RSS

Monthly Archives: ಫೆಬ್ರವರಿ 2014

ರಸಧಾರೆ – ೫೬೮

ಮನದ ಭಾವಿತಕೊಪ್ಪುವುಪಕರಣ ನಮಗಿಲ್ಲ।
ಎಣಿಕೆಗಳ ಪೂರಿಯಿಪ ಸಾಧನಗಳಿಲ್ಲ॥
ಜನುಮಜನುಗಳಿಂತು ಪೇಚಾಟ ತಿಣುಕಾಟ ।
ಮುನಿವುದಾರಲಿ, ಪೇಳು? – ಮಂಕುತಿಮ್ಮ ।।

ಭಾವಿತಕೊಪ್ಪುವುಪಕರಣ ಭಾವಿತಕೆ+ಒಪ್ಪುವು+ಉಪಕರಣ, ಜನುಮಜನುಗಳಿಂತು+ಜನುಮ+ಜನುಮಗಳು +ಇಂತು, ಮುನಿವುದಾರಲಿ=ಮುನಿವುದು+ಆರಲಿ

ಉಪಕರಣ=ಸಾಧನ, ಪೂರಿಯಿಪ=ಪೂರೈಸುವ, ಮುನಿವುದು =ಕೋಪಗೊಳ್ಳುವುದು,

ಮನಸ್ಸಿನಲ್ಲಿ ಮೂಡಿದ ಭಾವಗಳನ್ನು ಕಾರ್ಯರೂಪಕ್ಕೆ ತರಲು ನಮಗೆ ಅವಶ್ಯಕ ಸಾಧನಗಳಿಲ್ಲ. ಈ ಸಾಧನಗಳ ಅಥವಾ ಉಪಕರಣಗಳ ಕೊರತೆ ನಮಗೆ ಜನ್ಮ ಜನ್ಮಾಂತರದಿಂದಲೂ ಕಾಡುತ್ತಾ ಇದೆ. ಇದರಿಂದ ಪ್ರತೀ ಜನ್ಮದಲ್ಲೂ ನಮಗೆ ತಿಣುಕಾಟ ಮತ್ತು ಪೇಚಾಟಗಳು ಇದ್ದೇ ಇರುತ್ತವೆ. "ಇದು ಹೀಗೆ ಏಕಿದೆ?" ಎಂದು ನಾವು ಯಾರಲ್ಲಿ ದೂರುವುದು? ಎಂದು ತಮ್ಮಲ್ಲಿ ತಾವೇ ಪ್ರಶ್ನಿಸುತ್ತಾ ನಮ್ಮ ಮುಂದೆ ಒಂದು ಗಹನವಾದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಮನಸ್ಸಿನಲ್ಲಿ ಮೂಡಿದ ಭಾವಗಳಿಗೆ ಒಂದು ಮೂರ್ತರೂಪ ಕೊಟ್ಟರೆ ಆ ಭಾವ, ಸಾರ್ಥಕತೆಯನ್ನು ಕಂಡುಕೊಳ್ಳುತ್ತದೆ. ಆದರೆ ಮನಸ್ಸಿನಲ್ಲಿ ಮೂಡುವ ಎಲ್ಲಾ ‘ಹುಚ್ಚು ‘ ಭಾವಗಳಿಗೂ ಮೂರ್ತರೂಪ ಕೊಡಲಾಗುವುದೇ ಎಂದರೆ, ಸಾಧ್ಯವೇ ಇಲ್ಲ. ಏಕೆಂದರೆ, ಹಾಗೆ ಸಾಧಿಸಲು ಬೇಕಾದ ಸಲಕರಣೆಗಳು ನಮ್ಮಲ್ಲಿ ಇರುವುದಿಲ್ಲ. ಸಾಧನೆಗಳ ಅಸಾಧ್ಯತೆ ಮತ್ತು ಕ್ಲಿಷ್ಟತೆ, ಉಪಕರಣಗಳ ಕೊರತೆಯ ನಡುವೆ ನಾವು ನಲುಗಿ ಹೋಗುತ್ತೇವೆ. ಇಂತಹ ಕೊರತೆಯನ್ನು ಯಾರಲ್ಲಿಯೂ ಹೇಳಿಕೊಳ್ಳಲಾಗದೇ ಪರದಾಡುವ ಸ್ಥಿತಿಯಲ್ಲಿರುತ್ತೇವೆ. ಇದು ಬಹುತೇಕ ಎಲ್ಲರ ಜೀವನದಲ್ಲಿಯ ಜನ್ಮ ಜನ್ಮಾಂತರದ ಅನುಭವವೇ ಆಗಿರುತ್ತದೆ.

ಇಂತಹ ಸ್ಥಿತಿ ಬಹುಶಃ ಎಲ್ಲಾ ಪ್ರಾಣಿಗಳಿಗೂ ಅನ್ವಯವಾಗುತ್ತದೆ. ಮನುಷ್ಯ ಪ್ರಾಣಿಯ ಅಪರಿಮಿತ ಆಲೋಚನಾ ಶಕ್ತಿಗೆ ಅನುಗುಣವಾಗಿ ಈ ರೀತಿಯ ಪರದಾಟ ಸೆಣೆಸಾಟಗಳು ಸ್ವಲ್ಪ ಅಧಿಕವಾಗೇ ಇರುತ್ತದೆ. ಆದರೆ ಮನುಷ್ಯನಿಗೆ ”ವಿವೇಚನೆ” ಯನ್ನು ಆ ಪರಮಾತ್ಮ ಕರುಣಿಸಿದ್ದಾನೆ. ಈ ವಿವೇಚನೆಯನ್ನು ಸೂಕ್ತವಾಗಿ ಉಪಯೋಗಿಸಿ ತಾನು ಸಾಧಿಸಬೇಕಾದ ಕೆಲಸವನ್ನು ಆಲೋಚಿಸಿ, ಅಳೆದು ಸುರಿದು, ತನ್ನ ಮಿತಿಗಳನ್ನು ಅರಿತು, ಸಿಕ್ಕ ಉಪಕರಣಗಳನ್ನು ಸೂಕ್ತವಾಗಿ ಪ್ರಯೋಗಿಸಿ ಪ್ರಯತ್ನಪಟ್ಟರೆ ಬಹುಶಃ ನಾವು ಏನನ್ನಾದರೂ ಸಾಧಿಸಬಹುದು. ಸಾಧನೆ ಪರಿಪೂರ್ಣವಾಗಿ ಆಗದಿದ್ದರೂ ‘ಪ್ರಯತ್ನ’ಪಟ್ಟ ತೃಪ್ತಿಯಾದರೂ ಇರುತ್ತದೆ.

ನಮಗೆ ಬರುವ ಆಲೋಚನೆಗಳನ್ನು ವಿವೇಚನೆಯಿಂದ ವಿಶ್ಲೇಷಿಸಿ, ನಮ್ಮ ಕೊರತೆಗಳು, ಮಿತಿಗಳು ಮತ್ತು ಅವಶ್ಯಕತೆಗಳನ್ನು ತೂಗಿ ನೋಡಿ ನಮಗೆ ಹಿತವಾದ ಕೆಲಸಗಳನ್ನೇ ಮಾಡುತ್ತಾ, ಜೀವನದಲ್ಲಿ ಸಿಕ್ಕ ಅವಕಾಶಗಳನ್ನು, ಕಲಿತ ಬುದ್ಧಿಯನ್ನು, ವಿಧ್ಯೆಯನ್ನು ಮತ್ತು ಸಹಜನರ ಸಹಯೋಗವನ್ನು ನಮ್ಮ ಪ್ರಯೋಜನಕ್ಕೆ ಉಪಯೋಗಿಸಿಕೊಂಡು ಹಂತ ಹಂತವಾಗಿ ಸಾಧಿಸಲು ನಮಗೆ ಸಾಧ್ಯವಾದರೆ ನಾವೂ ಸಹ ಬದುಕಿನ ಸಾರ್ಥಖ್ಯವನ್ನು ಪಡೆಯಬಹುದು. ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ನಾವು ಸುಧಾರಿತರಾಗಿ ಹೋಗಬಹುದು

Advertisements
 

ರಸ ಚೆನ್ನುಡಿ

ಪರರ ಹೀಗೆಳೆಯುವರು ಸದಾ ಕಾಲ ತಮ್ಮ ಗುಣದ ಪ್ರದರ್ಶನ ಮಾಡುತ್ತಿರುತ್ತಾರೆ – ಅನಾಮಿಕ

 

ರಸಧಾರೆ – ೫೬೭

ಮನದ ಭಾವಗಳ ಪೂರ್ಣದಿನೊರೆಯಲರಿತ ಕವಿ ।
ಇನಿತನುಂ ಬಿಡದೆ ರೂಪಿಸಲರಿತ ಶಿಲ್ಪಿ ।।
ಅನುರೂಪದಿಂದ ವಾಸ್ತವಗೊಳಿಪ ಕೃತಿಚತುರ ।
ಧನಿಯರಿವರೆಲ್ಲಿಹರೊ? – ಮಂಕುತಿಮ್ಮ।।
ಪೂರ್ಣದಿನೊರೆಯಲರಿತ=ಪೂರ್ಣದಿನೆ+ಒರೆಯಲು+ಅರಿತ, ರೂಪಿಸಲರಿತ= ರೂಪಿಸಲು+ಅರಿತ, ಧನಿಯರಿವರೆಲ್ಲಿಹರೊ=ಧನಿಯರು+ಅವರು+ಎಲ್ಲಿಹರೊ.

ಒರೆಯಲು=ವ್ಯಕ್ತಪಡಿಸಲು, ಇನಿತನುಂ= ಸ್ವಲ್ಪವಾದರೂ, ಕೃತಿಚತುರ=ಕಾರ್ಯನಿಪುಣ, ಧನಿಯರು=ಗುಣವಂತರು

ಮನಸ್ಸಿನಲ್ಲಿ ಬಂದ ಭಾವಗಳನ್ನು ಸಂಪೂರ್ಣವಾಗಿ ವ್ಯಕ್ತಪಡಿಸುವಂತಾ ಕವಿ, ಸ್ವಲ್ಪವೂ ಕೊರತೆಯಿಲ್ಲದೆ ಕೆತ್ತಬಲ್ಲ ಶಿಲ್ಪಿ, ಯಾವುದೇ ಕೆಲಸವನ್ನು ಹಿಡಿದರೂ ಯೋಜಿಸಿದ್ದನ್ನು ಮಾಡಿಯೇ ತೀರುವ ಕಾರ್ಯ ನೈಪುಣ್ಯತೆಯನ್ನು ಹೊಂದಿರುವ ಧನಿಗಳು ಲೋಕದಲ್ಲಿ ಎಲ್ಲಿದ್ಧಾರೆ, ಎಂದು ಅಂತಹ ನೈಪುಣ್ಯತೆ ಇರುವವರೇ ಜಗತ್ತಿನಲ್ಲಿ ಧನ್ಯರು ಎಂದು ಉಲ್ಲೇಖಿಸಿದ್ದಾರೆ ಈ ಮುಕ್ತಕದಲ್ಲಿ.

ಮನಸ್ಸಿಗೆ ಎಂತೆಂತಹುದೋ ಭಾವಗಳು ಬರುತ್ತವೆ. ಬಂದ ಭಾವಗಳನ್ನೆಲ್ಲಾ ಕಾರ್ಯರೂಪಕ್ಕೆ ತರುವುದು ಸಾಧ್ಯವಿಲ್ಲ. ಹಾಗೆ ಸಾಧ್ಯವಾಗುವಂತಹ ಭಾವಗಳನ್ನು ಸಂಪೂರ್ಣ ಕಾರ್ಯರೂಪಕ್ಕೆ ತರುವ ನಿಪುಣತೆಯ ಧನವನ್ನು ಹೊಂದಿರುವವರು ಈ ಜಗತ್ತಿನಲ್ಲಿ ತೀರ ಕಡಿಮೆ. ಹಾಗೆ ಸಂಪೂರ್ಣ ನೈಪುಣ್ಯವನ್ನು ಹೊಂದಿದ ಧನಿಗಳಿಗೆ ತಮ್ಮ ಭಾವವನ್ನು ಪೂರ್ಣರೂಪದಲ್ಲಿ ಕೃತಿಗಿಳಿಸಲು ಬದುಕಿನಲ್ಲಿ ಹಲವಾರು ತೊಡಕುಗಳು ಬರುತ್ತವೆ. ಹಾಗೆ ಯಾವ ತೊಡಕೂ ಇಲ್ಲದೆ ತಾವಂದುಕೊಂಡ ಕೆಲಸವನ್ನು ಪೂರ್ಣರೂಪದಲ್ಲಿ ಮಾಡಿ ಮುಗಿಸಿ ಧನ್ಯತೆಯ ಭಾವ ಲಕ್ಷಕ್ಕೊಬ್ಬರಿಗೆ ಸಿಕ್ಕಬಹುದು.

ದೃಢ ಚಿತ್ತ, ಏಕಾಗ್ರತೆ, ಹಠ ಮತ್ತು ಒಂದು ಗುರಿ ಇದ್ದರೆ ಹಿಡಿದ ಕೆಲಸವನ್ನು ಕೊನೆ ಮುಟ್ಟಿಸಬಹುದು. "ದೃಢ ಚಿತ್ತ, ಏಕಾಗ್ರತೆ, ಹಠ ಮತ್ತು ಒಂದು ಗುರಿ ಎಂದರೆ ಏನು?" ಎನ್ನುವ ಸಮಯ ಇಂದು. ನಾವು ಬದುಕುವ ಸಮಾಜದಲ್ಲಿ ನಮ್ಮನ್ನು ದಿಕ್ಕು ದಿಕ್ಕುಗಳಿಗೆ ಸೆಳೆಯುವ ಸೆಳೆತಗಳು ಸಾವಿರಾರು. ಸಂಸಾರದಲ್ಲಿದ್ದರೆ ನಿರ್ವಹಿಸಲೇಬೇಕಾದ ಕರ್ತವ್ಯಗಳು, ನಮ್ಮ ಅವಶ್ಯಕತೆಗಳು ಎಲ್ಲ ನಮಗೆ ಒಂದು ಗುರಿಯನ್ನಿಟ್ಟುಕೊಳ್ಳಲಾಗಲೀ ಅಥವಾ ಆ ಗುರಿ ಸಾಧನೆಗೆ ಛಲ ಅಥವಾ ಹಠವನ್ನಾಗಲೀ ಬೆಳೆಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿಗೆ ನಾವು ತಲುಪಿದ್ದೇವೆ.

ಇಂತಹ ಸ್ಥಿತಿಯಲ್ಲೂ ಯಾರಾದರೂ ತಾವಂದುಕೊಂಡ ಕೆಲಸವನ್ನು ಪೂರ್ಣರೂಪದಲ್ಲಿ ಮಾಡಿ ಒಂದು ಧನ್ಯತೆಯ ಭಾವವನ್ನು ಮತ್ತು ತೃಪ್ತಿಯನ್ನು ಪಡೆಯುವಂತವರಾದರೆ ಅವರೇ ಈ ಜಗತ್ತಿನಲ್ಲಿ ‘ಧನಿ’ ಗಳು ಎನ್ನುವುದೇ ಈ ಮುಕ್ತಕದ ಹೂರಣ

 

ದಿನಕ್ಕೊಂದು ಚೆನ್ನುಡಿ

ನಮ್ಮದು ‘ಮಿತ’ವಾದ ಅರಿವು ಎಂದು ಅರಿತರೆ, ಅದು ನಮ್ಮನ್ನು ಜ್ಞಾನದೆಡೆಗೆ ಮುನ್ನಡೆಸುತ್ತದೆ.
ನನಗೆಲ್ಲವೂ ತಿಳಿದಿದೆ ಎಂದು ಅಂದುಕೊಂಡರೆ, ನಮ್ಮನ್ನು ಮತ್ತಷ್ಟು ಮೂರ್ಖರನ್ನಾಗಿಸುತ್ತದೆ.

 

ರಸ ಚೆನ್ನುಡಿ

ಬದುಕಿನಲ್ಲಿ ಯಶಸ್ಸನ್ನು ನಾವು ಏರಿದ ಎತ್ತರದಿಂದಲ್ಲ

ಮುಳ್ಳು, ಹಳ್ಳ, ಕೊಳ್ಳಗಳ ಹಾದಿಯನ್ನು ದಾಟಿಬಂದ ಪರಿಯಿಂದ ಅಳೆಯಬೇಕು

 

ರಸ ಚೆನ್ನುಡಿ

ಕರುಣೆ ಮತ್ತು ಪ್ರೀತಿಯ ನುಡಿಗಳು ಚಿಕ್ಕದಾಗಿ ಮತ್ತು ಚೊಕ್ಕವಾಗಿರಬಹುದು
ಆದರೆ ಅದು ಅನ್ಯರ ಹೃದಯಗಳಲ್ಲಿ ಅನಂತ ಮಾರ್ನುಡಿಗಳನ್ನೆಬ್ಬಿಸುತ್ತದೆ – ಅನಾಮಿಕ

 

ರಸ ಚೆನ್ನುಡಿ

ನಮ್ಮ ಮುನ್ನಡೆಯನ್ನು ಮತ್ತು ಶ್ರೇಯಸ್ಸನ್ನು ಕದಿಯುವ ಏಕೈಕ ಚೋರ, ನಮ್ಮ ಅಹಂಕಾರ – ಅನಾಮಿಕ