RSS

Monthly Archives: ಸೆಪ್ಟೆಂಬರ್ 2014

ರಸಧಾರೆ – ೬೬೮

ಬಡಗಿ ಬೇಸಾಯಿ ಕರ್ಮಿಗರೇನು ಯೋಗಿಗಳೊ ।
ಮುಡುಪವರ ಮನಸೆಲ್ಲ ಕೈಯ ದುಡಿತಕ್ಕೆ ।।
ಬಿಡುವಿರದು ಬಣಗು ಚಿಂತೆಗೆ, ಬುತ್ತಿ ಹಂಗಿರದು ।
ಕಡಿದಲ್ಲವರ್ಗೆ ಬಾಳ್ – ಮಂಕುತಿಮ್ಮ ।।

ಕರ್ಮಿಗರೇನು=ಕರ್ಮಿಗರು+ಏನು, ಮುಡುಪವರ=ಮುಡುಪು+ಅವರ, ಬಿಡುವಿರದು=ಬಿಡುವು+ಇರದು, ಹಂಗಿರದು=ಹಂಗು+ಇರದು, ಕಡಿದಲ್ಲವರ್ಗೆ=ಕಡಿದು+ಅಲ್ಲ+ಅವರ್ಗೆ

ಕರ್ಮಿಗರು=ಕುಶಲ ಕರ್ಮಿಗಳು, ಮುಡುಪು=ಮೀಸಲು, ಬುತ್ತಿ= ಊಟ, ಕಡಿದು=ಕಷ್ಟತರವಾದದ್ದು.

ಬಡಗಿ, ರೈತ, ಕಮ್ಮಾರ, ಕುಂಬಾರ ಮುಂತಾದ ಕುಶಲ ಕರ್ಮಿಗಳೆಲ್ಲ ‘ಯೋಗ’ವನ್ನು ಕಲಿತವರೇನು? ಅವರ ಜೀವನವೆಲ್ಲ ಮೈಬಗ್ಗಿಸಿ ಮಾಡುವ ದುಡಿತಕ್ಕೆ ಮೀಸಲಾಗಿರುತ್ತದೆ. ಬಿಡುವಿಲ್ಲದ ಕೆಲಸಕಾರ್ಯಗಳ ಮಧ್ಯೆ ಅವರಿಗೆ ವ್ಯರ್ಥ ಹರಟೆಗೆ ಸಮಯವಿರುವುದಿಲ್ಲ. ಅವರು ಸದಾ ದುಡಿದು ತಿನ್ನುವವರಾದ್ದರಿಂದ, ಅವರಿಗೆ ಯಾರ ಹಂಗೂ ಇರುವುದಿಲ್ಲ. ಅಂತಹವರಿಗೆ ಬಾಳು ದುರ್ಗಮವೆನಿಸುವುದಿಲ್ಲ ಎಂದು ‘ಕಾಯಕ’ ದ ಮಹತ್ವವನ್ನು ಬಹಳ ಸುಂದರವಾಗಿ ಹೇಳಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಅಂತಹ ಕುಶಲ ಕರ್ಮಿಗಳಿಗೆ ಅವರ ಕೆಲಸವೇ ಒಂದು ಯೋಗ. ಅವರು ಯೋಗಿಗಳಲ್ಲದಿದ್ದರೂ, ಯೋಗಿಗಳು. ಯೋಗವೆಂದರೆ ‘ಚಿತ್ತವೃತ್ತಿ ನಿರೋಧಕ’ ಎಂದರೆ ಮನಸ್ಸನ್ನು ಹಲವಾರು ಕಡೆಗೆ ಹರಿದು ಹೋಗದಂತೆ ಇಟ್ಟುಕೊಳ್ಳುವುದೇ ‘ಯೋಗ’
ಇದೇ ರೀತಿ, ಕಮ್ಮಾರ, ಚಮ್ಮಾರ, ಬಡಗಿ, ಶಿಲ್ಪಿ, ಚಿತ್ರಕಾರ ಮುಂತಾದ ಕುಶಲ ಕರ್ಮಿಗಳು ತಮ್ಮ ವಿಧ್ಯೆಯನ್ನು ಕಲಿಯುವುದು ಒಂದು ‘ ತಪಸ್ಸು’. ಜ್ಞಾನಾರ್ಜನೆಗೆ ಮನದಲ್ಲಿ ತಪಿಸುವುದೇ ‘ ತಪಸ್ಸು’ ಅವರು ತಪಸ್ವಿಗಳು. ಹಾಗಾಗಿಯೇ ಅವರು ತಮ್ಮ ಏಕಾಗ್ರತೆಯಿಂದ ಸೃಷ್ಟಿಸುವ ‘ಕೃತಿ’ಗಳು ನೂರಾರು ಅಥವಾ ಸಾವಿರಾರು ವರ್ಷಗಳು ಸಮಾಜಕ್ಕೆ ಸಂತೋಷವನ್ನು ನೀಡುತ್ತದೆ. ಅವರ ಜೀವನವೆಲ್ಲ ಅಂತಹ ಕಲಾಕೃತಿಗಳ ಮೂಲಕ ಜಗತ್ತಿನ ಸಂತೋಷಕ್ಕಾಗಿಯೇ ಮುಡುಪಾಗಿಡುತ್ತಾರೆ. ಅವರಿಗೆ ವ್ಯರ್ಥಕಾಲಯಾಪನೆ ಮಾಡಲು ಸಮಯವೇ ಇರುವುದಿಲ್ಲ. ಅವರು ತಮ್ಮ ಆಹಾರವನ್ನು ತಾವೇ ಸಂಪಾದಿಸಿಕೊಳ್ಳುತ್ತಾರೆ. ಅವರು ಆಹಾರಕ್ಕಾಗಿ ಯಾರ ಹಂಗಿಗೂ ಬೀಳುವುದಿಲ್ಲ . ಅವರಿಗೆ ಬಾಳು ಕಷ್ಟಗಳ ಪ್ರಯಾಣವಾಗುವುದಿಲ್ಲ.

ಹಾಗಾಗಿ ಯಾರೇ ಆಗಲಿ ತಮ್ಮ ಪಾಲಿಗೆ ಬಂದ ಕೆಲಸವನ್ನು ಕರ್ತವ್ಯವೆಂದು ಅರಿತು, ಒಪ್ಪಿಕೊಂಡು ತಮ್ಮನ್ನು ತಾವು ಸಂಪೂರ್ಣವಾಗಿ ಅದರಲ್ಲೇ ತೊಡಗಿಸಿಕೊಂಡರೆ, ಅದನ್ನೊಂದು ತಪ್ಪಸ್ಸೆಂದು ಆಚರಿಸಿದರೆ, ಆಗ ಯಾರಿಗೂ ವ್ಯರ್ಥವಾಗಿ ಕಾಲ ಕಳೆಯುವ ಅವಕಾಶವೇ ಸಿಗುವುದಿಲ್ಲ. ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ, ಆ ಕೆಲಸವನ್ನು ಪೂರ್ಣಗೊಳಿಸಿದರೆ ಒಂದು ಸಂತೃಪ್ತ ಭಾವವಿರುತ್ತದೆ. ಒಬ್ಬ ಚಿತ್ರಕಾರನನ್ನೋ ಒಬ್ಬ ಶಿಲ್ಪಿಯನ್ನೋ ನಾವು ಗಮನಿಸಿದರೆ, ಅವರು ತಾವು ಸೃಷ್ಟಿಸಿದ ಕಲಾಕೃತಿಯನ್ನು ತಾವೇ ನೋಡಿ ನೋಡಿ ಆನಂದಿಸಿ ತೃಪ್ತರಾಗುವುದನ್ನು ಮತ್ತು ಅದು ಅನ್ಯರಿಗೆ ಸಂತಸವನ್ನಿತ್ತರೆ ಅನ್ಯರ ಸಂತೋಷವನ್ನು ಕಂಡು ಸಂತೋಷಪಡುವಂತಹ ಯೋಗಿಗಳು ಅವರು. ಅಂತಹವರಿಗೆ ಅನಾವಶ್ಯಕ ಮಾತು ಮತ್ತು ಕಾಡು ಹರಟೆಯಲ್ಲಿ ಯಾವ ಆಸಕ್ತಿಯೂ ಇರುವುದಿಲ್ಲ.

ನಾವು ಯಾವುದೇ ಕೆಲಸವನ್ನು ಮಾಡುವಾಗಲೂ ಅಂತಹ ಮನೋಭಾವವನ್ನು ಬೆಳೆಸಿಕೊಂಡರೆ, ನಾವು ಮಾಡುವ ಕೆಲಸ ನಮಗೆ ತೃಪ್ತಿಯನ್ನು ನೀಡುತ್ತದೆ. ಆದರೆ ಇಂದಿನ ಸಮಾಜದ ಪರಿಸ್ಥಿತಿಯಲ್ಲಿ, ನಮ್ಮ ಮನಸ್ಸನ್ನು ಸೆಳೆಯುವ ನೂರಾರು ಸೆಳೆತಗಳ ಮಧ್ಯೆಯೂ ನಾವು ಅಂತಹ ಮನೋಭಾವವನ್ನು ಬೆಳೆಸಿಕೊಂಡು, ನಾವು ಮಾಡುವ ಕೆಲಸವನ್ನು ನಿಷ್ಥೆಯಿಂದ ಮಾಡಿ ತೃಪ್ತರಾದರೆ ನಮಗೂ ಸಹ ‘ ಕಡಿದಲ್ಲವರ್ಗೆ ಬಾಳ್’ ಎಂದು ಗುಂಡಪ್ಪನವರು ಹೇಳುವಂತೆ ಬದುಕು ಸುಗಮವಾಗುತ್ತದೆ ಅಲ್ಲವೇ?

Advertisements
 

ರಸ ಚೆನ್ನುಡಿ

‘ಸತ್ಯ’ ವೆಂಬುದು ತೈಲದ ಹನಿಗಳಿದ್ದಂತೆ.ಅದರ ಮೇಲೆ ನೀವೆಷ್ಟೇ ನೀರನ್ನು ಸುರಿದರೂ,
ಅದು ಮತ್ತೆ ಮತ್ತೆ ಮೇಲೆದ್ದು ಬಂದು ತನ್ನ ಆಸ್ಥಿತ್ವವನ್ನು ನಿರೂಪಿಸುತ್ತದೆ – ಅನಾಮಿಕ

 

ರಸಧಾರೆ – ೬೬೭

ಮನೆಯ ಸುಡುತಿಹ ಬೆಂಕಿಯುರಿಯನಾರಿಸೆ ನುಗ್ಗು ।
ಮನವ ಸುಡುವುರಿಯಿಂದ ದೂರ ನೀಂ ನಿಲ್ಲು ।।
ತನುವಿಗುಪಕೃತಿಗೆಯ್ವ ಭರದಿ ನೀನಾತುಮದ ।
ಅನುನಯವ ಕೆಡಿಸದಿರು – ಮಂಕುತಿಮ್ಮ ।।

ಬೆಂಕಿಯುರಿಯನಾರಿಸೆ=ಬೆಂಕಿಯನು+ಆರಿಸೆ,ಸುಡುವುರಿಯಿಂದ=ಸುಡುವ+ಉರಿಯಿಂದ, ತನುವಿಗುಪಕೃತಿಗೆಯ್ವ=ತನುವಿಗೆ+ಉಪಕ್ರುತಿ+ಗೆಯ್ವ, ನೀನಾತುಮದ=ನೀನು+ಆತುಮದ, ಕೆಡಿಸದಿರು=ಕೆಡಿಸದೆ+ಇರು

ತನುವಿಗೆ=ದೇಹಕ್ಕೆ. ಉಪಕ್ರುತಿ=ಉಪಕಾರ, ಭರದಿ=ಆತುರದಿ, ಅನುನಯವ=ಸಮತೋಲನವನ್ನು, ಗೆಯ್ವ= ಮಾಡುವ

ಮನಗೆ ಬೆಂಕಿ ಹೊತ್ತಿಕೊಂಡರೆ, ಅದನ್ನು ಆರಿಸಲು ನುಗ್ಗು. ಆದರೆ ಮನಸ್ಸನ್ನು ಸುಡುವ ಬೆಂಕಿಯಿಂದ ದೂರ ಇರು. ದೇಹಕ್ಕೆ ಆನಂದವನ್ನು ನೀಡುವ ಅತಿಯಾದ ಆಸೆಯಿಂದ ಆತ್ಮವನ್ನು ಕಡೆಗಣಿಸಬೇಡ ಎಂದು ಒಂದು ಸೂಕ್ತ ತಿಳುವಳಿಕೆಯನ್ನು ನೀಡಿದ್ದಾರೆ, ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ .

ಮನೆ ಎಂದರೆ ನಾವು ವಾಸಮಾಡುವ ವಸತಿಯ ಮನೆ. ಆದರೆ ಈ ದೇಹ ನಮ್ಮ ಆತ್ಮಕ್ಕೆ ಮನೆ. ಮನೆಗೆ ಬೆಂಕಿ ಬಿದ್ದರೆ ತಕ್ಷಣ ಅದನ್ನು ಆರಿಸಲು ನಾವು ಮುಂದಾಗಬೇಕು. ಆದರೆ ಆತ್ಮ ಸುಡುವಂತಹ ವಿಚಾರಗಳಿಂದ ಸಾಕಷ್ಟು ದೂರ ಉಳಿಯಬೇಕು. ಆದರೆ ಆತ್ಮದ ಮನೆಯಾದ ದೇಹಕ್ಕೆ ಬಹಳ ಹಿತ ಉಂಟು ಮಾಡುವುದು, ಆತ್ಮವನ್ನು ಸುಡುತ್ತದೆ ಮತ್ತು ಆತ್ಮಕ್ಕೆ ಹಿತವಾದ ವಿಷಯಗಳು ದೇಹವನ್ನು ಸೊರಗಿಸುತ್ತದೆ. ದೇಹದ ಆರೈಕೆ ಅಧಿಕವಾದರೆ ಆತ್ಮ ಸೊರಗುತ್ತದೆ. ದೇಹವು ಇಂದ್ರಿಯ ವಶ. ಇಂದ್ರಿಯಗಳು ತಮ್ಮ ಸುಖಕ್ಕೆ ಏನೇನು ಬೇಕೋ ಅದನ್ನೆಲ್ಲ ಅಪೇಕ್ಷೆಪಡುವಂತೆ ಮಾಡುತ್ತದೆ. ಮನಸ್ಸು ಅದರ ಎಲ್ಲ ಬೇಡಿಕೆಗಳನ್ನೂ ತೀರಿಸುತ್ತಾ ಹೋದರೆ, ವಿವೇಕ, ಶೂನ್ಯವಾಗಿ ಆತ್ಮ ಸೊರಗುತ್ತದೆ. ಏಕೆಂದರೆ ದೇಹಕ್ಕೆ ಹಿತ ಎನಿಸುವಂತಹದ್ದು ಆತ್ಮಕ್ಕೆ ಖಂಡಿತ ಹಿತವಲ್ಲ. ದೇಹ ಇಹವನ್ನು ಬಯಸಿದರೆ ಆತ್ಮ ಪರವನ್ನು ಬಯಸುತ್ತದೆ. ಇವೆರಡರ ಸಮನ್ವಯವನ್ನು ಕಾಯುತ್ತಾ ಆತ್ಮದ ಅನುನಯವನ್ನು ಕಾಯುವ ಕೆಲಸವನ್ನು ಮನಸ್ಸು ಮತ್ತು ಬುದ್ಧಿಗಳು ಮಾಡಬೇಕು. ಇದನ್ನೇ ಮಾನ್ಯ ಗುಂಡಪ್ಪನವರು ‘ತನುವಿಗುಪಕೃತಿಗೆಯ್ವ ಭರದಿ ನೀನಾತುಮದ ಅನುನಯವ ಕೆಡಿಸದಿರು’. ಎನ್ನುವ ಆದೇಶವನ್ನು ನೀಡಿದ್ದಾರೆ.

ಹಾಗೆ ಕಾರ್ಯಪ್ರವೃತ್ತವಾಗಲು ಮನಸ್ಸು ಮತ್ತು ಬುದ್ಧಿಗಳನ್ನು ಸಿದ್ಧಪಡಿಸಲು ನಮ್ಮ ಸನಾತನದಲ್ಲಿ ಸೂಚನೆಗಳು, ಆದೇಶಗಳು ಇವೆ. ಇಂದಿಗೂ ಸಹ, ಅವುಗಳನ್ನು ಅರಿತಲ್ಲದಿದ್ದರೂ ಅಭ್ಯಾಸಬಲದಿಂದ ವೇದೋಪನಿಷತ್ತಿನ ಹಲವಾರು ಆದೇಶಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿ ಇವೆ. ಆದರೆ ಅವುಗಳನ್ನು ಅರಿತು ಅನುಷ್ಠಾನಮಾಡಿದರೆ ಆತ್ಮವನ್ನು ಸುಡುವಂತಹ ವಸ್ತು ವಿಷಯಗಳನ್ನು ನಿಯಂತ್ರಿಸುವಲ್ಲಿ ಮನಸ್ಸು ಬುದ್ಧಿಗಳು ಹೆಚ್ಚು ಕ್ಷಮತೆಯನ್ನು ಪಡೆದುಕೊಳ್ಳುತ್ತವೆ. ಅದು ಕೇವಲ ಪ್ರಯತ್ನದಿಂದ ಮಾತ್ರ ಆಗುತ್ತದೆ.

ದೇಹಕ್ಕೆ ತಗುಲುವ ಬೆಂಕಿಯನ್ನು ಆರಿಸಿದರೆ ಅಥವಾ ಬೆಂಕಿಯ ಮೂಲವನ್ನು ನಿವಾರಿಸಿದರೆ, ಎಂದರೆ ದೇಹಕ್ಕೆ ಹಿತವಾಗುವಂತಹ ವಿಚಾರ ಮತ್ತು ವಸ್ತುಗಳನ್ನು ನಿಯಮಿತವಾಗಿ ಮತ್ತು ಹಿತವಾಗಿ ಉಪಯೋಗಿಸಿದರೆ ಮನಸ್ಸು ಬುದ್ಧಿಗಳು ಶುದ್ಧವಾಗಿ ಆತ್ಮದ ಹಿತಕ್ಕೆ ಅಣಿಯಾಗುತ್ತದೆ. ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ಎರಡು ವಸ್ತುಗಳು ಇರಲು ಸಾಧ್ಯವಿಲ್ಲ ಎನ್ನುವ ವಿಜ್ಞಾನದ ಸಿದ್ಧಾಂತದಂತೆ, ಇಂದ್ರಿಯ ಹಿತವನ್ನು ಕಡೆಗಣಿಸಿದರೆ ಆತ್ಮದ ಹಿತಕ್ಕೆ ಭೂಮಿಕೆ ಸಿದ್ಧವಾಗುತ್ತದೆ. ಹೊರಗಿನ ಜ್ಞಾನ ಮತ್ತು ಅಂತರಂಗದಲ್ಲಿ ಮಂಥನದಿಂದ ಆತ್ಮಕ್ಕೆ ಹಿತವಾದದ್ದನ್ನು ಒಳ ಹರಿಯಬಿಟ್ಟರೆ, ಬದುಕು ಸಾರ್ಥಕ್ಯವನ್ನು ಪಡೆಯುತ್ತದೆ.

 

ರಸ ಚೆನ್ನುಡಿ

ಖಾಲಿ ಜೇಬುಗಳು ಎಂದಿಗೂ ಮುಂದಡಿ ಇದುವವರನ್ನು ತಡೆಯುವುದಿಲ್ಲ
ಹಾಗೆ ತಡೆಯುವುದು, ಖಾಲಿ ತಲೆಗಳು ಮತ್ತು ಖಾಲಿ ಹೃದಯಗಳು ಮಾತ್ರ – ಅನಾಮಿಕ

 

ರಸ ಚೆನ್ನುಡಿ

ಹೊಗಳಿ ಹಾಡಲು ಯಾರೂ ಇಲ್ಲದಿದ್ದರೂ ತನ್ನಷ್ಟಕ್ಕೆ ತಾನು ಅರಳಿ ವನವೆಲ್ಲ ಸುಗಂಧವ ಪಸರಿಸುವ ‘ಕಾಡ ಮಲ್ಲಿಗೆ’ ಯಂತೆ
ನಮ್ಮನ್ನು ಯಾರಾದರೂ ಗುರುತಿಸಿ ಹೊಗಳದಿದ್ದರೂ ನಾವು ಮಾಡಬೇಕಾದ ಸತ್ಕಾರ್ಯಗಳನ್ನು ಮಾಡುತ್ತಲೇ ಇರಬೇಕು – ಅನಾಮಿಕ

 

ರಸಧಾರೆ – ೬೬೬

ನೂರಾರು ಸರಕುಗಳು ಜೀವಿತದ ಸಂತೆಯಲಿ ।

ಊರಿನವು, ಕೇರಿಯವು, ಮನೆಯವಾತ್ಮದವು ।।
ಬೇರೆ ಬೇರೆ ಪುರುಳ್ಗೆ ಬೇರೆ ನೆಲೆ, ಬೇರೆ ಬೆಲೆ ।
ತಾರತಮ್ಯವೆ ತತ್ವ – ಮಂಕುತಿಮ್ಮ ।।

ಮನೆಯವಾತ್ಮದವು=ಮನೆಯವು+ಆತ್ಮದವು.

ಸರಕುಗಳು=ಸಾಮಾನುಸರಂಜಾಮುಗಳು, ಪುರುಳ್ಗೆ =ವಸ್ತುಗಳಿಗೆ, ತಾರತಮ್ಯ=ಭೇದ.

ಬದುಕಿನ ಸಂತೆಯಲ್ಲಿ ನೂರಾರು ವಸ್ತುಗಳು. ಕೆಲವು ನಮ್ಮ ಊರಿನವು, ಕೆಲವು, ನಮ್ಮ ಬೀದಿಯದ್ದು, ಕೆಲವು ನಮ್ಮ ಮನೆಯದ್ದು ಮತ್ತು ಕೆಲವು ಆತ್ಮದ್ದು. ಎಲ್ಲಕ್ಕೂ ಅದರದರದೇ ಸ್ಥಳ ಮತ್ತು ಅದರದರದೇ ಬೆಲೆ. ಈ ವಸ್ತುಗಳಲ್ಲಿ ತಾರತಮ್ಯವನ್ನು ಅರಿತು ನಮ್ಮ ಬದುಕಿನಲ್ಲಿ ಯಾವುದಕ್ಕೆ ಎಷ್ಟು ಬೆಲೆ ಕೊಡಬೇಕು, ಯಾವುದಕ್ಕೆ ಯಾವ ಸ್ಥಾನಕೊಡಬೇಕು ಎಂದು ಅರಿತು ಬದುಕುವುದೇ ಬದುಕಿನ ತತ್ವ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ನಾವಿರುವ ಈ ಜಗತ್ತು ಒಂದು ದೊಡ್ಡ ಸಂತೆಯ ಹಾಗೆ. ಇಲ್ಲಿ ನಾನಾ ರೀತಿಯ ಭಾವಗಳು ಮತ್ತು ಭಾವನೆಗಳನ್ನು ಹೊತ್ತ ಜನರು. ನಾನಾ ರೀತಿಯ ವಸ್ತು ಮತ್ತು ವಿಷಯ ಸಮೂಹಗಳು. ಈ ವ್ಯಕ್ತಿ,ವಿಷಯ ಮತ್ತು ವಸ್ತು ಸಮೂಹದಲ್ಲಿ ಕೆಲವು ನಮ್ಮ ಊರಿನವು, ಎಂದರೆ ಅಷ್ಟು ಹತ್ತಿರದವಲ್ಲ. ಕೆಲವು ನಮ್ಮ ಕೇರಿಯದು, ಅಂದರೆ ಸ್ವಲ್ಪ ಹತ್ತಿರ. ಕೆಲವು ನಮ್ಮ ಮನೆಯದ್ದು, ಅಂದರೆ ತೀರ ಹತ್ತಿರದವು, ಆದರೆ ನಮ್ಮ ಮನೆಯ ಎಲ್ಲರಿಗೂ ಸೇರಿದ್ದು. ಮತ್ತೆ ಕೆಲವು ತೀರ ವೈಯಕ್ತಿಕ, ಅಂದರೆ ನಮಗೆ ಮಾತ್ರ ಸೇರಿದ್ದು. ಪ್ರತಿಯೊಂದಕ್ಕೂ ಅದರದೇ ನೆಲೆ ಮತ್ತು ಅದರದೇ ಬೆಲೆ. ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗಲಾಗದು. ಇದು ಲೋಕವ್ಯವಹಾರ. ಇದನ್ನರಿತು ವ್ಯವಹರಿಸಿದರೆ ಬದುಕು ಹಿತವಾಗಿರುತ್ತದೆ. ಊರಿನ ವಿಷಯವನ್ನು ಕೇರಿಗಾಗಲೀ, ಕೇರಿಯ ವಿಷಯವನ್ನು ಮನೆಗಾಗಲೀ, ಮನೆಯ ವಿಷಯವನ್ನು ಮನದೊಳಕ್ಕಾಗಲೀ ಸಂಪೂರ್ಣವಾಗಿ ತರಲಾಗುವುದಿಲ್ಲ. ಹಾಗಾದರೆ ಅನಾಹುತವಾಗುತ್ತದೆ.

ವಸ್ತುಗಳ ಉಪಯೋಗವರಿತು ಬಳಸಬೇಕು. ವಿಷಯಗಳ ಸೂಕ್ಷ್ಮತೆಯನ್ನು ಅರಿತು ವಿಚಾರಮಾಡಬೇಕು ಮತ್ತು ವ್ಯಕ್ತಿಗಳ ಗುಣವನ್ನರಿತು ವ್ಯವಹರಿಸಬೇಕು. ಈ ವಿಷಯವನ್ನು ಬಹಳ ದೀರ್ಘವಾಗಿ ಮತ್ತು ವಿಸ್ತಾರವಾಗಿ ಪ್ರಸ್ತಾಪಮಾಡಬಹುದು. ಆದರೆ ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿಯೊಂದು ವಿಷಯ,ವಸ್ತು ಮತ್ತು ವ್ಯಕ್ತಿಗಳು ಭಿನ್ನ ಭಿನ್ನ ರೀತಿಯಲ್ಲಿ ಸ್ಪಂದನವನ್ನು ನೀಡುತ್ತವೆ. ಅವುಗಳಿಂದ ಒಬ್ಬರಿಗೆ ಸಿಕ್ಕ ಅನುಭೂತಿ ಮತ್ತೊಬ್ಬರಿಗೆ ಸಿಗುವುದಿಲ್ಲ. ಅವುಗಳಲ್ಲಿ ಯಾವ ಕೊರತೆ ಇಲ್ಲದಿದ್ದರೂ ಪ್ರತಿಯೊಬ್ಬರ ಅನುಭವವೂ ಬೇರೆ ಬೇರೆಯಾಗಿರುವುದಕ್ಕೆ ಅವರವರ ಮನೋಭಾವವೇ ಕಾರಣ. ಒಂದೇ ವಸ್ತು ಅಥವಾ ವಿಷಯ ನಮ್ಮ ಬದಲಾದ ಮನೋಭಾವಕ್ಕೆ ತಕ್ಕಂತೆ ಬೇರೆ ಬೇರೆ ಸಮಯದಲ್ಲಿ ಭಿನ್ನವಾದ ಅನುಭೂತಿಯನ್ನು ನೀಡಬಹುದು. ಹಾಗಾಗಿ ದೇಶ ಕಾಲಕ್ಕೆ ತಕ್ಕಂತೆ ವಸ್ತು, ವಿಷಯ ಮತ್ತು ವ್ಯಕ್ತಿಗಳನ್ನು ಪರಿಕಿಸಿ, ಆ ಸಮಯಕ್ಕೆ ಅದರ ನೆಲೆ ಮತ್ತು ಬೆಲೆಯನ್ನು ಅರಿತು ನಡೆದುಕೊಳ್ಳಬೇಕು. ಇದನ್ನೇ ಮಾನ್ಯ ಗುಂಡಪ್ಪನವರು ‘ ತಾರತಮ್ಯವೇ ತತ್ವ’ ಎಂದಿದ್ದಾರೆ.

ಹಾಗೆ ತಾರತಮ್ಯವನ್ನು ಅರಿಯದೆ ನಾವು ವ್ಯವಹರಿಸಿದಾಗ ನಮ್ಮ ನಡವಳಿಕೆ, ಸಮುಚಿತ ವರ್ತನೆಯಾಗದೆ ಬಯಸಿದ ಪರಿಣಾಮ ಸಿಗುವುದಿಲ್ಲ. ತಾರತಮ್ಯವನ್ನರಿಯಲು ವಿವೇಚನೆ ಬೇಕು. ಆ ವಿವೇಚನೆ ನಮಗೆ ಅನುಭವದಿಂದ ಮತ್ತು ಅಭ್ಯಾಸ ಬಲದಿಂದ ಬರಬೇಕು. ಅನುಭವದಿಂದ ಕಲಿಯದಿದ್ದರೆ ಅಥವಾ ಆ ವಿವೇಚನೆಯನ್ನು ಬೆಳೆಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನವನ್ನು ಮಾಡದೆ ಇದ್ದರೆ, ನಮ್ಮ ಲೋಕವ್ಯವಹಾರವೆಲ್ಲ ವಿಫಲವಾಗುವುದರಲ್ಲಿ ಸಂದೇಹವೇ ಇಲ್ಲ. ಯೋಚಿಸಿ, ಬೇಧವನ್ನರಿತು, ಸಮುಚಿತ ರೀತಿಯಲ್ಲಿ ನಾವು ನಡೆದುಕೊಂಡರೆ ಮಾತ್ರ ಬದುಕು ಸಾರ್ಥಕವಾಗಬಹುದು.

ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ

ನಮಸ್ಕಾರ

ರವಿ ತಿರುಮಲೈ

 

ರಸ ಚೆನ್ನುಡಿ

ಒಂದಿಷ್ಟು ಕಳವಳ, ಒಂದು ಭರವಸೆಯ ಸ್ಪರ್ಶ, ಬೆಚ್ಚನೆಯ ಭಾವನೆ, ಒಂದಿನಿತು ಗೌರವ,
ಒಂದಿಷ್ಟು ಪ್ರೀತಿ ಮತ್ತು ಪ್ರೇಮಪೂರಿತ ಸಂದೇಶಗಳಿದ್ದರೆ, ಗಳಿಸಿದ ಸಂಬಂಧಗಳನ್ನು ಧೀರ್ಗಕಾಲ ಉಳಿಸಿಕೊಳ್ಳಬಹುದು – ಅನಾಮಿಕ