RSS

Monthly Archives: ಜನವರಿ 2015

ರಸಧಾರೆ – ೭೬೪

ಧನ್ಯ ಹೊಲೆಯರ ನಂದ; ಹಿಡಿದುದವನನು ಕನಸು ।
ಸ್ವರ್ಣಸಭೆಯ ಶೈವತಾಂಡವದ ಕನಸು ।।
ಅನ್ಯಚಿಂತೆಗಳನದು ಬಿಡಿಸುತವನಾತ್ಮವನು ।
ಚಿನ್ಮಯಕೆ ಸೇರಿಸಿತು – ಮಂಕುತಿಮ್ಮ ।।

ಹಿಡಿದುದವನನು= ಹಿಡಿದುದು+ಅವನನು, ಅನ್ಯಚಿಂತೆಗಳನದು=ಅನ್ಯ+ಚಿಂತೆಗಳನು+ ಅದು, ಬಿಡಿಸುತವನಾತ್ಮವನು=ಬಿಡಿಸುತ+ಅವನ+ಆತ್ಮವನು

ಅವನಿಗೆ ಸ್ವರ್ಣಸಭೆಯಲ್ಲಿ ಶಿವತಾಂಡವವನ್ನು ನೋಡುವ ಕನಸು. ಅನ್ಯ ಚಿಂತೆಗಳನ್ನು ಬಿಟ್ಟು ಕೇವಲ ಅದನ್ನೇ ಚಿಂತಿಸುತ್ತಿದ್ದನಾದ್ದರಿಂದ ಆ ದರುಶನದಿಂದಲೇ ಅವನ ಆತ್ಮಕ್ಕೆ ಮುಕ್ತಿ ಸಿಕ್ಕಿತು, ಅಂತಹ ‘ಹೊಲೆಯರ ನಂದ’ ಧನ್ಯ ಎಂದು ಏಕಾಗ್ರತೆಯಿಂದ ಪರತತ್ವವನ್ನು ಹೇಗೆ ಸಾಧಿಸಬಹುದು ಎಂದು ಒಂದು ಕತೆಯನ್ನು ಉದಾಹರಿಸಿ ತಿಳಿಸಲೆತ್ನಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ತಂಜಾವೂರಿನಲ್ಲಿ ‘ನಂದ’ ನೆಂಬುವವನಿದ್ದ. ಅವನು ವೃತ್ತಿಯಿಂದ ಹೊಲೆಯ ಆದರೆ ಪ್ರವೃತ್ತಿಯಿಂದ ಭಕ್ತ. ಅವನಿಗೆ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟ ಕೈಲಾಸದ ರಜತಗಿರಿಯಂತಹ ಬೃಹಧೀಶ್ವರ ದೇವಸ್ಥಾದಲ್ಲಿ ಶಿವನ ತಾಂಡವ ನೃತ್ಯವನ್ನು ನೋಡುವ ಕನಸು ಸದಾ ಕಾಲ. ಆದರೆ ಹೀನ ಕುಲ ಸಂಜಾತನೆಂದು ಅವನನ್ನು ಮಂದಿರದೊಳಕ್ಕೆ ಬಿಡಲೊಲ್ಲರು, ನಮ್ಮ ಕನ್ನಡದ ಕನಕದಾಸರಂತೆ. ಅವನ ಚಿಂತೆಯನ್ನು ನೋಡಲಾಗದೆ ಒಬ್ಬ ಅರ್ಚಕನ ಬೆನ್ನ ಮೇಲೆ ಅವನನ್ನು ತನ್ನಲ್ಲಿಗೆ ಕರೆಯಿಸಿಕೊಂಡು ಅವನಿಗೆ ಮುಕ್ತಿಯನ್ನಿತ್ತನು, ಶಿವ ಎನ್ನುವುದು ಕಥೆ. ಒಂದೇ ಚಿತ್ತದಿಂದ ಧ್ಯಾನಿಸು ಎನ್ನುವಂತೆ ‘ಅನನ್ಯಾಸ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೆ’ ಎನ್ನುತ್ತಾನೆ ಶ್ರೀ ಕೃಷ್ಣ. ಅನ್ಯ ಚಿಂತೆಗಳ ತೊರೆದು ಆ ಮೇರು ತತ್ವವನ್ನು ಪಡೆಯಲು ದೃಢವಾಗಿ ಇಚ್ಚಿಸಿದರೆ ಅದನ್ನು ಖಂಡಿತ ಪಡೆಯಬಹುದು.

ಒಂದು ಬೀಜಕ್ಕೆ ಮೊಳೆತು ಸಸಿಯಾಗಿ ಗಿಡವಾಗಿ ಮರವಾಗಿ ಹೆಮ್ಮರವಾಗುವ ಆಸೆ ಇರಬೇಕು. ತಾನಿರುವ ಭೂಮಿ ಬೆಚ್ಚಗೆ ಹಿತವಾಗಿದೆ ಎಂದು ಇದ್ದುಬಿಟ್ಟರೆ ಅದರ ಜೀವನ ವ್ಯರ್ಥವಾಗುತ್ತದೆ. ಭೂಮಿಯಲ್ಲಿರಬೇಕು, ಅದರ ಸಾರವನ್ನು ಹೀರಬೇಕು, ಬೆಳೆಯಬೇಕೆಂಬ ಆಸೆಯಿಂದ ಮೊಳೆಯಬೇಕು, ತನ್ನನ್ನು ಇಲ್ಲವಾಗಿಸಿಕೊಳ್ಳಬೇಕು, ಈ ಜಗತ್ತಿನಲ್ಲಿ ತನ್ನ ಬೆಳವಣಿಗೆಗೆ ಲಭ್ಯವಿರುವ ಎಲ್ಲಾ ಅಂಶಗಳನ್ನೂ ತನ್ನ ಶಕ್ತಿಯಿಂದಲೇ ಹೀರಿ ಬೆಳೆದು ಮರವಾಗಿ ಹೆಮ್ಮರವಾಗಬೇಕು. ಆಗ ಅದು ಲೋಕೊಪಯೋಗಿಯಾಗಿ ಜೀವಿಸುತ್ತದೆ. ಒಂದು ಸಣ್ಣ ಬೀಜ ಲೋಕೊಪಯೋಗಿಯಾಗಲು ಎಷ್ಟೆಲ್ಲಾ ಶ್ರಮ ಪಡಬೇಕು ಅಲ್ಲವೇ?

ಹಾಗೆಯೇ ನಾವು ಉತ್ತಮತೆಯಲ್ಲಿ ಬೆಳೆಯಬೇಕಾದರೆ, ಬಯಸಿದ್ದನ್ನು ಪಡೆಯಬೇಕಾದರೆ ಏಕಾಗ್ರಚಿತ್ತರಾಗಿರಬೇಕು. ಬೀಜದಂತೆ, ನಮ್ಮ ಸುತ್ತುಮುತ್ತಲವರಿಂದ, ಕಲಿತು ಸಾರವನ್ನು ಗ್ರಹಣ ಮಾಡಿ ಎತ್ತರಕ್ಕೆ ಬೆಳೆಯಬೇಕು, ಬೀಜ ತನ್ನನ್ನು ಹೇಗೆ ಇಲ್ಲವಾಗಿಸುತ್ತದೆಯೋ ಹಾಗೆಯೇ ನಾವು ಪಡೆದುಕೊಂಡ ಬಂದ ಆವಗುಣಗಳನ್ನು ತೊರೆದು ಕೇವಲ ‘ ಗುಣ ಗ್ರಹಣ ‘ ಮಾಡಿದರೆ ಮುಂದಕ್ಕೆ ಹೋಗಬಹುದು, ಬಯಸಿದ್ದನ್ನು ಸೇರಬಹುದು ಮೇರು ಶಿಖರವನ್ನೂ ಹತ್ತಬಹುದು ರಜತಗಿರಿಯಲ್ಲಿ ಶಿವತಾಂಡವವನ್ನೂ ನೋಡಬಹುದು.

Advertisements
 

ರಸ ಚೆನ್ನುಡಿ

ದಿನಕ್ಕೊಂದು ಚೆನ್ನುಡಿ

ಬದುಕೊಂದು ‘ನೇರ ಗೆರೆ’ ಯಲ್ಲ
ಅದನ್ನು ಮುನ್ನಡೆಸಿಕೊಂಡು ಹೋಗಲು ಬಹಳ ಶ್ರಮ ಪಡಬೇಕು – ಅನಾಮಿಕ

 

ರಸಧಾರೆ – ೭೬೩

ಮೇರುಪರ್ವತಕಿಹವು ನೂರೆಂಟು ಶಿಖರಗಳು।
ದಾರಿ ನೂರಿರಬಹುದು, ನಿಲುವ ಕಡೆ ನೂರು ।।
ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ ।
ಮೇರುಸಂಸ್ಕೃತಿಯೆ ಬಲ – ಮಂಕುತಿಮ್ಮ ।।

ಮೇರುಪರ್ವತಕಿಹವು=ಮೇರು+ಪರ್ವತಕೆ+ಇಹವು, ನೂರಿರಬಹುದು+ನೂರು+ಇರಬಹುದು, ಕೆಳೆಯಾಗಿರುತೆ=ಕೆಳೆ+ಆಗಿ+ಇರುತೆ,

ನಿಲುವ =ನಿಲ್ಲುವ, ಕೆಳೆ=ಸ್ನೇಹ, ಇರುತೆ=ಇರುತ್ತಾ

ಮೇರುಪರ್ವತಕ್ಕೆ ನೂರೆಂಟು ಶಿಖರಗಳು ಉಂಟು. ಅದನ್ನು ತಲುಪಲು ನೂರಾರು ದಾರಿಗಳಿರಬಹುದು. ದಾರಿಗುಂಟ ನೂರಾರು ತಂಗುದಾಣಗಳಿರಬಹುದು. ಅದನ್ನು ತಲುಪಲು ನಿನ್ನ ಪ್ರಯಾಣದಲ್ಲಿ ಸಹ ಯಾತ್ರಿಕರೊಡನೆ ಗೆಳೆತನವನ್ನು ಬೆಳೆಸಿಕೊಂಡು ಪ್ರಯಾಣಮಾಡು, ಆದರೆ ಮುಂದಕ್ಕೆ ಸಾಗಲು ಮೇರುವನ್ನು ತಲುಪುವ ಗುರಿಯೇ ನಿನಗೆ ಬಲಕೊಡುತ್ತದೆ ಎಂದು ಔನ್ನತ್ಯದ ನಮ್ಮ ಪ್ರಯಾಣ ಹೇಗಿರಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಮೇರುವೆಂದರೆ ಕೇವಲ ಒಂದು ಬೆಟ್ಟವಲ್ಲ ಅದು ನಾವು ತಲುಪಲು ಪ್ರಯತ್ನಿಸಬೇಕಾದ ಒಂದು ಅಂತರಂಗದ ಸ್ಥಿತಿ. ಅಂತರಂಗದಲ್ಲಿ ಉನ್ನತ ಸ್ಥಿತಿಯನ್ನು ತಲುಪಲು ಹಂತ ಹಂತವಾಗಿ ನಾವು ಮೇಲೇರಬೇಕಾದಾಗ ಒಂದೊಂದು ಹಂತವೂ ಒಂದೊಂದು ಶಿಖರ. ಆ ಹಂತಗಳನ್ನು ತಲುಪಲು ನಮಗೆ ನೂರಾರು ದಾರಿಗಳಿರುತ್ತದೆ. ಯಾವ ದಾರಿಯನ್ನು ನಾವು ಅನುಸರಿಸಿದರೂ ತಲುಪಬೇಕಾದ ಗುರಿಯೊಂದೇ ಆಗಿರಬೇಕು. ಜಗತ್ತಿನ ಪ್ರತೀ ಮನುಷ್ಯನೂ ಈ ಪ್ರಯಾಣದಲ್ಲಿ ಯಾವುದೋ ಒಂದು ಹಂತದಲ್ಲಿರುತ್ತಾರೆ. ಕೆಲವರು ಬಹಳ ದೂರ ಬಂದಿರುತ್ತಾರೆ ಮತ್ತೆ ಕೆಲವರು ಪ್ರಾರಂಭದ ಹಂತದಲ್ಲಿರುತ್ತಾರೆ. ಆದರೆ ಯಾರು ಎಷ್ಟು ಮುಂದೆ ಹೋಗಿದ್ದಾರೆ ಎಂದು ಹೇಳುವುದು ಸುಲಭವಲ್ಲ. ಏಕೆಂದರೆ ಇದು ಪ್ರತಿಯೊಬ್ಬರ ಅಂತರಂಗದ ಗುಟ್ಟು.

ತನ್ನ ಮೂಲವಾದ ಕಡಲನ್ನು ತೊರೆದು ಅಕಾಶಕ್ಕೇರಿ ಮಳೆಯಾಗಿ ಧರೆಗಿಳಿದು ಮತ್ತೆ ತನ್ನ ಮೂಲವನ್ನು ಸೇರುವ ಆಸೆಯಲ್ಲಿ ಓಡುವ ನದಿಯು ತನ್ನ ಮಾರ್ಗವನ್ನು ತಾನೇ ಸೃಷ್ಟಿಸಿಕೊಳ್ಳುತ್ತದೆ. ಹಾಗೆ ನಾವೂ ಔನ್ನತ್ಯಕ್ಕೆ ಸೇರುವ ನಮ್ಮ ಮಾರ್ಗವನ್ನು ನಾವೇ ಕಂಡುಕೊಳ್ಳಬೇಕು. ಆ ನದಿ ತನ್ನ ಹರಿವಿನ ಪಾತ್ರದ ಇಕ್ಕೆಲಗಳಲ್ಲಿರುವ ಎಲ್ಲರಿಗೂ ಶಾಂತಿ ಮತ್ತು ಸಾಂತ್ವನ ನೀಡುತ್ತಾ ಎಲ್ಲರ ಬದುಕಿಗೂ ಆಸರೆಯಾಗಿರುತ್ತಾ ತನ್ನ ಪ್ರಯಾಣವನ್ನು ಮುಂದುವರೆಸುತ್ತದೆಯಲ್ಲವೇ? ಹಾಗೆಯೇ ಔನ್ನತ್ತ್ಯಕ್ಕೇರಬೇಕೆನ್ನುವವನು ತನ್ನ ಸುತ್ತಲಿರುವ ಸಮಾಜದೊಂದಿಗೆ ಸ್ನೇಹದಿಂದ ಪ್ರೀತಿಯಿಂದ ಇದ್ದರೆ ಅವನ ಪ್ರಯಾಣ ಸುಗಮವಾಗುತ್ತದೆ. ನಮ್ಮ ಔನ್ನತ್ಯದ ಪ್ರಯಾಣಕ್ಕೆ ಸತ್ವದ ಮತ್ತು ಸತ್ಯದ ಬಲ ಬೇಕು. ಆ ಬಲ ನಮಗೆ ಯಾರಿಂದ ಮತ್ತು ಹೇಗೆ ಸಿಗುತ್ತದೆ ಎಂದು ಗೊತ್ತಿರುವುದಿಲ್ಲ, ಎಲ್ಲಿಂದ ಬೇಕಾದರೂ ಬರಬಹುದು. ಹಾಗಾಗಿ ಅಂತರಂಗದಲ್ಲಿ ಮೇರು ಎಂದರೆ ಉನ್ನತಿಯ ಗುರಿ, ದೃಷ್ಟಿ ಎಲ್ಲ ಇದ್ದರೂ ಹೊರಗೆ ಸಮಾಜ ಮುಖಿಯಾಗಿ ಏಲ್ಲರೊಡನೆ ಪ್ರೀತಿಯಿಂದ, ಸ್ನೇಹದಿಂದ ಇರಬೇಕು.

ಈ ಜಗತ್ತನ್ನು ತೊರೆದು ನಮಗೆ ಬೇರೆ ದಾರಿಯಿಲ್ಲ. ಇಲ್ಲಿನ ಎಲ್ಲದರೊಳಗಿದ್ದು, ಎಲ್ಲದರಿಂದ ಕಲಿತು ಸತ್ವವನ್ನು ಹೀರಿ, ಅಂಟನ್ನು ತೆಗೆದು, ಅಂತರಂಗದಲ್ಲಿ ನಂಟಿನ ಗಂಟನ್ನು ಬಿಡಿಸಿಕೊಂಡು ಮುಂದಕ್ಕೆ ಸಾಗಬೇಕು. ಪ್ರಯಾಣದ ಮಾರ್ಗವನ್ನು ಸವೆಸಬೇಕು, ‘ಗುರಿ’ ಮುಟ್ಟುವ ಆಸೆಯೇ ನಮ್ಮ ಪ್ರಯಾಣಕ್ಕೆ’ಬಲ’ ನೀಡುವಂತಿರಬೇಕು. ಇದು ಅವರವರ ಅನುಭವಕ್ಕೆ ಬರುವ ವಿಷಯ. ಮಾರ್ಗಗಳೆಷ್ಟಿದ್ದರೂ ನಡಿಗೆ ನಮ್ಮದೇ ತಾನೇ. ಶುದ್ಧ ಮತ್ತು ದೃಢ ಪ್ರಯತ್ನ ನಮ್ಮದಾದಲ್ಲಿ ನಾವು ಗುರಿಮುಟ್ಟುವುದು ನಿಸ್ಸಂದೇಹ.

 

ರಸ ಚೆನ್ನುಡಿ

‘ಸಕಲವನ್ನೂ ಕಳೆದುಕೊಂಡಾದ ಮೇಲೆ ನಮ್ಮ ಬೆಲೆ ಏನು?’ ಎನ್ನುವುದೇ

ನಮ್ಮ ಸಂಪತ್ತಿನ ನಿಜವಾದ ಮೌಲ್ಯ ಮಾಪನ – ಅನಾಮಿಕ

 

ರಸಧಾರೆ – ೭೬೨

ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ।
ಮೇರುವನು ಮರೆತಂದೆ ನಾರಕಕೆ ದಾರಿ ।।
ದೂರವಾದೊಡದೇನು ? ಕಾಲು ಕುಂಟಿರಲೇನು ।
ಊರ ನೆನಪೇ ಬಲವೋ – ಮಂಕುತಿಮ್ಮ ।।
ಗುರಿಯಿರಲಿ=ಗುರಿ+ಇರಲಿ, ಮರೆತಂದೆ=ಮರೆತ+ಅಂದೆ,ದೂರವಾದೊಡದೇನು=ದೂರವು+ಆದೊಡೆ+ಏನು, ಕುಂಟಿರಲೇನು=ಕುಂಟು+ಇರಲು+ಏನು

ಧಾರುಣಿ=ಭೂಮಿ, ಮೇರು=(ಪರ್ವತ) ಉನ್ನತ, ನಾರಕ=ನರಕ(ಜಗತ್ತಿನ ಕಷ್ಟಭರಿತವಾದ ಜೀವನ )

ಭೂಮಿಯ ಮೇಲೆ ನಾವು ಹುಟ್ಟಿ ಬದುಕುವಾಗ, ಗುರಿ ಉನ್ನತವಾಗಿರಲಿ. ಉನ್ನತವಾದ ಗುರಿಯನ್ನು ಮರೆತರೆ ಅದೇ ನರಕಕ್ಕೆ ದಾರಿ. ಉನ್ನತವಾದ ‘ಗುರಿ’ ದೂರವಾಗಿದ್ದರೇನು ಅಥವಾ ಅದನ್ನು ತಲುಪಲು ನಮ್ಮ ಕಾಲು ಕುಂಟಾಗಿದ್ದರೇನು, ನಮ್ಮ ಊರಿನ ನೆನಪೇ ನಮಗೆ ಅಲ್ಲಿಗೆ ತಲುಪಲು ಬಲವನ್ನು ಕೊಡುತ್ತದೆ ಎಂದು ಹೇಳುತ್ತಾ ಪಾರಮಾರ್ತ್ಯದ ಗುರಿಯಿರಬೇಕು ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ .

ನಾವು ಈ ಜಗತ್ತಿನಲ್ಲಿ ಹುಟ್ಟಿದ್ದೇವೆ ಎಂದಾದಮೇಲೆ, ಅನಿವಾರ್ಯವಾಗಿ ಬದುಕಲೇ ಬೇಕು. ಅದು ‘ಧಾರುಣಿಯ ನಡಿಗೆ’ . ಹಾಗೆ ಬದುಕುವಾಗ ನಮಗೆ ನಮ್ಮ ಸ್ವಂತ ಊರ ನೆನಪು ಬೇಕು. ಆ ನೆನಪಿನ ಮತ್ತು ಅಲ್ಲಿಗೆ ಸೇರುವ ಆಸೆಯಿಂದ, ಅಲ್ಲಿಗೆ ಸೇರಲೇಬೇಕೆಂಬ ಗುರಿಯಿಂದ ನಮ್ಮ ನಡಿಗೆ ನಮ್ಮನ್ನು ಉತ್ತಮದೆಡೆಗೆ ಕೊಂಡು ಹೋಗುವಂತಿರಬೇಕು. ಮೇರುವೆಂದರೆ ಅತ್ಯುನ್ನತ ಶಿಖರ. ಆದರೆ ನಾವು ಇಲ್ಲಿ ಭೂಮಿಯ ಮೇಲೆ ನಿಂತು ನೋಡಿದರೆ ಅದು ಬಹಳ ದೂರದಲ್ಲಿದ್ದಹಾಗೆ, ಅದನ್ನು ಹತ್ತುವುದು ಮತ್ತು ಅದರ ಶಿಖರ ತಲುಪುವುದು ಬಹಳ ಕಷ್ಟವೆನಿಸುತ್ತದೆ. ಆದರೆ ಅದನ್ನು ತಲುಪುವ ಆಸೆ ಬಲವಾಗಿದ್ದರೆ ದೂರವೆನಿಸಿದರೂ ಕಷ್ಟವೆನಿಸಿದರೂ, ಆ ಆಸೆಯೇ ನಮ್ಮನ್ನು ಅಲ್ಲಿಗೆ ಕೊಂಡು ಹೋಗುತ್ತದೆ.

‘ಮೇರುವನು ಮರೆತಂದೆ ನಾರಕಕೆ ದಾರಿ’ ಎಂದಿದ್ದಾರೆ ಗುಂಡಪ್ಪನವರು. ನಮ್ಮೆಲ್ಲರ ಮೂಲವೇ ಪರತತ್ವ ಮತ್ತು ಆ ಪರತತ್ವವನ್ನು ಸೇರುವುದೇ ಗುಂಡಪ್ಪನವರು ಹೇಳುವ’ ಮೇರುವಿನ ಗುರಿ’. ಆ ಗುರಿಯನ್ನು ಮರೆತು ನಾವು ಈ ಜಗತ್ತಿನ ಜೀವನದ ಜಂಜಾಟದಲ್ಲಿ ಸಿಲುಕಿ ಇದರ ಸೆಳೆತಗಳನ್ನೇ ಸುಂದರವೆಂದು ಭಾವಿಸುತ್ತಾ ಕಷ್ಟಗಳ, ಚಿಂತೆಗಳ, ಹಿಂಸೆಗಳ ವೃತ್ತದಲ್ಲೇ ತಿರುತಿರುಗುತ್ತಾ ಬದುಕುವುದು ನರಕ ಅಲ್ಲವೇ?. ಆದರೆ ಇದನ್ನು ಬಿಟ್ಟು ಬೇರೆಲ್ಲಿಗೆ ಹೋಗುವುದು ಎನ್ನುವ ದ್ವಂದ್ವವೂ ಮನದಲ್ಲಿ ಉಂಟಾಗುತ್ತದೆ. ಆಗ ಬರಬೇಕು ನಮಗೆ ನಮ್ಮ ‘ಊರ ‘ ನೆನಪು ಮತ್ತು ಇಲ್ಲಿ ತೊರೆದು ಅಲ್ಲಿಗೆ ಹೋಗವ ಆಸೆ. ಆದರೆ ಅದು ಬಹಳ ‘ ದೂರ’ ವೆಂದೆನಿಸುತ್ತದೆ ಮತ್ತು ಅಲ್ಲಿಗೆ ಹೋಗಲು ನಮಗೆ ಸಾಕಷ್ಟು ಬಲವಿಲ್ಲವೆಂದೆನಿಸುತ್ತದೆ. ಸ್ವಲ್ಪಸ್ವಲ್ಪವಾಗಿ ಕ್ರಮಿಸುತ್ತಾ ಹೋದಂತೆ ಯಾವುದೇ ದೂರವೂ ಹತ್ತಿರವಾಗುವಂತೆ ಇಚ್ಛೆ ಬಲವಾಗಿದ್ದರೆ ಎಂತಹ ಕಷ್ಟತರವಾದ ಕೆಲಸವನ್ನೂ ಮಾಡಲು ಬಲ ಬರುವಂತೆ, ಆ ಮೇರುವನ್ನು ತಲುಪಲು ನಮಗೆ ನಮ್ಮ ಪೂರ್ವಜರು ಹಲವಾರು ಮಾರ್ಗಗಳನ್ನು ತೋರಿದ್ದಾರೆ. ಇಲ್ಲಿಂದ ಬಿಡಿಸಿಕೊಂಡು ಅಲ್ಲಿಗೆ ಹೋಗುವ ಪ್ರಭಲ ಇಚ್ಛೆ ಇದ್ದರೆ ಆ ಇಚ್ಛೆಯೇ ನಮ್ಮನ್ನು ಅಲ್ಲಿಗೆ ಸೇರಿಸುತ್ತದೆ. .

" ಅಲ್ಲಿದೆ ನಮ್ಮ ಮನೆ ನಾನೇಕೆ ಬಂದೆ ಸುಮ್ಮನೇ ‘ ಎನ್ನುತ್ತಾರೆ ಪುರಂದರದಾಸರು. ಮಾಯಾಜಾಲದಿಂದ ಕೂಡಿದ ಈ ಜಗತ್ತು ನಾ ‘ಸೇರಿದ’ ಮನೆ ಆದರೆ ಅಲ್ಲಿದೆ ನನ್ನ ‘ತವರು’ ಬೇರೆ ಇದೆ. ಇಲ್ಲಿ ಏನೇನನ್ನೋ ಅಂಟಿಸಿಕೊಂಡುಬಿಟ್ಟಿದ್ದೇನೆ, ಇದನ್ನೆಲ್ಲಾ ತೊಳೆದುಕೊಂಡು ಅಲ್ಲಿಗೆ ಹೋಗಬೇಕು ಎನ್ನುವ ಭಾವವನ್ನು ಒಬ್ಬ ಕವಿ ವ್ಯಕ್ತಪಡಿಸುತ್ತಾನೆ. ಅಂತಹ ಇಚ್ಛೆ ಇರಬೇಕೆನ್ನುವುದೇ ಮಾನ್ಯ ಗುಂಡಪ್ಪನವರ ಆಶಯ. ನಮ್ಮ ಇಚ್ಛೆ ಬಲವಾಗಿದ್ದರೆ ಮತ್ತು ನಾವು ದೃಢ ಪ್ರಯತ್ನಪಟ್ಟರೆ ಅದು ದೂರವಾದರೂ ನಮ್ಮ ಕಾಲು ಕುಂಟಾದರೂ, ಒಂದಲ್ಲ ಒಂದು ದಿನ ಅಲ್ಲಿಗೆ ಸೇರಬಹುದು. ಆದರೆ ಇದು ಜನ್ಮಜನ್ಮಾಂತರದಲ್ಲಿ ಆಗುವ ಪ್ರಕ್ರಿಯೆ. ಆ ದಿಕ್ಕಿನಲ್ಲಿ ಪ್ರಯತ್ನವಿದ್ದರೆ ಸಾಕು. ಎಂದೋ ಒಂದು ದಿನ ಅಲ್ಲಿಗೆ ತಲುಪಬಹುದು.

 

ರಸ ಚೆನ್ನುಡಿ

‘ಬಂಧನವೋ – ಬಿಡುಗಡೆಯೋ’ – ಆಯ್ಕೆಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ನಮಗಿದೆ.
ನಮ್ಮ ಆಯ್ಕೆಯಂತೆ ಮನಸ್ಸು ಮತ್ತು ಮನಸ್ಸಿನಂತೆ ಜೀವನವಿರುತ್ತದೆ. – ಅನಾಮಿಕ

 

ರಸಧಾರೆ – ೭೬೧

ಲೋಚನದ ಸಂಚಾರ ಮುಖದ ಮುಂದಕಪಾರ ।
ಗೋಚರಿಪುದೇನದಕೆ ತಲೆಯ ಹಿಂದಣದು ।।
ಪ್ರಾಚೀನ ಹೊರತು ಸ್ವತಂತ್ರ ನೀಂ, ಸಾಂತವದು ।
ಚಾಚು ಮುಂದಕೆ ಮನವ – ಮಂಕುತಿಮ್ಮ ।।

ಮುಂದಕಪಾರ=ಮುಂದಕೆ+ಅಪಾರ, ಗೋಚರಿಪುದೇನದಕೆ=ಗೋಚರಿಪುದೇನು+ಅದಕೆ, ಸಾಂತವದು=ಸಾಂತವು+ಅದು

ಲೋಚನ=ಕಣ್ಣು, ಹಿಂದಣದು =ಹಿಂದಿನದು, ಪ್ರಾಚೀನ=ಗತಿಸಿಹೋದ ಕಾಲದ್ದು, ಸಾಂತವು=ಅಂತ್ಯದಿಂದ ಕೂಡಿದ್ದು,

ಕಣ್ಣುಗಳ ನೋಟದ ವ್ಯಾಪ್ತಿ ಮುಖದ ಮುಂದಕ್ಕೆ ಬಹಳ ಅಪಾರವಾದದ್ದು. ಆದರೆ ಅದಕ್ಕೆ ತಲೆಯ ಹಿಂದಿನದು ಕಾಣುವುದೇನು? ಇಲ್ಲ . ಹಾಗೆಯೇ ಗತಿಸಿಹೋದ ಪ್ರಾಚೀನ ವಿಷಯಗಳೆಲ್ಲವು ಮುಗಿದುಹೋದ ವಿಷಯಗಳು . ಅವುಗಳನ್ನು ತೊರೆದರೆ ನೀನು ಸ್ವತಂತ್ರನಾಗುತ್ತೀಯೆ. ಹಾಗಾಗಿ ನಿನ್ನ ಮನವನ್ನು ಮುಂದಕ್ಕೆ ತೆಗೆದುಕೊಂಡು ಹೋಗು ಎಂದು ಆದೇಶಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಪ್ರತೀ ಪ್ರಾಣಿಗೂ ಒಂದು ಕತ್ತು ಮತ್ತು ಆ ಕತ್ತಿನ ಮುಂಬಾಗದ ಮೇಲ್ಬಾಗದಲ್ಲಿ ಒಂದು ಜೊತೆ ಕಣ್ಣುಗಳು. ಅವುಗಳ ನೋಟದ ವ್ಯಾಪ್ತಿ ಮುಂದಕ್ಕೆ. ಕತ್ತನ್ನು ಎರಡೂ ಬದಿಯಲ್ಲಿ ಕೇವಲ ೪೫ ಡಿಗ್ರೀ ಕೋನದಲ್ಲಿ ತಿರುಗಿಸಿ ನೋಡಬಹುದಷ್ಟೇ. ತಲೆಯ ಹಿಂದಿನದು ಕಾಣುವುದೇ ಇಲ್ಲ. ಮುಂದಿನ ನೋಟದ ವ್ಯಾಪ್ತಿ ಅನಾಯಾಸವಾಗಿ ಬೆಳೆಯುತ್ತಾ ಹೋಗುತ್ತದೆ ಆದರೆ ಹಿಂದಿನದು ಆಯಾಸಪಟ್ಟರೂ ಕಾಣಲಾಗುವುದಿಲ್ಲ. ಇದು ನಮ್ಮ ಭೌತಿಕ ಕಣ್ಣುಗಳ ಮಿತಿ. ಪ್ರಕೃತಿಯಿಂದ ನಿಯತವಾದ ಇದನ್ನು ನಮ್ಮ ಮನಸ್ಸಿನ ಯೋಚನೆ ಮತ್ತು ಆಲೋಚನೆಗಳಿಗೆ ಅನ್ವಯಿಸಿದರೆ ಆಗ ಗತವನ್ನು ನೆನೆದು ಪರಿತಪಿಸುವ ಮನಸ್ಸು ನಮ್ಮದಾಗಿರುವುದಿಲ್ಲ.

ಆದರೆ ನಮ್ಮ ಮನಸ್ಸಿನ ಕಣ್ಣುಗಳಿಗೆ ಯಾವರೀತಿಯ ಮಿತಿಯೂ ಇಲ್ಲ. ೩೬೦ ಡಿಗ್ರೀ ಸುತ್ತುತ್ತವೆ. ಹಿಂದಿನದನ್ನು ನೆನೆಯುತ್ತದೆ ಮತ್ತು ಮುಂದಿನದನ್ನು ಯೋಜಿಸುತ್ತಾ (planning ) ಇರುತ್ತದೆ. ಅನಿಯಂತ್ರಿತವಾಗಿ ಹುಚ್ಚು ಕುದುರೆಯಂತೆ ಅದರ ಓಟ. ಇದನ್ನು ನಿಯಂತ್ರಿಸಲು ನಮ್ಮ ಎಲ್ಲ ಎಲ್ಲ ವಿದ್ಯಾಭ್ಯಾಸ, ನಿಯಮ, ನಿಷ್ಠೆ, ಅನುಷ್ಠಾನಗಳು, ವೇದ, ಶಾಸ್ತ್ರ, ಪುರಾಣ ಭಗವದ್ಗೀತಾದಿಗಳು ದೃಷ್ಟಾಂತದ ಮೂಲಕ ವಿವರಿಸಿ ಹೇಳಿವೆ. ನಮ್ಮ ಹರಿದಾಸರು ‘ ಹರಿದಾಡುವಂತಾ ಮಾನವ ನಿಲಿಸುವುದು ಬಲು ಕಷ್ಟ ‘ ಎಂದು ಘೋಷಿಸಿದ್ದಾರೆ. ಸದಾಕಾಲ ಯಾವುದೋ ಗತಿಸಿಹೋದ ವಿಚಾರಗಳು ನಮ್ಮನ್ನು ಜಗ್ಗಿ ಜಗ್ಗಿ ಮುನ್ನಡೆಯಲು ಬಿಡದೆ ಇದ್ದರೆ ನಮಗೆ ‘ಸ್ವಾತಂತ್ರ್ಯ’ ವೆಲ್ಲಿರುವುದು ಹೇಳಿ. ಮಾನ್ಯ ಗುಂಡಪ್ಪನವರೂ ಸಹ " ಪ್ರಾಚೀನ ಹೊರತು ಸ್ವತಂತ್ರ ನೀಂ’ ಎಂದು ಹೇಳುತ್ತಾ ಗತಿಸಿಹೋದ ವಿಷಯಗಳ ಸೆಳೆತ ಅಥವಾ ಸುಳಿಯಿಂದ ನೀನು ಹೊರಬಂದರೆ ಮಾತ್ರ ನೀನು "ಸ್ವತಂತ್ರನು" ಎಂದು ಹೇಳಿದ್ದಾರೆ.

ಹಾಗಾಗಿ ಸಾಂತವಾದ, ಎಂದರೆ ಅಂತ್ಯಗೊಂಡ ವಿಚಾರಗಳನ್ನು ಮತ್ತೆ ಮತ್ತೆ ಕೆದಕಿ ಕೆದಕಿ ಆಜೀವನಪರ್ಯಂತ ನೋವನನುಭವಿಸುವುದಕ್ಕಿಂತ, ಮನಸ್ಸಿನಿಂದ ಅವುಗಳನ್ನು ಅಳಿಸಿ ಹಾಕಿ ‘ಮುಂದಕ್ಕೆ ನೋಡುವುದು ಮತ್ತು ಓಡುವುದು’ ಮಾಡಿದರೆ ಗತದ ಕೊಂಡಿಗಳನ್ನು ಕಳಚಿಕೊಂಡು ಸ್ವತಂತ್ರನಾಗಿ ಬಿಲ್ಲಿನಿಂದ ಬಿಟ್ಟ ಬಾಣದಂತೆ ತನ್ನ ಗುರಿಯನ್ನು ಮುಟ್ಟಲು ಸಾಗಬಹುದು. ಹಾಗಲ್ಲದೆ ಗತಕ್ಕೇ ಅಂಟಿಕೊಂಡಿದ್ದರೆ, ಗೂಟಕ್ಕೆ ಕಟ್ಟಿದ ದನದಂತೆ ಅಲ್ಲೇ ಸುತ್ತುತ್ತಾ ಇರಬಹುದು. ‘ಬಂಧನವೋ – ಬಿಡುಗಡೆಯೋ’ ಎರಡರಲ್ಲಿ ಆಯ್ಕೆಮಾಡಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ನಮಗಿದೆ. ಯಾರು ಯಾವುದನ್ನು ಆಯ್ದುಕೊಂಡರೆ ಅವರ ಜೀವನ ಹಾಗಿರುತ್ತದೆ. ಮುಂದೆ ಮುಖದಲ್ಲಿ ಕಣ್ಣನ್ನಿಟ್ಟ, ಆ ಪರಮಾತ್ಮನ ಸೃಷ್ಟಿಯ ಉದ್ದೇಶ್ಯವನ್ನು ಅರ್ಥಮಾಡಿಕೊಂಡು, ಮುನ್ನಡೆಯುವುದು ನಮ್ಮ ಕೈಯಲ್ಲೇ ಇದೆ ಅಲ್ಲವೇ?