RSS

Monthly Archives: ಜುಲೈ 2013

ರಸಧಾರೆ – ೪೫೫

ಸುಂದರದ ರಸ ನೂರು; ಸಾರವದರೊಳು ಮೂರು ।
ಹೊಂದಿಪ್ಪುವವು ಮೋಹ ಕರುಣೆ ಶಾಂತಿಗಳ ।।
ಒಂದರಿಂದೊಂದು ಬೆಳೆಯಾದಂದು ಜೀವನವು ।
ಚೆಂದಗೊಂಡುಜ್ಜುಗವೋ -ಮಂಕುತಿಮ್ಮ ।।

ಸಾರವದರೊಳು=ಸಾರವು+ಅದರೊಳು, ಹೊಂದಿಪ್ಪುವವು = ಹೊಂದಿಪ್ಪುವು+ಅವು, ಒಂದರಿಂದೊಂದು=ಒಂದರಿಂದ+ಒಂದು, ಬೆಳೆಯಾದಂದು= ಬೆಳೆ +ಆದಂದು,
ಚೆಂದಗೊಂಡುಜ್ಜುಗವೋ= ಚೆಂದಗೊಂಡ+ ಉಜ್ಜುಗವೊ,

ಸಾರ= ಸತ್ವ , ಉಜ್ಜುಗ= ಕಾರ್ಯ

ಜಗತ್ತಿನ ವಸ್ತುಗಳಲ್ಲಿನ ನೂರಾರು ‘ರಸ’ಗಳಲ್ಲಿ ‘ಸಾರ’ವಿರುವುದು ಮೂರು . ಅವೇ ‘ ಮೋಹ, ಕರುಣೆ ಮತ್ತು ಶಾಂತಿ’. ಈ ಮೂರೂ ಸಾರಗಳು ಒಂದಕ್ಕೊಂದು ಪೂರಕವಾಗಿದ್ದು ಒಂದು ಮತ್ತೊಂದರ ಬೆಳವಣಿಗೆಗೆ ಮೂಲವಾದರೆ ನಮ್ಮ ಜೀವನವು ಚೆಂದಗೊಳ್ಳುತದೆ ಎಂದು ಸಾರಯುಕ್ತವಾದ ಬದುಕಿನ ಪರಿಚಯವನ್ನು ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ ಮಾಡಿದ್ದಾರೆ.

ಈ ಜಗತ್ತಿನ ವಸ್ತುಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವವನ್ನು ನೀಡುತ್ತವೆ. ಒಂದೇ ವಸ್ತು, ವಿಷಯ ಅಥವಾ ವ್ಯಕ್ತಿ ಒಂದೇ ಸಮಯದಲ್ಲಿ, ಬೇರೆ ಬೇರೆ ಮನುಷ್ಯರ ಮನಸ್ಸಿನಲ್ಲಿ ಭಿನ್ನ ಭಿನ್ನವಾದ ಭಾವನೆಗಳನ್ನು ಕೆರಳಿಸಬಹುದು. ಆ ಭಾವನೆಗಳು ವ್ಯಕ್ತವಾದಾಗ ಅದರ ರೂಪಕ್ಕೆ ‘ರಸ’ ವೆನ್ನುತ್ತಾರೆ. ಗುಂಡಪ್ಪನವರು ಹೇಳುವ ನೂರಾರು ರಸಗಳನ್ನು ವಿದ್ವನ್ಮಣಿಗಳು ಒಂಬತ್ತಾಗಿ ವಿಂಗಡಿಸಿದ್ದಾರೆ. ಅವೇ ‘ ಶಾಂತ, ಶೃಂಗಾರ, ವೀರ, ಕರುಣ,ಅದ್ಭುತ,ಹಾಸ್ಯ,ಭಯಾನಕ, ಭೀಭತ್ಸ,ಮತ್ತು ರೌದ್ರ’ ರಸಗಳು. ಆದರೆ ಮನುಷ್ಯನ ಮನೋಭಾವ ಊಹಿಸಲಸಾಧ್ಯವಾದ್ದರಿಂದ ಈ ವಿಂಗಡಣೆಯ ಸಮರ್ಪಕತೆಯ ಬಗ್ಗೆ ವಿವಾದವುಂಟು.

ಜೀವನದ ಮೌಲ್ಯಗಳನ್ನು ಪರಿಗಣಿಸಿ ಮಾನ್ಯ ಗುಂಡಪ್ಪನವರು ಈ ಎಲ್ಲಾ ರಸಗಳ ಸಾರವನ್ನು ‘ ಮೋಹ ಕರುಣೆ ಮತ್ತು ಶಾಂತ’ವೆಂದು ವಿಂಗಡಿಸಿದ್ದಾರೆ. ಮನುಷ್ಯನ ಮನದಲ್ಲಿ ಜಗತ್ತಿನ ಎಲ್ಲ ವಸ್ತುಗಳಲ್ಲಿಯೂ ಮೋಹವುಂಟಾಗುತ್ತದೆ. ‘ನಾನು’ ಎನ್ನುವ ‘ಮಮಕಾರ’ವೇ ಇದಕ್ಕೆ ಕಾರಣ ಇದರಿಂದಲೇ ಇವನಿಗೆ ವಸ್ತು ವಿಷಯ ಮತ್ತು ವ್ಯಕ್ತಿಗಳ ಮೇಲೆ ಮೋಹವುಂಟಾಗುತ್ತದೆ. ಈ ಮೋಹವು ಮೇಲೆ ಉಲ್ಲೇಖಿಸಿದ ರಸಗಳಿಗೂ ಕಾರಣವಾಗುತ್ತದೆ ಮತ್ತು ಎಲ್ಲ ಅಥವಾ ಯಾವುದಾದರೂ ಒಂದು ರೂಪವನ್ನು ತಾಳಬಹುದು.

ಆದರೆ ‘ನಾನು’ ಎಂಬ ಮಮಕಾರವನ್ನು ಬಿಟ್ಟು ‘ನನ್ನಂತೆ ಅನ್ಯರೂ ಸಹ’ ಎಂದು ಯೋಚಿಸಿದರೆ ಜಗತ್ತಿನ ಜೀವಿಗಳೆಲ್ಲರಲ್ಲಿಯೂ ‘ಕರುಣೆ’ಉಂಟಾಗಿ ಮನಸ್ಸು ಶಾಂತವಾಗುತ್ತದೆ. ಹಾಗೆ ಶಾಂತವಾದ ಮನಸ್ಸು ‘ಸತ್ ಚಿತ್ ಆನಂದವನ್ನು’ ಪಡೆದುಕೊಳ್ಳುತ್ತದೆ. ಇದನ್ನೇ ಮಾನ್ಯ ಗುಂಡಪ್ಪನವರು’ ಚೆಂದಗೊಂಡುಜ್ಜುಗವೋ’ ಎಂದು ಹೇಳುತ್ತಾ ಹಾಗೆ ಆದರೆ ಜೀವನ ಚೆಂದವಾಗುತ್ತದೆ ಎಂದು ಹೇಳಿದ್ದಾರೆ. ನಾವೂ ಸಹ ಆ ಮೋಹದ ವೃತ್ತದಿಂದ ಹೊರಬಂದು, ಸಕಲ ಜೀವರಾಶಿಗಳಲ್ಲಿಯೂ ಕರುಣೆಯನ್ನು ತೋರಿದರೆ ನಮಗೂ ಶಾಂತಿ ಸಿಗಬಹುದು. ಆ ಮೋಹದ ಹಿಡಿತದಿಂದ ಹೊರಬರಬೇಕು ಅಷ್ಟೇ!!

Advertisements
 

ರಸ ಚೆನ್ನುಡಿ

ಅರ್ಥವೆಂದರೆ ‘ಹಣ’ ಕಾಮವೆಂದರೆ ‘ ಸುಖ’ ಇವೆರಡೂ ಹಿಂಸೆ, ಸುಳ್ಳು, ಕಳ್ಳತನಗಳಿಗೆ ಮೂಲ.

ಇವೆರಡನ್ನೂ ಹೆಚ್ಚಿಸಬಾರದು. ತತ್ವವನ್ನು ಮತ್ತು ಸತ್ಯವನ್ನು ಅರಿಯಲು ಇವೆರಡೆ ಮಹಾ ವಿಘ್ನಗಳು- ಸುಭಾಷಿತ

 

ರಸ ಚೆನ್ನುಡಿ

ಮಿತ್ರನನ್ನು ಸಂಪಾದಿಸುವುದು ಸುಲಭ. ಆದರೆ ಸ್ನೇಹವನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟ.

ಮನಸ್ಸು ಚಂಚಲವಾದ್ದರಿಂದ,ಅಲ್ಪ ಮತ್ತು ಕ್ಷುಲ್ಲಕ ಕಾರಣಗಳಿಗೆ ಸ್ನೇಹವು ಕೆಟ್ಟುಹೋಗುತ್ತದೆ – ಸುಭಾಶಿತಮಂಜರಿ

 

ರಸಧಾರೆ – ೪೫೪

ಪರಿಪರಿಯ ವಿಶ್ವಪ್ರಕೃತಿಶಕ್ತಿತೇಜಗಳು ।
ಕೆರಳಿಸಲು ನರಹೃದಯರಭಸಗಳನದರಿಂ ।।
ಪೊರಮಡುವ ಸಂಮೋಹಧೀರಗಂಭೀರಗಳ ।
ಸರಸತೆಯ ಸುಂದರವೊ -ಮಂಕುತಿಮ್ಮ ।।
ನರಹೃದಯರಭಸಗಳನದರಿಂ=ನರ+ಹೃದಯ+ರಭಸಗಳನ್+ಆದರಿಂ,
ಸಂಮೋಹಧೀರಗಂಭೀರಗಳ=ಸಂಮೋಹ+ಧೀರ+ಗಂಭೀರಗಳ,

ಪೊರಮಡುವ=ಪಡೆಯಲುದ್ಯುಕ್ತವಾಗುವುದು

ಜಗತ್ತಿನಲ್ಲಿನ ಮೂಲ ಶಕ್ತಿ ಎಂದರೆ ಪರಮಾತ್ಮ ಶಕ್ತಿ, ಬೇರೆ ಬೇರೆ ವಿಧದಲ್ಲಿ ಪ್ರಕಟಗೊಂಡು ಮನುಷ್ಯನ ಹೃದಯದಲ್ಲಿ ಮೋಹಕ, ಧೀರ, ಗಂಭೀರಗಳಂತಹ ಚಿತ್ರವಿಚಿತ್ರ ಭಾವನೆಗಳನ್ನು ಕೆರಳಿಸಿ, ಆನಂದವನ್ನು ಪಡೆಯಲುದ್ಯುಕ್ತನಾದಾಗ ಈ ಶಕ್ತಿಗಳೊಡನೆ ಇವನು ನಡೆಸುವ ಸರಸವೇ ಒಂದು ಸುಂದರತೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಪಂಚಭೂತಗಳ ಸ್ವರೂಪ ಭಿನ್ನ ಭಿನ್ನವಾದದ್ದು. ಶಬ್ದ ಸ್ಪರ್ಶ ರೂಪ ರಸ ಗಂಧಗಳಿಂದ ಉಂಟಾಗುವ ಭಾವನೆಯೇ ಬೇರೆ. ಇವೆಲ್ಲವೂ ಹೃದಯದಲ್ಲಿ ಕೆರಳಿಸುವಂತಹ ಪರಿಪರಿಯ ಭಾವನೆಗಳಿಗೆ ಇವನಿಂದ ಬರುವ ಪ್ರತಿಕ್ರಿಯೆ ಜಗತ್ತಿನ ಪರಿಪರಿಯ ಸುಂದರತೆಗೆ ಕಾರಣವೆಂದರೆ ಸರಿಯಾಗುವುದು. ಪರಮ ಚೇತನವೇ ಸುಂದರ. ಹಾಗಾಗಿ ಅದರಿಂದ ಹೊರಹೊಮ್ಮುವ ಪ್ರತಿ ರೂಪವೂ ಸುಂದರವಾಗಿರಲೆಬೇಕಲ್ಲವೇ?

ಬೆಟ್ಟಗುಡ್ಡಗಳು, ನದಿಝರಿಗಳು, ಗಿಡ ಮರಗಳು, ಪ್ರಾಣಿಪಕ್ಷಿಗಳು, ಕ್ರಿಮಿ ಕೀಟಗಳು, ಹೂ ಹಣ್ಣುಗಳು, ಚಿತ್ರವಿಚಿತ್ರವಾದ ಚಿತ್ತಾರಗಳು, ಸಾವಿರಾರು ಬಣ್ಣಗಳ ಈ ಜಗತ್ತು ಪ್ರತೀ ಮನುಷ್ಯನ ಹೃದಯದಲ್ಲಿ ಒಂದಲ್ಲ ಒಂದು ರೀತಿಯ ಭಾವನೆಗಳನ್ನು ಕೆರಳಿಸುತ್ತವೆ. ಮನುಷ್ಯ ಆ ಭಾವನೆಗಳನ್ನುತನ್ನದೇ ರೀತಿಯಲ್ಲಿ ಅದನ್ನು ಅನುಭವಿಸಿ ಮತ್ತು ತನ್ನದೇ ಆದ ಪ್ರತಿಕ್ರಿಯೆ ನೀಡಿದಾಗ ಅ ವಸ್ತುವಿಗೆ ಒಂದು ಸುಂದರತೆ ಬರುತ್ತದೆ. ಆ ಸುಂದರತೆ ಬೇರೆಯವರ ಅನುಭವಕ್ಕಿಂತ ಭಿನ್ನವಾಗಿರುತ್ತದೆ.

ಹೀಗೆ ಪ್ರಕೃತಿಯ ಶಕ್ತಿಯಿಂದ ಸೃಷ್ಟಿಯಾದ ಪರಿಪರಿಯ ವಸ್ತು, ವಿಷಯಗಳಿಂದ ಮನದಲ್ಲಿ ಉಂಟಾಗುವ ಭಾವನೆಗಳಿಗೆ ತನ್ನದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿ ತನ್ನದೇ ರೀತಿಯಲ್ಲಿ ಅನುಭವಿಸಿ ಆನಂದಪಡುವುದೇ, ಜಗತ್ತಿನಲ್ಲಿ ಮಾನವ ಅನುಭವಿಸುವ ಸರಸತೆ ಮತ್ತು ಸುಂದರತೆ. ಅದು ಮಾನವರಾದ ನಮಗೆ ಪರಮಾತ್ಮ ಕೊಟ್ಟ ವರ. ಅಂತಹ ಸುಂದರತೆಯ ಭಾವನೆಯನ್ನು ಅನುಭವಿಸಿದರೆ ನಮ್ಮ ಬದುಕು ಪರಿಪೂರ್ಣವಾಗುತ್ತದೆ.

 

ರಸ ಚೆನ್ನುಡಿ

ಒಂದು ಹನಿ ಮೊಸರು ಸೇರಿದರೆ ಹೇಗೆ ಒಂದು ಹಾಲಿನ ಬಟ್ಟಲಿನ ಸಾವಿರ ಹನಿಗಳೂ ಕದಡಿಹೋಗುತ್ತವೆಯೋ

ಹಾಗೆ ಸಾವಿರ ಸಕಾರಾತ್ಮಕ ಆಲೋಚನೆಗಳನ್ನೂ ಒಂದು ನಕಾರಾತ್ಮಕ ಯೋಚನೆ ಕದಡಿಬಿಡತ್ತದೆ,ಹಾಗಾಗಿ ನಕಾರಾತ್ಮಕತೆಯಿಂದ ಜಾಗ್ರತೆಯಾಗಿರಬೇಕು – ಅನಾಮಿಕ

 

ರಸಧಾರೆ – ೪೫೩

ತಾಯೊ ತಂಗಿಯೊ ಎನಿಪ ಶುಚಿಯ ಸೌಮ್ಯದ ಸೊಬಗು ।
ಪ್ರೇಯಸಿಯ ಕರೆವೊಲಾತುರವಡಿಪ ಬೆಡಗು ।।
ಈಯೆರಡು ಸಮದ ರುಚಿ ನಿನ್ನನಿಬ್ಬಗೆಗೊಳಿಸೆ ।
ಧ್ಯೇಯ ನಿನಗಾವುದೆಲೊ – ಮಂಕುತಿಮ್ಮ ।।

ಕರೆವೊಲಾತುರವಡಿಪ=ಕರೆಯ+ಒಲು+ಆತುರ+ವಡಿಪ, ನಿನ್ನನಿಬ್ಬಗೆಗೊಳಿಸೆ=ನಿನ್ನನು+ಇಬ್ಬಗೆ+ಗೊಳಿಸೆ, ನಿನಗಾವುದೆಲೋ=ನಿನಗೆ+ಆವುದು+ಎಲೊ.

ಎನಿಪ=ಎನಿಸುವ, ಇಬ್ಬಗೆ=ಎರಡು ಭಾವ,

ತಾಯಿ ಮತ್ತು ತಂಗಿಯರ ಸೌಂದರ್ಯವನ್ನು ನೋಡುವ ಬಗೆ ಬೇರೆ ಮತ್ತು ತುಡಿತ ಮತ್ತು ಮಿಡಿತದಿಂದ ಕೂಡಿದ ಕರೆ ನೀಡುವ ಪ್ರೇಯಸಿಯ ಸೌಂದರ್ಯವನ್ನು ನೋಡುವ ಬಗೆ ಬೇರೆ. ಆದರೆ ಈ ಎರಡೂ ಭಾವಗಳು ನಮ್ಮಲ್ಲಿ ಬರುವುದರಿಂದ ಸೌಂದರ್ಯವನ್ನು ನೋಡುವ ಎರಡೂ ಬಗೆ ಭಿನ್ನ ಭಿನ್ನವಾಗಿದ್ದು ಇವೆರಡೂ ನಮಗೆ ಸಮನಾಗಿ ಆನಂದವೀಯುತ್ತಾ ಇರುವಾಗ ನಮ್ಮ ಧ್ಯೇಯ ಯಾವುದಾಗಿರಬೇಕು ಎನ್ನುವ ಪ್ರಶ್ನೆ ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ತಂದೆ ತಾಯಿ ಅಕ್ಕ ತಂಗಿ ಅಣ್ಣ ತಮ್ಮ ಎಲ್ಲವೂ ನಮಗೆ ಜನ್ಮತಃ ಬರುವ ಸಂಬಂಧಗಳು. ಆದರೆ ಈ ಸಂಬಂಧದ ಹೊರಗೆ ನೋಡಿದರೆ, ಎಲ್ಲರೂ ಬೇರೆ ಬೇರೆ ವ್ಯಕ್ತಿಗಳು. ನಮಗೆ ನಮ್ಮ ತಾಯಿ ಮತ್ತು ಅಕ್ಕ ತಂಗಿಯರೂ ಸುಂದರವಾಗಿ ಕಾಣುತ್ತಾರೆ. ಅವರ ಸೌಂದರ್ಯ ನಮಗೆ ಕಾತರತೆಯನ್ನೋ ಸೆಳೆತವನ್ನೋ ಉಂಟಾಗಿಸುವುದಿಲ್ಲ. ಆದರೆ ಈ ರೀತಿಯ ಸಂಬಂಧಗಳಿಲ್ಲದಿದ್ದರೆ ಅನ್ಯರ ಸೌಂದರ್ಯದ ಸೆಳೆತವಿರುತ್ತದೆ ಮತ್ತು ಆ ಸಂಬಂದದ ರೂಪವೇ ಬೇರೆ ಇರುತ್ತದೆ.

ಹೀಗೆ ನಮ್ಮ ಮನಸ್ಸುಗಳಲ್ಲಿ ಉಂಟಾಗುವ ಎರಡೂ ಬಗೆಯ ಭಾವನೆಗಳಲ್ಲಿ ಬೇಧವನ್ನು ಮನಗಂಡು ವರ್ತಿಸುವುದೇ ನಾಗರೀಕತೆ. ಅದು ನಮಗೆ ಸಂಸ್ಕೃತಿ ಮತ್ತು ಸಂಸ್ಕಾರಗಳ ಬೆಳೆವಣಿಗೆಯಿಂದ ಬಂದದ್ದು.ಅಷ್ಟೇ ಅಲ್ಲ ಪ್ರಕೃತಿಯಲ್ಲಿ ನಮಗೆ ಕಂಡುಬರುವ ಹತ್ತು ಹಲವಾರು ವಸ್ತುಗಳಲ್ಲಿಯೂ ಸಹ ನಮಗೆ ಬಗೆ ಬಗೆಯ ಸೌಂದರ್ಯಗಳು ಅನುಭವಕ್ಕೆ ಬರುತ್ತದೆ. ವಸ್ತು ಬೇಧದೊಂದಿಗೆ ಸೌಂದರ್ಯಾಸ್ವಾಧನೆಯ ಬಗೆಯೂ ಬೇರೆಯಾಗಿ ನಮ್ಮ ಅನುಭವಕ್ಕೆ ಬಂದಾಗ ಗುಂಡಪ್ಪನವರು ಹೇಳುವಂತೆ ‘ಸಮದ ರುಚಿ’ ನಮದಾಗುತ್ತದೆ.

ಹಾಗಾಗದಿದ್ದರೆ ಅನುಭವ ಸಂಕರವಾಗಿ ನಮ್ಮ ಮನಸ್ಸು ಕೆಡುತ್ತದೆ. ಕೆಟ್ಟ ಮನಸ್ಸು ಆಲೋಚಿಸುವ ಪರಿಯನ್ನು ನೋಡಿದರೆ ಅಸಹ್ಯವುಂಟಾಗುತ್ತದೆ. ಹಾಗಾಗಿ ನಾವು ಸಮದ ರುಚಿಯನ್ನು ಅನುಭವಿಸುವ ಸದಭಿರುಚಿಯನ್ನು ಬೆಳೆಸಿಕೊಳ್ಳಬೇಕು.

 

ರಸ ಚೆನ್ನುಡಿ

ಪ್ರತಿನಿತ್ಯ ಒಂದು ಜಿಂಕೆ ಹುಲಿಯಿಂದ ತಪ್ಪಿಸಿಕೊಳ್ಳಲು ಮತ್ತು ಆ ಹುಲಿ ಆ ಜಿಂಕೆಯನ್ನು ಹಿಡಿಯಲು, ವೇಗವಾಗಿ ಓಡುತ್ತವೆ. ಬದುಕಿನ ನಿಯಮವೂ ಅಷ್ಟೇ!. ನಾವು ಜಿಂಕೆಯಾಗಲೀ ಅಥವಾ ಹುಲಿಯಾಗಲೀ ಓಡುವುದಂತೂ ತಪ್ಪಿದ್ದಲ್ಲ – ಅನಾಮಿಕ