RSS

Monthly Archives: ಫೆಬ್ರವರಿ 2015

ರಸಧಾರೆ – ೭೮೭

ಶೀತಾಳೆ ಸಿಡುಬು ಶಿಶುಗಳ ಕಲುಕಿ ತೆರಳುವುದು ।
ಪ್ರೀತಿ ಕಾಮನೆಗಳಷ್ಟಿಷ್ಟು ಬೆಳೆದವರ ।।
ಯಾತನೆಗಳಿಂ ಕುದಿಸಿ ಕುಲುಕಿ ಬಳಿಕಾರುವುವು ।
ಕಾತರತೆ ಕಳೆಯೆ ಸುಖ – ಮಂಕುತಿಮ್ಮ ।।

ಕಾಮನೆಗಳಷ್ಟಿಷ್ಟು=ಕಾಮನೆಗಳು+ಅಷ್ಟಿಷ್ಟು, ಬಳಿಕಾರುವುವು=ಬಳಿಕ+ಆರುವುವು

ಕಲುಕಿ =ಅಲುಗಾಡಿಸಿ, ಯಾತನೆಗಳಿಂ=ನೋವಿನಿಂದ, ಕಾತರತೆ=ಆತಂಕ

ಮಕ್ಕಳಿಗೆ ಸಿಡುಬು ಶೀತಾಳೆಗಳಂತಹ ಖಾಯಿಲೆಗಳು ಬಂದು, ಅವರನ್ನು ಒಂದು ಬಾರಿ ನಡುಗಿಸಿ ಮತ್ತೆ ಬಾರದಂತೆ ಹೊರಟು ಹೋಗುತ್ತವೆ. ದೊಡ್ಡವರನ್ನು ಪ್ರೀತಿ, ಆಸೆಗಳಂತಹ ಭಾವಗಳು ಒಂದು ರೋಗದಂತೆ ಹಿಡಿದು ಯಾತನೆಗೊಳಪಡಿಸುತ್ತದೆ. ಕೆಲಕಾಲ ಅಲುಗಾಡಿಸಿ ಮತ್ತೆ ಆರಿಹೋಗುತ್ತವೆ. ಹಾಗಿ ಆರಿ ನಮ್ಮಲ್ಲಿನ ಕಾತರತೆ ಕಡಿಮೆಯಾದರೆ ಅದೇ ಸುಖ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಮಕ್ಕಳಿಗೆ ಬರುವ ಈ ಸಿಡುಬು ಶೀತಾಳೆಗಳು ಕೇವಲ ದೃಷ್ಟಾಂತಗಳಷ್ಟೆ. ನಮ್ಮ ಮನಸ್ಸುಗಳಲ್ಲಿ ಬುಗ್ಗೆ ಬುಗ್ಗೆಯಾಗಿ ಪುಟಿದು ಏಳುವ ಕಾಮನೆಗಳ ಸರಮಾಲೆಗಳಂತೆ ಇವುಗಳು. ತಮ್ಮ ಪ್ರಭಾವ ಬೀರಿ ನಮ್ಮನ್ನು ಪ್ರಚೋದಿಸಿ, ನಾನಾ ದಿಕ್ಕುಗಳಿಗೆ ನಮ್ಮನ್ನು ಹುಚ್ಚರಂತೆ ಓಡಿಸುವ ಈ ಕಾಮನೆಗಳಿಗೆ ಅಂತ್ಯವೇ ಇರುವುದಿಲ್ಲ. ನಮ್ಮ ಇಂದ್ರಿಯಗಳ ಮೂಲಕ ಈ ಜಗತ್ತಿನೊಂದಿಗೆ ನಂಟು ಏರ್ಪಟ್ಟಮೇಲೆ, ಕಾಮನೆಗಳು ಸಹಜ. ಆದರೆ ಅವುಗಳು ನಮ್ಮ ಸಂತೋಷಕ್ಕಿರಬೇಕೇ ಹೊರತು ನಮ್ಮನ್ನು ಹಿಡಿದು ಪೀಡಿಸುವುದಕ್ಕಲ್ಲ. ತೀರ ಗಾಢವಾದ ಛಾಯೆಯನ್ನು ಬಿಟ್ಟುಹೋಗುವ ಶೀತಾಳೆ ಸಿಡುಬುಗಳಂತೆ, ನಮ್ಮ ಸ್ವಭಾವದ ಮೇಲೆ ತನ್ನ ಮುದ್ರೆಯನ್ನು ಒತ್ತಿಯೇ ಹೋಗುತ್ತದೆ. ಒಂದು ಸಲ ಕಾಮನೆಗಳು ನಮ್ಮೊಳಗೆ ನುಗ್ಗಿದ ಮೇಲೆ, ಅವುಗಳ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಬಾಲ್ಯದಲ್ಲಿ ಶೀತಾಳೆ ಸಿಡುಬಗಳಿಂದ ಪೀಡಿತರಾಗಿದ್ದವರು ಬೆಳೆದಂತೆ ಹೇಗೆ ಅದರ ಪ್ರಭಾವದ ಛಾಯೆಯಿಂದ ಕ್ರಮೇಣ ಹೊರಬರುತ್ತಾರೋ, ಅದೇ ರೀತಿ ಅಂತರಂಗದ ಬೆಳವಣಿಗೆಯ ಪ್ರಾಥಮಿಕ ಹಂತದಲ್ಲಿರುವವರು ಕಾಮ ಕ್ರೋದಾಧಿಗಳು, ರಾಗ ದ್ವೇಷಾಧಿಗಳಿಂದ ಪ್ರೇರಿತರಾದ, ಪೀಡಿತರಾದ ಸ್ವಾಭಾವವುಳ್ಳವರಾಗಿದ್ದರೂ, "ಬೆಳೆದವರ " ಎಂದು ಗುಂಡಪ್ಪನವರು ಹೇಳುವಂತೆ, ಓದು, ವಿದ್ಯಾಬ್ಯಾಸ, ಅಭ್ಯಾಸ, ಸಾಧನೆಗಳಿಂದ ವ್ಯಕ್ತಿ ಬೆಳೆದಾಗ, ಅವುಗಳು ಮಾಡಿದ ‘ರಭಸ’ ದ ಪ್ರಭಾವದಿಂದ ಹೊರಬಂದು, ಕಾತರತೆ ಕಡಿಮೆಯಾಗಿ, ಮನಸ್ಸು ಶಾಂತವಾಗುತ್ತದೆ, ಎನ್ನುತ್ತಾರೆ ಮಾನ್ಯ ಡಿವಿಜಿಯವರು.

ನಮ್ಮನ್ನು ಹಿಡಿದು ಪೀಡಿಸುವ ಅರಿಷಡ್ವರ್ಗಗಳ ಪ್ರಭಾವದಿಂದ ಹೊರಬರಬೇಕಾದರೆ ನಾವು ಬೆಳೆಯಬೇಕು, ಅಂತರಂಗದಿಂದ ಪಕ್ವವಾಗಬೇಕು, ನಮ್ಮನ್ನು ಮಾನಸಿಕವಾಗಿ ಪ್ರಕ್ಷುಬ್ಧಗೊಳಿಸುವ, ನಮ್ಮನ್ನು ಅಲುಗಾಡಿಸುವ, ನಡುಗಿಸುವಂತಹ ಅವಗಳ ಕ್ಷುಲ್ಲಕತೆಯಿಂದ ಮೇಲೇರಿ ಉದಾತ್ತತೆಯನ್ನು ಬೆಳೆಸಿಕೊಂಡು, ಪ್ರಯತ್ನಪೂರ್ವಕವಾಗಿ ಸಾಧಿಸಿ, ನಮ್ಮ ಮನಸ್ಸನ್ನು ಶಾಂತವಾಗಿಸಿಕೊಂಡರೆ, ಅದು ನಿಜವಾದ ಸುಖವನ್ನು ನೀಡುತ್ತದೆ. ‘ಕುದ್ದು ಆವಿಯಾಗುವ್ದಕ್ಕಿಂತ ಆರಿ ತಣ್ಣಗಾಗುವುದು’ ಉತ್ತಮವಲ್ಲವೇ?

Advertisements
 

ರಸ ಚೆನ್ನುಡಿ

ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಮಗೇ ಶಕ್ತಿ ಮತ್ತು ಯೋಗ್ಯತೆ ಇದೆ

ಅದರ ಪರಿಹಾರಕ್ಕೆ ಅನ್ಯರಲ್ಲಿಗೆ ಹೋದರೆ ನಮ್ಮ ಬಲಹೀನತೆಯನ್ನು ತೋರಿದಂತಾಗುತ್ತದೆ – ಅನಾಮಿಕ

 

ರಸ ಚೆನ್ನುಡಿ

ತಮ್ಮ ಯೋಚನೆಯ ರೀತಿಯನ್ನು ಬದಲಿಸಿ

ತಮ್ಮ ಬದುಕನ್ನೇ ಬದಲಿಸಿಕೊಳ್ಳಬಲ್ಲ ಶಕ್ತಿಯೇ
ಮಾನವ ಜಾತಿಯ ಬಹು ದೊಡ್ಡ ಆವಿಷ್ಕಾರ – ಆನಾಮಿಕ

 

ರಸಧಾರೆ – ೭೮೬

ಅಂತವೆಲ್ಲಕುಮಿರುವುದಿರಲಿ; ವಿಷಯೇಂದ್ರಿಯದ ।
ಸಂತಾಪವುಂ ಮುಗಿವುದೆಂಬುದಲ ಪುಣ್ಯ ।।
ಎಂತೋ, ನಿನ್ನಾಜ್ಞೆಯಿನೊ, ತಾಂ ಸೋತೋ, ಬೇಸತ್ತೋ ।
ಶಾಂತಿವಡೆಯಲಿ ಕರಣ – ಮಂಕುತಿಮ್ಮ ।।

ಅಂತವೆಲ್ಲಕುಮಿರುವುದಿರಲಿ=ಅಂತವು+ಎಲ್ಲಕುಂ+ಇರುವುದು+ಇರಲಿ, ಮುಗಿವುದೆಂಬುದಲ=ಮುಗಿವುದು+ಎಂಬುದು+ಅಲ, ಶಾಂತಿವಡೆಯಲಿ=ಶಾಂತಿ+ಅಡೆಯಲಿ

ಕರಣ=ಅಂಗಾಂಗಗಳು.

ಎಲ್ಲಕ್ಕೂ ಒಂದು ಅಂತ್ಯವಿದೆ ಎನ್ನುವ ವಿಚಾರ ಒತ್ತಟ್ಟಿಗಿರಲಿ. ವಿಷಯಾಸಕ್ತಿಯಿಂದ ಇಂದ್ರಿಯಗಳು ಪಡುವ ದುಃಖಕ್ಕೆ ಒಂದು ಅಂತ್ಯವುಂಟು ಎನ್ನುವುದೇ ಪುಣ್ಯ. ಆ ಅಂತ್ಯ ಹೇಗಾದರೂ ಆಗಬಹುದು, ನೀನೇ ಇಂದ್ರಿಯ ನಿಗ್ರಹ ಮಾಡಬಹುದು ಅಥವಾ ಅವುಗಳೇ ಸೋತು ಹೋಗಬಹುದು ಅಥವಾ ಅನುಭವಿಸಿದ್ದು ಸಾಕಾಗಿ ಬೇಸತ್ತುಹೋಗಬಹುದು. ಹೇಗಾದರಾಗಲಿ ಇಂದ್ರಿಯಗಳ ಪ್ರಚೋದನೆಯಿಂದ ನಿರಂತರ ಕ್ರಿಯೆಯಲ್ಲಿ ಮಗ್ನರಾದ ಅಂಗಾಂಗಗಳು ಶಾಂತವಾದರೆ ಸಾಕು ಎಂದು ಬದುಕಿನಲ್ಲಿ ನಾವು ಪಡೆಯಬೇಕಾದ ನಿಜವಾದ ಶಾಂತಿಯ ಸ್ವರೂಪವನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೇ ನಮ್ಮನ್ನು ಈ ಜಗತ್ತಿಗೆ ಅಂಟಿಸಿ ಇಟ್ಟಿರುವುದು. ಅವುಗಳು ಇಂದ್ರಿಯಗಳ ಮೂಲಕ ಒಳಗೆ ನುಗ್ಗುತ್ತವೆ, ನಮ್ಮನ್ನು ಅಲುಗಾಡಿಸುತ್ತವೆ. ನಮಗೆ ಅವುಗಳ ಒಳ ಹರಿವಿನ ಪ್ರವಾಹವನ್ನು ತಡೆದುಕೊಳ್ಳಲಾಗಲೀ ಅಥವಾ ಅವುಗಳನ್ನು ಧಾರಣೆ ಮಾಡಲಾಗಲೀ ಶಕ್ತಿಯಿಲ್ಲ ಅಥವಾ ಶಕ್ತಿಯನ್ನು ನಾವು ಬೆಳೆಸಿಕೂಂಡಿಲ್ಲ. ಹಾಗಾಗಿ ನಾವು ಜರ್ಝರಿತ. ಈಗಾಗಲೇ ಮುದ್ರಿಸಲ್ಪಟ್ಟಿರುವ ಜ್ಞಾಪಕಗಳು, ಪುಟಿದೆದ್ದು ತಾಂಡವವಾಡುವ ಮನಸ್ಸು, ಕಂಡದ್ದನ್ನೆಲ್ಲಾ ಬಯಸುವ, ಕೇಳಿದ್ದಕ್ಕೆಲ್ಲಾ ಪ್ರತಿಕ್ರಯಿಸುವ ಮನಸ್ಸು, ಹೀಗೆ ಈ ಇಂದ್ರಿಯಗಳು ನಮ್ಮ ಮನಸ್ಸಿನ ಮೇಲೆ ತಮ್ಮ ಪ್ರಭಾವವನ್ನು ಬೀರಿ ನಮ್ಮನ್ನು ತೀರ ಅಶಾಂತ ಸ್ಥಿತಿಗೆ ತಳ್ಳುತ್ತವೆ. ಅಶಾಂತ ಮನಸ್ಸಿನ ಸಹಾಯದಿಂದ ಪರತತ್ವವನ್ನು ಅನುಸಂಧಾನ ಮಾಡಲು ಸಾಧ್ಯವಿಲ್ಲ. ಹಾಗಾಗಿ ಇಂದ್ರಿಯಗಳು ಶಾಂತವಾಗಬೇಕು.

ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ, ದೇಹವನ್ನು ‘ ರಥಂ ವಿದ್ಧಿ’ ಎಂದು ಹೇಳಿ, ಈ ರಥದ ಸಾರಥಿಯೇ ಬುದ್ಧಿ ಅಥವಾ ವಿವೇಕ, ಮನಸ್ಸು,ಕುದುರೆಗಳಿಗೆ ಹಾಕಿರುವ ಲಗಾಮು, ಓಡುವ ಕುದುರೆಗಳೇ ಇಂದ್ರಿಯಗಳು ಮತ್ತು ರಥದಲ್ಲಿ ಕುಳಿತ ಯಜಮಾನನೇ ‘ ಆತ್ಮ’ ಎನ್ನುತ್ತಾನೆ. ಎಲ್ಲಿಯತನಕ ಲಗಾಮು ಸಾರಥಿಯ ಹಿಡಿತದಲ್ಲಿ ಭದ್ರವಾಗಿ ಇರುತ್ತದೆಯೋ, ಅಲ್ಲಿಯ ತನಕ ಕುದುರೆಗಳು, ಯಜಮಾನ ಸೇರಬೇಕಾದ ಸ್ಥಳದ ದಿಕ್ಕಿಕ್ಕೆ ಓಡುತ್ತವೆ. ಹಾಗಲ್ಲದೆ ಇದ್ದರೆ, ಕುದುರೆಗಳು ಎತ್ತ ಓಡಿದರೆ, ಯಜಮಾನ ಅಲ್ಲಿಗೆ ಸೇರುತ್ತಾನೆ. ಪರತತ್ವವನ್ನು ಅರಿಯುವ ಪ್ರಯತ್ನದಲ್ಲಿ ಇಂದ್ರಿಯಗಳು ಮನಸ್ಸಿನ ಮೂಲಕ, ವಿವೇಕದ ಹಿಡಿತದಲ್ಲಿ ಇದ್ದರೆ,ಅವುಗಳ ನಡೆಯೂ ಶಾಂತವಾಗಿ ಇದ್ದು ಆತ್ಮಕ್ಕೆ ಹಿತ ಮತ್ತು ಶಾಂತಿ ದೊರೆಯುತ್ತದೆ.

ಪ್ರಕೃತಿ ಪ್ರೇರಿತವಾದ ಇಂದ್ರಿಯಗಳು ನಮ್ಮ ಮೇಲೆ ಬೀರುವ ಪ್ರಭಾವವನ್ನು ನಿಯಂತ್ರಿಸಲು ನಮ್ಮ ಪೂರ್ವಜರು ನಮಗೆ ಹಲವಾರು ಮಾರ್ಗಗಳನ್ನು ತೋರಿದ್ದಾರೆ. ಯಾವ ಮಾರ್ಗವನ್ನು ಬೇಕಾದರೂ ಅನುಸರಿಸಿ ನಮ್ಮ ಗಮ್ಯವನ್ನು ನಾವು ಸೇರಬಹುದು. ನಾವು ಸ್ವ-ಇಚ್ಚೆಯಿಂದ ಮನಸ್ಸನ್ನು ನಿಗ್ರಹಿಸಿ ಇಂದ್ರಿಯ ನಿಗ್ರಹವನ್ನು ಮಾಡಬಹುದು ಅಥವಾ ಅತಿ ಪ್ರವೃತ್ತಿಯಿಂದ, ಸೋತು, ರೋಗ ರುಜಿನಗಳಿಗೆ ತುತ್ತಾಗಿಯೂ ಇಂದ್ರಿಯಗಳು ಸುಮ್ಮನಾಗಬಹುದು ಅಥವಾ ಅಶಾಶ್ವತವಾದ ಇಂದ್ರಿಯ ಸುಖಗಳಲ್ಲಿ ಜಿಗುಪ್ಸೆಯುಂಟಾಗಿ, ಅದರಿಂದ ವಿಮುಖರಾಗಬಹುದು. ಹೇಗೇ ಆದರೂ ನಮ್ಮ ಇಂದ್ರಿಯಗಳು ‘ಪ್ರವೃತ್ತಿಯಿಂದ ನಿವೃತ್ತಿ’ ಹೊಂದಿ ಶಾಂತವಾದರೆ, ಆಗ ಮನಸ್ಸು ಬುದ್ಧಿಗಳು ಪರತತ್ವದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸೂಕ್ತ ಭೂಮಿಕೆಯಾಗುತ್ತದೆ. ಅಂತಹ ಭೂಮಿಕೆ ನಮ್ಮೊಳಗೆ ಸಿದ್ಧವಾದರೆ ನಾವು ಪುಣ್ಯವಂತರೆಂದೇ ಭಾವಿಸಿಕೊಳ್ಳಬೇಕು.

 

ರಸ ಚೆನ್ನುಡಿ

ನಿನ್ನೆಯಲ್ಲಿ ಬದುಕುತ್ತಾ, ನಾಳೆಗಾಗಿ ಕಾಯುತ್ತಿದ್ದರೆ, ಇಂದನ್ನು ಖಂಡಿತ ಕಳೆದುಕೊಳ್ಳುತ್ತೇವೆ – ಅನಾಮಿಕ

 

ರಸಧಾರೆ – ೭೮೫

ಕುಂದದೆಂದಿಗುಮೆನ್ನಿಸುವ ಮನದ ಕಾತರತೆ ।
ಯೆಂದೊ ತಾನೇ ಬಳಲಿ ತಣ್ಣಗಾಗುವುದು ।।
ಮಂದದಾ ಕಾರ್ಮೋಡ ಬಿರಿದು ರವಿ ಬೆಳಗುವನು ।
ಅಂದಿನಾ ಸುಖವೆ ಸುಖ – ಮಂಕುತಿಮ್ಮ ।।

ಕುಂದದೆಂದಿಗುಮೆನ್ನಿಸುವ =ಕುಂದದು+ಎಂದಿಗುಂ+ಎನ್ನಿಸುವ,

ಕಾತರತೆ=ಚಿಂತೆ, ಕಳವಳ

ದಪ್ಪ ಮತ್ತು ದಟ್ಟವಾದ ಕಾರ್ಮೋಡ, ಮಳೆ ಸುರಿದೋ ಅಥವಾ ಗಾಳಿಯ ಆರ್ಭಟಕ್ಕೋ ಚದುರಿಹೋಗಿ, ಸೂರ್ಯನ ಬೆಳಕು ಮತ್ತೆ ಬೆಳಗುವಂತೆ, ಎಂದಿಗೂ ಕಡಿಮೆಯಾಗುವುದೇ ಇಲ್ಲವೇನೋ ಎನ್ನುವ ಮನಸ್ಸಿನ ಕಳವಳ, ಕಾತರತೆ, ತಾನೇ ತಾನಾಗಿ ಕಡಿಮೆಯಾಗಿ ಮನಸ್ಸಿಗೆ ನಿರಾಳವಾದಾಗ ನಮಗಾಗುವ ಸುಖವೇ, ನಿಜವಾದ ಸುಖ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ.

ಈ ಜಗತ್ತಿನಲ್ಲಿ ಸಮಸ್ಯೆ, ತೊಂದರೆ, ಕಷ್ಟಗಳು ಇಲ್ಲದ ವ್ಯಕ್ತಿಯೇ ಸಿಗುವುದಿಲ್ಲ, ಅಲ್ಲವೇ. ಎಲ್ಲರಿಗೂ ಯಾವುದೋ ಒಂದು ರೀತಿಯ ಸಮಸ್ಯೆ. ಕೆಲವರಿಗೆ ದೊಡ್ಡದು ಕೆಲವರಿಗೆ ಚಿಕ್ಕದು. ಬಲಹೀನರಾದವರಿಗೆ ಸಣ್ಣ ಸಮಸ್ಯೆಯೂ ಅತಿಯಾದ ಕಷ್ಟಕ್ಕೆ ಕಾರಣ, ಶಕ್ತಿವಂತರಿಗೆ ದೊಡ್ಡ ಸಮಸ್ಯೆಯೂ ನಗಣ್ಯ. ಕೆಲವರಿಗೆ ಸ್ವಲ್ಪಕಾಲದ ಕಷ್ಟ, ಮತ್ತೆ ಕೆಲವರಿಗೆ ಕಷ್ಟವೇ ಬದುಕೆಲ್ಲ. ಕೆಲವರಿಗೆ ಇಲ್ಲದ ಸಮಸ್ಯೆಯ ಕುರಿತು ಕಳವಳ. ಕೆಲವರು ಸಕಲ ಸಮಸ್ಯೆಗಳ ನಡುವೆಯೂ ಮಾನಸಿಕರಾಗಿ ನಿರಾಳ. ಕೆಲವರಿಗೆ ಬದುಕಿನ ಆದಿಯಲ್ಲಿ ಅತಿಯಾದ ಕಷ್ಟಗಳು ಬಂದು ಸ್ವಲ್ಪ ಸಮಯದಲ್ಲೇ ಅವುಗಳೆಲ್ಲಾ ತೀರಿ ಬದುಕು ಸುಗಮ, ಕೆಲವರಿಗೆ ಬದುಕೆಲ್ಲ ನಿರಾಳವಾಗಿ ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಅಸಹನೀಯವಾದ ಕಷ್ಟಗಳ ಸುರಿಮಳೆ, ಕೆಲವರಿಗೆ ಮಧ್ಯಂತರದಲ್ಲಿ ಕಷ್ಟಗಳ ಸರಮಾಲೆ, ಕೆಲವರಿಗೆ ಬದುಕಿನುದ್ದಕ್ಕೂ ಕಷ್ಟಗಳ ಸರಮಾಲೆ ಮತ್ತೆ ಕೆಲವರಿಗೆ ಬದುಕೇ ಸುಖದ ಸುಪ್ಪತ್ತಿಗೆ. ಇದೇ ಬದುಕಿನ ಚಿತ್ರ.

ಕೆಲವರಿಗೆ ಕೆಲ ರೀತಿಯ ಕಷ್ಟಗಳು ಏಕೆ ಬರುತ್ತವೆ? ಎಂದು ಯೋಚಿಸಿದರೆ ನಮಗೆ ಸೂಕ್ತ ಉತ್ತರ ಸಿಗುವುದೇ ಇಲ್ಲ. ವಿಧಿ, ಕರ್ಮ, ಪಾಪ, ಪುಣ್ಯ ಎಂದು ಏನನ್ನುಬೇಕಾದರೂ ಕಾರಣವಾಗಿ ನೀಡಬಹುದು. ಆದರೆ ಅದಾವುದೂ ಆಗದೆ ನಮ್ಮ ಅರಿವಿಗೆ ಬಾರದ ಬೇರೇನೋ ಕಾರಣವಿರಬಹುದು. ಜೀವನದಲ್ಲಿ ಕಷ್ಟಗಳನ್ನು ಅನುಭವಿಸುವಾಗ ‘ ಅಯ್ಯೋ ಇದು ಎಂದಿಗೂ ಮುಗಿಯುವುದೇ ಇಲ್ಲವೇ’ ಎಂದು ಕಾತರತೆಯಿಂದ ಇರುವಾಗ, ಸ್ವಪ್ರಯತ್ನದಿಂದಲೋ, ಭಗವದ್ಕೃಪೆಯಿಂದಲೋ ಅಥವಾ ಮತ್ಯಾವುದೋ ಕಾರಣದಿಂದ ಬವಣೆಗೆ ಮುಕ್ತಿ ಸಿಕ್ಕರೆ ಕವಿದಿರುವ ಕಾರ್ಮೋಡ ಚದುರಿ ಸೂರ್ಯನ ಬೆಳಕು ಹರಿದಂತೆ ಅಲ್ಲವೇ? ಕಷ್ಟಗಳು ಪರಿಹಾರವಾಗಿಯಾದರೂ ನೆಮ್ಮದಿ ಸಿಗಬಹುದು ಅಥವಾ ಕಷ್ಟಗಳನ್ನು ಅನುಭವಿಸುವ ದೃಢವಾದ ಮಾನಸಿಕ ಶಕ್ತಿಯಿಂದ ಕಾತರತೆ ಕಡಿಮೆಯಾಗಬಹುದು ಅಥವಾ ಧೀರ್ಘಕಾಲ ಅನುಭವಿಸಿ, ಕಷ್ಟಗಳನ್ನು ತಡೆದುಕೊಂಡು, ಅನುಭವಿಸುವ ಅಭ್ಯಾಸವಾಗಿಬಿಡಬಹುದು. ಹೇಗೋ ಒಂದು ರೀತಿ ಕಾತರತೆ ಕಡಿಮೆಯಾಗಬಹುದು.

ಒಟ್ಟಿನಲ್ಲಿ ಕಷ್ಟ ಕರಗದೆ ಇದ್ದರೂ, ಕಾತರತೆ, ಕಳವಳ ಚಿಂತೆಗಳು ಕರಗಿದರೆ, ಅದರಿಂದ ಮನಸ್ಸಿಗೆ ನಿರಾಳವಾದರೆ ಸಾಕಲ್ಲವೇ? ‘ಈಸಬೇಕು, ಈಸಿ ಜಯಿಸಬೇಕು ‘ ಎನ್ನುವಂತೆ ಕಷ್ಟ ಬಂದರೂ ಸುಖ ಬಂದರೂ ಬದುಕನ್ನು ಬಿಡಲಾಗುವುದಿಲ್ಲ ಆದರೆ ಕಾರ್ಮೋಡದಂತೆ ಕಷ್ಟಗಳು ನಮ್ಮನ್ನು ಪೀಡಿಸುವಾಗ ಪರತತ್ವದ ಚಿಂತನೆ ಮತ್ತು ನಿರ್ಲಿಪ್ತತೆಯಿಂದ ಕೂಡಿದ ವಿರಕ್ತಿಯಿಂದ ಬದುಕಿನಲ್ಲಿ ಬೆಳಕನ್ನು ಕಾಣಬಹುದು.

 

ರಸ ಚೆನ್ನುಡಿ

ಎಂದಾದರೂ ನಮ್ಮಲ್ಲಿ ‘ಅನ್ಯಾಯ’ವನ್ನು ತಡೆಯುವ ಶಕ್ತಿ ಇಲ್ಲವಾಗಬಹುದು.
ಆದರೆ ಎಂದೂ ಅನ್ಯಾಯವನ್ನು ‘ವಿರೋಧಿಸುವ’ ಇಚ್ಛೆ ಮತ್ತು ಶಕ್ತಿಯ ಅಭಾವವಾಗಬಾರದು – ಅನಾಮಿಕ