RSS

Monthly Archives: ಜನವರಿ 2014

ರಸ ಚೆನ್ನುಡಿ

ಅನ್ಯರಿಗೆ ನಮ್ಮನ್ನು ‘ಮೌಲ್ಯಮಾಪನ’ ಮಾಡಲು ಅವಕಾಶವಿತ್ತರೆ

ಖಂಡಿತವಾಗಿಯೂ ನಮ್ಮ ಮೌಲ್ಯವೆಂದೆಂದಿಗೂ ಕುಂಠಿತವಾಗೇ ಇರುತ್ತದೆ – ಅನಾಮಿಕ

Advertisements
 

ರಸ ಚೆನ್ನುಡಿ

ಬದುಕೊಂದು ಸಂಕ(ಸೇತುವೆ). ದಾಟುವಾಗ ಸಂತಸವಿರಲಿ.

ಉಸಿರುಗಟ್ಟಿಸುವಂತಹ ಗೋಡೆಗಳನ್ನು ಕಟ್ಟಬಾರದು – ಅನಾಮಿಕ

 

ರಸ ಚೆನ್ನುಡಿ

ನಮ್ಮನ್ನು ವಿಮರ್ಶೆ ಮಾಡುವ ಕ್ಷಮತೆ ಹೊಂದಿಲ್ಲದವರಿಗಾಗಿ ನಾವು ‘ನಮ್ಮ ತನ’ವನ್ನು ಬದಲಾಯಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಾವು ನಾವಾಗೇ ಉಳಿಯುವುದು ಬಹಳ ಮುಖ್ಯ.- ಅನಾಮಿಕ

 

ರಸಧಾರೆ – ೫೫೮

ಆಳವನು ನೋಡಿ ಬಗೆದಾಡುವಾ ಮಾತಿಂಗೆ ।
ರೂಢಿಯರ್ಥವದೊಂದು ಗಾಢಾರ್ಥವೊಂದು ।।
ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು ।
ಕೋಲು ಹುಟ್ಟೊಂದು ಬಲ – ಮಂಕುತಿಮ್ಮ ।।

ಬಗೆದಾಡುವಾ=ಬಗೆದು+ಆಡುವಾ , ರೂಢಿಯರ್ಥವದೊಂದು=ರೂಢಿಯ+ಅರ್ಥವು+ಅದೊಂದು, ಗಾಢಾರ್ಥವೊಂದು=ಗಾಢ+ಅರ್ಥವು+ಒಂದು, ದಾಂಟುವುಡುಪಕೆ=ದಾಂಟುವ+ಉಡುಪಕೆ,
ಹುಟ್ಟೊಂದು=ಹುಟ್ಟು+ಒಂದು

ಬಗೆದು+ಪರೀಕ್ಷಿಸಿ, ದಾಂಟುವ=ದಾಟುವ, ಉಡುಪ =ತೆಪ್ಪ, ದೋಣಿ, ಹಡಗು, ದ್ವೀಪ(ಸುತ್ತ ನೀರಿರುವುದರಿಂದ)

ನಾವು ಕೇಳುವ ಮಾತನ್ನು ಆಳವಾಗಿ ಪರೀಕ್ಷಿಸಿ ನೋಡಿದರೆ, ಮೇಲುನೋಟಕ್ಕೆ ಒಂದು ಅರ್ಥ ಕಂಡರೆ, ಒಳನೋಟಕ್ಕೆ ಬೇರೆ ಅರ್ಥವಿರುವುದು. ಸಾಗರವ ದಾಟುವ ಹಡಗಿಗೆ ಮೇಲಿಂದ ದಿಕ್ಕನ್ನು ಸೂಚಿಸುವ ಹಾಯಿ ಅಥವಾ ಗಾಳಿಪಟದ ಮತ್ತು ಅಡಿಯಲ್ಲಿ ಬಲದಿಂದ ಹಾಕುವ ಹುಟ್ಟಿನ ಬಲವಿದ್ದಂತೆ, ನಾವು ಆಡುವ ಅಥವಾ ಕೇಳುವ ಮಾತಿಗೆ ರೂಢಿಯಲ್ಲಿರುವ ಅರ್ಥವು ಒಂದಿದ್ದರೆ ಗಹನವಾದ ವಿಚಾರದಿಂದ ಕೂಡಿದ ಮತ್ತೊಂದು ಅರ್ಥವಿರುತ್ತದೆ, ಎಂದು ಮಾತು ಮತ್ತು ಅದರ ಅರ್ಥದ ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

ಅಂತರಂಗದ ಭಾವವನ್ನು ಮಾತು ಮತ್ತು ಕೃತಿ ಮತ್ತು ಸಂಜ್ಞೆಗಳಿಂದ ವ್ಯಕ್ತಪಡಿಸಬಹುದು. ವ್ಯಕ್ತಪಡಿಸುವ ಮಾಧ್ಯಮವು ಯಾವುದೇ ಆದರೂ ಅದಕ್ಕೆ ಎರಡು ಅರ್ಥಗಳಿರುತ್ತವೆ. ಮೇಲುನೋಟಕ್ಕೆ ಕಾಣುವ ಅರ್ಥವೇ ಒಂದಾದರೆ, ಒಳಗಿನ ಅಂತರ್ಯವೇ ಬೇರೆಯಾಗಿರುತ್ತದೆ. ನಾವು ಕೇಳಿದ ಮಾತುಗಳಿಗೆ ಪ್ರತಿಕ್ರಿಯಿಸುತ್ತೇವೆ. ನಾವು ಕೇಳಿದ ಮಾತನ್ನು ನಾವು ಹೇಗೆ ಅರ್ಥೈಸಿಕೊಂಡಿದ್ದೇವೆ ಎನ್ನುವುದರ ಮೇಲೆ ನಮ್ಮ ಪ್ರತಿಕ್ರಿಯೆ ಆಧರಿಸಿರುತ್ತದೆ. ಆದರೆ ಅರ್ಥವನ್ನು ಬಗೆಯದೆ ಅಥವಾ ಬಗೆಯಲು ಕ್ಷಮತೆಯ ಕೊರತೆಯಿಂದ, ನಾವು ಬಹಳಷ್ಟು ಬಾರಿ ಅಪಾರ್ಥಮಾಡಿಕೊಂಡು ಪ್ರತಿಕ್ರಿಯಿಸುತ್ತೇವೆ. ಅಲ್ಲಿ ನಮ್ಮ ಪ್ರತಿಕ್ರಿಯೆಗೆ ಆ ಮಾತಿನ ನಿಜಾರ್ಥದ ಬಲವಿರುವುದಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಪ್ರತಿಕ್ರಿಯೆ ಸೂಕ್ತವಾಗಿರುವುದಿಲ್ಲ.

ಮೇಲುನೋಟಕ್ಕೆ ಕಾಣುವ ಮಾತಿನ ಅರ್ಥವನ್ನು ಬಗೆದು ನೋಡಿ ಗೂಢಾರ್ಥವನ್ನು ಅರಿತು, ನಮ್ಮ ಪೂರ್ವ ಅನುಭವದಿಂದ ನಮ್ಮ ಮನದಲ್ಲಿ ಮನೆಮಾಡಿರುವ ಅರ್ಥವನ್ನು ತುಲನೆ ಮಾಡಿದಾಗ ನಮಗೆ ಸತ್ಯದ ಅರಿವಾಗಬಹುದು. ನಮ್ಮ ಗುರಿ ಸತ್ಯವನ್ನು ಅರಿಯುವುದಾದರೆ ಈ ಪ್ರಯತ್ನ ಸಫಲವಾಗುತ್ತದೆ. ಹಾಗಲ್ಲದೆ ಪೂರ್ವಾಗ್ರಹ ಪೀಡಿತರಾಗಿ ‘ಅಪಾರ್ಥ’ ವನ್ನು ಕಲ್ಪಿಸಿಕೊಂಡರೆ ಅನರ್ಥವಾಗುತ್ತದೆ.ಒಂದು ಹಡಗು ಅಥವಾ ದೋಣಿ ಮುಂದೆ ಹೋಗಲು ಹೇಗೆ ‘ವಸ್ತ್ರಪಟ’ ಮತ್ತು ‘ಹುಟ್ಟು’ ಎರಡರ ಬಲವೂ ಬೇಕೋ ಹಾಗೆ ಸತ್ಯವನ್ನು ಅರಿಯುವ ಪ್ರಯತ್ನದಲ್ಲಿ ನಮಗೆ ಸಾಮಾನ್ಯ ಅರ್ಥ ಮತ್ತು ಗೂಢಾರ್ಥ ಎರಡರ ಬಲವಿರಬೇಕು ಎಂಬುದೇ ಈ ಮುಕ್ತಕದ ಹೂರಣ.

ಸತ್ಯವರಿಯಬೇಕಾದರೆ ‘ಅಹಂಕಾರ’ವನ್ನು ಮತ್ತು ಆ ಅಹಂಕಾರ ಜನಿತವಾದ ಪೂರ್ವಾಗ್ರಹವನ್ನು ತ್ಯಜಿಸಬೇಕು. ಆದರೆ ಇವುಗಳನ್ನೆಲ್ಲ ಹೇಳುವುದು ಸುಲಭವಾದರೂ ಆಚರಣೆಯಲ್ಲಿ ತರುವುದು ಕಷ್ಟ ಸಾಧ್ಯವೇ!!! ನಮ್ಮ ನಮ್ಮ ಜೀವನದಲ್ಲಿ ಸತ್ಯವರಿಯುವ ದಿಕ್ಕಿನಲ್ಲಿ ಮುಂದುವರೆಯಬೇಕಾದರೆ ಅಪಾರ್ಥವನ್ನು ಬಿಟ್ಟು ಇಂಗಿತಾರ್ಥವನ್ನು ಅರಿತು ನಡೆದುಕೊಂಡರೆ ನಾವು ಶಾಂತರಾಗಿರಬಹುದು. ಪೂರ್ವಾಗ್ರಹದಿಂದ ಅಪಾರ್ಥ ಮಾಡಿಕೊಂಡರೆ ಕ್ಲೇಶ, ಕಲಹ ಮತ್ತು ಜಿಗುಪ್ಸೆ ತಪ್ಪಿದ್ದಲ್ಲ. ಆಯ್ಕೆ ಮಾಡಲು ನಾವು ಸಂಪೂರ್ಣ ಸ್ವತಂತ್ರರಲ್ಲವೆ?

 

ರಸ ಚೆನ್ನುಡಿ

ವಯೋಮಾನದಲ್ಲಿ ‘ಯೌವನ’ವೆನ್ನುವುದು ಅಶಾಶ್ವತ.
ಆದರೆ ಮನೋಭಾವದಲ್ಲಿ ಅದು ಶಾಶ್ವತವಾಗಬಹುದು, ನಾವು ನೆನೆದರೆ – ಅನಾಮಿಕ

 

ರಸಧಾರೆ – ೫೫೭

ಅಂತರಂಗದ ಗವಾಕ್ಷಗಳ ತೆರೆದಿಡಲಲ್ಲಿ ।
ಚಿಂತೆ ಕುಮುಲುವುದು, ಹೊಗೆಗಳೊತ್ತವಾತ್ಮವನು ।।
ಶಾಂತಿ ಬೇಳ್ಪೊಡೆ ಮನೆಗೆ ಗೋಡೆವೊಲೆ ।
ಸಂತತದಪೇಕ್ಷಿತವೋ – ಮಂಕುತಿಮ್ಮ ।।

ತೆರೆದಿಡಲಲ್ಲಿ =ತೆರೆದು+ಇಡಲು+ಅಲ್ಲಿ, ಹೊಗೆಗಳೊತ್ತವಾತ್ಮವನು= ಹೊಗೆಗಳು+ಒತ್ತ +ಆತ್ಮವನು, ಸಂತತದಪೇಕ್ಷಿತವೋ=ಸಂತತದ+ಅಪೇಕ್ಷಿತವೋ.

ಗವಾಕ್ಷ+ಕಿಟಕಿ, ಬೇಳ್ಪೊಡೆ =ಬೇಕಿದ್ದರೆ.ಸಂತತ=ನಿರಂತರ

ಅಂತರ್ಮುಖಿಗಳಾದಾಗ, ನಮಗೆ ನಮ್ಮ ಅಂತರಂಗದಲ್ಲಿ ನಡೆಯುವ ವಿಧ್ಯಮಾನಗಳ ಅರಿವಾಗುತ್ತದೆ. ಮನವನ್ನು ಮುಕ್ತವಾಗಿಡದೆ ಎಲ್ಲ ಕದ-ಕಿಟಕಿಗಳನ್ನು ಮುಚ್ಚಿಕೊಂಡುಬಿಟ್ಟರೆ ನಮ್ಮ ಚಿಂತೆ ಒಳಗೊಳಗೇ ಸುಟ್ಟು ಹೊಗೆಯಾಡುತ್ತದೆ ಮತ್ತು ಆ ಹೊಗೆಯ ದಟ್ಟತೆಯಲ್ಲಿ ಅಶಾಂತಿಯಿಂದ ಮನಸ್ಸು ಬುದ್ಧಿ ಆತ್ಮಗಳು ಸೊರಗುತ್ತವೆ. ಹಾಗಾಗಿ ನಮಗೆ ನಿರಂತರದ ಶಾಂತಿ ಬೇಕಿದ್ದಲ್ಲಿ ಮನದ ಗೋಡೆಯಲ್ಲಿ ಕಿಟಕಿಗಳಿರಬೇಕು ಎಂದು ಒಂದು ಸಂದೇಶವನ್ನು ನೀಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಮನಸ್ಸನ್ನು ಚಿಂತೆಗಳಿಂದ ಒಳಗೊಳಗೇ ಹೊಗೆಯಾಡಬಿಟ್ಟರೆ ಚಿಂತೆಗಳು ಅಧಿಕವಾಗಿ ಮನವು ಕೊಳೆಯುತ್ತದೆ.
ನಾವು ಮಾಡುವ ಚಿಂತೆ ಸರಿಯೋ ತಪ್ಪೋ ಎಂಬುದರ ಅರಿವೂ ಆಗುವುದಿಲ್ಲ. ಅಶಾಂತಿ ಹೆಚ್ಚಾಗುತ್ತದೆ. ಆದರೆ ನಮಗೆ ನಿರಂತರ ಶಾಂತಿ ಬೇಕಿದ್ದರೆ ಅಂತರ್ಮುಖಿಗಳಾಗಿ ಮನದ ಸುತ್ತ ಗೋಡೆ ನಿರ್ಮಿಸಿದ್ದರೂ ಆ ಗೋಡೆಯಲ್ಲಿ ಕಿಟಕಿಗಳನ್ನು ಅಳವಡಿಸಿಕೊಂಡರೆ ಮತ್ತು ಹೊರ ಪ್ರಪಂಚದ ವಿಷಯಗಳು ಒಳಬಂದರೆ ನಮ್ಮ ಒಳಗಿನ ವಿಚಾರಗಳು ಮತ್ತು ಹೊರಗಿನ ವಿಚಾರಗಳ ನಡುವೆ ತುಲನೆಯಾಗಿ ಸತ್ಯಾಸತ್ಯಗಳನ್ನು ನಿಚ್ಚಳವಾಗಿ ಅರಿಯಲು ಸಾಧ್ಯವಾಗುತ್ತದೆ.

ಹಾಗಲ್ಲದೆ ನಾವು ಕಲಿತ, ಅರಿತ ಮತ್ತು ನಂಬಿದ ವಿಚಾರಗಳೇ ಸರಿ, ಅನ್ಯರ ವಿಚಾರಗಳು ನಮಗೆ ಬೇಕಿಲ್ಲ ಎಂದು ಮನದ ಎಲ್ಲ ಕದಗಳನ್ನೂ ಮುಚ್ಚಿಬಿಟ್ಟರೆ, ಮಾನ್ಯ ಗುಂಡಪ್ಪನವರು "ಚಿಂತೆ ಕುಮುಲುವುದು, ಹೊಗೆಗಳೊತ್ತವಾತ್ಮವನು" ಎಂದು ಹೇಳುವಂತೆ ಮನಸ್ಸು ಸೊರಗುವುದು. ಆದ್ದರಿಂದ ನಾವು ಅಂತರ್ಮುಖಿಗಳಾದರೂ ಮನಸ್ಸನ್ನು ಪೂರ್ವಾಗ್ರಹವಿಲ್ಲದೆ ಮುಕ್ತವಾಗಿಟ್ಟುಕೊಂಡರೆ ಸತ್ಯವನ್ನು ಅರಿಯುವುದು ಸುಲಭವಾಗುತ್ತದೆ. ನಮ್ಮ ಸಮಸ್ಯೆ ದೊಡ್ಡದೋ, ಸಣ್ಣದೋ, ನಮ್ಮ ವಿಚಾರ ಸರಿಯೋ ತಪ್ಪೋ ಎಂಬುದರ ಅರಿವು ಮೂಡುತ್ತದೆ. ಆ ಅರಿವಿನಲ್ಲಿ ನಮ್ಮಲ್ಲಿ ಸದ್ವಿಚಾರ ಅಧಿಕವಾಗಿ, ಮನಸ್ಸು ಶಾಂತವಾಗುತ್ತದೆ.

ಆದರೆ ಜೀವನದ ಸಮಸ್ಯೆಗಳಿಗಿಂತ ಮನದಲ್ಲಿರುವ ‘ಅಹಂಕಾರ’ ಅಥವಾ ‘ಮಮಕಾರ’ ಗಳ ಗೋಡೆಗಳು ಹೊರ ಮತ್ತು ಹೊಸ ವಿಚಾರಗಳನ್ನು ಒಳಬರದೆ ತಡೆಯುತ್ತದೆ ಮತ್ತು ಹಾಗೂ ಒಳಬಂದ ವಿಚಾರಗಳನ್ನು ನಿರಾಕರಿಸುತ್ತದೆ. ಹಾಗಾಗಿ ನಾವು ನಮ್ಮ ಅಹಂಕಾರದ ಗೋಡೆಯನ್ನು ಮೊದಲು ಕೆಡವಿ ತಳ್ಳಬೇಕು. ಅದನ್ನು ತಳ್ಳಿದರೆ ಖಂಡಿತವಾಗಿಯೂ ನಮ್ಮ ಮನದಲ್ಲಿ ಗುಂಡಪ್ಪನವರು ಹೇಳುವ ‘ ಸಂತತದ ಶಾಂತಿ’ ಯನ್ನು ಪಡೆಯಬಹುದು. ಸತ್ವದ ಮತ್ತ್ತು ಸತ್ಯದ ವಿಚಾರಗಳು ಮನದಲ್ಲಿ ನೆಲೆನಿಂತು ಆತ್ಮಾನಂದವನ್ನು ಪಡೆಯಬಹುದು.

 

ರಸ ಚೆನ್ನುಡಿ

ಸತ್ಯಕ್ಕೆ, ಅತ್ಯಂತ ಗಾಢ ಸ್ನೇಹಿತನೇ ಸಮಯ,
ಪೂರ್ವಾಗ್ರಹವೇ ಪರಮ ಶತ್ರು ಮತ್ತು ನಿರಂತರ ಸಂಗಾತಿಯೇ ದೈನ್ಯತೆ – ಅನಾಮಿಕ