RSS

Monthly Archives: ಅಕ್ಟೋಬರ್ 2013

ರಸಧಾರೆ – ೫೧೫

ಎನ್ನ ಬೇಡಿಕೆ ನಷ್ಟವಹುದೆಂತು, ದೇವನಿರೆ ? ।
ಅನ್ಯಾಯ ಜಗವೆಲ್ಲ,ದೇವನಿರನೆನುತ ।।
ತನ್ನ ತನ್ನನುಭವವ ನಂಬಲೋರೊರ್ವನುಂ
ಭಿನ್ನವಾಗದೆ ಸತ್ಯ ? – ಮಂಕುತಿಮ್ಮ||
ನಷ್ಟವಹುದೆಂತು=ನಷ್ಟವು+ಅಹುದು+ಎಂತು, ದೇವನಿರನೆನುತ= ದೇವಾನು+ಇರನು+ಎನುತಿರೆ, ತನ್ನನುಭವವ=ತನ್ನ+ಅನುಭವವ, ನಂಬಲೋರೊರ್ವನುಂ =ನಂಬಲು+ಒರೋರ್ವನುಂ

ಅಹುದೆಂತು =ಆಗುವುದು ಹೇಗೆ, ಭಿನ್ನವಾಗದೆ =ವ್ಯತ್ಯಾಸವಾಗದೆ.

"ಆ ದೇವನಿರುವುದಾದರೆ ನನ್ನ ಬೇಡಿಕೆಗಳು ಈಡೇರದೆ ಇರಲು ಸಾಧ್ಯವೇ?" ಎಂದು ದೇವರನ್ನು ನಂಬುವವನು ಆಶಾಭಾವದಿಂದ ಇರುತ್ತಾನೆ. ಈ ಜಗತ್ತಿನಲ್ಲಿ ಎಷ್ಟೊಂದು ಅನ್ಯಾಯಗಳು ಅಕ್ರಮಗಳು ದುಷ್ಟತನಗಳು ನಡೆಯುತ್ತಿರುವಾಗ " ಛೆ! ಇಷ್ಟೊಂದು ಅನ್ಯಾಯಗಳಿರುವಾಗ ಆ ದೇವರೆಂಬುವನು ಇರಲು ಸಾಧ್ಯವಿಲ್ಲ ಎಂದು ವಾಸ್ತವವಾದಿ ಅಥವಾ ನಾಸ್ತಿಕವಾದಿ ಇರುತ್ತಾನೆ. ಹೀಗೆ, ಇರುವ ಒಂದು ಸತ್ಯಕ್ಕೆ ಅವರವರ ಅನುಭವಕ್ಕೆ ಅನುಸಾರವಾಗಿ ಬೇರೆ ಪರಿಭಾಷೆಯನ್ನು ಕೊಟ್ಟಾಗ ಸತ್ಯವು ಭಿನ್ನವಾಗದೆ? ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಹೀಗೆ, ಪ್ರತಿಯೊಬ್ಬರ ಅನುಭವದ ಆಧಾರದಮೇಲೆ ಆ ದೇವರು ಎನ್ನುವ ವಸ್ತುವಿಗೆ ನೂರಾರು ಪರಿಭಾಷೆಗಳು, ರೂಪಗಳು ಮತ್ತು ವಿಧ ವಿಧವಾದ ಪೂಜೆಗಳು. ಈ ವಿಚಾರ ವೈವಿಧ್ಯತೆಯಿಂದ ಹುಟ್ಟಿಕೊಂಡದ್ದೆ ಭಿನ್ನ ಭಿನ್ನವಾದ ಮತಗಳು, ಧರ್ಮಗಳು. ನಂಬುವವನಿಗೆ ಈ ‘ದೇವರು’ ಎಂಬುದು ಒಂದು ಊರುಗೋಲಿದ್ದಂತೆ, ಆಶ್ರವನ್ನೀಯುವ ಮಹಾವೃಕ್ಷವಿದ್ದಂತೆ. ಆದರೆ ಭಾವನೆಗ ಮಾತ್ರ ನಿಲುಕುವ ವಸ್ತುವಾದ್ದರಿಂದ ಎಷ್ಟು ಭಿನ್ನ
ಭಾವನೆಗಳಿದ್ದರೆ, ಅಷ್ಟೊಂದು ಭಿನ್ನ ಭಿನ್ನ ರೂಪಗಳು, ತತ್ವಗಳು, ಮತಗಳು. ಹಾಗಿರುವಾಗ ಸತ್ಯದ ಪರಿಭಾಷೆ ಒಂದೇ ಆಗಲು ಹೇಗೆ ಸಾಧ್ಯ ಎನ್ನುವುದೇ ಪ್ರಶ್ನೆ.

ಪರಿಭಾಷೆಗಳು ಎಷ್ಟೇ ವಿದದಲ್ಲಿ ಇದ್ದರೂ ಸತ್ಯದ ಸ್ವರೂಪ ಬದಲಾಗುವುದಿಲ್ಲ ಅಲ್ಲವೇ? " ಏಕಂ ಸತ್ಯಂ ಬಹುದಾ ವಿಪ್ರಾಃ ವದಂತಿ" ಎನ್ನುವ ಉಕ್ತಿ ಇಲ್ಲಿ ಬಹಳ ಸೂಕ್ತವಾಗುತ್ತದೆ. ಸತ್ಯವೊಂದೇ ಅದರೂ ಅವರವರ ಅನುಭವಕ್ಕೆ ತಕ್ಕಂತೆ ಅವರವರು ನೀಡುವ ವ್ಯಾಖ್ಯಾನಗಳು ಭಿನ್ನವಾಗಿರುತ್ತದೆಯಷ್ಟೆ. ಹಾಗಾಗಿ ಒಬ್ಬನೇ ಪರಮಾತ್ಮ ತನ್ನ ಇಚ್ಚೆಯಿಂದಲೇ ಕೋಟ್ಯಾಂತರ ರೂಪಗಳನ್ನು ಧರಿಸಿ ಎಲ್ಲದರಲ್ಲೂ ತಾನಿರುತ್ತ, ತನ್ನ ಮಾಯೆಯಿಂದ ಎಲ್ಲವೂ ಭಿನ್ನ ಭಿನ್ನವಾಗಿ ಕಾಣುವಂತೆ ಸೃಷ್ಟಿಸಿದ್ದಾನೆ ಎಂಬುದನ್ನು ಅರಿತುಕೊಳ್ಳಬೇಕು.

ನಮಗೆ ಒಂದು ನಂಬಿಕೆ ಬೇಕು ಮತ್ತು ನಾವು ನಂಬುವುದನ್ನು ದೃಢವಾಗಿ ನಂಬಬೇಕು. ನಮ್ಮ ಸತ್ಯವನ್ನು ನಮ್ಮದೇ ದಾರಿಯಲ್ಲಿ ಕಂಡುಕೊಳ್ಳಬೇಕು. ಹಾಗೆ ಕಂಡ ಸತ್ಯದಲ್ಲಿ ಸಿಗುವ ಆನಂದವನ್ನು ಅನುಭವಿಸಬೇಕು.

Advertisements
 

ರಸ ಚೆನ್ನುಡಿ

ಯಾವುದೇ ಸಂದರ್ಭವನ್ನು ಬದಲಾಯಿಸಬಲ್ಲ ‘ಆಲೋಚನಾ ಕ್ಷಮತೆ’ಯೇ ಪರಮಾತ್ಮ

ಮಾನವನಿಗಿತ್ತ ಅತ್ಯಂತ ಶಕ್ತಿಶಾಲಿ ಆಯುದ. ಇದಕ್ಕಾಗಿ ನಾವೆಷ್ಟು ಕೃತಜ್ಞರಾಗಿದ್ದರೂ ಸಾಲದು – ಅನಾಮಿಕ

 

ರಸ ಚೆನ್ನುಡಿ

ಪರರಿಂದ ಪಡೆಯುವುದಕ್ಕಾಗಿ ಎಂದೂ ನೀಡಬಾರದು.
ಸಾಧ್ಯವಾದರೆ ಈ ಜಗತ್ತನ್ನು ಉತ್ತಮವಾಗಿಸುವುದಕ್ಕಾಗಿ ನೀಡಿ – ಅನಾಮಿಕ

 

ರಸಧಾರೆ – ೫೧೪

ಎನಗೆ ಸುಖವಿಲ್ಲವದರಿಂ ದೇವರಿರನೆನ್ನು- ।
ವನುಮಿತಿಯ ನೀಂ ಗೆಯ್ಕೆ, ಸುಖಿಯದೇನೆನುವಂ? ।।
ತನುಬಾಹ್ಯಕರಣದನುಭವಕಿಂತ ಸೂಕ್ಷ್ಮತರ- ।
ದನುಭವವ ನೀನರಸೋ – ಮಂಕುತಿಮ್ಮ ।।

ಸುಖವಿಲ್ಲವದರಿಂ=ಸುಖವು+ಇಲ್ಲ+ಆದರಿಂ, ದೇವರಿರನೆನ್ನುವನುಮಿತಿಯ= ದೇವರ+ಇರನು+ಎನ್ನುವ+ಅನುಮಿತಿಯ, ಸುಖಿಯದೇನೆನುವಂ=ಸುಖಿಯೂ+ಅದೇನು+ಅನುವಂ, ತನುಬಾಹ್ಯಕರಣದನುಭವಕಿಂತ=ತನು+ಬಾಹ್ಯ+ಕರಣದ+ಅನುಭವಕಿಂತ, ಸೂಕ್ಷ್ಮತರದನುಭವವ= ಸೂಕ್ಷ್ತರದ+ಅನುಭವವ, ನೀನರಸೋ=ನೀನು+ಅರಸೋ

ಅನುಮಿತಿಯ= ಅನುಮಾನವನ್ನು, ನೀಂ ಗೆಯ್ಕೆ= ನೀನು ಮಾಡಲು,

ನಿನಗೆ ಕಷ್ಟ ಬಂದಿದೆ, ಹಾಗಾಗಿ ಆ ದೇವರೇ ಇಲ್ಲ ಎಂದು ನೀನು ಅನುಮಾನ ಪಟ್ಟರೆ, ಸುಖಪಡುತ್ತಿರುವವನು ಏನು ಹೇಳುತ್ತಾನೆ ಎಂದು ನೋಡು. ಈ ಸುಖ ದುಃಖವೆನ್ನುವುದು ಕೇವಲ ಹೊರಗಿನ ಅನುಭವ. ಆದ್ದರಿಂದ ದೇಹ ಮನಸ್ಸು ಬುದ್ಧಿಗಳೆಂಬ ಬಾಹ್ಯ ‘ಕರಣ’ಗಳಿಗೂ ಅತೀತವಾದ ಸೂಕ್ಷತರವಾದ ಆನಂದದ ಅಥವಾ ಸುಖದ ಅನುಭವವನ್ನು ನೀನು ಹುಡುಕು ಎಂದು ಒಂದು ಸೂಚನೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ

ಬದುಕಿನ ಪಯಣದಲ್ಲಿ ಅತೀವ ಕಷ್ಟಗಳು, ಆ ಕಷ್ಟಗಳ ಕಾರಣವಾಗಿ ನಾವು ಯಾತನೆಯನ್ನು ಅನುಭವಿಸುವಾಗ, ‘ ಆ ದೇವರೇ ಇಲ್ಲ, ಇದ್ದಿದ್ದರೆ ನಮಗೆ ಇಷ್ಟೊಂದು ಕಷ್ಟ ಬರ್ತಿತ್ತಾ?" ಎಂದು ಹಳಹಳಿಸುವ ಎಷ್ಟೋ ಜನರನ್ನು ನಾವು ನೋಡಿಲ್ಲವೇ? ಅಷ್ಟೇ ಅಲ್ಲ ಕಷ್ಟಗಳು ತೀರಿ ಸುಖದ ದಿನಗಳು ಬಂದಾಗ ‘ ಅಬ್ಬ ದೇವರು ಕಣ್ಣು ಬಿಟ್ಟ, ನಮ್ಮ ಕಷ್ಟಗಳೆಲ್ಲಾ ತೀರಿತು " ಎಂದು ಸಮಾದಾನಪಟ್ಟುಕೊಳ್ಳುವವರಿಲ್ಲವೇ? ಹಾಗಾಗಿ, ಸಾಮನ್ಯ ಸಮೀಕರಣವೇನೆಂದರೆ. ನಮ್ಮ ಕಷ್ಟ ಸುಖಗಳಿಗೆ ಆ ದೇವರೇ ಭಾಧ್ಯನು. ಅವನೇ ಎಲ್ಲವನ್ನೂ ನೋಡಿಕೊಳ್ಳಬೇಕು. ಅವನು ನಮಗೆ ಒರಗಿಕೊಳಲು ಒಂದು ಕಂಬ.

ಆದರೆ ನಮ್ಮ ಜೀವನದ ಸಾಮಾನ್ಯ ಸುಖ ದುಃಖಗಳು ಕೇವಲ ಇಂದ್ರಿಯಗಳಿಗೆ ಸಂಬಂಧಿಸಿದ್ದು. ಕೆಲಕಾಲ ಇರುವ ದುಃಖಗಳು ಮತ್ತು ಕೆಲಕಾಲ ಇರುವ ಸುಖಗಳು. ವಸ್ತುಗಳಿಂದ ಸಿಗುವ ಮತ್ತು ನಾವು ಅನುಭವಿಸುವ ಸುಖ ದುಃಖಗಳು. ಆದರೆ ನಿಜವಾದ ಸುಖವೇನು ಎನ್ನುವುದಕ್ಕೆ ಮಾನ್ಯ ಗುಂಡಪ್ಪನವರು "ತನುಬಾಹ್ಯಕರಣದನುಭವಕಿಂತ" ಎಂದು ಈ ಮುಕ್ತಕದಲ್ಲಿ ಹೇಳುವಂತೆ ಆ ಸುಖದ ಅನುಭವ ಇಂದ್ರಿಯಾತೀತವಾಗಬೇಕು ಎನ್ನುತ್ತಾರೆ. ಆದರೆ ಇಂದ್ರಿಯಗಳಿಲ್ಲದೆ ಅನುಭವಿಸುವುದು ಹೇಗೆ? ಎನ್ನುವ ಪ್ರಶ್ನೆ ನಮ್ಮಲ್ಲಿ ಉದ್ಭವವಾಗುತ್ತದೆ.

ಯಾವುದೇ ವಸ್ತು ವಿಷಯ ಅಥವಾ ವ್ಯಕ್ತಿಗಳನ್ನು ಅಪೇಕ್ಷಿಸಿ, ಸಿಕ್ಕಾಗ ಸಂತಸ ಪಡುವುದು ಅಥವಾ ಸಿಗದಿದ್ದಾಗ ದುಃಖಪಡುವುದು ಮಾನವ ಸಹಜವಾದ ಭಾವ. ಆದರೆ ಅಪೇಕ್ಷೆಯೇ ಇಲ್ಲದೆ ಇದ್ದರೆ, ಬಂದದ್ದನ್ನು ಅಥವಾ ಸಿಕ್ಕದ್ದನ್ನು ಸಂವೇದನಾರಹಿತವಾಗಿ ಸ್ವೀಕರಿಸಿ, ಹಾಗೆ ಸಿಕ್ಕದ್ದು ಆ ಪರಮಾತ್ಮನ ಪ್ರಸಾದವೆಂದು ಅಂದುಕೊಂಡರೆ ಒಂದು ತೃಪ್ತಿಯ ಭಾವ ಬರುತ್ತದೆ. ಅಲ್ಲಿ ಆನಂದವಿರುತ್ತದೆ. ಅದೇ ಮಾನ್ಯ ಗುಂಡಪ್ಪನವರು ಹೇಳುವ " ಸೂಕ್ಷ್ಮತರದನುಭವ". ಅಂತಹ ಅನುಭವವನ್ನು ನಾವು ಪಡೆಯಲು ನಮ್ಮ ಮನಸ್ಸು ಬುದ್ಧಿ ಮತ್ತು ದೇಹಗಳನ್ನು ಸಿದ್ಧಪಡಿಸಿಕೊಳ್ಳಬೇಕು. ನಮ್ಮ ಆನಂದ ಇಂದ್ರಿಯಾತೀತವಾದ ಆತ್ಮಾನುಸಂಧಾನದಿಂದ ಉಂಟಾಗುವ ಆನಂದವಾಗಬೇಕು. ಹಾಗಾದರೆ ಅದು ನಿರಂತರ ಆನಂದವಾಗುತ್ತದೆ. ಅಂತಹ ಆನಂದವನ್ನು ಪಡೆಯಲು ನಾವು ಸಾಧನಾ ಸ್ವರೂಪದ ಪ್ರಯತ್ನ ಮಾಡಬೇಕು.

 

ರಸ ಚೆನ್ನುಡಿ

ನಮ್ಮ ಆಲೋಚನೆ, ನಮ್ಮ ನುಡಿ ಮತ್ತು ನಮ್ಮ ನಡೆ ಸಮನ್ವಯಗೊಂಡಾಗ

ನಮಗೆ ನಿಜವಾದ ಆನಂದದ ಅನುಭವವಾಗುತ್ತದೆ – ಅನಾಮಿಕ

 

ರಸಧಾರೆ – ೫೧೩

ಆವುದರಿನಾವಾಗ ದೈವ ತಾನೊಲಿದೀತೊ।
ಪೂರ್ವಿಕದ ನಿಯತಿಯನದೆಂದು ಸಡಲಿಪುದೋ ।।
ಭಾವಿಸುಕೃತವದೆಂದು ಪೂರ್ವದುರಿತಕೆ ಮಿಗಿಲೋ? ।
ದೈವಿಕರಹಸ್ಯವದು – ಮಂಕುತಿಮ್ಮ ।।

ಆವುದರಿನಾವಾಗ= ಆವುದರಿನ್+ಆವಾಗ, ತಾನೊಲಿದೀತೊ=ತಾನ್+ಒಲಿದೀತೊ, ನಿಯತಿಯನದೆಂದು=ನಿಯತಿಯನು+ಅದು+ಎಂದು, ಭಾವಿಸುಕೃತವದೆಂದು=ಭಾವಿ+ಸುಕೃತವು+ಅದೆಂದು,

ಆವುದರಿನ್= ಯಾವುದರಿಂದ, ಸುಕೃತ=ಪುಣ್ಯ ಕಾರ್ಯ, ಪೂರ್ವ=ಹಿಂದಿನ, ದುರಿತ=ಪಾಪ

ನಾವು ಏನು ಮಾಡಿದರೆ ಆ ದೈವ ನಮಗೆ ಒಲಿದೀತು? ಹಿಂದಿನಿಂದ ಪಡೆದುಬಂದ ಕರ್ಮ ಶೇಷವನ್ನು ಎಂದು ಸಡಿಲಿಸೀತು. ನಮ್ಮ ಮುಂದಿನ ಪುಣ್ಯವು ಹಿಂದಿನ ಪಾಪಕ್ಕಿಂತ ಎಂದು ಅಧಿಕವಾಗುವುದೋ ಯಾವುದೂ ನಮಗೆ ಅರ್ಥವಾಗುವುದಿಲ್ಲ. ಅದೊಂದು ದೈವೀಕ ರಹಸ್ಯವೆಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಮಗೆ ಸುಖ ಮತ್ತು ದುಃಖಗಳು, ನಮ್ಮ ಬಾಳಿನಲ್ಲಿ ಬರುತ್ತಲೇ ಇರುತ್ತವೆ. ಕೇವಲ ಸುಖ ದುಃಖಗಳಾದರೆ ಹೇಗೋ ಸಹಿಸಿಕೊಂಡುಬಿಡಬಹುದು. ಆದರೆ ಯಾತನಾಪೂರಿತವಾದ ಪ್ರಸಂಗಗಳನ್ನು ಎದುರಿಸಬೇಕಾದ ಪ್ರಸಂಗಗಳು ಬಂದಾಗ ‘ ಯಾವ ಪಾಪದ ಫಲವೋ’ ಎಂದು ನಾವು ನಮ್ಮ ಪೂರ್ವ ಕರ್ಮವನ್ನು ಹಳಿಯುತ್ತೇವೆ, ಮತ್ತೆ ಸುಖ ಬಂದಾಗ ಅದನ್ನು ಮರೆಯುತ್ತೇವೆ. ಇದು ಸಹಜ. ಆದರೆ ಯಾವ ಕರ್ಮದಿಂದ ಈ ಸುಖ ದುಃಖಗಳು ನಮಗೆ ಬರುತ್ತವೆ ಎನ್ನುವುದು ನಮಗೆ ಅರ್ಥವಾಗುವುದಿಲ್ಲ. ನಮ್ಮ ಪಾಪ ಕರ್ಮಗಳು ಎಷ್ಟಿವೆ ಮತ್ತು ಅವುಗಳ ಹಿಡಿತದಿಂದ ನಮ್ಮನ್ನು ಆ ದೈವ ಎಂದು ಮುಕ್ತವಾಗಿಸುತ್ತದೆ, ಎನ್ನುವುದಾಗಲೀ ಅಥವಾ ಎಷ್ಟು ಪುಣ್ಯ ಮಾಡಿದರೆ ಅಥವಾ ಯಾವ ಪುಣ್ಯಕಾರ್ಯ ಮಾಡಿದರೆ ನಮ್ಮ ಪಾಪದ ಗಂಟು ಕರಗುತ್ತದೆ ಎಂದು ನಮಗೆ ಎಂದಿಗೂ ಅರ್ಥವೇ ಆವಾಗುವುದಿಲ್ಲ ಅಲ್ಲವೇ? ಇದನ್ನೇ ನಮ್ಮ ಗುಂಡಪ್ಪನವರು "ದೈವಿಕರಹಸ್ಯವಿದು’ ಎಂದರು.

ವಿಪರ್ಯಾಸವೆಂದರೆ, ಜಗತ್ತಿನಲ್ಲಿ ಜನರೆಲ್ಲರೂ, ಪಾಪ ಪೂರಿತವಾದ ಪೂರ್ವ ಕರ್ಮದ ಅನುಸಾರವಾಗಿ ಕಷ್ಟಗಳು ಬಂದಾಗ, ಅವುಗಳನ್ನು ತೀರಿಸಿಕೊಳ್ಳಲು ಮಾಡುವ ಕೆಲಸಗಳು ಅವರಿಗರಿವಿಲ್ಲದೆಯೇ ಅವರಿಂದ ಮತ್ತಷ್ಟು ಪಾಪಗಳನ್ನು ಮಾಡಿಸುತ್ತದೆ. ಮಾಡಿದ ಪಾಪ ಕಳೆಯಲು ದೇವರಿಗೆ ‘ಲಂಚ’ಕೊಡುವ ಪಾಪ ಮಾಡುವವರಿಲ್ಲವೇ? ಮಾಡಬಾರದ ಕೆಲಸವನ್ನು ಮಾಡಿದರೆ ಪಾಪ. ‘ಕರ್ತವ್ಯಂ’ ಎಂದು ಹೇಳಲ್ಪಡುವ ಮಾಡಲೇಬೇಕಾದ ಕೆಲಸವನ್ನು ಮಾಡಿದರೆ’ ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ"(ಭ ಗೀ ಸಾಂಖ್ಯ ಯೋ-೨೮) ಎಂದು ಶ್ರೀ ಕೃಷ್ಣ ಹೇಳುವಂತೆ ನಾವೂ ಸಹ ಜೀವನದ ಯುದ್ಧದಲ್ಲಿ ಸುಖ ಬಂದಾಗ ಉಬ್ಬದೆ ದುಃಖ ಬಂದಾಗ ಕುಗ್ಗದೆ ಪಾಲಿಗೆ ಬಂದ ಕೆಲಸಗಳನ್ನು ‘ ಕರ್ತವ್ಯ’ ಎಂದು ಮಾಡಿದರೆ ಸುಖ ದುಃಖಗಳಿಂದ ಉಂಟಾಗುವ ಮನೋ ವಿಕಾರಗಳಿಲ್ಲದೇ ‘ರಕ್ತಿ’ಯಲ್ಲೂ ವಿರಕ್ತ ಭಾವದಿಂದಿರಬಹುದು.

ನಮ್ಮ ಬದುಕಿನ ದೈವೀ ವಿನ್ಯಾಸವನ್ನು ( divine design) ಅರ್ಥಮಾಡಿಕೊಳ್ಳುವುದು ಅಸಾಧ್ಯ. ‘ ಆಚಾರವೇ ಸ್ವರ್ಗ ಅನಾಚಾರವೇ ನರಕ’ ಎಂದು ಬಸವಣ್ಣನವರು ಹೇಳಿದಂತೆ ಅನ್ಯರಿಗೆ ನೋವ ನೀಡದ ಕೃತ್ಯಗಳೇ ಪುಣ್ಯವು ಮತ್ತು ಪರ ಪೀಡನೆಯೇ ಪಾಪ. ಈ ಮೂಲ ತತ್ವವನ್ನು ಮನವರಿಕೆ ಮಾಡಿಕೊಂಡು ನಮ್ಮ ಸತ್ಕಾರ್ಯಗಳಿಂದ ಸಂಚಿತ ಪಾಪದ ಮೂಟೆಯನ್ನು ಕರಗಿಸಿಕೊಳ್ಳಬೇಕು. ಮಾಡಿದ ಕೆಲಸವನ್ನೆಲ್ಲಾ ‘ಪರಮಾತ್ಮ’ನಿಗೆ ಸಮರ್ಪಿಸಿ ‘ಬಂದದ್ದೆಲ್ಲಾ ಬರಲಿ ಆ ಗೋವಿಂದನ ದಯೆ ಇರಲಿ’ ಎಂದು ಇರಲಾದರೆ ಶಾಂತವಾಗಿರಬಹುದು, ಅನಂದವಾಗಿರಬಹುದು.

 

ರಸ ಚೆನ್ನುಡಿ

ಜವಾಬುದಾರಿಯನ್ನು ಎದುರಿಸುವ ಮತ್ತು ಹೊರುವ ಗುಣವೇ
ಪ್ರತೀ ಯಶಸ್ವೀ ವ್ಯಕ್ತಿಯ ಯಶಸ್ಸಿನ ಗುಟ್ಟು- ಅನಾಮಿಕ