RSS

Monthly Archives: ನವೆಂಬರ್ 2013

ರಸಧಾರೆ – ೫೩೦

ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।
ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।
ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।
ಸಣ್ಣತನ ಸವೆಯುವುದು – ಮಂಕುತಿಮ್ಮ ।।

ಮನಗಳರಿವಷ್ಟು=ಮನಗಳು+ಅರಿವಷ್ಟು, ನಿನ್ನಳಿಸುವ =ನಿನ್ನ+ಅಳಿಸುವ, ನಗಿಸುವೆಲ್ಲ =ನಗಿಸುವ +ಎಲ್ಲ, ನಿನ್ನಂಶ=ನಿನ್ನ +ಅಂಶ, ನೀನೇರಿದಂತೆ= ನೀನು+ಏರಿದಂತೆ,

ಉನ್ನತಿ= ಉತ್ತರೋತ್ತರ ಬೆಳವಣಿಗೆ,

ನೀನು ಕಾಣುವಷ್ಟು, ನೀನು ಕೇಳುವಷ್ಟು ಮತ್ತು ನಿನ್ನ ಮನಸ್ಸು ಎಷ್ಟನ್ನು ಊಹಿಸಬಹುದೋ ಅಷ್ಟು ನಿನ್ನ ಜಗತ್ತಾಗುತ್ತದೆ. ನಿನ್ನನ್ನು ಕಣ್ಣೀರಿಡಿಸುವ ಮತ್ತು ನಗಿಸುವ ಎಲ್ಲ ಅಂಶಗಳೂ ನಿನ್ನವೇ ಆಗಿರುತ್ತದೆ. ಅವುಗಳನ್ನು ಮೀರಿ ನೀನು ಬೆಳೆದರೆ ನಿನ್ನ ಜಗತ್ತು ವಿಶಾಲವಾಗಿ ನಿನ್ನಲ್ಲಿ ಸಣ್ಣತನ ಸವೆದು ನೀನೂ ಸಹ ಬೆಳೆಯುತ್ತೀಯೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಮಗೆ ಎಷ್ಟು ‘ಗೊತ್ತು’ ಅಂದರೆ ನಾವು ಎಷ್ಟು ದೂರ ನೋಡಬಹುದೋ ಅಥವಾ ಎಷ್ಟು ದೂರದ ಶಬ್ಧ ಕೇಳಬಹುದೋ ಅಥವಾ ನಮ್ಮ ಮನಸ್ಸು ಎಷ್ಟು ದೂರ ತೀಕ್ಷ್ಣವಾಗಿ ಯೋಚಿಸಬಲ್ಲದೋ ಅಷ್ಟು. ನಮ್ಮ ಅರಿವಿಗೆ, ನಮ್ಮ ಕಾಣುವ ಕೇಳುವ ಮತ್ತು ಯೋಚಿಸುವ ಕ್ಷಮತೆಯ ಮಿತಿಯುಂಟು. ನಮ್ಮ ಅನುಭವಕ್ಕೆ ಬರುವುದೆಲ್ಲವೂ ನಮ್ಮ ನೋಟದ, ಕೇಳಿಕೆಯ ಮತ್ತು ಆಲೋಚನೆಯ ಪರಿಧಿಯಲ್ಲೇ ಇರುತ್ತದೆ. ಅಷ್ಟೇ ನಮ್ಮ ಪ್ರಪಂಚ. ನಮ್ಮ ನೋವು ನಲಿವುಗೆಳೆಲ್ಲವೂ ಆ ಅನುಭವಗಳಿಂದಲೇ ಆಗುತ್ತದೆ. ಹಾಗಾಗಿ ನಮ್ಮ ನಗು, ಅಳು, ಆನಂದ, ಸಂತೋಷ ಇವುಗಳೆಲ್ಲಕ್ಕೂ ನಮ್ಮ ಅಂತರಂಗದ ಭಾವಗಳೇ ಕಾರಣ.

‘ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ಸಣ್ಣತನ ಸವೆಯುವುದು’ ಎಂದು ಮಾನ್ಯ ಗುಂಡಪ್ಪನವರು ಹೇಳುವಂತೆ ನಾವು ಬೆಳೆದರೆ ನಮ್ಮ ಜಗತ್ತೂ ಬೆಳೆದು ವಿಸ್ತಾರವಾಗುತ್ತದೆ. ಆ ದಿಕ್ಕಿನಲ್ಲಿ ನಮ್ಮ ಪ್ರಯಾಣಕ್ಕೆ ನಮ್ಮ ಪೂರ್ವಜರು ಬಹಳ ಒಳ್ಳೆಯ ಮಾರ್ಗಗಳನ್ನು ಸೂಚಿಸಿದ್ದಾರೆ. " ಭಧ್ರಂ ಕರ್ಣೇಭಿ: ಶ್ರುಣುಯಂ ದೇವಾಃ, ಭಧ್ರಂ ಪಶ್ಯೇಮಾಕ್ಷಿಭಿರ್ಯಜತ್ರಾಃ, ಸ್ಥಿರೈರಂಗೈರಸ್ತುಷ್ಟುವಾಗುಂ ಸಸ್ತನೂಭಿ: ವ್ಯಶೇಮ ದೇವಹಿತಂ ಯದಾಯು:" ನಮ್ಮ ಕಣ್ಣುಗಳು ಒಳ್ಳೆಯದನ್ನೇ ನೋಡಲಿ ನಮ್ಮ ಕಿವಿಗಳು ಒಳ್ಳೆಯದನ್ನೇ ಕೇಳಲಿ ನಮ್ಮ ಅಂಗಾಂಗಗಳು ಸ್ಥಿರವಾಗಿರಲಿ ಮತ್ತು ನಮ್ಮ ಆಯಸ್ಸನ್ನು ದೇವಹಿತಕ್ಕಾಗಿಯೇ ಉಪಯೋಗಿಸೋಣ ಎನ್ನುವ ಉದಾತ್ತ ಆಶಯಗಳನ್ನು ಅನುಸರಿಸಲು ನಮಗೆ ನಮ್ಮ ಸನಾತನ ಹೇಳಿಕೊಡುತ್ತದೆ.

ಇದನ್ನು ನಾವು ಪಾಲಿಸಿದಾಗ ಅಪ್ರಯತ್ನಪೂರ್ವಕವಾಗಿಯೇ ನಮ್ಮ ಮನಸ್ಸು ಬುದ್ಧಿಗಳು ಶುದ್ಧವಾಗುತ್ತಾ ಹೋಗುತ್ತವೆ ಮತ್ತು ಮಾನ್ಯ ಗುಂಡಪ್ಪನವರು ಹೇಳುವಂತೆ ನಮ್ಮಲ್ಲಿ ಸಣ್ಣತನ ತೊಲಗಿ ಉದ್ದಾತ್ತವಾದಂತ ಭಾವಗಳು ಮೂಡುತ್ತವೆ. ಸಂಕುಚಿತತೆಯನ್ನು ಬಿಟ್ಟು ವಿಶಾಲತೆಯೇ ನಮ್ಮ ಸ್ವಭಾವವಾದಾಗ ಇಡೀ ಜಗತ್ತೇ ಒಂದು ಕುಟುಂಬವೆನ್ನುವ ತತ್ವ ಸ್ಥಿರವಾಗುತ್ತದೆ. ಅಂತಹ ಸ್ಥಿತಿಯಲ್ಲಿ ಆನಂದ ಸುಖ ಸಂತೋಷಗಳು ಅನಾಯಾಸವಾಗಿ ನಮ್ಮದಾಗುತ್ತವೆ.

Advertisements
 

ರಸ ಚೆನ್ನುಡಿ

ನಾವು ಕಲಿಯಬೇಕಾದರೆ, ಕೇಳಬೇಕು. ಕೇಳಬೇಕಾದರೆ ಮೌನವಾಗಿರಬೇಕು
ಮಾತುಗಳು ಕೆಲವನ್ನು ಹೇಳಿದರೆ, ಮೌನ ಹಲವನ್ನು ತಿಳಿಸಿಕೊಡುತ್ತದೆ – ಅನಾಮಿಕ

 

ರಸ ಚೆನ್ನುಡಿ

ಕಷ್ಟದಲಿ ಕುಗ್ಗದಿರಬೇಕು – ಉತ್ಕ್ರುಷ್ಟದಲಿ ಹಿಗ್ಗದಿರಬೇಕು.

ಸದಾ ಸಮತುಲನೆಯಲ್ಲಿರಬೇಕು ಏಕೆಂದರೆ ಯಾವ ಸ್ಥಿತಿಯೂ ಶಾಶ್ವತವಲ್ಲ- ಅನಾಮಿಕ

.

 

ರಸಧಾರೆ – ೫೨೯

ಪರದೈವವನು ತೊರೆಯೆ ಗತಿ ನರನಿಗಿಲ್ಲ ದಿಟ ।
ನರನಿಲ್ಲದಿರೆ ದೇವನನು ಕೇಳ್ವರಾರು ।।
ಪುರುಷತೆಯೆ ಸೇತುವೆ ಮೃಗತ್ವದಿಂ ದಿವ್ಯತೆಗೆ ।
ಮುರಿಯದಿರು ಸೇತುವೆಯ -ಮಂಕುತಿಮ್ಮ।।

ನರನಿಗಿಲ್ಲ = ನರನಿಗೆ +ಇಲ್ಲ, ನರನಿಲ್ಲದಿರೆ=ನರನು+ಇಲ್ಲದಿರೆ, ಕೇಳ್ವರಾರು=ಕೇಳ್ವರು +ಆರು,

ಗತಿ=ದಾರಿ, ದಿಟ=ಸತ್ಯ

ದೇವರನ್ನು ಬಿಟ್ಟು ಮನುಷ್ಯನಿಗೆ ಬೇರೆ ಗತಿಯೇ ಇಲ್ಲ. ಮನುಷ್ಯನಿಲ್ಲದಿದ್ದರೆ ಆ ದೇವರನ್ನು ಕೇಳುವವರು ಯಾರು? ಜಗತ್ತನ್ನು ಸರ್ವರೀತಿಯಲ್ಲೂ ಆವರಿಸಿಕೊಂಡಿರುವ ಆ ಪರಮ ಶಕ್ತಿಯೇ ಪಶುತ್ವಕ್ಕೂ ದೈವತ್ವಕ್ಕೂ ನಡುವೆ ಇರುವ ಸೇತುವೆ. ಆ ಸೇತುವೆಯನ್ನು ಮುರಿಯದೆ ಇರು ಎಂದು ಜಗತ್ತಿನಲ್ಲಿ ಮನುಷ್ಯನಿಗೂ ಮತ್ತು ಆ ದೇವರೆಂಬ ತತ್ವಕ್ಕೂ ಇರುವ ಸಂಬಂಧವನ್ನು ವಿವರಿಸುತ್ತಾ, ಈ ಸಂಬಂಧವನ್ನು ಮುರಿಯದಿರು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಈ ಭೂಮಿಯಮೇಲೆ ಪಶುವಿನಂತೆ ಅಲೆಮಾರಿಯಾಗಿದ್ದ ಮನುಷ್ಯನ ಅತ್ಯದ್ಭುತವಾದ ಆವಿಷ್ಕಾರ ‘ದೇವರು’ ಎಂಬ ತತ್ವ. ತನ್ನ ಮಿತಿಗಳನ್ನು ಅರಿತು ತನಗಿಂತ ಉನ್ನತ ಮತ್ತು ಅಮಿತ ಶಕ್ತಿಯ ಒಂದು ತತ್ವ ತನ್ನನ್ನು ಕಾಯುತ್ತದೆ, ತನ್ನ ಅವಶ್ಯಗಳನ್ನು ಪೂರೈಸುತ್ತದೆ, ತನ್ನ ಅಸ್ತಿತ್ವಕ್ಕೆ ಪೂರಕವಾಗಿದೆ ಎಂದು ಮನಗಂಡ ಮನುಷ್ಯ ಆ ಶಕ್ತಿಗೆ ‘ದೇವರು’ ಎಂದು ಕರೆದ. ನಮ್ಮ ಮನುಷ್ಯನ ಅವಶ್ಯಕತೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದಂತೆ ಈ ‘ದೇವರು’ ಎಂಬ ತತ್ವಕ್ಕೆ ಇವನು ಅಂಟು ಮತ್ತು ನಂಟು ಹೆಚ್ಚಾಗುತ್ತಾ ಹೋಯಿತು. ಇವನ ವಿಚಾರ ಬೆಳೆದಂತೆಲ್ಲಾ ‘ದೇವರು’ ಎಂಬ ತತ್ವಕ್ಕೆ ಹೊಸ ಹೊಸ ಆಯಾಮಗಳು ಹುಟ್ಟಿಕೊಳ್ಳುತ್ತಾ ಹೋದವು ಮತ್ತು ಈ ಪ್ರಕ್ರಿಯೆ ಇಂದಿಗೂ ಮುಂದುವರೆಯುತ್ತಾ ಇದೆ. ಅಲೆಮಾರಿಯಾಗಿದ್ದ ಮನುಷ್ಯನ ಜೀವನವು ಈ ‘ ದೇವರು’ ಎಂಬ ತತ್ವದಿಂದ ಬದಲಾಗುತ್ತಾ ಹೋಯಿತು. ಹೊಸ ಹೊಸ ವಿಚಾರಗಳಿಗನುಗುಣವಾಗಿ ಹೊಸ ಹೊಸ ಮತಗಳು ಧರ್ಮಗಳು ಮತ್ತು ದೇವರುಗಳು ಹುಟ್ಟಿಕೊಳ್ಳತೊಡಗಿದವು. ಈ ಬದಲಾವಣೆಯಿಂದ ಮನುಷ್ಯನ ಸಂಸ್ಕೃತಿ ಸಂಸ್ಕಾರಗಳು ವಿಕಾಸಗೊಳ್ಳತೊಡಗಿದವು. ಮನುಷ್ಯ ಮತ್ತು ದೇವರಿಬ್ಬರ ಮಧ್ಯೆ ಒಂದು ಅವಿನಾಭಾವ ಸಂಬಂಧ ಸ್ಥಿರವಾಯಿತು. ಮಾನ್ಯ ಗುಂಡಪ್ಪನವರು ಹೇಳುವಂತೆ ಅವನಿಲ್ಲದೆ ಇವನಿಲ್ಲ ಮತ್ತು ಇವನಿಲ್ಲದೆ ಅವನಿಲ್ಲ ಎಂಬ ಹಂತಕ್ಕೆ ಬಂದು ತಲುಪಿತು.

ಮನುಷ್ಯನ ಅಪೇಕ್ಷೆ ಆಕಾಂಕ್ಷೆಗಳಿಗೆ ಮಿತಿಯೇ ಇಲ್ಲ. ತನಗೆ ಯಾವುದು ಸಿಗುವುದೋ ಯಾವುದು ಸಿಗುವುದಿಲ್ಲವೋ ಇವನಿಗೆ ಗೊತ್ತಾಗುವುದೇ ಇಲ್ಲ. ಹಾಗಾಗಿ ಇವನಿಗೆ ಭಯ ಇರುತ್ತದೆ. ಮನುಷ್ಯನ ಎಲ್ಲಾ ಭಯಗಳನ್ನೂ ಎರಡು ಗುಂಪಿಗೆ ಹಾಕಿಬಿಡಬಹುದು. ಒಂದು "ತನ್ನಲ್ಲಿರುವುದು ಕಳೆದುಹೋಗುವ ಭಯ" ಎರಡು " ತಾನು ಬಯಸಿದ್ದು ಸಿಗದೇ ಹೋಗುವ ಭಯ" ಈ ಎರಡು ಭಯಗಳ ಕಾರಣದಿಂದಾಗಿಯೇ ಇವನಿಗೆ ದೇವರು ಬೇಕು. ಭಯವಿಲ್ಲದ ಸ್ಥಿತಿಗೆ ತಲುಪಿದರೆ ಇವನಿಗೆ ದೇವರು ಬೇಕಾಗುವುದಿಲ್ಲ. ಆದರೆ ಭಯ ಹೋಗುವುದಿಲ್ಲವಲ್ಲ!!!! ಈ ದೇವರು ಎಂಬುದು ಹಸೀ ಗಾಯದ ಮೇಲೆ ಹಾಕಿದ ಬ್ಯಾಂಡೇಜ್ ತರಹ. ಗಾಯ ಮಾಗದೆ ಅದನ್ನು ತೆಗೆಯಲು ಆಗುವುದಿಲ್ಲ. ತೆಗೆದರೆ ಮತ್ತೆ ಹುಣ್ಣು ವ್ರಣವಾಗುತ್ತದೆ.ಗಾಯ ಮಾಗಿದರೆ ಬ್ಯಾಂಡೇಜ್ ತಾನೇ ತಾನಾಗಿ ಕಳಚಿಕೊಳ್ಳುತ್ತದೆ. ನಮಗಿರುವುದು ‘ಭಯ’ವೆಂಬ ಗಾಯ ಮತ್ತು ಅದರ ಮೇಲಂಟಿಸಿರುವುದು ‘ದೇವರು’ ಎಂಬ ಬ್ಯಾಂಡೇಜ್. ನಮಗೆ ಭಯ ಹೋಗುವುದಿಲ್ಲ ಮತ್ತು ನಾವು ದೇವರನ್ನು ಬಿಡಲೂ ಸಾಧ್ಯವಿಲ್ಲ.

ಆದರೆ ಈ ದೇವರು ಎಂಬ ತತ್ವ ನಮಗೆ ಬೇಕೇ ಎಂದು ಆಲೋಚಿಸಿದರೆ, "ಖಂಡಿತ ಬೇಕು" ಎನ್ನುವ ಉತ್ತರ ಸಿಗುತ್ತದೆ. ಏಕೆಂದರೆ ಈ ತತ್ವದ ಆಧಾರದ ಮೇಲೆಯೇ ಜಗತ್ತಿನ ನಾಗರೀಕತೆ ಬೆಳೆದು ನಿಂತಿದೆ. ಒಂದು ವ್ಯವಸ್ಥಿತ ಸಮಾಜದ ನಿರ್ಮಾಣಕ್ಕೆ ಈ ತತ್ವ ಬಹಳ ಉಪಕಾರಿಯಾಗಿದೆ. ಹಲವಾರು ಅಚಾರಗಳು, ಆಚರಣೆಗಳು, ಸಂಪ್ರದಾಯಗಳು ಬೆಳೆದು ಬಂದಿವೆ. ಈ ಸೃಷ್ಟಿಗೆ ಕಾರಣವಾದ ಪರತತ್ವವನ್ನು ಅರಿಯುವ ಹಾದಿಯಲ್ಲಿ ಇವೆಲ್ಲ ಪೂರಕವಾಗಿವೆ. ಹಾಗಾಗಿಯೇ ಮಾನ್ಯ ಗುಂಡಪ್ಪನವರು ‘ ಪುರುಷತೆಯೆ ಸೇತುವೆ ಮೃಗತ್ವದಿಂ ದಿವ್ಯತೆಗೆ ‘ ಎಂದು ಹೇಳಿದರು. ಪರಮಾತ್ಮ ತತ್ವವನ್ನು ಅರಿಯಲು ನಮಗೆ ಈ ‘ದೇವರು’ ಎಂಬುದು ಸೇತುವೆ ಇದ್ದಹಾಗೆ. ಇದನ್ನು ಬಿಟ್ಟರೆ ನಮ್ಮ ಬದುಕುಗಳಲ್ಲಿ ಒಂದು ‘ಶೂನ್ಯ’ ತೆ
(vacuum) ಉಂಟಾಗುತ್ತದೆ. ಅಲ್ಲಿ ಬದುಕು ತೀರ ಅಸಹನೀಯವಾಗುತ್ತದೆ. ಹಾಗಾಗಿ ನಮಗೆ ದೇವರು ಬೇಕು ಮತ್ತು ಆ ದೇವರಿಗೆ ನಾವು ಬೇಕು. ನಾವು ಈ ದೇವರ ಮೂಲಕ, ಅವನಿಗೆ ಸಲ್ಲಿಸುವ ಪೂಜೆ ಪುನಸ್ಕಾರಗಳ ಮೂಲಕ, ನಾವು ಮಾಡುವ ವ್ರತ ಧ್ಯಾನ ವಿಧಿ ಮುಂತಾದವುಗಳ ಮೂಲಕವೇ ಆ ಪರತತ್ವವನ್ನು ಅರಿತುಕೊಳ್ಳಲು ಸಾಧ್ಯ. ಹಾಗಾಗಿ ದೇವರಲ್ಲಿ ನಂಬಿಕೆ ಇರಬೇಕು. ಆದರೆ ಅಲ್ಲಿಯೇ ನಿಲ್ಲದೆ ಮುಂದೆ ಹೆಜ್ಜೆ ಇಡುತ್ತಾ ಅಂತಿಮವಾದ ಆ ಪರತತ್ವವನ್ನು ಅರಿತುಕೊಳ್ಳುವ ಪ್ರಯತ್ನಪಡಬೇಕು.

 

ರಸ ಚೆನ್ನುಡಿ

ನಾವು ನಮ್ಮ ಸಾಧನೆಯ ಮಿತಿಯನ್ನು ಮುಟ್ಟಿದ್ದೇವೆ ಎಂದು ನಮಗನ್ನಿಸಿದರೆ

ಅಲ್ಲಿಂದಲೇ ನಮ್ಮ ನಿಜವಾದ ಪ್ರಯಾಣ ತೊಡಗುತ್ತದೆಂದು ಭಾವಿಸಬೇಕು – ಅನಾಮಿಕ

 

ರಸಧಾರೆ – ೫೨೮

ಭಕ್ತಿ ನಂಬುಗೆ ಸುಲಭ; ಭಜನೆ ವಂದನೆ ಸುಲಭ ।
ತತ್ವಶೋಧನೆ ಕಷ್ಟ; ಮತಿಕಾರ್ಯ ಕಷ್ಟ ।।
ಸುತ್ತುವುದು ಗಿರಿಸುತ್ತ ಸುಳುವೆಂದು ಲೋಕಜನ ।
ಹತ್ತುವನು ತಾಪಸಿಯೋ – ಮಂಕುತಿಮ್ಮ ।।
ಸುಳುವೆಂದು=ಸುಳುವು+ಎಂದು

ತತ್ವಶೋಧನೆ=ತತ್ವವನ್ನು ಹುಡುಕುವುದು, ಮತಿಕಾರ್ಯ= ಬುದ್ಧಿಯ ಕೆಲಸ, ಸುಳುವೆಂದು=ಸುಲಭವೆಂದು,

ಭಕ್ತಿ, ಭಜನೆ, ಧ್ಯಾನಗಳನ್ನು ಮಾಡುವುದು ಸುಲಭದ ಕೆಲಸ. ಆದರೆ ಪರತತ್ವವನ್ನು ಹುಡುಕುವುದು ಮತ್ತು ಆ ಹುಡುಕುವುದಕ್ಕಾಗಿ ನಡೆಸುವ ಬುದ್ಧಿಯ ಕಾರ್ಯ ಇನ್ನೂ ಕಷ್ಟತರವಾದದ್ದು. ಸುಲಭವೆಂದು ಬೆಟ್ಟವನ್ನು ಸುತ್ತುತ್ತಾರೆ ಲೋಕದ ಜನ. ಆದರೆ ಹತ್ತಿ ಸಾಧಿಸುವವನೇ ತಾಪಸಿ ಎಂದು ಭಕ್ತಿ ಮಾರ್ಗವನ್ನು ಮತ್ತು ಪರತತ್ವವನ್ನು ಅರಿಯುವ ಮಾರ್ಗವನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಆಧ್ಯಾತ್ಮ ಸಾಧನೆ ಮಾರ್ಗದಲ್ಲಿ ಭಕ್ತಿ, ಭಜನೆ, ವಂದನೆ, ಆಲಯ ದರ್ಶನ, ತೀರ್ಥಕ್ಷೇತ್ರಗಳಿಗೆ ಹೋಗುವಿಕೆ, ವ್ರತ, ಹೋಮ ಹವನ ಧ್ಯಾನ, ಯೋಗ, ತಪಸ್ಸು ಎಲ್ಲವೂ ಬೇರೆ ಬೇರೆ ಹಂತಗಳು. ಕೆಲವು ಸುಲಭ ಮಾರ್ಗಗಳು, ಕೆಲವು ಕ್ಲಿಷ್ಟ ಮಾರ್ಗಗಳು. ಕೆಳಹಂತದಿಂದ ಮೇಲಿನ ಸ್ಥರಕ್ಕೆ ಹೋಗುವುದೇ ಆಧ್ಯಾತ್ಮ ಸಾಧನೆ. ಪ್ರಾಥಮಿಕ ಶಾಲೆಗೆ ಹೋದ ಮಕ್ಕಳು ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಮಾಡುವುದಿಲ್ಲವೇ, ಹಾಗೆ. ಆದರೆ ಪ್ರಾಥಮಿಕ ಶಾಲೆಗೆ ಸೇರಿದ ಎಷ್ಟು ಮಕ್ಕಳು ಸ್ನಾತಕೋತ್ತರ ಹಂತಕ್ಕೆ ತಲುಪುತ್ತಾರೆ ಎನ್ನುವುದು ಪ್ರಶ್ನೆ. ಭಕ್ತಿ ಎನ್ನುವುದು ನಂಬಿಕೆಯ ವಿಷಯ.

ಈ ಭಕ್ತಿಯ ವಿಷಯದಲ್ಲಿ ಮನುಷ್ಯನ ಮನಸ್ಸನ್ನು ಅರಿಯುವುದು ಬಹಳ ಕಷ್ಟ. ಒಂದು ದಿನವೂ, ದೇವಸ್ತಾನಕ್ಕೆ ಹೋಗದ, ಕೈ ಮುಗಿಯದ, ಯಾವ ವ್ರತ ನೇಮಗಳನ್ನೂ ಮಾಡದವನಿಗೆ ಭಕ್ತಿಯಿಲ್ಲವೆಂದಲ್ಲ. ಅಂತರಂಗವನ್ನು ಬಗೆದು ನೋಡಿದರೆ ಮಾತ್ರ ಅರ್ಥವಾಗುತ್ತದೆ ಯಾರ ಭಕ್ತಿ ಎಷ್ಟು ಎಂದು. ಆದರೆ ಸಾಮಾನ್ಯವಾಗಿ ದೇವಸ್ತಾನಕ್ಕೆ ಹೋಗುವವರು, ಮನೆಯಲ್ಲಿ ಪೂಜೆ ಪುನಸ್ಕಾರಗಳನ್ನು ಆಚರಿಸುವವರ ಮನದಲ್ಲಿ ಕಿಂಚಿತ್ ಭಕ್ತಿ ಕೆಲಕಾಲಕ್ಕಾದರೂ ಇರುತ್ತದೆ. ಇದು ಸುಲಭದ ಮಾರ್ಗ. ಆದರೆ ಭಕ್ತಿಯ ಗುರಿಯಾದ ತತ್ವಶೋಧನೆಯ ಕೆಲಸ ಬಹಳ ಕಷ್ಟವಾದ ಕೆಲಸ.

ಭಕ್ತಿಯ ಮಾರ್ಗ ಬಹಳ ಸುಲಭದ ಮಾರ್ಗ. ಲೌಕಿಕ ಜೀವನದಲ್ಲಿ ಮುಳುಗಿರುವವರಿಗೆ ಪಾರಮಾರ್ಥಕ್ಕೆ ಸಮಯ ಸಿಗುವುದಿಲ್ಲ. "ಹರಿದಾಡುವಂತಾ ಮನವ ನಿಲಿಸುವುದು ಬಲು ಕಷ್ಟ" ಎಂದು ಹರಿದಾಸರು ಹಾಡಿದ್ದಾರೆ.ಅಂತಹ ಮನಸ್ಸನ್ನು ಏಕಾಗ್ರತೆಯಿಂದ ನಿಲಿಸಿ ಜಗತ್ಸೃಷ್ಟಿಗೆ ಕಾರಣ, ಕರಣ ಮತ್ತು ಕರ್ತೃವೂ ಆದ, ಆ ಪರ ತತ್ವವನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟದ ಮತ್ತು ಕಠಿಣ ಕೆಲಸ. ಮೊದಲಿನದು ಬೆಟ್ಟವನ್ನು ಸುತ್ತುವಂತಾ ಕೆಲಸವಾದರೆ ಎರಡನೆಯದು ಬೆಟ್ಟವನ್ನು ಹತ್ತುವ ಕೆಲಸ. ಯಾರಿಗೆ ಯಾವುದು ಹಿತವೊ ಅದನ್ನು ಅವರವರು ಮಾಡುತ್ತಾರೆ. ಕಷ್ಟಪಟ್ಟರೆ ಬೆಟ್ಟ ಹತ್ತಬಹುದು. ಇಲ್ಲದಿದ್ದರೆ ಅದರ ತಳದಲ್ಲಿಯೇ ತೃಪ್ತಿಪಡಬಹುದು.

 

ರಸ ಚೆನ್ನುಡಿ

ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.

ಇಲ್ಲದಿದ್ದರೆ ಮನಸ್ಸನ್ನು ದೃಢ ಮತ್ತು ಶುದ್ಧವಾಗಿಟ್ಟುಕೊಳ್ಳಲು ಸಾಧ್ಯವಾಗದೆ ಹೋಗಬಹುದು – ಗೌತಮ ಬುದ್ಧ