RSS

Monthly Archives: ಜೂನ್ 2014

ರಸ ಚೆನ್ನುಡಿ

ಅಹಂಕಾರವನ್ನು ತೊರೆದು ಮನಸ್ಸನ್ನು ತೆರೆದು ಇಟ್ಟುಕೊಂಡರೆ
ಕಲಿಕೆ ಮುಂದುವರೆದು ನಾವು ಸಂಪೂರ್ಣ ‘ಮಾನವ’ರಾಗುವ ಸಾಧ್ಯತೆಗಳಿವೆ- ಅನಾಮಿಕ

Advertisements
 

ರಸ ಚೆನ್ನುಡಿ

ಮತ್ತೊಬ್ಬರ ಕರುಣೆಯ ಮತ್ತು ಅನುಕಂಪದ ಭಾರದಡಿ ನಲುಗದೆ, ಬದುಕಲಾದರೆ

ಅಂತಹ ಕೃಪೆಗೆ ಆ ಪರಮಾತ್ಮನಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು – ಅನಾಮಿಕ

 

ರಸ ಚೆನ್ನುಡಿ

ದಿನಕ್ಕೊಂದು ಚೆನ್ನುಡಿ

ಸತ್ಯದೊಂದಿಗೆ ಸಮನ್ವಯವನ್ನು ಮಾಡಿಕೊಂಡರೆ ನಮಗೆ ಸಂಬಂಧಗಳಿರುತ್ತದೆ, ಬಂಧನಗಳಿರುವುದಿಲ್ಲ.
ನಾವದರೊಳಗೆ ಇದ್ದರೂ ಯಾವುದೇ ಸಂಬಂದಗಳು ತೊಡಕಾಗುವ ಬಂಧನಗಳಾಗುವುದಿಲ್ಲ – ಅನಾಮಿಕ

 

ರಸ ಚೆನ್ನುಡಿ

ಎಲ್ಲರ ಮನಸ್ಸಿನ ಸಾಮೂಹಿಕ ಭಾವ ಪ್ರತಿಭಿಂಭವೇ ನಾವು ನೋಡುವ ಹೊರಜಗತ್ತು

ನಮ್ಮೆಲ್ಲರ ಮನಸ್ಸುಗಳು ಶಾಂತವಾದರೆ ಇಡೀ ಜಗತ್ತೇ ಶಾಂತಿಯಿಂದ ನಲಿಯುತ್ತದೆ – ಅನಾಮಿಕ

 

ರಸಧಾರೆ – ೬೨೭

ವಿಷಯಸನ್ನಿಧಿಗಿಂತ ಮಸಣಸನ್ನಿಧಿ ಲೇಸು ।
ವಿಷದೂಟಕಿಂತುಪೋಷಿತವೆ ಲೇಸಲ್ತೆ ।।
ತೃಷೆ ಕನಲೆ, ಜೀವ ಬಿಸಿಬಾಣಲಿಗೆ ಬಿದ್ದ ಹುಳು ।
ಶಿಶು ಪಿಶಾಚಿಯ ಕೈಗೆ – ಮಂಕುತಿಮ್ಮ।।
ವಿಷದೂಟಕಿಂತುಪೋಷಿತವೆ=ವಿಷದ+ಊಟಕಿಂತ +ಉಪೋಷಿತವೆ, ಲೇಸಲ್ತೆ =ಲೇಸು+ಅಲ್ತೆ.

ಸನ್ನಿಧಿ=ಸಂಗ, ಮಸಣ= ಸ್ಮಶಾನ, ಲೇಸು= ಉತ್ತಮ, ತೃಷೆ=ಆಸೆ,ಕಾಮನೆ, ಉಪೋಷಿತ=ಹಸಿವಿನಿಂದಿರುವುದು.

ಜಗತ್ತಿನ ವಿಷಯಗಳಲ್ಲಿ ಅತಿಯಾದ ಆಸಕ್ತಿಯಿಂದ ಬದುಕುವುದಕ್ಕಿಂತ ಮರಣವೇ ಉತ್ತಮ. ಹಾಗೆಯೇ ವಿಷದ ಊಟ ಮಾಡುವುದಕ್ಕಿಂತ, ಉಪವಾಸವಿರುವುದೇ ಉತ್ತಮ. ಮನುಷ್ಯನ ಆಸೆಗಳು ಕೆರಳಿದರೆ ಜೀವ ಕಾದ ಬಾಣಲಿಗೆ ಬಿದ್ದ ಹುಳುವಿನಂತೆ ವಿಲವಿಲ ಒದ್ದಾಡುತ್ತದೆ, ಪಿಶಾಚಿಯ ಕೈಗೆ ಸಿಕ್ಕ ಶಿಶುವಿನಂತೆ, ಎಂದು ಬದುಕಿನಲ್ಲಿ ಜೀವ ಹೇಗೆ ಒದ್ದಾಡುತ್ತದೆ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಜಗತ್ತಿನ ವಿಷಯಗಳೇ ಹಾಗೆ. ನಾವು ಅದರಲ್ಲಿ ಆಳವಾದ ಆಸಕ್ತಿ ತೋರಿದರೆ ನಮ್ಮನ್ನು ತನ್ನ ಹಿಡಿತಕ್ಕೆ ಸೆಳೆದುಕೊಂಡು ನಮ್ಮನ್ನು ಗೋಳಾಡಿಸುತ್ತದೆ. ಅಂಟದೆ ಇದ್ದರೆ, ಹಿತ. ಜಗತ್ತಿನ ಜನರ ಕಷ್ಟಗಳಿಗೆಲ್ಲ ವಿಷಯಗಳೊಂದಿಗಿನ ಗಾಢವಾದ ಅಂಟಿನಿಂದ ಕೂಡಿದ ನಂಟೇ ಕಾರಣ. ಅವುಗಳ ವಿಷವೃತ್ತದಲ್ಲಿ ಬದುಕುವುದಕ್ಕಿಂತ ಮರಣವೇ ಲೇಸು ಮತ್ತು ಈ ವಿಷಯಗಳಿಂದ ಉಂಟಾಗುವ ಭಾವನೆಗಳ, ಸಂಬಂಧಗಳ ಮತ್ತು ಅವುಗಳಿಂದ ಉಂಟಾಗುವ ಮಾನಸಿಕ ಕ್ಲೇಶವೇ, ನಮಗೆ ಅವು ಬಡಿಸುವ ವಿಷಪೂರಿತ ಊಟ. ಅಂತಹ ಊಟ ಮಾಡುವುದಕ್ಕಿಂತ ಉಪವಾಸವಿರುವುದೇ ಉತ್ತಮ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಎಲ್ಲಿಯತನಕ ನಾವು ವಿಷಯಗಳಿಗೆ ದಾಸರಾಗದೆ ಜಗತ್ತಿನಲ್ಲಿ ಅಂಟೀ ಅಂಟದ ರೀತಿ ಬದುಕುತ್ತೇವೆಯೋ ಅಲ್ಲಿಯ ತನಕ ಬದುಕು ನಿರಾಳವಾಗಿರುತ್ತದೆ. ನಮ್ಮನ್ನು ನಾವು ಅತಿ ಲಾಲಸೆಯಿಂದ, ಸ್ವಾರ್ಥದಿಂದ ಇಲ್ಲಿರುವ ಯಾವುದೇ ವಿಷಯಕ್ಕೆ ಅಂಟಿಕೊಂಡರೆ, ನಮ್ಮಲ್ಲಿ ತೃಷೆ, ಎಂದರೆ ಕಾಮನೆ ಆರಂಭವಾಗಿ, ಆ ಕಾಮನೆ, ಕೋಪ, ಲೋಭ, ಮೋಹ, ಮದ ಮತ್ತು ಮಾತ್ಸರ್ಯವೆಂಬ, ಮಾನವನ ಆರು ವೈರಿಗಳನ್ನು ಉದ್ದೀಪನಗೊಳಿಸಿ ಬದುಕನ್ನು ದುರ್ಬರವನ್ನಾಗಿಸುತ್ತದೆ. ಕಡಲಿಂದ ಹೊರಟು, ನಭದ ಮೂಲಕ ಧರೆಯನ್ನು ಸೇರಿ ಮತ್ತೆ ಕಡಲನ್ನು ಸೇರುವ ತವಕವನ್ನು ಹೊಂದಿರುವ ಪ್ರತೀ ನೀರ ಹನಿಯಂತೆ. ತನ್ನ ಮೂಲವಾದ ಪರಮಾತ್ಮನಿಂದ ಹೊರಟು ಮತ್ತೆ ಆ ಪರಮಾತ್ಮನನ್ನೇ ಸೇರಲು ತವಕಿಸುವ ಜೀವದ ಪ್ರಯಾಣಕ್ಕೆ ಈ ಜಗತ್ತಿನ ವಿಷಯಾಧಾರಿತ ಅಂಟು ಮಾರಕವಾಗಿ ನಿಲ್ಲುತ್ತದೆ. ಬಾಣಲಿಗೆ ಬಿದ್ದ ಹುಳುವಿನಂತೆ.

ನಮ್ಮಲ್ಲಿ ಕನಲುವ, ಅಂದರೆ ಅರಳಿ ಕೆರಳುವ ಆಸೆಗಳೇ ನಮ್ಮನ್ನು ಈ ಜಗತ್ತಿನ ವಿಷಯಗಳಿಗೆ ಅಂಟಿಕೊಳ್ಳುವಂತೆ ಮಾಡುವ ಪಿಶಾಚಿಗಳು. ಎಲ್ಲಿಯತನಕ ಆ ‘ಆಸೆ’ ಗಳು ಸರ್ವರ ಹಿತಕಾರಿಯಾಗಿರುತ್ತದೆಯೋ ಅಲ್ಲಿಯ ತನಕ ಅದು ಸ್ವಹಿತವೂ ಆಗಿರುತ್ತದೆ, ಎಂದರೆ ಜೀವನಿಗೂ ಹಿತವಾಗೇ ಇರುತ್ತದೆ. ಆದರೆ ನಮ್ಮಲ್ಲಿ ಉದ್ಭವವಾಗುವ ಆಸೆಗಳು ಕೇವಲ ಸ್ವಾರ್ಥ ಸಾಧನೆಗಾದರೆ ನಾವು ಆಸೆಗಳಿಂದುಂಟಾಗುವ ‘ಸುಳಿಯಲ್ಲಿ’ ಸಿಕ್ಕಿಕೊಳ್ಳುತ್ತೇವೆ. ಇದನ್ನೇ ಮಾನ್ಯ ಗುಂಡಪ್ಪನವರು ‘ ಶಿಶು ಪಿಶಾಚಿಯ ಕೈಗೆ” ಎನ್ನುತ್ತಾರೆ. ವಾಚಕರೆ ನಮಗೆ ಆ ಪರಮಾತ್ಮ ವಿವೇಕವನ್ನು ಕರುಣಿಸಿದ್ದಾನೆ. ಈ ಜಗತ್ತಿಗೆ ಅಂಟಿ ‘ನರಳ’ ಬೇಕೋ ಅಥವಾ ಅಂಟದೆ ‘ಮುಕ್ತ’ ಜೀವನವನ್ನು ನಡೆಸಬೇಕೋ ಎನ್ನುವುದನ್ನು ನಾವೇ ನಿರ್ಧರಿಸಿಕೊಳ್ಳಬೇಕಲ್ಲವೇ?

 

ರಸ ಚೆನ್ನುಡಿ

ಗುಡಿಸಲು ಮತ್ತು ಮಹಲಿನಲ್ಲಿ ಬಹಳ ವ್ಯತ್ಯಾಸವಿರುತ್ತದೆ
ಗುಡಿಸಲು ‘ಸುಸ್ವಾಗತ’ ಎಂದರೆ, ಮಹಲು ‘ನಾಯಿಗಳಿವೆ-ಎಚ್ಚರಿಕೆ’ ಎನ್ನುವ ಫಲಕ ಹೊತ್ತಿರುತ್ತದೆ – ಅನಾಮಿಕ

 

ರಸಧಾರೆ -೬೨೬

ಕುಸುಮಸಖನೇಂ ನೀನು? ಹಿಸುಕದೆಯೆ ಮೂಸದನು ।
ಹಿಸುಕೆ ಕಟುಕಂಪು; ನರಲೋಕವದರವೊಲೇ ।।
ಗಸಿಯ ಕಲಕದೆ ಕೊಳದ ಮೇಲ್ತಿಳಿಯ ಕುಡಿದು ನಡೆ ।
ಹಸನು ಹಗುರದ ಬಾಳು – ಮಂಕುತಿಮ್ಮ ।।

ಮೂಸದನು =ಮೂಸು+ಅದನು, ನರಲೋಕವದರವೊಲೇ =ನರಲೋಕವು+ಅದರ+ವೊಲೇ, ಮೇಲ್ತಿಳಿಯ=ಮೇಲ್ +ತಿಳಿಯ,

ಮೂಸು=ವಾಸನೆಯನ್ನು ಆಘ್ರಾಣಿಸು, ಕಟುಕಂಪು= ಘಾಟು ವಾಸನೆ, ಗಸಿ= ಬಗ್ಗಡ

ನೀನು ಕುಸುಮಗಳ ಮಿತ್ರನಾದರೆ ಅವುಗಳನ್ನು ಹಿಸುಕದೆ, ಕೇವಲ ಅವುಗಳ ಸುಗಂಧವನ್ನು ಮಾತ್ರ ಆಘ್ರಾಣಿಸು. ಹಿಸುಕಿದರೆ ಸುಗಂಧದ ಬದಲು ಕಡು ಕಮುಟು ವಾಸನೆ ಬರುತ್ತದೆ. ಈ ಜಗತ್ತೂ ಹಾಗೆಯೇ. ಬದುಕಿನ ಅಂತರಾಳದಲ್ಲಿ ಭಾವಗಳ ಮತ್ತು ಅನುಭವಗಳ ರಾಡಿ ಅಡಗಿದೆ. ಅದನ್ನು ಕಲಕದೆ, ರಾದಿಯಿರುವ ಕೊಳದ ತಿಳಿ ನೀರನ್ನು ಕೊಳದ ತಿಳಿ ನೀರನ್ನು ಕುಡಿಯುವಂತೆ, ಬದುಕಿನಲ್ಲಿ ತೀರ ಆಳಕ್ಕೆ ಇಳಿಯದೆ ಹಗುರವಾಗಿ ಹಸನಾದ ಬಾಳನ್ನು ಬಾಳು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಈ ಜಗತ್ತೆಂಬ ಕೊಳದಲ್ಲಿ ಆಳವೂ ಉಂಟು, ತಿಳಿಯೂ ಉಂಟು, ಬಗ್ಗಡವೂ ಉಂಟು. ಕೊಳದಲ್ಲಿ ನೀರು ಕುಡಿಯಲು ಹೋದಾಗ ಮೇಲಿರುವ ತಿಳಿನೀರನ್ನು ಕುಡಿಯಬೇಕು. ಅಲ್ಲದೆ ಆ ನೀರನ್ನು ಕದಡಿಬಿಟ್ಟರೆ, ಬಗ್ಗಡವೆಲ್ಲಾ ಮೇಲೆ ಬಂದು ನೀರು ಕುಡಿಯಲಾಗುವುದಿಲ್ಲ. ಬದುಕಿನಲ್ಲೂ ಹಾಗೆಯೇ, ಸುಗಂಧಭರಿತ ಹೂಗಳನ್ನು ಮುಟ್ಟದೆ ಕೇವಲ ಅದರ ಸುವಾಸನೆಯನ್ನು ನಾವು ಆಘ್ರಾಣಿಸುವಂತೆ, ಮೂಲಕ್ಕೆ ಕೈಯಿಡದೆ,ಮೂಲದ ಮಂಥನದಿಂದ ಹೊರಹೊಮ್ಮಿದ ತತ್ವವನ್ನುಪಡೆದು,ಕುಡಿದು ಅಂತರಂಗಕ್ಕೆ ಇಳಿಸಿಕೊಂಡರೆ ಬದುಕು ಸುಗಮವಾಗುತ್ತದೆ. ಮಾನ್ಯ ಗುಂಡಪ್ಪನವರು ಹೇಳುವಂತೆ ‘ಬಾಳು ಹಸನಾಗಿ ಹಗುರಾಗುತ್ತದೆ’.

ರಸಭರಿತವಾದ ಹಣ್ಣನ್ನು ತಿನ್ನುವಾಗ, ಅದರ ರಸಾಸ್ವಾದನೆ ಮಾಡಬೇಕು. ಅದನ್ನು ಬಿಟ್ಟು ಅದನ್ನು ಎಲ್ಲಿ ಬೆಳೆದರು, ಮರದ ಅಥವಾ ಗಿಡದ ಉದ್ದಳತೆಗಳೇನು, ಅದಕ್ಕೆ ಹಾಕಿದ ಗೊಬ್ಬರವೆಂತಹುದು, ಮಣ್ಣಿನ ಸಾರವನ್ನು ಆ ಗಿಡ ಹೇಗೆ ಸೆಳೆದುಕೊಂಡಿತು, ಮಣ್ಣು, ನೀರು, ಗೊಬ್ಬರ, ಗಿಡ ಮುಂತಾದವುಗಳಲ್ಲಿ ಇಲ್ಲದ ಸುವಾಸನೆ,ಬಣ್ಣ, ರುಚಿಗಳು ಈ ಹಣ್ಣಿಗೆ ಹೇಗೆ ಬಂದವು ಎಂದೆಲ್ಲಾ ಆಲೋಚಿಸತೊಡಗಿದರೆ, ಹಣ್ಣನ್ನು ತಿನ್ನಲಾಗುವುದೇ, ಸ್ವಾದವನ್ನು ಅಸ್ವಾದಿಸಲಾಗುವುದೇ. ಸಾಧ್ಯವೇ ಇಲ್ಲ. ಹಾಗಾಗಿ ಮೂಲವನ್ನು ಕೆದಕುವುದು ಸರಿಯಲ್ಲ.

ಇದು ಎಲ್ಲಕ್ಕೂ ಅನ್ವಯವಾಗುತ್ತದೆ. ಮನುಷ್ಯ ಮನುಷ್ಯ ಸಂಬಂದಗಳು ಮತ್ತು ಅದನ್ನಾಧರಿಸಿದ ನಮ್ಮ ಜೀವನದಲ್ಲಿ ಆಳಕ್ಕೆ ಇಳಿದರೆ ಭಯಂಕರವಾಗಿರುತ್ತದೆ. ಒಬ್ಬ ವ್ಯಕ್ತಿ ಇಂದು ಬಹಳ ಒಳ್ಳೆಯ ಗುಣಗಳನ್ನು ಹೊಂದಿದ್ದಾನೆ. ಆದರೆ ಅವನು ಅಂತಹ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುವ ಮೊದಲು ತೀರ ಅಸಹ್ಯ ಗುಣಗಳನ್ನು ಹೊಂದಿದ್ದವನಾಗಿದ್ದಿರಬಹುದು. ಅದು ನಮಗೆ ಮುಖ್ಯವಾಗದೇ, ಇಂದಿನ ಅವನ ಒಳ್ಳೆಯತನವನ್ನು ಕಾಣಬೇಕು. ಹಾಗಾದಾಗ ಪರಸ್ಪರ ಸಂಬಂಧಗಳು ಉಳಿಯುತ್ತವೆ, ಅಲ್ಲವೇ? ಬದುಕು ಸುಗಮವಾಗಿರಬೇಕಾದರೆ, ಅದನ್ನು ಅತಿಯಾಗಿ ಕೆದಕಬಾರದು. ಕೆದಕಿದರೆ ನಮಗೆ ಹಿಂಸೆಯಾಗುತ್ತದೆ. ಹಸನಾಗಿ, ಹಗುರವಾಗಿ ಬದುಕಬೇಕು ಎನ್ನುವುದೇ ಈ ಮುಕ್ತಕದ ಹೂರಣ.