RSS

Monthly Archives: ಏಪ್ರಿಲ್ 2015

ರಸಧಾರೆ – ೮೨೭

ಲೋಕದಲಿ ಭಯವಿರಲಿ, ನಯವಿರಲಿ, ದಯೆಯಿರಲಿ ।
ನೂಕುನುಗ್ಗುಗಳತ್ತ, ಸೋಂಕುರೋಗಗಳು ।।
ಸಾಕಿ ಸಲಹುವರುಮ್ ಅತ್ತಲೆ ನಿನಗೆ; ನಿನ್ನೆಲ್ಲ।
ಲೋಕ ಮೂಲವು ನೋಡೊ – ಮಂಕುತಿಮ್ಮ ।।

ಸಾಕಿ ಸಲಹುವರುಮ್=ನಮ್ಮನ್ನು ಹಡೆದು ಬೆಳೆಸಿದವರು, ಅತ್ತಲೆ =ಹಾಗೆಯೇ

ಜೀವಿಸುವ ಕಲೆಯನ್ನು ಮುಂದುವರೆಸುತ್ತಾ, ಬದುಕುವಾಗ ಭಯವಿರಲಿ, ನಡವಳಿಕೆಯಲ್ಲಿ ನಯವಿರಲಿ ಮತ್ತು ಸೃಷ್ಟಿಯ ಮಿಕ್ಕೆಲ್ಲದರಲ್ಲಿ ದಯೆ ಇರಲಿ ಎಂದು ಹೇಳುತ್ತಾ, ಜನಸಂದಣಿಯಿಂದ ಮತ್ತು ಅವರಿಂದ ನಿನಗೆ ಅಂಟಬಹುದಾದ ರೋಗಗಳಿಂದ, ಅಷ್ಟೇಕೆ, ಸಾಕಿ ಸಲುಹಿದವರಿಂದಲೂ ಸಾಧ್ಯವಾದಷ್ಟು ದೂರವಿರು,ನಿನ್ನ ಗಮನವೆಲ್ಲ ‘ ನೀನು ಎಲ್ಲಿಂದ ಬಂದೆ, ಏನು ತಂದೆ ಮತ್ತೆ ಮುಂದಕ್ಕೆ ಎಲ್ಲಿಗೆ ಮತ್ತು ಹೇಗೆ ಹೋಗಬೇಕು ಎನ್ನುವುದರಲ್ಲಿ ಎಂದು ಒಂದು ಎಚ್ಚರಿಕೆಯ ಮಾತನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಈ ಲೋಕದಲ್ಲಿ ನಾವಿರುವಾಗ ನಮ್ಮ ನಡವಳಿಕೆಯಿಂದ ಅನ್ಯರಿಗೆ ತೊಂದರೆಯಾದೀತೇನೋ ಎಂಬ ಭಯವಿರಬೇಕು. ಅಂತಹ ಸಾತ್ವಿಕ ಭಯವನ್ನು ನಾವು ಮನಸ್ಸಿನಲ್ಲಿಟ್ಟುಕೊಂಡಿದ್ದರೆ ಆ ಭಯವೇ ನಮ್ಮ ಬಹಳಷ್ಟು ಕೆಲಸಗಳಿಗೆ ‘ಸನ್ಮಾರ್ಗದರ್ಶಿ’ ಯಾಗುತ್ತದೆ. ಕೇವಲ ಭಯವಲ್ಲ ‘ನಯ’ ವೂ ಬೇಕು. ಏಕೆಂದರೆ ಈ ಜಗತ್ತೇ ಒಂದು ಕನ್ನಡಿಯಂತೆ. ನಾವು ಇತರರೊಡನೆ ನಯವನ್ನು ತೋರಿದರೆ ಇತರರಿಂದ ನಾವು ಅಪೇಕ್ಷೆಪಡುವ ನಯವು ನಮಗೆ ಸಿಕ್ಕೀತು. ನಾವು ‘ಒರಟಾ’ದರೆ ನಮಗೆ ದಕ್ಕುವುದು ಏನು ಎಂದು ಇಂದಿನ ಸಮಾಜದಲ್ಲಿ ಬಹುಶಃ ಎಲ್ಲರಿಗೂ ಗೊತ್ತಿದೆ. ಇನ್ನು ದಯೆ ಬೇಕು ಎಂದಿದ್ದಾರೆ. ಹೌದು ಎಲ್ಲರಿಗೂ ಸಮನಾದ ದೈಹಿಕಬಲ, ಆರ್ಥಿಕಬಲ ಮತ್ತು ಮಾನಸಿಕ ಬಲವಿರುವುದಿಲ್ಲ. ನಮಗಿಂತ ಬಲಹೀನರನ್ನು ಕಂಡು ನಮ್ಮಲ್ಲಿ ಸದಾಕಾಲ ದಯೆಯ ಭಾವ ಬೇಕು. " ದಯೆಯೇ ಧರ್ಮದ ಮೂಲವಯ್ಯಾ" ಎಂದಿದ್ದಾರೆ ಮಾನ್ಯ ಜಗಜ್ಜೋತಿ ಬಸವಣ್ಣನವರು. ಮಾನವೀಯತೆಯೇ ಮಾನವನ ಮೂಲ ಧರ್ಮ. ಅ ಧರ್ಮದ ಪಾಲನೆಯಾಗಬೇಕಾದರೆ ಸೃಷ್ಟಿಯ ಸಕಲ ಪ್ರಾಣಿಗಳಲ್ಲೂ ನಮ್ಮ ಮನಸ್ಸಿನಲ್ಲಿ ದಯೆಯ ಭಾವವಿರಬೇಕು.

ಜಗತ್ತಿನಲ್ಲಿ ನಮ್ಮ ಸುತ್ತ ಬಹಳಷ್ಟು ಜನರಿರುತ್ತಾರೆ. ಪ್ರತಿಯೊಬ್ಬರದೂ ಬೇರೆ ಬೇರೆ ಮನೋಭಾವ. ಗುಂಪಿನಲ್ಲಿ ಇದ್ದಾಗ ಒಂದು ರೀತಿ ಮತ್ತು ಏಕಾಂತದಲ್ಲಿ ಒಂದು ರೀತಿ. ಗುಂಪಿನಲ್ಲಿ ಎಲ್ಲರೂ ಒಂದು ಉನ್ಮಾದದ ಸ್ಥಿತಿಯಲ್ಲಿರುತ್ತಾರೆ. ನಾವೂ ಸಹ ಗುಂಪಿನಲ್ಲಿ ಒಬ್ಬರಂತೆ ಬದುಕಿದರೆ ಆ ‘ ಉನ್ಮಾದ’ ದ ಸೊಂಕುರೋಗ ನಮ್ಮನ್ನು ಅಂಟಿಕೊಂಡು ನಾವು ಬದುಕನ್ನು ಬದುಕದೆ, ಬದುಕಿನಲ್ಲಿ ಕೊಚ್ಚಿಕೊಂಡು ಹೋಗುತ್ತೇವೆ. ಇದು, ನಮ್ಮನ್ನು ಹೊತ್ತು, ಹೆತ್ತು, ಸಾಕಿ ಸಲುಹಿದವರಿಗೂ ಅನ್ವಯವಾಗುತ್ತದೆ. ಅವರಲ್ಲಿ ಪ್ರೀತಿ ಪ್ರೇಮವನ್ನು ಕೇವಲ ಕರ್ತವ್ಯದಂತೆ ನಡೆಸಿದರೆ, ನಾವು ನಮ್ಮ ಬದುಕಿನ ಗುರಿಯನ್ನು ಅರಿಯಬಹುದು ಮತ್ತು ಗುರಿ ಮುಟ್ಟಲು ಪ್ರಯತ್ನಿಸಲೂಬಹುದು. ಅವರ ಪ್ರೇಮ, ಪ್ರೀತಿ ಇತ್ಯಾದಿ ಭಾವಗಳ ಬಂಧನದಲ್ಲಿ ಸಿಲುಕಿಕೊಂಡರೆ, ಅದರಿಂದ ಬಿಡಿಸಿಕೊಂಡು ನಾವು ಬೆಳೆಯುವುದು ಕಷ್ಟವಾಗುತ್ತದೆ.

‘ ನಿನ್ನೆಲ್ಲ ಲೋಕ ಮೂಲವು ನೋಡೊ’ ಎಂದಿದ್ದಾರೆ ಮಾನ್ಯ ಡಿವಿಜಿಯವರು.ಪ್ರಸಿದ್ಧಗಾಯಕ ‘ಡಾ. ಮಂಗಳಂಪಲ್ಲಿ ಬಾಲಮುರಳೀಕೃಷ್ಣ, ‘ ಮೂಲಮೆರುಗುಟೇ (ಎರುಗುಟ =ತಿಳಿಯುವುದು) ಮುರಳೀ ಗಾನಮು’ ಎಂದು ಬಹಳ ಅರ್ಥಗರ್ಭಿತವಾಗಿ ಹೇಳಿದ್ದಾರೆ. ಮುರಳಿ ಎಂದರೆ ಕೊಳಲು. ನಮ್ಮ ದೇಹವೂ ಸಹ ನವರಂದ್ರಗಳಿಂದಾದ ಒಂದು ಕೊಳಲು. ಈ ದೇಹದ ಸಹಾಯದಿಂದ, ನಾನು ಯಾರು?, ಎಲ್ಲಿಂದ ಬಂದೆ? ನನ್ನ ಸ್ವಭಾವವೇನು? ನನ್ನ ಮಟ್ಟವೇನು ? ನನ್ನ ಮಟ್ಟವನ್ನು ಉತ್ತಮವಾಗಿಸಿಕೊಳ್ಳುವುದು ಹೇಗೆ? ಏನನ್ನಾಶ್ರಯಿಸಿದರೆ ನಾನು ಉತ್ತಮನಾಗುತ್ತೇನೆ? ಎನ್ನುವ ಪ್ರಶ್ನೆಗಳನ್ನು ನಮಗೆ ನಾವೇ ಹಾಕಿಕೊಂಡು, ಉತ್ತಮರಾಗಲು ಪ್ರಾಮಾಣಿಕ ಪ್ರಯತ್ನಮಾಡಿದರೆ, ಬದುಕು ಉತ್ತಮವಾಗಿ,ಸಾರ್ಥಕವಾಗುತ್ತದೆ. ಇದು ಜೀವನದ ಕಲೆಯನ್ನು ಅರಿತುಕೊಳ್ಳುವ ವಿಧಾನ. ಪ್ರಯತ್ನಪಟ್ಟರೆ ಎಲ್ಲರೂ ಉತ್ತಮಜೀವಿಗಳಾಗಬಹುದು.

Advertisements
 

ರಸ ಚೆನ್ನುಡಿ

ನೋವು ಸ್ನೇಹಿತನಂತೆ. ಆದಿದ್ದರೆ ನಾವಿನ್ನೂ ಬದುಕಿದ್ದೇವೆ ಎಂದು ಖಾತ್ರಿ.
ಎಂದರೆ ‘ಬದುಕಿನ ಹೋರಾಟಕ್ಕೆ’ ನಾವು ಸನ್ನದರೆಂದೇ ಅರ್ಥವಲ್ಲವೆ? – ಅನಾಮಿಕ

 

ರಸಧಾರೆ – ೮೨೬

ಸಂಗೀತಕಲೆಯೊಂದು,ಸಾಹಿತ್ಯಕಲೆಯೊಂದು ।

ಅಂಗಾಂಗ ಭಾವ ರೂಪಣದ ಕಲೆಯೊಂದು ।।
ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ ।
ಮಂಗಳೋನ್ನತ ಕಲೆಯೊ – ಮಂಕುತಿಮ್ಮ ।।

ಸಂಗಳಿಸಲೀ=ಸಂಗಳಿಸಲಿ +ಈ, ಕಲೆಗಳನುನಯವು=ಕಲೆಗಳ+ಅನುನಯವು

ಅಂಗಾಂಗಭಾವರೂಪಣದಕಲೆ= ನಾಟ್ಯ ಕಲೆ, ಸಂಗಳಿಸಲೀ=ಮಿಳಿತವಾಗಲಿ,

ಸಂಗೀತ, ಸಾಹಿತ್ಯ, ನಾಟ್ಯ ಮುಂತಾದವು ಒಂದೊಂದು ಕಲೆಗಳು. ನಮ್ಮ ಬದುಕನ್ನು ರೂಪಿಸುವ ನಮ್ಮ ಆಚಾರ ವಿಚಾರದಲ್ಲಿ ಈ ಕಲೆಗಳ ವಿಚಾರವು ಚರ್ಚೆಯಾದಲ್ಲಿ ಜೀವಿಸುವ ಕಲೆಯೂ ಅತ್ಯುತ್ತಮವಾಗುತ್ತದೆ ಎನ್ನುವ ವಿಚಾರವನ್ನು ನಮ್ಮ ಮುಂದೆ ಇಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಸಂಗೀತ ಒಂದು ಅದ್ಭುತ ಕಲೆ. ಶಾಸ್ತ್ರಬದ್ಧವಾದ ಸಂಗೀತಕ್ಕೆ ಭಾವವನ್ನು ತುಂಬುವಂತಹ ಸಾಹಿತ್ಯ ಮತ್ತು ಆ ಸಾಹಿತ್ಯವನ್ನು ಸಂಗೀತದಲ್ಲಿ ಪ್ರಸ್ತುತಿ, ತಾವೂ ಭಕ್ತಿಯಿಂದ, ತನ್ಮಯತೆಯಿಂದ ಸಂತೋಷಪಟ್ಟು ಇತರರನ್ನೂ ಸಂತೋಷಪಡಿಸುವ ಅದ್ಭುತ ಕಲೆ ಸಂಗೀತ ಕಲೆ. ದೇಹವನ್ನೇ ಒಂದು ಸಾಧನವಾಗಿ, ಮುದ್ರೆ, ಹಾವ, ಭಾವ, ನಾಟ್ಯ, ನಟನೆ ಮುಂತಾದವುಗಳನ್ನು ಅರ್ಥಪೂರ್ಣವಾಗಿ ಮತ್ತು ಭಕ್ತಿಪೂರ್ಣವಾಗಿ ಪ್ರದರ್ಶಿಸುವ ಕಲೆಯೇ ನಾಟ್ಯ ಕಲೆ. ಪರತತ್ವದಲ್ಲಿ ಭಕ್ತಿಯಿಲ್ಲದೆ ಈ ಕಲೆಗಳನ್ನು ಪ್ರದರ್ಶಿಸಲಾಗದು. ತನ್ನ ಅನುಭವ ಮತ್ತು ಅನಿಸಿಕೆ, ಕಣ್ಣಾರೆ ಕಂಡದ್ದು ಮತ್ತು ಕಲ್ಪಿಸಿಕೊಂಡು ತಾವು, ಕಾವ್ಯ, ಕವನ, ಕತೆ ಕಾದಂಬರಿ, ವಚನ, ಪದ್ಯ, ಮುಂತಾದವುಗಳ ರೂಪದಲ್ಲಿ ಬರೆಯುತ್ತಾ ಸಂತಸಪುಡುವುದು ಸಾಹಿತ್ಯ ಸೃಷ್ಟಿಯ ಕಲೆ. ಈ ಎಲ್ಲ ಕಲೆಗಳೂ ಪ್ರತಿಪಾದಿಸುವುದು ಜಗತ್ತಿನ ವಿಷಯಗಳಿಗಿಂತ ಹೆಚ್ಚು ಪಾರಮಾರ್ಥಿಕ ವಿಷಯಗಳು . ಈ ಕಲೆಗಳನ್ನು ಅಭ್ಯಸಿಸುವವರು ಮತ್ತು ಅನುಸಂಧಾನಮಾಡುವವರು ಪರತತ್ವದ ಅನುಸಂಧಾನವನ್ನೇ ಮಾಡುತ್ತಿರುತ್ತಾರೆ.

ಜರ್ಮನಿಯ ಬರ್ಲಿನ್ ನಗರದಲ್ಲಿ ಒಂದು ಸಂಜೆ ಹದಿಮೂರು ವರ್ಷದ ಬಾಲಕ ‘ ಯಹೂದಿ ಮೆನುಹಿನ್ ‘ ನ ವಯೊಲಿನ್ ಕಚೇರಿ. ಬಹಳ ಕಟ್ಟುನಿಟ್ಟಾದ ನಿಬಂಧನೆಗಳಿದ್ದ ಸಭಾಂಗಣ. ಇಂತಹದೆ ದಿರಿಸ ಧರಿಸಬೇಕು, ಇಷ್ಟೇ ವೇಳೆಗೆ ಕೂರಬೇಕು, ಮಧ್ಯದಲ್ಲಿ ಮಾತನಾಡುವುದು ಅಥವಾ ಚಪ್ಪಾಳೆ ತಟ್ಟುವುದು ನಿಷಿದ್ಧ, ಹೀಗೆ ಆಯೋಜಿಸಿದ್ದ ಕಚೇರಿಯಲ್ಲಿ ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲಾ ಕಟ್ಟುಪಾಡು, ನಿಬಂಧನೆಗಳನ್ನೂ ಉಲ್ಲಂಘಿಸಿ ವೇದಿಕೆಯ ಮೇಲಕ್ಕೆ ತೆರಳಿ ಆ ಹದಿಮೂರರ ಬಾಲಕನನ್ನು ತಬ್ಬಿ " ಆಹಾ! ಇಂದು ನಾನು ‘ದೇವರಿದ್ದಾನೆಂದು’ ನಂಬುತ್ತೇನೆ" ಎಂದನಂತೆ ಓರ್ವ ವ್ಯಕ್ತಿ. ಆ ವ್ಯಕ್ತಿ ಬೇರೆಯಾರೂ ಆಗಿರದೆ ಸೃಷ್ಟಿಗೆ ವ್ಯಾಕ್ಯಾನವನ್ನು ಬರೆದ ವಿಜ್ಞಾನಿ ‘ ಆಲ್ಬರ್ಟ್ ಐನ್ ಸ್ಟೀನ್ ‘ ಆಗಿದ್ದನಂತೆ. ಇದು ಸಂಗೀತ, ನಾಟ್ಯ ಅಥವಾ ಸಾಹಿತ್ಯ ಕಲೆಗಳ ಮಹಿಮೆ. ಆ ಕಲೆಗಳ ವಿಚಾರವನ್ನು ಅವುಸಂಧಾನಮಾಡಿದರೆ ನಮ್ಮೊಳಗೂ ಉತ್ತರೋತ್ತರ( vertical) ಬೆಳವಣಿಗೆ ಬಂದು ಬದುಕುವ ಕಲೆಯನ್ನು ನಾವು ಸಮರ್ಪಕವಾಗಿ ಕಲಿತು ಉತ್ತಮ ಜೀವನವನ್ನು ಜೀವಿಸಲು ಸಾಧ್ಯ.

ಅಂತಹ ಸಂಗೀತವನ್ನೋ ಸಾಹಿತ್ಯವನ್ನೋ ನಾಟ್ಯಕಲೆಯನ್ನೋ, ನೋಡಿ, ಓದಿ, ಕೇಳಿ ತನ್ಮಯ ಭಾವವನ್ನು ಹೊಂದಿ ಅದರೊಳಗಿನ ಸತ್ವವನ್ನು ಹೀರಿಕೊಂಡು ಆ ಸತ್ವದ ತತ್ವವನ್ನು ನಮ್ಮ ಮನಸ್ಸು ಬುದ್ಧಿ ಮತ್ತು ಸ್ವಭಾವಗಳ ಮೇಲೆ ಪ್ರಭಾವ ಬೀರಿ ನಮ್ಮ ಬದಲಾಯಿಸುವಂತೆ ಮಾಡಿಕೊಳ್ಳಬೇಕು. ಸುಮ್ಮನೆ ಕೇಳಿದರೆ, ಓದಿದರೆ ಅಥವಾ ನೋಡಿದರೆ ಏನೂ ಪ್ರಯೋಜನವಿಲ್ಲ. ಒಳಬರುವ ಸತ್ವವನ್ನು ಬರಮಾಡಿಕೊಂಡು
"ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ" ಎಂದು ಗುಂಡಪ್ಪನವರು ಹೇಳುವಂತೆ ನಮ್ಮೊಳಗೇ ಅದರ ವಿಚಾರ ಚರ್ಚೆಯಾದರೆ ಒಳಿತಾಗುತ್ತದೆ, ಇಲ್ಲದಿದ್ದರೆ ‘ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ’ ಎಂದು ಸರ್ವಜ್ಞ ಕವಿ ಹೇಳುವಂತೆ ವ್ಯರ್ಥವಾಗುತ್ತದೆ. ಆದರೆ ಆಯ್ಕೆ ನಮ್ಮದೇ ಅಲ್ಲವೇ?

 

ರಸಧಾರೆ – ೮೨೫

ಕಲೆಗಳಲಿ ಪರಮಕಲೆ ಜೀವನದ ಲಲಿತ ಕಲೆ ।
ಕಲಿಸಲದನಳವಲ್ಲ ಬಾಹ್ಯಬೋಧನೆಯಿಂದ ।।
ಒಲಿದೊಲಿಸಿಕೊಳುವ ಲೌಕಿಕನಯದ ಸೊಗಸ ನೀಂ ।
ತಿಳಿವುದೊಳಹದದಿಂದ – ಮಂಕುತಿಮ್ಮ ।।

ಕಲಿಸಲದನಳವಲ್ಲ =ಕಳಿಸಲ್+ಅದನ್ +ಅಳವಲ್ಲ, ಒಲಿದೊಲಿಸಿಕೊಳುವ=ಒಲಿದು+ಒಲಿಸಿ+ಕೊಳುವ, ತಿಳಿವುದೊಳಹದದಿಂದ=ತಿಳಿವುದು+ಒಳಹದದಿಂದ.

ಅಳವಲ್ಲ=ಸಾಧ್ಯವಲ್ಲ.

ಜಗತ್ತಿನಲ್ಲಿರುವ ಎಲ್ಲಾ ಕಲೆಗಳಲ್ಲಿ ಅತೀ ಉತ್ತಮವಾದ ಕಲೆ ಎಂದರೆ ‘ಬದುಕುವ’ ಕಲೆ. ಇದನ್ನು ಹೊರ ಬೋಧನೆಯಿಂದ ಕಲಿಸಲು ಸಾಧ್ಯವಿಲ್ಲ. ನಾವು ಜಗತ್ತಿಗೆ ಒಲಿದು, ಜಗತ್ತನ್ನು ನಾವು ಒಲಿಸಿಕೊಳ್ಳುವುದೇ ಬದುಕಿನ ಸೊಗಸು. ಇದನ್ನು ನೀನು ನಿನ್ನ ಅಂತರಂಗದ ಮಂಥನದಿಂದ ಅರಿತುಕೋ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಜೀವಿಸುವುದು ಒಂದು ಕಲೆ. ಅದು ಜಗತ್ತಿನ ೬೪ ಕಲೆಗಳಿಗಿಂತ ಅತ್ಯುತ್ತಮವಾದ ಕಲೆ. ಈ ಕಲೆ ಕರಗತವಾದರೆ ಅವನಷ್ಟು ಪರಮ ಸುಖಿ ಇನ್ನೊಬ್ಬನಿರಲಾರ. ಇದನ್ನು ಪರಮ ಕಲೆ ಎಂದಿದ್ದಾರೆ ಮಾನ್ಯ ಗುಂಡಪ್ಪನವರು. ಎಂದರೆ ಕಲೆಗಳಲ್ಲಿ ಅತ್ಯುನ್ನತ ಕಲೆ ಎಂದು ಅರ್ಥ. ಆದರೆ ಇದನ್ನು ಒಬ್ಬರು ಇನ್ನೊಬ್ಬರಿಗೆ ಕಲಿಸಲು ಸಾಧ್ಯವಿಲ್ಲ. ಅನುಭವದಿಂದ ಮಾತ್ರ ಕಲಿಯಲು ಸಾಧ್ಯ, ಬದುಕುವ ಕಲೆಯೆಂದರೆ, "ಹೇಗೆ ಬದುಕಬೇಕು? ಏನನ್ನು ಮತ್ತು ಎಷ್ಟನ್ನು ಮಾತಾಡಬೇಕು? ಕೇಳಿದ ಯಾವುದಕ್ಕೆ ಎಷ್ಟು ಮಹತ್ವವನ್ನು ನೀಡಬೇಕು? ಕಂಡದ್ದನ್ನು ಹೇಗೆ ಅರ್ಥೈಸಿಕೊಳ್ಳಬೇಕು? ಅರ್ಥೈಸಿಕೊಂಡದ್ದನ್ನು ಹೇಗೆ ಜೀರ್ಣಿಸಿಕೊಳ್ಳಬೇಕು? ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದು ಮತ್ತು ಸಿಕ್ಕ ಉತ್ತರಗಳನ್ನು ಹೇಗೆ ಬದುಕಿಗೆ ಅಳವಡಿಸಿಕೊಳ್ಳುವುದು ಎಂದು ಅರಿತುಕೊಳ್ಳವುದೇ ‘ಜೀವನದ ಕಲೆ’

‘ಹೇಳಿಕೊಟ್ಟ ಬುದ್ಧಿ ಮತ್ತು ಕಟ್ಟಿಟ್ಟ ಬುತ್ತಿ ಎಷ್ಟು ದಿವಸ ಬರುತ್ತದೆ ‘ ಎನ್ನುವ ಗಾದೆಯೊಂದಿದೆ. ಹಾಗೆಯೇ ಬದುಕುವುದನ್ನು ಹೇಳಿಕೊಟ್ಟು ಕಲಿಸಲಾಗುವುದಿಲ್ಲ. ಬದುಕಿನ ಅನುಭವದಿಂದಲೇ ಬದುಕುವುದನ್ನು ಕಲಿಯಬೇಕು. ಕಷ್ಟ ಸುಖಗಳ, ನೋವು ನಲಿವುಗಳ ಅನುಭವದಿಂದ ಬದುಕಿನ ಸತ್ವವನ್ನು ಗ್ರಹಿಸಿ, ಅದರಿಂದ ಯಾವುದು ಸೂಕ್ತ, ಯಾವುದು ಸೂಕ್ತವಲ್ಲ ಎಂದು ವಿಶ್ಲೇಷಿಸಿ, ಸೂಕ್ತವಾದದ್ದನ್ನು ಅನುಸರಿಸುವ ಗುಣ ನಮ್ಮದಾದರೆ ‘ ಜೀವಿಸುವ ಕಲೆ’ ನಮಗೆ ಒಲಿದಂತೆಯೇ ಅಲ್ಲವೇ? ಈ ಕಲೆಯನ್ನು ನಾವು ನಮ್ಮೊಳಗೇ ಒಲಿಸಿಕೊಂಡು, ಹಾಗೆ ಒಲಿದ ಕಲೆಯಿಂದ ಲೌಕಿಕ ಜಗತ್ತನ್ನು ನಮಗನುಗುಣವಾಗಿ ಒಲಿಸಿಕೊಳ್ಳುವುದೇ
‘ಜೀವನದ ಕಲೆ’ ಯ ಪರಮ ಗುರಿ.

ಇದು ಕೇವಲ ಬುದ್ಧಿಯ ಕೆಲಸವಲ್ಲ. ಇದು ಹೃದಯದ ಕೆಲಸ. ಇದು ಅಂತರಂಗದ ಕೆಲಸ. ಅನುಭವಗಳನ್ನು ಅಂತರಂಗದೊಳಕ್ಕೆ ಇಳಿಸಿಕೊಂಡು, ಬುದ್ಧಿ ಮತ್ತು ವಿವೇಕದ ಕಡೆಗೋಲಿಂದ ಮಂಥನ ಮಾಡಿ ಸತ್ವವೆಂಬ ಬೆಣ್ಣೆಯನ್ನು ತೆಗೆಯುವ ಕೆಲಸವಾಗಬೇಕು. ಇದನ್ನೇ ಮಾನ್ಯ ಗುಂಡಪ್ಪನವರು " ತಿಳಿವುದೊಳಹದದಿಂದ’ ಎಂದಿದ್ದಾರೆ. ನಮ್ಮ ಮನಸ್ಸು ಆ ರೀತಿ ‘ಹದ’ಗೊಂಡರೆ ತತ್ವದರ್ಶನವಾಗಿ ಬದುಕಿನಲ್ಲಿ ರಾಗದ್ವೇಷಗಳ, ಪ್ರೇಮಾನುರಾಗಗಳ ಎಲ್ಲೆಯನ್ನು ದಾಟಿ ನಿರ್ಮೋಹ ಮತ್ತು ನಿರ್ಮಮಕಾರದ ಭಾವ ನಮ್ಮಲ್ಲಿ ನೆಲೆ ನಿಲ್ಲುತ್ತದೆ. ಅದು ಆನಂದದ ಮತ್ತು ಸಂತೋಷದ ನೆಲೆ. ಅಂತಹ ನೆಲೆಯನ್ನು ಮುಟ್ಟುವುದೇ ಜೀವನದ ಪರಮೋಚ್ಚ ಗುರಿ.

 

ರಸ ಚೆನ್ನುಡಿ

ಬಿರುನುಡಿಗಳು, ಯಾರದೇ ಮೂಳೆಗಳನ್ನು ಮುರಿಯದಿದ್ದರೂ

ಖಂಡಿತ ನಮ್ಮ ಹೃದಯವನ್ನು ಚೂರಾಗಿಸುತ್ತದೆ. – ಅನಾಮಿಕ

 

ರಸಧಾರೆ – ೮೨೪

ಗುರಿಯನೈದದೊಡೊಮ್ಮೆ ಮರಳಿ ನೀನುಜ್ಜುಗಿಸು ।
ಕರಯುಕ್ತಿ ಪೆರ್ಚಿಯೋ, ದೈವ ಕರುಣಿಯೋ ।।
ಕರುಮಋಣ ಸಂಧಿಸಿಯೋ ಕೈಗೂಡಬಹುದು ಗುರಿ ।
ಪರವೆಯಿಡದುಜ್ಜಗಿಸು – ಮಂಕುತಿಮ್ಮ ।।

ಗುರಿಯನೈದದೊಡೊಮ್ಮೆ=ಗುರಿಯನು+ಐದದೊಡೆ+ಒಮ್ಮೆ , ನೀನುಜ್ಜುಗಿಸು=ನೀನು+ಉಜ್ಜಗಿಸು, ಪರವೆಯಿಡದುಜ್ಜಗಿಸು=ಪರಿವೆ+ಇಡದೆ+ಉಜ್ಜಗಿಸು

ಐದದೊಡೆ=ತಲುಪದಿದ್ದರೆ, ಉಜ್ಜಗಿಸು+ಪ್ರಯತ್ನಪಡು, ಕರಯುಕ್ತಿ+ನಮ್ಮ ಪ್ರಯತ್ನ, ಪೆರ್ಚಿಯೋ=ಅಧಿಕವಾಗಿಯೋ, ಕರುಮ+ಕರ್ಮ,

ನಿನ್ನ ಕೃಷಿಯಿಂದ ಆಸೆಪಟ್ಟ ಗುರಿ ತಲುಪಲಾಗದಿದ್ದರೆ ಮತ್ತೆ ಪ್ರಯತ್ನ ಮಾಡು. ನಮ್ಮ ಪ್ರಯತ್ನ ಮತ್ತು ನಿರಂತರ ಕೃಷಿಯಿಂದಲೋ, ಆ ದೈವದ ಕರುಣೆಯಿಂದಲೋ ಅಥವಾ ನಮ್ಮ ಪೂರ್ವ ಕರ್ಮದ ಫಲವೆಂಬಂತೆಯೋ,ನಾವು ಹಿಡಿದ ಕೆಲಸ ಗುರಿ ತಲುಪಬಹುದು. ಆದರೆ ಇವಾವುದರ ಪರಿವೆಯೂ ಇಲ್ಲದೆ ನೀನು ನಿನ್ನ ಕೃಷಿಯನ್ನು ಮುಂದುವರೆಸು ಎಂದು ಬದುಕಿನಲ್ಲಿ ಆಸೆಪಟ್ಟ ಗುರಿಯನ್ನು ತಲುಪುವ ಸೂಕ್ತ ಮಾರ್ಗವನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಮ್ಮ ಯಾವುದೇ ಕಾರ್ಯ ನೆರವೇರಬೇಕಾದರೆ ನಮ್ಮ ಕೃಷಿ, ಪೂರ್ವ ಪುಣ್ಯ, ಮತ್ತು ದೈವ ಕೃಪೆಯಿರಬೇಕು ಎನ್ನುವುದು ನಮ್ಮ ನಂಬಿಕೆ. ಆದರೆ ಇದರಲ್ಲಿ ನಮಗೆ ಎರಡು ವಿಷಯಗಳ ಜ್ಞಾನವಿರುವುದಿಲ್ಲ. ಒಂದು ನಮ್ಮ ಪೂರ್ವ ಸಂಚಿತ ಪುಣ್ಯ ಅಥವಾ ಪಾಪ, ಒಟ್ಟಾರೆ ಪೂರ್ವಕರ್ಮಫಲ ಮತ್ತು ಎರಡು, ದೈವಕೃಪೆ. ಆದರೆ ನಮಗೆ ನಮ್ಮ ಕೃಷಿ ಎಷ್ಟಿರಬೇಕು, ನಾವು ಎಷ್ಟನ್ನು ಮಾಡುತ್ತಿದ್ದೇವೆ, ಮತ್ತೆಷ್ಟು ಮಾಡಬೇಕು, ಅಷ್ಟನ್ನು ಮಾಡಲು ನಮ್ಮ ದೇಹ ಮತ್ತು ಮನೋಬಲವೆಷ್ಟಿದೆ, ಅದನ್ನುವೃದ್ಧಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನೆಲ್ಲಾ ನಾವು ಅರಿತುಕೊಳ್ಳಬಹುದಲ್ಲವೇ? ಹಿಂದೆ ನಾವು ಹೊತ್ತಿದ್ದ ಹಲವಾರು ಜನ್ಮಗಳಲ್ಲಿ ನಾವು ಆರ್ಜಿಸಿದ ಮತ್ತು ಉಳಿಸಿಕೊಂಡ ಗುಣ ಅಥವಾ ಸ್ವಭಾವಗಳು ನಮ್ಮ ಇಂದಿನ ಜೀವನವನ್ನು ಸಾಕಷ್ಟು ಪ್ರಭಾವಿಸುತ್ತದೆ. ಏಕೆಂದರೆ ನಾವು ಇಂದೇನಾಗಿದ್ದೇವೋ, ಅದು ಹಿಂದಿನಿಂದ ರೂಪುಗೊಳ್ಳುತ್ತಾ, ಬದಲಾಗುತ್ತಾ, ಕಳೆದುಕೊಳ್ಳುತ್ತಾ, ಪಡೆದುಕೊಳ್ಳುತ್ತಾ, ಉಳಿಸಿಕೊಳ್ಳುತ್ತಾ ಬಂದು ಇಂದು ನಾವು ಏನೋ, ಅದಾಗಿ ನಿಂತಿದೆ. ನಮಗೆ ಅದರ ಸಂಪೂರ್ಣ ಪರಿಚಯವಿಲ್ಲ.

ಜಗನ್ನಾಟಕವನ್ನು ಆಡಿಸುತ್ತಿರುವ ಆ ಸೂತ್ರಧಾರಿಯು ಆಯಾಯಾ ಸಮಯಕ್ಕೆ ಸರಿಯಾಗಿ ನೀಡುವ ನಿರ್ದೇಶನವನ್ನು ಪಾಲಿಸುವುದಷ್ಟೇ ನಮ್ಮ ಕರ್ತವ್ಯ, ಏಕೆಂದರೆ ಅದು ಹೀಗೇಕೆ ಎಂದು ಪ್ರಶ್ನಿಸುವ ಅಧಿಕಾರ ಅಥವಾ ಯೋಗ್ಯತೆ ನಮಗಿಲ್ಲ. ಇದು ಕೇವಲ ನಂಬುವವರಿಗೆ ಮಾತ್ರ ಅನ್ವಯ. ಹೀಗೆ ನಮ್ಮ ಪೂರ್ವಕರ್ಮಫಲ ಅಥವಾ ಆ ದೈವಕೃಪೆ, ಎರಡರ ಪರಿಚಯವೂ ನಮಗಿಲ್ಲವಾದ್ದರಿಂದ ನಾವು ಅದರ ಬಗ್ಗೆ ಚಿಂತಿಸದೆ ನಮಗೆ ಸಂದ ಕೆಲಸವನ್ನು ಗುರಿ ಮುಟ್ಟುವವರೆಗೂ ‘ ಮರಳಿ ಯತ್ನವ ಮಾಡು ‘ ಎಂದು ನಮ್ಮ ಹಿರಿಯರು ಹೇಳಿದಂತೆ, ಕೃಷಿ ಮಾಡುತ್ತಾ ಹೋಗಬೇಕು.ಇದನ್ನೇ ಮಾನ್ಯ ಡಿವಿಜಿಯವರು ‘ ಪರವೆಯಿಡದುಜ್ಜಗಿಸು’ ಎಂದಿದ್ದಾರೆ.

ನಾವು ಕೈಹಿಡಿದ ಕೆಲಸ ಕೈಗೂಡಬೇಕಾದರೆ ಮೇಲೆ ಹೇಳಿದ ನಮ್ಮ ಪೂರ್ವ ಕರ್ಮಫಲ, ದೈವಾನುಗ್ರಹ ಮತ್ತು ನಮ್ಮ ಕೃಷಿಯಿಂದಲೇ ಆಗಬೇಕು. ಯಾವುದನ್ನೂ ಗೌಣವಾಗಿ ನೋಡುವಹಾಗಿಲ್ಲ. ಮೊದಲ ಎರಡರ ಪರಿಚಯ ನಮಗಿಲ್ಲವಾದ್ದರಿಂದ, ನಮಗೆ ಗೊತ್ತಿರುವ ನಮ್ಮ ಕೃಷಿಯನ್ನು ಮಿಕ್ಕೆರಡರ ಪರಿವೆಯಿಲ್ಲದೆ ಮಾಡುತ್ತಾ ಹೋಗಬೇಕು ಎನ್ನುವುದೇ ಈ ಮುಕ್ತಕದ ಆಶಯ. ನಮ್ಮ ಪ್ರಯತ್ನವನ್ನು ನಾವು ಕರ್ತವ್ಯವೆಂಬಂತೆ ಮಾಡುತ್ತಾ ಹೋದರೆ, ನಮ್ಮ ಪೂರ್ವಕರ್ಮಫಲ ಮತ್ತು ಆ ದೈವ ಎರಡೂ ಬದಲಾಗುತ್ತಾ ನಮ್ಮ ಗುರಿಸಾಧನೆಗೆ ಪೂರಕವಾಗಿ ನಿಂತು ನಮ್ಮನ್ನು ದಡ ಮುಟ್ಟಿಸುತ್ತದೆ, ಎನ್ನುವುದೇ ‘ ನಂಬಿಕೆ’

ಹಾಗಾಗಿ " ಕರ್ಮಣ್ಯೇ ವಾ ಅಧಿಕಾರಸ್ತೇ ……………. "

 

ರಸ ಚೆನ್ನುಡಿ

ತಾಯಿಯ ಪ್ರೀತಿಯನ್ನು ಅನ್ಯರ ಪ್ರೀತಿಗೆ ಹೋಲಿಸಲು ಸಾಧ್ಯವೇ ಇಲ್ಲ. ಏಕೆಂದರೆ
ನಾವು ಹುಟ್ಟಿದಾಗಿನಿಂದ ನಮಗೆ ಪ್ರೀತಿ ತೋರಿದವರೆಲ್ಲರಿಗಿಂತ ಆಕೆಯದು ಒಂಬತ್ತು ತಿಂಗಳು ಅಧಿಕವಲ್ಲವೇ?