RSS

Monthly Archives: ಏಪ್ರಿಲ್ 2014

ರಸ ಚೆನ್ನುಡಿ

ಮುಚ್ಚಿದ ಬಾಗಿಲುಗಳನ್ನು ತೆರೆಯಲು ಎಂದೂ ಹೆದರಲೇ ಬಾರದು
ಬಹುಶಃ ಯಾವುದಾದರೊಂದು ಬಾಗಿಲಿಂದ ನಮ್ಮೆಲ್ಲ ಸಮಸ್ಯೆಗಳು ಅಂತ್ಯವಾಗುವಂತಹ ಪರಿಹಾರ ದೊರೆಯಬಹುದು – ಅನಾಮಿಕ

Advertisements
 

ರಸಧಾರೆ – ೫೯೮

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು ।ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ।।
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು ನೀ- ।
ನೆದುರು ನಿಲೆ ಬಿದಿಯೊಲಿವ – ಮಂಕುತಿಮ್ಮ ।।

ಬದುಕೊಂದು=ಬದುಕು+ಒಂದು, ಕದನವೆಂದಂಜಿ=ಕದನವು+ಎಂದು+ಅಂಜಿ, ಬಿಟ್ಟೋಡುವನು=ಬಿಟ್ಟು+ಓಡುವನು, ಕವಳವಾಗದುಳಿಯುವನೆ=ಕವಳ+ಆಗದೆ+ಉಳಿಯುವನೆ? ಎದೆಯನುಕ್ಕಾಗಿಸುತ,=ಎದೆಯನು+ಉಕ್ಕು+ಆಗಿಸುತ, ಬಿದಿಯೊಲಿವ=ಬಿದಿ+ಒಲಿವ

ಕದನ=ಹೋರಾಟ, ಬಿದಿ=ವಿಧಿ, ಕವಳ=ಆಹಾರ, ಉಕ್ಕು=ಕಬ್ಬಿಣ, ಮತಿಗದೆ=ವಿವೇಕವೆಂಬ ಗದೆ, ಒಲಿವ=ಕಾಪಾಡುವ.

ಜೀವನವನ್ನು ಒಂದು ಕದನವೆಂದು, ಅದಕ್ಕೆ ಹೆದರಿ ಬಿಟ್ಟು ಓಡಿಹೋಗುವವನು ವಿಧಿಯ ವಿನ್ಯಾಸದಿಂದ ಹೊರಗುಳಿಯಲು ಸಾಧ್ಯವೇ? ಹಾಗೆ ಹೆದರಿ ಹೋದರೆ ವಿಧಿಯು ವಿಧಿಸಿದ ಕರ್ಮವ ಸವೆಸದೆ ಈ ಬದುಕಿನಿಂದ ಹೋಗಲು ಸಾಧ್ಯವೇ? ಹಾಗಾಗಿ ಮನಸ್ಸಿನಲ್ಲಿ ಧೈರ್ಯವನ್ನು ತುಂಬಿಕೊಂಡು, ವಿವೇಕವನ್ನೇ ಆಯುಧವನ್ನಾಗಿಸಿಕೊಂಡು, ಬಂದದ್ದನ್ನೆಲ್ಲಾ ಎದುರಿಸುತ್ತೇನೆ ಮತ್ತು ಸಹಿಸುತ್ತೇನೆ ಎಂದು ಗಟ್ಟಿಯಾಗಿ ನಿಂತರೆ, ಭವ ಸಾಗರವನ್ನು ಈಜಲು ನಮ್ಮ ಪ್ರಯತ್ನಕ್ಕೆ ಆ ವಿಧಿಯೂ ಸಹ ಸಹಾಯಮಾಡುತ್ತದೆ, ಎಂದು ನಮಗೆ ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಾವು ಬದುಕಿಗೆ ಒಂದು ರೂಪವನ್ನು ಹೊತ್ತು ಬಂದಿದ್ದೇವೆ ಎಂದರೆ, ನಮ್ಮ ಪೂರ್ವ ನಿರ್ಧಾರಿತ ಕರ್ಮಗಳನ್ನು ಹೊತ್ತು ತಂದಿದ್ದೇವೆ ಮತ್ತು ಅದನ್ನು ಸವೆಸಲು ಬದುಕಲೇ ಬೇಕು ಎಂದೇ ಅರ್ಥ. ನಮ್ಮ ಆಲೋಚನೆಗಳು, ಅದಕ್ಕನುಸಾರವಾಗಿ ನಮ್ಮ ಯೋಜನೆಗಳು, ಕಾರ್ಯಗಳು ಸಾಧನೆಗಳು ಮತ್ತು ತತ್ಪರಿಣಾಮವಾಗಿ ಸಿಗುವ ಫಲಗಳು ಎಲ್ಲವೂ ಪೂರ್ವನಿರ್ಧಾರಿತ. ಆದರೆ ವಿಧಿಯ ಕಾರ್ಯವಿಧಾನ ನಮಗೆ ಗೊತ್ತಾಗುವುದಿಲ್ಲವಾದ್ದರಿಂದ ಎಲ್ಲವೂ ನಮಗೆ ಹೊಸದಾಗಿ ಕಾಣುತ್ತದೆ. ಕೇವಲ ಕೆಲವರನ್ನು ಬಿಟ್ಟರೆ ಬಹುತೇಕ ಎಲ್ಲರ ಜೀವನವೂ ಒಂದು ಹೋರಾಟವೇ! ಇದನ್ನು ಧೈರ್ಯದಿಂದ ಎದುರಿಸಬೇಕು. ಬಿಟ್ಟು ಹೋಗಲು ಸಾಧ್ಯವಿಲ್ಲ.

"ಬಿದಿಯ ಬಾಯಿಗೆ ಕವಳವಾಗದುಳಿಯುವನೆ" ಎಂದು ಹೇಳುತ್ತಾ ವಿಧಿಯ ವಿನ್ಯಾಸದಲ್ಲಿ ನಮಗಾಗಿ ಬರೆದ ಬರಹಗಳನ್ನು ನಾವು ಅನುಭವಿಸಿಯೇ ತೀರಬೇಕು, ಅನ್ಯಥಾ ದಾರಿಯೇ ಇಲ್ಲ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. "ಈಸಬೇಕು ಈಸಿ ಜಯಿಸಬೇಕು" ಎಂದು ದಾಸರು ಹೇಳುವಂತೆ ಧೈರ್ಯದಿಂದ ಬಂದದ್ದನ್ನೆಲ್ಲಾ ಎದುರಿಸಬೇಕು. ವಿಧಿಲಿಖಿತ ಕರ್ಮವನ್ನು ಸವೆಸಲೇ ಬೇಕು, ಇಲ್ಲಿಗೆ ಬಂದ ಮೇಲೆ ಅದರಿಂದ ತಪ್ಪಿಸಿಕೊಂಡು ಪಲಾಯನ ಮಾಡುವುದು " ಸಮಸ್ಯೆಯನ್ನು ಮುಂದೂದುವುದಷ್ಟೇ". ಎಂದಾದರೂ ಒಂದು ದಿನ ನಾವು ವಿಧಿಗೆ ಕವಳವಾಗಲೇಬೇಕೆಂದಮೇಲೆ ಇಂದೇ ಏಕೆ ಆಗಬಾರದು. ಕಷ್ಟವನ್ನು ಅನುಭವಿಸುವುದನ್ನು ಮುಂದೂದುಡುವುದಕ್ಕಿಂತ ಅನುಭವಿಸಿ ತೀರಿಸಿಬಿಡುವುದೇ ಲೇಸು.

ಹಾಗೆ ವಿಧಿಲಿಖಿತದಿಂದ ಪಲಾಯನ ಮಾಡದೆ " ಬಂದದ್ದೆಲ್ಲಾ ಬರಲಿ, ನೋಡಿಯೇ ಬಿಡುವ " ಎಂದು ಗಟ್ಟಿಯಾಗಿ, ಧೈರ್ಯದಿಂದ ಅನುಭವಿಸಲು ನಿಂತರೆ, ಆ ವಿಧಿಯು ಕರಗಿ ತಾನೇ ಒಡ್ಡಿದ ಸಮಸ್ಯೆಗಳನ್ನು, ಅನುಭವಿಸಿ ಸುಲಭವಾಗಿ ದಡ ಸೇರಲು, ನಮಗೆ ಸಹಾಯ ಮಾಡುತ್ತಾನೆ. ನಮ್ಮ ಜೀವನದ ಗತಿ ವಿಧಿಯ ಅಧೀನವಾದ್ದರಿಂದ ಅವನನ್ನು ನಂಬಿ ಧೈರ್ಯದಿಂದ ಮುನ್ನುಗಿದರೆ ಸಮಸ್ಯೆಗಳೂ ತೀರುವುದು, ಬದುಕಿನಲ್ಲಿ ನೆಮ್ಮದಿಯೂ ಸಿಗುವುದು.

 

ರಸ ಚೆನ್ನುಡಿ

ಬದುಕಿನ ನಗ್ನ ಸತ್ಯವನ್ನು ಕೇವಲ ಒಂದು ಸಾಲಿನಲ್ಲಿ ಹೇಳಿಬಿಡಬಹುದು

" ಭಯವನ್ನು ಗೆಲ್ಲು " ನೀ ಏನನ್ನಾದರೂ ಸಾಧಿಸಬಹುದು – ಅನಾಮಿಕ

 

ರಸ ಚೆನ್ನುಡಿ

ದುಷ್ಟತನವೆಂದರೆ ಕಳ್ಳತನ, ಕೊಲೆ, ಸುಲಿಗೆ ದರೋಡೆ ದುಂಡಾವರ್ತಿ ಮುಂತಾದವುಗಳಷ್ಟೇ ಆಲ್ಲ

ಮತ್ತೊಬ್ಬರ ಮನಸ್ಸಿಗೆ ಕಿಂಚಿತ್ ನೋವನ್ನು ಕೊಡುವುದೂ ಸಹ ದುಷ್ಟತನ. ಅದು ನಮ್ಮಲ್ಲಿದ್ದರೆ ತೊರೆಯುವುದು ಒಳ್ಳೆಯದು – ಅನಾಮಿಕ

 

ರಸಧಾರೆ – ೫೯೭

ಬಿತ್ತ ಮಳೆಗಳವೋಲು ಯತ್ನ ದೈವಿಕ ನಮಗೆ ।ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು ।।
ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ ।

ಗೊತ್ತಿಲ್ಲ ಫಲದ ಬಗೆ – ಮಂಕುತಿಮ್ಮ।।

ಮಳೆಗಳವೋಲು = ಮಳೆಗಳ +ವೋಲು, ಯುಕ್ತದೊಳಗೆರಡುಮನುವಾಗೆ=ಯುಕ್ತದೊಳಗೆ+ಎರಡುಂ+ಅನುವಾಗೆ,

ವೋಲು=ರೀತಿ, ಯುಕ್ತದೊಳಗೆ= ಆಗುವುದರಲ್ಲಿ, ಹುಲುಸು=ಸಮೃದ್ಧ, ಅನುವಾಗೆ=ಹೊಂದಿಕೊಂಡರೆ,

ಸಕಾಲಕ್ಕೆ ಬಿತ್ತುವ ಬೀಜ ಮತ್ತು ಬರುವ ಮಳೆಯಿಂದಾಗಿ ಬೆಳೆ ಬರಬೇಕು. ಸಕಾಲಕ್ಕೆ ಸರಿಯಾದ ಬೀಜವನ್ನು ಬಿತ್ತುವುದು ನಮ್ಮ ಯತ್ನ, ಸಕಾಲಕ್ಕೆ ಸರಿಯಾದ ಹದದಲ್ಲಿ ಬರುವ ಮಳೆ ದೈವ ಕೃಪೆಯಿಂದಾಗಬೇಕು. ನಾಮ್ಮ ಪ್ರಯತ್ನ ಮತ್ತು ದೈವ ಕೃಪೆಗಳು ಸೇರಿದರೆ ಬೆಲೆ ಹುಲುಸಾಗಿ ಬೆಳೆಯುತ್ತದೆ. ನಮ್ಮ ಪ್ರಯತ್ನವನ್ನು ಮಾಡದಿದ್ದರೆ ಅದು ನಮ್ಮ ಕರ್ತವ್ಯ ಲೋಪ. ದೈವ ಕೃಪೆಯಾಗದಿದ್ದರೆ ದೈವ ಮುನಿಸಿಕೊಂಡಿದೆ ಎಂದೇ ತಿಳಿಯಬೇಕು. ಹಾಗಾಗಿ ನಮಗೆ ನಮ್ಮ ಕೆಲಸಕಾರ್ಯಗಳಿಗೆ ಸೂಕ್ತ ಫಲ ಸಿಗುವುದೋ ಇಲ್ಲವೋ ಎಂಬ ಅರಿವಿಲ್ಲ ಎಂದು ಉಲ್ಲೇಖಮಾದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಮಗೆ ಜೀವನದಲ್ಲಿ ಏನೇನೋ ಆಸೆಗಳು. ತೃಪ್ತಿಯೇ ಆಗುವುದಿಲ್ಲ. ಒಂದು ಆಸೆ ಪೂರೈಸಿದರೆ ಮತ್ತೊಂದು ಮೇಲೆ ಏಳುತ್ತದೆ. ಈ ಆಸೆಗಳ ಮಹಾಪೂರದ ಒರತೆ ಎಂದಿಗೂ ಬತ್ತುವುದೇ ಇಲ್ಲ. ಈ ಬತ್ತದ ಆಸೆಗಳನ್ನು ಪೂರೈಸಿಕೊಳ್ಳಲು ನಮ್ಮ ಅವಿರತ ಪ್ರಯತ್ನ. ಕೆಲವು ಆಸೆಗಳಿಗೆ ಫಲ ಸಿಗುತ್ತದೆ. ಬಹುತೇಕ ಆಸೆಗಳು ನಿರಾಸೆಯಲ್ಲಿಯೇ ಕೊನೆಗೊಳ್ಳುತ್ತವೆ. ಕಾರಣಗಳು ಹಲವಾರಿರಬಹುದು. ಪಟ್ಟ ಆಸೆಯೇ ತಪ್ಪಾಗಿರಬಹುದು. ಪ್ರಯತ್ನದ ಕೊರತೆಯಿರಬಹುದು. ನಾವು ಆ ರೀತಿಯೇ ಆಸೆಪಡಲು ಯೋಗ್ಯರಲ್ಲದೆ ಇರಬಹುದು. ಇವೆಲ್ಲವೂ ಸರಿಯಿದ್ದರೂ ನಮ್ಮ ವಿಧಿಗನುಸಾರವಾಗಿ ಆ ದೈವ ಕೃಪೆಯ ಕೊರತೆಯಾಗಿ ನಮ್ಮ ಆಸೆ ಫಲಿಸದೇ ಇರಬಹುದು. ಹೀಗಾಗಿ ನಾವು ಏನೇ ಆಸೆ ಪಟ್ಟರೂ ಫಲ ಸಿಗುವುದೋ ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ಇದನ್ನೇ ಮಾನ್ಯ ಗುಂಡಪ್ಪನವರು " ಗೊತ್ತಿಲ್ಲ ಫಲದ ಬಗೆ" ಎನ್ನುತ್ತಾರೆ.

ಸಕಾಲದಲ್ಲಿ ಸೂಕ್ತವಾದ ಬೀಜವನ್ನು ಬಿತ್ತಿದರೆ ಮತ್ತು ಅದಕ್ಕೆ ಪೂರಕವಾಗಿ ಮಳೆ ಬಿದ್ದರೆ ಬೀಜ ಮೊಳೆತು ಫಸಲು ಹುಲುಸಾಗಿ ಬೆಳೆಯುತ್ತದೆ. ಕಣ್ಣೋಟಕ್ಕೆ ಸರಿಯಾಗಿದೆ ಎಂದು ಅನ್ನಿಸುವ ಬೀಜ ಒಳಗಿನಿಂದ ಟೊಳ್ಳಾಗಿದ್ದರೆ ಅಥವಾ ಬೀಜ ಗಟ್ಟಿಯಾಗಿದ್ದು ಸಕಾಲಕ್ಕೆ ಸರಿಯಾದ ಪ್ರಮಾಣದಲ್ಲಿ ಮಳೆಯಾಗದಿದ್ದರೆ, ಬೆಳೆಯಾಗುವುದಿಲ್ಲ. ಆದರೆ ಇವೆರಡೂ ಸರಿಯಾಗಿರಬೇಕಾದರೆ ಪರಮಾತ್ಮನ ಕೃಪೆಯಿರಬೇಕು. ಹಾಗೆಯೇ ನಮ್ಮ ಆಸೆಗಳು ಫಲಿಸಬೇಕಾದರೂ, ನಾವೆಷ್ಟೇ ಸೂಕ್ತ ಪ್ರಯತ್ನಪಟ್ಟರೂ ಮಿಕ್ಕೆಲ್ಲಾ ಸ್ಥಿತಿಗಳೂ ಸೂಕ್ತವಾಗಿದ್ದರೂ, ಆ ದೈವ ಕೃಪೆಯೊಂದಿಲ್ಲದಿದ್ದರೆ ಬಯಸಿದ ಫಲ ಸಿಗುವುದಿಲ್ಲ. ಆಗ ಮನಸ್ಸಿಗೆ ನೋವಾಗುತ್ತದೆ. ಅಂತಹ ನೋವಿಂದ ಮುಕ್ತರಾಗಬೇಕಾದರೆ ಒಂದೇ ಮಾರ್ಗ.

ಮಾಡುವ ಕೆಲಸವನ್ನು ಕರ್ತವ್ಯವೆನ್ನುವಂತೆ ಮಾಡಿ, ಫಲಾಫಲಗಳಿಗೆ ಅಪೇಕ್ಷೆ ಪಡದೆ, ಮಾಡಿದ ಕೆಲಸವನ್ನು ಆ ದೈವಕ್ಕೆ ಸಮರ್ಪಿಸಿ, ಬಂದ ಫಲವನ್ನು ಆ ಪರಮಾತ್ಮನ ಪ್ರಸಾದವೆಂದು ಸ್ವೀಕರಿಸಿ ತೃಪ್ತಿಪಟ್ಟರೆ, ಸುಖ ನೆಮ್ಮದಿ. ಹಾಗಿರುವುದು ಅಥವಾ ಇಲ್ಲದೆ ಇರುವುದು ನಮ್ಮ ನಮ್ಮ ಆಯ್ಕೆಗೆ ಬಿಟ್ಟದ್ದು, ಅಲ್ಲವೇ? ಯಾವ ಆಸೆ ಫಲಿಸುತ್ತದೆ ಮತ್ತು ಯಾವುದು ಫಲಿಸುವುದಿಲ್ಲ ಎಂಬುದು ದೈವ ರಹಸ್ಯ. ಅದನ್ನು ಚೇಧಿಸಲು ಪ್ರಯತ್ನಪಟ್ಟು ಬವಣೆಯನ್ನನುಭವಿಸುವ ಬದಲು ಆ ದೈವಕ್ಕೆ ಶರಣಾಗುವುದೇ ಲೇಸು.

 

ರಸ ಚೆನ್ನುಡಿ

ನಮ್ಮ ಅಳುವಿನಿಂದ ಆರಂಭವಾಗಿ ಅನ್ಯರ ಅಳುವಿನಿಂದ ಕೊನೆಗೊಳ್ಳುವುದು ನಮ್ಮ ಬದುಕು.

ಈ ಎರಡಳುಗಳ ಮಧ್ಯೆ ಒಂದಿಷ್ಟು ಉಲ್ಲಾಸ ನಗು ಸಂತೋಷಗಳನ್ನು ತುಂಬಿದರೆ ಬದುಕು ಸಾರ್ಥಕ-ಅನಾಮಿಕ

 

ರಸ ಚೆನ್ನುಡಿ

ಅನ್ಯರೊಂದಿಗೆ ಹೊಂದಿಕೊಂಡು ಅನುನಯದಿಂದ ಬಾಳುವ ಕುಶಲತೆಯ ಅವಶ್ಯಕತೆ ಇಂದು ಹೆಚ್ಚಾಗಿಯೇ ಇದೆ.
ಏಕೆಂದರೆ, ಮನುಷ್ಯನಿಗೆ ಅಪರಿಮಿತ ಸಾಮರ್ಥ್ಯವಿದ್ದಾಗ್ಯೂ, ಅನ್ಯರ ಸಹಯೋಗ ಬೇಕೇ ಬೇಕು, ಒಬ್ಬನೇ ಏನನ್ನೂ ಮಾಡಲಾರ. – ಅನಾಮಿಕ