RSS

Monthly Archives: ಮಾರ್ಚ್ 2015

ರಸಧಾರೆ – ೮೦೭

ಜಗದ ಕಲ್ಯಾಣದೊಳಗಾತ್ಮ ಕಲ್ಯಾಣವನು ।
ಜಗದ ಬೀದಿಗಳೊಳು ನಿಜಾತ್ಮಯಾತ್ರೆಯನು ।।
ಜಗದ ಜೀವಿತದಿ ನಿಜಜೀವಿತದ ಪೂರ್ತಿಯನು ।
ಬಗೆಯಲರಿತವನೆ ಸುಖಿ – ಮಂಕುತಿಮ್ಮ ।।

ಕಲ್ಯಾಣದೊಳಗಾತ್ಮ=ಕಲ್ಯಾಣದ+ಒಳಗೆ+ಆತ್ಮ, ಬೀದಿಗಳೊಳು=ಬೀದಿಗಳ+ಒಳು, ನಿಜಾತ್ಮಯಾತ್ರೆಯನು=ನಿಜ+ಆತ್ಮ+ಯಾತ್ರೆಯನು, ಬಗೆಯಲರಿತವನೆ=ಬಗೆಯಲು+ಅರಿತವನೆ.

ಕಲ್ಯಾಣ=ಉದ್ಧಾರ, ಅಭಿವೃದ್ಧಿ, ಪೂರ್ತಿಯನು=ಪರಿಪೂರ್ಣತೆಯನ್ನು, ನಿಜಜೀವಿತದ= ವೈಯಕ್ತಿಕ ಬದುಕಿನ ಬಗೆಯಲು=ಭಾವಿಸಲು

ಜಗತ್ತಿನ ಕಲ್ಯಾಣದೊಳು ಆತ್ಮ ಕಲ್ಯಾಣವನು, ಜಗತ್ತಿನ ಬೀದಿಗಳಲ್ಲಿ ನಿಜ ಆತ್ಮ ಯಾತ್ರೆಯನು, ಜಗತ್ತಿನ ಬದುಕಿನಲ್ಲಿ ವೈಯಕ್ತಿಕ ಬದುಕಿನ ಪರಿಪೂರ್ಣತೆಯನ್ನು ಕಾಣಬಲ್ಲವನೇ ಸುಖಿ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ತಾನು ಈ ಜಗತ್ತಿನಿಂದ ಬೇರೆ ಅಲ್ಲ, ತಾನು ಈ ಜಗತ್ತಿನ ಒಂದು ಭಾಗ, ಈ ಜಗತ್ತು ಉದ್ಧಾರವಾದರೆ ನನ್ನ ಉದ್ಧಾರವೂ ಆಗುತ್ತದೆ, ಎಂದು ಬಗೆಯಬೇಕು ಎನ್ನುವುದು ಇಲ್ಲಿನ ಆಶಯ. ತಾನೊಬ್ಬ ಉದ್ಧಾರವಾಗುವುದಕ್ಕಿಂತ ತಾನು ಎಲ್ಲರಲಿ ಒಂದಾದರೆ ಎಲ್ಲರ ಏಳಿಗೆ ತನ್ನ ಏಳಿಗೆಗೂ ಹೇತುವಾದೀತು ಎಂದು ಅರಿತವನು ಸಮಾಜಮುಖಿಯಾಗುತ್ತಾನೆ. ತಾನು ಇತರರಿಗಿಂತ ಬೇರೆ, ಭಿನ್ನ ಎನ್ನುವುದನ್ನು ಮರೆಯುತ್ತಾನೆ. ಅವನು ಸಮುಷ್ಠಿ ಸಾಧನೆಯಿಂದ ವ್ಯಕ್ತಿಯುದ್ಧಾರವನ್ನು ಬಯಸುತ್ತಾನೆ. ಕೇವಲ ಸ್ವಾರ್ಥಪೂರಿತ ಪೈಪೋಟಿಯಿಂದಲೇ ಕೂಡಿರುವ ಈ ಜಗತ್ತಿನಲ್ಲಿ ಸಾಮಾನ್ಯವಾಗಿ ನಮಗೆ ಕಾಣಸಿಗದ, ಉನ್ನತ ಭಾವ

ಇನ್ನು ನಾವು ಓಡಾಡುವಾಗ ನಮಗೆ ಬಹಳಷ್ಟು ಜನರು ಕಾಣುತ್ತಾರೆ. ನಾವು ಕಾಣುವುದು ಬೇರೆ ಬೇರೆ ರೂಪಗಳನ್ನು. ಆದರೆ ಆ ರೂಪಗಳನ್ನೆಲ್ಲ ಧರಿಸಿರುವುದು ‘ಒಂದೇ ಚೇತನ’ ಎನ್ನುವ ಭಾವನೆ ಬಂದಾಗ ನಮ್ಮಲ್ಲಿ ರೂಪಬೇಧವಳಿಸಿ ಏಕಾತ್ಮ ಭಾವ ಮೂಡುತ್ತದೆ. ಆದರೆ ಜಗತ್ತಿನಲ್ಲಿದ್ದಮೇಲೆ ಇಲ್ಲಿನ ರೂಪಗಳನ್ನು ನೋಡದೆ ಮತ್ತು ಆ ರೂಪಗಳನ್ನು ಗುರುತಿಸದೆ ಇರುವುದು ಹೇಗೆ? ಎಂದು ಕೇಳಿದರೆ, ರೂಪಗಳು ಕೇವಲ ಹೊರ ರೂಪ ಅದರಲ್ಲಿ ಬೇಧವಿದೆ ಮತ್ತು ಇದ್ದೇ ಇರುತ್ತದೆ. ಆದರೆ ಒಳರೂಪವನ್ನು ಕಂಡಾಗ ಅಂತರಂಗದ ಚೈತನ್ಯ ಯಾವ ರೂಪವೂ ಇಲ್ಲದೆ, ಜಗತ್ತು ಒಂದು ಆತ್ಮಗಳ ಜಾತ್ರೆ ಅಥವಾ ಉತ್ಸವದಂತೆ ನಮಗೆ ಕಂಡೀತು.

ನಮ್ಮ ವ್ಯಕ್ತಿಗತ ಜೀವನಕ್ಕೆ ಅತಿಯಾದ ಮಹತ್ವವನ್ನು ನೀಡಿ ‘ನಾನೊಬ್ಬ ಚೆನ್ನಾಗಿದ್ದರೆ ಸರಿ ಈ ಜಗತ್ತಿನಿಂದ ನನಗೇನೂ ಆಗಬೇಕಿಲ್ಲ’ ಎನ್ನುವುದು ಮೂರ್ಖತನ. ಅಂತಹವರು ‘ತಾವೂ ಈ ಜಗತ್ತಿನಲ್ಲೇ ಇದ್ದೇವೆ’ ಎನ್ನುವುದನ್ನು ಮರೆತಿರುತ್ತಾರೆ. ನಾವು ‘ನಮಗೇ’ ಅಂಟಿಕೊಂಡಿದ್ದರೆ , ಸದಾಕಾಲ ನಮ್ಮದೇ ಚಿಂತೆಯಲ್ಲಿ ಮುಳುಗಿದ್ದರೆ, ವೈಯಕ್ತಿಕ ಅಪೇಕ್ಷೆಗಳು ಅಧಿವಾಗಿ, ನೋವು ತಪ್ಪಿದ್ದಲ್ಲ. ಹಾಗಲ್ಲದೆ, ನಮ್ಮ ಮನೋಭಾವ ವಿಶಾಲವಾದರೆ ನಮ್ಮ ಬಾಹುಗಳೂ ವಿಶಾಲವಾಗಿ ಇಡೀ ಜಗತ್ತನ್ನೇ ತಬ್ಬಿಕೊಳ್ಳುವ ಕ್ಷಮತೆ ನಮ್ಮದಾಗುತ್ತದೆ. ಹೀಗೆ ಭಾವ ವೈಶಾಲ್ಯತೆಯನ್ನು ಅನುಸಂಧಾನಮಾಡಿದ ವ್ಯಕ್ತಿಗೆ ಜಗತ್ತಿನಿಂದ ವ್ಯಕ್ತಿಗತ ಅಪೇಕ್ಷೆಗಳಿಲ್ಲದ ಕಾರಣ, ನಿರಾಸೆಯಿಲ್ಲದೆ, ನೋವಿಲ್ಲದೆ ಆನಂದವಾಗಿರುತ್ತಾನೆ. ಹಾಗೆ ಜೀವಿಸಲರಿತವನೇ " ಸುಖಿ" ಎನ್ನುತ್ತಾರೆ ಮಾನ್ಯ ಗುಂಡಪ್ಪನವರು. ಹಾಗೆ ಬದುಕಲರಿಯುವ ತನಕ ನಮಗೂ ಜಗತ್ತಿನ ‘ದುಃಖ’ ತಪ್ಪಿದ್ದಲ್ಲ, ಅಲ್ಲವೇ?

Advertisements
 

ರಸ ಚೆನ್ನುಡಿ

ಜಗತ್ತನ್ನು ಕಣ್ಣಿನಿಂದ ಅಲ್ಲದೆ, ಹೃದಯದಿಂದ ನೋಡಿದರೆ
ನಮ್ಮ ಕಣ್ಣುಗಳು ನೋಡುವ ಜಗತ್ತೇ ಬೇರೆಯಾಗಿರುತ್ತದೆ – ಅನಾಮಿಕ

 

ರಸಧಾರೆ – ೮೦೬

ಗರ್ವಪಡದುಪಕಾರಿ, ದರ್ಪ ಬಿಟ್ಟಧಿಕಾರಿ ।
ನಿರ್ವಿಕಾರದ ನಯನದಿಂ ನೋಳ್ಪುದಾರಿ ।।
ಸರ್ವಧರ್ಮಾಧಾರಿ, ನಿರ್ವಾಣಸಂಚಾರಿ ।
ಉರ್ವರೆಗೆ ಗುರುವವನು – ಮಂಕುತಿಮ್ಮ ।।

ಗರ್ವಪಡದುಪಕಾರಿ=ಗರ್ವಪಡದ+ಉಪಕಾರಿ, ಬಿಟ್ಟಧಿಕಾರಿ=ಬಿಟ್ಟ+ಅಧಿಕಾರಿ, ನೋಳ್ಪುದಾರಿ=ನೋಳ್ಪ +ಉದಾರಿ

ನೋಳ್ಪ=ನೋಡುವ, ನಿರ್ವಾಣ=ಪರತತ್ವದಲ್ಲಿ ತನ್ಮಯತೆ, ಉರ್ವರೆಗೆ=ಜಗದ ಜನರಿಗೆ,

ಉಪಕಾರ ಮಾಡಿ ತಾನು ಮಾಡಿದೆನೆಂಬ ಗರ್ವ ಪಡದವನು, ಅಧಿಕಾರವಿದ್ದರೂ ದರ್ಪವನು ತೋರದವನು, ನಿರ್ವಿಕಾರದಿಂದ ಜಗವನ್ನು ನೋಡುವ ಉದಾರಿ, ಎಲ್ಲ ಧರ್ಮಗಳನ್ನೂ ಧರಿಸಿರುವವನು ಮತ್ತು ಮಾನಸಿಕವಾಗಿ ಪರತತ್ವದಲ್ಲಿ ನಿಂತು ನಿರ್ವಾಣದಲ್ಲಿರುವವನು ಈ ಜಗತ್ತಿಗೆ ಗುರುವಂತೆ ಇರುವನು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

ಪರತತ್ವವನ್ನು ಅನುಸಂಧಾನಮಾಡಿ ತನ್ನೊಳಗೆ ಅದನ್ನು ಸಂಪೂರ್ಣವಾಗಿ ತುಂಬಿಕೊಂಡವನು ಜಗತ್ತಿನ ಎಲ್ಲದರಲ್ಲೂ ಅದನ್ನೇ ಕಾಣುವ ಸ್ಥಿತಿಗೆ ತಲುಪಿ ‘ತುಳುಕದ ತುಂಬಿದ ಕೊಡ’ ದಂತೆ ನಿಗರ್ವಿಯಾಗಿರುತ್ತಾನೆ. ಅವನು ತನ್ನ ಸುತ್ತಲಿರುವವರಿಗೆ ಮಾದರಿಯಾಗಿರುತ್ತಾನೆ. ಜ್ಞಾನಾಧಿಕಾರವನ್ನು ಪಡೆದಿದ್ದರೂ, ವಿನಯಪೂರ್ಣನಾಗಿರುವುದರಿಂದ ಯಾರ ಮೇಲೂ ದರ್ಪವನ್ನು ತೋರುವುದಿಲ್ಲ. ಬೇಧಭಾವದಿಂದ ಉಂಟಾಗುವ ಕಾಮಾದಿಗಳಿಂದ ಉಂಟಾಗುವ ಮನೋವಿಕಾರಗಳಿಗೆ ಅತೀತನಾಗಿರುತ್ತಾನೆ. ಪರತತ್ವದ ಧರ್ಮವನ್ನು ಧಾರಣೆ ಮಾಡಿರುತ್ತಾನಾದ್ದರಿಂದ ಅವನು ಎಲ್ಲ ಧರ್ಮಗಳಿಗೂ ಆಧಾರನಾಗಿರುತ್ತಾನೆ.

ಹೀಗೆ ಗರ್ವರಹಿತನಾಗಿ, ದರ್ಪರಹಿತನಾಗಿ, ಜ್ಞಾನಪೂರಿತನಾಗಿ, ವಿನಯವಂತನಾಗಿ, ವಿಕಾರರಹಿತನಾಗಿರುತ್ತಾನಾದ್ದರಿಂದ ಅವನು ಎಲ್ಲರಿಗೂ ಅನುಸರಣೀಯನಾಗಿರುತ್ತಾನೆ. ತಾನು ಇಂತಹ ಸುಗುಣಗಳನ್ನು ಹೊಂದಿರುವುದಷ್ಟೇ ಅಲ್ಲ, ತನ್ನ ಆಲೋಚನೆ ಮತ್ತು ಕ್ರಿಯೆಗಳಲ್ಲಿ ಅವುಗಳನ್ನು ತೋರುತ್ತಾ, ಅವನನ್ನು ಆಶ್ರಯಿಸಿದವರಿಗೆ ಜ್ಞಾನ ಬಿಟ್ಟರೆ ಬೇರೇನೂ ಸಿಗುವುದಿಲ್ಲವಾದ್ದರಿಂದ, ಜ್ಞಾನ ಮತ್ತು ತನ್ಮೂಲಕ ಪರತತ್ವವನ್ನು ಅರಸಿವವನಿಗೆ ಗುರು ಸಮಾನನಾಗಿರುತ್ತಾನೆ. ಸದ್ಧಿಲ್ಲದೆ ತನ್ನ ಸಾಧನೆಯನ್ನು ಮಾಡುತ್ತಾ ಇತರರಿಗೆ ಉಪಕಾರ ಮಾಡುತ್ತಿರುತ್ತಾನೆ.

ಅಂತಹ ವ್ಯಕ್ತಿ ಆ ಸ್ಥಿತಿಗೆ ತಲುಪಲು, ಜಗತ್ತಿನ ಅಂಟನ್ನು ತೊರೆದು, ಆ ಆಂಟಿನೊಂದಿಗೆ ಬರುವ ಎಲ್ಲ ರೀತಿಯ ಮನೋವಿಕಾರಗಳನ್ನೂ ಕ್ರಮೇಣ ತೊರೆದು, ಸದ್ವಿಚಾರ, ಸದಾಚಾರ ಮತ್ತು ಸತ್ಸಂಗಗಳಿಂದ ಜಗತ್ತಿನ ಮಮಕಾರವನ್ನು ಮೀರಿ ಜ್ಞಾನದ ಶಿಖರದಲ್ಲಿ ನಿಲ್ಲುತ್ತಾನೆ. " ಅಭ್ಯಾಸೇನ ತು ಕೌಂತೇಯ ‘ ಎಂದು ಶ್ರೀ ಕೃಷ್ಣಾ ಹೇಳುವಂತೆ ದೃಢ ನಿಶ್ಚಯ, ಅಭ್ಯಾಸ ಮತ್ತು ಸಾಧನೆಯಿಂದ ಅಂತಹ ಸ್ಥಿತಿಗೆ ತಲುಪಬಹುದು. ಇದು ಎಲ್ಲರಿಗೂ ಸಾಧ್ಯ. ಪರತತ್ವದ ವಿಚಾರದಲ್ಲಿ ಮುಳುಗಿ ಅಲ್ಲಿ ಸಿಗುವ ನಿತ್ಯಾನಂದವನ್ನು ಅನುಭವಿಸಬೇಕೆನ್ನುವವರು ಪ್ರಯತ್ನ ಪಡಬೇಕು, ಪ್ರಯತ್ನ ನಿರಂತವಾಗಿರಬೇಕು. ಕಷ್ಟವಾದರೂ ಅಸಾಧ್ಯವಲ್ಲ.

 

ರಸ ಚೆನ್ನುಡಿ

ಜೀವನದಲ್ಲಿ ಉತ್ತುಂಗಕ್ಕೇರಲು ನಾವು ಪಟ್ಟ ಶ್ರಮದ

ಕಾಲು ಭಾಗ ಸಾಕು, ಅಲ್ಲಿಂದ ಜಾರಿ ಅಧೋಗತಿಗೆ ಬೀಳಲು – ಅನಾಮಿಕ

 

ರಸಧಾರೆ – ೮೦೫

ಸಾರ್ವಭೌಮನು ಸೃಷ್ಟಿಯೊಳಗದೊರ್ವನೆ ಕಾಣೊ ।
ಸರ್ವವನು ತನ್ನಾತ್ಮವೆಂದು ಬದುಕುವನು ।।
ನಿರ್ವಿಕಾರಾನತರಂಗದಿ ಜಗವ ಧರಿಸುವನು ।
ಸರ್ವಮಂಗಳನವನು – ಮಂಕುತಿಮ್ಮ ।।

ಸೃಷ್ಟಿಯೊಳಗದೊರ್ವನೆ=ಸೃಷ್ಟಿ+ಒಳಗೆ+ಅದು+ಒರ್ವನೆ, ತನ್ನಾತ್ಮವೆಂದು=ತನ್ನ+ಆತ್ಮ+ಎಂದು, ನಿರ್ವಿಕಾರಾನತರಂಗದಿ=ನಿರ್ವಿಕಾರನು+ಅಂತರಂಗದಿ, ಸರ್ವಮಂಗಳನವನು=ಸರ್ವಮಂಗಳನು+ಅವನು

ಒರ್ವನೆ=ಒಬ್ಬನೇ,

ಯಾವುದೇ ರೀತಿಯ ಮನೋವಿಕಾರಗಳಿಲ್ಲದೆ, ಜಗತ್ತಿನಲ್ಲಿ ಸಂಚರಿಸುವ ಚೇತನವೇ ತನ್ನ ಆತ್ಮವೆಂದು, ಜಗತ್ತನ್ನು ಧಾರಣೆಮಾಡಿದವನು, ಸಕಲ ರೀತಿಯಲ್ಲೂ ಮಂಗಳಮಯನಾಗಿರುತ್ತಾನೆ ಮತ್ತು ಅವನೇ ಸಾರ್ವಭೌಮನು ಎಂದು ಉಲ್ಲೇಖಮಾಡಿದ್ದಾರೆ, ಈ ಮುಕ್ತಕದಲ್ಲಿ.

ಇಷ್ಟ-ಅನಿಷ್ಟ, ಸುಖ-ದುಃಖ, ಆಸೆ- ನಿರಾಸೆ, ಪ್ರೀತಿ-ದ್ವೇಷ, ರಕ್ತಿ ಮತ್ತು ವಿರಕ್ತಿ ಮುಂತಾದವುಗಳ ಪರಿಧಿಯನ್ನು ದಾಟಿ, ಎಲ್ಲೆಗಳನ್ನು ಮೀರಿ ಇಡೀ ಜಗತ್ತೇ ತಾನು ಮತ್ತು ತನ್ನೊಳಗೆ ಸಕಲ ಜಗತ್ತು ಎಂದು ಯಾರು ಇರುತ್ತಾರೋ, ಅವರಲ್ಲಿ ಸತ್ಯವಾದ ಮತ್ತು ನಿಜವಾದ ‘ಆನಂದ’ ಬಿಟ್ಟು ಬೇರೇನೂ ಇರಲು ಸಾಧ್ಯವಿಲ್ಲ. ಮನಸ್ಸಿನಲ್ಲಿ ಬೇಧಗಳನ್ನು ನಿರ್ಮಿಸಿಕೊಂಡು, ರೇಖೆಗಳನ್ನು ಎಳೆದುಕೊಂಡವರಿಗೆ ಆಯಾಯಾ ಭಾವಗಳಿಗೆ ತಕ್ಕಂತೆ, ಸುಖವೋ – ದುಃಖವೋ, ನೋವೋ-ನಲಿವೋ ಆಗುತ್ತಿರುತ್ತೆ. ಅವುಗಳ ಎಲ್ಲೆಯನ್ನು ಮೀರಿ ದೃಢವಾಗಿ ನಿಂತವನಿಗೆ ಇವೆಲ್ಲವೂ ತಟ್ಟುವುದಿಲ್ಲ.

ಅವನು ಅಂತಹ ಎಲ್ಲ ಭಾವಗಳನ್ನೂ ಅನುಭವಿಸಿ, ಅವುಗಳ ನಿರರ್ಥಕತೆಯನ್ನು ಅರಿತು, ಅವುಗಳ ಎಲ್ಲೆಯಿಂದ ಮೇಲೇರಿ ಅವುಗಳಿಗೆ ಅತೀತವಾಗಿ ಬೆಳೆಯುತ್ತಾನೆ. ಹಾಗಾಗಿ ಅವನು ಡಿವಿಜಿಯವರು ಹೇಳುವಂತೆ ‘ಸಾರ್ವಭೌಮ’. ಅಂತಹ ಸ್ಥಿತಿಯಲ್ಲಿ ಅವನಿಗೆ ಯಾರೂ ಸನ್ನಿಹಿತರೂ ಇರುವುದಿಲ್ಲ, ವಿರೋಧಿಗಳೂ ಇರುವುದಿಲ್ಲ. ಅವನು ಪ್ರೀತಿ ಪ್ರೇಮ ರಾಗ ದ್ವೇಷ ಭಾವಗಳಿಗೆ ಅತೀತನಾಗಿ ಬೆಳೆದಿರುತ್ತಾನೆ. ಅಂತಹವನನ್ನೇ ಮಾನ್ಯ ಗುಂಡಪ್ಪನವರು ‘ನಿರ್ವಿಕಾರಾನತರಂಗದಿ ಜಗವ ಧರಿಸುವನು’ ಎಂದು ಹೇಳಿದ್ದಾರೆ.

ನಮಗೆ ಅಂತಹವರನ್ನು ನೋಡಲು ನಮ್ಮ ಮನದೊಳಗಿನ ಬೇಧದ ಗೆರೆಗಳು ಭಾದಕವಾಗಿರುತ್ತವೆ. ಅವುಗಳನ್ನು ಅಳಿಸಿಹಾಕಲು ನಮಗೆ ಸಾಧ್ಯವಾಗಿಲ್ಲ. ಹಾಗಾಗಿ ಈ ಜಗತ್ತಿನಲ್ಲಿ ಅಂತಹವರು ಇದ್ದರೂ, ನಮಗೆ ಕಾಣುವುದಿಲ್ಲ. ಅಷ್ಟೇ ಅಲ್ಲ ನಾವೇ ಆ ಸಾರ್ವಭೌಮ ಪಟ್ಟಕ್ಕೇರಬಹುದು. ಹಾಗಾಗಲು ಮೊದಲು ನಾವು ಜಗತ್ತಿನೊಂದಿಗಿನ ಅಂಟನ್ನು ಬಿಡಿಸಿಕೊಳ್ಳಬೇಕು, ‘ನಾನು ನನ್ನದು’ಎಂಬ ಮಮಕಾರವನ್ನು ತೊರೆಯಬೇಕು, ಎಲ್ಲರೂ ನನ್ನಂತೆಯೇ ಎಂಬ ಲೋಕಾತ್ಮ ಮತ್ತು ಏಕಾತ್ಮ ಭಾವವನ್ನು ಮನಸ್ಸಿನಲ್ಲಿ ಅನುಸಂಧಾನಮಾಡಿ, ಅದನ್ನು ಅಲ್ಲಿ ನಿಶ್ಚಲವಾಗಿ ನಿಲ್ಲಿಸಿಕೊಂಡರೆ ಸಾಧ್ಯವಾಗುತ್ತದೆ. ಆದರೆ ಜಗತ್ತಿನ ಸೆಳೆತಗಳು ನಮ್ಮನ್ನು ಬಿಡುವುದಿಲ್ಲವಲ್ಲಾ!!!! ಅವುಗಳ ಬಲವಾದ ಸೆಳೆತವನ್ನು ನಿವಾರಿಸಿಕೊಳ್ಳಬೇಕಾದರೆ ನಾವು ಅದಕ್ಕಿಂತ ಬಲವಂತರಾಗಬೇಕು ಮತ್ತು ಅಂತರಂಗದಲ್ಲಿ ಅದಕ್ಕಿಂತ ಎತ್ತರವಾಗಿ ಬೆಳೆಯಬೇಕು ಮತ್ತು ಅಂತಃಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಹಾಗೆ ‘ನಮ್ಮೊಳಗು’ ಬಲವಾದರೆ ನಾವು ಬೆಳೆದು ಬೆಳೆದು ವಿಶಾಲವಾದ ಕಾಲುಷ್ಯರಹಿತವಾದ ಭಾವಸಮುದ್ರದ ಒಡೆಯರಾಗಬಹುದು. ಮಾನ್ಯ ಗುಂಡಪ್ಪನವರು ‘ಸಾರ್ವಭೌಮನು ಸೃಷ್ಟಿಯೊಳಗದೊರ್ವನೆ’ ಎಂದು ಹೇಳುವಂತೆ ನಾವೂ ಸಾರ್ವಭೌಮರಾಗಬಹುದು.

 

ರಸ ಚೆನ್ನುಡಿ

ತನ್ನ ಬಗ್ಗೆ ಹೇಳುವಾಗಿಗಿಂತ ಅನ್ಯರನ್ನು ಬಣ್ಣಿಸುವಾಗ

ಮನುಷ್ಯ ಅತ್ಯಧಿಕ ಸತ್ಯವನ್ನು ನುಡಿಯುತ್ತಾನೆ – ಅನಾಮಿಕ

 

ರಸ ಚೆನ್ನುಡಿ

ಮನಸ್ಸಿಗೆ ನುಗ್ಗಿದ ಆಲೋಚನೆಗಳೆಲ್ಲ ಮಾತಿನ ರೂಪ ಪಡೆದು
ಹೊರಬರಲೇ ಬೇಕು ಎಂದೇನಿಲ್ಲವಲ್ಲ!!!!! – ಅನಾಮಿಕ