RSS

Monthly Archives: ಜೂನ್ 2013

ರಸಧಾರೆ – ೪೩೫

ರಾಮಣೀಯಕದಿ ನಲಿವಕ್ಷಿಯೊಡನಚಲಮನ ।
ಪ್ರೇಮಮಯಮನದೊಡನೆ ಮೋಹಬಡದಾತ್ಮ ॥
ಭೀಮಬಲದೊಡನೆ ರಾಮನ ಅಭಯ ನಿಯಮವಿರೆ ॥
ಯಾಮಳ ವರಂಗಳವು – ಮಂಕುತಿಮ್ಮ

ನಲಿವಕ್ಷಿಯೊಡನಚಲಮನ= ನಲಿವ+ಅಕ್ಷಿಯೊಡನೆ+ಅಚಲ+ಮನ, ಪ್ರೇಮಮಯಮನದೊಡನೆ=ಪ್ರೇಮಮಯ+ಮನದೊಡನೆ, ಮೋಹಬಡದಾತ್ಮ=ಮೋಹ+ಪಡದ+ ಆತ್ಮ, ನಿಯಮವಿರೆ=ನಿಯಮವು+ಇರೆ

ರಾಮಣೀಯಕ= ಸುಂದರ, ಅಕ್ಷಿ=ಕಣ್ಣು, ಅಚಲಮನ= ಸ್ಥಿರವಾದ ಮನಸ್ಸು, ಯಾಮಳ = ಎರಡು, ಜೋಡಿ

ಸುಂದರವಾದ ವಸ್ತುಗಳು ನಮ್ಮ ಕಣ್ಣಿಗೆ ಬಿದ್ದರೂ ಅದನ್ನು ಪಡೆಯಬೇಕೆಂದು ಮನಸ್ಸಾದರೂ ಅದರಲ್ಲಿ ಮೋಹಪರವಶರಾಗದ ಮನೋ ನಿಗ್ರಹವಿರುವುದು, ಭೀಮನಷ್ಟು ಬಲವಿದ್ದರೂ ಮತ್ತನಾಗದೆ ರಾಮನಂತೆ ಆ ಬಲವನ್ನು ಕೇವಲ ಲೋಕಕಲ್ಯಾಣಕ್ಕಾಗಿ ಅಥವಾ ಪರಹಿತಕ್ಕಾಗಿ ಉಪಯೋಗಿಸುವ ನಿಯಮವನ್ನು ನಮಗೆ ನಾವೇ ಹಾಕಿಕೊಂಡರೆ, ಈ ಎರಡೂ ಗುಣಗಳು ನಮಗೆ ಆ ದೈವ ಕೊಟ್ಟ ಎರಡು ವರಗಳಂತೆ ಎಂದು ಮನಸ್ಸಿನ ಭಾವವನ್ನು ಹೇಗೆ ಆತ್ಮಹಿತ ಮತ್ತು ಪರಹಿತಕ್ಕೆ ಉಪಯೋಗಿಸಿಕೊಳ್ಳಬಹುದು ಎಂದು ಸೂಚ್ಯವಾಗಿ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಮ್ಮ ಪ್ರತಿ ನಿತ್ಯದ ಆಗುಹೋಗುಗಳಲ್ಲಿ ನಮಗೆ ಎಷ್ಟೋ ಸುಂದರವಾದ ವಸ್ತುಗಳು ಕಣ್ಣಿಗೆ ಬೀಳುತ್ತವೆ. "ದ್ರುಷ್ಯಮಾಣೆ ಭವೇತ್ ಪ್ರೀತಿ:" ಎನ್ನುವ ಹಾಗೆ ಕಂಡ ವಸ್ತುವನ್ನೆಲ್ಲ ಪಡೆಯಬೇಕು, ಅನುಭವಿಸಬೇಕು ಎನ್ನುವ ಆಸೆ ಮನಸ್ಸಿನಲ್ಲಿ ಮೂಡುತ್ತದೆ. ನಮಗೆ ಯಾವುದು ಹಿತ ಯಾವುದು ಅಹಿತ ಎನ್ನುವ ಪರಿಜ್ಞಾನ ಅಥವಾ ವಿವೇಚನೆ ನಮಗೆ ಸದಾಕಾಲ ಇರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮನೋ ನಿಗ್ರಹವಿದ್ದರೆ, ನಾವು ಸಂಕಷ್ಟಗಳಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆಗಳು ಕದಿಮೆಯಾಗುತ್ತದೆ. ವಸ್ತುವನ್ನು ಪಡೆಯದೇ ಇದ್ದರೆ, ಅದರಲ್ಲಿ ಮೋಹಗೊಳ್ಳುವ ಪ್ರಶ್ನೆ ಬರುವುದಿಲ್ಲ. ಮೋಹವಿಲ್ಲದೆ ಇದ್ದರೆ ಮನಸ್ಸು ಹಗುರವಾಗಿ, ಮುಕ್ತವಾಗಿ ಇರುತ್ತದೆ. ಬಹಳಷ್ಟು ಜನ ಪರದಾಡುವುದು ಅಥವಾ ಸಾಧನೆ ಮಾಡುವುದು ಇಂತಹ ಸ್ಥಿತಿಗೆ ತಲುಪಲು ಅಲ್ಲವೇ? ಅದು ನಮಗೆ ಕೇವಲ ಮನೋ ನಿಗ್ರಹದಿಂದ ಸಿಕ್ಕರೆ, ಇದು ಒಂದು ವರವೇ ಸರಿ.

ಇನ್ನು ಬಲದ ವಿಷಯಕ್ಕೆ ಬಂದರೆ, ಜನ, ದೇಹ ಮತ್ತು ಹಣದ ಬಲ ಹೆಚ್ಚಿದ್ದರೆ ಮನುಷ್ಯ ಯಾವಾಗಲೂ ಅಹಂಕಾರವನ್ನು ತೋರುವ ಸಾಧ್ಯತೆಗಳು ಅಧಿಕ. ಇವೆಲ್ಲಾ ಅವಶ್ಯಕತೆಗೂ ಮೀರಿ ಇದ್ದರೂ ಅಹಂಕಾರವನ್ನು ತೋರದೆ ನಮ್ಮಲ್ಲಿರುವ ಬಲವನ್ನು ಪರಹಿತಕ್ಕಾಗಿಯೇ ಉಪಯೋಗಿಸುವ ಮನೋದೃಢತೆ ನಮ್ಮಲ್ಲಿ ಇದ್ದರೆ ನಾವು ನಮ್ಮ ಸಂಸ್ಕಾರಗಳನ್ನು, ಶೀಲವನ್ನು ಉಳಿಸಿ, ಬೆಳೆಸಿ, ಕಾಪಾಡಿಕೊಳ್ಳಬಹುದು. ರಾಮಾಯಣದಲ್ಲಿ ತನಗೆ ಅಮಿತ ಬಲವಿದ್ದರೂ ರಾಮ ‘ ಈಗಲೂ ಶರಣಾಗು, ನಿನ್ನನ್ನು ಕ್ಷಮಿಸುವೆ’ ಎಂದು ರಾವಣನಿಗೆ ಹೇಳಿದಂತೆ, ನಾವೂ ಸಹ ನಮ್ಮ ಮನಸ್ಸು ಮತ್ತು ಬಲವನ್ನು ನಿಯಮದಲ್ಲಿಟ್ಟುಕೊಳ್ಳಲಾದರೆ ಅದನ್ನು ದೈವ ಕೊಟ್ಟ ವರವೆಂದೇ ಭಾವಿಸಬೇಕು.

Advertisements
 

ರಸ ಚೆನ್ನುಡಿ

ಹಾವಿಗಿಂತ ಮನುಷ್ಯ ಹೆಚ್ಚು ದುಷ್ಟ.

ಏಕೆಂದರೆ ಹಾವಿಗೆ ವಿಜಾತೀಯ ಮುಂಗುಸಿ ಶತ್ರು.
ಆದರೆ ಮನುಷ್ಯನಿಗೆ ಸಜಾತೀಯ ಮನುಷ್ಯನೇ ಶತ್ರು – ಶುಭಾಷಿತ

 

ರಸಧಾರೆ – ೪೩೪

ನಗುವೊಂದು ರಸಪಾಕವಳುವೊಂದು ರಸಪಾಕ ।
ನಗುವಾತ್ಮ ಪರಿಮಳವ ಪಸರಿಸುವ ಕುಸುಮ ॥
ದುಗುಡವಾತ್ಮವ ಕಡೆದು ಸತ್ವ್ವವೆತ್ತುವ ಮಂತು ।
ಬಗೆದೆರಡನುಂ ಭುಜಿಸು – ಮಂಕುತಿಮ್ಮ

ನಗುವೊಂದುರಸಪಾಕವಳುವೊಂದುರಸಪಾಕ = ನಗುವು+ಒಂದು +ರಸಪಾಕ+ಅಳುವು+ಒಂದು+ರಸಪಾಕ
ನಗುವಾತ್ಮ=ನಗುವ+ಆತ್ಮ, ದುಗುಡವಾತ್ಮವ = ದುಗುಡವು+ಆತ್ಮವ, ಸತ್ವ್ವವೆತ್ತುವ=ಸತ್ವವ+ಎತ್ತುವ,

ಬಗೆದೆರಡನುಂ = ಬಗೆದು+ ಎರಡುನುಂ,

ಮಂತು = ಮೊಸರ ಕಡೆಯುವ ಕಡೆಗೋಲು, ಭುಜಿಸು= ತಿನ್ನು, ಅನುಭವಿಸು

ಮನಸ್ಸಿನ ಭಾವರಸದಲ್ಲಿ ಉಕ್ಕಿಹರಿಯುವುದೇ ನಗು ಮತ್ತು ಅಳು. ಆತ್ಮದ ಸಂತೋಷದ ಭಾವ ಪರಿಮಳವನ್ನು ಹರಡುವ ಹೂವೇ ‘ನಗು’. ಕಷ್ಟಗಳನ್ನು ಅನುಭವಿಸಿದ ಆತ್ಮವನ್ನು ಕಡೆದು ಸತ್ವವೆನ್ನುವ ಬೆಣ್ಣೆಯನ್ನು ತೆಗೆಯುವ ಕಡಗೋಲಂತೆ ‘ಅಳು’. ಇವೆರಡರ ಅನುಭವವನ್ನೂ ಪಡೆದು ನೀ ಜೀವಿಸಬೇಕೆಂದು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಸಂತೋಷವಾದರೆ ನಗು, ದುಃಖವಾದರೆ ಅಳು ಸಹಜವಾಗಿ ವ್ಯಕ್ತವಾಗುವ ಭಾವಗಳು. ಆ ಭಾವಗಳಿಗೆ ಕಾರಣವಾದ ಘಟನೆಗಳ ಪ್ರಭಾವ ತೀವ್ರವಾಗಿದ್ದರೆ, ಆ ಭಾವಗಳು ನಗುವಾಗಿಯೋ ಅಥವಾ ಅಳುವಾಗಿಯೋ ಹೊರಹೊಮ್ಮುತ್ತದೆ. ಅದು ಆತ್ಮದ ಭಾವ. ಅಂತಃಸತ್ವ ಅನುಭವಿಸಿದ ಭಾವವನ್ನು, ಹೂ ತನ್ನ ‘ಪರಿಮಳ’ವನ್ನು ಹೊರಸೂಸುವಂತೆ, ನಗುವಿನ ರೂಪದಲ್ಲಿ ಹೊರಸೂಸುತ್ತದೆ. ಭಾವ ಮಂಥನವಾದ ನಂತರ ಆದ ದುಃಖವು ಅಳುವಿನ ರೂಪದಲ್ಲಿ ಹೊರಬರುತ್ತದೆ.

ತೀವ್ರ ಕಲ್ಲಿನ ಮನಸ್ಸು ಇರುವವರ ಹೊರತು ಸಕಲ ಮಾನವರಿಗೂ ಅಳು ಮತ್ತು ನಗುವಿನ ಮೂಲಕ ತಮ್ಮ ಮನಸ್ಸಿನ ಭಾವ ತೀವ್ರತೆಯನ್ನು ಹೊರಗೆಡುಹುವ ಕ್ಷಮತೆಯನ್ನು ಆ ಪರಮಾತ್ಮ ಕರುಣಿಸಿದ್ದಾನೆ. ಕೆಲವರಿಗೆ ನಗುವೋ ಅಳುವೋ ತತ್ಕ್ಷಣ ಬರುತ್ತದೆ. ಹಲವರು ತಮಗೆ ಸಂಬಂಧಪಡದ ವಿಷಯವಾದರೂ ಭಾವುರಾಗಿ ನಗುತ್ತಾರೆ ಅಥವಾ ಅಳುತ್ತಾರೆ. ಕೆಲವರು ತಮ್ಮ ತರ್ಕದಿಂದ ಅದನ್ನು ತಡೆದುಕೊಳ್ಳುತ್ತಾರೆ. ಹಾಗೆ ತಡೆದುಕೊಳ್ಳಲು ಪ್ರತಿಯೊಬ್ಬರಿಗೂ ಅವರವರದೇ ಕಾರಣವಿರಬಹುದು. ಆದರೆ ಅದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

‘ನಗು’ ಪರಮಾತ್ಮ ಮಾನವ ಪ್ರಾಣಿಗೆ ಕೊಟ್ಟ ವರ. ವಿನೋದ ಪೂರಿತ ಅಥವಾ ವಿನೋದ ಕಾರಿತ ನಗುವಿಲ್ಲದ ಜಗತ್ತನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಹಾಗಾಗಿ ಗುಂಡಪ್ಪನವರು "ಬಗೆದೆರಡನುಂ ಭುಜಿಸು" ಎಂದು
ಹೇಳುವಂತೆ ನಮಗಾದ ಅನುಭವಗಳನ್ನು ಮನಸ್ಸಿನಲ್ಲಿ ಮಥಿಸಿ ನಗುವನ್ನೋ ಅಳುವನ್ನೋ ನಾವು ಹೊರಗೆಡುಹಿದರೆ, ಅದು ಸಹಜತೆ ಮತ್ತು ಮನಸ್ಸಿಗೆ ನಿರಾಳವಾಗುತ್ತದೆ.

 

ರಸ ಚೆನ್ನುಡಿ

ಬೆಟ್ಟಕ್ಕಿಂತ ಸಮುದ್ರ, ಸಮುದ್ರಕ್ಕಿಂತ ಆಕಾಶ, ಆಕಾಶಕ್ಕಿಂತ ಪರಮಾತ್ಮ ದೊಡ್ಡದು.

ಆದರೆ ಆ ಪರಮಾತ್ಮನಿಗಿಂತ ಮನುಷ್ಯನ ‘ಆಸೆ’ದೊಡ್ಡದು. ಅದನ್ನು ಗೆಲ್ಲುವುದೇ ಬೃಹತ್ ಸಾಧನೆ – ಅನಾಮಿಕ

 

ರಸಧಾರೆ – ೪೩೩

ಅಳುವೇನು? ನಗುವೇನು? ಹೃತ್ಕಪಾಟೋದ್ಘಾಟ ।
ಶಿಲೆಯೆ ನೀಂ ಕರಗದಿರಲ್? ಅರಳದಿರೆ ಮರಳೇಂ? ॥
ಒಳಜಗವ ಹೊರವಡಿಪ, ಹೊರಜಗವನೊಳಕೊಳುವ ।
ಸುಳುದಾರಿಯಳು ನಗುವು – ಮಂಕುತಿಮ್ಮ ॥

ಹೃತ್ಕಪಾಟೋದ್ಘಾಟ =ಹೃತ್+ಕಪಾಟ+ಉದ್ಘಾಟ, ಹೊರವಡಿಪ=ಹೊರ+ಅವಡಿಪ, ಹೊರಜಗವನೊಳಕೊಳುವ=ಹೊರಜಗವನು+ಒಳ+ಕೊಳುವ, ಸುಳುದಾರಿಯಳುನಗುವು=ಸುಳುದಾರಿ+ಅಳು+ನಗುವು

ಹೃತ್ಕಪಾಟೋದ್ಘಾಟ = ಹೃದಯದ ಬಾಗಿಲ ತೆರೆಯಲು, ಕರಗದಿರಲ್=ಕರಗದೆ ಇರಲು, ಹೊರವಡಿಪ=ಹೊರಹಾಕುವ, ಸುಳುದಾರಿ=ಸುಲಭವಾದ ಮಾರ್ಗ

ಅಳುವೇನು,ನಗುವೇನು? ಅವು ಹೃದಯದ ಬಾಗಿಲನ್ನು ತೆಗೆದು ಮುಚ್ಚುವ ಸಾಧನಗಳು. ಕರಗದೆ ಇರಲು ನೀನು ಕಲ್ಲೇನು?ಅಥವಾ ಅರಳದೆ ಇರಲು ನೀನು ಮರಳೇನು? ನಿನ್ನ ಒಳಗಿರುವ ಭಾವ ಜಗತ್ತನ್ನು ಹೊರಜಗತ್ತಿನೊಂದಿಗೆ ಬೆರೆಸಿ ಹೊರಜಗತ್ತಿನ ಭಾವ ಸಂಪತ್ತನ್ನು ನಿನ್ನ ಒಳಕ್ಕೆ ಸೆಳೆದುಕೊಳ್ಳಲು
ಈ ‘ನಗು ಮತ್ತು ಅಳು’ ಗಳೇ ಸುಲಭದ ದಾರಿಗಳು ಎಂದು ಒಂದು ಅದ್ಭುತ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಈ ಮುಕ್ತಕದಲ್ಲಿ ಡಿ .ವಿ. ಜಿ ಯವರು ಒಂದು ಸ್ಪಷ್ಟ ಆದೇಶವನ್ನು ನೀಡಿ ಹೇ ! ಮಾನವ ಹೃದಯಗಳೇ ಕಲ್ಲಾಗಬೇಡಿ, ಮುದುಡದೇ ಅರಳಿನಿಲ್ಲಿ, ನಿಮ್ಮ ಭಾವಗಳನ್ನು ಜಗತ್ತಿಗೆ ಹಂಚಿ ಮತ್ತು ಜಗತ್ತಿನ ಭಾವಗಳನ್ನು ಸ್ವಾಗಿತಿಸಿ ನಿಮ್ಮ ಹೃದಯ ವೈಶಾಲ್ಯವನ್ನು ಹೆಚ್ಚಿಸಿಕೊಳ್ಳಿ ಎಂದಿದ್ದಾರೆ.

ಹೃದಯದ ಬಾಗಿಲನ್ನು ತೆರೆದು ಇಟ್ಟುಕೊಂಡವರಿಗೆ ಹೊರಜಗತ್ತಿನ ಪರಿಚಯವಾಗುತ್ತದೆ. ಹೊರಜಗತ್ತಿನಲ್ಲಿ ಇರುವ ವಿಚಾರ, ವಿಷಾದ, ವಿನೋದ, ವಿಸ್ಮಯಗಳ, ಸುಖ, ದುಃಖ, ನೋವು ನಲಿವಿನ ಭಾವಗಳ ಸಂಪತ್ತಿನ ಅರಿವಾಗಿ ನಮ್ಮ ಹೃದಯವೂ ವಿಶಾಲವಾಗಲು ಗುಂಡಪ್ಪನವರು "ಸುಳುದಾರಿಯಳುನಗುವು" ಎನ್ನುವಂತೆ ಸುಲಭವಾದ ದಾರಿಗಳಾಗುತ್ತವೆ. ವಿಡಂಬನೆಯೆಂದರೆ, ನಾವು ನಮ್ಮ ಹೃದಯಗಳನ್ನು ಮುಚ್ಚಿಕೊಂಡಿದ್ದೇವೆ. ನಾವು ಅದನ್ನು ಕೇವಲ ನಮ್ಮ ಸ್ವಾರ್ಥಸಾಧನೆಗೆ ತೆರೆದುಕೊಳ್ಳುತ್ತೇವೆ, ಪಡೆದುಕೊಳ್ಳುವುದಕ್ಕೆ ಮಾತ್ರ ತೆರೆಯುತ್ತೇವೆ, ಕೊಡುವುದಕ್ಕಲ್ಲ.

ಜಗತ್ತು ವಿಶಾಲವಾಗಿದೆ. ಹೃದಯವನ್ನೂ ವಿಶಾಲವಾಗಿಸಿಕೊಂಡರೆ, ಇಡೀ ಜಗತ್ತನ್ನೇ ಹೃದಯದಲ್ಲಿ ತುಂಬಿಕೊಳ್ಳಬಹುದು. ನಾ ಒಲ್ಲೆ! ಎಂದರೆ ಏನು ಮಾಡುವುದು? ನಮ್ಮ ಹೃದಯಗಳು ಹೊರ ಪ್ರಪಂಚಕ್ಕೆ ಮಿಡಿಯುವಂತಾ ಮೆತ್ತನೆಯ ಚೆಂಡುಕಗಳಾಗಬೇಕು. ಸ್ಪಂದನೆಯೇ ಇಲ್ಲದ ಕಲ್ಲಾಗಬಾರದು.

 

ರಸ ಚೆನ್ನುಡಿ

ಮೋಹದ ಹಿಡಿತದಲ್ಲಿರುವವರು ಎಚ್ಚರವಾಗಿದ್ದರೂ ನಿದ್ರೆಮಾಡುವವರಂತೆ, ನೋಡುತ್ತಿದರೂ ಕುರುಡರಂತೆ,

ಓದಿದ್ದರೂ ಮೂರ್ಖರಂತೆ, ಬೆಳಕಿನಲ್ಲಿದ್ದರೂ ಕತ್ತಲಲ್ಲಿರುವಂತೆ ವರ್ತಿಸುತ್ತಾರೆ – ಸುಭಾಷಿತ ಮಂಜರಿ

 

ರಸಧಾರೆ – ೪೩೨

ಪ್ರತ್ಯೇಕಸುಖವಲ್ಪದುದು, ಗಳಿಗೆತೋರ್ಕೆಯದು ।
ಆತ್ಮವಿಸ್ಥಾರವಾಗಿಪುದೆ ನಿತ್ಯಸುಖ ॥
ವ್ಯಕ್ತಿಜೀವನದ ಸೊಂಪು ಸಮಷ್ಠಿಜೀವನದಿ ।
ಒಟ್ಟುಬಾಳ್ವುದು ಕಲಿಯೊ – ಮಂಕುತಿಮ್ಮ ॥

ಪ್ರತ್ಯೇಕಸುಖವಲ್ಪದುದು= ಪ್ರತ್ಯೇಕ+ಸುಖ+ಅಲ್ಪದುದು, ಗಳಿಗೆತೋರ್ಕೆಯದು =ಗಳಿಗೆ+ತೋರ್ಕೆ+ಅದು

ಸೊಂಪು = ಸುಖ ಅಥವಾ ಹಿತ, ಸಮಷ್ಠಿಜೀವನ=ಸಹಜೀವನ.

ನಾವು ಪ್ರತಿಯೊಬ್ಬರೂ ನಮ್ಮಷ್ಟಕ್ಕೆ ನಾವೇ ಅನುಭವಿಸಿ ಆನಂದ ಪಡುವ ಸುಖ, ಅಲ್ಪ ಸುಖ ಮತ್ತು ಕ್ಷಣಿಕವಾದದ್ದು. ಹಾಗಲ್ಲದೆ ಆತ್ಮದ ಭಾವವನ್ನು ವಿಶಾಲವಾಗಿಸಿವುದೇ ಶಾಶ್ವತ ಸುಖ. ಒಬ್ಬ ವ್ಯಕ್ತಿ ತನ್ನಷ್ಟಕ್ಕೆ ತಾನೇ ಸುಖಪಡುವುದಕ್ಕಿಂತ ತನ್ನೊಡನೆ ಸಮಸ್ತರನ್ನೂ ಸೇರಿಸಿಕೊಂಡು ಸುಖಪಡುವುದು ಹಿತವಾಗಿರುತ್ತದೆ, ಹಾಗಾಗಿ ಒಟ್ಟು ಬಾಳುವೆಯನ್ನು ಕಲಿತುಕೋ ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಈ ವಿಷಯಕ್ಕೆ ವೇದಕಾಲದಿಂದಲೂ ಪ್ರಾಧಾನ್ಯವನ್ನು ಕೊಟ್ಟಿದ್ದಾರೆ. ಉದಾ: ಋಗ್ವೇದದಲ್ಲಿ " ಸಂಗಚ್ಚತ್ವಂ ಸಂವದತ್ವಂ ಸಂ ವೋ ಮನಾಂಸಿ ಜಾನತಾಂ’ ಎಂದೂ "ಸಮಾನೀ ವ ಆಕೂತಿ: ಸಮಾನಾ ಹೃದಯಾನಿ ವಃ" ಎಂದು ಸಹಬಾಳ್ವೆಯ ರೂಪ ರೇಷೆಗಳನ್ನು ನಮಗೆ ನಮ್ಮ ಪುರಾತನ ಋಷಿಗಳು ಕೊಟ್ಟಿದ್ದಾರೆ. ನಮ್ಮ ಬುದ್ಧಿಯನ್ನು, ವಿಚಾರವನ್ನು, ನುಡಿಯನ್ನು ಮತ್ತು ನಡೆಯನ್ನು ಒಟ್ಟು ನಾಗರೀಕತೆಯ ಒಳಿತಿಗಾಗಿ ಬೆಳೆಸಿಕೊಳ್ಳುವುದು, ಉಳಿಸಿಕೊಳ್ಳುವುದು ಮತ್ತು ಉಪಯೋಗಿಸಿಕೊಳ್ಳುವುದಕ್ಕೆ ಎಲ್ಲ ಬೋಧನೆಯಲ್ಲೂ ಒತ್ತು ನೀಡಲಾಗಿದೆ.

ನಮ್ಮ ನಮ್ಮ ಸುಖವನ್ನು ನಾವು ನೋಡಿಕೊಳ್ಳುವುದು ಕೇವಲ ‘ ಸ್ವಾರ್ಥ" ಸರ್ವೇ ಜನಾಃ ಸುಖಿನೋ ಭವಂತು" ಎನ್ನುವುದು "ಸರ್ವ ಹಿತ". ಎಲ್ಲರೂ ಸುಖದಿಂದಿರಬೇಕೆನ್ನುವುದು ಆತ್ಮದ ವಿಸ್ತೃತ ಭಾವ. ಸಕಲ ಜೀವಿಗಳಲ್ಲೂ ಇರುವುದು ಬೇರೆ ಬೇರೆ ರೂಪಗಳನ್ನು ಧಾರಣೆಮಾಡಿರುವುದು ಒಂದೇ ಚೇತನವೆಂದು ಅರಿತು ಅನ್ಯರ ಸಂತೋಷದಲ್ಲಿಯೇ ಅಥವಾ ಅನ್ಯರ ಹಿತದಲ್ಲಿ ತನ್ನ ಸುಖವನ್ನು, ಹಿತವನ್ನು ಕಂಡುಕೊಂಡರೆ ನಮ್ಮ ವೈಯಕ್ತಿಕ ಆನಂದ, ಸುಖ ಮತ್ತು ತೃಪ್ತಿಯೂ ಅಧಿಕವಾಗುತ್ತದೆ ಎನ್ನುವುದು ಮಾನ್ಯ ಗುಂಡಪ್ಪನವರ ಮತ.

"ಸರ್ವಹಿತವು" "ಸ್ವಾರ್ಥ" ವನ್ನು ಗೆಲ್ಲಬೇಕು. ಹಾಗಾದಾಗ ಎಂತಹ ಸಮಾಜ ನಿರ್ಮಾಣವಾಗುತ್ತದೆ ಎಂದು ಎಲ್ಲರೂ ಯೋಚಿಸಬೇಕಾದ ವಿಷಯ. ಆದರೆ ಇಂದಿನ ಸ್ವಾರ್ಥಪೂರಿತ ಜನ ಜೀವನದಲ್ಲಿ "ನಾನು’ ಎನ್ನುವ ಕಡೆ " ನಾವು" ಎಂದು ಬದಲಾಗಬೇಕಾದರೆ ಸಮಾಜದ ಎಲ್ಲರ ಪ್ರಯತ್ನ ಅಗತ್ಯ. ಅಂತಹ ಸಮಾಜವನ್ನು ನಿರ್ಮಾಣಮಾಡುವ ಪ್ರಯತ್ನವನ್ನು ನಾವು ಮಾಡಬೇಕು.