RSS

Monthly Archives: ಆಗಷ್ಟ್ 2014

ರಸ ಚೆನ್ನುಡಿ

ಧ್ಯೇಯವಿಲ್ಲದ ಕಾರ್ಯ ಹೊರೆಯಾಗುತ್ತದೆ. ಕ್ರಿಯೆಗಿಳಿಸದ ಧ್ಯೇಯ ಹಗಲುಗನಸಾಗುತ್ತದೆ.
ಧ್ಯೇಯ ಮತ್ತು ಕ್ರಿಯೆ ಒಂದುಗೂಡಿದಾಗ ಕನಸೂ ನನಸಾಗುತ್ತದೆ – ಅನಾಮಿಕ

Advertisements
 

ರಸಧಾರೆ – ೬೫೩

ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೋ ।
ಕಡೆಗೆ ಕಾಡೊಳೋ ಮಸಾಣದೊಳೋ ಮತ್ತೆಲ್ಲೊ॥
ಗಣನೆಗೇರಲಿಕೆಂದು ಜನ ತಪಿಸಿ ತೊಲಳುವುದು ।
ನೆನೆಯದಾತ್ಮದ ಸುಖವ – ಮಂಕುತಿಮ್ಮ ।।

ಗಣನೆಗೇರಲಿಕೆಂದು = ಗಣನೆಗೆ+ಏರಲಿಕೆ+ಎಂದು, ನೆನೆಯದಾತ್ಮದ= ನೆನೆಯದು+ಆತ್ಮದ,

ಮಸಾಣ=ಸ್ಮಶಾನ, ಗಣನೆಗೆ= ಮನ್ನಣೆ,ಕೀರ್ತಿಯನ್ನು ಪಡೆಯಲು, ತಪಿಸಿ=ತೀವ್ರತಮ ಪ್ರಯತ್ನಿಸಿ,

ಮನೆ, ಮಠ, ಸಭೆ, ಸಂತೆ ಹೀಗೆ ಎಲ್ಲೇ, ಇದ್ದರೂ ‘ನನ್ನನ್ನು ಎಲ್ಲರೂ ಗುರುತಿಸಬೇಕು’ ಎನ್ನುವ ಹಂಬಲ ಪ್ರತಿಯೊಬ್ಬರಿಗೂ ಇರುತ್ತದೆ. ಅಲ್ಲೆಲ್ಲೂ ಆಗದಿದ್ದರೆ ಯಾರೂ ಇರದ ಕಾಡಿನಲ್ಲಾಗಲೀ ಅಥವಾ ಸತ್ತು ಸ್ಮಶಾನ ಸೇರಿದಮೇಲಾಗಲೀ ಎಲ್ಲರೂ ತನ್ನನ್ನು, ಗುರುತಿಸಬೇಕು, ಹೊಗಳಬೇಕು ಎನ್ನುವ ಹಂಬಲ ಮತ್ತು ಬದುಕಿನ್ನುದ್ದಕ್ಕೂ ಅಂತಹ ಹೊಗಳಿಕೆಗೆ ಬಾಯ್ಬಿಡುತ್ತಾ, ಶಾಶ್ವತವಾಗಿ ಅನಂತವಾಗಿರುವ ಆತ್ಮದ ಸುಖ ಮತ್ತು ಉದ್ಧಾರಕ್ಕೆ ಯಾರೂ ಆಲೋಚಿಸುವುದಿಲ್ಲ ಎಂದು ಆತ್ಮೋದ್ಧಾರಕ್ಕೆ ಮಾರಕವಾದ ಮನ್ನಣೆಯ ಹಂಬಲದ ಬಗ್ಗೆ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

ಮನೆಯಲ್ಲಿ ಎಲ್ಲರೂ ‘ನನ್ನ’ ಮಾತನ್ನು ಕೇಳಬೇಕು. ಅಕಸ್ಮಾತ್ ‘ನಾನು’ ಸನ್ಯಾಸಿಯಾದರೂ ಅಲ್ಲೂ ಎಲ್ಲರೂ ‘ನನ್ನ’ ಹೊಗಳಬೇಕು. ಸಭೆಯಲ್ಲಿ ಎಲ್ಲರೂ ‘ನನ್ನನ್ನು’ ನೋಡಬೇಕು, ‘ನಾ’ ಆಡುವ ಮಾತುಗಳಿಗೆ ಎಲ್ಲರ ಮೆಚ್ಚುಗೆ ಇರಬೇಕು, ನೂರಾರು ಜನ ಸೇರುವ ಸಂತೆಯಂತಹ ಸ್ಥಳದಲ್ಲೂ ‘ ನಾನೇ’ ಪ್ರಮುಖವಾಗಿ ಎದ್ದು ಕಾಣಬೇಕು. ಯಾರೂ ಇಲ್ಲದ ಕಾಡಿಗೆ ಸೇರಿದರೂ ‘ ನಾನು’ ಸೇರಿದೆ ‘ನಾನು’ ಎಲ್ಲರಂತಲ್ಲ ನೋಡಿ ‘ನಾನು’ ಜಗವನ್ನು ಬಿಟ್ಟು ವನವಾಸಕ್ಕೆ ಬಂದಿದ್ದೇನೆಎನ್ನುವ ಭಾವ, ‘ನಾನು’ ಸತ್ತಮೇಲೂ ‘ನನ್ನ’ ಹೆಸರ ಹೇಳಿ ನಾಲ್ಕು ಜನ ಬದುಕಬೇಕು, ‘ನಾ’ ಸತ್ತಮೇಲೂ ಶತಮಾನಗಳವೆರೆಗೂ ಜನ ‘ ನನ್ನನ್ನು’ ನೆನಪಿಸಿಕೊಂಡು ಹಾಡಿ ಹೊಗಳಬೇಕು. ಇದು ಸಾಮಾನ್ಯವಾಗಿ ಎಲ್ಲರ ಬಯಕೆ. ಕೆಲವರಿಗೆ ಈಡೇರುತ್ತದೆ, ಹಲವರಿಗೆ ಆಗುವುದಿಲ್ಲ.

ಮೇಲಿನ ಒಕ್ಕಣೆಯಲ್ಲಿ ‘ ನಾ’, ‘ನಾನು’, ‘ನಾನೇ’ ‘ನನ್ನ’ ‘ನನಗೆ’ ‘ನನ್ನನ್ನು’ ‘ನನ್ನಿಂದ’ ಎನ್ನುವ ಪದಗಳು ಕೇವಲ ಅಹಂಕಾರ ಸೂಚಕವಾಗಿವೆ. ನಮ್ಮ ಎಲ್ಲ ಬಯಕೆಗಳೂ ಆ ಅಹಂಕಾರವನ್ನು ತಣಿಸಿಕೊಳ್ಳುವುದಕ್ಕಾಗಿಯೇ ಇರುತ್ತವೆ. ಎಲ್ಲಿಯ ತನಕ ನಮ್ಮನ್ನು ನಾವು ಈ ಜಗತ್ತಿನಲ್ಲಿರುವ ವಸ್ತು, ವಿಷಯ ಮತ್ತು ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳುತ್ತೇವೆಯೋ, ಅಲ್ಲಿಯ ತನಕ ಅಹಂಕಾರ ಹೋಗುವುದೋ ಇಲ್ಲ. ಅಲ್ಲಿಯ ತನಕ ನಮ್ಮ ಅಹಂಕಾರ ಜನ್ಯವಾದ ವ್ಯರ್ಥಾಲಾಪವೂ ಹೋಗುವುದಿಲ್ಲ."ನಾನು ಎಂಬುದ ಬಿಟ್ಟು ಜ್ಞಾನಿಗಳೊಳಗೂಡಿ ಏನೆಲ್ಲಕೆ ದೇವ ಪ್ರೇರಣೆಯೆಂದು, ಧ್ಯಾನಿಸಿ ಮೌನದಿ ಪುರಂಧರ ವಿಠಲನ’ ಎನ್ನುತ್ತಾರೆ ಪುರಂದರದಾಸರು. ಆತ್ಮ, ಈ ದೇಹ, ಮನಸ್ಸು, ಬುದ್ಧಿಗಳೇ ತಾನು ಎನ್ನುವ ಭಾವ ತೊರೆದು ತನ್ನ ನಿಜ ಸ್ವರೂಪವನ್ನು ಅರಿತುಕೊಳ್ಳಬೇಕಾದರೆ, ಈ ಅಹಂಕಾರ ಪೂರಿತವಾದ ‘ ನಾನತ್ವ’ ವನ್ನು ಬಿಡಬೇಕು. ಅದನ್ನು ಬಿಟ್ಟರೆ ಈ ಮನ್ನಣೆಯ ಹಂಬಲವು ಕರಗಿ, ‘ ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂದು ಮಾನ್ಯ ಗುಂಡಪ್ಪನವರು ಹೇಳುವಂತೆ ಆದರೆ ಆಗ ಆತ್ಮ ತನ್ನ ಗಮ್ಯವನ್ನು ಸೇರುವಂತಹ ಮಾರ್ಗ ತೋರಿದಂತಾಗುತ್ತದೆ.

‘ಉಪಕಾರಿ ನಾನು, ಎನ್ನುಪಕೃತಿಯು ಜಗಕೆಂಬ ವಿಪರೀತ ಮತಿಯನುಲಿಯದೆ ವಿಪ್ಹುಲಾಶ್ರಯವನೀವ ಸುಫಲ ಸುಮಾ ಭರಿತ ಪಾದಪದಂತೆ’ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ತಮ್ಮ ‘ ವನಸುಮ’ ಎಂಬ ಅದ್ಭುತ ಕವನದಲ್ಲಿ. ಈ ಜಗತ್ತಿನ ಸಂಕಷ್ಟಗಳ ವಿಷವೃತ್ತದಲ್ಲಿ ಸಿಲುಕಿ ಆತ್ಮ ಸೊರಗದಿರಬೇಕೆಂದರೆ ‘ಅಹಂಕಾರ’ ವನ್ನುತೊರೆಯಬೇಕು ಮತ್ತು ಆ ಅಹಂಕಾರ ಜನಿತವಾದ ‘ಮನ್ನಣೆ’ ಯ ಆಸೆ ಬಿಡಬೇಕು. ಅದು ಎಂತೆಂತಹ ಮಹಾ ಮಹಿಮಾನ್ವಿತರಿಗೇ ಸಾಧ್ಯವಾಗದ್ದಾದ್ದರಿಂದ ನಮ್ಮನತಹ ಸಾಮಾನ್ಯರಿಗೆ ಕಷ್ಟಸಾಧ್ಯ. ಆದರೆ ಅಹಂಕಾರವನ್ನು ತೊರೆವ ಇಚ್ಛೆ, ಪ್ರಯತ್ನ ಮತ್ತು ನಿರಂತರ ಅಭ್ಯಾಸವಿದ್ದರೆ ಎಂದಾದರೂ ಒಂದು ದಿನ ಡಿ.ವಿ.ಜಿ ಯವರು ಹೇಳುವಂತಹ ‘ ಆತ್ಮ ಸುಖ’ ನಮಗೂ ಸಿಗಬಹುದು.

 

ರಸ ಚೆನ್ನುಡಿ

ಜೇನು ತುಂಬಿದ ಮಣ್ಣಿನ ಗಡಿಗೆ, ವಿಷ ತುಂಬಿದ ಚಿನ್ನದ ಪಾತ್ರೆಗಿಂತ ಉತ್ತಮ.

ಅದೇ ರೀತಿ ಹೊರಗಿನ ತಳುಕಿಗಿಂತ ಒಳಗಿನ ಬೆಳಕೇ ಉತ್ತಮ ಮತ್ತು ಅಮೂಲ್ಯವಾದದ್ದು – ಅನಾಮಿಕ

 

ರಸಧಾರೆ – ೬೫೨

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯದಾಹವೀಯೆಲ್ಲಕುಂ ತೀಕ್ಷ್ಣತಮ ।
ತಿನ್ನುವುದಾತ್ಮವನೆ – ಮಂಕುತಿಮ್ಮ ।।

ಅನ್ನದಾತುರಕಿಂತ = ಅನ್ನದ+ಆತುರಕಂತ,ಚಿನ್ನದಾತುರ=ಚಿನ್ನದಾ+ಆತುರ, ಹೆಣ್ಣುಗಂಡೊಲವು=ಹೆಣ್ಣು+ಗಂಡ +ಒಲವು, ಮನ್ನಣೆಯದಾಹವೀಯೆಲ್ಲಕುಂ=ಮನ್ನಣೆಯ+ದಾಹವು+ಈ+ಎಲ್ಲಕುಂ, ತಿನ್ನುವುದಾತ್ಮವನೆ=ತಿನ್ನುವುದು+ಆತ್ಮವನೆ

ಮನ್ನಣೆಯದಾಹ=ಪ್ರಚಾರದ, ಕೀರ್ತಿಯ ದಾಹ

ಅನ್ನವನ್ನು ಪಡೆಯಬೇಕು ಎನ್ನುವ ತೀವ್ರತಮ ಬಯಕೆಗಿಂತ ಚಿನ್ನದಮೇಲಿನ ಆಸೆಯ ತೀವ್ರತೆ ಹೆಚ್ಚು, ಅದಕ್ಕಿಂತ ತೀವ್ರ ಹೆಣ್ಣುಗಂಡಿನ ಪರಸ್ಪರ ಆಕರ್ಷಣೆಯ ತೀವ್ರತೆ. ಇವೆಲ್ಲಕ್ಕಿಂತ ಮೀರಿದುದು ಮನ್ನಣೆಯ, ಪ್ರಚಾರದ ಆಸೆ. ಈ ಎಲ್ಲ ಆಸೆಗಳು ಆತ್ಮವನ್ನು ಕೊರಗಿಸಿ, ಸೊರಗಿಸಿ ತಿನ್ನುತ್ತವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಬದುಕಿಗೆ ಮೂಲ ಅವಶ್ಯಕತೆ ಆಹಾರ. ಅದನ್ನು ಪಡೆಯಲು ಮನುಷ್ಯ ಹಲವಾರು ಕೆಲಸಗಳನ್ನು ಮಾಡುತ್ತಾನೆ ಮತ್ತು ಕೆಲವರು ಏನನ್ನೂ ಮಾಡದೆಯೇ ಪರಾವಲಂಬಿಗಳಾಗಿ ಉಣಿಸನ್ನು ಪಡೆಯುತ್ತಾರೆ ಎಂಬುದು ಸರ್ವವಿಧಿತ ವಿಚಾರ. ಒಮ್ಮೆ ಈ ಅನ್ನದ ಆತುರ ತಣಿದುಬಿಟ್ಟರೆ ಮನಸ್ಸು ನಾನಾ ರೀತಿಯ ಆಸೆಗಳ ಕಡೆಗೆ ನಾಗಾಲೋಟದಲ್ಲಿ ಓಡುತ್ತದೆ. ಹಣವನ್ನು ಕೂಡಿಡುವ, ಕೂಡಿಟ್ಟ ಹಣವನ್ನು ಬೆಳೆಸುವ, ಬೆಳೆಸಿದ್ದನ್ನು ಮತ್ತಷ್ಟು ಬೆಳೆಸುವ ಮತ್ತು ಅದು ಎಷ್ಟು ಬೆಳೆದರೂ ತೃಪ್ತಿಯಾಗದ ಅಥವಾ ಆ ಬೆಳೆಸುವ ಓಟದಲ್ಲಿ ಅಕಸ್ಮಾತ್ ಎಡವಿ ಇದ್ದದ್ದನ್ನು ಕಳೆದುಕೊಂಡರೆ, ಬೇತಾಳವನ್ನು ಛಲಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ಪ್ರಯತ್ನವನ್ನು ಪಡುತ್ತಲೇ ಇರುವುದೇ ಮನುಷ್ಯ ಸ್ವಭಾವ. ಈ ಛಲ, ಆಸೆಗಳ ತೀವ್ರತೆ ಅವುಗಳನ್ನು ಪಡೆಯಲು ಓದುವ ಓಟದ ‘ವ್ಯರ್ಥತೆ’ ಕಡೆಗೂ ಅರ್ಥವಾಗುವುದೇ ಇಲ್ಲ.

ಚಿನ್ನದಾತುರ, ಎಂದರೆ ಸಂಪತ್ತಿನ ಆಸೆಯನ್ನು ಪೂರೈಸಿಕೊಳ್ಳಲು ಅವರವರ ಮಿತಿಯಲ್ಲಿ ಸಾಮರ್ಥ್ಯವಿರುತ್ತದೆ. ಆದರೆ ಇದಕ್ಕಿಂತ ಹೆಚ್ಚಿನ ತೀವ್ರತೆಯಲ್ಲಿರುವುದು ಹೆಣ್ಣುಗಂಡಿನ ಪರಸ್ಪರ ಆಕರ್ಷಣೆ. ಈ ಆಕರ್ಷಣೆಯ ಪರಿಣಾಮವಾಗಿ ಚರಿತ್ರೆಯಲ್ಲಿ ನಡೆದ ಘಟನೆಗಳು ಈ ಆಕರ್ಷಣೆಯ ಪ್ರಭಾವ ಮತ್ತು ಮಹತ್ವವನ್ನು ತೋರುತ್ತದೆ ಅಲ್ಲವೇ? ಮೇಲೆ ಹೇಳಿದ ಎರಡನ್ನೂ ಮೀರಿಸುವುದು ಮನ್ನಣೆಯ ಆಸೆ. ಮೇಲಿನ ಎರಡಕ್ಕೂ ಮಿತಿಯಿರಬಹುದು ಅಥವಾ ಮಿತಿಯನ್ನು ಹಾಕಿಕೊಳ್ಳಬಹುದು. ಆದರೆ ಮನ್ನಣೆಯ ಆಸೆ ಇವೆರದಕ್ಕಿಂತಲೂ ಬಹಳ ತೀಕ್ಷ್ಣ. ಮನ್ನಣೆಯ ಆಸೆಗೆ ಬಿದ್ದವನು ಅದನ್ನು ಪಡೆಯಲು ಏನನ್ನು ಬೇಕಾದರೂ ಮಾಡಲು ಹೇಸುವುದಿಲ್ಲ. ಅದನ್ನು ಪಡೆಯಲು ಎಂತಹ ಹೀನ ಕೃತ್ಯವನ್ನಾದರೂ ಮಾಡಲು ಹಿಂಜರಿಯುವುದಿಲ್ಲ. ಮನ್ನಣೆಯ ಆಸೆಗೆ ಬಿದ್ದವನು ತನ್ನ ಹೆಂಡಿ ಮಕ್ಕಳು, ಬಂಧು ಬಳಗ ಆಸ್ಥಿ ಪಾಸ್ತಿ ಎಲ್ಲವನ್ನೂ ತೆರೆಯಲು ತಯಾರಾಗಿಬಿಡುತ್ತಾನೆ. ಇದರ ದೃಷ್ಟಾಂತಗಳೂ ನಮಗೆ ಪುರಾಣಗಳಲ್ಲಿ ಮತ್ತು ಚರಿತ್ರೆಯಲ್ಲಿ ಹೇರಳವಾಗಿ ಸಿಗುತ್ತದೆ.

ಮೇಲಿನ ಮೂರೂ ಆಸೆಗಳನ್ನು ಪೂರೈಸಿಕೊಳ್ಳುವ ಪ್ರಯತ್ನದಲ್ಲಿ ಮನುಷ್ಯ ತನ್ನ ಸಂಸ್ಕಾರಗಳನ್ನು ಕಳೆದುಕೊಂಡು ಇತರರಿಗೆ ಮತ್ತು ತನಗೂ ಘಾಸಿಮಾಡಿಕೊಳ್ಳುತ್ತಾನೆ. ತೃಪ್ತಿಯಿಲ್ಲದೆ,ಮತ್ತಷ್ಟರಾಸೆಯಲಿ ನಲುಗಿ ಹೋಗುತ್ತಾನೆ. ಮಾನಸಿಕವಾಗಿ ಬಹಳ ಹಿಂಸೆಯನ್ನು ಅನುಭವಿಸುತ್ತಾ, ಬುದ್ಧಿಮಾಂದ್ಯನಾಗುತ್ತಾನೆ. ಯುಕ್ತsಯುಕ್ತತೆಯ ವಿವೇಚನೆಯನ್ನು ಕಳೆದುಕೊಂಡು ಮಾಡಬಾರದ ಕೆಲಸಗಳನ್ನು ಮಾಡುತ್ತಾ ಧರ್ಮವಿರುದ್ಧವಾಗಿ ಬದುಕುತ್ತಾನೆ. ಹಾಗೆ ಬದುಕುವಾಗ ಬದುಕಿಗೆ ಮೂಲ ಆಧಾರವಾದ ‘ ಆತ್ಮ ‘ ಏನನ್ನು ಪಡೆಯಬೇಕೋ ಅದನ್ನು ಪಡೆಯಲಾಗದೆ, ಎಲ್ಲಿಗೆ ಸೇರಬೇಕೋ ಅಲ್ಲಿಗೆ ಸೇರಲಾಗದೆ, ವಿಲಿವಿಲಿ ಒದ್ದಾಡುತ್ತಾ ಸೊರಗುತ್ತದೆ. ಇದನ್ನೇ ಮಾನ್ಯ ಗುಂಡಪ್ಪನವರು " ತಿನ್ನುವುದಾತ್ಮವನೆ" ಎಂದರು. ಸಾಮಾನ್ಯವಾಗಿ, ಈ ಆಸೆಗಳ ಕಾರಣವಾಗಿ ಜಗತ್ತಿನ ಜನರು ಎಷ್ಟು ಕಷ್ಟಪಡುತ್ತಾರೆ ಎನ್ನುವ ದೃಷ್ಟಾಂತಗಳನ್ನು ನೋಡುತ್ತಿದ್ದರೂ, ತಾವೂ ಸಹ ಈ ಆಸೆಗಳ ವಿಷವೃತ್ತದಲ್ಲಿ ಸಿಲುಕಿ ತಾವೂ ಅನುಭವಿಸದ ಹೊರತು ಯಾರಿಗೂ ಅರಿವು ಮೂಡುವುದೇ ಇಲ್ಲ. ನಮಗೆ ಅಂತಹ ಅರಿವು ಮೂಡಿ ನಾವು ನಮ್ಮ ಆಸೆಗಳನ್ನು ನಮ್ಮ ಸಾಮರ್ಥ್ಯಗಳ ಮಿತಿಯಲ್ಲಿ ಇಟ್ಟುಕೊಳ್ಳಲಾದರೆ ನಾವೇ ಧನ್ಯರೆಂದು ಅಂದುಕೊಳ್ಳಬೇಕು.

 

ರಸ ಚೆನ್ನುಡಿ

ಮಳೆ ಬಂದಾಗ ದಿವಿಯಲ್ಲಿ ಹೇಗೆ ರಂಗು ರಂಗಿನ ಬಿಲ್ಲು ಮೂಡುತ್ತದೋ
ಇಳೆಯ ಜೀವನದಲ್ಲಿ ಅನುಭವಿಸುವ ನೋವಿಂದ ಅರಿವೂ ಮೂಡುತ್ತದೆ. – ಅನಾಮಿಕ

 

ರಸ ಚೆನ್ನುಡಿ

ಬದುಕಿಗೆ ಎರಡನೇ ಅಧ್ಯಾಯವಿಲ್ಲವೇ ಇಲ್ಲ. ಇರುವುದು ಒಂದೇ ಅಧ್ಯಾಯ.

ಅದು ಉತ್ತಮವಾಗಿರಬೇಕಾದರೆ, ಅದರ ಪ್ರತಿ ಪುಟವನ್ನು ಬರೆಯುವಾಗಲೂ ಬಹಳ ಜಾಗರೂಕರಾಗಿರಬೇಕು – ಅನಾಮಿಕ

 

ರಸಧಾರೆ – ೬೫೧

ಮೌನದಿಂದಂಬಲಿಯನುಂಡು ತಣಿಯವ ಮಾನಿ ।
ಶ್ವಾನನುಣುವೆಂಜಲೋಗರಕೆ ಕರುಬುವನೆ? ।।
ಜ್ಞಾನಿ ನಡೆವಂ ವಿಷಯ ತರತಮವಿವೇಕದಲಿ ।
ಮಾಣು ನೀಂ ತಲ್ಲಣವ – ಮಂಕುತಿಮ್ಮ ।।

ಮೌನದಿಂದಂಬಲಿಯನುಂಡು=ಮೌನದಿಂದ+ಅಂಬಲಿಯನು+ಉಂಡು, ಶ್ವಾನನುಣುವೆಂಜಲೋಗರಕೆ=ಶ್ವಾನನು+ಉಣುವ+ಎಂಜಲ+ಓಗರಕೆ

ಮಾನಿ=ಸ್ವಾಭಿಮಾನಿ

ಮೌನದಿಂದ ಗಂಜಿಯನ್ನು ಕುಡಿದು ಸಂತುಷ್ಟಗೊಳ್ಳುವ ಮಾನಧನನಾದ ವ್ಯಕ್ತಿ, ಬೀದಿಯಲ್ಲಿ ಯಾರೋ ಬಿಸುಟ ಎಂಜಲೆಲೆಯಲ್ಲಿ ಮೃಷ್ಟಾನ್ನ ಭೋಜನವ ತಿನ್ನುವ ನಾಯಿಯನ್ನು ಕಂಡು ಕರುಬುವನೇನು? ಹೇಗೆ ಸರಿ ತಪ್ಪುಗಳನ್ನು ಅರಿತ ಜ್ಞಾನಿ ಬದುಕಿನಲ್ಲಿ ನಡೆದುಕೊಳ್ಳುತ್ತಾನೋ, ಹಾಗೆಯೇ ನೀನೂ ಸಹ ದೃಢಮನಸ್ಕನಾಗಿ, ತಲ್ಲಣವ ತೊರೆದು ನಡೆದುಕೋ ಎಂದು ನಮಗುಪದೇಶವನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಮನಸ್ಸು ಬಹಳ ಚಂಚಲ. " ದೃಷ್ಯಮಾಣೆ ಭವೇತ್ ಪ್ರೀತಿಃ" ಎನ್ನುವಂತೆ, ಕಣ್ಣಿನಿಂದ ಕಂಡದ್ದನ್ನೆಲ್ಲಾ ಮನಸ್ಸು ಬಯಸುತ್ತದೆ. ನಮಗದು ಅವಶ್ಯವೋ ಅಲ್ಲವೋ ಎಂಬ ವಿವೇಚನೆಗೆ ನಮ್ಮ ‘ ಬೇಕುಗಳನ್ನು’ ಒಳಪಡಿಸದೆ ಬಯಸುತ್ತಾ ಇರುತ್ತದೆ. ಹಾಗೆ ಬಯಸಿದ್ದನ್ನೆಲ್ಲಾ ಪಡೆಯುವ ಪ್ರಯತ್ನ ಮಾಡದೆ ಇದ್ದರೂ, ‘ಬಯಕೆ’ ಯೇ ಸಾಕು ನಮ್ಮ ಮಾನಸಿಕ ನೆಮ್ಮದಿಯನ್ನು ಹಾಳುಮಾಡಲು, ಅಲ್ಲವೇ? ‘"ಬಡತನಕೆ ಉಂಬುವ ಚಿಂತೆ, ಉಂಬುವುದಾದರೆ ಉಡುವ ಚಿಂತೆ, ಉಡುವುದಾದರೆ ಮನೆಯ ಚಿಂತೆ, ಮನೆಯದಾದರೆ ಮಡದಿಯ ಚಿಂತೆ" ಎನ್ನುತ್ತಾರೆ ನಮ್ಮ ಶಿವ ಶರಣರು. ತನ್ನ ಸ್ಥಿತಿಯನ್ನು ತಾನೇ ಪ್ರಯತ್ನಪೂರ್ವಾಕವಾಗಿ, ಬಯಕೆಗಳನ್ನು ತೀರಿಸಿಕೊಳ್ಳುವ ಮೂಲಕ, ಸುಧಾರಿಸಿಕೊಳ್ಳುವ ಪ್ರಯತ್ನ ಮನುಷ್ಯರಲ್ಲಿ ನಿರಂತರವಾಗಿ ಸಾಗಿರುತ್ತದೆ. ಇದು ಸಹಜ.

"ಮೌನದಿಂದಂಬಲಿಯನುಂಡು ತಣಿಯವ ಮಾನಿ" ಎಂದು ಮಾನ್ಯ ಗುಂಡಪ್ಪನವರು ಹೇಳುವಂತೆ, ಮನಸ್ಸಿನಲ್ಲಿ ಆಸೆಯುಕ್ಕುತ್ತಿದ್ದರೂ ತನ್ನಲ್ಲಿ ಎನುಂಟೋ ಅದನ್ನೇ ಅನುಭವಿಸುತ್ತಾ ನಿರ್ಲಿಪ್ತನಂತೆ ಇರುವವನು ‘ಅಭಾವ ವೈರಾಗಿ’ ಅವನಿಗೆ ಸಿಗುವುದಿಲ್ಲ ಹಾಗಾಗಿ ಅವನಿಗದು ಬೇಕಾಗಿಲ್ಲ. ಆಸೆಯಾದರೂ ತನ್ನ ಸ್ವಾಭಿಮಾನವನ್ನು ತೊರೆಯದೆ, ಪರರಲ್ಲಿ ಕೈಚಾಚದೆ, ತನ್ನ ಪ್ರಾಮಾಣಿಕ ಪ್ರಯತ್ನದಿಂದ ಸಿಕ್ಕದ್ದನ್ನು ಅನುಭವಿಸಿ ತೃಪ್ತಿಯಿಂದಿರುವವನು ಸ್ವಾಭಿಮಾನಿ. ಕಣ್ಣಲ್ಲಿ ಕಂಡರೂ, ಮನದಲ್ಲಿ ಆಸೆಯುಕ್ಕಿದರೂ, ತಲ್ಲಣಗೊಳ್ಳದೆ ಯುಕ್ತಾsಯುಕ್ತಾ ವಿವೇಚನೆಯಿಂದ ಯಾವುದಕ್ಕೆ ಮತ್ತು ಎಷ್ಟು ಆಸೆಪಡಬೇಕೆಂಬುದನ್ನು ಅರಿತು ವರ್ತಿಸುವವನು ಜ್ಞಾನಿ. ಕಣ್ಣಲ್ಲಿ ಕಂಡರೂ ಆಸೆ ಪಡದೆ, ಅದು ಪರರಿಗುಪಯೋಗಕ್ಕೆ ಬಂದರೆ ಚೆನ್ನ ಎಂದು ಭಾವಿಸುವವನು, ಶುದ್ಧ ನಿರ್ಲಿಪ್ತತೆ, ಉದಾತ್ತತೆ ಮತ್ತು ವೈರಾಗ್ಯವನ್ನು ತೋರುವವನು,’ಯೋಗಿ’.

ಮಾನ್ಯ ಗುಂಡಪ್ಪನವರು ಆ ರೀತಿಯ ‘ಯೋಗಿ’ ಯಾಗಿದ್ದರು. ಅಂದಿನ ಸರ್ಕಾರವು ಸಮಾಜಕ್ಕೆ ಅವರ ಕೊಡುಗೆಯನ್ನು ಗುರುತಿಸಿ, ಅವರಿಗೆ ೫೦೦ ರೂಗಳ ಮಾಶಾಸನವನ್ನು ಮಂಜೂರುಮಾಡಿ ಆದೇಶ ಹೊರಡಿಸಿದಾಗ, ಅವರು ಅದನ್ನು ಸ್ವೀಕರಿಸದೆ, ತಾವು ಕಡು ಬಡತನದಲ್ಲಿದ್ದರೂ "ಆ ಹಣವನ್ನು ನನಗಿಂತ ತೀರ ಅವಶ್ಯಕತೆ ಇರುವವರಿಗಾಗಿ ಉಪಯೋಗಿಸಿ" ಎಂದು ಸರ್ಕಾರಕ್ಕೆ ಮರು ಆದೇಶ ನೀಡಿದರಂತೆ. ಅದು ಯೋಗಿಗಳ ಲಕ್ಷಣ. ನಾವೂ ಸಹ ಆತ್ಮಾವಲೋಕನದಿಂದ, ಇಂದಿನ ನಮ್ಮ ಮಾನಸಿಕ ಸ್ಥರವನ್ನು( mental, intellectual and spiritual level or state) ಅರಿತುಕೊಂಡು ಸಾಧನೆಯಿಂದ ಯುಕ್ತಾsಯುಕ್ತ ವಿವೇಚನೆಯನ್ನು ಬೆಳೆಸಿಕೊಂಡು ನಮ್ಮ ತಲ್ಲಣವನ್ನು ಹೋಗಲಾಡಿಸಿಕೊಳ್ಳಲಾದರೆ ಬದುಕಿನಲ್ಲಿ ಧನ್ಯರೆನಿಸಿಕೊಳ್ಳಬಹುದು. ಅದು ಕೇವಲ ಪ್ರಯತ್ನದಿಂದ ಮಾತ್ರ ಸಾಧ್ಯ.