RSS

Monthly Archives: ಸೆಪ್ಟೆಂಬರ್ 2013

ರಸಧಾರೆ – ೪೯೩

ಬಹುಜನಂ ಕೈಮುಗಿದ ತೀರ್ಥದೊಳ್ ಕ್ಷೇತ್ರದೊಳ್ ।
ಮಹಿಮೆಯಲ್ಲೇನೆಂದು ಸಂಶಯಿಸಬೇಡ ।।
ವಿಹಿತಗೈದವರಾರು ವಸತಿಯಂ ದೈವಕ್ಕೆ? ।
ಮಹಿಮೆ ಮನಸೋತೆಡೆಯೆ- ಮಂಕುತಿಮ್ಮ ।।
ಮಹಿಮೆಯಲ್ಲೇನೆಂದು= ಮಹಿಮೆ+ಅಲ್ಲಿ+ಏನು+ಎಂದು,ವಿಹಿತಗೈದವರಾರು=ವಿಹಿತ+ಗೈದವರು+ಯಾರು,
ಮನಸೋತೆಡೆಯೆ= ಮನ+ಸೋತ+ಎಡೆಯೆ

ವಿಹಿತ=ನಿಗದಿತ,

ಪರಮಾತ್ಮ ಸರ್ವ ವ್ಯಾಪಿ. "ಬಹಳ ಜನ ಕೈ ಮುಗಿಯಲು ಹೋಗುವ ಪುಣ್ಯತೀರ್ಥದಲ್ಲಿ ಅಥವಾ ಪುಣ್ಯಕ್ಷೇತ್ರದಲ್ಲಿ ಮಾತ್ರ ಪರಮಾತ್ಮನ ಮಹಿಮೆ ಇದೆಯೇನು?" ಎಂದು ಸಂಶಯಪಡಬೇಡ. ಆ ದೈವಕ್ಕೆ ಇಂತಹ ಕಡೆಯೇ ಇರಬೇಕು ಅಥವಾ ಇರಬಹುದು ಎಂದು ನಿಗದಿ ಪಡಿಸಿದವರಾರು? ಮಾನವರು ದೈವಕ್ಕೆ ಮನಸೋತೆಡೆಯಲ್ಲಾ ಆ ದೈವದ ಮಹಿಮೆ ಇರುವುದು ಎಂದು ಮನುಜರ ಭಕ್ತಿಯ ಪರಿಪರಿ ವಿಧಗಳನ್ನು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಪರಮಾತ್ಮನಿಗೆ ಒಂದು ಸ್ಥಳವುಂಟೆ? ಎಲ್ಲ ಸ್ಥಳವೂ ಅವನಿಂದಲೇ ಆಗಿರುವಾಗ, ಅವನಿಗೆ ಸ್ಥಳ ನಿಗದಿ ಮಾಡಲಾಗುವುದೇ? ಆದರೆ ನಮ್ಮ ನಂಬಿಕೆಗೆ ಮತ್ತು ನಮ್ಮ ತೃಪ್ತಿಗೆ ನಾವು ಒಂದು ಮೂರ್ತಿಯನ್ನೋ, ಕ್ಷೇತ್ರವನ್ನೋ ತೀರ್ಥವನ್ನೋ ಪೂಜೆಮಾಡುತ್ತೇವೆ. ಒಂದು ಕ್ಷೇತ್ರಕ್ಕೋ ಅಥವಾ ತೀರ್ಥಕ್ಕೋ ಯಾರಾದರೂ ದೇವರನ್ನು ಕಾಣಲು ಹೋಗುತ್ತಾರೆಂದರೆ, ಅವರಿಗೆ ಆ ಸ್ಥಳದಲ್ಲಿ ನಂಬಿಕೆ ಹೆಚ್ಚು ಎಂದು ಅರ್ಥ. ಅನ್ಯರ ನಂಬಿಕೆಯನ್ನು ಗೌರವಿಸಬೇಕು. "ಅವರು ನಂಬಿದ ಸ್ಥಳದಲ್ಲಿ ಮಾತ್ರ ದೇವರಿದ್ದಾನೆಯೇ. ದೇವರು ಸರ್ವ ವ್ಯಾಪಿಯಲ್ಲವೇ? ದೇವರಿಲ್ಲದ ಸ್ಥಳವುಂಟೆ? " ಎನ್ನುವ ಮಾತುಗಳನ್ನು ಆಡಬಾರದು. ಏಕೆಂದರೆ ದೇವರೆಂಬುದೇ ನಂಬಿಕೆಗೆ ಸಂಬಂಧಪಟ್ಟ ವಿಷಯ. ಯಾರ ನಂಬಿಕೆಯನ್ನೂ ಹೀಗಳೆಯುವಂತಿಲ್ಲ.

ಮಾನವರ ನಂಬಿಕೆಯೇ ಪ್ರತೀ ಕ್ಷೇತ್ರಕ್ಕೂ, ತೀರ್ಥಕ್ಕೂ, ದೇವಸ್ಥಾನಕ್ಕೂ ಮಹಿಮೆಯನ್ನು ಕೊಡುತ್ತದೆ. ಆ ಮಹಿಮೆಯೇ ಜನರ ವಿಶ್ವಾಸ ಮತ್ತು ನಂಬಿಕೆಗಳನ್ನು ಅಧಿಕವಾಗಿಸುತ್ತದೆ. ಒಂದಕ್ಕೊಂದು ಪೂರಕವಾಗಿ ಬೆಳೆಯುತ್ತಾ ಹೋಗುತ್ತದೆ. ಕಾಲಕಾಲಕ್ಕೆ ಬದಲಾವಣೆ ಬಂದಂತೆಲ್ಲಾ ನಂಬಿಕೆಗಳೂ ಬದಲಾಗುತ್ತವೆ ಮತ್ತು ಹಾಗೆಯೇ ಜನರು ನಂಬುವ ತೀರ್ಥ ಮತ್ತು ಕ್ಷೇತ್ರ ಬದಲಾಗುತ್ತಾ ಹೋಗುತ್ತದೆ ಮತ್ತು ಈ ಮಾನವರು ನಂಬುವ ಆ ದೇವರಗಳೂ ಬದಲಾಗುತ್ತಾ ಹೋಗುತ್ತಾರೆ. ಒಂದು ಕ್ಷೇತ್ರದಲ್ಲಿ ಬಹಳಷ್ಟು ಜನ ತುಂಬು ಭಕ್ತಿಯಿಂದ ಹೋಗಿ ಕೈ ಮುಗಿಯುವಾಗ, ತಮ್ಮ ಮನದಾಳದ ಭಕ್ತಿಯ ತೀವ್ರ ಭಾವನೆಗಳನ್ನು ಅಲ್ಲಿ ಸಮರ್ಪಿಸುವುದರಿಂದ ಆ ಸ್ಥಳಕ್ಕೆ ಬಂದು ಹೋಗುವವರು ಆ ಭಕ್ತಿ ಭಾವದಲ್ಲಿ ಮುಳುಗಿಹೋಗುತ್ತಾರೆ. ಇದೂ ಸಹ ಅನುಭವ ವೇದ್ಯ ಮತ್ತು ನಂಬಿಕೆ ಸಂಬಂಧಿಸಿದ್ದು.

ಆ ಪರಮಾತ್ಮ ಅಲ್ಲಿ, ಎಂದರೆ ಆ ಕ್ಷೇತ್ರದಲ್ಲಿ ಅಥವಾ ತೀರ್ಥದಲ್ಲಿ ಇದ್ದಾನೆಂದು ನಂಬಿ ಹೋಗುವವರಿಗೆ ಅವರವರ ನಂಬಿಕೆಯೇ ಆಧಾರ. ಆದರೆ ಪರಮಾತ್ಮ ಸರ್ವವ್ಯಾಪಿ ಎಂದು ನಂಬಿ,ಕಾಣುವ ಕ್ಷಮತೆಯಿದ್ದರೆ ಕಂಡ ಕಂಡಲ್ಲಿ ಆ ಪರಮಾತ್ಮನ ಕ್ರಿಯೆಯ ಮೂಲಕ ಅವನನ್ನು ನೋಡಬಹುದು ಎನ್ನವುದು ಪ್ರಾಜ್ಞರ ಅಭಿಪ್ರಾಯ. ಅಂತಹ ವಿಶಾಲ ಭಾವ ನಾವು ಬೆಳೆಸಿಕೊಂಡರೆ ಆ ದೈವವನ್ನು ಬೇಧವಿಲ್ಲದೆ ನೆನೆಯುವ ಮತ್ತು ಪೂಜಿಸುವ ಕ್ಷಮತೆಯನ್ನು ನಾವೂ ಸಹ ಬೆಳೆಸಿಕೊಳ್ಳಬಹುದು.

Advertisements
 

ರಸ ಚೆನ್ನುಡಿ

ನಾವು ಇಂದು ಏನಾಗಿದ್ದೇವೆ ಎನ್ನುವದು ನಾವು ಹಿಂದೆ ಏನಾಗಿದ್ದೆವು ಎನ್ನುವುದು ನಿರ್ಧರಿಸುತ್ತದೆ.
ಆದರೆ ನಾವು ಮುಂದೆ ಏನಾಗಬೇಕು ಎನ್ನುವುದು ನಮ್ಮ ಇಂದಿನ ಆಯ್ಕೆಯ ಮೇಲೆ ಅಧಾರಪಟ್ಟಿದೆ – ಅನಾಮಿಕ

 

ರಸಧಾರೆ – ೪೯೨

ಬಹಿರಂತರೈಕ್ಯವನು ನೆನಪಿಗಾಗಿಸಲೆಂದು।

ವಿಹಿತಮ್ ಆಚಮನಾರ್ಘ್ಯ ಪೂಜೆ ನೈವೇದ್ಯ ।।
ಗುಹೆಯೊಳಗಣದ ಹೊರಗಣದ ಕೂಡಿಸುವುಪಾಯ ।
ಸಹಭಾವವದಕೆ ಸರಿ – ಮಂಕುತಿಮ್ಮ ।।

ಬಹಿರಂತರೈಕ್ಯವನು=ಬಹಿರ್+ಅಂತರ್+ಐಕ್ಯವನು, ನೆನಪಿಗಾಗಿಸಲೆಂದು=ನೆನಪಿಗೆ+ಆಗಿಸಲೆಂದು ಆಚಮನಾರ್ಘ್ಯ+ಆಚಮನ+ಅರ್ಘ್ಯ, ಗುಹೆಯೊಳಗಣದ=ಗುಹೆ+ಒಳಗಣದ,
ಕೂಡಿಸುವುಪಾಯ=ಕೂಡಿಸುವ+ಉಪಾಯ

ವಿಹಿತಮ್=ವಿಧಿಸಲ್ಪಟ್ಟ, ನೈವೇದ್ಯ=ಅರ್ಪಿಸಲ್ಪಡುವ

ಹೊರ ಮತ್ತು ಒಳಗಿನ ಚೇತನವು ಒಂದೇ ಎಂದು ನಮಗೆ ನೆನಪು ಮಾಡಿಕೊಡಲು ವಿಧಿಸಲ್ಪಟ್ಟ ಕ್ರಮವೇ, ಆಚಮನ ಅರ್ಘ್ಯ ಮತ್ತು ನೈವೇಧ್ಯಗಳಿಂದ ಮಾಡುವಂತಹ ಪೂಜೆ. ಈ ಪೂಜಾಕ್ರಮದಿಂದ ನಮ್ಮ ಒಳಗಿರುವ ಮತ್ತು ಹೊರಗಿರುವ ಚೇತನಗಳ ಏಕತೆ ಮತ್ತು ಐಕ್ಯತೆಯನ್ನು ಅರಿತು ಎರಡರಲ್ಲೂ ಸಮನ್ವಯವನ್ನು ತಾಳುವುದಕ್ಕೆ ಸರಿಯಾದ ಉಪಾಯವೇ ಪೂಜೆ ಎನ್ನುತ್ತಾರೆ ಈ ಮುಕ್ತಕದಲ್ಲಿ.

ನಾವು ಪೂಜೆಮಾಡುವುದು ನಮ್ಮ ಮನೆಯ ದೇವರ ಮೂರ್ತಿಗೋ ಅಥವಾ ದೇವಸ್ಥಾನದ ವಿಗ್ರಹಕ್ಕೋ ಎಂದು ಇಟ್ಟುಕೊಳ್ಳೋಣ. ಹಾಗೆ ಪೂಜೆ ಮಾಡುವಾಗ ನಮ್ಮ ಪೂರ್ವಜರು ಹಾಕಿಕೊಟ್ಟ ಕೆಲವು ವಿಧಿ ವಿಧಾನಗಳನ್ನು ಪಾಲಿಸುತ್ತೇವೆ. ಸ್ನಾನ ಸಂಧ್ಯಾವಂದನೆ ಜಪ, ತಪ, ಆರಾಧನೆ ಅರ್ಘ್ಯ ಆಚಮನ ಮುಂತಾದ ವಿಧಿಗಳನ್ನು ವಿಧಿಸಿದ್ದಾರೆ ನಮ್ಮ ಸನಾತನದ ಪೂಜಾಕ್ರಮದಲ್ಲಿ. ಆದರೆ ನಾವು ಪೂಜೆಮಾಡುವುದು ಯಾವುದನ್ನು? ನಮ್ಮ ಎದುರಿಗೆ ಇರುವ ಮೂರ್ತರೂಪದ ವಿಗ್ರಹವನ್ನೂ ಅಥವಾ ಆ ವಿಗ್ರಹದ ಹಿಂದಿರುವ ಪರತತ್ವವನ್ನೋ ?

‘ಪರಮೇ ವ್ಯೋಮನ್’ ಎಂದರೆ ಆಕಾಶದಲ್ಲಿ ಸಕಲಕ್ಕೂ ಮೂಲವಾದ ಮತ್ತು ಎಲ್ಲಕ್ಕಿಂತ ಮಿಗಿಲಾದ ಆ ಪರಮ ಚೇತನವನ್ನು, ‘ನಿಹಿತಂ ಗುಹಾಯಾಂ’ ಅಂತರಂಗಕ್ಕೆ ತಂದುಕೊಳ್ಳುವುದೇ ಪೂಜೆ. ಸಕಲ ವಿಶ್ವದಲ್ಲಿ ಆವೃತವಾಗಿರುವ ಆ ಪರಮಚೇತನವೇ ನಮ್ಮ ಒಳಗೂ ಇರುವ ಚೇತನವೆಂಬ ಅರಿವು ಮೂಡಬೇಕು. ಹಾಗೆ ಮೂಡಿದ ಅರಿವಿನಿಂದ ಸಕಲ ಚರಾಚರಗಳಿಗೆ ಕಾರಕ ಮತ್ತು ಧಾರಕವಾದ ಆ ಪರಸತ್ವ ಮತ್ತು ಪೂರ್ವ ಕರ್ಮಾನುರೂಪವಾಗಿ ಇಂದ್ರಿಯಾಧಾರಿತವಾದ ಈ ದೇಹಧಾರಣೆಮಾಡಿರುವ ನಮ್ಮೊಳಗಿರುವ ಚೇತನ ಎರಡೂ ಒಂದೇ ಎಂಬ ಅರಿವು ಸ್ಥಿರವಾಗಬೇಕು. ಹಾಗಾಗಲು ದಾರಿ ಈ ಪೂಜೆಯೊಂದೇ ಎಂದು ಹೇಳುತ್ತಾರೆ ಗುಂಡಪ್ಪನವರು.

ಆದರೆ ಈ ಪೂಜೆ ಹೇಗಿರಬೇಕು? ಜಗತ್ತಿನ ಎಲ್ಲ ಕಡೆಯೂ ಈ ರೀತಿಯ ಪೂಜೆ ಪರಿಪರಿಯಾದ ವಿಧಾನಗಳಲ್ಲಿ ನಡೆಯುತ್ತದೆ. ಮೂರ್ತರೂಪದ ಪೂಜೆ ಮತ್ತು ನಿರಾಕಾರ ಬ್ರಹ್ಮನ ಪೂಜೆ,ಬಹಿರಂಗದಲ್ಲಿ ವಿಜೃಂಭಣೆಯ ಪೂಜೆ, ಅಂತರಂಗದಲ್ಲಿ ಮೌನವಾದ ಪೂಜೆ ನಡೆಯುತ್ತದೆ. ವಿಧಿ ವಿಧಾನಗಳು ಹೇಗಿದ್ದರೂ ಆ ಪರಮ ಚೇತನವನ್ನು ಅಂತರಂಗಕ್ಕೆ ತಂದುಕೊಂಡು, ಎರಡೂ ವಿಲೀನವಾಗಿ ಸಮಭಾವದಲ್ಲಿ ಇರುವುದೇ ಸರಿಯಾದ ಪೂಜೆ. ಹೊರಗಿನ ಪೂಜೆಗಳು ಸಾಂಸ್ಕೃತಿಕ ಬೆಳವಣಿಗೆಗೆ ಎದೆಮಾಡಿಕೊಟ್ಟರೆ, ಮೌನದ ಅಂತರಂಗ ಪೂಜೆ ಆತ್ಮೋನ್ನತಿಗೆ ದಾರಿಯಾಗುತ್ತದೆ.

 

ರಸ ಚೆನ್ನುಡಿ

‘ದಯೆ’ ಎಂಬುದು ಎರಡು ಹೃದಯಗಳ ನಡುವಿನ ಮುಕ್ತ ಸಂವಾದ. ಅದನ್ನು ಕಲಿಯಲೋ, ಹುಡುಕಲೋ ಕಲಿಸಲೋ ಬೋಧಿಸಲೋ ಸಾಧ್ಯವಿಲ್ಲ. ಅದು ಅಂತರಂಗದ ಸ್ವತಂತ್ರ ಭಾವ – ಅನಾಮಿಕ

 

ರಸಧಾರೆ – ೪೯೧

ಅಂಬುಧಿಯ ಮಡಕೆಯಲಿ, ಹೊಂಬಿಸಿಲ ಕಿಟಕಿಯಲಿ ।
ತುಂಬಿಕೊಳ್ಳುವ ಬಡವನೈಶ್ವರ್ಯದಂತೆ ।।
ಬಿಂಬದೊಳಗಮಿತ ಸತ್ವವ ಪಿಡಿದಿಡುವ ಭಕ್ತಿ- ।।
ಯಿಂಬು ಕಿಂಚಿನ್ಮತಿಗೆ – ಮಂಕುತಿಮ್ಮ ।।
ಬಡವನೈಶ್ವರ್ಯದಂತೆ=ಬಡವನ+ ಐಶ್ವರ್ಯದಂತೆ, ಬಿಂಬದೊಳಗಮಿತ=ಬಿಂಬದೊಳಗೆ+ಅಮಿತ, ಪಿಡಿದಿಡುವ=ಪಿಡಿದು+ಇಡುವ, ಭಕ್ತಿಯಿಂಬು=ಭಕ್ತಿಯ+ಇಂಬು, ಕಿಂಚಿನ್ಮತಿಗೆ=ಕಿಂಚಿನ್+ಮತಿಗೆ

ಇಂಬು=ಸಹಾಯ, ಒತ್ತಾಸೆ, ಬಿಂಬ=ಮೂರ್ತಿ, ಪ್ರತಿಮೆ, ಕಿಂಚಿನ್ಮತಿ=ಅಲ್ಪ ಮತಿ

ಸಾಗರವನ್ನು ಒಂದು ಪುಟ್ಟ ಮಡಕೆಯಲ್ಲಿ ಅಥವಾ ಸೂರ್ಯನ ಹೊಂಬಿಸಿಲನ್ನು ತನ್ನ ಪುಟ್ಟ ಗುಡಿಸಲಿನ ಕಿಟಕಿಯಲ್ಲಿ ತುಂಬಿಕೊಳ್ಳುವ ಪ್ರಯತ್ನಪಡುವ ಬಡವನಂತೆ ಮಹತ್ತಾದ ಪರತತ್ವವನ್ನು ಒಂದು ಪುಟ್ಟ ಮೂರ್ತಿಯಲ್ಲಿ ಕಾಣುವುದೇ ಭಕ್ತಿ ಎಂದು ಮಹತ್ತಾದ ವಿಷಯವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.

ಪ್ರತಿಯೊಬ್ಬರಿಗೂ ಭಕ್ತಿಯನ್ನು ತೋರುವ ಹಾದಿಯಲ್ಲಿ ಭಾವನೆಯ ಒಂದು ಆಳ ಮತ್ತು ವಿಸ್ತಾರವಿರುತ್ತದೆ. ಹಲವರದು ಕಿಂಚಿನ್ಮತಿ ಮತ್ತು ಆಳವಿಲ್ಲದ್ದು ಮತ್ತೆ ಕೆಲವರದು ಆಳ ಮತ್ತು ವಿಸ್ತಾರ. ಒಬ್ಬರು ಇನ್ನೊಬ್ಬರನ್ನು ಟೀಕಿಸುವಂತಿಲ್ಲ. ಏಕೆಂದರೆ ಭಕ್ತಿಯೆನ್ನುವುದು ‘ಅವರವರ ಭಾವಕ್ಕೆ’ ಸಂಬಂಧಿಸಿದ್ದು. ವೇದೊಪನಿಷತ್ತುಗಳನ್ನು ಪುರಾಣಗಳನ್ನು ಓದದ ಪಾಮರನಲ್ಲಿರುವ ಭಕ್ತಿಯ ಭಾವಕ್ಕೂ, ಅವುಗಳನ್ನು ಓದಿದ ಪಂಡಿತನಿಗೂ ಯಾವ ವ್ಯತ್ಯಾಸವೂ ಇಲ್ಲ. ಭಾವ ಒಂದೇ. ಆದರೆ ಆ ಭಾವವನ್ನು ವ್ಯಕ್ತಪಡಿಸಲು ಅವರವರುಗಳು ಉಪಯೋಗಿಸುವ ಪರಿಕರಗಳ ವ್ಯತ್ಯಾಸವಷ್ಟೆ. ಕೆಲವರಿಗೆ ಸಾದಾರಣ ಪೂಜಾ ವಿಧಾನವಾದರೆ, ಕೆಲವರದು ಆಡಂಬರದಿಂದ ಕೂಡಿದ್ದು. ಕೆಲವರದು ಕ್ಲುಪ್ತವಾದರೆ ಕೆಲವರದು ಧೀರ್ಘ. ಕೆಲವರು ತೋರಿಕೆಗೆ ಪೂಜೆ ಮಾಡಿದರೆ ಕೆಲವರು ತೋರದೆಯೇ ಮನಸ್ಸಿನಲ್ಲಿ ತುಂಬು ಭಕ್ತಿಯನ್ನಿಟ್ಟುಕೊಂಡಿರುತ್ತಾರೆ. ಹೀಗೆ ಭಕ್ತಿಯಲ್ಲಿ ಹಲವಾರು ವಿಧಗಳು.

ಆದರೆ ಹಂತ ಹಂತವಾಗಿ ಬೆಳೆಯಬಹುದಾದ ಭಕ್ತಿ ಭಾವದ ಮೊದಲ ಹಂತದಲ್ಲಿ "ಬಿಂಬದೊಳಗಮಿತ ಸತ್ವವ ಪಿಡಿದಿಡುವ" ಪ್ರಯತ್ನ ನಡೆದು ಹಂತ ಹಂತವಾಗಿ ಅನೇಕ ರೂಪಗಳಿಂದ ಏಕ ರೂಪಕ್ಕೆ ಬಂದು ಮತ್ತೆ ಆಕಾರದಿಂದ ನಿರಾಕಾರ ಬ್ರಹ್ಮನನ್ನು ಧ್ಯಾನಮಾಡುವ ಸ್ಥಿತಿಗೆ ತಲುಪುವುದೇ ನಮ್ಮ ಸನಾತನದ ದಾರಿ.
ಪ್ರಾಥಮಿಕ ಹಂತದ ಭಕ್ತರಿಗೆ ಜ್ಞಾನದ ಬಡತನದವರಿಗೆ, ಮಾನ್ಯ ಗುಂಡಪ್ಪನವರು ಹೇಳುವ ಹಾಗೆ
‘ಕಿಂಚಿನ್ಮತಿಗಳಿಗೆ’ ಒಂದು ರೂಪವಿದ್ದರೆ ಇಡೀ ಪರಮಾತ್ಮ ತತ್ವವನ್ನು ಅದರಲ್ಲಿಯೇ ಭಕ್ತಿಯಿಂದ ಕಾಣುವುದು

ಸಾಧ್ಯ.

ಬೃಹತ್ ಮತ್ತು ಪರಮ ಚೇತನವೇ" ಅಣುರ್ಬೃಹತ್ ಕೃಶಸ್ಥೂಲೋ ಗುಣಬೃನ್ನಿರ್ಗುಣೋ ಮಹಾನ್" ಎನ್ನುವಂತೆ ಎಲ್ಲದರಲ್ಲೂ ಸೇರಿಕೊಂಡಿರುವಾಗ ಭಕ್ತಿಯನ್ನು ತೋರಲು ಯಾವ ವಿಧಾನವನ್ನು ಬೇಕಾದರೂ ಆರಿಸಿಕೊಳ್ಳಬಹುದು. ಅವರವರ ಕ್ಷಮತೆ ಯೋಗ್ಯತೆ ಮತ್ತು ಸಾಧ್ಯತೆಗನುಗುಣವಾಗಿ ಅವರವರು ತಮ್ಮ ಭಕ್ತಿಯನ್ನು ತೋರುತ್ತಾರೆ. ನಾವು ನಮ್ಮಲ್ಲಿ ಭಕ್ತಿಯಿದ್ದರೆ, ಹಂತ ಹಂತವಾಗಿ ಮೇಲಕ್ಕೆ ಹೋಗುವ ಪ್ರಯತ್ನವನ್ನು ಮಾಡಬೇಕು

 

ರಸ ಚೆನ್ನುಡಿ

ಜ್ಞಾನ ಸಂಪಾದನೆಗೆ ಅಕ್ಕರೆ ಇರಬೇಕು. ವಾದ ಮಾಡಲು ತರ್ಕ ಶಕ್ತಿಯುತವಾಗಿರಬೇಕು. ಮಿಕ್ಕೆಲ್ಲ ಓದು ವಿದ್ಯಾಭ್ಯಾಸಗಳು ಹೊಟ್ಟೆಪಾಡಿಗಾಗಿ ಆದರೆ ಮೋಕ್ಷ ಪಡೆಯಲು ಹರಿ ಅಥವಾ ಹರ ಎಂಬ ಎರಡಕ್ಷರ ಸಾಕು – ಸರ್ವಜ್ಞ

 

ರಸಧಾರೆ – ೪೯೦

ಬಹಿರದ್ಭುತವ ಮನುಜರಂತರದ್ಭುತವರಿತು ।
ಗ್ರಹಿಸುವಂತಾಗಿಸಲು ಪೂರ್ವಾನುಭವಿಗಳ್ ।।
ಬಹುಪರಿಯುಪಾಗಳ ನಿರವಿಸಿಹರದಕೇಕೆ ।
ಗಹಗಹಿಸುವೆಯೊ, ಮರುಳೆ ಮಂಕುತಿಮ್ಮ ।।

ಬಹಿರದ್ಭುತವ=ಬಹಿರ್+ಅದ್ಭುತವ, ಮನುಜರಂತರದ್ಭುತವರಿತು=ಮನುಜರ+ಅಂತರ್+ಅದ್ಭುತವು+ಅರಿತು, ಗ್ರಹಿಸುವಂತಾಗಿಸಲು=ಗ್ರಹಿಸುವಂತೆ+ಆಗಿಸಲು, ಪೂರ್ವಾನುಭವಿಗಳ್=ಪೂರ್ವ+ಅನುಭವಿಗಳ್, ಬಹುಪರಿಯುಪಾಯಗಳ = ಬಹು+ಪರಿಯ+ಉಪಾಯಗಳ, ನಿರವಿಸಿಹರದಕೇಕೆ-ನಿರವಿಸಿಹರು+ಅದಕೆ+ಏಕೆ,

ಬಹಿರ್= ಹೊರಗಿನ, ಅಂತರ್=ಒಳಗಿನ, ಅದ್ಭುತ=ವಿಚಿತ್ರ, ಪರಿಯ= ವಿಧಾನದ,ನಿರವಿಸಿಹರು=ನಿರ್ಮಿಸಿಹರು
ಗಹಗಹಿಸುವೆಯೊ=ಅಟ್ಟಹಾಸ ಮಾಡುವೆಯೋ, ಮರುಳೆ=ಹುಚ್ಚ.

ನಮ್ಮ ಪೂರ್ವಜರು ತಮ್ಮ ಅನುಭವದಿಂದ, ಸೃಷ್ಟಿಯಲ್ಲಿ ನಮಗೆ ಹೊರಗೆ ಕಾಣುವ ಅದ್ಭುತಗಳನ್ನು ಅಂತರಂಗದಲ್ಲಿ ಅರಿತುಕೊಳ್ಳಲು ಹಲವಾರು ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅದನ್ನು ಅರಿಯುವ ಮುನ್ನ ಅಥವಾ ಅದನ್ನು ಅರಿತುಕೊಳ್ಳುವ ಪ್ರಯತ್ನವನ್ನೇ ಮಾಡದೆ ಅದನ್ನು ಕಂಡು ಕುಹಕವಾಡುವಂತೆ ಗಹಗಹಿಸಿ ಏಕೆ ನಗುತ್ತೀಯೆ,ಹುಚ್ಚಾ ಎಂದು ಸತ್ಯವರಿಯದೆ ಒಂದು ವಿಷಯದ ಬಗ್ಗೆ ಕುಹಕವಾಡುವ ಮನಗಳನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಸೃಷ್ಟಿಯಲ್ಲಿ ಅನೇಕಾನೇಕ ಅದ್ಭುತಗಳು ಇವೆ. ನಮಗೆ ಎಲ್ಲವೂ ಅರ್ಥವಾಗುವುದಿಲ್ಲ. ಇಡೀ ಜಗತ್ತನ್ನು ಒಂದು ಸೂತ್ರದಲ್ಲಿ ಬಂಧಿಸಿರುವ ಆ ಪರಮ ಚೇತನ ಎಲ್ಲ ಅದ್ಭುತಗಳನ್ನೂ ಸಕಾರಣವಾಗಿಯೇ ನಿರ್ಮಿಸಿದೆ. ಅಲ್ಪ ಮತಿಗಳಾದ ನಾವು ಅದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅಸಮರ್ಥರಾಗಿದ್ದೇವೆ. ಆದರೆ ಅರ್ಥಮಾಡಿಕೊಳ್ಳಲು ಅಸಾಧ್ಯವಾದುದೇನಲ್ಲ. ಪ್ರಯತ್ನ ಪಡಬೇಕು.

ಆ ಪ್ರಯತ್ನದಲ್ಲಿ ನಮಗೆ ಒದಗಲು ನಮ್ಮ ಪೂರ್ವಜರು ತಮ್ಮ ಅನುಭವದಲ್ಲಿ ಕಂಡುಕೊಂಡ ಹಲವಾರು ಸತ್ಯಗಳನ್ನು ಪ್ರಮಾಣ ಪೂರ್ವಕವಾಗಿ ನಮಗೆ ನೀಡಿದ್ದಾರೆ. ಈ ಗುಂಪಿಗೆ ಸೇರುವುದೇ ವೇದಗಳು, ಉಪನಿಷತ್ತುಗಳು, ಪುರಾಣಗಳು ಸೂಕ್ತ ಮತ್ತು ಸ್ತೋತ್ರಗಳು. ಸೂಕ್ತ ಗುರುವಿನ ಆಶ್ರಯದಲ್ಲಿ ಇವೆಲ್ಲವನ್ನೋ ಅಥವಾ ಯಾವುದಾದರೂ ಒಂದು ಭಾಗವನ್ನು ಅಭ್ಯಾಸಮಾಡಿದ್ದಲ್ಲಿ ಸೃಷ್ಟಿಯ ಹೊರಗಿನ ಅದ್ಭುತಗಳಲ್ಲಿ ಕೆಲವನ್ನು ಅಂತರಂಗದಲ್ಲೂ ಕಂಡುಕೊಳ್ಳುವ ಮತ್ತು ಅನುಭವಿಸುವ ಕ್ಷಮತೆಯನ್ನು ನಾವು ಪಡೆದುಕೊಳ್ಳಬಹುದು.

ವಿಪರ್ಯಾಸವೆಂದರೆ ಏನೂ ಅರಿಯದೆ ಇದ್ದರೂ ‘ಏನೋ ಅರಿತಿದ್ದೇವೆ’ ಎನ್ನುವ ಅಹಂಕಾರದ ಭಾವದಿಂದ ಅರಿಯಬೇಕಾದ್ದರಿಂದ ವಂಚಿತರಾದಾಗ್ಯೂ, ಪ್ರತೀ ಸತ್ಯವನ್ನೂ ಕುಹಾಕವಾಡುವ ಜನಗಳು ನಮ್ಮಲ್ಲೇನೂ ಕಡಿಮೆ ಇಲ್ಲ. ಅಷ್ಟೇ ಆಲ್ಲ, ಸತ್ಯದ ಮೂಲವರಿಯದೆ, ತಾವು ಅರಿತದ್ದೆ ಪರಮ ಸತ್ಯವೆಂದು ನಂಬಿ ಹಲವಾರು ‘ಮತ ಧರ್ಮ, ಪದ್ಧತಿ, ರೀತಿ’ ಎಂದು ಪಂಗಡಗಳಾಗಿ ಹಂಚಿ ಹೋಗಿರುವ ಸಮುದಾಯವನ್ನು ನೋಡಿದರೆ ಮಾನ್ಯ ಗುಂಡಪ್ಪನವರು ಹೇಳುವಂತೆ, ಇದು ಕೇವಲ ‘ ಮರುಳೆ ‘ ಎಂದು ಅರ್ಥವಾಗುತ್ತದೆ. ಸತ್ಯವನ್ನರಿಯ ಬೇಕು. ಸುದ್ಧ ಸತ್ಯವನ್ನು ಅರಿಯಬೇಕು. ಭ್ರಮೆಯಿಂದ ಹೊರಗೆ ಬರಬೇಕು. ಅಂತಹ ಪ್ರಯತ್ನ ನಮ್ಮದಾಗಬೇಕು.