RSS

Monthly Archives: ಜುಲೈ 2014

ರಸಧಾರೆ – ೩೬೬

ಸಾಸಿರದ ಯುಕ್ತಿ ಸಾಹಸವ ನೀನೆಸಗುತಿರು ।
ಲೇಸು ಫಲ ದೊರೆಗೆ ನಿನ್ನೆಲ್ಲ ಪೌರುಷಕಂ ।।
ಶೇಷ ನಿನಗುಳಿವುದೆಂತಾದೊಡಂ ನೋವಿನಿತು।
ಸೈಸದನು ನೀನಳದೆ – ಮಂಕುತಿಮ್ಮ ।।
ನೀನೆಸಗುತಿರು=ನೀನ್+ಎಸಗುತ+ಇರು, ನಿನಗುಳಿವುದೆಂತಾದೊಡಂ=ನಿನಗೆ+ಉಳಿವುದು+ಎಂತು +ಆದೊಡಂ, ನೋವಿನಿತು=ನೋವು+ಇನಿತು,ಸೈಸದನು=ಸೈಸು+ಅದನು, ನೀನಳದೆ=ನೀನು+ಅಳದೆ

ಎಸಗುತ=ಮಾಡುತ, ಲೇಸು=ಒಳ್ಳೆಯ, ಪೌರುಷಕಂ=ಪೌರುಷಕ್ಕೆ, ಶೇಷ=ಉಳಿಕೆ, ಇನಿತು=ಒಂದಿಷ್ಟು, ಸೈಸು=ಸಹಿಸು

ಬದುಕಿನ ಬವಣೆಯನ್ನು ಎದುರಿಸಲು ಮತ್ತು ಸಂದ ಕರ್ಮಫಲವನ್ನು ಅನುಭವಿಸಲು ನೀನು ಸಾವಿರಾರು ಯುಕ್ತಿಯನ್ನು ಮಾಡು. ಅಂತಹ ಪ್ರಯತ್ನದಿಂದ ನಿನಗೆ ಒಳ್ಳೆಯ ಫಲ ದೊರಕಿ ಪಾಪಕರ್ಮದ ಫಲವು ಕಡಿಮೆಯಾದರೂ ಒಂದಿಷ್ಟು ನೋವು ಮನದ ಮೂಲೆಯಲ್ಲೆಲ್ಲೋ ಉಳಿದಿರುತ್ತದೆ. ಅದನ್ನು ಸಹಿಸಿಕೊಂಡು ಬಾಳು ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಹುಟ್ಟುವಾಗ ಹಿಂದಿನಿಂದ ಕಟ್ಟಿಕೊಂಡು ಬಂದದ್ದು ಒಂದಿಷ್ಟು. ಇಲ್ಲಿ ಗಳಿಸಿಕೊಳ್ಳುವುದು ಒಂದಷ್ಟು, ಇವೆರಡರ ಮೊತ್ತದಲ್ಲಿ ಕಳೆದುಕೊಳ್ಳುವುದು ಒಂದಷ್ಟು. ಉಳಿಕೆ ಕರ್ಮಶೇಷ. ಇದು ಕೇವಲ ಲೆಕ್ಕಾಚಾರದ ವಿಚಾರ. ಜನ್ಮದಿಂದ ತಂದದ್ದೆಷ್ಟು ಎಂದು ನಮಗೆ ಅರಿವಿರುವುದಿಲ್ಲ. ಇಲ್ಲಿ ಬಂದ ನಂತರ ನಮಗರಿವಿಲ್ಲದಂತೆಯೇ ನಾವು ಇನ್ನಷ್ಟನ್ನು ಸಂಚಯನ ಮಾಡುತ್ತಾ ಹೋಗುತ್ತೇವೆ. ಅದರ ಅರಿವು ಉಂಟಾಗಿ ಮತ್ತು ಅದರ ಭಾರ ಹೆಚ್ಚಾದಾಗ, ಅದನ್ನು ಕಡಿಮೆಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತೇವೆ. ನಮ್ಮ ಪ್ರಯತ್ನ ಎಷ್ಟು ತೀವ್ರವಾಗಿದ್ದರೆ ಅಷ್ಟೇ ಶೀಘ್ರವಾಗಿ ಮತ್ತು ಅಧಿಕ ಪ್ರಮಾಣದಲ್ಲಿ ನಮ್ಮ ಸಂಚಿತ ಕರ್ಮ ಕಡಿಮೆಯಾಗಿ ಮುಂದೆ ಹೊತ್ತು ಹೋಗುವ ಹೊರೆಯ ಭಾರ ಕಡಿಮೆಯಾಗುತ್ತದೆ. ತಂದ ಮತ್ತು ಆರ್ಜಿತ ಕರ್ಮವು ಹೆಚ್ಚಾಗಿ, ಕಡಿಮೆಮಾಡಿಕೊಳ್ಳುವ ಪ್ರಯತ್ನವೂ ಕಡಿಮೆಯಾಗಿ ಅಥವಾ ಪ್ರಯತ್ನದಲ್ಲಿ ಲೋಪವಿದ್ದಲ್ಲಿ ಹೊತ್ತು ಹೋಗಬೇಕಾದ ಹೊರೆ ಅಧಿಕವಾಗೇ ಇರುತ್ತದೆ. ಹಾಗಲ್ಲದೆ ಹೊತ್ತು ತಂದದ್ದು ಕಡಿಮೆಯಿದ್ದು, ಸಂಚಯನ ಮಿತವಾಗಿದ್ದು, ಅವೆರಡರ ಮೊತ್ತವನ್ನು ನಿರಂತರ ಪ್ರಯತ್ನದಿಂದ ಕಳೆದುಕೊಳ್ಳಲು ಪ್ರಯತ್ನಪಟ್ಟರೆ, ತೆಗೆದುಕೊಂಡು ಹೋಗಬೇಕಾದ ಹೊರೆಯ ಭಾರ ಕಡಿಮೆಯಾದೀತು.

" ಅಯ್ಯೋ ಇಂದಿನ ಕಾಲಕ್ಕೆ ಬದುಕುವುದೇ ಹೆಚ್ಚು, ಇನ್ನು ಬದುಕಿನ ಬಗ್ಗೆ ವಿಶ್ಲೇಷಣೆ ಮಾಡುವುದಕ್ಕೆ ನನಗೆ ಸಮಯವೆಲ್ಲಿ" ಎಂದು ಆಲೋಚನೆಮಾಡುವವರೂ ಅಧಿಕವಾಗೇ ಇದ್ದಾರೆ. ಆದರೆ ಪ್ರತೀ ಜೀವಿಯೂ ಶುದ್ಧ ಮತ್ತು ದೈವೀಕ. ಆಕಾಶದಿಂದ ದರೆಗೆ ಬಿದ್ದ ಪ್ರತೀ ನೀರ ಹನಿಯೂ ತನ್ನ ಗಮ್ಯವಾದ ಸಾಗರವನ್ನು ಸೇರಲು ಹಾತೊರೆಯುವಂತೆ ಪ್ರತೀ ಜೀವಿಯೂ ತನ್ನ ಮೂಲವಾದ ಪರಮಾತ್ಮನನ್ನು ಸೇರಲು ಹಾತೊರೆಯುತ್ತಿರುತ್ತದೆ. ಆದರೆ ಮಾಯೆ ಅವನನ್ನು ಈ ಜಗತ್ತಿಗೆ ಕಟ್ಟಿ ಹಾಕಲು ಸಾಕಷ್ಟು ಪ್ರಲೋಭನೆಗಳನ್ನು ಒಡ್ಡುತ್ತಿರುತ್ತದೆ. ಅವುಗಳನ್ನು ಮೆಟ್ಟಿನಿಂತು ಸತ್ತ್ಸಂಗದಿಂದ ನಮ್ಮಲ್ಲಿರುವ ಅಸತ್ತನ್ನು ಕಳೆದುಕೊಳ್ಳುವುದೇ ಸಾಧನೆ. ಅಂತಹ ಸಾಧನೆಯನ್ನು ಮಾಡಿದರೆ ಕರ್ಮದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಎಷ್ಟ ಪ್ರಯತ್ನ ಪಟ್ಟರೂ ಮಾನ್ಯ ಗುಂಡಪ್ಪನವರು ‘ಶೇಷ ನಿನಗುಳಿವುದೆಂತಾದೊಡಂ ನೋವಿನಿತು’ ಎಂದು ಹೇಳುವಂತೆ ಅಲ್ಪ ಸ್ವಲ್ಪ ಕರ್ಮ ಶೇಷ ಉಳಿದೀತು ಅದನ್ನು ತಾಳ್ಮೆಯಿಂದ ಸಹಿಸಿಕೊಳ್ಳಬೇಕು. ಎಂದು ನಮ್ಮ ಕರ್ಮ ಶೇಷ ಇಲ್ಲದಂತಾಗುತ್ತದೆಯೋ ಅಂದು ನಾವು ಬಂಧನಗಳಿಂದ ‘ಮುಕ್ತರಾಗಬಹುದು’.

Advertisements
 

ರಸ ಚೆನ್ನುಡಿ

ಪ್ರೇಮವೇ ನಮ್ಮ ಎಲ್ಲಾ ಕೆಲಸ ಕಾರ್ಯಗಳ ಮೂಲ ಸೆಲೆಯಾದರೆ
ಈ ಜಗತ್ತಿನಿಂದ ಎಲ್ಲಾ ಅನಿಷ್ಟಗಳೂ ದೂರವಾಗುವುದರಲ್ಲಿ ಸಂದೇಹವೇ ಇಲ್ಲ – ಪರಮಾಚಾರ್ಯ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳು – ಕಂಚಿ ಕಾಮಕೋಟಿ ಪೀಠ

 

ರಸಧಾರೆ – ೬೩೫

ಗುದ್ದಲಿಯಿನಾದೇತೆ ಮಲೆ ಕಣಿವೆ ಸಮದ ನೆಲ ? ।
ಮದ್ದು ತಡೆವುದೆ ಮುಪ್ಪು ಕಳ್ಳನವೊಲಮರೆ ?।।
ಯುದ್ಧತಾಪದೆ ಶಾಂತಿಶೀತಲತೆಯುದಿಸೀತೆ ?।
ಸಿದ್ಧವಿರು ಸೈರಣೆಗೆ – ಮಂಕುತಿಮ್ಮ ।।

ಗುದ್ದಲಿಯಿನಾದೇತೆ=ಗುದ್ದಲಿಯಿನ್+ಆದೀತೆ, ಕಳ್ಳನವೊಲಮರೆ=ಕಳ್ಳನವೊಲ್+ಅಮರೆ, ಶಾಂತಿಶೀತಲತೆಯುದಿಸೀತೆ= ಶಾಂತಿ+ಶೀತಲತೆಯು+ಉದಿಸೀತೆ

ಮಲೆ=ಬೆಟ್ಟ, ಕಣಿವೆ=ಕಂದರ, ಮುಪ್ಪು=ವೃದ್ಧಾಪ್ಯ, ಅಮರೆ+ಇರಲು,ಉದಿಸೀತೆ+ಉದಯಿಸುತ್ತದೆಯೆ, ಸೈರಣೆ=ತಾಳ್ಮೆ,

ಮಣ್ಣನ್ನು ಅಗೆಯಲು ಉಪಯೋಗಿಸುವ ಗುದ್ದಲಿಯಿಂದ ದೊಡ್ಡ ಬೆಟ್ಟ ಮತ್ತು ಕಣಿವೆಯನ್ನು ಅಗೆದು ನೆಲ ಸಮ ಮಾಡಲಾದೀತೇ? ನಮ್ಮ ಅರಿವಿಗೆ ಬಾರದಂತೆ ಕಳ್ಳನಂತೆ ನಮ್ಮ ಮೇಲೆ ಎರಗಿದ ಮುಪ್ಪನ್ನು, ಯಾವುದಾದರೂ ಔಷದಿಯನ್ನು ಕುಡಿದು ವೃದ್ಧಾಪ್ಯ ಬರುವುದನ್ನು ತಡೆಯಲಾಗುವುದೇ? ಕದನದಲ್ಲಿ ಶಾಂತಿ ಮತ್ತು ತಣ್ಣನೆಯ ವಾತಾವರಣ ಉದ್ಭವವಾಗುವುದೇ? ಹಾಗೆಯೇ ಬದುಕಿನಲ್ಲಿ ನಡೆಯುವುದನ್ನು ಬದಲಾಯಿಸಲು ಸಾಧ್ಯವಿಲ್ಲ. ತಾಳ್ಮೆಯಿಂದ ಅನುಭವಿಸುವುದನ್ನು ಹೊರತು ನಿನಗೆ ಬೇರೆ ದಾರಿಯಿಲ್ಲ ಎನ್ನುವ ಬುದ್ಧಿವಾದವನ್ನು ಮಾಡಿದ್ದಾರೆ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಾವು ಉತ್ತಮ ಸ್ಥಿತಿಯಲ್ಲಿದ್ದರೂ ಅಥವಾ ಹೀನಾಯ ಸ್ಥಿತಿಯಲ್ಲಿದ್ದರೂ ಅದಕ್ಕೆ ನಮ್ಮ ಪೂರ್ವ ಕರ್ಮವೇ ಕಾರಣ. ಪಾಪಕರ್ಮಗಳು ಹೆಚ್ಚಾಗಿದ್ದರೆ ಕಷ್ಟಗಳೂ, ಪುಣ್ಯ ಹೆಚ್ಚಾಗಿದ್ದರೆ ಸುಖವೂ ಇರುತ್ತದೆ. ಕಷ್ಟ ಸುಖಗಳು ಪಾಪ ಪುಣ್ಯಗಳ ಫಲಗಳು. ಅವುಗಳನ್ನು ಅನುಭವಿಸಿಯೇ ತೀರಿಸಬೇಕು. ಯಾರಾದರೂ ಅತೀ ಕಷ್ಟದಲ್ಲಿದ್ದಾರೆ, ಬವಣೆಯನ್ನು ಪಡುತ್ತಿದ್ದಾರೆ ಎಂದರೆ ಅವರು ತಮ್ಮ ಪಾಪಗಳನ್ನು ಕಳೆದುಕೊಳ್ಳುತ್ತಿದ್ದಾರೆಂದೂ, ಹಾಗೆಯೇ ಯಾರಾದರೂ ಸುಖದ ಸುಪ್ಪತ್ತಿಗೆಯಲ್ಲಿ ಓಲಾಡುತ್ತಿದ್ದಾರೆಂದರೆ, ಅವರು ತಮ್ಮ ಪುಣ್ಯವನ್ನು ಅನುಭವಿಸಿ ಕಳೆದುಕೊಳ್ಳುತ್ತಿದ್ದಾರೆಂದೂ ಅರ್ಥ ಎಂದು ಎನ್ನುತ್ತದೆ ನಮ್ಮ ‘ಸನಾತನ’.

ಸಣ್ಣ ಗುದ್ದಲಿಯಿಂದ ದೊಡ್ಡ ಬೆಟ್ಟವನ್ನು ಕಡಿದು ಒಂದು ಆಗಾದವಾದ ಕಣಿವೆಯನ್ನು ತುಂಬಿ ನೆಲವನ್ನು ಹೇಗೆ ಸಮ ಮಾಡಲಾಗುವುದಿಲ್ಲವೋ ಹಾಗೆಯೇ ಸಂಚಿತ ಪುಣ್ಯ ಪಾಪಗಳನ್ನು ನಮ್ಮ ಯಾವುದೇ ಉಪಾಯದಿಂದ ಸಮ ಮಾಡಲಾಗುವುದಿಲ್ಲ. ಮಾಡಿದ ಪಾಪ-ಪುಣ್ಯ ಕರ್ಮಗಳ ಫಲವನ್ನು ಅನುಭವಿಸಿಯೇ ತೀರಿಸಬೇಕು. ಆದರೆ ಹಾಗೆ ಕಷ್ಟಗಳನ್ನು ಅನುಭವಿಸುವಾಗ ತಾಳ್ಮೆಯಿಂದ ‘ಇದು ನಮ್ಮದೇ ಕರ್ಮ ಫಲ ‘ಎಂದು ಅರಿತು ವಿಧಿಯನ್ನಾಗಲಿ, ಪರಮಾತ್ಮನನ್ನಾಗಲೀ ಅಥವಾ ಅನ್ಯರನ್ನಾಗಲೀ ದೂಷಿಸದೆ, ಸೈರಣೆಯಿಂದ ಅನುಭವಿಸಿ ಮತ್ತು ಆದ ಅನುಭವವನ್ನೆಲ್ಲಾ ಪರಮಾತ್ಮನಿಗೆ ಸಮರ್ಪಿಸಿಬಿಟ್ಟರೆ, ನೋವು ಕಡಿಮೆಯಾಗುತ್ತದೆ, ದುಃಖದಿಂದ ಅಳು ಬಂದು ಅತ್ತ ನಂತರ ಮನಸ್ಸು ಹಗುರವಾದಂತೆ, ಬದುಕೂ ಹಗುರವಾಗುತ್ತದೆ. ಹಾಗೆಯೇ ಪುಣ್ಯ ಕರ್ಮಗಳ ಫಲವಾಗಿ ಸುಖವು ಬಂದಾಗ, ಅದನ್ನು ಪರಮಾತ್ಮ ಕೃಪೆಯಿಂದ ಸಂದ ಸುಫಲವೆಂದು ಭಾವಿಸಿ, ಅಹಂಕಾರಪಡದೆ ತನಗೆ ಸಂದ ಸುಖವನ್ನು ಅನ್ಯರೊಡನೆ ಹಂಚಿಕೊಂಡು ಬಾಳಿದರೆ ಒಂದು ತೃಪ್ತಿಯ ಭಾವನೆ ಬರುತ್ತದೆ.

ಅಂತಹ ಸ್ಥಿತಿಯಲ್ಲಿ ನಾವು ಇರಬೇಕಾದರೆ ಸೈರಣೆ ಬೇಕು. ಕಷ್ಟದಲ್ಲಿ ಅತೀ ವಿಹ್ವಲರಾಗದೆ, ಸುಖದಲ್ಲಿ ಅತೀಯಾಗಿ ಬೀಗದೆ ಸಮಭಾವದಿಂದ ಇದ್ದರೆ, ಎಲ್ಲವೂ ನಮ್ಮದೇ ಕರ್ಮದಿಂದ ಮತ್ತು ಆ ಪರಮಾತ್ಮನ ಕೃಪೆಯಿಂದ ಸಂದ ಫಲಗಳು ಎಂದು ಭಾವಿಸಿ ಸಮತೋಲನವನ್ನು ಉಳಿಸಿಕೊಂಡರೆ, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

 

ರಸ ಚೆನ್ನುಡಿ

ಗತವ ನೆನೆಯಬಾರದು, ಅದು ಕಣ್ಣೀರ ತರಿಸುವುದು.
ಭವಿಷ್ಯತ್ತಿನ ಬಗ್ಗೆ ಯೋಚಿಸಬಾರದು, ಅದು ಭಯವನ್ನುಂಟುಮಾಡುತ್ತದೆ
ಹಾಗಾಗಿ ಸದಾಕಾಲ ವರ್ತಮಾನದಲ್ಲಿ ಬದುಕಿ ಸಂತೋಷದಿಂದಿರಬೇಕು – ಅನಾಮಿಕ

 

ರಸಧಾರೆ – ೬೩೪

ಯುದ್ಧವಾಗಲಿ ರಾಜ್ಯವಿದ್ಯೆಯಾಗಲಿ ಶಾಸ್ತ್ರ ।
ವೃದ್ಧಿಯಾಗಲಿ ನರನ ಹಣೆಯಿನಳಿಯಿಸದಾ ।।
ಕ್ಷುದ್ರಕಾರ್ಪಣ್ಯದನ್ಯಾಯದನಿತಿನಿತುಳಿಕೆ- ।
ಯಿದ್ದೆಯಿರುವುದು ನಮಗೆ – ಮಂಕುತಿಮ್ಮ ||

ಹಣೆಯಿನಳಿಯಿಸದಾ= ಹಣೆಯಿನ್+ಅಳಿಸದ+ಆ, ಕ್ಷುದ್ರಕಾರ್ಪಣ್ಯದನ್ಯಾಯದನಿತಿನಿತುಳಿಕೆಯಿದ್ದೆಯಿರುವುದು= ಕ್ಷುದ್ರ+ಕಾರ್ಪಣ್ಯದ+ಅನ್ಯಾಯದ+ಅನಿತು+ಇನಿತು+ಉಳಿಕೆ+ಇದ್ದೆ+ಇರುವುದು.

ಕ್ಷುದ್ರ=ಸಣ್ಣತನದ, ಅನಿತು=ಅಷ್ಟು, ಇನಿತು=ಇಷ್ಟು

ವಿಧಾತನೊಂದಿಗೆ ಹೋರಾಡಿ ಅಥವಾ ಯುದ್ಧಮಾಡಿಯಾಗಲೀ ಅಥವಾ ಹಲವು ಶಾಸ್ತ್ರಗಳನ್ನು ಅಭ್ಯಾಸಮಾಡಿ ಜ್ಞಾನವಂತನಾಗುವುದರಿಂದಾಗಲೀ, ಹಣೆಯ ಬರಹವನ್ನು ಅಳಿಸಲು ಸಾಧ್ಯವೇ ಇಲ್ಲ. ಎಲ್ಲವನ್ನೂ ತೊಳೆದಂತೆ ಅಥವಾ ಅಳಿಸಿದಂತೆ ಕಂಡರೂ ನಮ್ಮ ಸಣ್ಣತನದ, ಅಜ್ಞಾನದ, ಜ್ಞಾನದ ಕಾರ್ಪಣ್ಯ, ಎಂದರೆ ಅರಿವಿನ ಬಡತನ, ಕಳ್ಳತನದ, ಮೋಸಮಾಡುವಂತಹ ಕ್ಷುದ್ರ ಬುದ್ದಿಗಳ ಕಿಂಚಿತ್ ಉಳಿಕೆ ನಮ್ಮಲ್ಲಿ ಇದ್ದೇ ಇರುತ್ತದೆ. ಅದನ್ನು ಸಂಪೂರ್ಣ ತೊಡೆದುಹಾಕುವುದಕ್ಕೆ ಆಗುವುದೇ ಇಲ್ಲ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಜೀವಿಗಳು ಅನುಭವಿಸುವ ಕರ್ಮಫಲಗಳ ಭಿನ್ನತೆಗೆ ಪೂರ್ವ ಕರ್ಮವನ್ನು ಬಿಟ್ಟರೆ ಬೇರೇನೂ ಕಾರಣವನ್ನು ನೀಡಲು ಸಾಧ್ಯವಿಲ್ಲ. ಹಾಗಾಗಿ ಹಲವಾರು ಜನ್ಮಗಳಿಂದ ಹೊತ್ತು ತಂದ ಕರ್ಮ ಶೇಷವನ್ನು ಅನುಭವಿಸಿಯೇ ತೀರಬೇಕು ಎನ್ನುವ ಸಿದ್ಧಾಂತವನ್ನು ಒಪ್ಪಿಕೊಳ್ಳಲೇ ಬೇಕು. ವಿಧಿಯೊಡನೆ ಯುದ್ಧಮಾಡಿ, ಹೋರಾಡಿ ಅದನ್ನು ಕಡಿಮೆ ಮಾಡಿಕೊಳ್ಳಲಾಗಲೀ ಅಥವಾ ಅಳಿಸಿಕೊಳ್ಳಲಾಗಲೀ ಸಾಧ್ಯವೇ ಇಲ್ಲ. ಅಂತಹ ಪ್ರಯತ್ನವನ್ನು ನಾವೆಲ್ಲಾ ಮಾಡುತ್ತಲೇ ಇರುತ್ತೇವೆ. ಜ್ಯೋತಿಷ್ಕರ ಬಳಿ ಹೋಗಿ, ಅವರ ಪರಿಮಿತ ಜ್ಞಾನದಿಂದ ಹೇಳುವುದನ್ನೆಲ್ಲಾ ನಂಬಿ, ಅವರು ಸೂಚಿಸಿದ ಪರಿಹಾರ ಮಾರ್ಗಗಳನ್ನೆಲ್ಲಾ ತುಳಿದಾಗ ಒಂದು ರೀತಿಯ ಸಮಾದಾನವಾಗುತ್ತದೆ. ಆದರೆ ಕರ್ಮ ಫಲದಿಂದ ಮುಕ್ತಿಯಂತೂ ಆಗುವುದೇ ಇಲ್ಲ. ಇದು ವಿಧಿಯೊಡನೆ ಒಂದು ರೀತಿಯ ಯುದ್ಧ.

ಅದನ್ನು ಬಿಟ್ಟರೆ ನಾವು ಸಹಜವಾಗಿ ನಮ್ಮ ಕರ್ಮ ಫಲದ ತೀವ್ರತೆಯನ್ನು ಕಡಿಮೆಮಾಡಿಕೊಳ್ಳಲು ಅನುಸರಿಸುವುದೇ ‘ರಾಜವಿದ್ಯೆ’ ಯಾದ ಪೂಜೆ, ವ್ರತ, ಜಪ, ತಪ, ಧ್ಯಾನ ಮುಂತಾದವುಗಳ ಮಾರ್ಗ. ಬದುಕಿನಲ್ಲಿ ವಿಧಿಯೊಂದಿಗೆ ಹೋರಾಡುವ ಶಕ್ತಿ ಕುಂದಿದಾಗ ಎಲ್ಲರೂ ತುಳಿಯುವ ಮಾರ್ಗವೇ ಇದು. ಇಲ್ಲಿ ನಮ್ಮ ಪೂರ್ವ ಕರ್ಮದ ಫಲವು ನಮಗೆ ಉಂಟುಮಾಡಬಹುದಾದ ಮಾನಸಿಕ ಕ್ಲೇಷೆಯನ್ನು ತಡೆದುಕೊಳ್ಳುವ ಶಕ್ತಿಯನ್ನು ಪಡೆದುಕೊಳ್ಳಬಹುದು. ಇಲ್ಲಿಯೂ ಸಹ ಕರ್ಮ ಫಲದಿಂದ ಮುಕ್ತಿಯಿಲ್ಲ. ಮೇಲೆ ಉಲ್ಲೇಖಿಸಿದ ಎರಡೂ ವಿಧಾನಗಳಲ್ಲಿ ನಮ್ಮ ಮನಸ್ಸಿನ ಮೇಲೆ ‘ಕರ್ಮ ಫಲ’ ದಿಂದಾಗಬಹುದಾದ ಪರಿಣಾಮದ ತೀವ್ರತೆಯನ್ನು ತಡೆದುಕೊಳ್ಳಲು ಬೇಕಾದ ಶಕ್ತಿಯನ್ನು ಪಡೆಯಬಹುದೇ ಹೊರತು ಕರ್ಮ ಫಲದ ಸಂಪೂರ್ಣ ನಿವಾರಣೆಯಾಗುವುದಿಲ್ಲ.

ಕರ್ಮ ಫಲವನ್ನು ಅನುಭವಿಸಿಯೇ ತೀರಿಸಬೇಕು. ಫಲಾಯನ ಮಾಡಲು ಸಾಧ್ಯವೇ ಇಲ್ಲ. ಹಾಗೆ ಅನುಭವಿಸುವಾಗ ಹೊತ್ತು ತಂದದ್ದನ್ನು ಕರಗಿಸಿ, ಮತ್ತಷ್ಟನ್ನು ಸೇರಿಸಿಕೊಳ್ಳದೆ ಬದುಕಿದರೆ, ಕಟ್ಟಿಕೊಂಡು ಬಂದಂತಹ ಕರ್ಮದ ಗಂಟನ್ನು ಕರಗಿಸಬಹುದು. ಬದುಕಿನಲ್ಲಿ ‘ಬೇಕು’ ಗಳು ಕಡಿಮೆಯಾದರೆ ಈ ಸಂಸಾರದೊಂದಿಗಿನ ‘ಅಂಟು ‘ ಕಡಿಮೆಯಾಗುತ್ತದೆ. "ಯದ್ ಯದ್ ಭವ್ಯಂ ಭವತು ಭಗವನ್ ಪೂರ್ವ ಕರ್ಮಾನುರೂಪಂ, ಏತತ್ ಪ್ರಾರ್ಥ್ಯಮ್ ಮಮ ಬಹುಮತಂ ಜನ್ಮಜನ್ಮಾಂತರೇಪಿ ತ್ವತ್ ಪಾದಾಂಬೋರುಹಯುಗಗತಾ ನಿಶ್ಚಲಾ ಭಕ್ತಿರಸ್ತು" ಎನ್ನುತ್ತಾ ‘ನನ್ನ ಜನ್ಮಜನ್ಮಾಂತರ ಪೂರ್ವ ಕರ್ಮದನುಸಾರವಾಗಿ ಏನೇನು ನಡೆಯಬೇಕೋ ಅದೆಲ್ಲವೂ ನಡೆಯಲಿ, ಹೇ ದೇವ, ಅದನ್ನೆಲ್ಲ ಅನುಭವಿಸುವಾಗ ನನಗೆ ನಿನ್ನ ಪಾದಾರವಿಂದದಲ್ಲಿ ನಿಶ್ಚಲವಾದ ಭಕ್ತಿಯಿರಲಿ’ ಎಂದು ಬೇಡುತ್ತಾರೆ ಶ್ರೀ ಕುಲಶೇಖರ ಆಳ್ವಾರರು. ಅಂತಹ ಮನೋಭಾವ ನಮಗೆ ಬಂದರೆ "ಕ್ಷುದ್ರಕಾರ್ಪಣ್ಯದನ್ಯಾಯದನಿತಿನಿತುಳಿಕೆಯಿದ್ದೆಯಿರುವುದು" ಎಂದು ಗುಂಡಪ್ಪನವರು ಹೇಳುವಂತೆ ಕಿಂಚಿತ್ ಕರ್ಮಶೇಷವಿದ್ದರೂ ಅದನ್ನು ಭರಿಸುವ ಶಕ್ತಿ ನಮಗೆ ಉಂಟಾಗುತ್ತದೆ, ಅಷ್ಟು ಸಾಕಲ್ಲವೇ ನಿರಾಳವಾಗಿ ಬದುಕಲು ? ಅಂತಹ ಸ್ಥಿತಿಗೆ ತಲುಪಲು ಪ್ರಯತ್ನವನ್ನು ಎಲ್ಲರೂ ಮಾಡಬೇಕು.

 

ರಸ ಚೆನ್ನುಡಿ

ಪಶ್ಚಾತ್ತಾಪ ಎನ್ನುವುದು ಕೇವಲ ಮಾತಿನಲ್ಲಾದರೆ ಸಾಲದು

ನಮ್ಮ ನಡವಳಿಕೆಯಲ್ಲಿ ಬದಲಾವಣೆ ಬಂದರೆ ಮಾತ್ರ ಅದು ಸತ್ಯವಾಗುತ್ತದೆ – ಅನಾಮಿಕ

 

ರಸ ಚೆನ್ನುಡಿ

ನಾವು ತಮ್ಮ ಬುದ್ಧಿಯನ್ನು ಉಪಯೋಗಿಸದ್ದಿದ್ದರೆ,

ತಲೆ ನಮ್ಮ ಕತ್ತಿನ ಮೇಲೆ ಕೇವಲ ಒಂದು ಭಾರವಾಗುತ್ತದೆ – ಅನಾಮಿಕ