RSS

Monthly Archives: ನವೆಂಬರ್ 2014

ರಸಧಾರೆ – ೭೧೮

ತನ್ನ ಶಿಲುಬೆಯ ತಾನೇ ಹೊತ್ತನಲ ಗುರು ಯೇಸು?।।
ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು ।।
ಖಿನ್ನನಾಗದೆ ತುಟಿಯ ಬಿಗಿದು ಶವಭಾರವನು ।
ಬೆನ್ನಿನಲಿ ಹೊತ್ತು ನಡೆ – ಮಂಕುತಿಮ್ಮ ।।

ಖಿನ್ನ = ನಿರಾಶಾಯುಕ್ತ ಬೇಸರ,

‘ಯೇಸು’ ತನ್ನನ್ನು ಏರಿಸಿದ ಶಿಲುಬೆಯನ್ನು ತಾನೇ ಹೊತ್ತು ನಡೆದಂತೆ ನಿನ್ನ ಕರ್ಮದ ಭಾರವನ್ನು ನೀನೇ ಬಿಡದೆ ಹೊರಬೇಕು. ಬೇಸರಮಾಡಿಕೊಳ್ಳದೆ ನಿರಾಶೆ ಪಡದೆ ಆ ಭಾರವನ್ನು ಹೊತ್ತು ನಡೆಯಬೇಕು ಎಂದು ಕರ್ಮಾನುಭವದ ಮತ್ತು ಅವರವರ ಕರ್ಮವನ್ನು ಅವರವರೇ ಸವೆಸಬೇಕಾದ ಪರಿಯನ್ನು ತಿಳಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ನಾವು ಮಾಡುವ ಕೆಲಸಗಳಿಂದ ಉಂಟಾಗುವ ಕರ್ಮವನ್ನು ನಾವೇ ಹೊರಬೇಕು ಅನುಭವಿಸಬೇಕು ಮತ್ತು ತೀರಿಸಬೇಕು, ತನ್ನ ಶಿಷ್ಯರು ಹೊರಲು ಮುಂದಾದರೂ ಬೇಡವೆಂದು ತಾನೇ ತನ್ನ ಶಿಲುಬೆಯನ್ನು ಹೊತ್ತ ಯೇಸು ಕ್ರಿಸ್ತನಂತೆ. ಇಲ್ಲಿ ‘ಕರ್ಮ’ವೆಂದರೆ ನಾವು ಮಾಡುವ ಕೆಲಸ. ಆ ಕೆಲಸ ಮಾಡಲು ನಮಗೆ ಪ್ರೇರಕವೇ, ನಮ್ಮಲ್ಲಿರುವ ಇಂದ್ರಿಯ ಪ್ರೇರಿತವಾದ ಸತ್ವರಜಸ್ತಮೋ ಗುಣಗಳು. ಈ ಗುಣಗಳ ಪರಿಮಾಣ(RATIO)ಗಳ ವ್ಯತ್ಯಾಸದಿಂದ ನಮ್ಮ ಕರ್ಮಗಳು ಪ್ರಭಾವಿತವಾಗುತ್ತವೆ. ಆತ್ಮವು ಜನ್ಮಜನ್ಮಾಂತರದ ಕರ್ಮ ಶೇಷವನ್ನು ಹೊತ್ತು ತಂದು ಈ ಜನ್ಮದಲ್ಲಿ ಒಂದಿಷ್ಟು ಆರ್ಜಿಸಿ, ಒಂದಷ್ಟನ್ನು ವ್ಯಯಿಸಿ, ಕೊಂಚ ಉಳಿಸಿಕೊಂಡು, ಅದನ್ನೂ ಅನುಭವಿಸಲು ತನ್ನ ಪ್ರಯಾಣವನ್ನು ಮುಂದುವರೆಸುತ್ತದೆ ಎನ್ನುತ್ತದೆ ನಮ್ಮ ಸನಾತನ ಸಿದ್ಧಾಂತ. ಇದನ್ನು ನಾವೇ ಅನುಭವಿಸಬೇಕು. ಅನ್ಯರು ಅದರಲ್ಲಿ ಪಾಲುದಾರರಾಗಲು ಸಾಧ್ಯವಿಲ್ಲ.

ಕರ್ಮ ಮಾಡುವುದರಿಂದ ಅದರ ಫಲಕ್ಕೆ ನಾವು ಭಾಜನರಾಗುತ್ತೇವೆ. ಆ ಫಲವನ್ನು ನಾವೇ ಅನುಭವಿಸಬೇಕು. ನಾವು ಉಪ್ಪ ತಿಂದು ಬೇರೆಯವರು ನೀರ ಕುಡಿದರೆ ನಮ್ಮ ಗಂಟಲಲ್ಲಿನ ಕ್ಷಾರ ಕಡಿಮೆಯಾಗುವುದೇ? ನಾವೇ ನೀರು ಕುಡಿಯಬೇಕಲ್ಲವೇ? ಯಾರದೋ ಕರ್ಮದ ಫಲವನ್ನು ನಾವು ಅನುಭವಿಸುವುದಾಗಲೀ ಅಥವಾ ನಮ್ಮ ಕರ್ಮ ಫಲವನ್ನು ಬೇರೆಯವರು ಅನುಭವಿಸುವುದಾಗಲೀ ಸಾಧ್ಯವಿಲ್ಲದ ಮಾತು. ಆದರೆ ಅದನ್ನು ಹೇಗೆ ಅನುಭವಿಸಬೇಕು? ಎನ್ನುವುದೇ ಪ್ರಶ್ನೆ. ಅದಕ್ಕೆ ಉತ್ತರವಾಗಿ ಮಾನ್ಯ ಗುಂಡಪ್ಪನವರು " ಖಿನ್ನನಾಗದೆ ತುಟಿಯ ಬಿಗಿದು " ಎಂದು ಆದೇಶ ನೀಡಿದ್ದಾರೆ. " WHAT CANNOT BE CURED HAS TO BE ENDURED ‘ ಎನ್ನುವ ಆಂಗ್ಲ ನುಡಿ ಬಹಳ ಸೂಕ್ತವಾಗಿದೆ. ಸದ್ದಿಲ್ಲದೇ ಅನುಭವಿಸಿ ಆ ಫಲವನ್ನು ತೀರಿಸಿಬಿಡಬೇಕು. ಪಾಪ ಪುಣ್ಯಗಳೇ ಸುಖ ದುಃಖಗಳಾಗಿ ನಮಗೆ ಸಿಗುವ ಕರ್ಮ ಫಲಗಳು. ‘ ಒಬ್ಬ ವ್ಯಕ್ತಿ ಬಹಳ ಕಷ್ಟಗಳನ್ನು ಅನುಭವಿಸುವಾಗ ಅವನು ತನ್ನ ಪಾಪಕರ್ಮಗಳ ಫಲವನ್ನು ಕಳೆದುಕೊಳ್ಳುತ್ತಿದ್ದಾನೆಂದೂ, ಮತ್ತು ಮತ್ತೊಬ್ಬ ಬಹಳ ಸುಖವನ್ನು ಅನುಭವಿಸುತ್ತಿದ್ದಾನೆಂದರೆ ಅವನು ಸಂಚಿತ ಪುಣ್ಯಫಲಗಳನ್ನು ಸವೆಸುತ್ತಿದ್ದಾನೆಂದೂ ಅರ್ಥ.

ನಮ್ಮ ಕರ್ಮಗಳಿಂದ ನಮಗೆ ಸಂದ ಕರ್ಮಫಲಗಳನ್ನು ಅನುಭವಿಸುವಾಗ ವಿಚಲಿತರಾಗದೆ, ಶಾಂತರಾಗಿ, ಗೋಳಾಡದೇ ಅಥವಾ ಅದನ್ನು ಅನುಭವಿಸುವಾಗ ಉಂಟಾಗುವ ನೋವ ನಿವಾರಿಸಿಕೊಳ್ಳುವುದಕ್ಕಾಗಿ ಅನ್ಯ ಮಾರ್ಗಗಳನ್ನು ಹುಡುಕಿ ಮತ್ತಷ್ಟು ಕರ್ಮಫಲವನ್ನು ಸಂಚಯಿಸದೆ, ಆ ಫಲವನ್ನು ಅನುಭವಿಸುತ್ತಾ ಕರಗಿಸಬೇಕು. ಹಾಗಾದರೆ ಮಾತ್ರ ಆ ಅನುಭವದಿಂದಾಗುವ ನೋವನ್ನು ತಡೆದುಕೊಳ್ಳಬಹುದು. ಅದಕ್ಕೆ ಅಂತರಂಗದಲ್ಲಿ ಬೆಳೆಯಬೇಕು. ‘ಗುಣತ್ರಯ’ ದ ಪರಿಮಾಣವನ್ನು ಕಡಿಮೆಯಾಗಿಸಿಕೊಳ್ಳುತ್ತಾ, ಕಡೆಗೊಂದು ದಿನ ಗುಣಾತೀತರಾಗಬೇಕು. ನಮ್ಮ ಸಂಚಿತ ಕರ್ಮಗಳನ್ನು ಅನುಭವಿಸಿ ತೀರಿಸಿ, ನಮ್ಮ ಕರ್ಮಫಲದ ಸಂಚಿಯನ್ನು ಬರಿದಾಗಿಸಿಕೊಂಡರೆ ಆಗ ಜೀವನದ ಜಂಜಡದಿಂದ ಮುಕ್ತರಾಗಬಹುದು. "ಇಂದಿನ ಬದುಕಿನಲ್ಲಿ ಅದು ಸಾಧ್ಯವೇ" ಎಂದರೆ, ಅಸಾಧ್ಯವಂತೂ ಅಲ್ಲ ಆದರೆ ಕಷ್ಟಸಾಧ್ಯ ಎಂದು ಮಾತ್ರ ಹೇಳಬಹುದು. ಆದರೆ ಸಂಚಿತ ಕರ್ಮಫಲದ ಅನುಭವದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಮಾತ್ರ ಖಚಿತವಾಗಿ ಹೇಳಬಹುದು.

Advertisements
 

ರಸ ಚೆನ್ನುಡಿ

ನಮ್ಮ ಅಂತರಂಗದ ವಾಣಿಯನ್ನು ಆಲಿಸಬೇಕು ಮತ್ತು ಪಾಲಿಸಬೇಕು.

ಏಕೆಂದರೆ, ಅದರಲ್ಲಿ ಮಾತ್ರ ನಮಗೆ ಸತ್ಯದ ದರ್ಶನವಾಗುವುದು – ಅನಾಮಿಕ

 

ರಸಧಾರೆ – ೭೧೭

ನಿನ್ನ ಹೆಣವನ್ನು ನೀನೆ ಹೊತ್ತು ಸಾಗಿಸಬೇಕೊ ! ।

ಅಣ್ಣ ಬಾ ತಮ್ಮ ಬಾ ಎಂದಳುವುದೇಕೋ? ।।
ನಿನ್ನೋಡಲೇ ಚಿತೆ, ಜಗದ ತಂಟೆಗಳೆ ಸವುದೆಯುರಿ ।
ಮಣ್ಣೆ ತರ್ಪಣ ನಿನಗೆ – ಮಂಕುತಿಮ್ಮ ।।

ಎಂದಳುವುದೇಕೋ=ಎಂದು+ ಅಳುವುದೆಕೋ ,ನಿನ್ನೋಡಲೇ=ನಿನ್ನ + ಒಡಲೇ, ಸವುದೆಯುರಿ=ಸವುದೆ +ಉರಿ

ಚಿತೆ= ಶವವನ್ನು ಸುಡುವ ಬೆಂಕಿ, ಒಡಲು =ದೇಹ, ಸವುದೆ =ಉರವಲು

ನಿನ್ನ ಬದುಕಿನ ಬವಣೆಗಳನ್ನು ನೀನೇ ಅನುಭವಿಸಬೇಕು. ಅದನ್ನನುಭವಿಸಲು ಬೇರೆಯಾರನ್ನಾದರೂ ‘ ಅಣ್ಣಾ ಬಾ ಅಥವಾ ತಮ್ಮಾ ಬಾ’ ಎಂದು ಕರೆಯುವ ಹಾಗಿಲ್ಲ ನಿನ್ನ ಅಂತರಂಗವೇ ಚಿತೆ ಮತ್ತು ಆ ಚಿತೆಯುರಿಯಲು ಉರುವಲೇ ಬದುಕಿನ ತಾಪತ್ರಯಗಳು. ಕಡೆಗೆ ನಿನಗೆ ಮಣ್ಣೇ ತರ್ಪಣ ಎಂದು ಬದುಕಿನಲ್ಲಿ ಪ್ರತಿಯೊಬ್ಬರ ಒಂಟಿತನದ, ಏಕಾಕಿತನದ ಅನಿವಾರ್ಯತೆಯನ್ನು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಇಲ್ಲಿ ‘ಹೆಣ’ವೆಂದರೆ ನಮ್ಮ ದೇಹ. ಚೈತನ್ಯವಿರುವ ತನಕವೇ ಅದು ನಮ್ಮ ಕಾಯ, ದೇಹ. ಆ ಚೈತನ್ಯ ಹೊರಬಿದ್ದರೆ ಈ ದೇಹ ಹೆಣ. ಆ ಚೈತನ್ಯದ ಉಪಸ್ಥಿತಿಯಲ್ಲಿ ಹೆಣವು ದೇಹವಾಗಿ ಕಾಯವಾಗಿ ಕಾಣುತ್ತದೆ ಅಷ್ಟೇ. ಈ ದೇಹದ ಸಂಸರ್ಗದಲ್ಲಿ ಮನಸ್ಸು ಬುದ್ಧಿ ಎಲ್ಲ ಉಂಟು. ಚೈತನ್ಯದ ಸಂಸರ್ಗದಲ್ಲಿರುವವರೆಗೆ ದೇಹಕ್ಕೆ ನೋವು,ನಲಿವು,ರೋಗ ರುಜಿನ ಮುಂತಾದವುಗಳುಂಟು. ಅಂತಹ ನೋವು ನಲಿವುಗಳನ್ನು ನಾವೊಬ್ಬರೆ ಅನುಭವಿಸಬೇಕು. ಕೆಲಬಾರಿ ನಾವು ಕಷ್ಟದಲ್ಲಿದ್ದಾಗ, ‘ಯಾರಾದರೂ ನಮ್ಮ ಕಷ್ಟವನ್ನು ಹಂಚಿಕೊಳ್ಳಲು ಬರಬಾರದೇ’ ಎಂದು ಅನಿಸಬಹುದು. ಆ ಕಷ್ಟಗಳ ಸಹಿಸಲಾಗದೆ ನಮ್ಮ ಮನಸ್ಸು ಗೋಳಾಡಬಹುದು. ಆದರೆ ಒಬ್ಬರ ಕಷ್ಟವನ್ನು ಮತ್ತೊಬ್ಬರು ಹೊರಲು ಸಾಧ್ಯವೇ ಇಲ್ಲ. ಹೆಣಹೊರುವಾಗ, ನಾಲ್ಕು ಜನ ಹೊರುತ್ತಾರೆ. ಆದರೆ ಆ ನಾಲ್ಕೂ ಜನರಲ್ಲಿ ಯಾರೊಬ್ಬರೂ ಸಂಪೂರ್ಣ ಭಾರವನ್ನು ಹೊತ್ತಿರುವುದಿಲ್ಲ . ಕೇವಲ ಒಂದು ಹೆಗಲ ಒತ್ತಾಸೆಯನ್ನು ಕೊಡುತ್ತಾರೆ. ಹಾಗೆಯೇ ಬದುಕಿನ ಬವಣೆಗಳನ್ನು ನಾವು ಅನುಭವಿಸಬೇಕಾದಾಗ ಅನ್ಯರ ಸಹಾಯಕ್ಕೆ ಒಂದು ಮಿತಿ ಇರುತ್ತದೆ. ಆದರೆ ಸಮಗ್ರ ಭಾರವನ್ನು ಹೊರಬೇಕಾದ ಕರ್ತವ್ಯೇ ನಮ್ಮದೇ ಅಲ್ಲವೇ ?

ಒಂಟಿಯಾಗಿ ಬರುತ್ತೇವೆ ಮತ್ತು ಒಂಟಿಯಾಗಿ ತೆರಳುತ್ತೇವೆ. ನಡುವೆ ಇಂದ್ರಿಯಗಳ ಸಂಪರ್ಕದಿಂದ ಈ ಜಗತ್ತಿನೊಂದಿಗೆ ನಂಟನ್ನು ಬೆಳೆಸಿಕೊಳ್ಳುತ್ತೇವೆ. ಆ ನಂಟು ನಮ್ಮನ್ನು ಸುಖ ದುಖಗಳನ್ನು ಅನುಭವಿಸುವಂತೆ ಮಾಡುತ್ತದೆ. ಅವುಗಳೇ ನಮ್ಮ ಅಂತರಂಗವನ್ನು ಸುಡುವಂತಹ ಕಟ್ಟಿಗೆಗಳು. ಸುಖವಾಗಲೀ ಕಷ್ಟವಾಗಲೀ ನಮ್ಮನ್ನು ಸುಮ್ಮನಿರುವುದಕ್ಕೆ ಬಿಡುವುದಿಲ್ಲ. ಒದ್ದಾಡಿಸುತ್ತದೆ, ಚಿತೆಯಮೇಲೆ ಹೆಣವನ್ನು ಸುಡುವಂತೆ ನಾವು ಬದುಕಿರುವಾಗಲೇ ನಮ್ಮನ್ನು ಸುಡುತ್ತವೆ. ನಮ್ಮ ಪೂರ್ವ ಕರ್ಮಾನುಸಾರ ನಮಗೆ ಬರುವ ಕಷ್ಟ ಸುಖಗಳು ನೀಡುವ ಬಾಧೆಯನ್ನು ನಾವೇ ಅನುಭವಿಸಬೇಕು. ಪರ್ಯಾಯ ಮಾರ್ಗವೇ ಇಲ್ಲ. ಅಕ್ಕಪಕ್ಕದ ಯಾರನ್ನೂ ಕರೆದು ‘ ಇದನ್ನು ಸ್ವಲ್ಪ ಹಂಚಿಕೊಳ್ಳಿ’ ಎಂದು ಹೇಳಲು ಸಾಧ್ಯವಿಲ್ಲ. ಅವರುಗಳು ‘ಅಬ್ಬಬ್ಬ’ ಎಂದರೆ ನಾವು ಅದನ್ನು ಅನುಭವಿಸಲು ಸ್ವಲ್ಪ ಸಹಾಯಮಾಡಬಹುದು. ಬಿಟ್ಟರೆ, ಹೊರೆಯನ್ನು ಯಾರೂ ಹಂಚಿಕೊಳ್ಳಲು ಸಾಧ್ಯವೇ ಇಲ್ಲ. ಮಣ್ಣಿಂದ ಪಡೆದುಕೊಂಡ ಕಾಯವನ್ನು ಮಣ್ಣಿಗೆ ಸಮರ್ಪಿಸುವ ಬದುಕಿನಲ್ಲಿ ನಡುವೆ ನಾವೆಷ್ಟು ಸುಧಾರಿಸುತ್ತೇವೆ ಎನ್ನುವುದೇ ಬಹಳ ಮುಖ್ಯ. ಈ ದೇಹ, ಇಂದ್ರಿಯಗಳು ಮತ್ತು ಮನಸ್ಸು ಬುದ್ಧಿ ದೇಹಗಳ ಸಂಪರ್ಕದಿಂದ ‘ಆತ್ಮ’ ವನ್ನು ಅನುಭವದ ಮೂಸೆಯಲ್ಲಿ ಹಾಕಿ ಕಾಯಿಸಿ, ಕರಗಿಸಿ, ಕಶ್ಮಲಗಳನ್ನು ನಿವಾರಿಸಿ ಅಪ್ಪಟ ‘ಚಿನ್ನ’ದಂತೆ ತಯಾರಾಗಲು ಸಹಾಯಮಾಡುತ್ತವೆ.

ಜಗದ ತಂಟೆಗಳು ತಂದೊಡ್ಡುವ ಉರಿಯೊಳಗೆ ಕಾದು ಸುಟ್ಟು ಬೆಂದು ಶುದ್ಧವಾಗಿ ಆತ್ಮ ಹೊರಹೊಮ್ಮಬೇಕು ಮತ್ತು ದೇಹ ಚಿತೆಯಮೇಲೆ ಮಣ್ಣಿಗೆ ತರ್ಪಣವಾಗಬೇಕು. ಇದಕ್ಕೆ ನಾವು ನಮ್ಮನ್ನು ಸಂಪೂರ್ಣ ಒಡ್ಡಿಕೊಂಡಾಗ ಹಂತಹಂತವಾಗಿ ಆತ್ಮೋದ್ಧಾರವಾಗುತ್ತದೆ.

 

ರಸ ಚೆನ್ನುಡಿ

ಈ ಜಗತ್ತಿನಲ್ಲಿ ಸುಳ್ಳು ‘ಸತ್ಯ’ವಾಗಿಯೂ ಸತ್ಯ ‘ಸುಳ್ಳಾ’ಗಿಯೂ ಕಾಣುತ್ತಿರುತ್ತದೆ.

ಶುದ್ಧ ಸತ್ವವನ್ನು ಅರಿತರೆ ಮಾತ್ರ ಪೊರೆ ಕಳಚಿ ನಿಜಸ್ವರೂಪ ಅರಿವಿಗೆ ಬರುವುದು – ಅನಾಮಿಕ

 

ರಸಧಾರೆ – ೭೧೬

ಮೃತನ ಸಂಸಾರಕಥೆ ಶವವಾಹಕರಿಗೇಕೆ ।
ಸತಿಯು ಗೋಳಿಡಲಿ, ಸಾಲಿಗನು ಬೊಬ್ಬಿಡಲಿ ।।
ಜಿತಮನದಿ ಚಿತಿಗಟ್ಟಿ ಕೊಂಡೊಯ್ಯುತಿಹರವರು ।
ಧೃತಿಯ ತಳೆ ನೀನಂತು – ಮಂಕುತಿಮ್ಮ ।।
ಶವವಾಹಕರಿಗೇಕೆ=ಶವ+ವಾಹಕರಿಗೆ+ಏಕೆ, ಗೋಳಿಡಲಿ=ಗೋಳು+ಇಡಲಿ, ಬೊಬ್ಬಿಡಲಿ=ಬೊಬ್ಬೆ+ಇಡಲಿ, ಚಿತಿಗಟ್ಟಿ=ಚಿತಿಗೆ+ಅಟ್ಟಿ, ಕೊಂಡೊಯ್ಯುತಿಹರವರು=ಕೊಂದು+ಒಯ್ಯುತ+ಇಹರು. ನೀನಂತು=ನೀನು+ಅಂತು.

ಶವವಾಹಕ=ಹೆಣಹೊರುವವ, ಸತಿ=ಹೆಂಡತಿ, ಸಾಲಿಗ=ಸಾಲವನು ಕೊಟ್ಟವನು, ಬೊಬ್ಬಿಡಲಿ=ಕಿರುಚಾಡಲಿ, ಜಿತಮನ=ಮನಸ್ಸನ್ನು ಗೆದ್ದವರು, ಚಿತೆ=ಹೆಣಸುಡುವ ಬೆಂಕಿ, ಧೃತಿಯ=ಧೈರ್ಯವ, ತಳೆ=ಧರಿಸು ಅಂತು=ಹಾಗೆ

ಹೆಣಹೊರುವವರಿಗೆ ಸತ್ತವರ ಮನೆಯವರ ಗೋಳಿನ ಬಗ್ಗೆ ಗಮನವೇಕೆ. ಸತ್ತವನ ಹೆಂಡತಿ(ಗಂಡ) ಅಳುತ್ತಿದ್ದರೂ, ಅವನಿ(ಳಿ)ಗೆ ಸಾಲವನ್ನು ಕೊಟ್ಟವರು ಬೊಬ್ಬೆಹಾಕುತ್ತಿದ್ದರೂ ಅವಾವುದೂ ‘ನಮಗೆ ಕೇಳಲೇ ಇಲ್ಲ’ ಎನ್ನುವಂತೆ ಜಿತ ಮನಸ್ಕರಾಗಿ ಹೆಣವನ್ನು ಚಿತೆಗೇರಿಸುವ ಸಲುವಾಗಿ ತೆಗೆದು ಹೋದಂತೆ, ನೀನೂ ಸಹ ಬದುಕಿನಲ್ಲಿ ಆಗುಹೋಗುಗಳಿಗೆ ತಲೆಕೆಡಿಸಿಕೊಳ್ಳದೆ ನಿರ್ಮಮತೆಯಿಂದ ಬದುಕು ಎಂದು ಬದುಕಿನಲ್ಲಿ ನಾವು ಖಡ್ಡಾಯವಾಗಿ ಅಳವಡಿಸಿಕೊಳ್ಳಲೇ ಬೇಕಾದ ವಿಚಾರವನ್ನು ಅರುಹಿದ್ದಾರೆ.

ಮರಣದ ಮನೆಯಲ್ಲಿ ಅವರ ಮನೆಯವರು, ಬಂಧುಗಳು ಅಗಲಿದವರ ನೆನೆದು ಗೋಳಿಡುತ್ತಿರುತ್ತಾರೆ. ಇನ್ನು ಅವರಿಗೆ ಸಾಲವನ್ನು ಕೊಟ್ಟವರು’ ಆಯ್ಯೋ ಇವ ಸತ್ತನಲ್ಲ, ಇನ್ನು ನಮ್ಮ ಹಣದ ಗತಿಯೇನು’ ಎಂದು ಬೊಬ್ಬಿಡುತ್ತಿರುತ್ತಾರೆ. ಎಷ್ಟೋ ಬಾರಿ ಹಣ ಸಂದಾಯವಾಗುವವರೆಗೂ ಹೆಣ ಎತ್ತಲು ಬಿಡುವುದಕ್ಕೂ ತಕರಾರನ್ನೂ ಸಹ ಮಾಡುತ್ತಿರುತ್ತಾರೆ. ಆದರೆ ಇವಾವುದರ ಪರಿವೆಯೂ ಇಲ್ಲದೆ ಶವವನ್ನು ಸಾಗಿಸಲು ಬಂದವರು ‘ಚಟ್ಟ ಕಟ್ಟುವುದರಲ್ಲಿ, ಪುರೋಹಿತರನ್ನು ತ್ವರೆ ಮಾಡುವುದರಲ್ಲಿ, ಮತ್ತು ಹೆಣವನ್ನು ಎಷ್ಟು ಬೇಗ ಚಿತೆಗೇರಿಸಿದರೆ ಅಷ್ಟು ಒಳ್ಳೆಯದು’ ಎನ್ನುವಂತೆ ಇರುತ್ತಾರೆ. ಅವರಿಗೆ ದುಃಖವಿರುವುದಿಲ್ಲ. ಏಕೆಂದರೆ ಅವರಿಗೆ ಸತ್ತವರೊಂದಿಗೆ ಅಥವಾ ಅವರ ಮನೆಯವರೊಡನೆ ಯಾವ ಭಾವನಾತ್ಮಕವಾದ ಅಥವಾ ಮಮತೆಯ ಸಂಬಂಧವೂ ಇರುವುದಿಲ್ಲ.

ನಮ್ಮೆಲ್ಲಾ ಮಾನಸಿಕ ಚಿಂತೆ ಕಷ್ಟಗಳಿಗೆ ಈ ಮಮತೆಯೇ ಕಾರಣ. ಈ ಜಗತ್ತಿನ ವಿಷಯ, ವ್ಯಕ್ತಿ ಮತ್ತು ವಸ್ತುಗಳೊಡನೆ ನಮಗಿರುವ ನಂಟು, ನಮ್ಮನ್ನು ಸುಖಕ್ಕೋ ದುಃಖಕ್ಕೋ ತಳ್ಳಿ, ಮನಸ್ಸನ್ನು ವಿಹ್ವಲಗೊಳಿಸುತ್ತದೆ. ಅದರಿಂದ ಪಾರಾಗಬೇಕಾದರೆ, ಜಗತ್ತಿನ ವಿಷಯ, ವ್ಯಕ್ತಿ ಮತ್ತು ವಸ್ತುಗಳನ್ನು ನಾವು ಬದಲಾಯಿಸಲು ಸಾಧ್ಯವಿಲ್ಲವಾದ್ದರಿಂದ, ನಮಗಿರುವ ಭಾವುಕತೆಯ ಬಂಧವನ್ನು ಕಡಿದುಕೊಂಡರೆ, ಅವುಗಳ ಮೇಲೆ ನಮಗಿರುವ ‘ಮಮತೆ’ಯನ್ನು ತೊರೆದರೆ, ಒಂದು ರೀತಿಯ ಉದಾಸೀನತೆಯನ್ನು ಬೆಳೆಸಿಕೊಂಡರೆ ಅವುಗಳು ನಮ್ಮ ಮನಸ್ಸಿನ ಮೇಲೆ ಯಾವ ಪರಿಣಾಮವನ್ನೂ ಬೀರಲಾರವು. ನಮ್ಮ ಅಂತರಂಗ ನಿರಮ್ಮಳವಾಗಿರಬಹುದು.

"ಹೆಣ ಹೊರುವವರಿಗೆ ಹಿಂದಾದರೇನು?ಮುಂದಾದರೇನು?" ಎನ್ನುವ ಮಾತನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಅಂದರೆ "ಕೆಲಸಮಾಡಬೇಕು, ಆ ಕೆಲಸಕ್ಕೆ ಭಾವನಾತ್ಮಕವಾಗಿ ಅಂಟಿಕೊಳ್ಳಬಾರದು" ಎನ್ನುವ ಮಾತದು. ಬದುಕನ್ನು ಹೆಣಹೊರುವುದಕ್ಕೆ ಹೋಲಿಸಬಾರದಾದರೂ, ನಮ್ಮ ಬದುಕಿನಲ್ಲಿ ನಾವೆಷ್ಟು’ ಅಂಟದೆ, ನಿರ್ಮಮತೆ’ ಯಿಂದ ಸಂದ ಕೆಲಸವನ್ನು ಮಾಡಿದರೆ ನಮಗೆ ಅಷ್ಟು ಸುಖ, ನೆಮ್ಮದಿ ಮತ್ತು ಅಂತರಂಗದ ಮನಕ್ಕೆ ನಿರಾಳ. ಇದನ್ನರಿತು ವರ್ತಿಸಿದರೆ ಸುಖ ಇಲ್ಲದಿದ್ದರೆ ದುಃಖ.

 

ರಸ ಚೆನ್ನುಡಿ

ಮೆತ್ತನೆಯ ಚಪ್ಪಲಿಗಳ ಧರಿಸಿದರೆ ನಮ್ಮೆಲ್ಲ ಹಾದಿಗಳೂ ಮೆತ್ತಗಿರುವಂತೆ ನಾವು ಬದಲಾಗಿಬಿಟ್ಟರೆ, ನಮಗೆ ಜಗತ್ತೆಲ್ಲವೂ ಬದಲಾದಂತೆಯೇ ಕಾಣುತ್ತದೆ ಅಲ್ಲವೇ? – ಅನಾಮಿಕ

 

ರಸಧಾರೆ – ೭೧೫

ಮಂಕುತಿಮ್ಮನ ಕಗ್ಗ – ರಸಧಾರೆ

ಮುಕ್ತಕ – ೭೧೫

ಕ್ಷಮೆ ದೋಷಿಗಳಲಿ, ಕೆಚ್ಚೆದೆ ವಿಧಿಯ ಬಿರುಬಿನಲಿ ।
ಸಮತೆ ನಿರ್ಮತ್ಸರತೆ ಸೋಲ್ಗೆಲುವುಗಳಲಿ ।।
ಶಮವ ನೀಂ ಗಳಿಸಲೀ ನಾಲ್ಕು ತಪಗಳೆ ಸಾಕು ।
ಭ್ರಮೆಯೊ ಮಿಕ್ಕೆಲ್ಲ ತಪ – ಮಂಕುತಿಮ್ಮ ।।

ಸೋಲ್ಗೆಲುವುಗಳಲಿ = ಸೋಲ್+ಗೆಲುವುಗಳಲ್ಲಿ,

ಬಿರುಬು= ತೀವ್ರತೆಯಿಂದ ಕೂಡಿದ ಹೊಡೆತ, ಸಮತೆ=ಸಮಾನತೆ, ಶಮ=ಅಂತರಂಗದ ಶಾಂತಿ,

ದೋಷವಿರುವರಲ್ಲಿ ಕ್ಷಮೆಯನ್ನು ತೋರುವುದು, ವಿಧಿಯ ಹೊಡೆತಗಳು ಅಧಿಕವಾದಾಗ ಧೈರ್ಯವನ್ನು ಬಿಡದೆ ಇರುವುದು, ಸೋಲು ಗೆಲುವುಗಳಲ್ಲಿ ಸಮಾನ ಮನಸ್ಕರಾಗಿರುವುದು, ಅನ್ಯರಲ್ಲಿ ಮತ್ಸರವ ತೋರದಿರುವುದು ನಮ್ಮ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಮಾಡಬೇಕಾದ ನಾಲ್ಕು ಶ್ರೇಷ್ಠತಮ ತಪಸ್ಸುಗಳು ಮತ್ತು ಮಿಕ್ಕೆಲ್ಲ ಪ್ರಯತ್ನಗಳೂ ಕೇವಲ ನಮ್ಮ ಭ್ರಮೆಯಷ್ಟೇ ಎಂದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಗಡ್ಡ ಮೀಸೆಗಳ ಬಿಟ್ಟು, ಕಾವಿ ತೊಟ್ಟು, ದೇಹವನ್ನು ದಂಡಿಸಿ, ಕಾಡಿನಲ್ಲಿ ಮೂಗ ಹಿಡಿದು ಕುಳಿತುಕೊಂಡರೆ ತಪಸ್ಸಾಗುವುದಿಲ್ಲ. ಮನಸ್ಸಿನಲ್ಲಿರುವ ಹೊಲಸನ್ನು ತೊಳೆದುಕೊಂಡು ಮತ್ತು ಮುಂದೆ ಬರಬಹುದಾದ ಕಸವನ್ನು ಬರದಂತೆ ತಡೆಯುವ ಶಕ್ತಿಯನ್ನು ಪಡೆದುಕೊಳ್ಳುವುದೇ ತಪಸ್ಸು. ಅದೇ ನಿಜವಾದ ತಪಸ್ಸು ಮತ್ತು ನಮ್ಮ ಅಂತರಂಗದ ಬೆಳವಣಿಗೆ. ನಾವು ಒಳಗಿನಿಂದ ಬೆಳೆಯಬೇಕು. ಸತ್ಯವನ್ನರಿತು ಸತ್ವದಿಂದ ಕೂಡಿ ಬೆಳೆಯಬೇಕು. ಗಟ್ಟಿಯಾಗಬೇಕು. ಹಾಗೆ ಬೆಳೆದು ಗಟ್ಟಿಯಾದರೆ, ಪೂರ್ವಾಗ್ರಹವಿಲ್ಲದೆ, ಅನ್ಯರಲ್ಲಿ ದೋಷಗಳನ್ನು ಕಾಣುವ ಪ್ರವೃತ್ತಿ ನಶಿಸುತ್ತದೆ. ಅಂತಹ ಸ್ಥಿತಿಯಲ್ಲಿ ‘ಕ್ಷಮೆ’ ಯೇ ನಮ್ಮ ಗುಣವಾಗಿಬಿಡುತ್ತದೆ. ಅದೇ ರೀತಿ ನಾವು ಬೆಳೆದರೆ ವಿಧಿಯು ತಂದೊಡ್ಡುವ ಎಂತಹುದೇ ವಿಷಮ ಪರಿಸ್ಥಿತಿಯನ್ನೂ "ಇದು ನಾವೇ ಪಡೆದುಕೊಂಡು ಬಂದ ನಮ್ಮ ಪೂರ್ವ ಕರ್ಮದ ಫಲವಲ್ಲವೇ?" ಎಂದು ಆಲೋಚಿಸಿ ಅದನ್ನು ಸಂತೋಷದಿಂದ ಅನುಭವಿಸುವ ದೃಢತೆ ಮತ್ತು ಧೈರ್ಯ ಎರಡೂ ಬರುತ್ತದೆ.

ಇನ್ನು ಬದುಕಿನಲ್ಲಿ ಸೋಲು ಗೆಲುವುಗಳು ಸಹಜ. ಆದರೆ ಬಲಹೀನ ಮನಸ್ಸುಗಳು ಸೋಲಾಗಲೀ ಗೆಲುವಾಗಲೀ ತೀವ್ರ ವಿಚಲಿತವಾಗುತ್ತವೆ. ಅದು ಆ ವ್ಯಕ್ತಿಯನ್ನಷ್ಟೇ ಅಲ್ಲದೆ ಅವನ ಸುತ್ತಲಿನವರನ್ನೂ ವಿಚಲಿತ ಗೊಳಿಸುತ್ತದೆ. ಅಂತಹ ವಿಕಾರಗಳನ್ನು ತಡೆಗಟ್ಟಲು ಒಂದೇ ಮಾರ್ಗ, ‘ಮಾನಸಿಕ ದೃಢತೆ’. ಅದೂ ಸಹ ಮೇಲೆ ಹೇಳಿದ ‘ ತಪೋ’ ಮಾರ್ಗದಲ್ಲೇ ಸಿಗುತ್ತದೆ. ಇವೆಲ್ಲ ಒಂದು ವ್ಯಕ್ತಿಯ ಒಳ-ಹೊರಗಿನ ಸಂಬಂಧವಾದರೆ ಕೊನೆಯದು ಕೇವಲ ಅಂತರಂಗದಲ್ಲೇ ನಡೆಯುವ ಪ್ರಕ್ರಿಯೆ. ನಮ್ಮ ಮನಸ್ಸುಗಳಲ್ಲಿ ಭಾವ ತರಂಗಗಳು ಏಳುತ್ತವೆ. ಜ್ವಾಲಾಮುಖಿಗಳಂತೆ ಬುಗ್ಗೆ ಬುಗ್ಗೆಯಾಗಿ ಏಳುತ್ತವೆ. ಹೇಗೆ ಜ್ವಾಲಾಮುಖಿಗಳಿಂದ ಹೊಮ್ಮುವ ಲಾವಾರಸ ಧೀರ್ಘಕಾಲಕ್ಕೆ ಸುತ್ತಲಿನ ಬಹು ಪ್ರದೇಶವನ್ನು ನಾಶ ಮಾಡುತ್ತದೆಯೋ, ನಮ್ಮ ಮನದಲ್ಲೇಳುವ ಚಿತ್ರ ವಿಚಿತ್ರ ಭಾವ ಬುಗ್ಗೆಗಳೂ ಸಹ ನಮ್ಮ ಮನಸ್ಸನ್ನು ತೀವ್ರ ಆಘಾತಕ್ಕೆ ಒಳಗಾಗಿಸುತ್ತದೆ. ಅದರಿಂದ ಪಾರಾಗಬೇಕಾದರೆ ಮನಸ್ಸು ನಿರ್ಮಲವಾಗಿರಬೇಕು ಶಾಂತವಾಗಬೇಕು. ಹಾಗೆ ಮನಸ್ಸನ್ನು ಶಾಂತಗೊಳಿಸುವ ಪ್ರಕ್ರಿಯೆಯೇ’ಶಮ’. ಹೊರಗಿನಿಂದ ಬರುವುದನ್ನು ತಡೆಯುವುದು ಅಥವಾ ನಿವಾರಿಸುವುದು ‘ದಮ’ ವಾದರೆ ಒಳಗಿನ ಶಾಂತತೆಯನ್ನು ಪಡೆಯುವುದು’ಶಮ’.

‘ಶಮ’ ಮತ್ತು ‘ ದಮ’ ಗಳನ್ನೂ ಸಾಧಿಸುವುದೇ ಮಾನ್ಯ ಗುಂಡಪ್ಪನವರು ಹೇಳಿರುವ ತಪಸ್ಸು. ಬೇರೆಲ್ಲ ಬರೀ ಭ್ರಮೆ ಎನ್ನುತ್ತಾರೆ. ಇದನ್ನು ಸಾಧಿಸುವ ಬೇರೆ ಬೇರೆ ಮಾರ್ಗಗಳನ್ನು ಹೇಳಿಕೊಡುವ ಡೋಂಗಿಗಳು ‘ ಬಾಬಾ, ಸ್ವಾಮೀಜಿ, ಗುರೂಜಿ ‘ ಎಂದು ಹೆಸರಿಟ್ಟುಕೊಂಡು ನಮ್ಮನ್ನು ತಪ್ಪಾದ ದಾರಿಯಲಿ ನಡೆಸುವ ಬಹಳ ಜನ ನಮ್ಮ ಸಮಾಜದಲ್ಲಿ ಸಿಗುತ್ತಾರೆ. ಆದರೆ ನಾವು ನಮ್ಮ ಪ್ರಯತ್ನವನ್ನು ನಾವೇ ಪಡಬೇಕು. ಯಜುರ್ವೆದವು(ಯ.ವೇ. 23-15 )ಸ್ವಯಂ ವಾಜಿನ್ , ತನ್ವಂ ಕಲ್ಪಯಸ್ವ, ಸ್ವಯಂ ಯಜಸ್ವ, ಸ್ವಯಂ ಜುಷಸ್ವ, ಮಹಿಮಾ ತೇ ಅನ್ಯೇನ ನ ಸನ್ನಶೇ’ ಎಂದು ಹೇಳಿ ‘ ಹೇ, ಗತಿ,ಬಲ ಅಥವಾ ಶಕ್ತಿಯನ್ನು ಹೊಂದಿರುವವರೇ, ನಿಮ್ಮ ಉದ್ಧಾರದ ಮಾರ್ಗವನ್ನು ನೀವೇ ಕಲ್ಪಿಸಿಕೊಳ್ಳಿ, ಶ್ರೇಷ್ಠತಮ ಕಾರ್ಯಗಳನ್ನು ಮಾಡಿ, ಸಂತೋಷದಿಂದ ಮಾಡಿ, ಅನ್ಯರ ಸಾಧನೆಯಿಂದ ನಿಮ್ಮ ಮಹಿಮೆ ಹೆಚ್ಚುವುದಿಲ್ಲ’ ಎಂದು ನಮ್ಮ ‘ಉದ್ಧಾರ’ವನ್ನು ನಾವೇ ಹೇಗೆ ಮಾಡಿಕೊಳ್ಳಬೇಕು ಎಂದು ಆದೇಶಿಸಿದೆ. ಇದನ್ನೇ ಶ್ರೀ ಕೃಷ್ಣ ಗೀತೆಯಲ್ಲಿ ‘ ಉದ್ಧರೇತ್ ಆತ್ಮನಾತ್ಮಾನಂ’ ಎಂದದ್ದು. ಹಾಗಾಗಿ ನಮ್ಮ ತಪಸ್ಸನ್ನು ನಾವೇ ಮಾಡಿ ಆ ತಪಸ್ಸಿನ ಫಲವನ್ನು ಪಡೆದುಕೊಂಡಾಗಲೇ ನಮ್ಮ ಜೀವನ ಸಾರ್ಥಕವಾಗುವುದು. ಅಂತಹ ಸಾರ್ಥಕತೆಯನ್ನು ಪಡೆಯಲು ಪ್ರಯತ್ನಪಡುವುದೇ ಮಾನ್ಯ ಗುಂಡಪ್ಪನವರು ಹೇಳುವ
‘ತಪಸ್ಸು’. ಅದನ್ನು ಆಚರಿಸಬೇಕು.