RSS

Monthly Archives: ಮೇ 2014

ರಸ ಚೆನ್ನುಡಿ

ನಮ್ಮೆಲ್ಲರಲ್ಲೂ ಕೊಡುವ ಸಾಮರ್ಥ್ಯವಿದೆ.

ಆದರೆ ಈ ಜಗತ್ತನ್ನು ಒಳಿತಾಗಿಸಲು ನಾವೇನು ಕೊಡಬಲ್ಲೆವು ಎನ್ನುವುದೇ ಪ್ರಶ್ನೆ- ಅನಾಮಿಕ

Advertisements
 

ರಸ ಚೆನ್ನುಡಿ

ಶುದ್ಧ ಅಂತರ್ಪ್ರಜ್ಞೆಯ ನೈಜ ಗುಣವೇ ‘ಪ್ರೇಮ,ಆನಂದ ಮತ್ತು ಸತ್ಯ ‘
ಅವುಗಳ ಮೌಲ್ಯಗಳನ್ನು ಪ್ರತಿನಿತ್ಯದ ಬದುಕಿನಲ್ಲಿ ಹೊರಸೂಸುವುದೇ ನಿಜವಾದ ಧರ್ಮ – ಅನಾಮಿಕ

 

ರಸಧಾರೆ – ೬೧೪

ಮಾರನಂ ದಂಡಿಸಿರೆ ಗೌರಿಯಿಂ ಭಯವೇನು? ।।
ಚಾರುಸಹಕಾರಿಯವಳೆಂದು ಶಿವನೊಲಿದನ್ ।।
ಮೀರೆ ಮೋಹವನು ಸಂಸಾರದಿಂ ಭಯವೇನು?।
ದಾರಿ ಕೆಳೆಯದು ನಿನಗೆ – ಮಂಕುತಿಮ್ಮ

ಚಾರುಸಹಕಾರಿಯವಳೆಂದು= ಚಾರು+ಸಹಕಾರಿ+ಅವಳು+ಎಂದು, ಶಿವನೊಲಿದನ್=ಶಿವನು+ಒಲಿದನ್, ಕೆಳೆಯದು=ಕೆಳೆಯು+ಅದು

ಮಾರನಂ=ಕಾಮನನ್ನು, ಚಾರು=ಮನೋಹರ, ಮೀರೆ =ಗೆದ್ದರೆ, ಕೆಳೆ =ಸ್ನೇಹ,

ಮನ್ಮಥನನ್ನುಸುಟ್ಟರೆ ಗೌರಿಯಿಂದ ಭಯವೇನು? ಮನೋಹರ ಮಾನಸಳು ಅವಳೆಂದು ಪಾರ್ವತಿಗೆ ಒಲಿದಿಹನು,ಶಂಕರ. ಹಾಗೆಯೇ ಸಂಸಾರದಲ್ಲಿರುವವರಿಗೆ ಮೋಹವನ್ನು ತೊರೆದ ಮೇಲೆ ಭಯವಿರುವುದಿಲ್ಲ. ಮೋಹರಹಿತವಾದ ಮಾರ್ಗವು ನಮಗೆ ಸನ್ನಿಹಿತವಾಗಿ ಸ್ನೇಹಿತನಂತೆ ಭವದ, ಅಂದರೆ ಸಂಸಾರದ ಹಾದಿಯನ್ನು ಸವೆಸಲು ಸಹಕಾರಿಯಾಗಿರುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಮ್ಮ ಮನಸ್ಸಿನ ಮೋಹ, ಎಂದರೆ ಇಲ್ಲಿನ ವಸ್ತು, ವಿಷಯ ಮತ್ತು ವ್ಯಕ್ತಿಗಳ ಮೇಲಿನ ನಮ್ಮ ನಂಟಿಂದ ನಾವು ಈ ಜಗತ್ತಿಗೆ ಅಂಟಿಕೊಂಡಿದ್ದೇವೆ. ಸ್ಪರ್ಶದ ಪಂಚ ಇಂದ್ರಿಯಗಳು ಮತ್ತು ಜ್ಞಾನದ ಪಂಚ ಇಂದ್ರಿಯಗಳು, ನಮಗೆ ಮತ್ತು ಈ ಜಗತ್ತಿಗೆ ನಂಟನ್ನು ಬೆಸೆಯಲು ಮೋಹವೆಂಬ ಅಂಟನ್ನು ಸೃಷ್ಟಿಸಿ ನಮಗದನ್ನು ಲೇಪಿಸಿ, ನಾವು ಈ ಜಗತ್ತಿನ್ನು ಮೋಹಿಸುವಂತೆ ಮಾಡುತ್ತದೆ. "ಆಹಾ! ನಾವು ಸಿಕ್ಕಿಬಿದ್ದಿದ್ದೇವೆ" ಎಂಬ ಅರಿವು ಮೂಡುವಷ್ಟರಲ್ಲಿ ನಾವು ಬಿಡಿಸಲಾರದ ಅಂಟಿಂದ ಈ ಜಗತ್ತಿಗೆ ಅಂಟಿಕೊಂಡಿರುತ್ತೇವೆ. ನಮ್ಮ ಪ್ರಮೇಯವೇ ಇಲ್ಲದೆ ನಾವು ಈ ಜಗತ್ತೆಂಬ ಕೆಸರ ಹೊಂಡದೊಳಕ್ಕೆ ಬಿದ್ದು, ಒದ್ದಾಡುತ್ತಾ ಎದ್ದು ಬರಲಾರದ ಸ್ಥಿತಿಯಲ್ಲಿದ್ದೇವೆ. ಜಗತ್ತಿನ ಅತ್ಯುನ್ನತ ಶಕ್ತಿ ಎಂದರೆ ಪರಮ ಶಕ್ತಿಯ ಸ್ವರೂಪನಾದ ಶಿವನು ಮಾತ್ರ, ನಮ್ಮನ್ನು ಈ ಜಗತ್ತಿಗೆ ಅಂಟಿಸಲು ಕಾರಣವಾದ ಮತ್ತು ಮೋಹಕ್ಕೆ ತಳ್ಳುವ ‘ಕಾಮ’ ನನ್ನು ಸುಟ್ಟುಹಾಕಿರುವಾಗ ಉಮೆಯನ್ನು ವಿವಾಹವಾಗಲು ಭಯಪಡಬೇಕಾದುದೇನಿಲ್ಲ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಬೆಂಕಿಯಲ್ಲಿ ಕೈಯಿಟ್ಟರೂ, ಸುಡದಂತಹ ಶಕ್ತಿ ನಮ್ಮಲ್ಲಿದ್ದರೆ ಆಗ ನಿರ್ಭಯವಾಗಿ ನುಗ್ಗಬಹುದು. ಆದರೆ ಈ ಜಗತ್ತಿನ ಮೋಹವೆಂಬ ಬೆಂಕಿ ನಮ್ಮನ್ನು ನಿರಂತರ ಸುಡುತ್ತಲೇ ಇರುತ್ತದೆ. ಒಂದು ಸುಟ್ಟಗಾಯ ಮಾಗುವ ವೇಳೆಗೆ ಮತ್ತೊಂದು ಕಡೆ ಕಡೆ ಸುಟ್ಟಿರುತ್ತದೆ. ಈ ಮೋಹವೆಂಬ ಬೆಂಕಿ ನಮಗೆ ತೊಂದರೆ ಮಾಡಬಾರದೆಂದರೆ, ಅದಕ್ಕೆ ಎರಡು ಮಾರ್ಗಗಳಿವೆ. ಒಂದು ಬೆಂಕಿಯಿಂದ ದೂರವಿರುವುದು. ಅದು ಸಾಧ್ಯವಾಗದಿದ್ದರೆ ಅದರ ತೀವ್ರತೆಯನ್ನು ತಡೆದುಕೊಂಡು ಬದುಕುವ ಶಕ್ತಿಯನ್ನು ನಮಲ್ಲೀ ನಾವು ಹೆಚ್ಚಿಸಿಕೊಳ್ಳುವುದು. ವಸ್ತು, ವಿಷಯ ಅಥವಾ ವ್ಯಕ್ತಿಗಳ ಸಂಸರ್ಗದಲ್ಲಿದ್ದರೂ ಯಾವುದೇ ರೀತಿಯ ಸಂಬಂಧವನ್ನು ಬೆಳೆಸಿಕೊಳ್ಳದೆ ಇರುವುದು ಬಾಹ್ಯ ನಿರ್ಲಿಪ್ತತೆ. ಅಲ್ಲದೆ ಅನಿವಾರ್ಯವಾಗಿ ಅವುಗಳ ಸಂಗದಲ್ಲಿರಬೇಕಾದಾಗ, ಅವುಗಳಿಗೆ ಅಂಟದೆ ಇರುವಂತಹ ಮನೋಭಾವವನ್ನು ಬೆಳೆಸಿಕೊಳ್ಳುವುದು ಅಂತರಂಗದ ನಿರ್ಲಿಪ್ತತೆ. ಆ ರೀತಿಯ ಮನೋಭಾವ ಬೆಳೆಸಿಕೊಂಡರೆ ಈ ಸಂಸಾರವೆಂಬ ಬೆಂಕಿ ಸುಡುವುದೂ ಇಲ್ಲ ಹಾಗೆ ಸುಟ್ಟರೂ ನಮ್ಮ ‘ಅಂತರಂಗದ ನಿರ್ಲಿಪ್ತತೆಯ’ ಮುಲಾಮಿನ ಲೇಪನ ನಮ್ಮನ್ನು ಕಾಯುತ್ತದೆ.

ಜಗನ್ನಾಟಕವನ್ನು ಮುಂದುವರೆಸಿಕೊಂಡು ಹೋಗಲು ‘ಮೋಹ’ವನ್ನು ಒಂದು ಸಾಧಂದಂತೆ ಸೃಷ್ಟಿಸಿದ್ದಾನೆ ಆ ಪರಮಾತ್ಮ. ಅವನನ್ನು ಸೇರಲು ನಮಗೆ ಅಡ್ಡಿಯಾಗಿರುವುದೇ ಈ ಮೋಹ. ಇದರಿಂದ ಬಿಡಿಸಿಕೊಳ್ಳುವ ಮಾರ್ಗವನ್ನು ನಮ್ಮ ನಮ್ಮ ರೀತಿಯಲ್ಲೇ ಕಂ’ಡುಕೊಳ್ಳಬೇಕು. ಹಾಗೆ ಆರಿಸಿಕೊಂಡ ಹಾದಿಯಲ್ಲಿ ಅನನ್ಯಭಾವದಿಂದ ಮುಂದೆ ಸಾಗಿದರೆ ಮಾನ್ಯ ಗುಂಡಪ್ಪನವರು ”ದಾರಿ ಕೆಳೆಯದು ನಿನಗೆ’ ಎಂದು ಹೇಳುವಂತೆ ಹೇಳುವಂತೆ ಆ ದಾರಿಯೇ ನಮ್ಮನ್ನು ದಡ ಮುಟ್ಟಿಸುತ್ತದೆ. ವಿಚಲಿತರಾಗದೆ ಮುಂದಕ್ಕೆ ಸಾಗಿದರೆ ಗಮ್ಯಕ್ಕೆ ಸೇರಬಹುದು.

 

ರಸ ಚೆನ್ನುಡಿ

ನಮಗಿರುವುದು ಎರಡೇ ರೀತಿಯ ಭಯಗಳು. ಇರುವುದನ್ನು ಕಳೆದುಕೊಳ್ಳುವ ಅಥವಾ ಬಯಸಿದ್ದು ಸಿಗದೇಹೋಗುವ ಭಯ.
ಈ ಎರಡು ರೀತಿಯ ಭಯಗಳನ್ನು ಬಿಟ್ಟರೆ ಸುಖ ದುಃಖಗಳಲ್ಲಿ ಸಮಾನತೆಯನ್ನು ಸಾಧಿಸಬಹುದು – ಅನಾಮಿಕ

 

ರಸದಾರೆ – ೬೧೩

ನಯನಯುಗದಿಂ ಜಗವ ಪೊರೆದು,ನಿಟಿಲಾಕ್ಷಿಯಿಂ ।
ಲಯಪಡಿಸುವುದದೇನು ಶಿವಯೋಗಲೀಲೆ ।।
ಜಯಿಸಿ ಮದನನ ಬಳಿಕ ತನ್ನೊಡಲೊಳ್ ಉಮೆಯನ- ।
ನ್ವಯಿಸಿಕೊಂಡಿಹುದೇನು – ಮಂಕುತಿಮ್ಮ ||

ನಯನಯುಗದಿಂ=ನಯನ+ಯುಗದಿಂ, ಲಯಪಡಿಸುವುದದೇನು=ಲಯಪಡಿಸುವುದು+ಅದು+ಏನು, ತನ್ನೊಡಲೊಳ್=ತನ್ನೊಡಲ+ಒಳ್, ಉಮೆಯನನ್ವಯಿಸಿಕೊಂಡಿಹುದೇನು=ಉಮೆಯನು+ಅನ್ವಯಿಸಿಕೊಂಡು+ಇಹುದೇನು,

ನಯನಯುಗದಿಂ=ಎರಡು ಕಣ್ಣುಗಳಿಂದ, ಲಯಪಡಿಸುವುದು=ಸಮನ್ವಯಗೊಳಿಸಿಕೊಂಡು, ನಿಟಿಲಾಕ್ಷ=ಹಣೆಗಣ್ಣ, ಮುಕ್ಕಣ್ಣ, ಮದನ=ಮನ್ಮಥ, ಕಾಮದೇವ.ಉಮೆ=ಪಾರ್ವತಿ.

ಈ ಜಗತ್ತನ್ನು ತನ್ನ ಎರಡೂ ಕಣ್ಣುಗಳಿಂದ ಶಾಂತ ನೋಟದಿಂದ ನೋಡುತ್ತಾ, ಪೊರೆಯುತ್ತಾ, ಹಣೆಯ ಕಣ್ಣಿಂದ ಲಯ ಕಾರ್ಯದಲ್ಲಿ ನಿರತನಾಗಿರುವವನು ಶಿವ. ಎರಡೂ ಕೆಲಸಗಳನ್ನು ಸಮತೆಯಿಂದ ಸಮಭಾವದಿಂದ ಮಾಡುವುದೇ ಶಿವಯೋಗಲೀಲೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಒಂದು ಕಡೆ ಕಾಮನನ್ನು ತನ್ನ ಒಳಗಣ್ನಿಂದ ಸುಟ್ಟು ಅದೇ ರೀತಿ ಪಾರ್ವತಿಯನ್ನು ತನ್ನ ಅರ್ಧಾಂಗಿಯನ್ನಾಗಿಸಿಕೊಂಡು” ಅರ್ಧನಾರೀಶ್ವರ” ನೆಂದು ಕರೆಯಲ್ಪಟ್ಟಿದ್ದಾನೆ. ಒಂದರೊಳಗಿದ್ದುಕೊಂಡು ಅದನ್ನೇ ಜಯಿಸಿ ಬದುಕಿನಲ್ಲಿ ಸಮನ್ವಯವನ್ನು ಕಂಡುಕೊಳ್ಳುವ ವಿಧಾನವನ್ನು ದೃಷ್ಟಾಂತ ಸಹಿತ ನಮಗೆ ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಸಂಸಾರದಲ್ಲಿ ಇದ್ದು, ಅದಕ್ಕೆ ಅಂಟದೆ ಹೇಗೆ ಇರುವುದು? ಎನ್ನುವುದೇ ಪ್ರಶ್ನೆ. ಇಲ್ಲಿ ಶಿವನ ಅರ್ಧನಾರೀಶ್ವರ ರೂಪ, ಕಾಮ ದಹನದ ಪ್ರಸ್ತಾಪ, ಮುಕ್ಕಣ್ಣನ ಮಹೋನ್ನತ ಲೀಲೆಗಳ ಪ್ರಸ್ತಾಪವೆಲ್ಲವೂ ಕೇವಲ ದೃಷ್ಟಾಂತಕ್ಕಾಗಿಯಷ್ಟೇ. ನಮ್ಮಲ್ಲಿ ಪ್ರತಿಯೊಬ್ಬನೂ ಈ ಅರ್ಧನಾರೀಶ್ವರ ರೂಪವನ್ನು ಹೊತ್ತವರಲ್ಲವೇ? ‘ಸಂಸಾರ’ ಸಂಸಾರವಾಗಿರಬೇಕೇ ಹೊರತು ನಿಸ್ಸಾರವಾಗಬಾರದು. ಹಾಗೆ ನಿಸ್ಸಾರವಾಗದೆ ಇರಲು ಇದರ ಭಾರ ಹೊತ್ತ ನಾವು ಸುಖ ದುಃಖ ನೋವು ನಲಿವುಗಳನ್ನು ಸಮಾನತೆಯಿಂದ ತೂಗಿಸಿಕೊಂಡು ಹೋಗಬೇಕು. ಲಯಕರ್ತನಾಗಿ, ಶಿವನಾಗಿ, ಶಾಂತನಾಗಿ, ರುದ್ರನಾಗಿ, ನಟರಾಜನಾಗಿ ಮತ್ತು ಪಾರ್ವತಿಯ ಪ್ರೀತಿಯ ಪರಮೇಶ್ವರನಾಗಿ ಇದ್ದರೂ ಕೈಲಾಸದ ಪರ್ವತದಲ್ಲಿ ಧ್ಯಾನಮಗ್ನನಾಗಿಯೂ ಇದ್ದು ಭಾವ ಸಮನ್ವಯತೆಯನ್ನು ಕಾಯ್ದು ಕೊಳ್ಳುವ ಶಿವನಂತೆ ಎಂಬುದೇ ಈ ಮುಕ್ತಕದ ಹೂರಣ.

ಒಬ್ಬ ಸಂಸಾರಿಗನೂ ಸಹ ಗೃಹ ಸಂಬಂಧವಾದ, ಉದ್ಯೋಗ, ಸಮಾಜ, ಸಂತತಿ ಮುಂತಾದವುಗಳಿಂದ ಉಂಟಾಗುವ ಭಾವ ವೈಪರೀತ್ಯಗಳನ್ನು ಎದುರಿಸುವಾಗ ಮಾಡುವ ಸಾಹಸ, ಪಡುವ ತುಮುಲಗಳನ್ನು ಕಂಡರೆ ‘ಅಯ್ಯೋ ಪಾಪ ‘ಎಂದು ಆನಿಸುತ್ತದೆ ಅಲ್ಲವೇ? ಅಂತಹ ಪರಿಸ್ಥಿತಿಯಲ್ಲೂ ಮಾನಸಿಕ ಸಂತುಲನೆಯನ್ನುಉಳಿಸಿಕೊಂಡರೆ ಆ ಸಾಹಸ ‘ಶಿವ’ ಸಾಹಸದಂತೆಯೇ ಆಗುತ್ತದೆ. ಬದುಕಿನಲ್ಲಿ ನಮಗೆ ಎದುರಾಗುವ ಕಷ್ಟಗಳ ಸಂಕೋಲೆಗಳು, ಸುಖ ದುಃಖಗಳ ಸರಮಾಲೆಗಳು, ಸಂತೋಷ ಸಮಾರಂಭಗಳ ನಲುಮೆಯು, ಭಾವ ವೈಪ್ಯರೇತ್ಯಗಳ ತೀವ್ರತೆಗಳನ್ನು ಎದುರಿಸಬೇಕು. ಆದರೂ ಯಾವುದರಿಂದಲೂ ವಿಚಲಿತರಾಗದೆ, ಅಸೆ ಮತ್ತು ಮೋಹವನ್ನು ಜಯಿಸಿದರೆ ‘ಕಾಮ’ ನನ್ನು ದಹಿಸಿ ಜಯಿಸಿದಂತೆ, ಸಂಸಾರದಲ್ಲಿ ಇದ್ದೂ ಅಂಟದೆ ಇದ್ದರೆ ‘ಮೋಹ’ವನ್ನು ಗೆದ್ದಂತೆ ಆಗುತ್ತದೆ

ಅಂತಹ ಸ್ಥಿತಿಗೆ ನಾವು ತಲುಪಲು ಬಹಳ ಸಾಧನೆ ಬೇಕು. ಹಾಗೆ ನಾವು ಸಾಧಿಸಿ ಆ ಸ್ಥಿತಿಗೆ ತಲುಪಿದರೆ ಬದುಕು ಶಾಂತವಾಗಿರಬಹುದು. ಹೇಳುವುದು ಬಹಳ ಸುಲಭ, ದಶೇಂದ್ರಿಯ ಪ್ರಚೋದಿತ ಮತ್ತು ಪ್ರಭಾವಿತ ನಮ್ಮ ಮನಸ್ಸು, ಬುದ್ಧಿ ಮತ್ತು ದೇಹಗಳನ್ನು ಮಣಿಸುವ ಸಾಧನೆ ಬಹಳ ಕಷ್ಟ. ಇದಕ್ಕೆ ‘ಶಮ’ದ ಮತ್ತು ‘ದಮ’ ದ ಪ್ರಯೋಗ ಮತ್ತು ಪ್ರಯೋಜನ ಎರಡೂ ಆಗಬೇಕು. ಅದು ಕಷ್ಟವಾದರೂ ಅಸಾಧ್ಯವಲ್ಲ.

 

ರಸ ಚೆನ್ನುಡಿ

ದೇವರಲ್ಲಿ ಏನನ್ನೂ ಬೇಡಲೇಬಾರದು. ದೇವರೆಂಬುವವನು ತಾಯಿ ಇದ್ದಂತೆ.

ನಮಗೆ ಏನು ಯಾವ ಸಮಯಕ್ಕೆ ಏನನ್ನು ಮತ್ತು ಎಷ್ಟನ್ನು ಕೊಡಬೇಕೆಂಬುದು ಅವನಿಗೆ ಚೆನ್ನಾಗಿ ಗೊತ್ತು – ಅನಾಮಿಕ

 

ರಸ ಚೆನ್ನುಡಿ

ನಮ್ಮಲ್ಲಿ ಇಲ್ಲದ್ದನ್ನು ನಾವು ಯಾರಿಗೂ ಕೊಡಲಾಗುವುದಿಲ್ಲ

ಅನ್ಯರನ್ನು ಅವಹೇಳನ ಮಾಡಿದರೆ ನಮ್ಮಲ್ಲಿ ಆ ‘ಗೌರವವೇ’ ಇಲ್ಲವೆಂದರ್ಥವಲ್ಲವೇ? – ಅನಾಮಿಕ