RSS

Monthly Archives: ಮೇ 2013

ರಸಧಾರೆ – ೪೧೨

ಜನಿಸಿದೆಡೆಯಿಂ ಕಡಲವರೆಗಮಡಿಯಡಿ ನೆಲದ ।
ಗುಣವ ಕೊಳ್ಳುತ ಕೊಡುತ ಪೊನಲು ಮಾರ್ಪಡುಗುಂ ॥
ಮನುಜಸಂತಾನದಲಿ ಗುಣದವತರಣವಂತು ।
ಗುಣಿಪುದೆಂತಾ ತೆರನ – ಮಂಕುತಿಮ್ಮ

ಜನಿಸಿದೆಡೆಯಿಂ= ಜನಿಸಿದ+ಎಡೆಯಿಂ, ಕಡಲವರೆಗಮಡಿಯಡಿ=ಕಡಲವರೆಗಂ=ಅಡಿ+ಅಡಿ,
ಗುಣದವತರಣವಂತು=ಗುಣದ+ಅವತರಣವು +ಅಂತು, ಗುಣಿಪುದೆಂತಾ=ಗುಣಿಪುದು +ಎಂತು+ಆ

ಪೊನಲು= ಹೊಳೆ, ನದಿ, ಮನುಜಸಂತಾನ=ಮನುಕುಲ, ಗುಣಿಪುದು =ಲೆಕ್ಕಹಾಕುವುದು, ತೆರನ=ರೀತಿ,

ತನ್ನ ಜನ್ಮ ಸ್ಥಾನದಿಂದ ಕಡಲ ಸೇರುವವರೆಗೂ ತಾನು ಹರಿಯುವ ನೆಲದ ಗುಣವನ್ನು ಪಡೆದುಕೊಳ್ಳುತ್ತಾ, ತಾ ಹೊತ್ತು ತಂದದ್ದನ್ನು ಹರಿವೆಡೆಯಲ್ಲ ಕೊಡುತ್ತಾ ತಾನು ಬದಲಾಗುತ್ತಾ ಹರಿವ ‘ನದಿ’ ಯಂತೆ, ಮನುಜಕುಲವೂ ತನ್ನ ಬದುಕಿನ ಪ್ರವಾಹದಲ್ಲಿ ಹಿಂದಿನಿಂದ ತಾನು ಹೊತ್ತು ತಂದು ಗುಣಗಳನ್ನು ಇಲ್ಲಿ ಕೆಲವನ್ನು ಗಳಿಸಿ, ಕೆಲವನ್ನು ಹಂಚಿ, ಕೆಲವನ್ನು ಉಳಿಸಿ, ಕೆಲವನ್ನು ಹೊತ್ತು ಹೋಗುತ್ತಿರುವುದೇ ಅದರ ಗುಣವಾಗಿರುವಾಗ, ಅದನ್ನು ಲೆಕ್ಕಹಾಕುವುದು ಹೇಗೆ ಎಂದು ಒಂದು ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಮನುಷ್ಯ ಈ ಜಗತ್ತಿನಲ್ಲಿ ತಿರುಗಾಡುತ್ತಲೇ ಇದ್ದಾನೆ. ಲಕ್ಷಾಂತರ ವರ್ಷಗಳಿಂದ ತಿರುಗಾಡುತ್ತಲೇ ಇದ್ದಾನೆ. ಇಡೀ ಭೂಮಂಡಲದಲ್ಲಿ ಇವನ ಪದ ಸ್ಪರ್ಶ್ವವಾಗಿದ. ಹೀಗೆ ತಿರುಗಾಡುವಾಗ, ಅಲ್ಲಿನ ಹವಾಗುಣಕ್ಕೆ ಮತ್ತು ಮಣ್ಣಿನ ಗುಣಕ್ಕೆ ಅನುಗುಣವಾಗಿ ಇವನ ಗುಣಗಳೂ ಸಹ ವಿಕಸಿತಗೊಂಡಿವೆ. ಹಾಗೆ ವಿಕಾಸವಾದ ಗುಣಗಳು ಭಾವಗಳಾಗಿ, ಭಾವಗಳು ಸ್ವಭಾವಗಳಾಗಿವೆ. ಹಾಗೆ ಕೆಲಗುಣಗಳನ್ನು ರೂಢಿಸಿಕೊಂಡ ನಮ್ಮ ಮನುಷ್ಯ ವಲಸೆ ಹೋದಲೆಲ್ಲಾ ತನ್ನ ಗುಣವನ್ನು ಅಲ್ಲಿಗೆ ನೀಡಿ, ಅಲ್ಲಿನ ಗುಣಗಳನ್ನು ತಾನು ಅಳವಡಿಸಿಕೊಂಡಿದ್ದಾನೆ.

ಹೀಗೆ ವಿಕಸನ ಮತ್ತು ಪ್ರಸರನವಾದ ಗುಣಗಳೇ, ಅನಾದಿಕಾಲದಿಂದ ಇವನು ಬೆಳೆಸಿಕೊಂಡ ಗುಣಗಳು ಇವನ ಸಂಸ್ಕಾರ, ಸಂಸ್ಕೃತಿಳಿಗೆ ಕಾರಣವಾಯಿತು. ಇಂದಿಗೂ ನಿರಂತರವಾಗಿ ತಿರುಗಾಡುತ್ತಿರುವ ಮಾನವನ ಗುಣಗಳು ಜಗತ್ತಿನಾದ್ಯಂತ ಹರಡುತ್ತಿದೆ. ಭೂಮಿಗಳನ್ನು ಹುಡುಕಿಕೊಂಡ ಜಗತ್ತಿನಾದ್ಯಂತ ಹೊರಟ ಪಿರಂಗಿಗಳು, ಅಕ್ರಮಣಕಾರರಾಗಿ ಹೊರಟ ಮುಸಲ್ಮಾನರು, ಇಲ್ಲಿನ ತಮಿಳುನಾಡಿನಿಂದ ಮಲೇಶಿಯಾ, ಇಂಡೋನೇಶಿಯಾ, ಶ್ರೀ ಲಂಕಾ ದೇಶಗಳಿಗೆ ಕೂಲಿಗಳಾಗಿ ಹೋದ ತಮಿಳರು, ಆಫ್ರಿಕಾಕ್ಕೆ ಹೋದ ತೆಲುಗರು, ಆಫ್ರಿಕಾದಿಂದ ಅಮೇರಿಕಾ ಇಂಗ್ಲೆಂಡ್ ದೇಶಗಳಿಗೆ ವಲಸೆ ಬಂದ ಆಫ್ರಿಕನರು ಹೀಗೆ ಈ ಜಗತ್ತಿನಲ್ಲಿ ಈ ವಲಸೆ ಹೋಗುವ ಪ್ರಕ್ರಿಯೆ ನಿರಂತರವಾಗಿ, ನಡೆಯುತ್ತಲೇ ಇದೆ.

ಮನುಷ್ಯ ಅನುವಂಶಿಕವಾಗಿ ಬಂದ ತನ್ನ ಮೂಲ ಗುಣಗಳನ್ನು ಉಳಿಸಿಕೊಂಡು ತಾ ಹೆಜ್ಜೆಯಿಟ್ಟ ಸ್ಥಳದ ಗುಣಗಳನ್ನು ತೆಗೆದುಕೊಳ್ಳುತ್ತಾ, ತಾ ಸೇರಿದ ಸ್ಥಳದ ಗುಣಗಳನ್ನು ರೂಢಿಸಿಕೊಂಡುಬಿಡುತ್ತಾನೆ. ಎಷ್ಟೋಬಾರಿ ‘ಇವನ’ ಮೂಲ ಗುಣವೇನು ಎಂದು ಅರಿಯಲಾಗದಷ್ಟು ಬದಲಾಗಿಬಿಡುತ್ತಾನೆ. ಇನ್ನು ಇವನು ಸೇರಿದೆಡೆ ಇವನ ಸಂತತಿಯ ಗುಣಗಳು ಇವನ ಮೂಲ ಗುಣಕ್ಕಿಂತ ಭಿನ್ನವಾಗಿರುತ್ತದೆ. ಇದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ನಮ್ಮ ಗುಂಡಪ್ಪನವರು.

ಇವನು ಎಲ್ಲಿಯಾದರೂ ಇರಲಿ, ಎಲ್ಲಿಗೆ ಬೇಕಾದರೂ ಹೋಗಲಿ, ಏನನ್ನಾದರೂ ಗಳಿಸಲಿ, ಬಿಡಲಿ, ತನ್ನ ಮೂಲ ಗುಣವಾದ ‘ ಮಾನವತೆ’ ಯನ್ನು ಬಿಡದಿದ್ದರೆ ಒಳಿತು.

Advertisements
 

ರಸ ಚೆನ್ನುಡಿ

‘ಋತ’ವೆಂದರೆ ಮನದೊಳಗಿನ ಭಾವ, ಆ ಭಾವ ಹಾಗೇ ಹೊರಗೆ ಬಂದರೆ ಅದು ‘ಸತ್ಯ’ವೆನಿಸಿಕೊಳ್ಳುತ್ತದೆ.
ನಮ್ಮ ನುಡಿಗಳಲ್ಲಿ ‘ಋತ ‘ದ ಅಭಾವವಾಗದಂತೆ ನೋಡಿಕೊಂಡರೆ ಕಷ್ಟದಲ್ಲೂ ಸುಖದಿಂದಿರಬಹುದು – ಅನಾಮಿಕ

 

ರಸಧಾರೆ – ೪೧೧

ತೆರಪನರಿಯದೆ ಪರಿವ ಕಾಲಪ್ರವಾಹದಲಿ।
ಪುರುಷರಚಿತಗಳೆನಿತೊ ತೇಲಿಹೋಗಿಹವು ॥
ಪುರ ರಾಷ್ಟ್ರ ದುರ್ಗಗಳು ಮತ ನೀತಿ ಯುಕ್ತಿಗಳು ।
ಪುರುಷತನ ನಿಂತಿಹುದು – ಮಂಕುತಿಮ್ಮ

ತೆರಪನರಿಯದೆ = ತೆರಪನು+ಅರಿಯದೆ, ಪುರುಷರಚಿತಗಳೆನಿತೊ=ಪುರುಷ+ರಚಿತಗಳು+ಎನಿತೊ,

ತೆರಪು = ಬಿಡುವು,

ಬಿಡುವಿಲ್ಲದೆ ಅವ್ಯಾಹತ ಹರಿಯುವ ಕಾಲ ಪ್ರವಾಹದಲ್ಲಿ ಮನುಷ್ಯ ರಚಿಸಿದ ರಚನೆಗಳು ಲೆಕ್ಕವಿಲ್ಲದಷ್ಟು ತೇಲಿಹೋಗಿವೆ. ಊರುಗಳು, ರಾಷ್ಟ್ರಗಳು, ಮತಗಳು, ನೀತಿಗಳು, ಯುಕ್ತಿಗಳು ಹೀಗೆ ಎಷ್ಟೋ!!!!. ಪುರುಷನ ರಚಿತವೆಲ್ಲಾ ತೇಲಿಹೋಗಿದ್ದರೂ, ಪುರುಷ ಮತ್ತು ಅವನ ಪುರುಷತನ ಇನ್ನೂ ಹಾಗೆ ನಿಂತಿಹುದು, ಎನ್ನುವುದೇ ಈ ಮುಕ್ತಕದ ಹೂರಣ.

ಅಂದು ಒಂದೆಡೆ ನೆಲೆ ನಿಲ್ಲಬೇಕೆಂದು ನಿರ್ಧರಿಸಿದ ಮನುಷ್ಯ ಕಟ್ಟಿದ ಊರುಗಳೆಲ್ಲ ಇಂದು ಹೆಸರೇ ಇಲ್ಲದೆ ನಾಶವಾಗಿವೆ. ಅಂದು ಅವನ ನಂಬಿಕೆಗಳು ಲುಪ್ತವಾಗಿ ರೂಪಾವಶೇಷ ಮತ್ತು ನಾಮಾವಶೇಷವಾಗಿದೆ. ಇಂದಿಗೆ ಎಲ್ಲೋ ಕೆಲವು ಕೋಟೆಗಳ ಅವಶೇಷಗಳನ್ನು ನೋಡಬಹುದು. ಆದರೆ ಕಟ್ಟಿದ ಎಷ್ಟೋ ಕೋಟೆಗಳು, ರಾಜ್ಯ ಸಾಮ್ರಾಜ್ಯಗಳು ದೇಶ ರಾಜ್ಯಗಳು ಎಲ್ಲವೂ ಮಣ್ಣಲ್ಲಿ ಮಣ್ಣಾಗಿ, ಚರಿತ್ರೆಯಲ್ಲೂ ದಾಖಲೆಯ ರೂಪದಲ್ಲಿಯೂ ಉಳಿಯದೆ ಅಳಿದುಹೋಗಿದೆಯಲ್ಲವೇ?

ಇದಕ್ಕೆ ಸಾವಿರಾರು ಉದಾಹರಣೆಗಳು ಜಗತ್ತಿನಾದ್ಯಂತ ಮನುಷ್ಯನ ಚರಿತ್ರೆಯಲ್ಲಿ ನಮಗೆ ಹೇರಳವಾಗಿ ಸಿಗುತ್ತವೆ. ಆದರೆ ಬದಲಾವಣೆಯೇ ಬದುಕಿನ ರೂಪವಾದಮೇಲೆ, ತನ್ನೊಳಗೆ ಉಳಿಯುವ ಶಕ್ತಿಯನ್ನು ಹೊಂದಿರದ ಯಾವುದೂ ಉಳಿಯುವುದಿಲ್ಲ. ಹಾಗಾಗಿ ಅವೆಲ್ಲ ನಾಶವಾಗಿವೆ. ಹಾಗೆ ತನ್ನೊಳಗೆ ಅದ್ಭುತ ಶಕ್ತಿಯನ್ನು ಹೊಂದಿರುವ ನಮ್ಮ ಸನಾತನದ ‘ವೇದನಿಧಿ ಮತ್ತು ಭಗವದ್ಗೀತೆ’ ಅನಾದಿ ಕಾಲದಿಂದಲೂ ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ.

ಜೀವನ ಶೈಲಿ, ಉಡುಗೆ ತೊಡುಗೆಗಳು, ಆಚಾರ ವಿಚಾರಗಳು ಆಹಾರ ವ್ಯವಹಾರಗಳು ಎಲ್ಲವೂ ಬದಲಾಗಿವೆ. ಹಿಂದಿನ ಯಾವುದೋ ಉಳಿದಿಲ್ಲ. .ಜನಾಂಗದಿಂದ ಜನಾಂಗಕ್ಕೆ,ವಂಶದಿಂದ ವಂಶಕ್ಕೆ ತಲೆಮಾರಿನಿಂದ ತಲೆಮಾರಿಗೆ ಮೂಲ ಮೌಲ್ಯಗಳು ಹರಿದುಬರುತ್ತಾ ಇದ್ದರೂ, ಅವು ಹೊಸತನವನ್ನು ಹೆಚ್ಚಿಸಿಕೊಳ್ಳುತ್ತಾ, ಕಾಲಾನುಕಾಲಕ್ಕೆ ಮೂಲ ರೂಪ ಮತ್ತು ಗುಣವನ್ನೇ ಕಳೆದುಕೊಂಡುಬಿಡುತ್ತಿದೆ. ಇದನ್ನೇ ಮಾನ್ಯ ಗುಂಡಪ್ಪನವರು " ಪುರುಷರಚಿತಗಳೆನಿತೊ ತೇಲಿಹೋಗಿಹವು " ಎಂದರು.

ಅಂದಿನ ಗಟ್ಟಿತನ ಮಾಯವಾಗಿ ಬದುಕಿನ ಕೋಣೆ ಕೋಣೆಗಳಲ್ಲಿ,ಇಂದು ಕೇವಲ ಪೊಳ್ಳುತನ ವ್ಯಾಪಿಸಿದೆ. ನಮ್ಮ ಬದುಕಿನಲ್ಲೂ ಗಟ್ಟಿತನವನ್ನು ಕಂಡುಕೊಳ್ಳಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇಂದು ಅಧಿಕವಾಗಿದೆ. ಹಾಗೆ ಆದರೆ ಮುಂದಿನ ಪೀಳಿಗೆಗೆ ಒಂದು ಸುಂದರ ಸಂಸ್ಕೃತಿಯ ಮತ್ತು ಸಂಸ್ಕಾರದ ಸಮಾಜವನ್ನು ಕೊಟ್ಟಂತಾಗುತ್ತದೆ.

 

ರಸ ಚೆನ್ನುಡಿ

ನೂರು ಸ್ನೇಹಿತರನ್ನು ಸಂಪಾದಿಸುವುದು ದೊಡ್ಡ ವಿಷಯವೇನಲ್ಲ.
ಆದರೆ ನೂರು ಜನರನ್ನು ನಾವು ಎದುರಿಸಬೇಕಾದಾಗ ನಮ್ಮೊಡನೆ
ಗಟ್ಟಿಯಾಗಿ ನಿಲ್ಲಬಲ್ಲ ಒಬ್ಬ ಸ್ನೇಹಿತನನ್ನು ಗಳಿಸಿದರೆ ಅದೇ ಮಹಾ ಸಾಧನೆ – ಅನಾಮಿಕ

 

ರಸಧಾರೆ – ೪೧೦

ಜಾನಪದಗಳು ರಾಜ್ಯಸಾಮ್ರಾಜ್ಯಗಳು ಗುರು ।
ಸ್ಥಾನಗಳು ಧರ್ಮಗಳು ಭಾಷೆ ವಿದ್ಯೆಗಳು ॥
ಕಾಣಿಸದೆ ಸಾಗಿಹವು ಕಾಲಚಕ್ರ ಪ್ರವಾಹದಲಿ ।
ಮಾನವತೆ ನಿಂತಿಹುದು – ಮಂಕುತಿಮ್ಮ

ಎಷ್ಟೋ ಗುಂಪುಗಳು ಜಾನಪದಗಳು, ರಾಜ್ಯಗಳು, ಸಾಮ್ರಾಜ್ಯಗಳು, ಗುರುಗಳು, ಗುರುಪೀಠಗಳು, ಧರ್ಮಗಳು, ಭಾಷೆಗಳು, ವಿದ್ಯೆಗಳು, ಹುಟ್ಟಿ ಕೆಲಕಾಲ ಇದ್ದು ಬದಲಾಗಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಕಾಲ ಪ್ರವಾಹದಲ್ಲಿ ಕಾಣೆಯಾಗಿವೆ. ಆದರೆ ಅದನ್ನೆಲ್ಲ ಕಂಡ ಕಂಡುಕೊಂಡ,ಅನುಭವಿಸಿದ ಮಾನವತೆ ಮಾತ್ರ ಈ ಜಗತ್ತಿನಲ್ಲಿ ನಿಂತಿದೆ ಎನ್ನುವುದೇ ಈ ಮುಕ್ತಕದ ಹೂರಣ.

ಮನುಷ್ಯ ಈ ಜಗತ್ತಿನಲ್ಲಿ ಹುಟ್ಟಿದಾಗಿನಿಂದ ಅವನ ಚರಿತ್ರೆ ಅಗಾಧ ಮತ್ತು ಬಹಳ ವಿಸ್ತಾರ. ಮಾನ್ಯ ಗುಂಡಪ್ಪನವರು ನಮ್ಮನ್ನು ದಾಖಲೆಗೆ ಸಿಗದ ಆ ಪುರಾತನ ಚರಿತ್ರೆಗೆ ಕೊಂಡು ಹೋಗುತ್ತಾರೆ, ಈ ಮುಕ್ತಕದಲ್ಲಿ. ಒಬ್ಬಂಟಿಯಾಗಿದ್ದವನು, ಗುಂಪುಗಳನ್ನು ಕಟ್ಟಿಕೊಂಡು, ಅಲೆಮಾರಿಯಾಗಿದ್ದವನು, ಒಂದೆಡೆ ಸ್ಥಿರವಾಗಿ ನಿಂತು, ಅನ್ಯ ಪ್ರಾಣಿಗಳಿಗಿಂತ ಉನ್ನತಮಟ್ಟದಲ್ಲಿ ಆಲೋಚಿಸಲು ಕ್ಷಮೆತೆಯನ್ನು ಪಡೆದ ಇವನು ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಮಾಡಿದ ಪ್ರಯತ್ನದ ಫಲವೇ ಇವನು ರೂಢಿಸಿಕೊಂಡ ಸಂಸ್ಕಾರಗಳು, ಕಲೆ-ಸಾಹಿತ್ಯಗಳು, ಮತ-ಧರ್ಮಗಳು, ಭಾಷೆ- ಬರವಣಿಗೆಗಳು, ಕತೆ-ಕಾವ್ಯಗಳು, ಜೀವನದ ವಿನ್ಯಾಸಗಳು, ಅಂದಿನಿಂದ ಇಂದಿನವರೆಗೆ ಎಷ್ಟೋ ಬದಲಾವಣೆಗಳನ್ನು ಕಂಡ ಮಾನವನ ಜೀವನ ಶೈಲಿ ನಿರಂತರ ಬದಲಾಗುತ್ತಲೇ ಇದೆ.

ಸಾವಿರಾರು ವರ್ಷಗಳಿಂದಲೂ ಅನ್ಯ ಪ್ರಾಣಿಗಳ ಜೀವನ ಶೈಲಿಯಲ್ಲಿ ಯಾವ ಬದಲಾವಣೆಯೂ ಇಲ್ಲ. ಆದರೆ ಮಾನವನನ್ನು ನೋಡಿ, ಎಲ್ಲಿಂದ ಎಲ್ಲಿಗೆ ಬಂದಿದ್ದಾನೆ. ಇದು ಕೇವಲ ಇವನ ಉನ್ನತ ಯೋಚನಾ ಶಕ್ತಿಯ ಮತ್ತು ತನ್ನ ಬದುಕಿಗೆ ಒಂದು ನವ ನವೀನ ಆಯಾಮವನ್ನು ಕಂಡುಕೊಳ್ಳುವ, ತನ್ನ ಬದುಕನ್ನು ಸುಧಾರಿಸಿಕೊಳ್ಳುವ ಪ್ರಯತ್ನದಿಂದ ಆದದ್ದು. ಇವನು ಕಲ್ಪನಾ ಜೀವಿ. ಇವನು ಭಾವನಾ ಜೀವಿ. ಇವನ ಕಲ್ಪನೆ ಮತ್ತು ಭಾವುಕತೆಯಿಂದಲೇ ಇವನ ಜೀವನದಲ್ಲಿ ಇಷ್ಟೊಂದು ಬದಲಾವಣೆ ಬಂದಿದೆ .

ಈ ರೀತಿಯ ಬದಲಾವಣೆಗಳು ಅನಿವಾರ್ಯ ಮತ್ತು ನಿರಂತರ. ನಮ್ಮ ಬದುಕೂ ಸಹ ಈ ಅವ್ಯಾಹತ ಹರಿಯುವ ಕಾಲ ಪ್ರವಾಹದ ಒಂದು ಭಾಗ. ಇಂತಹ ಬದುಕಿನಲ್ಲಿ ನಮ್ಮ ಪಾತ್ರವನ್ನು ನಾವು ಶುದ್ಧವಾಗಿ ನಿರ್ವಹಿಸಿದರೆ, ಮಾನ್ಯ ಗುಂಡಪ್ಪನವರು ಹೇಳುವ ‘ಮಾನವತೆ’ ಈ ಜಗತ್ತಿನಲ್ಲಿ ಇನ್ನೂ ಧೀರ್ಘಕಾಲ ಉಳಿದೀತು.

 

ರಸ ಚೆನ್ನುಡಿ

ಯೌವನ, ಐಶ್ವರ್ಯ, ಅಧಿಕಾರ ಮತ್ತು ಅವಿವೇಕ, ಒಂದೊಂದೂ ನಮ್ಮನ್ನು ಘೋರ ಅನರ್ಥದ ಕೂಪಕ್ಕೆ ತಳ್ಳಬಹುದು. ಆದರೆ ಈ ನಾಲ್ಕೂ ಒಂದೆಡೆ ಸೇರಿದರೆ ಆಗುವ ಅನರ್ಥವನ್ನು ಊಹಿಸಲ್ಲೂ ಸಾಧ್ಯವಿಲ್ಲ – ಹಿತೋಪದೇಶ

 

ರಸಧಾರೆ – ೪೦೯

ಮಾನುಷದ ಚರಿತೆ ಪರಸತ್ವಸಾಕ್ಷಾತ್ಕವಿತೆ ।
ಕಾಣಿಪುದದಾತ್ಮ ಸ್ವಭಾವದುದ್ಗಮವ ॥
ಏನಾಶೆ! ಯೇನು ಸಾಹಸ! ವೇನು ಭಂಗಗಳು ।
ಅನುಭವವೇದವದು – ಮಂಕುತಿಮ್ಮ

ಪರಸತ್ವಸಾಕ್ಷಾತ್ಕವಿತೆ=ಪರಸತ್ವ+ಸಾಕ್ಷಾತ್+ಕವಿತೆ. ಕಾಣಿಪುದದಾತ್ಮ= ಕಾಣಿಪುದು+ಅದು+ಆತ್ಮ, ಸ್ವಭಾವದುದ್ಗಮವ= ಸ್ವಭಾವದ+ಉದ್ಗಮವ, ಏನಾಶೆ= ಏನು+ಆಶೆ,

ಚರಿತೆ=ಚರಿತ್ರೆ, ಪರಸತ್ವ=ಪರಮಾತ್ಮ ಅಥವಾ ಪರಮಚೇತನ, ಕಾಣಿಪುದು=ತೋರುವುದು,

ಈ ಜಗತ್ತಿನಲ್ಲಿ ಮಾನವರ ಅಸ್ತಿತ್ವದ ಚರಿತ್ರೆಯು ಪರಮ ಚೇತನದ ಆತ್ಮಚರಿತ್ರೆಯ ಕವಿತೆಯಂತಿದೆ. ಅದು ಅಭಿವೃದ್ಧ್ಯಾಭಿಮುಖವಾದ ಆತ್ಮದ ಸ್ವಭಾವವನ್ನು ತೋರುತ್ತದೆ. ಮನುಷ್ಯ ದೇಹವನ್ನು ಧರಿಸಿದ ಚೇತನದ ಆಸೆ, ಸಾಹಸ, ಪ್ರಯತ್ನ. ನಿರಾಸೆ ಮುಂತಾದ ಅನುಭವಗಳನ್ನು ಸಮಗ್ರವಾಗಿ ‘ಅನುಭವವೇದ’ವೆಂದು ಕರೆದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅವ್ಯಾಹತವಾಗಿ ಹರಿಯುತ್ತಿರುವ ಮಾನವನ ಜೀವನದ ಚರಿತ್ರೆಯನ್ನು ಸೂಕ್ಷ್ಮವಾಗಿ ಅವಗಾಹಿಸಿದರೆ ನಮಗೆ ಮನುಷ್ಯನ ಅಭಿವೃದ್ಧಿಯ ಪರಿಚಯವಾಗುತ್ತದೆ. ‘ಚಕ್ರದ’ ಮತ್ತು ‘ಬೆಂಕಿ’ಯ ಆವಿಷ್ಕಾರದಿಂದ ಹಿಡಿದು ಇಂದಿನ ಪರಮೋತ್ತಮ ವೈಜ್ಞಾನಿಕ ಆವಿಷ್ಕಾರದವರೆಗಿನ ಮನುಷ್ಯನ ಚರಿತ್ರೆ ಒಂದು ಮಹಾ ಕಾವ್ಯದಂತೆ ನಮಗೆ ಕಾಣುತ್ತದೆ.

ಪರಮಾತ್ಮನು ಈ ಜಗತ್ತಿನಲ್ಲಿ ಎಲ್ಲವೂ ತಾನೇ ಆಗಿದ್ದಾನೆ ಮತ್ತು ತಾನೇ ಸೃಷ್ಟಿಸಿದ ಈ ಜಗತ್ತನ್ನು ತಾನೇ ಅನುಭವಿಸುತ್ತಿದ್ದಾನೆ ಮತ್ತು ಬೇರೆ ಬೇರೆ ದೇಹಗಳಲ್ಲಿ ಆತ್ಮದ ರೂಪದಲ್ಲಿ ಪ್ರಕಟಗೊಂಡ ಒಂದೊಂದು ಆತ್ಮವೂ ತನ್ನ ಮೂಲ ಸೇರುವುದಕ್ಕಾಗಿ ಹಲವಾರು ಮಾರ್ಗಗಳನ್ನು ಕಂಡುಕೊಂಡಿದೆ, ಎನ್ನುವುದು ನಮ್ಮ ಸನಾತನ. . ಸೃಷ್ಟಿಯಲ್ಲಿ ಉತ್ತಮೋತ್ತಮ ಸೃಷ್ಟಿಯಾದ ನಮ್ಮ ಮನುಷ್ಯ ಪ್ರಾಣಿ, ‘ನಾದೋಪಾಸನೆ’ಯ ಮೂಲಕ, ‘ಕಲೋಪಾಸನೆ’ಯ ಮೂಲಕ, ‘ವಿಜ್ಞಾನ’ದ ಮೂಲಕ, ‘ಸಾಹಿತ್ಯ’ದ ‘ಜ್ಞಾನ’ದ ಮೂಲಕ, ಜಪ, ತಪ, ಧ್ಯಾನ ಮುಂತಾದವುಗಳ ಮೂಲಕ, ತನ್ನ ಮೂಲವಾದ ಪರಮಾತ್ಮನನ್ನು ಸೇರುವ ಪ್ರಯತ್ನ ಮಾಡಿದ್ದಾನೆ. ಅಂತಹ ಪ್ರಯತ್ನದ ಕಥೆ ಇಂದು ಚರಿತ್ರೆಯ ರೂಪದಲ್ಲಿ ಜಗತ್ತಿನಲ್ಲಿ ಒಂದು ಮಹಾ ಕಾವ್ಯದಂತೆ, ನಿಂತಿದೆ.

ಈ ದಿಶೆಯಲ್ಲಿ ಇವನು ಪಟ್ಟ ಆಶೆಗಳೇನು, ಪ್ರಯತ್ನಗಳೇನು, ಕಂಡ ಜಯವೇನು ಅಪಜಯವೇನು ಸಾಧಿಸಿದ ಸಾಧನೆಗಳೇನು,? ಲೆಕ್ಕಕ್ಕಿಲ್ಲದಷ್ಟು. ಒಬ್ಬ ಕ್ಷತ್ರಿಯ ರಾಜನಾದ ಕೌಶಿಕನು "ಬ್ರಹ್ಮರ್ಷಿ"ಪಟ್ಟಕ್ಕೇರಿ ವಿಶ್ವಾಮಿತ್ರನಾದ ಕತೆ, ತಮ್ಮ ತಪಸ್ಸಿನಿಂದಲೇ ಬೃಹತ್ತಾದ ವೇದ ಜ್ಞಾನ ಸಂಪತ್ತನ್ನು ಪಡೆದು ಈ ಲೋಕಕ್ಕೆ ಸಮರ್ಪಣೆ ಮಾಡಿದ ಋಷಿ ಸಮೂಹದ ಕಥೆ, ರಾಮ,ಕೃಷ್ಣ,ಚಾಣಕ್ಯರಂಥಹ ಮಹನೀಯರು ಈ ಜಗತ್ತಿಗೆ ನೀಡಿದ ಕೊಡುಗೆ ಅಪ್ರತಿಮವಾದದ್ದು. ಇವರೆಲ್ಲರ ಅನುಭವವೂ ಇಂದು ಜಗತ್ತಿನ ಉನ್ನತಿಗೆ ಮಾರ್ಗದರ್ಶನ ಮಾಡುತ್ತಿದೆ. ಅವರ ಅನುಭವವೇ ‘ಅನುಭವವೇದ’. ಅದರ ದರ್ಶನ ನಮಗೆ ಆಗಿ, ನಾವೂ ಸಹ ಈ ಜಗತ್ತನ್ನು ಇನ್ನಷ್ಟು ಸಂಪದ್ಭಾರಿತವನ್ನಾಗಿಸುವ ಕಾರ್ಯದಲ್ಲಿ ನಿರತರಾದರೆ, ನಮ್ಮ ಬದುಕೂ ಸಹ ಸಾರ್ಥಕವಾಗುತ್ತದೆ.