RSS

Monthly Archives: ಡಿಸೆಂಬರ್ 2013

ರಸ ಚೆನ್ನುಡಿ

ನಮಗೋಸ್ಕರ ನಾವು ಪಡೆದದ್ದು ನಮ್ಮೊಡನೆ ಅಂತ್ಯವಾಗುತ್ತದೆ.
ಪರರಿಗಾಗಿ ನಾವು ಮಾಡಿದ್ದು ಅಮರವಾಗುಳಿಯುತ್ತದೆ – ಅನಾಮಿಕ

Advertisements
 

ರಸಧಾರೆ – ೫೪೬

ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ ।
ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್ ।।
ಧೀಯಂ ಪ್ರಚೋಸಿಸೆಂದನುದಿನದಿ ಬೇಡಿದರು ।
ಶ್ರೇಯಸ್ಸು ಧೀಮಹಿಮೆ -ಮಂಕುತಿಮ್ಮ ।।
ಶ್ರೀಯನಾಯುವ = ಶ್ರೀಯನು+ಆಯುವ, ಪರಮಮಂತ್ರವೆಂದಾರ್ಯರ್=ಪರಮ+ಮಂತ್ರವು +ಎಂದು+ಆರ್ಯರ್. ಪ್ರಚೋಸಿಸೆಂದನುದಿನದಿ=ಪ್ರಚೋದಿಸು+ಎಂದು+ಅನುದಿನದಿ,

ಶ್ರೀ=ಶ್ರೇಯಸ್ಸು, ಆಯುವ=ಬಯಸುವ, ಬೇಡಿರ್ದೊಡಂ=ಬೇಡುವಾಗ, ಆರ್ಯರ್= ಸನಾತನದ ಪೂರ್ವಜರು, ರ್ಧೀಯಂ=ಬುದ್ಧಿಯನ್ನು, ಪ್ರಚೋದಿಸು=ತೀಕ್ಷ್ನಗೊಳಿಸು, ಚೂಪಾಗಿಸು, ಅನುದಿನದಿ=ಪ್ರತಿನಿತ್ಯವೂ.

ಶ್ರೇಯಸ್ಸನ್ನು ಬಯಸಿ ಅದರಿಂದ ಬಲವನ್ನು ಮತ್ತು ಯಶಸ್ಸನ್ನು ಬೇಡುವುದಕ್ಕೆ ‘ಗಾಯತ್ರಿ’ಮಂತ್ರವನ್ನೇ ಪರಮೋಚ್ಚ ಮಂತ್ರವೆಂದು ಕಂಡುಕೊಂಡ ನಮ್ಮ ಸನಾತನದ ಪೂರ್ವಜರು, ನಮ್ಮ ಬುದ್ಧಿ ತೀಕ್ಷ್ನಗೊಳ್ಳಲಿ, ಮತ್ತಷ್ಟು ಮೊನಚಾಗಲಿ, ಎಂದು ಪ್ರತಿನಿತ್ಯವೂ ಬೇಡಿದರು. ಏಕೆಂದರೆ ಧೀ ಎಂದರೆ ಉತ್ತಮ ಬುದ್ಧಿಮತ್ತೆಯೇ ಮನುಷ್ಯನ ಶ್ರೇಯಸ್ಸಿಗೆ ದಾರಿ ಎಂದು ‘ಧೀ’ ಮಹಿಮೆಯನ್ನು ಈ ಮುಕ್ತಕದಲ್ಲಿ ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.

ಜ್ಞಾನವು ತನ್ನಷ್ಟ್ತಕ್ಕೆ ತಾನೇ ಬರುವುದಿಲ್ಲ. ಅನುಭವಗಳ ಮಂಥನದಿಂದ ಅಂತರಂಗದಲ್ಲಿ ಉದ್ಭವವಾಗುವ ಸತ್ಯದ ಸತ್ವವೇ ಜ್ಞಾನ. ಅಂತಹ ಜ್ಞಾನವನ್ನು ಪಡೆಯುವುದೇ ಒಂದು ಸಾಧನೆ. ಆ ಸಾಧನೆಗೆ ಮಾರ್ಗವೇನು ಎಂದು ನಮ್ಮ ಪೂರ್ವಜರು ಧೀರ್ಘಕಾಲ ತಪಸ್ಸಿನಿಂದ ಕಂಡುಕೊಂಡದ್ದೇ ‘ಗಾಯತ್ರೀ’ ಮಂತ್ರ. ಮಹರ್ಷಿ ವಿಶ್ವಾಮಿತ್ರನಿಗೆ ಸಾಕ್ಷಾತ್ ಸರಸ್ವತಿಯೇ ಬೋಧಿಸಿದ್ದು ಎಂದು ಪುರಾಣವೆನ್ನುತ್ತದೆ. ‘ ಭೂ,ಭುವ ಮತ್ತು ಸುವ ಎನ್ನುವ ಮೂರು ಸ್ಥರಗಳಲ್ಲಿ ಪ್ರಭಾವವನ್ನು ಬೀರುವ, ಹೇ ಸೂರ್ಯನೇ ನಿನ್ನಲ್ಲಿರುವ ದಿವ್ಯ ತೇಜಸ್ಸಿಗೆ( ದೇವಸ್ಯ ಭರ್ಗಃ) ನಾನು ಶರಣಾಗುತ್ತೇನೆ. ಹೀಗೆ ನಾನು ಶರಣಾಗುವುದರಿಂದ ನನ್ನ ಬುದ್ಧಿ ಪ್ರಚೋದಿತವಾಗಲಿ ಮತ್ತು ಇನ್ನಷ್ಟು ತೀಕ್ಷ್ನವಾಗಲಿ’ ಎಂದು ನಮ್ಮ ಮನಸ್ಸು ಬುದ್ಧಿಗಳನ್ನು ಶುದ್ಧೀಕರಿಸಿಕೊಳ್ಳುವುದಕ್ಕೆ ಸಹಾಯ ಮಾಡುವುದೇ ಈ ‘ಗಾಯತ್ರಿ’ ಮಂತ್ರ. ನಮ್ಮನ್ನು ನಾವೇ ತಿದ್ದಿಕೊಳ್ಳುವ ಮಂತ್ರವಿದು. ಮತ್ತೊಬ್ಬರು ಹೇಳಿಕೊಡುವ ಪಾಠಕ್ಕಿಂತ ನಮಗೆ ನಾವೇ ಹೇಳಿಕೊಳ್ಳುವ ಪಾಠ ಬಹಳ ಪ್ರಭಾವಿಯಾಗಿಯೂ ಮತ್ತು ಸೂಕ್ತವಾಗಿಯೂ ಇರುತ್ತದೆ.

ಪ್ರತಿನಿತ್ಯ ಹೇಳಬೇಕು ಎಂದು ಹೇಳಿದ್ದಾರೆ ನಮ್ಮ ಪೂರ್ವಜರು. ಈ ಜಗತ್ತಿನ ಸಂಪರ್ಕದಲ್ಲಿರುವಾಗ ನಮ್ಮ ಮನಸ್ಸಿನೊಳಕ್ಕೆ ನಾವು ಕಂಡ, ಕೇಳಿದ ಎಲ್ಲ ವಿಷಯ ಮತ್ತು ವಿಚಾರಗಳು ಬಂದು ನುಗ್ಗುತ್ತಿರುವಾಗ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಲು ಇದೊಂದೇ ಮಾರ್ಗ. ತೆರೆದ ಬಾಗಿಲು ಮತ್ತು ಕಿಟಕಿಗಳಿಂದ ಮನೆಯೊಳಕ್ಕೆ ಬರುವ ಧೂಳನ್ನು ನಾವು ಪ್ರತಿನಿತ್ಯ ಗುಡಿಸಿ ಸ್ವಚ್ಚಮಾಡುವುದಿಲ್ಲವೇ ಅದೇ ರೀತಿ ನಮ್ಮ ಇಂದ್ರಿಯಗಳ ಮೂಲಕ ಮನಸ್ಸಿನೊಳಕ್ಕೆ ನುಗ್ಗುವ ವಿಚಾರಗಳಲ್ಲಿನ ಕಸವನ್ನು ತೆಗೆದು ರಸವನ್ನು ಮಾತ್ರ ಉಳಿಸಿಕೊಳ್ಳಲು ಮತ್ತು ನಮ್ಮನ್ನು ‘ನಾವೇ’ ಸರಿಪಡಿಸಿಕೊಳ್ಳುವ ಏಕೈಕ ಮಾರ್ಗವೇ ನಮ್ಮ ಸನಾತನರು ಕಂಡುಕೊಂಡ ಈ ‘ಗಾಯತ್ರಿ’ ಮಂತ್ರ.

ಮನುಷ್ಯನಿಗೆ ಧೀ ಎಂದರೆ ಬುದ್ಧಿಯೇ ಶ್ರೇಯಸ್ಸನ್ನು ಕೊಡುವುದು. ಆದರೆ ಆ ಬುದ್ಧಿ ‘ಸದ್ಭುದ್ಧಿ’ಯಾಗಬೇಕು. ಸದಾಚಾರ ಮತ್ತು ಸದ್ವಿಚಾರಗಳನ್ನೊಳಗೊಂಡ ಬುದ್ಧಿಯಾಗಬೇಕು. ಅಂತಹ ಬುದ್ಧಿಯೇ ನಮಗೆ ಶ್ರೇಯಸ್ಸನ್ನು ತರಬಲ್ಲದು. ಇದನ್ನೇ ಮಾನ್ಯ ಗುಂಡಪ್ಪನವರು ‘ ಶ್ರೇಯಸ್ಸು ಧೀಮಹಿಮೆ’ ಎಂದರು. ಕಳ್ಳನಿಗೆ ಅಥವಾ ಕೊಲೆಗಡುಕನಿಗೂ ಬುದ್ಧಿ ಇರುತ್ತದೆ. ಆದರೆ ಅದು ರಜಸ್ತಮೋಗುಣ ಪ್ರಚೋದಿತವಾಗಿ ಅನ್ಯರಿಗೆ ಹಾನಿಕರವಾಗಿ ಮತ್ತು ಆತ್ಮಘಾತಕವಾಗಿರುತ್ತದೆ. ಸತ್ವಗುಣ ಪ್ರಧಾನವಾದ ‘ಧೀ’ ನಮಗೆ ಬೇಕೆಂದರೆ ನಮ್ಮನ್ನು ನಾವೇ ಆ ‘ಪರಮಪ್ರಭೆ’ ಗೆ ಅಥವಾ ದೈವೀ ತೇಜಸ್ಸಿಗೆ ಶರಣಾಗಬೇಕು. ಜಗತ್ತಿನ ಕಣ್ಣು ಕುಕ್ಕುವ ಆಕರ್ಷಣೆಯಲ್ಲಿ ಅದು ಸುಲಭವಲ್ಲ ಆದರೆ ಪ್ರಯತ್ನವನ್ನು ಮಾಡಬೇಕು.

 

ರಸ ಚೆನ್ನುಡಿ

ನಮ್ಮ ಸಂತೋಷಕ್ಕೆ ಹಾದಿ ಅನ್ಯರಿಗೆ ನೋವನ್ನುಂಟುಮಾಡುವುದಾದರೆ

ಆ ಹಾದಿಯಲ್ಲಿ ಹೆಜ್ಜೆ ಹಾಕಬೇಕೇ ಎಂದು ಹತ್ತು ಬಾರಿ ಯೋಚಿಸಬೇಕು – ಅನಾಮಿಕ

 

ರಸಧಾರೆ – ೫೪೫

ಬುದ್ಧಿಪ್ರಕಾಶದಿಂದಂತರನುಭವಶೋಭೆ।
ಸಿದ್ಧ ವಾ ಶೋಧೆಯಿಂ ಸತ್ಯಸಂವೀಕ್ಷೆ ।।
ಶುದ್ಧಸತ್ಯವ ಜೀವಿತಪ್ರಶ್ನೆಗನ್ವಯಿಪ ।
ಪದ್ದತಿಯೆ ಧರ್ಮವೆಲೊ – ಮಂಕುತಿಮ್ಮ ।।

ಬುದ್ಧಿಪ್ರಕಾಶದಿಂದಂತರನುಭವಶೋಭೆ= ಬುದ್ಧಿಪ್ರಕಾಶದಿಂದ+ಅಂತರ+ಅನುಭವ+ಶೋಭೆ, ಸಿದ್ಧವಾ=ಸಿದ್ಧವು+ಆ, ಜೀವಿತಪ್ರಶ್ನೆಗನ್ವಯಿಪ= ಜೀವಿತ+ಪ್ರಶ್ನೆಗೆ+ಅನ್ವಯಿಪ, ಧರ್ಮವೆಲೊ= ಧರ್ಮವು+ಎಲೋ,

ಶೋಭೆ=ಪ್ರಭೆ ಬೆಳಕು, ಸತ್ಯಸಂವೀಕ್ಷೆ=ಸತ್ಯದ ವಿಚಾರಮಂಥನ, ಅನ್ವಯಿಪ=ಅನ್ವಯಿಸಿಕೊಳ್ಳುವ

ನಮ್ಮ ಅಂತರಂಗದ ಅನುಭವವು ಬುದ್ಧಿಯಿಂದ ಜಿಜ್ಞಾಸೆಗೆ ಒಳಪಟ್ಟಾಗ ಅದು ಬೆಳಗಿ ಆ ಬೆಳಕಿನಲ್ಲಿ ಅರಿವು ಅರಳಿ, ಮತ್ತಷ್ಟು ಶೋಧನೆ ನಡೆದಾಗ ಸತ್ಯವು ಗೋಚರವಾಗುತ್ತದೆ. ಆ ಶುದ್ಧ ಸತ್ಯವನ್ನು ನಮ್ಮ ಬದುಕಿನ ಹಲವಾರು ಪ್ರಶ್ನೆಗಳಿಗೆ ಅನ್ವಯಿಸುವ ಪದ್ದತಿಯೇ ಧರ್ಮ ಎಂದು ನಮ್ಮ ಅಂತರಂಗದಲ್ಲಿ ನಡೆಯ ಬೇಕಾದ ಜಿಜ್ಞಾಸೆಗೆ ಒಂದು ಮಾರ್ಗವನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ನಮಗೆ ಆಗುವ ಹಲವಾರು ಅನುಭವಗಳು ನಮ್ಮಲ್ಲಿ ಜಿಜ್ಞಾಸೆಯನ್ನುಂಟುಮಾಡಬೇಕು. ಆ ಅಂತರಂಗದ ಜಿಜ್ಞಾಸೆಯಲ್ಲಿ ನಾವು ಆ ಅನುಭವಗಳ ಕಾರಣ, ಸ್ವರೂಪ, ವ್ಯಾಪ್ತಿ ಮತ್ತು ಪರಿಣಾಮಗಳನ್ನು ಕಂಡುಕೊಳ್ಳಬೇಕು. ಹಾಗೆ ಕಂಡುಕೊಂಡ ಅನುಭವಗಳ ಲಕ್ಷಣಗಳು ನಮ್ಮ ಬದುಕಿನಲ್ಲಿ ಉದ್ಭವವಾಗುವ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಕೊಡುವಂತಿರಬೇಕು. ಹಾಗಾಗದೆ ಅನುಭವವು ಕೇವಲ ಮತ್ತೊಂದು ಘಟನೆಯಂತಾದರೆ, ಅದರಿಂದ ನಾವು ಏನನ್ನೂ ಕಲಿಯದೇ ಹೋದರೆ, ಆ ಅನುಭವವೂ ವ್ಯರ್ಥ ಮತ್ತು ಅದರಲ್ಲಿ ನಾವು ಕಳೆದ ನಮ್ಮ ಜೀವಿತ ಕಾಲವೂ ವ್ಯರ್ಥ. ವ್ಯರ್ಥ ಅನುಭವಗಳ ಸಾಲೇ ನಮ್ಮ ಜೀವನವಾದರೆ ಖಂಡಿತ ಅಂತಹ ನಮ್ಮ ಬದುಕೇ ವ್ಯರ್ಥವೆನ್ನುವುದರಲ್ಲಿ ಸಂದೇಹವೇ ಇಲ್ಲ.

ಕಲಿಯಲು ಎಲ್ಲ ಅನುಭವಗಳೂ ನಮಗೇ ಆಗಬೇಕೆಂದೇನಿಲ್ಲ. ಹಾಗೆ ಎಲ್ಲ ಅನುಭವವೂ ನಮಗೇ ಆಗಲು ಸಾಧ್ಯವೂ ಇಲ್ಲ. ಹಾಗಾಗಿ ನಮಗೆ ಕಲಿಯಲು ನಮ್ಮ ಅನುಭವಗಳ ಜೊತೆಗೆ, ನಮ್ಮ ಪೂರ್ವಜರ ಅನುಭವಗಳು, ನಮ್ಮ ಸಮಕಾಲೀನರ ಅನುಭವಗಳೂ ಸಹ ಸಹಾಯಮಾಡುತ್ತವೆ. ಇದನ್ನು ನಾವು ಓದಿ, ಕೇಳಿ, ನೋಡಿ ಅರಿತುಕೊಳ್ಳಬಹುದು. ಅದೂ ಸಹ ಕಲಿಕೆಯ ಒಂದು ಮಾರ್ಗವಷ್ಟೆ. ಅನುಭವದ ವಿಚಾರವನ್ನು ಅಂತರಂಗದಲ್ಲಿ ಇಳಿಸಿಕೊಂಡು ಮಂಥನ ಮಾಡಬೇಕು. ಹಾಗೆ ಮಥಿಸಿ ಗುಂಡಪ್ಪನವರು ಹೇಳುವ " ಶುದ್ಧ ಸತ್ವ’ವನ್ನು ಅರಿತುಕೊಳ್ಳಬೇಕು. ಹಾಗೆ ಅರಿತ ಆ ಶುದ್ಧಸತ್ವವೇ ನಮಗೆ ಸತ್ಯದ ಬೆಳಕಾಗಿ ನಮ್ಮ ಬದುಕಿನ ಹಾದಿಯಲ್ಲಿ ಎದುರಾಗುವ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನೀಯುತ್ತದೆ. ಇದರಿಂದ ನಮ್ಮ ಜ್ಞಾನದ ಹರಿವು ವಿಶಾಲವಾಗುತ್ತದೆ. ಈ ಜ್ಞಾನದ ಬಲದಿಂದಲೇ ನಾವು ‘ನಿವಾರ್ಯವನ್ನು’ ನಿವಾರಿಸಿಕೊಳ್ಳುವುದು ಮತ್ತು ‘ಅನಿವಾರ್ಯ’ವನ್ನು ಧೈರ್ಯದಿಂದ ಎದುರಿಸುವುದು.

ಅಂತರಂಗವನ್ನು ಸದಾ ತೆರೆದಿಟ್ಟುಕೊಳ್ಳಬೇಕು. ಏಕೆಂದರೆ ಯಾವ ಹೊತ್ತಿನಲ್ಲಿ ಮತ್ತು ಯಾವ ಅನುಭವ ಒಳಗೆ ಬರುತ್ತದೆಯೋ ನಮಗೆ ಗೊತ್ತಿರುವುದಿಲ್ಲ. ಮನಸ್ಸು ಬುದ್ಧಿಗಳ ಸಹಾಯದಿಂದ ಅವುಗಳನ್ನು ಅರಿತು, ಮಥಿಸಿ ಸತ್ವವನ್ನು ನಮ್ಮದಾಗಿಸಿಕೊಂಡರೆ ಆಗ ಬದುಕು ಕಷ್ಟವೋ ಅಥವಾ ಸುಖವೋ ಹೇಗಿದ್ದರೂ ತಾಳಿಕೊಂಡು ಬಾಳುವಂತಹ ಶಕ್ತಿ ನಮಗೆ ಬರುತ್ತದೆ ಮತ್ತು ಇದೇ ಬದುಕಬೇಕಾದ ಕ್ರಮ ಎನ್ನುವುದೇ ಈ ಮುಕ್ತಕದ ಹೂರಣ.

 

ರಸ ಚೆನ್ನುಡಿ

ನಾವು ಮಾಡುವ ಪ್ರತೀ ಉಪಕಾರಕ್ಕೂ ಪ್ರತ್ಯುಪಕಾರವನ್ನು ನಿರೀಕ್ಷಿಸಿದರೆ
ಬಹುಶಃ ಅಧಿಕ ಬಾರಿ ನಮಗೆ ನಿರಾಶೆಯೇ ಕಟ್ಟಿಟ್ಟ ಬುತ್ತಿಯಾಗುತ್ತದೆ – ಅನಾಮಿಕ

 

ರಸ ಚೆನ್ನುಡಿ

ನಿರಾಶೆಯ ಬದುಕೆಂದರೆ ಏರು ತಗ್ಗುಗಳ ರಸ್ತೆಯ ಪ್ರಯಾಣದಂತೆ

ಅಲ್ಲಿ ಸ್ವಲ್ಪ ನಿಧಾನವಾಗಿ ಚಲಿಸಿದರೆ ಮುಂದಿನ ಹಾದಿ ಸುಗಮವೆಂದು ಅರಿಯಬೇಕು- ಅನಾಮಿಕ

 

ರಸಧಾರೆ – ೫೪೪

ಅನುಭವದ ಪಾಲೊಳುವಿಚಾರ ಮಂಥನವಾಗೆ ।
ಜನಿಯಿಕುಂ ಜ್ಞಾನನವನೀತವದೆ ಸುಖದಂ ।।
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ ।
ನಿನಗೆ ದರುಮದ ದೀಪ – ಮಂಕುತಿಮ್ಮ ।।

ಮಂಥನವಾಗೆ=ಮಂಥನವು+ಆಗೆ, ಜ್ಞಾನನವನೀತವದೆ=ಜ್ಞಾನ+ನವನೀತವು+ಅದೆ, ಗಿಣಿಯೋದು=ಗಿಣಿಯ +ಓದು, ನಿನ್ನನುಭವವೆ=ನಿನ್ನ+ಅನುಭವವೆ,

ಪಾಲೊಳು=ಹಾಲೊಳು, ನವನೀತ= ಬೆಣ್ಣೆ, ಸುಖದಂ=ಆನಂದದಾಯಕ, ಗಿಣಿಯೋದು=ಗಿಳಿಪಾಠ, ದರುಮದ=ಧರ್ಮದ

ಅನುಭವವೆಂಬ ಹಾಲನ್ನು ವಿಚಾರವೆಂಬ ಕಡಗೋಲಿನಿಂದ ಮಥಿನಗೊಂಡು ಜ್ಞಾನವೆಂಬ ಬೆಣ್ಣೆ ಹೊರಬಂದಾಗ ಅದು ಸುಖವನ್ನು ನೀಡುತ್ತದೆ. ಪುಸ್ತಕದ ಜ್ಞಾನ ಗಿಳಿ ಪಾಠವಿದ್ದಂತೆ. ಹಾಗಾಗಿ ನಿನಗೆ ನಿನ್ನ ಜೀವನಾನುಭವವೇ ಧರ್ಮದ ದರ್ಶನ ಮಾಡಿಸುವಂತಹ ದೀಪ ಎಂದು ಬಾಳಿನ ಪರಮ ಸತ್ಯವನ್ನು ಅರುಹಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಎಲ್ಲರೂ ಬದುಕುತ್ತಾರೆ. ಆದರೆ ಕೆಲವರು ಬದುಕನ್ನು ಅನುಭವಿಸುತ್ತಾರೆ, ಎಂದರೆ ಅನುಭವಗಳನ್ನು ಪಡೆಯುತ್ತಾರೆ. ನಮ್ಮ ಬದುಕಿನುದ್ದಕ್ಕೂ ನಮಗೆ ಹಲವಾರು ಅನುಭವಗಳಾಗುತ್ತವೆ. ನಮಗೆ ಕಷ್ಟಗಳನ್ನು ನೀಡಿದ ಮತ್ತು ಸುಖವನ್ನು ಉಣಿಸಿದ ಬದುಕಿನ ಅನುಭವಗಳು ನಮಗೆ ಏನನ್ನೋ ಹೇಳುತ್ತವೆ. ಅದೇ ನಮಗೆ ಬದುಕಿನ ಪಾಠ. ಪ್ರತೀ ಘಳಿಗೆಯೂ ನಮಗೆ ಇಂತಹ ಪಾಠದ ಧಾರೆ ಸಿಗುತ್ತಲೇ ಇರುತ್ತದೆ. ಆದರೆ ಈ ಪಾಠದಿಂದ ನಾವು ಏನನ್ನಾದರೂ ಕಲಿತರೆ ಅದು ನಮ್ಮ ಜ್ಞಾನವಾಗುತ್ತದೆ.ಅಂತಹ ಜ್ಞಾನವನ್ನು ಸಂದರ್ಭೋಚಿತವಾಗಿ ನಾವು ಬಳಸಿಕೊಂಡರೆ ಜೀವನವನ್ನು ಹಸನಾಗಿಸಿಕೊಳ್ಳಬಹುದು.

ನಾವು ಶಾಲಾ ಕಾಲೇಜುಗಳಲ್ಲಿ ಓದುವುದು ಪುಸ್ತಕದ ಜ್ಞಾನ. ಗಿಳಿಪಾಠದಂತೆ ಓದಿದ್ದನ್ನು ಪರೀಕ್ಷೆಯಲ್ಲಿ ಒಪ್ಪಿಸಿ ಮತ್ತೆ ಮರೆತುಬಿಡುವಂತಹ ಜ್ಞಾನ. ಅಲ್ಲಿ ಅನುಭವವಿಲ್ಲ. ಅದು ಹೊಟ್ಟೆಪಾಡಿಗೆ ಮಾರ್ಗವಷ್ಟೇ. ಆದರೆ ಬದುಕಲ್ಲ. ಅವುಗಳಿಂದ ಬದುಕನ್ನು ಪಡೆದು ಜೀವಿಸುವಾಗ ಆಗುವ ಅನುಭವಗಳೇ ಬದುಕು. ಆ ಅನುಭವಗಳು ನೀಡುವ ಪಾಠವೇ ನಿಜವಾದ ಜ್ಞಾನ. ಬದುಕುವಾಗ ನಮಗೆ ಆಗುವ ಅನುಭವಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು. ಹಾಗೆ ಒಡ್ಡಿಕೊಂಡಾಗ ಆ ಅನುಭವಗಳಲ್ಲಿ ನಾವೂ ಬೆರೆತು ಆ ಅನುಭವಗಳ ಸಾರ ನಮ್ಮ ಅಂತರಂಗಕ್ಕೆ ಇಳಿಯುತ್ತದೆ. ಅಂತರಂಗದಲ್ಲಿ ಆ ಅನುಭವಗಳನ್ನು ನಮ್ಮ ವಿಚಾರ, ವಿವೇಕ ಮತ್ತು ವಿಮರ್ಶೆಗೆ ಒಳಪಡಿಸಿದರೆ ಅಲ್ಲಿ ಮಂಥನವಾಗಿ ಶುದ್ಧ ಜ್ಞಾನ, ಮೊಸರ ಕಡೆದಾಗ ಸಿಗುವ ಬೆಣ್ಣೆಯಂತೆ,ನಮಗೆ ಲಭ್ಯವಾಗುತ್ತದೆ. ಹಾಗೆ ಲಭ್ಯವಾದ ಜ್ಞಾನ ನಮ್ಮೊಡನೆ ಉಳಿದು ನಮ್ಮ ಸ್ವಭಾವವಾಗುತ್ತದೆ. ಆದರೆ ಒಂದೇ ವಿಚಾರ ಬೇರೆ ಬೇರೆಯವರಲ್ಲಿ ಭಿನ್ನಭಿನ್ನ ಅನುಭವವನ್ನು ನೀಡಬಹುದು. ಹಾಗೆ ಅವರವರು ಪಡೆದ ಭಿನ್ನವಾದ ಅನುಭವಗಳು ಮತ್ತು ಅದರಿಂದುಂಟಾಗುವ ಜ್ಞಾನವು ಭಿನ್ನವಾದರೂ ಸತ್ಯದಿಂದ ದೂರವಾಗಿರಬಾರದು.

ವಿಪರ್ಯಾಸವೆಂದರೆ ಇಂದು ಯಾರಿಗೂ ಸಮಯವಿಲ್ಲ. ಬದುಕಿನ ಓಟದಲ್ಲಿ ಯಾವುದನ್ನೂ ನಾವು ಅನುಭವಿಸುವುದೇ ಇಲ್ಲ. ಒಂದು ಪುಸ್ತಕವನ್ನು ಓದಿದಾಗಲೋ, ಒಬ್ಬರೊಡನೆ ವಿಚಾರ ವಿನಿಮಯ ಮಾಡಿಕೊಂಡಾಗಲೋ, ಒಂದು ನೈಸರ್ಗಿಕ ದೃಶ್ಯವನ್ನು ನೋಡಿದಾಗಲೋ, ಅಷ್ಟೇಕೆ ಒಂದು ರುಚಿಕರವಾದ ತಿನಿಸನ್ನು ತಿಂದಾಗಲೋ ಅದರ ಸಾರವನ್ನು ಅನುಭವಿಸಿದರೆ ಅದರ ರುಚಿ ಮತ್ತಷ್ಟು ಹೆಚ್ಚಾಗಿ ಅದೊಂದು ಅನುಭವವಾಗುತ್ತದೆ. ಹಾಗಲ್ಲದೆ ಕೇವಲ ಕಾಟಾಚಾರಕ್ಕೆ ಬಲಿಯಾದರೆ ನಮಗೆ ಅನುಭವವಾಗುವುದೇ ಇಲ್ಲ. ಅನುಭವವೇ ಇಲ್ಲದಮೇಲೆ ಜ್ಞಾನವಿಲ್ಲವೆಂದೇ ಅರ್ಥ. ಹಾಗಾಗಿ ಅನುಭವಿಸಬೇಕು ಮತ್ತು ಅನುಭವದಿಂದ ಜ್ಞಾನ ಪಡೆಯಬೇಕು. ಆಗ ಬದುಕು ಸಾರ್ಥಕವಾಗುತ್ತದೆ.