RSS

Monthly Archives: ಡಿಸೆಂಬರ್ 2014

ರಸಧಾರೆ – ೭೩೮

ತನಗೆ ಬಾರದ ಲಾಭ ತನಯಂಗೆ ಬಂದಾಗ ।
ಜನಕನ್ ಅದು ತನದೆಂದು ಸಂತಸಿಪ ತೆರದಿ ।।
ಜನದೊಳಾರ್ಗಾವ ಸೊಗವಾದೊಡಂ ತನದೆನ್ನು-।
ತನುಭವಿಪನೋ ಜ್ಞಾನಿ – ಮಂಕುತಿಮ್ಮ ।।
ಜನದೊಳಾರ್ಗಾವ=ಜಗದೊಳು+ಆರ್ಗೆ+ಆವ. ಸೊಗವಾದೊಡಂ=ಸೊಗವು+ಆದೊಡಂ ತನದೆನ್ನುತನುಭವಿಪನೋ=ತನ್ನದು+ಎನುತ+ಅನುಭವಿಪನೋ,

ತನಯಂಗೆ =ಮಗನಿಗೆ, ಜನಕನ್=ತಂದೆ, ಸಂತಸಿಪ=ಸಂತೋಷಪಡುವ,ತೆರದಿ=ರೀತಿಯಲ್ಲಿ, ಆರ್ಗೆ=ಯಾರಿಗೆ, ಸೊಗವು=ಸಂತೋಷ,ಆನಂದ,ಅನುಕೂಲ, ಆದೊಡಂ=ಆದರೆ,

ಜೀವನದಲ್ಲಿ ನಾನು ಪಡೆಯಲಾಗದ್ದನ್ನು ನನ್ನ ಮಗ(ಳು)ಪಡೆದರೆ ಸಂತೋಷಿಸುವ ತಂದೆಯಂತೆ, ಜಗತ್ತಿನಲ್ಲಿ, ನಾವು ಬಯಸಿ, ನಮಗೆ ಸಿಗದಿದ್ದದ್ದು ಬೇರೆ ಯಾರಿಗಾದರೂ ದಕ್ಕಿ ಅದು ಅವರ ಸಂತೋಷಕ್ಕೆ ಕಾರಣವಾದರೆ ಆ ಸಂತೋಷವನ್ನು ತನ್ನ ಸಂತೋಷವೆಂದು ಸಂಭ್ರಮಿಸುವವನೆ ಜ್ಞಾನಿ ಎಂದು ಉಲ್ಲೇಖಮಾಡಿದ್ದಾರೆ ಈ ಮುಕ್ತಕದಲ್ಲಿ.

ತಂದೆ ತಾಯಿಗಳು ತಮ್ಮ ಬದುಕಿನಲ್ಲಿ ಏನನ್ನೋ ಸಾಧಿಸಬೇಕೆಂದೋ,ತಮ್ಮ ಮಕ್ಕಳಿಗೆ ಅನುವಾದ ಬಾಳನ್ನು ಕೊಡಬೇಕೆಂದೋ ಆಶಿಸುತ್ತಾರೆ.ಆದರೆ ಕಾರಣಾಂತರಗಳಿಂದ ಅಂತ ಸಾಧನೆಯನ್ನು ಮಾಡಲಾಗದೆ ಮಕ್ಕಳಿಗೆ ಒಳ್ಳೆಯ ಅನುಕೂಲಗಳನ್ನು ಕೊಡಲಾಗದೇ ಇರಬಹುದು. ಅದೇ ಮಕ್ಕಳು ಬೆಳೆದು ವಿದ್ಯಾವಂತರಾಗಿ, ಯೋಗ್ಯರಾಗಿ ತಮ್ಮ ಕಾರ್ಯಕ್ಷಮತೆಯ ಬಲದಿಂದ ಆ ತಂದೆ ತಾಯಿಗಳು ಬಯಸಿದ ‘ಅನುವಾದ ಬಾಳ’ ನ್ನು ಬಾಳಿದರೆ, ಆ ತಂದೆತಾಯಿಗಳಿಗೆ ಅದಕ್ಕಿಂತ ಮೀರಿದ ಸಂತೋಷವಿರಬಾರದು. ತಮ್ಮ ಮಕ್ಕಳು, ತಮ್ಮಷ್ಟೇ ಅಥವಾ ತಮಗಿಂತ ಯೋಗ್ಯರಾದರೆ ಸಂತೋಷಪಡುವುದು, ಸಹಜ ಸಂಸ್ಕಾರ. ಹಾಗೆಯೇ ತಮ್ಮ ಮಕ್ಕಳು ಹಾದಿ ಬಿಟ್ಟು, ಅಯೋಗ್ಯರಾಗಿ ಕಷ್ಟಗಳನ್ನು ಅನುಭವಿಸುವಾಗ, ನೊಂದು ನೂಲಾಗಿ, ಆಜೀವ ಪರ್ಯಂತ ಕೊರಗಿ, ತಮ್ಮ ಕೊನೆಯಗಳಿಗೆಯ ತನಕ, ತಮ್ಮ ಮಕ್ಕಳ ಜೀವನ ಸುಧಾರಿಸಲಿ ಎಂದು ಆಶಿಸುವ ತಂದೆ ತಾಯಿಗಳನ್ನು ನಾವು ಎಲ್ಲೆಡೆ ನೋಡಬಹುದು. ತಮ್ಮ ಮಕ್ಕಳು ತಮಗಿಂತ ಉತ್ತಮರಾದರೆ,’ ನಮ್ಮ ಜೀವನ ಸಾರ್ಥಕ’ ಎಂದು ಬಗೆಯುವವರು ‘ ಜಾಣ’ ತಂದೆ ತಾಯಿಗಳು.

ಹೀಗೆ ಅನ್ಯರ ಏಳಿಗೆಯಲ್ಲಿ ನಮ್ಮ ಏಳಿಗೆಯನ್ನು ಅನ್ಯರ ಸುಖದಲ್ಲಿ ನಮ್ಮ ಸುಖ ಸಂತೋಷಗಳನ್ನು ಅನುಭವಿಸುವುದು ‘ಸುಸಂಸ್ಕಾರ’. " ಅನ್ಯೇಷಾಂ ಉದಯಂ ದೃಷ್ಟ್ವಾ ಯೇ ಅಭಿನಂದಂತಿ ಮಾನವಾಃ ತೇ ವೈ ಭಾಗವತಾಃ ಸ್ಮೃತಾಃ " ಎನ್ನುತದೆ ಭಾಗವತ ಲಕ್ಷಣಗಳನ್ನು ವಿವರಿಸುವ ಒಂದು ಸೂಕ್ತ. ‘ಅನ್ಯರ ಏಳಿಗೆಯನ್ನು ಕಂಡು ಅದು ತನ್ನ ಏಳಿಗೆಯೆಂದು ಬಗೆದು ಸಂತೋಷಪಡುವವನೆ ಭಾಗವತೋತ್ತಮನೆಂದು ಹೇಳಬಹುದು’ ಎನ್ನುತ್ತದೆ ಈ ಸೂಕ್ತ. ಆ ರೀತಿಯ ಭಾವ ಬರಬೇಕಾದರೆ ಒಂದು ಉನ್ನತ ಸುಸಂಕೃತ ಮನಕ್ಕೆ ಮಾತ್ರ ಸಾಧ್ಯ, ಅಲ್ಲವೇ? ಇದನ್ನೇ ಮಾನ್ಯ ಗುಂಡಪ್ಪನವರು " ಜನದೊಳಾರ್ಗಾವ
ಸೊಗವಾದೊಡಂ ತನದೆನ್ನುತನುಭವಿಪನೋ ಜ್ಞಾನಿ " ಎಂದು ಹೇಳುತ್ತಾ ನಮ್ಮ ಸುತ್ತಲಿನ ಅಥವಾ ನಮ್ಮ ಸಂಪರ್ಕದಲ್ಲಿರುವ ಜನರಿಗೆ ಯಾವುದೇ ರೀತಿಯ ‘ಆನಂದ, ಸಂತೋಷ’ ವಾದರೂ ಅದು ತನಗೂ ಆದ ಸಂತೋಷವೆಂದು ಯಾರು ಪರಿಗಣಿಸಿ ಸಂತಸಪಡುತ್ತಾರೋ ಅವರೇ ‘ಜ್ಞಾನಿ’ಗಳು ಎನ್ನುತ್ತಾರೆ.

ಅವರುಗಳು ಜ್ಞಾನಿಗಳೇಕೆಂದರೆ, ಅಂತಹ ಮನೋಭಾವವಿರುವವರಿಗೆ, ಮಮಕಾರ, ಸ್ವಾರ್ಥ, ಈರ್ಷ್ಯೆ ಮುಂತಾದ ದುರಾಲೋಚನೆಗಳಿಲ್ಲದೆ ನಿರ್ಮೋಹದಿಂದ ನಿರಪೇಕ್ಷೆಯಿಂದ ಜಗತ್ತನ್ನು ನೋಡುವ ಮನೋಭಾವವಿರುತ್ತದಾದ್ದರಿಂದ ಅವರು ಜ್ಞಾನಿಗಳು. ಸದಾ ಕಾಲ ಅನ್ಯರನ್ನು ನೋಡಿ, ಅವರಲ್ಲಿರುವುದು ತನ್ನಲ್ಲಿಲ್ಲವಲ್ಲ ಎಂದು ಕೊರಗುತ್ತಾ ಬಾಳುವವರ ಜೀವ ನಿತ್ಯ ಗೋಳಿನಿಂದ ಕೂಡಿರುತ್ತದೆ. ನಮಗೆ ಅಂತಹ ಗೋಳು ಬೇಡವಾದಲ್ಲಿ,
ನಮ್ಮ ಸುಖ ಸಂತೋಷವನ್ನು ಅನ್ಯರಿಗೂ ಹಂಚುತ್ತಾ, ಅನ್ಯರ ಸುಖ ಸಂತೋಷವನ್ನು ನಮ್ಮದೆಂದು ಭಾವಿಸಿ ಸಂತೋಷಪಡುವ ಮನೋಭಾವ ಬೆಳೆಸಿಕೊಳ್ಳಬೇಕು. ನಮಗಂತಹ ಮನೋಭಾವವಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಾ ಸಾಧ್ಯವಾದ ಅಂತಹ ಮನೋಭಾವನನ್ನು ಬೆಳೆಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ.

Advertisements
 

ರಸ ಚೆನ್ನುಡಿ

ಅವಕಾಶಗಳು ನಿಮ್ಮ ಬಾಗಿಲನ್ನು ತಟ್ಟುವಾಗ,

"ಯಾರು?" ಎಂದು ವ್ಯರ್ಥ ಪ್ರಶ್ನೆ ಕೇಳದೆ ಬಾಗಿಲು ತೆರೆಯಬೇಕು – ಅನಾಮಿಕ

 

ರಸ ಚೆನ್ನುಡಿ

ಭಾವನೆಗಳು ಬಹಳ ಮುಖ್ಯ, ಏಕೆಂದರೆ ಅವು ಹೃದಯಾಂತರಾಳದಿಂದ ಬರುತ್ತವೆ. ಅವು, ಪ್ರತಿಕ್ರಯಿಸಿದರೆ ಬೆಳೆಯುತ್ತವೆ, ತಿರಸ್ಕರಿಸಿದರೆ ಸಾಯುತ್ತವೆ ಮತ್ತು ಗೌರವಿಸಿದರೆ ನಮ್ಮೊಡನೆ ಸದಾ ಇರುತ್ತವೆ.

 

ರಸಧಾರೆ – ೭೩೭

ಎಂದಿಗಾನುಂ ನಿನ್ನ ಪೂರ್ವಋಣಗಳ ಲೆಕ್ಕ ।
ನೊಂದಬೇಕೆಂದಿರ್ದೊಡಿಂದೆ ಮೊದಲನಿಡು ।।
ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ ।
ಹೊಂದು ವಿಶ್ವಾತ್ಮತೆಯ – ಮಂಕುತಿಮ್ಮ ।।

ನೊಂದಬೇಕೆಂದಿರ್ದೊಡಿಂದೆ=ನೊಂದ+ಬೇಕೆಂದು+ಇರ್ದೊಡೆ, ಮೊದಲನಿಡು=ಮೊದಲನಿಡು, ಹೆರರೆನಿಪರನು=ಹೆರರು+ಎನಿಪರನು, ವಿಶ್ವಾತ್ಮತೆಯ=ವಿಶ್ವ+ಆತ್ಮತೆಯ

ಎಂದಿಗಾನುಂ=ಎಂದಿಗಾದರೂ, ನೊಂದ=ಹೊಂದ-ಅನುಭವಿಸ-ಪಡೆ, ಇರ್ದೊಡೆ=ಇದ್ದಾರೆ, ಅಂದಿಸಿಕೊ=ಎಟುಕಿಸಿಕೋ, ಹೆರರೆನಿಪರನು=ಅನ್ಯರು ಎನ್ನುವವರನ್ನು, ವಿಸ್ತರದೆ=ವಿಸ್ತಾರದಿ

‘ಎಂದಿಗಾದರೂ ನಿನ್ನ ಪೂರ್ವ ಕರ್ಮಗಳ ಲೆಕ್ಕಾಚಾರವನ್ನು ನೋಡಿ ಮುಗಿಸಬೇಕೆಂದೆನಿಸಿದರೆ, ಆ ದಿಕ್ಕಿನಲ್ಲಿ ಮೊದಲ ಹೆಜ್ಜೆಯನ್ನು ಇಂದೇ ಇಡು. ಹೃದಯ ವಿಸ್ತಾರದಿಂದ ಅನ್ಯರನ್ನು ಎಟುಕಿಸಿಕೋ. ಜಗತಾತ್ಮತೆಯನ್ನು ಹೊಂದು, ಅನುಭವಿಸು ಎಂದು, ಬದುಕಿನ ಭಾರವನ್ನು ಕಳೆದುಕೊಂಡು, ವೈಶಾಲ್ಯತುಂಬಿದ ಜೀವನದ ಪರಿಯನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಪ್ರತಿಯೊಬ್ಬರಿಗೂ ಅವರವರದೇ ಆದಂತಹ ಪೂರ್ವ ಕರ್ಮಗಳು, ಆ ಕರ್ಮಗಳಿಂದ ಸಂಚಯಿಸಿಕೊಂಡ ಋಣಗಳು. ಹಳೆಯ ಋಣಗಳನ್ನೂ ತೀರಿಸುವುದು. ಹೊಸ ಋಣಗಳನ್ನೂ ಸೇರಿಸಿಕೊಳ್ಳುವುದು, ಕೆಲವನ್ನು ಕಳೆದುಕೊಂಡು ಕೆಲವನ್ನು ಉಳಿಸಿಕೊಳ್ಳುವುದು. ಇದೇ ನಮ್ಮ ಜೀವನದ ಪರಿ. ಈ ದಿಶೆಯಲ್ಲಿ ನಾವು ನಮ್ಮೊಂದಿಗೆ ಮಾತ್ರ ಇರುತ್ತೇವೆ. ನಮ್ಮ ಮನೆ, ಮಡದಿ ಅಥವಾ ಗಂಡ, ಮಕ್ಕಳು, ನಮ್ಮ ಆಸ್ತಿ ನಮ್ಮ ಕೆಲಸ ನಮ್ಮ ಏಳಿಗೆ ಹೀಗೆ ನಮ್ಮೆಲ್ಲ ಕೆಲಸ, ಆಲೋಚನೆ ಮತ್ತು ಯೋಜನೆಗಳು ನಮ್ಮ ಸುತ್ತಲೇ ಸುತ್ತುತ್ತಿರುತ್ತದೆ. ವಿಚಾರ ವೈಶಾಲ್ಯವಿಲ್ಲದೆ ಸಂಕುಚಿತ ಮನೋಭಾವದಿಂದಲೇ ಇರುತ್ತೇವೆ. ಇದು ಸಹಜ ಪ್ರವೃತ್ತಿ. ಈ ನಾನತ್ವದ ‘ವೃತ್ತ’ ದಲ್ಲಿ ಇರುವಾಗ ನಮ್ಮ ಋಣ ಸಂಚಯನ ಮತ್ತು ವ್ಯವಕಲನ ನಡೆಯುತ್ತಲೇ ಇರುತ್ತದೆ.

ಆದರೆ ಎಂದಾದರೊಂದು ದಿನ ನಮಗೆ ಆತ್ಮೋದ್ಧಾರದ ಯೋಚನೆ ಬಂದರೆ, ನಮ್ಮ ಸಂಚಿತ ಋಣಗಳನ್ನು ತೀರಿಸಿಕೊಳ್ಳುವ ಅವಶ್ಯಕತೆಯ ಅನುಭವವಾದರೆ, ನಾವು ಅಂದೇ ಮೊದಲ ಹೆಜ್ಜೆಯನ್ನಿಡಬೇಕು ಎನ್ನುವುದೇ ಮಾನ್ಯ ಡಿವಿಜಿ ಯವರ ಅಭಿಮತ. ಅದಕ್ಕೆ ಮಾರ್ಗವೇನೆಂದರೆ, ನಾವು
‘ನಮ್ಮಿಂದಲೇ ನಿರ್ಮಿತವಾದ ‘ನಮ್ಮ’ ವೃತ್ತ’ ದಿಂದ ಹೊರಬಂದು ಅದಕ್ಕೆ ಅಂಟಿಕೊಳ್ಳದೆ ದೂರನಿಂತು ನೋಡಬೇಕು, ಸಾಕ್ಷೀಭಾವದಿಂದ. ಆಗ ನಮಗೆ ನಮ್ಮ ಶಕ್ತಿ ಮತ್ತು ನಮ್ಮ ಕೊರತೆಗಳ ದರ್ಶನವಾಗುತ್ತದೆ. ಶಕ್ತಿಯನ್ನು ವರ್ಧಿಸಿಕೊಂಡು ಕೊರತೆಗಳನ್ನು ನೀಗಿಸಿಕೊಳ್ಳುವ ಮಾರ್ಗಗಳು ನಿಚ್ಚಳವಾಗಿ ತೋರಿದಾಗ, ನಮ್ಮ ಋಣಗಳನ್ನು ಒಂದೊಂದಾಗಿ ತೀರಿಸಿಕೊಳ್ಳಬಹುದು. ಈ ಸ್ಥಿತಿಯನ್ನು ತಲುಪಿದರೆ ನಮ್ಮ ಸಂಕುಚಿತ ಭಾವ ಕರಗಿ ಹೃದಯ ವೈಶಾಲ್ಯವುಂಟಾಗುತ್ತದೆ. ನಾವು ಬೆಳೆದಂತೆ ನಾವು ಕಟ್ಟಿಕೊಂಡ ವೃತ್ತ ಬಹಳ ಸಣ್ಣದಾಗಿ ಕಾಣುತ್ತದೆ. ಆಗ ವೃತ್ತವನ್ನು ಹಿರಿದಾಗಿಸಿಕೊಂಡು ಅದರೊಳಕ್ಕೆ ‘ಅನ್ಯ’ರನ್ನೂ ಸೇರಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ‘ಆತ್ಮವತ್ ಸರ್ವ ಭೂತೇಷು’ ಎನ್ನುವ ಭಾವ ಬೆಳೆಯುತ್ತದೆ.

ಹೃದಯ ವೈಶಾಲ್ಯದಿಂದ ನಾವು ಜಗತ್ತಿನಲ್ಲಿ ಭಿನ್ನತೆಗಾಗಿ, ಬೇಧಕ್ಕಾಗಿ ಎಳೆದ ಗೆರೆಗಳು ಮಾಯವಾಗುತ್ತವೆ. ಎಲ್ಲೆಲ್ಲೂ ನಮಗೆ ಆ ಪರಮಾತ್ಮ ತತ್ವದ ದರ್ಶನವಾಗುತ್ತದೆ. ‘ ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು -ಸರ್ವಜ್ಞ’ ಎನ್ನುವ ಸರ್ವಜ್ಞ ವಚನದಂತೆ ನಮ್ಮ ಆಲೋಚನೆಗಳು ವಿಶಾಲವಾಗಿ ಮಾನ್ಯ ಗುಂಡಪ್ಪನವರು ‘ಹೊಂದು ವಿಶ್ವಾತ್ಮತೆಯ’ ಎಂದು ಹೇಳುವಂತೆ ನಮಗೆ ಜಗತಾತ್ಮಾನುಭವವಾಗುತ್ತದೆ. ನಾವು ಕಟ್ಟಿಕೊಂಡ ಬಂಧನಗಳೆಲ್ಲಾ ಕಳಚಿ ನಾವೂ ಮುಕ್ತರಾಗುವ ಸಾಧ್ಯತೆ ಖಂಡಿತ ಇದೆ. ಆದರೆ ಅದು ಸ್ವಾರ್ಥ ಬಿಟ್ಟು ಸಾಧನೆ ಮಾಡಿದರೆ ಮಾತ್ರ ಸಾಧ್ಯ. ನಾವು ಅಂತಹ ಪ್ರಯತ್ನವನ್ನು ಮಾಡಿದರೆ ನಮ್ಮ ಬದುಕೂ ಸಾರ್ಥವಾಯಿತು ಎಂದುಕೊಳ್ಳಬಹುದು.

 

ರಸ ಚೆನ್ನುಡಿ

‘ಆಟ, ಊಟ. ಓಟ ‘ ಎಂಬುದು ಪ್ರಾಥಮಿಕ ಶಾಲೆಯ ಮೊದಲ ಪಾಠದ ಸಾಲುಗಳು.
ನಾವು ಬದುಕಿನಲ್ಲಿ ಅಷ್ಟರಲ್ಲೇ ಇದ್ದರೆ, ಬೆಳೆದಂತೆ ಅಲ್ಲವೇ ಅಲ್ಲ ಅಲ್ಲವೇ? – ಅನಾಮಿಕ

 

ರಸಧಾರೆ – ೭೩೬

ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ ।
ಆಯಸಂಬಡಿಸದವೊಲಂತರಾತ್ಮವನು ।।
ಮಾಯೆಯೊಡನಾಡುತ್ತ,ಬೊಮ್ಮನನು ಭಜಿಸುತ್ತ ।
ಆಯುವನು ಸಾಗಿಸೆಲೋ – ಮಂಕುತಿಮ್ಮ ।।

ಆಯಸಂಬಡಿಸದವೊಲಂತರಾತ್ಮವನು=ಆಯಸಂ+ಬಡಿಸದ+ಒಲು+ಅಂತರಾತ್ಮವನು, ಮಾಯೆಯೊಡನಾಡುತ್ತ=ಮಾಯೆಯೊಡನೆ+ಆಡುತ್ತ,

ಕಾಯಕ=ಕರ್ತವ್ಯ, ಸಯ್ತಿಡುತ=ಸಂತೈಸುತ್ತಾ, ಆಯಸಂ=ಆಯಾಸವನ್ನು, ಬೊಮ್ಮನನು=ಪರಮಾತ್ಮನನ್ನು, ಆಯುವನು=ಆಯಸ್ಸನ್ನು

ಕರ್ತವ್ಯವನ್ನು ಮಾಡುತ್ತಾ ನಮ್ಮದೇ ಮನಸ್ಸನ್ನು ಸಂತೈಸುತ್ತಾ ಆತ್ಮವನ್ನು ಆಯಾಸಗೊಳಿಸದಂತೆ, ಜಗತ್ತಿನ ಮಾಯೆಯೊಡನೆ ಆಟವಾಡುತ್ತಾ, ಪರಮಾತ್ಮನನ್ನು ಭಜಿಸುತ್ತಾ ನಿನ್ನ ಬದುಕನ್ನು ಸಾಗಿಸು ಎಂದು ನಾವು ಜಗತ್ತಿನಲ್ಲಿ ಹೇಗಿರಬೇಕು ಎನ್ನುವುದನ್ನು ಬಹಳ ಸೂಕ್ತವಾಗಿ ಆದೇಶ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಬದುಕು ನಮಗೆ ವಿಧಿಸಿದ ಕರ್ತವ್ಯವನ್ನು ಮಾಡಲೇಬೇಕು. ಅದೇ ಸರಿಯಾದ ದಾರಿ. ಕರ್ತವ್ಯವನ್ನು ಬಿಡುವುದರಿಂದಲೇ ಬದುಕಿನಲ್ಲಿ ಕ್ಲಿಷ್ಟತೆಗಳುಂತಾಗುತ್ತವೆ, ಆತ್ಮ ಸೊರಗುತ್ತದೆ. ಹಾಗೆ ಕರ್ತವ್ಯವನ್ನು ಮಾಡುವಾಗ ಮಾನಸಿಕ ಸಮತೋಲನವನ್ನು ಸಾಧಿಸಿಕೊಳ್ಳಬೇಕು. ಸ್ಥಿರವಿರದ ಮನಸ್ಸಿನಿಂದ ಕರ್ತವ್ಯಗಳನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವಿಲ್ಲ. ಆದರೆ ನಮ್ಮ ಮಾನಸಿಕ ಸಮತೋಲನವನ್ನು ಕದಡುವುದು ನಮ್ಮ
ಇಂದ್ರಿಯಗಳ ಮೂಲಕ ನಮ್ಮ ಒಳ ಹೊಗುವ ವಿಷಯಾಸಕ್ತಿಗಳೇ ಅಲ್ಲವೇ? ‘ಇರುವುದು ಇಲ್ಲದಂತೆ’ ಯೂ ‘ಇಲ್ಲದ್ದು ಇರುವಂತೆ’ ಯೂ ಕಾಣುವ ಈ ವಿಷಯಗಳೇ ನಮಗೆ ಉಂಟಾಗುವ ಭ್ರಮೆಗಳು.

ನಾವೆಲ್ಲರೂ ಒಂದಲ್ಲ ಒಂದು ರೀತಿ ಭ್ರಮಾಧೀನರು. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಭ್ರಮೆ . ಅದನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲವೆನ್ನುವಂತಿದೆ. ಸತ್ಯವಾವುದು ಭ್ರಮೆಯಾವುದು ಎಂದು ಅರಿಯಲಾಗದ ಸ್ಥಿತಿಯಲ್ಲೂ ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಒಂದೇ ಮಾರ್ಗವೆಂದರೆ, ಸತ್ಯವೋ, ಭ್ರಮೆಯೋ ಯಾವುದಕ್ಕೂ ಅಂಟದೇ ಇದ್ದರೆ, ಈ ಭ್ರಮಾಘಾತದಿಂದ ನಾವು ಪಾರಾಗಬಹುದು. ನಾವು ಮಾಡುತ್ತಿದ್ದೇವೆ ಅಥವಾ ನಾವು ಆಡುತ್ತಿದ್ದೇವೆ ಎನ್ನುವಂತಲ್ಲದೆ, ಜಗನ್ನಾಟಕ ಸೂತ್ರಧಾರಿಯ ನಿರ್ದೇಶನದಂತೆ ನಡೆದುಕೊಂಡರೆ, ಭ್ರಮೆಯಿಂದ ಮುಕ್ತರಾಗಬಹುದು. ಆದರೆ ಆ ದಿಕ್ಕಿನಲ್ಲಿ ನಾವು ನಮ್ಮದೇ ಆದಂತಹ ‘ ಸತ್ಯ’ವನ್ನು ಕಂಡುಕೊಳ್ಳಬೇಕು ‘ಸತ್ವ’ ವನ್ನು ಅಂತರಂಗಕ್ಕೆ ಇಳಿಸಿಕೊಳ್ಳಬೇಕು. ಅಲ್ಲದೆ ಯಾರೋ ತೋರಿದ ಮಾರ್ಗವನ್ನೋ ಯಾರದೋ ನಂಬಿಕೆಯನ್ನು ನಮ್ಮದೆಂಬಂತೆ ಪಾಲಿಸಿದರೆ, ಒಂದು ಭ್ರಮೆಯಿಂದ ಮತ್ತೊಂದು ಭ್ರಮೆಗೆ ಬಿದ್ದಂತಾಗುತ್ತದೆ.

ಬದುಕಿನೊಂದಿಗೆ ‘ನಂಟು’ ಇರಬೇಕು ಆದರೆ ‘ಅಂಟು’ ಇರಬಾರದು. ಅಂಟಿಕೊಳ್ಳದೆ ಇದ್ದರೆ, ಭ್ರಮೆಯನ್ನು ತೊರೆದು, ಸ್ಥಿರ ಮನಸ್ಕರಾಗಿ ‘ನಾವು ಮಾಯೆಯ ಕೈಯೊಳಗೆ ಒಂದು ಆಟದ ವಸ್ತು’ ವಾಗದೆ, ಸಂಪೂರ್ಣ ಅರಿವಿನಿಂದ ಆ ಮಾಯೆಯನ್ನು ಅರಿತು ಅದರೊಂದಿಗೆ ಆಟವಾಡಿಕೊಳ್ಳಬಹುದು. ಅಂತಹ ಸ್ಥಿತಿಯಲ್ಲಿ ‘ಭ್ರಮೆ’ಯಿಂದ ಮುಕ್ತರಾಗಿ ಪರಮಾತ್ಮ ತತ್ವದಲ್ಲಿ ಯುಕ್ತರಾಗಿರಬಹುದು. ಇದು ಸರಿಯಾದ ಮಾರ್ಗ. ಆದರೆ ನಮ್ಮ ಅಂತರಂಗ ಗಟ್ಟಿಯಾಗಿ, ಜಗತ್ತಿನ ಸೆಳೆತಗಳಿಗೆ ಬಲಿಯಾಗದೆ ಇರಬೇಕಾದರೆ ಸಾಧನೆ ಬೇಕು ಆ ಸಾಧನೆಗೆ ಹಲವಾರು ಮಾರ್ಗಗಳಿವೆ. ಯಾವುದಾದರೂ ಒಂದು ಮಾರ್ಗವನ್ನು ನಾವು ಆಯ್ಕೆ ಮಾಡಿಕೊಂಡು ವಿಚಲಿತರಾಗದೆ ಆ ಮಾರ್ಗದಲ್ಲಿ ಸಾಗಿದರೆ ಸಾಕು ಜೀವನ ಸಾರ್ಥಕವಾಗುತ್ತದೆ. " ಆಯುವನು ಸಾಗಿಸೆಲೋ" ಎಂದು ಡಿವಿಜಿಯವರು ಹೇಳುವ ರೀತಿಯಲ್ಲಿ ನಮ್ಮ ಆಯಸ್ಸನ್ನು ಕಳೆಯಲಾದರೆ ಅದೇ ಒಂದು ಸಾಧನೆಯಲ್ಲವೇ?

 

ರಸ ಚೆನ್ನುಡಿ

ಬದುಕಿನ ಸಮಸ್ಯೆಗಳು ಮಾರ್ಗದಂತ್ಯದ ಕುರುಹುಗಳಲ್ಲ
ಅವು ನಮ್ಮ ಮುನ್ನಡೆಯ ದಿಕ್ಸೂಚಿಗಳು – ಅನಾಮಿಕ