RSS

Monthly Archives: ಮಾರ್ಚ್ 2014

ರಸ ಚೆನ್ನುಡಿ

ಕೋಪವೆಂಬುದು ಒಂದು ತೀವ್ರ ಭಾವ. ಕೇವಲ ವಿವೇಕಿಗಳು ಮಾತ್ರ ಅದನ್ನು ಗೆಲ್ಲಬಲ್ಲರು.

Advertisements
 

ರಸ ಚೆನ್ನುಡಿ

ನಿಮ್ಮೊಡನೆ ಸಮಭಾವದಿಂದ ನಡೆದುಕೊಳ್ಳುವವರನ್ನು ಪ್ರೀತಿಸಿ.
ಹಾಗಲ್ಲದವರನ್ನು ಕ್ಷಮಿಸಿಬಿಡಿ – ಬದುಕು ಸುಂದರವಾಗುತ್ತದೆ – ಅನಾಮಿಕ

 

ರಸಧಾರೆ – ೫೮೦

ದೊರೆಯವೇಷವ ಧರಿಸಿ ಮರೆಯುವೆಯ ಮೀಸೆಯನು? ।

ತಿರುಕಹಾರುವನಾಗಿ ಮೀಸೆ ತಿರಿಚುವೆಯ? ।।

ಇರುವುದವನವನಿಗವನವನ ತಾಣದಧರ್ಮ ।

ಅರಿವೆಋತುಗತಿಯಂತೆ – ಮಂಕುತಿಮ್ಮ ।।

ಇರುವುದವನವನಿಗವನವನ=ಇರುವುದು+ಅವನವನಿಗೆ+ಅವನವನ

ತಾಣದ=ಸ್ಥಳದ, ಋತುಗತಿ=ಋತು ಬದಲಾವಣೆ, ಧರ್ಮ= ಇರಬೇಕಾದ ರೀತಿ ಮತ್ತು ಮಾಡಬೇಕಾದ ಕರ್ಮ.

ನಾಟಕದಲ್ಲಿ ರಾಜನ ಪಾತ್ರ ಧರಿಸಿ ಮೀಸೆಯನ್ನು ಮರೆಯಬಹುದೇ? ಭಿಕ್ಷಾರ್ಥಿಯಾದ ಬಡ ಬ್ರಾಹ್ಮಣನ ವೇಷ ಧರಿಸಿದಪ್ಪ ದಪ್ಪ ಮೀಸೆಯನ್ನು ಇಟ್ಟುಕೊಂಡರೆ ಬಿಕ್ಷೆ ಸಿಕ್ಕೀತೆ?. ಜಗತ್ತಿನಲ್ಲಿರುವ ಪ್ರತಿಯೊಬ್ಬನಿಗೂ ಅವನವನದೇ ಆದಂತ ಒಂದು ಪಾತ್ರವಿರುತ್ತದೆ ಮತ್ತು ಆ ಪಾತ್ರಕ್ಕೊಂದು ಧರ್ಮವಿರುತ್ತದೆ. ಋತು ಬದಲಾದಂತೆ ನಮ್ಮ ಉಡುಗೆ ತೊಡುಗೆಗಳೂ ಬದಲಾಗುವುದಿಲ್ಲವೇ? ಹಾಗೆ ಸಮಯ ಸಂಧರ್ಭದ ಔಚಿತ್ಯಕ್ಕನುಸಾರವಾಗಿ ನಮ್ಮ ವೇಷ, ನಡೆ ನುಡಿ ಇರಬೇಕು ಎನ್ನವುದೇ ಈ ಮುಕ್ತಕದ ಹೂರಣ

ಔಚಿತ್ಯವೆಂದರೆ ನಮ್ಮ ಪಾತ್ರ, ಸಮಯ, ಸ್ಥಳ ಮತ್ತು ಸಂದರ್ಭಕ್ಕೆಉಚಿತವಾಗಿ ನಡೆದುಕೊಳ್ಳುವುದು ಎಂದು ಅರ್ಥ. ನಾವು ನಮ್ಮ ಜೀವನದಲ್ಲಿ ಹಲವಾರು ವೇಷಗಳನ್ನು ಹಾಕುತ್ತೇವೆ. ಮನೆಯಲ್ಲಿನ ವ್ಯಕ್ತಿಗಳಿಗೊಂದು ವೇಷ, ಸ್ನೇಹಿತರೊಂದಿಗೊಂದು ವೇಷ, ನಾವು ಕೆಲಸಮಾಡುವ ಸ್ಥಳದಲ್ಲಿ ಒಂದು ವೇಷ, ಅಂತರಂಗದ ವೇಷಹೀಗೆ ದಿನ ನಿತ್ಯ ಹತ್ತು ಹಲವಾರು ವೇಷಗಳನ್ನು ಹಾಕುವ ನಾವು ಆಯಾಯಾ ಸಂದರ್ಭಕ್ಕೆ ತಕ್ಕಂತೆ ನಡೆದುಕೊಂಡರೆ ನಾವು ಔಚಿತ್ಯವನ್ನು ಕಾಪಾಡಿಕೊಂಡುಪಾಲಿಸಿದಂತಾಗುತ್ತದೆ. ಇಲ್ಲದಿದ್ದರೆ ಅಸಾಂದರ್ಭಿಕ ಮಾತು, ನಡೆ, ನುಡಿಗಳಿಂದ ನಾವು ಅಭಾಸಕ್ಕೆ ಗುರಿಯಾಗುತ್ತೇವೆ, ಸಿಪಾಯಿಯಂತೆ ನಡೆಯುವ ನಾರದ ಅಥವಾ ಹೆಣ್ಣಿನಂತೆ ನಡೆಯುವ ಭೀಮನಂತೆಪಾತ್ರಕ್ಕನುಚಿತ ನಟನೆಯಿಂದ ಪ್ರೇಕ್ಷಕರ ಅವಹೇಳನಕ್ಕೆ ಗುರಿಯಾಗುವ ನಟನಂತೆ.

ನಮ್ಮ ನೆಲೆಯನ್ನು ಅರಿಯಬೇಕು ಮತ್ತು ನಮ್ಮ ತತ್ಕಾಲದ ಪಾತ್ರದ ಧರ್ಮವನ್ನರಿಯಬೇಕು. ನಮ್ಮ ಇತಿ ಮಿತಿಗಳನ್ನರಿಯಬೇಕು. ಹಾಗೆ ಅರಿತರೆ ಮತ್ತು ಅದಕ್ಕನುಗುಣವಾಗಿ ನಡೆದುಕೊಂಡರೆ ನಮ್ಮ ವ್ಯಕ್ತಿತ್ವಕ್ಕೆ ಒಂದು ಪಕ್ವತೆ ಸಿಗುತ್ತದೆ. ಅದು ಸಿಗುವ ತನಕ ಅದನ್ನು ಪಡೆದುಕೊಳ್ಳುವ ನಮ್ಮ ಪ್ರಯತ್ನ ಸಾಗಬೇಕು. ಆದರೆ ಇದರಲ್ಲಿ ಒಂದು ತೊಡಕಿದೆ. ಒಬ್ಬ ವ್ಯಕ್ತಿ ಒಂದು ವೃತ್ತಿಯಿಂದಕಾರಣಾಂತರಗಳಿಂದ ಮತ್ತೊಂದುವೃತ್ತಿಗೆ ಬದಲಾಗುವ ಪ್ರಮೇಯ ಬರಬಹುದು. ಬ್ಯಾಕಿನ ನೌಕರಿ ಬಿಟ್ಟು ವಕೀಲನಾಗುವ ಅಥವಾ ಎಂಜಿನಿಯರ್ ಆಗಿದ್ದವ ಉಪಾಧ್ಯಾಯನಾಗಬಹುದು.ಹೀಗೆ ಹಲವಾರು ವಿಧದ ಮಾರ್ಪಾಡುಗಳು ನಮಗೆ ದೃಷ್ಟಾಂತದ ರೂಪದಲ್ಲಿ ಸಿಗುತ್ತವೆ. ಇಲ್ಲಿ ಕಲಿತ್ತದ್ದನ್ನು ತೊರೆದು ಹೊಸತನ್ನು ಕಲಿಯುವ ಸಂದರ್ಭವೊದಗುತ್ತದೆ. ರಾಮಾಯಣ ನಾಟಕದ ರಾವಣನ ಪಾತ್ರದವ, ಮಹಾಭಾರತದ ನಾಟಕದಲ್ಲಿ ಕೃಷ್ಣನಾಗಬಹುದು. ಬದಲಾದ ಸಂದರ್ಭಕ್ಕೆ ಒಪ್ಪುವಂತೆ ಕಲಿತು ನಡೆಯುವುದೇ ಜಾಣತನ.

ನಾವು ಏನೇ ಆಗಿರಲಿ ನಮ್ಮ ಪಾತ್ರದ ಔಚಿತ್ಯ ಮತ್ತು ಧರ್ಮವನ್ನು ಅಳವಡಿಸಿಕೊಂಡರೆ ಒಳ್ಳೆಯದು. ನಾಟಕದಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಪಾತ್ರ. ಆದರೆ ನಿಜ ಜೀವನದಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಸಮಯಕ್ಕೆ ಹಲವಾರು ಪಾತ್ರಗಳು, ಪರಸ್ಪರ ಸಂಬಂಧಗಳಔಚಿತ್ಯವನ್ನರಿತು, ನಮ್ಮ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರೊಡನೆ ನಮ್ಮ ಪಾತ್ರಕ್ಕನುಗುಣವಾಗಿನಡೆದುಕೊಂಡರೆ ಬಾಳು ಸುಖ.

 

ರಸ ಚೆನ್ನುಡಿ

ನಮ್ಮ ಬಾಳಲ್ಲಿ ಎರಡು ಮಹತ್ವದ ದಿನಗಳಿವೆ. ಒಂದು ನಾವು ಜನಿಸಿದ ದಿನ.
ಮತ್ತೊಂದು ನಾವೇಕೆ ಜನಿಸಿದ್ದೇವೆ ಎಂದು ಅರಿತುಕೊಳ್ಳುವ ದಿನ – ಅನಾಮಿಕ

 

ರಸ ಚೆನ್ನುಡಿ

ಯಾರಾದರೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ.
ಅವರು ಮತ್ತೆ ಕಷ್ಟದಲ್ಲಿ ಬಿದ್ದಾಗ ನಿಮ್ಮನ್ನು ಖಂಡಿತ ನೆನೆಯುತ್ತಾರೆ – ಅನಾಮಿಕ

 

ರಸಧಾರೆ – ೫೭೯

ಬೆನ್ನಿನಗಲವನಳೆದು ಹೊರಗೆ ನೀನದನೊಡ್ದು ।
ತನ್ನದೆವುದನು ವಿಧಿ ತಾನೆ ಕೊಳಲಿ ಬಿಡು ।।
ಬನ್ನ ನಿನಗೊದಗಲದನಾತ್ಮಶಿಕ್ಷಣವೆನ್ನು ।
ಮಾನ್ಯದೊಪ್ಪಂದವಿದು – ಮಂಕುತಿಮ್ಮ ।।

ಬೆನ್ನಿನಗಲವನಳೆದು=ಬೆನ್ನಿನ+ಅಗಲವನು+ಅಳೆದು, ನೀನದನೊಡ್ದು=ನೀನು+ಅದನು+ಒಡ್ದು, ತನ್ನದೆವುದನು=ತನ್ನದು+ಎನ್ನುವುದನು.ನಿನಗೊದಗಲದನಾತ್ಮಶಿಕ್ಷಣವೆನ್ನು=ನಿನಗೆ+ಒದಗಲು+ಅದನು+ಆತ್ಮ+ಶಿಕ್ಷಣ+ಎನ್ನು, ಮಾನ್ಯದೊಪ್ಪಂದವಿದು=ಮಾನ್ಯದ+ಒಪ್ಪಂದ+ಇದು.

ಬನ್ನ=ಭಂಗ, ಮಾನ್ಯದ=ಒಪ್ಪುವಂತಹ,

ಬದುಕಿನಲ್ಲಿ ಜೀವನದ ದೈನಂದಿನ ಕಾರ್ಯಕೆಲಸಗಳಲ್ಲಿ, ಎಷ್ಟು ಭಾರವನ್ನು ನಿನಗೆ ಹೊರಲು ಆಗುವುದೋ, ಅಷ್ಟನ್ನು ಮಾತ್ರ ಹೊತ್ತುಕೋ!! ನಿನ್ನ ಪೂರ್ವ ಕರ್ಮದನುಸಾರ ನಿನ್ನಿಂದ ಏನೇನು ಆಗಬೇಕೋ ಅದನ್ನೆಲ್ಲ ಆ ವಿಧಿ ಮಾಡಿಸಿಕೊಳ್ಳಲಿ ಬಿಡು. ಹಾಗೆ ಕರ್ಮ ಮಾಡುವಾಗ ಭಂಗವುಂಟಾದರೆ ಅದನ್ನು ಬದುಕಿನಲ್ಲಿ ನಿನಗೆ ಸಿಗುವ ಶಿಕ್ಷಣವೆಂದು ತಿಳಿ. ಅದೇ ಸರಿಯಾದ ಒಡಂಬಡಿಕೆ(compromise) ಎಂದು ಬದುಕನ್ನು ಬದುಕುವ ಮತ್ತೊಂದು ಪರಿಯನ್ನು ಉಪದೇಶಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಒಬ್ಬೊಬ್ಬರಿಗೆ ಒಂದೊಂದು ಪ್ರತಿಬೆ, ಶಕ್ತಿ, ಕ್ಷಮತೆ ಇರುತ್ತದೆ. ಎಲ್ಲರಿಗೂ ಒಂದೇ ಸಮನಾದ ಶಕ್ತಿಯಿರುವುದಿಲ್ಲವೆಂಬುದು ಸರ್ವ ವಿಧಿತ. ಹಾಗಾಗಿ ಎಲ್ಲರೂ ಎಲ್ಲ ಕೆಲಸವನ್ನೂ ಸಮನಾಗಿ ಮಾಡಲಾಗುವುದಿಲ್ಲ. ಹಾಗಾಗಿ ನಮ್ಮ ”ಬೆನ್ನಿನಗಲ” ಎಂದರೆ ನಮಗೆ ಎಷ್ಟು ಹೊರಯನ್ನು ಹೊರಲು ಸಾಧ್ಯವಿದೆ ಎಂದು ತಿಳಿದುಕೊಳ್ಳಬೇಕು. ನಾವೆಲ್ಲರೂ ವಿಧಿಯನುಸಾರ ಶಕ್ತಿಯನ್ನುಮತ್ತು ಆ ಶಕ್ತಿಯ ಮಿತಿಯನ್ನುಪಡೆದ್ದಿದ್ದೇವೆ ಮತ್ತು ನಾವು ನಮ್ಮ ನಮ್ಮ ಪೂರ್ವಕರ್ಮಗಳಿಗನುಸಾರ ಕೆಲಸಮಾಡುತ್ತೇವೆ ಎಂಬ ಅರಿವು ನಮಗಾದರೆ, ನಾವು ಮಾಡುವುದು ಫಲಾಪೇಕ್ಷೆಯಿಲ್ಲದ ನಮ್ಮ ಕೈಲಾಗುವಂತಹ ಕರ್ಮವಾಗುತ್ತದೆ. ಹಾಗಾದಾಗ, ಮಾನ್ಯ ಗುಂಡಪ್ಪನವರು"ತನ್ನದೆನುವುದನು ವಿಧಿ ತಾನೆ ಕೊಳಲಿ ಬಿಡು" ಎಂದು ಹೇಳುವಂತೆ ನಮ್ಮಿಂದ ಆ ವಿಧಿ ತನಗೆ ಏನು ಬೇಕೋ ಮತ್ತು ಹೇಗೆ ಬೇಕೋ ಹಾಗೆ ಕೆಲಸ ಮಾಡಿಸಿಕೊಳ್ಳುತ್ತದೆ.

ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ "ಕರ್ಮಣ್ಯೇ ವಾ ಅಧಿಕಾರಸ್ಥೆ ಮಾ ಫಲೇಶು ಕದಾಚನ "ಎನ್ನುವ ಅರ್ಥದಲ್ಲಿ ನಮ್ಮ ಕರ್ಮಗಳನ್ನು ಮಾಡಿದರೆ ಆ ಕರ್ಮ ಫಲದಿಂದ ಬರುವ ಸುಖ ದುಃಖಗಳ ಪರಿಣಾಮ ನಮ್ಮ ಮೇಲೆ ಆಗದೆ, ನಾವು ನಿರ್ಲಿಪ್ತತೆಯಿಂದ ಇದ್ದರೆ, ನಿಜವಾದ ಆನಂದವನ್ನು ಪಡೆಯಬಹುದು ಎನ್ನುವುದು ತತ್ವ. ಆದರೆ ಆ ರೀತಿ ಇರಲು ಎಷ್ಟು ಜನರಿಗೆ ಸಾಧ್ಯ. ಆ ಸ್ಥಿತಿಗೆ ತಲುಪಲು ಯಾವ ಯಾವ ರೀತಿಯ ಸಿದ್ಧತೆಗಳು ಆಗಬೇಕು. ಏನನ್ನು ಕಲಿಯಬೇಕು(Learning) ಮತ್ತು ಕಲಿತ ಏನನ್ನು ಬಿಡಬೇಕು
(unlearning ) ಎನ್ನುವುದು ಆ ಸ್ಥಿತಿಗೆ ಹೋಗಬೇಕೆಂದು ಇಚ್ಚಿಸುವವರ ಮುಂದೆ ಬರುವ ಪ್ರಶ್ನೆಗಳು. ಉತ್ತರವನ್ನು ನಮ್ಮ ರೀತಿಯಲ್ಲೇ ಕಂಡುಕೊಂಡು ಆ ಮಾರ್ಗದಲ್ಲಿ ಹೊರಟರೆ ”ಬನ್ನ" ಎಂದರೆ ಭಂಗಗಳು ಎಂದರೆ ಹಲವಾರು ಅಡ್ಡಿ ಆತಂಕಗಳು ಒದಗುತ್ತವೆ. ನಾವಿರುವ ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ತಲುಪುವ ಪ್ರಯತ್ನದಲ್ಲಿ ನಮಗೆ ವಿಘ್ನಗಳು ಬಂದೇ ಬರುತ್ತವೆ. ಧೃತಿಗೆಡದೆ ಇರಬೇಕಾದರೆ, ಹಿಡಿದ ಕೆಲಸವನ್ನು ಮುಂದುವರೆಸಿಕೊಂಡು ದಡ ಮುಟ್ಟಬೇಕಾದರೆ ಆ ವಿಘ್ನಗಳನ್ನು ಅನುಭವಿಸಿ ಪಾರಾಗಬೇಕು. ಆ ಪ್ರಯಾಣದಲ್ಲಿ ನಾವು ಕಲಿಯುವುದು ಅನೇಕ ವಿಷಯಗಳು. ಅದೇ ಶಿಕ್ಷಣ. ಅನುಭವಗಳ ಮೂಸೆಯಿಂದ ನಮಗೆ ಎರೆಯಲ್ಪಡುವ ಬದುಕಿನ ಶಿಕ್ಷಣ, ಪಾಠ.

ನಮ್ಮ ಇತಿಮಿತಿಗಳನ್ನೂ ಅರಿತು, ಕೈಲಾದಷ್ಟು ಕರ್ಮಗಳನ್ನು ಮಾಡುತ್ತಾ, ನಿರ್ಲಿಪ್ತತೆಯಿಂದ ವಿಧಿಗೆ ನಮ್ಮನ್ನು ನಾವು ಒಡ್ಡಿಕೊಂಡು ಕೆಲಸಗಳನ್ನು ಮಾಡುತ್ತಾ ಹೋಗುವುದೇ ಜಾಣತನವೆನ್ನುವಂತೆ "ಮಾನ್ಯದೊಪ್ಪಂದವಿದು" ಎಂದಿದ್ದಾರೆ ಗುಂಡಪ್ಪನವರು. ಯಾವುದೋ ಒಂದು ನಿರ್ಧಿಷ್ಟ ಅಪೇಕ್ಷೆಯಿಂದ ಮಾಡುವ ಕೆಲಸಗಳಿಗೆ ಸಾಮಾನ್ಯವಾಗಿ ”ನಿರಾಶೆ" ಯೇ ಫಲ. ಅದರಿಂದ ಮನಸ್ಸಿಗೆ ಕ್ಲೇಷೆ. ಆದ್ದರಿಂದ ವಿಧಿಯೊಡನೆ ಒಪ್ಪಂದ ಮಾಡಿಕೊಂಡು ಬದುಕಿದರೆ ನಮ್ಮ ಜೀವನವೂ ಸುಖ ಸಂತೋಷ ಮತ್ತು ಸಾರ್ಥಕ್ಯದಿಂದ ಕೂಡಿರಬಹುದು.

 

ರಸ ಚೆನ್ನುಡಿ

ಬದುಕು ಸಂತೋಷವಾಗಿರಬೇಕಾದರೆ ಜೀವನದಲ್ಲಿ ಹಂಚಿಕೊಂಡು ಬಾಳುವುದನ್ನು ಕಲಿಯಬೇಕು – ಅನಾಮಿಕ