RSS

Monthly Archives: ಆಗಷ್ಟ್ 2013

ರಸಧಾರೆ – ೪೭೫

ಗೌರವಿಸು ಜೀವನವ, ಗೌರವಿಸು ಚೇತನವ ।
ಆರದೋ ಜಗವೆಂದು ಛೇದವೆಣಿಸದಿರು ।।
ಹೋರುವುದೇ ಜೀವನಸಮೃದ್ಧಿಗೋಸುಗ ನಿನಗೆ ।
ದಾರಿಯಾತ್ಮೋನ್ನತಿಗೆ – ಮಂಕುತಿಮ್ಮ ।।

ಛೇದವೆಣಿಸದಿರು=ಛೇದವ +ಎಣಿಸದಿರು, ಜೀವನಸಮೃದ್ಧಿಗೋಸುಗ = ಜೀವನ+ಸಮೃದ್ಧಿ+ಗೋಸುಗ,

ದಾರಿಯಾತ್ಮೋನ್ನತಿಗೆ=ದಾರಿಯು+ಆತ್ಮ+ಉನ್ನತಿಗೆ,

ನಿನ್ನ ಜೀವನವನ್ನು ಗೌರವಿಸು, ಆ ಜೀವನಕ್ಕೆ ಮೂಲವಾದ ಚೇತನವನ್ನು ಗೌರವಿಸು. ಇದು ಯಾರದೋ ಜಗತ್ತು, ನಾನೇನೂ ಇಲ್ಲಿ ಶಾಶ್ವತವಾಗಿ ಇರುವುದಿಲ್ಲವಲ್ಲ ಎಂದು ಬದುಕನ್ನು ಗೌಣವೆಂದೆಣಿಸಬೇಡ. ಈ ಬದುಕಿನಲ್ಲಿ ನಾವು ಹೋರಾಡುವುದೇ ಸಮೃದ್ಧಿಗೋಸ್ಕರ. ಈ ಹೋರಾಟ ನಮಗೆ ಆತ್ಮೋನ್ನತಿಗೆ ದಾರಿಯಾಗಿದೆ ಎಂದು ಬಹಳ ಗಹನವಾದ ತತ್ವವನ್ನು ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ ಅರುಹಿದ್ದಾರೆ.

ಬದುಕನ್ನು ಗೌರವಿಸಬೇಕು, ಪ್ರೀತಿಸಬೇಕು. ನಮ್ಮ ಅಸ್ಥಿತ್ವಕ್ಕೆ ಕಾರಣವಾದ, ಪರಮ ಚೈತನ್ಯದ ಅಂಶವಾದ ಚೇತನವನ್ನು ಗೌರವಿಸಬೇಕು. ‘ನಮ್ಮ ಬದುಕನ್ನು ನಾವು ಕೇಳಿ ಪಡೆದುಕೊಂಡದ್ದಲ್ಲ, ಹೇಗಾದರೂ ಬದುಕಿದರಾಯ್ತು" ಎಂದು ಉಡಾಫೆಯ ಭಾವವನ್ನು ಬಿಟ್ಟು, ನಮ್ಮ ಬದುಕನ್ನು ನಾವೇ ಪ್ರೀತಿಸಬೇಕು. ಉತ್ಸಾಹ ಮತ್ತು ಆಶಯದೊಂದಿಗೆ ಬದುಕಿದಾಗ ಬದುಕಿಗೆ ಒಂದು ಅರ್ಥ ಸಿಗುತ್ತದೆ. ಪ್ರತೀ ಪ್ರಾಣಿಯ ಮೂಲ ಉದ್ದೇಶ್ಯ ‘ಆನಂದ’ವನ್ನು ಪಡೆಯುವುದೇ ಆಗಿರುತ್ತದೆ. ಆ ಆನಂದವನ್ನು ಪಡೆಯಬೇಕು ಮತ್ತು ಅದನ್ನು ಪಡೆಯುವುದಕ್ಕಾಗಿಯೇ ನಾವು ಬದುಕಿನಲ್ಲಿ ಹೋರಾಡುತ್ತೇವೆ, ಅಲ್ಲವೇ?

ಬದುಕು ಸಮೃದ್ಧವಾಗಬೇಕಾದರೆ ನಮ್ಮನ್ನು ನಾವು ಬದುಕಿನಲ್ಲಿ ತೊಡಗಿಸಿಕೊಳ್ಳಬೇಕು. ನಾವು ಮಾಡುವ ಪ್ರತೀ ಕೆಲಸದಲ್ಲೂ ಆಸ್ಥೆಯಿಂದ ತೊಡಗಿಸಿಕೊಳ್ಳಬೇಕು. ಯಾವುದೇ ಕೆಲಸವಾದರೂ ಉತ್ಸಾಹದಿಂದ ಮಾಡಬೇಕು. ಆಗಲೇ ಕೆಲಸಮಾಡಿದ ತೃಪ್ತಿ ಮತ್ತು ಆ ಕೆಲಸದಿಂದ ಲಭ್ಯವಾಗುವ ಫಲಾನುಭವದ ತೃಪ್ತಿ ಎರಡೂ ಸಿಗಲು ಸಾದ್ಯ. ಆ ತೃಪ್ತಿಯೇ ನಮಗೆ ಬದುಕಿನಲ್ಲಿ ಸಿಗುವ ‘ಆನಂದ ‘ ಅಂತಹ ಆನಂದಕ್ಕಾಗಿ ನಮ್ಮ ಬದುಕಿನ ನಿರಂತರ ಹೋರಾಟ ನಡೆಯಬೇಕು.

ಬದುಕಿಗೆ ಉಪಕರಣಗಳಾದ ದೇಹ ಮನಸ್ಸು ಬುದ್ಧಿ ಮತ್ತು ಚೇತನಗಳನ್ನು ಶುದ್ಧವಾಗಿರಿಸಿಕೊಂಡರೆ ನಮ್ಮ ಆಲೋಚನೆಗಳು, ತದನುಗುಣವಾದ ನಮ್ಮ ಕೆಲಸ ಕಾರ್ಯಗಳು ಮತ್ತು ಅದರಿಂದ ಲಭ್ಯವಾಗುವ ಫಲಗಳು, ಎಲ್ಲವೂ ಶುದ್ಧವಾಗಿರಲು ಸಾಧ್ಯ. ಜೀವನದಲ್ಲಿ ಉತ್ಸಾಹದಿಂದ ಇದ್ದು, ಯಾವುದನ್ನೂ ಅತಿಯಾಗಿ ಪ್ರೀತಿಸದೆ, ಅತಿಯಾಗಿ ಅಂಟದೆ, ಲಭ್ಯವಾದ ಕೆಲಸವನ್ನು ನಿಸ್ಪೃಹತೆಯಿಂದ ಮಾಡುತ್ತಾ, ಸಂದ ಫಲವನ್ನು ಪರಮಾತ್ಮನ ಪ್ರಸಾದವೆಂದು ಸ್ವೀಕರಿಸಿ ಅನುಭವಿಸಿದಾಗ ನಿಜವಾದ ‘ಆನಂದ’ ಸಿಗುತ್ತದೆ. ಅಂತಹ ಆನಂದವನ್ನು ಪಡೆಯುವ ಪ್ರಯತ್ನ ನಮ್ಮದಾಗಬೇಕು. ಅಂತಹ ಆನಂದ ನಮಗೆ ಸಿಕ್ಕರೆ ‘ಆತ್ಮೋದ್ಧಾರ’ವಾಗಿ ಬದುಕನಲ್ಲಿ ಸಾರ್ಥಕ್ಯ ಪಡೆದಂತಾಗುತ್ತದೆ.

Advertisements
 

ರಸ ಚೆನ್ನುಡಿ

ನಾವು ಬೆಳೆಯನ್ನು ಅಪೇಕ್ಷಿಸುವುದು ಬೇಡ. ಒಳ್ಳೆಯ ಬೀಜವನ್ನು ಬಿತ್ತುವ ಮತ್ತು ಬೆಳೆಯುವ ಆ ಸಸಿಯನ್ನು ಕಾಪಾಡುವ ಪ್ರಾಮಾಣಿಕ ಹೊಣೆ ಹೊತ್ತರೆ ಸಾಕು, ಸಮೃದ್ಧ ಬೆಳೆ ನಮ್ಮ ಕೈ ಸೇರುವುದು ನಿಶ್ಚಯ – ಅನಾಮಿಕ

 

ರಸಧಾರೆ – ೪೭೪

ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ ।
ಶುದ್ಧಿಸದೆ ನಭ ಧರೆಯ ಮರಮರಳಿ ಮಳೆಯಿಂ? ।।
ಗದ್ದೆ ಕೊಯ್ಲಾಗೆ ಮಗುಳ್ದದು ಬೆಳೆಯ ಕುಡದಿಹುದೆ? ।
ಬಿದ್ದ ಮನೆಯನು ಕಟ್ಟೊ – ಮಂಕುತಿಮ್ಮ ।।
ಮಗುಳ್ದದು = ಮಗುಳ್ದು+ಅದು, ಕುಡದಿಹುದೆ=ಕೂಡದೆ+ಇಹುದೆ

ಮಗುಳ್ದದು = ಮತ್ತೆ ಅದು

ಕೊಳೆಯಾದ ಇಳೆಯನ್ನು ಮಳೆಯಿಂದ ಮತ್ತೆ ಮತ್ತೆ ತೊಳೆಯುವ ಆ ಆಕಾಶದಂತೆ, ಬೆಳೆಯನ್ನು ಕೊಯ್ದ ನಂತರವೂ ಮತ್ತೆ ಮತ್ತೆ ಬೆಳೆ ಬೆಳೆಯುವ ಈ ಧರೆಯಂತೆ, ಕೆಳಗೆ ಬಿದ್ದಿರುವುದನ್ನು ಎತ್ತಿ ನಿಲ್ಲಿಸುವುದೇ ಮಾನವನ ನಿರಂತರ ಕ್ಷಮತೆ. ಹಾಗಾಗಿ ಬಿದ್ದ ಮನೆಯನ್ನು ಎತ್ತಿ ಕಟ್ಟೋ ಎಂದು ಆದೇಶಿಸುತ್ತಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಎಂದೋ ಒಂದು ಬಾರಿ ಸೃಷ್ಟಿಯಾದ ಆ ಭುವಿಯನ್ನು ತಣಿಸಲು, ಕೋಟಿ ಕೋಟಿ ವರ್ಷಗಳಿಂದ ಮತ್ತೆ ಮತ್ತೆ ಮಳೆಯನ್ನು ಸುರಿಸುತ್ತಾ, ಭುವಿಯ ಕೊಳೆಯನ್ನು ತೊಳೆಯುತ್ತಲೇ ಇದೆ ಆ ನಭ . ಸಕಲ ಜೀವರಾಶಿಗಳ ಅಭಾದಿತ ಅಸ್ಥಿತ್ವಕ್ಕೆ ಪರಮಾತ್ಮ ಸೃಷ್ಟಿಸಿದ ಕ್ರಮವಿದು. ಮತ್ತೆ ಮತ್ತೆ ಚೈತನ್ಯವನ್ನು ತುಂಬುವ ಸೃಷ್ಟಿಯ ಕ್ರಮವಿದು. ಒಂದು ಬಾರಿ ಬೆಳೆ ಬೆಳೆದ ಭೂಮಿಯಲ್ಲಿ ಮತ್ತೆ ಮತ್ತೆ ಬೇರೆ ಬೇರೆ ಬೆಳೆಗಳು ಬೆಳೆಯುವುದಿಲ್ಲವೇ?

ಪ್ರಕೃತಿಯೇ ಒಂದು ಉತ್ಸಾಹದ ಚಿಲುಮೆಯಂತಿದೆ. ಮಾನವನ ಆಘಾತಕ್ಕೆ ಮತ್ತು ತನ್ನದೇ ಆದ ವಿಕೋಪಕ್ಕೆ ಎಷ್ಟುಬಾರಿ ಬಲಿಯಾದರೂ, ಮತ್ತೆ ಮತ್ತೆ ಹೊಸ ಪಲ್ಲವದೊಂದಿಗೆ ಉತ್ಸಾಹದಿಂದ ಹೊರಹೊಮ್ಮುತ್ತದೆ.
ಆ ಪ್ರಕೃತಿಯ ಮಗುವಾದ ಮನುಷ್ಯನೇನು, ಸಕಲ ಪ್ರಾಣಿಗಳೂ ಸಹ ಪ್ರತಿ ನಿತ್ಯ ಹೊಸ ಉತ್ಸಾಹದಿಂದ ಬದುಕನ್ನು ದೂಡುತ್ತವೆ. "ಮರಳಿ ಯತ್ನವ ಮಾಡು" ಎನ್ನುವ ವಾಣಿಯಂತೆ ಮನುಷ್ಯ ಪ್ರತಿ ಗಳಿಗೆಯೂ ತನ್ನ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಲು ಪ್ರಯತ್ನ ಪಡುತ್ತಲೇ ಇರುತ್ತಾನೆ.

ನಮ್ಮ ಸುತ್ತು ಮುತ್ತಲಿನ ಜನರಲ್ಲಿ ಎಷ್ಟೋ ಮಂದಿ ಜೀವನದಲ್ಲಿ ಪೆಟ್ಟು ತಿಂದು ಕೆಳಗುರುಳಿದರೂ, ಮತ್ತೆ ತಮ್ಮ ಜೀವನವನ್ನು ಸುದಾರಿಸಿಕೊಳ್ಳಲು ನಿರಂತರ ಪ್ರಯತ್ನಮಾಡುತ್ತಾ ಹೊಸ ದಿಕ್ಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರಲ್ಲವೇ? ಮಾನಸಿಕವಾಗಿ ಖಿನ್ನರಾದವರನ್ನು ಮತ್ತೆ ಜೀವನ್ಮುಖರನ್ನಾಗಿಸಲು ಪ್ರಯತ್ನಪಡುತ್ತೇವಲ್ಲವೇ? ಇದನ್ನೇ ಮಾನ್ಯ ಗುಂಡಪ್ಪನವರು "ಬಿದ್ದ ಮನೆಯನು ಕಟ್ಟೊ" ಎಂದು ಒಂದು ಆದೇಶದ ರೂಪದಲ್ಲಿ ನಮಗೆ ಹೇಳುತ್ತಾರೆ. ನಮಗೆ ಪರಮಾತ್ಮ ಅಂತಹ " ಪುನರುಜ್ಜೀವನದ" ಶಕ್ತಿಯನ್ನು ನೀಡಲಿ ಎಂದು ನಾವು ನಿರಂತರ ಪ್ರಾರ್ಥಿಸಿಕೊಳ್ಳಬೇಕು.

 

ರಸ ಚೆನ್ನುಡಿ

ಚಾತಕ ಪಕ್ಷಿ ತನ್ನ ಬಾಯಾರಿಕೆಗಾಗಿ ಬೇಡುವುದು ನಾಲ್ಕು ಹನಿ ನೀರನ್ನು, ಆದರೆ ಉದಾತ್ತ ಭಾವದ ಮಹಾನುಭಾವರು ತಮ್ಮ ಸರ್ವಸ್ವವನ್ನೂ ಕೊಡುವಂತೆ, ಆ ಮೋಡಗಳು ಮಳೆಯನ್ನೇ ಸುರಿಸುತ್ತದೆ – ಅನಾಮಿಕ

 

ರಸ ಚೆನ್ನುಡಿ

ಸರಿಯಲ್ಲದ ವಸ್ತು ಮತ್ತು ವಿಷಯಗಳ ಹಿಂದೆ ಓಡುವುದನ್ನು ನಾವು ನಿಲ್ಲಿಸಿದರೆ

ಸರಿಯಾದ ವಸ್ತು ಮತ್ತು ವಿಷಯಗಳು ನಮ್ಮನ್ನು ಸೇರುವುದಕ್ಕೆ ಒಂದು ಅವಕಾಶ ನೀಡಿದಂತಾಗುತ್ತದೆ- ಅನಾಮಿಕ

 

ರಸಧಾರೆ – ೪೭೩

ಪಾರಿಜಾತವ ಕಂಡು ನಿಡುಸುಯ್ದು, ಪದಗಳಿಂ ।
ಶೌರಿಕಥೆಯನು ಹೆಣೆದು ತೃಪ್ತನಹನು ಕವಿ ।।
ಊರಿನುದ್ಯಾನಕದ ತರಿಸಿ ಬೆಳೆಸುವ ಕಾರ್ಯ ।
ಧೀರನಲ ರಾಜ್ಯಕನು – ಮಂಕುತಿಮ್ಮ ।।

ತೃಪ್ತನಹನು = ತೃಪ್ತನು+ ಅಹನು, ಊರಿನುದ್ಯಾನಕದ= ಊರಿನ+ಉದ್ಯಾನಕೆ+ ಅದ, ಧೀರನಲ =ಧೀರನು+ಅಲ,

ನಿಡುಸುಯ್ದು=ನಿಟ್ಟುಸಿರಿಟ್ಟು, ಶೌರಿ=ಕೃಷ್ಣ,

ಶ್ರೀ ಕೃಷ್ಣನ ಭಾರ್ಯೆ ರುಕ್ಮಿಣಿಗೆ ನಾರದನು ತಂದುಕೊಟ್ಟ, ದೇವಲೋಕದ ಪಾರಿಜಾತ ಪುಷ್ಪವನ್ನು ಕಂಡು ಅಸೂಯೆಗೊಂಡ ಸತ್ಯಭಾಮೆಯನ್ನು ಮೆಚ್ಚಿಸಲು ಶ್ರೀ ಕೃಷ್ಣ ಆ ದೇವಲೋಕದ ಪಾರಿಜಾತ ವ್ರುಕ್ಷವನ್ನೇ ಕದ್ದು ತಂದ ಕತೆಯನ್ನು ಕವಿ ತನ್ನ ಕಲ್ಪನೆಯಿಂದ ಹೆಣೆದಿದ್ದಾನೆ. ಹೀಗೆ ಕವಿ ತನ್ನ ಕಲ್ಪನೆಯಲ್ಲಿ ಬರುವ ಎಲ್ಲವನ್ನೂ ಕಾವ್ಯದಲ್ಲಿ ಸಾಜವನ್ನು ಸುಂದರವಾಗಿಸುವ ಸದುದ್ದೇಶದಿಂದ ತುಂಬಿದಾಗ ಅವನು ಮಹಾಕವಿಯಾಗುತ್ತಾನೆ. ಜನರು ಅದರಲ್ಲಿ ಶ್ರದ್ಧೆಯನ್ನಿಟ್ಟಾಗ, ರಾಜನು ಅದನ್ನು ಕಾರ್ಯರೂಪಕ್ಕೆ ತಂದಾಗ ಅವನು ಧೀರನಾಗುತ್ತಾನೆ ಎಂದು ಉಲ್ಲೇಖಮಾದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಕಲ್ಪನಾ ಶಕ್ತಿಯಿರುವವನಿಗೆ ಕವಿ ಎನ್ನುತ್ತಾರೆ. ಅಂತಹ ಕವಿ, ಕಥೆ ಅಥವಾ ಕಾವ್ಯವನ್ನು ಹೆಣೆಯುತ್ತಾನೆ. ಹಲವಾರು ಪಾತ್ರಗಳು, ಹಲವಾರು ಸಂದರ್ಭಗಳು, ಹಲವಾರು ಪ್ರಸಂಗಗಳನ್ನು ವರ್ಣಿಸುತ್ತಾನೆ. ಆ ಪಾತ್ರಗಳನ್ನು ಉದಾರವಾಗಿ ಮತ್ತು ಉದಾತ್ತವಾಗಿ ಸೃಷ್ಟಿಸುತ್ತಾನೆ. ಆ ಪಾತ್ರಗಳ ಮೂಲಕ, ಅಲ್ಲಿ ವಿವರಿಸುವ ಸಂದರ್ಭ ಮತ್ತು ಪ್ರಸಂಗಗಳ ಮೂಲಕ ಜನರ ಜೀವನವನ್ನು ಮತ್ತಷ್ಟು ಸುಂದರವಾಗಿಸುವ ವಿಧಾನವನ್ನು ಒಂದು ಸಂದೇಶ ಮತ್ತು ಆದೇಶದ ರೂಪದಲ್ಲಿ ಕೊಡುತ್ತಾನೆ.

ರಾಜನೆನಿಸಿಕೊಂಡವನು ಅಥವಾ ರಾಜ್ಯಾಂಗವನ್ನು ನಡೆಸುವ ಜವಾಬ್ದಾರಿಯನ್ನು ಹೊತ್ತವನು, ಆ ಕವಿಯ ಕಾವ್ಯ ಕಥೆಗಳಲ್ಲಿನ, ಕಾರ್ಯರೂಪಕ್ಕೆ ತರಬಹುದಾದ ವಿಚಾರಗಳನ್ನು ಕೇವಲ ಜನಹಿತಕ್ಕಾಗಿ ಕಾರ್ಯರೂಪಕ್ಕೆ ತಂದರೆ, ಕವಿಯ ಕಲ್ಪನೆಗೆ ಒಂದು ಮೂರ್ತರೂಪ ಕೊಟ್ಟು ಕವಿಯ ಕಲ್ಪನೆಯನ್ನು ಮತ್ತು ಅದರ ಉದ್ದೇಶ್ಯವನ್ನೂ ಸಾಕಾರಗೊಳಿಸಿದಂತಾಗುತ್ತದೆ. ಅಂತಹ ರಾಜ ಅಥವಾ ರಾಜಕಾರಣಿ ಧೀರನೆಂದೆನಿಸಿಕೊಳ್ಳುತ್ತಾನೆ ಎನ್ನುವುದು ಮಾನ್ಯ ಗುಂಡಪ್ಪನವರ ಅಭಿಮತ.

ಆದರೆ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ ತುಂಬಾ ದುಃಖವಾಗುತ್ತದೆ. ಏಕೆಂದರೆ ಇಂದು ಸಮಾಜಮುಖಿಯಾಗಿ ಸರ್ವಜನ ಹಿತವನ್ನು ಕಲ್ಪಿಸಿಕೊಂಡು ಬರೆಯುವ ಕವಿಗಳೂ ಇಲ್ಲ. ಅಕಸ್ಮಾತ್ ಅಂತಹ ಕವಿಗಳು ನಮ್ಮಲ್ಲಿ ಇದ್ದಾರೆ ಎಂದಾದರೆ ಅವರ ಕಲ್ಪನೆಯನ್ನು ಸಾಕಾರಗೊಳಿಸುವ ರಾಜಕಾರಣಿಗಳೂ ಇಲ್ಲ. ಎಲ್ಲರೂ ‘ತಮ್ಮ ತಮ್ಮ’ನ್ನು ಬಿಂಬಿಸಿಕೊಂಡು ಮೆರೆಯುವ ಪ್ರಯತ್ನದಲ್ಲಿ ತೀವ್ರ ಪೈಪೋಟಿ ಮಾಡುತ್ತಿದ್ದಾರೆ. ಮುಂದೆಂದಾದರೂ ಜನಜೀವನವನ್ನು ಸುಂದರವಾಗಿಸುವ ಕಲ್ಪನೆಯನ್ನು ಹೊತ್ತ ಕವಿಗಳೂ ಮತ್ತು ಅವರ ಕಲ್ಪನೆಯನ್ನು ಸಾಕಾರಗೊಳಿಸುವ ರಾಜಕೀಯ ಧುರೀಣರೂ ಬಂದು ಸಮಾಜದ ಪರಿಸ್ಥಿತಿ ಬದಲಾಗಬಹುದೆಂಬ ಅಪೇಕ್ಷೆ ಮತ್ತು ನಿರೀಕ್ಷೆಯನ್ನು ನಾವು ಬಿಡಬಾರದು.

 

ರಸ ಚೆನ್ನುಡಿ

ಪ್ರತಿಯೊಬ್ಬರೂ ಬದುಕಿನಲ್ಲಿ ಪಡೆಯುವುದೆಲ್ಲವೂ ತಾವು ಹುಟ್ಟಿನಿಂದ ಹೊತ್ತುತಂದ ಪೂರ್ವ ಕರ್ಮಕ್ಕನುಗುಣವಾಗಿ ಮತ್ತು ನಮ್ಮ ಬುದ್ಧಿಯೂ ಅದಕ್ಕನುಗುಣವಾಗಿಯೇ ಎಂದಾದರೂ, ವಿವೇಕಿಗಳು ಎಲ್ಲ ವೇಳೆಯಲ್ಲೂ ಬಹಳ ಜಾಗರೂಕತೆಯಿಂದ ವರ್ತಿಸಬೇಕು – ಅನಾಮಿಕ