅದು ಆತ್ಮಕ್ಕೆ ಒಂದು ಆಯುಧವಿದ್ದಂತೆ. ಈ ದೇಹದ ಮೂಲಕವೇ ಆತ್ಮ ತನ್ನ ಪೂರ್ವ ಕರ್ಮವನ್ನು ನೀಗಿಕೊಳ್ಳಬೇಕು. ಈ ದೇಹಕ್ಕೆ ಪೂರಕವಾದ ಇತರೆ ಅಂಗಗಳಾದ ಮನಸ್ಸು ಬುದ್ಧಿಗಳ ಸಹಾಯದಿಂದಲೇ ಸತ್ಸಂಗ,ಧ್ಯಾನ ಮುಂತಾದವುಗಳ ಮೂಲಕ ಆತ್ಮೋದ್ಧಾರವಾಗಬೇಕಲ್ಲವೇ? ಹಾಗಿರುವಾಗ ದೇಹವನ್ನು ‘ಹೀನ ಅಥವಾ ಹೇಯ’ವೆನ್ನುವುದು ಸರಿಯಲ್ಲ ಅಲ್ಲವೇ?

‘ ಒಂದು ಆರೋಗ್ಯವಂತ ದೇಹದಲ್ಲಿ ಒಂದು ಆರೋಗ್ಯವಂತ ಮನಸ್ಸು’ ಎನ್ನುವುದು ಆಂಗ್ಲದ ಗಾದೆ. ದೇಹ ಸುಸ್ಥಿತಿಯಲ್ಲಿದ್ದರೆ ಮನಸ್ಸು ಬುದ್ಧಿಗಳೂ ಸುಸ್ಥಿತಿಯಲ್ಲಿರುತ್ತವೆ. ಹಾಗೆ ದೇಹ ಮನಸ್ಸು ಬುದ್ಧಿ ಎಲ್ಲವೂ ಸದಾಚಾರ ಸದ್ವಿಚಾರಗಳಲ್ಲಿ ಮುಳುಗಿದ್ದರೆ, ಅವು ಆತ್ಮಕ್ಕೆ ಪೂರಕವಾಗೇ ಇರುತ್ತವೆ ಅಲ್ಲವೆ? ಹಾಗಾಗಿ ನಾವು ದೇಹವನ್ನು ಗಮನಿಸದೆ, ಉಪವಾಸಗೆಡವಿ, ಸೊರಗಿಸಿ ಕೇವಲ ದೇವರ ಧ್ಯಾನ ಮಾಡುತ್ತೇನೆ, ಜಪ ತಪಗಳನ್ನು ಮಾಡುತ್ತಾ ಕಾಲ ಕಳೆಯುತ್ತೇನೆ ಎಂದರೆ ಸಾಧ್ಯವಿಲ್ಲ. ಏಕೆಂದರೆ ದೇಹದ ಬಂದನದಿಂದಲೇ ಆತ್ಮ ತನ್ನೆಲ್ಲ ಬಂದನಗಳಿಂದ ಮುಕ್ತಿ ಪಡೆಯಬೇಕು. ಎಂತಹ ವಿಪರ್ಯಾಸ ನೋಡಿ" ಬಂಧ ವಿಮುಕ್ತಿಗೆ ಬಂಧನವೇ ಮಾರ್ಗ"

ಯಾವುದೂ ಅತಿಯಾಗಬಾರದು. ದೇಹ ಮನಸ್ಸು ಬುದ್ಧಿಗಳನ್ನೂ ಸಮತೋಲನದಲ್ಲಿಟ್ಟುಕೊಳ್ಳಬೇಕು.
‘ಕತ್ತಿಯನ್ನು ಹರಿತವಾಗಿಟ್ಟುಕೊಂಡರೆ ಹಣ್ಣಿಗೆ ಮುಕ್ತಿ" ‘ ಬದುಕಿನ ಯುದ್ಧದಲ್ಲಿ ಜಯಕ್ಕೆ ಬದುಕಿನ ಮುಖ್ಯ ಆಯುಧವಾದ ದೇಹವನ್ನು ಸರಿಯಾಗಿಟ್ಟುಕೊಳ್ಳಲೇಬೇಕು.

 

ರಸ ಚೆನ್ನುಡಿ

ಯಾವನು ದಾನವನ್ನೂ ಮಾಡದೆ ತಾನೂ ಅನುಭವಿಸದೆ ದಿನಗಳನ್ನು ಕಳೆಯುತ್ತಾನೋ ಅವನು ಕಮ್ಮಾರನ ತಿದಿಯಂತೆ ಉಸಿರಾಡತಕ್ಕವನೆ ಹೊರತು ಬದುಕಿದವನಲ್ಲ – ಸುಭಾಷಿತರತ್ನ ಸಮುಚ್ಛಯ.

 

ರಸಧಾರೆ – ೩೮೮

ದೇಹಾತುಮಂಗಳೆರಡಂಗಗಳು ಜೀವನಕೆ।

ನೇಹದಿಂದೊಂದನೊಂದಾದರಿಸೆ ಲೇಸು ॥
ದಾಹಗೊಂಡಿರಲೊಂದು ಮಿಕ್ಕೊಂದಕೆಲ್ಲಿ ಸುಖ?।
ದ್ರೋಹ ಬೇಡೊಂದಕಂ – ಮಂಕುತಿಮ್ಮ

ದೇಹಾತುಮಂಗಳೆರಡಂಗಗಳು=ದೇಹ+ಆತುಮಂಗಳು+ಎರಡು+ಅಂಗಗಳು, ನೇಹದಿಂದೊಂದನೊಂದಾದರಿಸೆ=ನೇಹದಿಂದ+ಒಂದನು+ಒಂದು+ಆದರಿಸೆ, ದಾಹಗೊಂಡಿರಲೊಂದು=ದಾಹಗೊಂಡಿರಲು+ಒಂದು, ಮಿಕ್ಕೊಂದಕೆಲ್ಲಿ=ಮಿಕ್ಕ+ಒಂದಕ್ಕೆ+ಎಲ್ಲಿ, ಬೇಡೊಂದಕಂ=ಬೇಡ+ಒಂದಕಂ,

ಲೇಸು =ಮೇಲು, ಒಳ್ಳೆಯದು,ದ್ರೋಹ =ಮೋಸ

ನಮ್ಮ ಜೀವನಕೆ ದೇಹ ಮತ್ತು ಅತ್ಮಗಳೆರಡು ಅಂಗಗಳು. ಅವರೆಡೂ ಪರಸ್ಪರ ಸ್ನೇಹದಿಂದ ಇದ್ದರೆ ಒಳ್ಳೆಯದು. ಒಂದು ತನ್ನದೇ ಅವಶ್ಯಕತೆಗಳ ದಾಹದಲ್ಲಿ ಮುಳುಗಿಬಿಟ್ಟರೆ ಮತ್ತೊಂದಕ್ಕೆ ಸುಖವಿರುವುದಿಲ್ಲ. ಸಮತೋಲನವನ್ನು ಕಾಯುವು ಸಲುವಾಗಿ ಒಂದಕ್ಕೊಂದು ದ್ರೋಹಮಾಡಿಕೊಳ್ಳಬಾರದು ಎಂದು ದೇಹಾತ್ಮ ಸಂಬಂಧದ ಗಹನ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಆತ್ಮದ ಉದ್ದಾರಕ್ಕೆ ದೇಹವೇ ಮುಖ್ಯ ಉಪಕರಣ(ಟೂಲ್). ದೇಹವಿಲ್ಲದಿದ್ದರೆ ಆತ್ಮಕ್ಕೆ ಮುಕ್ತಿಯೇ ಇಲ್ಲ. ಆತ್ಮ ಇಂದ್ರಿಯಾತೀತವಾದದ್ದು. ಆದರೆ ದೇಹ ಇಂದ್ರಿಯ ಪ್ರೇರಿತವಾದದ್ದು. ಒಂದರ ಸೆಳೆತ ಮತ್ತೊಂದರ ಸೆಳೆತ ಬೇರೆ ಬೇರೆ ಮತ್ತು ತೀರ ವಿರುದ್ಧವಾದದ್ದು. ಆತ್ಮ ತನ್ನ ಮೂಲ ಸೇರುವ ಪ್ರಯಾಣದಲ್ಲಿ ತಾನು ಹೊತ್ತು ತಂದ ಪೂರ್ವ ಕರ್ಮಗಳನ್ನು ದೇಹದ ಮೂಲಕವೇ ನೀಗಿಕೊಳ್ಳಬೇಕು. ಆದರೆ ಪಂಚಭೂತಗಳಿಂದಾದ ದೇಹ ಇಂದ್ರಿಯ ಸುಖಗಳನ್ನೇ ಬಯಸುತ್ತಾ ಆದರಲ್ಲೇ ಮುಳುಗಿಬಿಟ್ಟರೆ ಆತ್ಮೋದ್ಧಾರದ ಮಾತು ಹಿಂದೆ ಸರಿದು ಆತ್ಮ ಸೊರಗುತ್ತದೆ. ‘ರಿಪೇರಿಯಾಗದ ಬಸ್ಸಿನಲ್ಲಿ ಕುಳಿತ ಪ್ರಯಾಣಿಕನಂತೆ.’

"ರಥಂ ವಿದ್ಧಿ’ ಎಂದು ಹೇಳಿ ‘ಈ ದೇಹವನ್ನು ರಥವೆಂದು ತಿಳಿ’ ಎಂದ ಶ್ರೀ ಕೃಷ್ಣ . ರಥದಲ್ಲಿ ಕುಳಿತ ಯಜಮಾನನೇ ಆತ್ಮ. ಸಾರಥಿಯೇ ಬುದ್ಧಿ ಲಗಾಮೇ ಮನಸ್ಸು ಮತ್ತು ಓಡುವ ಕುದುರೆಗಳೇ ಅರಿಷಡ್ವರ್ಗಗಳು. ಎಲ್ಲಿಯ ತನಕ ಓಡುವ ಕುದುರೆಗಳು ಲಗಾಮಿನ ಮೂಲಕ ಸಾರಥಿಯ ಹಿಡಿತದಲ್ಲಿರುತ್ತವೆಯೋ ಅಲ್ಲಿಯ ತನಕ ಯಜಮಾನನ ಪ್ರಯಾಣ ಗಮ್ಯವನ್ನು ಸೇರುತ್ತದೆ. ಅದಲ್ಲದೆ ಸಾರಥಿಯ ಹಿಡಿತ ತಪ್ಪಿದರೆ ಎಡ್ದಾದಿಡ್ಡಿ ಪ್ರಯಾಣವಾಗಿ ಪ್ರಯಾಣಕ್ಕೆ ಹೊರಟ ಯಜಮಾನ ಸೊರಗುತ್ತಾನೆ.

ಹಾಗಂದು ದೇಹಕ್ಕೆ ಪ್ರಾಮುಖ್ಯತೆ ನೀಡಬಾರದು ಎಂದಲ್ಲ, ನೀಡಬೇಕು . ಆದರೆ ಅದು ಕೇವಲ ದೇಹವನ್ನು ಸುಸ್ಥಿತಿಯಲ್ಲಿ ಇಡಲಷ್ಟೇ ಆಗಬೇಕು.ಆರೋಗ್ಯವನ್ನು ಕಾಪಾಡಿ ದೇಹ ಸುಸ್ಥಿತಿಯಲ್ಲಿದ್ದರೆ, ಮನಸ್ಸು ಬುದ್ಧಿಗಳೂ ಸಹ ಸುಸ್ಥಿತಿಯಲ್ಲಿರುತ್ತವೆ. ಇಂದ್ರಿಯಾಕರ್ಷಣೆಗಳಿಂದ ಕೂಡಿದ ಪ್ರಪಂಚದ ಸೆಳೆತಗಳಿಗೆ ಬಲಿಯಾಗದೆ, ಇರುವ ವಾಸನೆಗಳನ್ನು ದೇಹದ ಮೂಲಕವೇ ಕಳೆದುಕೊಂಡು, ಮತ್ತಷ್ಟನ್ನು ಅಂಟಿಸಿಕೊಳ್ಳದೆ ‘ರಾಕೆಟ್ ತಾನು ಹೊತ್ತ ತಂದ ಉಪಗ್ರಹವನ್ನು, ‘ತಾನು ಸುಟ್ಟು ಧರೆಗುದುರಿದರೂ’, ಆಕಾಶದಲ್ಲಿ ಅದರ ಗಮ್ಯ ಸೇರಿಸುವಂತೆ, ದೇಹ ಆತ್ಮದ ಊರ್ದ್ವಗತಿ ಪ್ರಯಾಣಕ್ಕೆ ಪೂರಕವಾಗಬೇಕೇ ಹೊರತು ತೊಡಕಾಗಬಾರದು, ಎನ್ನವುದೇ ಈ ಮುಕ್ತಕದ ಹೂರಣ.