RSS

Monthly Archives: ಅಕ್ಟೋಬರ್ 2014

ರಸಧಾರೆ – ೬೯೨

ಬರಿಯೋದು ಬರಿವಾದ ಬರಿಬುದ್ಧಿ ದೊರಕಿಸದು ।
ಪರತತ್ವವನು; ಬೇಕು ಬೇರೆ ಕಣ್ಣದಕೆ ।।
ಚಿರದ ಮಮತಾವೇಷ್ಟಿತದ ಪೊರೆಯ ಪರಿದಂದು ।
ಅರಳ್ವುದರಿವಿನ ಕಣ್ಣು – ಮಂಕುತಿಮ್ಮ ।।

ಬರಿಯೋದು=ಬರಿಯ+ಓದು, ಕಣ್ಣದಕೆ =ಕಣ್ಣು+ಅದಕೆ, ಪರಿದಂದು=ಪರಿದ+ಅಂದು, ಅರಳ್ವುದರಿವಿನ=ಅರಳ್ವುದು+ಆರಿವಿನ,

ಚಿರದ =ಸದಾ ಇರುವ, ಮಮತಾ=ಮೋಹದ, ಪೊರೆಯ=ಮುಸುಕು, ಪರಿದ=ಹರಿದ

ಶಾಸ್ತ್ರಗಳನ್ನು ಓದುವುದು, ಅವಗಳಲ್ಲಿನ ವಿಷಯವನ್ನು ಹಿಡಿದು ಚರ್ಚೆ, ವಾದ ಮಾಡುವುದು, ಅಥವಾ ಬುದ್ಧಿಯಿಂದ ತರ್ಕ, ಕುತರ್ಕ, ವಿತರ್ಕಗಳ ಕಸರತ್ತನ್ನು ಮಾಡಿದರೆ ಪರತತ್ವದ ದರ್ಶನವಾಗುವುದಿಲ್ಲ. ಪರತತ್ವನ್ನು ಕಾಣುವುದಕ್ಕೆ ಬೇರೊಂದು ಕಣ್ಣು ಬೇಕು. ಆದರೆ ಆ ಕಣ್ಣಿನ ಸುತ್ತ ‘ಮಮತೆ’, ಎಂದರೆ ‘ನಾನು ನನ್ನದು’ ಎಂಬ ಒಂದು ಪೊರೆ ಅಡ್ಡವಾಗಿ ಇದೆ. ಆ ಪೊರೆ ಹರಿದಂದು ಅಂದರೆ, ಅದು ತೊಲಗಿದರೆ ಒಳಗಣ್ಣ ತೆರೆದುಕೊಂಡು ನಮಗೆ ಪರತತ್ವದ ದರ್ಶನವಾಗುತ್ತದೆ ಎಂದು, ಸ್ಪಷ್ಟವಾಗಿ ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

‘ಪರತತ್ವವನ್ನು’ ಅರಿಯಲು ವೇದ ವೇದಾಂತದ ಪುಸಕಗಳನ್ನು ಓದುವುದು ಅದರ ವಿಚಾರವಿನಿಮಯ, ಚರ್ಚೆ, ವಾದ, ವಿವಾದ ಮಾಡುವುದರಿಂದ ಆಗುವುದಿಲ್ಲ. ಆದನ್ನು ಅರಿಯಲು ಅಂತರಂಗದ ಕಣ್ಣು ತೆರೆಯಬೇಕು. ಹಾಗಾದರೆ ಅದು ಮುಚ್ಚಿದೆಯೇ? ಎಂದರೆ ಹೌದು. ಅದಕ್ಕೊಂದು ಪೊರೆ ಅಥವಾ ತೆರೆ ಕವಿದುಕೊಂಡಿದೆ. ಆ ಪೊರೆ ‘ನಾನತ್ವ’ದಿಂದಾಗಿದೆ. ನಾನು ನನ್ನದೆಂಬ ‘ಮಮಕಾರ’ ಭಾರದಿಂದ ಒಳಗಣ್ಣಿನ ರೆಪ್ಪೆಗಳು ಮುಚ್ಚಿಕೊಂಡಿವೆ. ಅದನ್ನು ತೆರೆದರೆ ಮಾತ್ರ ತತ್ವದ ಮತ್ತು ಸತ್ಯದ ದರ್ಶನವಾಗುತ್ತದೆ.

ನಮಗಿರುವುದು ಪ್ರಾಪಂಚಿಕ ವಸ್ತುಗಳ ಮೇಲೆ ಮಮಕಾರ. ಮನೆ, ಸಂಪತ್ತು, ಹೆಂಡತಿ, ಮಕ್ಕಳು ಬಂಧು ಬಾಂಧವರು ಹೀಗೆ ನಾವು ನಮ್ಮ ಸಂಪರ್ಕ ಸಂಬಂಧವನ್ನು ಯಾರ್ಯಾರ ಒಟ್ಟಿಗೆ ಇಟ್ಟುಕೊಂಡಿದ್ದೇವೋ ಅವರೆಲ್ಲರಮೇಲೂ ನಮಗೆ ಮಮಕಾರ. ನಾವು ಇವುಗಳ ನಡುವೆ ನಲುಗಿರುವಾಗ ಆ ಪರತತ್ವದ ದರ್ಶನವು ಆಗಲು ಹೇಗೆ ಸಾಧ್ಯ. ಮಮಕಾರ ನಮ್ಮ ಮನಸ್ಸುಗಳಲ್ಲಿ, ನಾವು ನಮ್ಮವರು ನಮ್ಮದು ಮತ್ತು ನಮ್ಮದಲ್ಲದ್ದು, ನಮ್ಮವರಲ್ಲದ್ದು ಎನ್ನುವ ಬೇಧವನ್ನು ಸೃಷ್ಟಿಸುತ್ತದೆ. ಅಂತರಂಗದಲ್ಲಿ ಈ ಜಗತ್ತಿನ ನಂಟನ್ನು ತೊರೆದರೆ ಮಮಕಾರದ ಭಾರ ಕಡಿಮೆಯಾಗಿ ನಮ್ಮ ಅಂತಃಚಕ್ಷುಗಳು ತೆರೆದುಕೊಂಡರೆ ಆಗ ನಮ್ಮ ಮನಾದಲ್ಲಿರುವ ‘ಬೇಧ’ ತೊಲಗಿ ಇಡೀ ಜಗತಿನಲ್ಲಿ ವ್ಯಾಪಕವಾಗಿರುವ ಆ ಪರಮಾತ್ಮ ತತ್ವವನ್ನು ಅರಿತುಕೊಳ್ಳಬಹುದು.

ಹಾಗೆಂದು ‘ವೇದ ವೇದಾಂತದ ಪುಸಕಗಳನ್ನು ಓದುವುದು ಅದರ ವಿಚಾರ, ವಿನಿಮಯ, ಚರ್ಚೆ, ವಾದ, ವಿವಾದ’ ಮಾಡುವುದನ್ನು ಸಂಪೂರ್ಣವಾಗಿ ತೊರೆದುಬಿಡಬೇಕು ಎಂದಲ್ಲ. ಅವುಗಳನ್ನು ಪರತತ್ವವನ್ನು ಅರಿಯಲು ‘ಮೆಟ್ಟಿಲು’ಗಳಾಗಿ ಉಪಯೋಗಿಸಬೇಕು. ಲೌಕಿಕದ ಹೊರೆಯನ್ನು ಹೊತ್ತು ಮತ್ತು ಪೊರೆಯನ್ನು ಹೊದ್ದು ಅವುಗಳನ್ನು ಎಷ್ಟು ಅಭ್ಯಾಸಮಾಡಿದರೂ, ಅದರಲ್ಲಿ ಎಷ್ಟೇ ಪಾಂಡಿತ್ಯವನ್ನು ಪಡೆದರೂ ‘ ಪರತತ್ವ’ವನ್ನು ಅರಿಯುವ ಹಾದಿಯಲ್ಲಿ ಒಂದು ಹೆಜ್ಜೆಯನ್ನೂ ಇಡಲಾಗದು.

ಈ ಜಗತ್ತು ಬಹಳ ಸುಂದರ. ಇಂದ್ರಿಯ ಸುಖಕ್ಕೆ ಬಹಳ ಅನುಕೂಲವಾಗಿರುವುದು. ಅದನ್ನು ಅನುಭವಿಸಿ ಸಂತೋಷದಿಂದ ಇರುವವರೆಗೂ ನಮಗೆ ನಮ್ಮ ಬದುಕಿನ ಸತ್ಯ ಮತ್ತು ಸತ್ವ ಎರಡೂ ಅರ್ಥವಾಗುವುದಿಲ್ಲ. ಹಾಗಾಗಿ ಇದರೊಳಗೆ ಇದ್ದು, ಇದನ್ನು ಅನುಭವಿಸುತ್ತಿದ್ದರೂ, ಇದಕ್ಕೆ ಅಂಟದೆ ಇದ್ದು ಇದಕ್ಕೆಲ್ಲ ಕಾರಣವಾದ ಆ ‘ಪರವಸ್ತು, ಪರತತ್ವ’ ದ ಕಡೆಗೆ ಮನಸ್ಸು ಹೋದರೆ ಆಗ ಮಾನ್ಯ ಗುಂಡಪ್ಪನವರು ‘ಅರಳ್ವುದರಿವಿನ ಕಣ್ಣು’ ಹೇಳುವ ಹಾಗೆ, ಜ್ಞಾನದೆಡೆಗೆ ನಮ್ಮ ಪಯಣ ಆರಂಭವಾಗುತ್ತದೆ.

Advertisements
 

ರಸ ಚೆನ್ನುಡಿ

ನಮ್ಮ ಪ್ರತಿಕ್ರಿಯೆಯೇ ಅವರಿಗೆ ಮತ್ತಷ್ಟು ಶಕ್ತಿ ನೀಡುತ್ತದಾದ್ದರಿಂದ

ನಮ್ಮನ್ನು ನಿಂದಿಸುವ ಅಥವಾ ಟೀಕಿಸುವ ಮಂದಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ- ಅನಾಮಿಕ

 

ರಸಧಾರೆ – ೬೯೧

ಸುತ್ತಿ ಸುತ್ತುವ ಖಗವ ನೆನಪೆಳೆಯುವುದು ।
ಗೊತ್ತುನೂಲ್ ಪಿಡಿದಿಹುದು ದನವ ಬಯಲಿನಲ್ಲಿ ।।
ತತ್ವವೊಂದರ ಹಿಡಿತಕೊಗ್ಗದಿಹ ಬಾಳೇನು ?
ಕಿತ್ತ ಗಾಳಿಯ ಪಟವೊ – ಮಂಕುತಿಮ್ಮ ।।

ನೆನಪೆಳೆಯುವುದು=ನೆನಪು+ಎಳೆಯುವುದು, ಗೊತ್ತುನೂಲ್=ಗೊತ್ತಿನ+ನೂಲ್, ಹಿಡಿತಕೊಗ್ಗದಿಹ=ಹಿಡಿತಕೆ+ಒಗ್ಗದಿಹ

ಖಗವ = ಪಕ್ಷಿಯ, ಗೊತ್ತು= ದನವನ್ನು ಕಟ್ಟಿಹಾಕಲು ಭೂಮಿಯಲ್ಲಿ ಹೊಡೆದಿರುವ ಒಂದು ಗೂಟ,

ತನ್ನ ಆಹಾರಕ್ಕಾಗಿ ಎಲ್ಲೆಲ್ಲೊ ಸುತ್ತಿ ಅಲೆಯುವ ಪಕ್ಷಿ ಸಂಜೆಗೆ ತನ್ನ ಗೂಡನ್ನು ನೆನಪಿಸಿಕೊಂಡು ಸೇರುವಂತೆ, ಒಂದು ಗೂಟಕ್ಕೆ ಹಗ್ಗದ ಸಹಾಯದಿಂದ ಕಟ್ಟಿಹಾಕಿದ ದನ, ಹುಲ್ಲ ಮೇಯಲು ಆ ಹಗ್ಗದ ಅಳತೆಯ ಪರಿಧಿಯಲ್ಲೇ ಸುತ್ತುತ್ತಾ ಒಂದು ಬಂಧಕ್ಕೆ ಒಳಪಟ್ಟಂತೆ, ನಾವೂ ಸಹ ಒಂದು ತತ್ವಕ್ಕೆ ಅಥವಾ ಸಿದ್ಧಾಂತಕ್ಕೆ ಒಳಪಟ್ಟು ಬದ್ಧರಾಗದೆ ಇದ್ದರೆ, ಅದೂ ಸಹ ಒಂದು ಬಾಳೇನು? ಖಂಡಿತ ಅಲ್ಲ, ಅದು ಸೂತ್ರ ಕಿತ್ತ ಗಾಳಿಪಟದಂತಹ ಬದುಕು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಹಿಂದಿನ ಮುಕ್ತಕಗಳಲ್ಲಿ ನಮಗೆ ಒಂದು ಅಂತರ್ದರ್ಶನ ಬೇಕು, ಆ ದರ್ಶನದಿಂದ ನಮ್ಮ ಧರ್ಮವನ್ನು ನಾವು ಕಂಡುಕೊಳ್ಳಬೇಕು ಮತ್ತು ಪಾಲಿಸಬೇಕು, ಹಾಗೆ ಪಾಲಿಸಿದ ಧರ್ಮವೇ ನಮ್ಮ ಸ್ವಭಾವವಾಗಿ, ನಮ್ಮ ಗುಣವಾಗಿ ನಮ್ಮೊಡನೆ ಮೃತ್ಯುವಿನ ನಂತರವೂ ಬರುತ್ತದೆ ಎನ್ನುವ ವಿಚಾರವನ್ನು ನೋಡಿದ್ದೇವೆ. ಆದರೆ ಆ ‘ಧರ್ಮ’ ಎಂದರೆ ಏನು? ಈ ಜಗತ್ತಿನಲ್ಲಿ ಪರಮಾತ್ಮ ಸೃಷ್ಟಿಸಿದ ಪ್ರತಿಯೊಂದು ವಸ್ತುವಿಗೂ ಒಂದು ಸ್ವಭಾವವುಂಟು. ಮೆಣಸಿನ ಕಾಯಿ ಖಾರವಾಗಿರುವುದು, ಬೆಲ್ಲ ಸಿಹಿಯಾಗಿರುವುದು, ಗಾಳಿ ಬೀಸುವುದು ನೀರು ಹರಿಯುವುದು ಇತ್ಯಾದಿಗಳು ಆಯಾಯಾ ವಸ್ತುಗಳ ಧರ್ಮ. ಸ್ವಲ್ಪ ಯೋಚಿಸಿ ನೋಡಿದರೆ ನಮಗೆ ಅರ್ಥವಾಗುವ ವಿಷಯವೇನೆಂದರೆ, ಆ ವಸ್ತುಗಳು ತಮ್ಮ ಧರ್ಮವನ್ನು ತೊರೆದರೆ ‘ ವಿನಾಶ’ ಖಂಡಿತ ಎಂದು. ಉದಾ, ನೀರು ಹರಿಯುವುದ ಬಿಟ್ಟ ‘ ನಾ ಗಾಳಿಯಂತೆ ಬೀಸುವೆ’ ಎಂದರೆ ಆಗುವ ಅನಾಹುತಕ್ಕೆ ಸುನಾಮಿ ಎಂದು ಹೆಸರಲ್ಲವೆ?

ಅದೇ ರೀತಿ ಮನುಷ್ಯನಿಗೆ ಮಾನವೀಯತೆಯೇ ಧರ್ಮ. ಅದನ್ನು ಭಧ್ರವಾಗಿ ಹಿಡಿದು, ಶುದ್ಧವಾಗಿ ಪಾಲಿಸುವುದೇ ಮಾನ್ಯ ಗುಂಡಪ್ಪನವರು ಹೇಳುವಂತೆ ‘ ತತ್ವವೊಂದರ ಹಿಡಿತದಲ್ಲಿ’ ನಾವು ಇರಬೇಕು. ಹಾಗಿದ್ದರೆ ಮಾತ್ರ ಅದು ಬಾಳು ಇಲ್ಲದಿದ್ದರೆ ಅದು ಗೋಳು. ಒಂದು ನದಿಗೆ ಇಕ್ಕೆಲಗಳಲ್ಲಿ ಕಟ್ಟೆಕಟ್ಟಿ, ಅದರ ನೀರನ್ನು ಸರಿಯಾಗಿ ಹಾಯಿಸಿ ಹನಿಸಿದರೆ ಅದು ನೀರಾವರಿಯಾಗುತ್ತದೆ. ಸುಭಿಕ್ಷವಿರುತ್ತದೆ. ಅದಿಲ್ಲದೆ ಅದನ್ನು ಹೇಗೆಂದರೆ ಹಾಗೆ ಹರಿಯಲು ಬಿಟ್ಟರೆ ವ್ಯರ್ಥವಾಗುತ್ತದೆ. ಈದೇ ರೀತಿ ನಮ್ಮ ಬಾಳಲ್ಲೂ ಸಹ ನಾವು ಒಂದು ತತ್ವಕ್ಕೆ ಬದ್ಧರಾಗಿ, ನಮ್ಮೆಲ್ಲ ಆಲೋಚನೆ ಮತ್ತು ತದನುಸಾರವಾಗಿ ನಾವು ಮಾಡುವ ಕೆಲಸಗಳನ್ನು ಆ ತತ್ವದ ಪರಿಧಿಯಲ್ಲಿ ಮಾಡಿದರೆ ಆಗ ನಾವು ನಮ್ಮ ಸ್ವಭಾವವನ್ನು ಎಂದರೆ ಧರ್ಮವನ್ನು ಉಳಿಸಿಕೊಳ್ಳಬಹುದು ಮತ್ತು ಬೆಳೆಸಿಕೊಳ್ಳಬಹುದು.

‘ಮಾನವತೆ’ಯೆನ್ನುವುದು ಬಹಳ ವಿಶಾಲವಾದ ಅರ್ಥವನ್ನು ಕೊಡುತ್ತದೆ. ಹಾಗಾಗಿ ಅದರೊಳಗೆ ಯಾವುದಾದರೂ ಒಂದು ವಿಷಯಕ್ಕೆ ಬದ್ಧರಾಗಿ ಅದೇ ಕ್ಷೇತ್ರದಲ್ಲಿ ದುಡಿದರೆ ಸಾಕು ನಾವು ಧರ್ಮವನ್ನು ಪರಿಪಾಲಿಸಿದಂತಾಗುತ್ತದೆ. ಉದಾ:ಸ್ವಾಮೀ ವಿವೇಕಾನಂದ, ಮದರ್ ತೆರೇಸಾ, ಬಾಬಾ ಆಮ್ಟೆ, ಮುಂತಾದ ಮಹಾನುಭಾವರು. ಅದನ್ನು ಬಿಟ್ಟು ಯಾವುದೇ ತತ್ವಕ್ಕೆ ಬದ್ದರಾಗದೆ ಇದ್ದರೆ, ಬಾಳು ಸತ್ವಹೀನವಾಗಿ ಗೊತ್ತು ಗುರಿಯಿಲ್ಲದೆ ಕಿತ್ತ ಗಾಳಿಪಟದಂತೆ ಆಗುತ್ತದೆ. ನಮ್ಮ ಗುರಿಯನ್ನು ಗುರುತಿಸಿಕೊಳ್ಳುವುದು ಮತ್ತು ಅದನ್ನು ಮುಟ್ಟುವ ಪ್ರಯತ್ನ ನಮ್ಮಿಂದಲೇ ಆಗಬೇಕು, ಅಲ್ಲವೇ? ಪ್ರಯತ್ನ ಪಟ್ಟರೆ ಎಲ್ಲರಿಗೂ ಸಾಧ್ಯ.

 

ರಸ ಚೆನ್ನುಡಿ

ನಮ್ಮ ಜೀವನದ ಹಾದಿ ಸುಗಮವಾಗಿ ಸಾಗಿದೆಯೆಂದಾದರೆ ದಿನದ ಒಂದೆರಡು ಗಳಿಗೆಯನ್ನು,

ಆ ಹಾದಿಯನ್ನು, ನಮಗಾಗಿ ನಿರ್ಮಿಸಿದ ಸಜ್ಜನರ ನೆನೆಯಲು ಮೀಸಲಿಡಬೇಕು – ಅನಾಮಿಕ

 

ರಸಧಾರೆ – ೬೯೦

ಶುನಕ ಬೆಂಬತ್ತಿತಲ ಧರ್ಮಜನ ಕಡೆವರಂ ।ನಿನಗಂತು ಸಂಗಡಿಗನೊರ್ವನೆಡೆಬಿಡದನ್ ।।
ಇಣಕಿ ನೋಡರದಾರುಮೆನ್ನುವೆಡೆ ಕಾದಿಹನು ।।
ಅಣಕಿಗ ಮನಸ್ಸಾಕ್ಷಿ – ಮಂಕುತಿಮ್ಮ ।।


ಬೆಂಬತ್ತಿತಲ = ಬೆಂಬತ್ತಿತು +ಎಲ, ಸಂಗಡಿಗನೊರ್ವನೆಡೆಬಿಡದನ್=ಸಂಗಡಿಗನು+ಓರ್ವನ್+ಎಡೆಬಿಡದನ್, ನೋಡರದಾರುಮೆನ್ನುವೆಡೆ=ನೋಡರು+ಅದಾರುಂ+ಎನ್ನುವ+ಎಡೆ, ಕಾದಿಹನು+ಕಾದು+ಇಹನು

ಬೆಂಬತ್ತು= ಹಿಂಬಾಲಿಸು, ಎಡೆಬಿಡದೆ=ನಿರಂತರವಾಗಿ, ಎಡೆ =ಕಡೆ,

ಮಹಾಭಾರತದಲ್ಲಿ ಧರ್ಮರಾಯನ ಸ್ವರ್ಗಾರೋಹಣ ಕಾಲಕ್ಕೆ ಅವನ ಸಂಗಡ ಹೊರಟವರೆಲ್ಲರೂ ಒಬ್ಬರಾದಂತೆ ಒಬ್ಬರು ತೀರಿಕೊಂಡ ನಂತರ, ಅವನನ್ನು ಸ್ವರ್ಗದ ಬಾಗಿಲವರೆಗೂ ಒಂದು ನಾಯಿ ಹಿಂಬಾಲಿಸಿತಂತೆ. ಧರ್ಮರಾಯನನ್ನು ಒಳಗೆ ಸ್ವಾಗತಿಸಿದ ಸ್ವರ್ಗಾಧಿಕಾರಿಗಳು ನಾಯಿಯ ಪ್ರವೇಶವನ್ನು ನಿರಾಕರಿಸಿದರಂತೆ. "ನನ್ನನ್ನು ನಂಬಿ ಹಿಂಬಾಲಿಸಿ ಬಂದ ನಾಯಿಗೆ ಪ್ರವೇಶವಿಲ್ಲದ ಸ್ವರ್ಗಕ್ಕೆ ನಾನೂ ಪ್ರವೇಶಮಾಡುವುದಿಲ್ಲ"ವೆಂದು ಧರ್ಮರಾಯನೆಂದಾಗ, ಆಗ ಆ ನಾಯಿಯ ರೂಪದಲ್ಲಿದ್ದ ‘ಯಮಧರ್ಮರಾಯನು’ ತನ್ನ ನಿಜ ಸ್ವರೂಪವನ್ನು ತೋರಿದನಂತೆ. ಹಾಗೆಯೇ ತನ್ನ ನಿಜಸ್ವರೂಪವನ್ನು ತೋರದಿದ್ದರೂ ನಮ್ಮ ಅಂತರಾತ್ಮ, ನಾವು ಮಾಡಿದ ಮತ್ತು ಪಾಲಿಸಿದ ಧರ್ಮ ಅಥವಾ ಅಧರ್ಮಗಳನ್ನು ಸಾಕ್ಷೀ ರೂಪದಲ್ಲಿ ನೋಡುತ್ತಾ ಇರುತ್ತದೆ ಎಂದು ಈ ಜಗತ್ತಿನಲ್ಲಿ ನಾವಿರುವಾಗ ಏನನ್ನು ಗಳಿಸಬೇಕು ಅಥವಾ ಗಳಿಸಿದ ಯಾವುದು ನಮ್ಮನ್ನು ಅಗಲದೆ ಇರುತ್ತದೆ ಎನ್ನುವುದನ್ನು ಸೂಚ್ಯವಾಗಿ ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಮ್ಮ ಈ ದೇಹ, ಮನಸ್ಸು ಬುದ್ಧಿಗಳ ಮೂಲಕ ನಡೆಯುವ ಪ್ರತೀ ಕೆಲಸದ ಸಂಪೂರ್ಣ ‘ಸತ್ಯ’ ನಮಗೊಬ್ಬರಿಗೇ ಗೊತ್ತು. ನಾವು ಮಾಡುವ ಕೆಲಸವನ್ನು ನಾವು ಯಾರಿಗೂ ತಿಳಿಯದೆ ಮಾಡುತ್ತಿದ್ದೇವೆ ಎಂದು ಮಾಡುತ್ತಿದ್ದರೂ ಅದನ್ನು ಸಾಕ್ಷೀ ರೂಪದಲ್ಲಿ ನೋಡುವುದು ‘ ನಾವು’. ಈ ನಾವು ಎನ್ನುವದೇ ನಮ್ಮ ದೇಹವನ್ನು ಧರಿಸುವ ಚೇತನ. ಇದು ಸಾಕ್ಷೀ ರೂಪದಲ್ಲಿ ಎಲ್ಲವನ್ನೂ ಕಾಣುತ್ತದೆಯಾದ್ದರಿಂದ ಇದನ್ನೇ ಮನಃಸಾಕ್ಷಿ ಎನ್ನುತ್ತಾರೆ. ಇದು ನಮ್ಮ ಬೆಂಬಿಡದ ಸಂಗಡಿಗ. ನಾವು ಮಾಡಿದ ಪ್ರತೀ ಕೆಲಸವನ್ನು ಸಾಕ್ಷೀ ರೂಪದಿಂದ ನೋಡುವುದು, ವಿಶ್ಲೇಷಿಸುವುದು, ಅಣಕಿಸುವುದು ಎಲ್ಲವೂ ಈ ಮನಃಸಾಕ್ಷಿಯೇ. ಇದರ ಕಣ್ ತಪ್ಪಿಸಿ ನಾವು ಏನನ್ನೂ ಮಾಡಲು ಸಾಧ್ಯವೇ ಇಲ್ಲ. ಅಲ್ಲವೇ? ಹಾಗಾಗಿಯೇ ಅದನ್ನು ‘ ಅಣಕಿಗ ಮನಸ್ಸಾಕ್ಷಿ’ ಎಂದಿದ್ದಾರೆ ಮಾನ್ಯ ಗುಂಡಪ್ಪನವರು.

ನಾವು ‘ಧರ್ಮ’ದ ಕೆಲಸವನ್ನು ಮಾಡುವಾಗ, ಜಗತ್ತಿಗೆ ಪ್ರದರ್ಶಿಸಲು ಇಚ್ಚಿಸುತ್ತೇವೆ. ಅದೇ ‘ಅಧರ್ಮ’ದ ಕೆಲಸ ಮಾಡುವಾಗ ಯಾರಿಗೂ ತೋರದ ಹಾಗೆ, ಯಾರಿಗೂ ಅರಿಯದ ಹಾಗೆ ಮಾಡಬೇಕೆಂದು ಇಚ್ಚಿಸುತ್ತೇವೆ. ಆದರೆ ಅದು ಸಾಧ್ಯವೇ ಇಲ್ಲ. ನಮ್ಮ ಅಂತರಾತ್ಮವನ್ನು ವಂಚಿಸಿ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಅದರ ಮುಂದೆ ನಾವು ಬೆತ್ತಲಾಗಲೇ ಬೇಕು. ತಲೆ ತಗ್ಗಿಸಲೇ ಬೇಕು. ‘ಧರ್ಮರಾಯನೊಟ್ಟಿಗೆ’ ಕಡೆಯ ತನಕ ‘ಧರ್ಮನು’ಶ್ವಾನರೂಪದಲ್ಲಿ ಹೋದಂತೆ ನಮ್ಮ ಅಂತರಾತ್ಮದೊಟ್ಟಿಗೆ ನಮ್ಮ ಸುಕರ್ಮ ಮತ್ತು ದುಷ್ಕರ್ಮಗಳೆಲ್ಲವೂ ನಮ್ಮೊಂದಿಗೆ ಬರುತ್ತವೆ. ಅದರ ಲೆಕ್ಕವನ್ನು ಮುಚ್ಚಿಡಲೋ ಅಥವಾ ಬಚ್ಚಿಡಲೋ ಸಾಧ್ಯವಿಲ್ಲ. ಹಾಗೆ ಮುಚ್ಚಿಡಲು ಪ್ರಯತ್ನಿಸಿದರೆ ನಮಗೆ ನಾವೇ ಮಾಡಿಕೊಂಡ ದ್ರೋಹವಾಗುತ್ತದೆ. ಸತ್ಯ. ಸತ್ವ ಮತ್ತು ಧರ್ಮವರಿಯದ ಕರ್ಮಗಳಿಂದ ಆತ್ಮ ಸೊರಗುತ್ತದೆ ಮತ್ತು ಈ ದೇಹದ ಮೂಲಕ ಗಳಿಸಿದ ಎಲ್ಲ ಗುಣಗಳನ್ನೂ ತೊಡೆದುಕೊಳ್ಳಲು ಪರದಾಡುತ್ತದೆ. ಅಂತಹ ಗುಣಗಳು ಸದ್ಗುಣಗಳಾದಲ್ಲಿ, ಆತ್ಮದ ಭಾರ ಕಡಿಮೆಯಾಗಿ ಪರಮಾತ್ಮನನ್ನು ಸೇರುವ ಹಾದಿ ಸುಗಮವಾಗುತ್ತದೆ.

 

ರಸ ಚೆನ್ನುಡಿ

ಕನಸು ಮತ್ತು ಗುರಿಗಳಲ್ಲಿ ವ್ಯತ್ಯಾಸವಿಷ್ಟೇ. ಕನಸು ಕಾಣಲು ವಿಶ್ರಾಂತ ನಿದ್ದೆ ಬೇಕು

ಆದರೆ ಗುರಿ ಮುಟ್ಟಲು ವಿಶ್ರಾಂತಿ ಇಲ್ಲದ ಶ್ರಮ ಮತ್ತು ದುಡಿಮೆ ಬೇಕು – ಅನಾಮಿಕ

 

ರಸ ಚೆನ್ನುಡಿ

ಪ್ರತಿಯೊಬ್ಬರ ಜೀವನದಲ್ಲೂ ಯಶಸ್ಸಿನ ಹಂತವಾದರೂ ಬರುತ್ತದೆ
ಅಥವಾ ತಮ್ಮ ಸೋಲಿನ ಕಾರಣಗಳಾದರೂ ಸ್ಪಷ್ಟವಾಗಿ ಅರಿವಾಗುತ್ತದೆ – ಅನಾಮಿಕ