RSS

Monthly Archives: ಮೇ 2015

ರಸಧಾರೆ – ೮೫೨

ನವನವ ಪ್ರಶ್ನೆಗಳು, ನವನವ ಪರೀಕ್ಷೆಗಳು ।
ದಿವಸಾಬ್ದಯುಗ ಚಕ್ರ ತಿರುತಿರುಗಿದಂತೆ ।।
ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ ।
ಅವಿರತದ ಚೈತನ್ಯ – ಮಂಕುತಿಮ್ಮ ।।

ದಿವಸಾಬ್ದಯುಗ=ದಿವಸ+ಅಬ್ದ+ಯುಗ, ಪ್ರವಹಿಪ್ಪುವದರಂತೆ =ಪ್ರವಿಹಿಪುವ+ಅದರಂತೆ,

ನವ ನವ = ಹೊಸ ಹೊಸ, ಅಬ್ದ=ವರುಷ, ಪ್ರವಹಿಪುವ=ಹರಿಯುವ, ಅವಿರತ=ಬಿಡುವಿಲ್ಲದ.

ದಿನ, ವರುಷ ಯುಗಗಳು ಕಳೆದಂತೆ ಮನುಷ್ಯನ ಮನಸ್ಸಿನಲ್ಲಿ ಹೊಸ ಹೊಸ ಪ್ರಶ್ನೆಗಳು ಉದ್ಭವಿಸುತ್ತವೆ ಮತ್ತು ಅವನು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾನೆ. ಹೀಗೆ ಆತ್ಮಹಿತವನ್ನು ವೃದ್ಧಿಗೊಳಿಸಿಕೊಳ್ಳಲು, ಆ ಪರತತ್ವದ ಚೈತನ್ಯ ನಿರಂತರ ಕೃಷಿ ಮಾಡುತ್ತಲೇ ಇರುತ್ತದೆ ಎನ್ನುವುದೇ ಈ ಮುಕ್ತಕದ ಹೂರಣ.

ಈ ಜಗತ್ತಿನಲ್ಲಿ ಮನುಷ್ಯನ ಉಗಮವಾದಂದಿನಿಂದ ತನ್ನ ಜೀವನವನ್ನು ಉತ್ತಮಗೊಳಿಸಲು ಇವನ ಪ್ರಯತ್ನ ಅವ್ಯಾಹತವಾಗಿ ಸಾಗಿದೆ. ಈ ಭೂಮಿಯಮೇಲೆ ಎಂದು ಮನುಷ್ಯಪ್ರಾಣಿಯ ಆವಿರ್ಭಾವವಾಯಿತೋ ನಮಗೆ ಗೊತ್ತಿಲ್ಲ. ಈ ಜಗತ್ತಿನಲ್ಲಿ ನಮ್ಮ ಭೂಮಿಯಲ್ಲದೆ ಅನ್ಯ ಭೂಮಿಗಳೆಷ್ಟಿವೆಯೋ ನಮಗೆ ಗೊತ್ತಿಲ್ಲ. ಆ ಭೂಮಿಗಳಮೇಲೆ ಎಂದಿನಿಂದ ಮಾನವ ಪ್ರಾಣಿಯಿದೆಯೋ ಮತ್ತು ಅದು ವಿಕಾಸದ ಯಾವ ಸ್ಥರದಲ್ಲಿ ಇದೆಯೋ ನಮಗೆ ಗೊತ್ತಿಲ್ಲ. ಆದರೆ ಒಂದು ಮಾತ್ರ ಸತ್ಯ ‘ಶಬ್ದ ಸ್ಪರ್ಶ ರೂಪ ರಸ ಗಂಧ’ ಗಳನ್ನು ತನ್ನ ಇಂದ್ರಿಯಗಳ ಮೂಲಕ ತನ್ನೊಳಕ್ಕೆ ಸೇರಿಸಿಕೊಳ್ಳುತ್ತಾ, ಅವುಗಳನ್ನು ಒಳಗೆ ಮಂಥನಮಾಡುತ್ತಾ, ಅವುಗಳನ್ನು ಅರಿತುಕೊಳ್ಳುತ್ತಾ, ಅವುಗಳಿಂದ ಈ ಜಗತ್ತಿನ ಜೀವನಕ್ಕೆ ಬೇಕಾದದ್ದನ್ನು ಪಡೆದುಕೊಳ್ಳುತ್ತಾ, ಹಾಗೆ ಪಡೆದುಕೊಂಡದ್ದನ್ನು ತನ್ನ ಬುದ್ಧಿಶಕ್ತಿಯಿಂದ ಬದಲಾಯಿಸಿಕೊಳ್ಳುತ್ತಾ, ತನ್ನ ಬದುಕನ್ನು ಉತ್ತಮಗೊಳಿಸಿಕೊಳ್ಳಲು ಮಾನವ ಮಾಡುವ ಪ್ರಯತ್ನವೂ ಸಹ ಅವನಷ್ಟೇ ಪುರಾತನ. ಇದು ಆತ್ಮ ಶಕ್ತಿಯ ಕೆಲಸ. ‘ ಆತ್ಮ’ ತನ್ನ ಹಿತಕ್ಕಾಗಿ ತಾನು ಮಾಡಿಕೊಳ್ಳುವ ಪ್ರಯತ್ನ.

ಇಲ್ಲಿ ನಾವು ಅರಿಯಬೇಕಿರುವುದೇನೆಂದರೆ, ಗುಂಡಪ್ಪನವರು ಒಂದು ಪದ ಪ್ರಯೋಗವನ್ನು ಮಾಡಿದ್ದಾರೆ, ‘ಪೌರುಷ ಹಿತಪ್ರಜ್ಞೆ ‘ ಎಂದು ಇಲ್ಲಿ ‘ಪೌರುಷ’ವೆಂದರೆ, ಪ್ರಾಣಿಗಳ ದೇಹವನ್ನು ಧಾರಣೆಮಾಡಿರುವ, ಆ ಪರಮಾತ್ಮ ಶಕ್ತಿಯೇ ಪೌರುಷ ಶಕ್ತಿ. ಅದೇ ಆತ್ಮ ಶಕ್ತಿ. ಆ ಆತ್ಮಶಕ್ತಿ ತನ್ನ ಹಿತವನ್ನು ಹೆಚ್ಚಿಸಿಕೊಳ್ಳುವುದಕ್ಕೋಸ್ಕರ ‘ಪ್ರವಹಿಪುದರಂತೆ, ಅವಿರತದ ಚೈತನ್ಯ’ ಎನ್ನುವಂತೆ ನಿರಂತರ, ಅವ್ಯಾಹತ ಅಥವಾ ಸದಾಕಾಲ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ. ಇಂದು ನಮ್ಮ ಮುಂದಿರುವ ನಮ್ಮ ಸನಾತನದ ಜ್ಞಾನ ಭಂಡಾರ ಮತ್ತು ಈ ಜಗತ್ತಿನಲ್ಲಿರುವ ಸಕಲ ಜ್ಞಾನದ ವಿಸ್ತೃತ ಪ್ರಸ್ತುತಿಯೇನಿದೆಯೋ ಅದೆಲ್ಲವೂ ಅಂತಹ ಪ್ರಯತ್ನದ ಫಲವೇ!!!!! ಈ ಉತ್ತಮತೆಯ ಪ್ರಯತ್ನ ಅಂದಿನಿಂದ ನಡೆಯುತ್ತಿದೆ ಮತ್ತು ಇಂದೂ ಮುಂದುವರೆದಿದೆ ಮತ್ತು ಅದು ಎಂದೆಂದಿಗೂ ನಡೆಯುತ್ತಲೇ ಇರುತ್ತದೆ. ಅದರ ಕಾರಣದಿಂದಲೇ ಕೇವಲ ಐದು ಸಾವಿರ ವರ್ಷಗಳ ಹಿಂದಿನ ಜನ ಜೀವನಕ್ಕೂ ಇಂದಿನ ಜನಜೀವನಕ್ಕೂ ಒಂದು ಸಾಸಿವೆ ಕಾಳಿಗೂ, ಹಿಮಾಲಯಪರ್ವತಕ್ಕೂ ಇರುವಷ್ಟು ಅಂತರ ಅಲ್ಲವೇ?

ಅಂದರೆ, ಆ ಪರಮಾತ್ಮ ಶಕ್ತಿ, ಆತ್ಮರೂಪದಲ್ಲಿ ಜೀವಿಗಳ ರೂಪವನ್ನು ಧಾರಣೆಮಾಡಿ, ಆ ರೂಪದ ತನ್ನ ಜೀವನ ಸುಖಮಯವಾಗಿರುವುದಕ್ಕೆ ತನಗೆ ಏನು ಬೇಕೋ ಅದನ್ನು ತಾನು ಸೃಷ್ಟಿಸಿಕೊಂಡು, ಹಾಗೆ ತಾನೇ ಸೃಷ್ಟಿಸಿಕೊಂಡದ್ದನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳುತ್ತಾ ಇದೆ. ಹಾಗಿದ್ದಮೇಲೆ ಎಲ್ಲವೂ ಸುಖಮಯವಾಗಿ ಮತ್ತು ಆನಂದಮಯವಾಗಿರಬೇಕಿತ್ತಲ್ಲವೇ? ಎಂದರೆ ಹೌದು. ಆದರೆ ಪ್ರಾಣಿಗಳಿಗೆ ಅಹಂಕಾರವೆನ್ನುವುದೊಂದೆಯಲ್ಲಾ, ಅದು ಮನುಷ್ಯನನ್ನು ಇದನ್ನು ‘ನಾನು’ ಮಾಡುತ್ತಿದ್ದೇನೆ ಎನ್ನುವ ಭಾವವನ್ನು ತುಂಬಿಬಿಡುತ್ತದೆ. ಇದರಿಂದ ಇವನ ಲೌಕಿಕ ಜೀವನ ಕಷ್ಟಮಯವಾಗಿಬಿಡುತ್ತದೆ. ಅದರಲ್ಲೂ ಮನುಷ್ಯ ಪ್ರಾಣಿಯಲ್ಲಿ, ಅವನ ದೇಹರಚನೆಗನುಗುಣವಾಗಿ, ‘ ಅಹಂಕಾರ’ ಸ್ವಲ್ಪ ಅಧಿಕವಾಗೇ ಇರುವುದರಿಂದ, ಅವನ ಸಮಸ್ಯೆಗಳೂ ಆಷ್ಟೆ ಅಧಿಕವಾಗಿವೆ. ಅಹಂಕಾರವನ್ನು ತೊರೆದರೆ ಹೊರಗಿನ ಜೀವನ ಮತ್ತು ಒಳಗಿನ ಸಂತೋಷ ಎರಡೂ ಅಧಿಕವಾಗುವುದರಲ್ಲಿ ಸಂದೇಹವೇ ಇಲ್ಲ

Advertisements
 

ರಸ ಚೆನ್ನುಡಿ

ನಮಗನುಕೂಲವಾಗಿ ಜಗತ್ತನ್ನು ತಿದ್ದಲು ಸಾಧ್ಯವಿಲ್ಲ. ನಮ್ಮ ಮನಃಶಾಂತಿಯನ್ನು ಕದಡುವ
ನಮ್ಮ ಆತ್ಮಗೌರವಕ್ಕೆ ಧಕ್ಕೆಯುಂಟಾಗುವಲ್ಲಿಂದ ದೂರ ಸರಿಯುವುದೇ ನಮ್ಮೊಳಿತಿಗೆ ಮಾರ್ಗ

 

ರಸಧಾರೆ – ೮೫೧

ಕಣ್ದೆರೆದು ನೋಡು, ಚಿತ್ಸತ್ವಮೂರ್ತಿಯ ನೃತ್ಯ ।
ಕಣ್ಮುಚ್ಚಿ ನೋಡು, ನಿಶ್ಚಲ ಶುದ್ಧ ಸತ್ವ ।।
ಉನ್ಮುಖನು ನೀನೆರಡು ಜಗಕಮಿರುತಿರಲಾಗ ।
ಹೃನ್ಮಧ್ಯದಲಿ ಶಾಂತಿ – ಮಂಕುತಿಮ್ಮ ।।

ಕಣ್ದೆರೆದು=ಕಣ್ಣ+ತೆರೆದು, ಚಿತ್ಸತ್ವಮೂರ್ತಿಯ=ಚಿತ್+ಸತ್ವ+ಮೂರ್ತಿಯ, ಕಣ್ಮುಚ್ಚಿ=ಕಣ್ಣ+ಮುಚ್ಚಿ, ಜಗಕಮಿರುತಿರಲಾಗ=ಜಗಕಂ+ಇರುತಿರಲ್+ಆಗ

ಹೃನ್ಮಧ್ಯದಲಿ=ಹೃದಯದ ಮಧ್ಯದಲ್ಲಿ

ಕಣ್ಣನ್ನು ತೆರೆದು ನೋಡಿದರೆ ಪರತತ್ವದ ಪ್ರತಿ ನಿತ್ಯ ಬದಲಾಗುವ ಕೋಟಿ ಕೋಟಿ ರೂಪದ ಸುಂದರ ನೃತ್ಯ, ಲೀಲಾವಿನೋದ. ಕಣ್ಮುಚ್ಚಿ ನೋಡಿದರೆ ಇಡೀ ಜಗತ್ತನ್ನು ಆವರಿಸಿಕೊಂಡು ಆಳುವ ಶುದ್ಧ ಮತ್ತು ನಿಶ್ಚಲ ಪರತತ್ವದ ದರ್ಶನ . ಹೀಗೆ ನೀನು ಎರಡೂ ಸ್ಥಿತಿಗಳನ್ನು ಸಮಭಾವದಿಂದ ನೋಡಿದರೆ ಮನಸ್ಸಿನಂತರಾಳದಲ್ಲಿ ಶಾಂತಿ ನೆಲೆಸುತ್ತದೆ ಎನ್ನುವುದೇ ಮಾನ್ಯ ಗುಂಡಪ್ಪನವರ ಈ ಮುಕ್ತಕದ ಹೂರಣ.

ನಾವು ಹೊರ ಪ್ರಪಂಚದಲ್ಲಿ ಕಣ್ಬಿಟ್ಟು ನೋಡಿದರೆ ನಮಗೆ ಕಾಣುವುದು ಚಿತ್ರ ವಿಚಿತ್ರವಾದ ಹಲವಾರು ರೂಪಗಳು, ಮಾನವರ, ಪ್ರಾಣಿಗಳ, ಕೀಟಗಳ, ಸರೀಸೃಪಗಳ, ಪಕ್ಷಿಗಳ, ಜಲಚರಗಳ, ಗಿಡಮರಗಳ, ಕೋಟಿ ಕೋಟಿ ಪ್ರಬೇಧಗಳ ಚಿತ್ರವಿಚಿತ್ರವಾದ ರೂಪಗಳು, ಆಕಾರಗಳು, ಬಣ್ಣಗಳು, ವಿನ್ಯಾಸಗಳು, ಮೈಮೇಲಿನ ಚಿತ್ತಾರಗಳು, ಸುಗಂಧಗಳು, ದುರ್ಗಂಧಗಳು, ರುಚಿಗಳು. ಇವುಗಳನ್ನೇ ‘ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ’ಗಳೆನ್ನುತ್ತಾರೆ. ಆದರೆ ಈ ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ’ ಗಳನ್ನೂ ಪ್ರಕಟಿಸಲು ಬೆಳಗಲು ಅಥವಾ ಆಸ್ವಾಧಿಸಲು, ಬೆಳಕಿನಂತೆ, ಒಂದು ಚೈತನ್ಯವು ಬೇಕು. ಆ ಚೈತನ್ಯವೇ, ಅಚಲವಾದ ಪರಮಾತ್ಮನ, ಚರರೂಪವಾದ ಪ್ರತ್ಯಗಾತ್ಮ ಅಥವಾ ಆತ್ಮ.

‘ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ’ ಗಳ ಸಂಪರ್ಕದಿಂದ ಜಗತ್ತನ್ನು ಕಣ್ಣುಬಿಟ್ಟು ನೋಡುವಾಗ ನಮಗೆ ಕಾಣುವುದು ಆ ಪರತತ್ವದ ವಿಸ್ತೃತ ರೂಪ ಮತ್ತು ಅವಗಳ ಮೂಲಕ ಅವುಗಳ ಸಕಲ ಗುಣಗಳೂ ನಮ್ಮ ಇಂದ್ರಿಯಗಳ ಮೂಲಕ ನಮ್ಮೊಳಕ್ಕೆ ನುಗ್ಗಿ ತಮ್ಮ ಪ್ರಭಾವನ್ನು ನಮ್ಮ ಮೇಲೆ ಬೀರಿ ನಮ್ಮನ್ನು ಜಗತ್ತಿನ ಬದುಕಿಗೆ ಪ್ರೇರೇಪಿಸುತ್ತಾ ಇರುತ್ತದೆ. ಆದರೆ ಕಣ್ಮುಚ್ಚಿ ಕುಳಿತು ಅಂತರಂಗದ ಚಕ್ಷುವಿನಿಂದ ಮನಸ್ಸಿನಲ್ಲಿ ಜಗತ್ತನ್ನು, ಜಗತ್ಕರ್ತೃವಾದ ಪರತತ್ವವನ್ನು ನೋಡಲು ಪ್ರಯತ್ನಪಟ್ಟರೆ, ಆಗ ಜಗತ್ತಿನೊಂದಿಗೆ ಸಂಪರ್ಕವನ್ನು ಕಡಿದುಕೊಂಡು ಜಗತ್ಕಾರಕನೊಂದಿಗೆ ಸಂಪರ್ಕ ಕಲ್ಪಿಸಿಕೊಂಡು ಅಂತರ್ಯದ ಶಾಂತಿಯನ್ನು ಪಡೆಯಬಹುದು.

ಸಕಲ ಚರಾಚರಗಳಲ್ಲಿರುವ ಪರತತ್ವವು ಭಿನ್ನ ಭಿನ್ನ ರೂಪ, ಆಕಾರ, ಬಣ್ಣ ಮತ್ತು ಗುಣಗಳಿಂದ ಪ್ರಕಾಶಿಸುತ್ತಿರುವುದನ್ನು ನಾವು ಕಾಣುತ್ತೇವೆ. ಆದರೆ ಭೌತಿಕ ಕಣ್ಣುಗಳಿಂದ ಕಂಡಾಗ ಅಚಲವಾದ ಪರತತ್ವ ಕಾಣದೆ ಅದರ ವಿಸ್ತೃತರೂಪ ಕಾಣುತ್ತದೆ ಮತ್ತು ಮಾಯೆ ನಮ್ಮನ್ನು, ಆ ರೂಪ ಮತ್ತು ಆ ರೂಪದ ಗುಣಗಳನ್ನು ಕಾಣುವಂತೆ ಮಾಡಿ ಮೋಹಗೊಳಿಸುತ್ತದೆ. ಆದರೆ ಅಂತಃಚಕ್ಷುವಿನಿಂದ ಅದನ್ನು ಕಾಣಲು ಪ್ರಯತ್ನ ಪಟ್ಟರೆ ನಮಗೆ ಪರತತ್ವದ ಸಮಗ್ರತೆ ಕಾಣುತ್ತದೆ. ಆ ಸಮಗ್ರತೆಯನ್ನು ಅನುಸಂಧಾನಮಾಡಿದರೆ, ಮಾನ್ಯ ಗುಂಡಪ್ಪನವರು ‘ಹೃನ್ಮಧ್ಯದಲಿ ಶಾಂತಿ’ ಎಂದು ಹೇಳುವಂತೆ, ಮನಸ್ಸಿಗೆ ಶಾಂತಿ ಸಿಗುತ್ತದೆ. ಹೊರನೋಟದಲ್ಲಿ ಮತ್ತು ಒಳನೋಟದಲ್ಲೂ ಆ ಪರತತ್ವದ ಲೀಲಾ ವಿನೋದವನ್ನು ಕಾಣುವ ಪ್ರಯತ್ನವನ್ನು ಮಾಡಬೇಕು.

 

ರಸ ಚೆನ್ನುಡಿ

ಈ ಜಗತ್ತಿನಲ್ಲಿ ಎಲ್ಲರೂ ಅಪರಿಪೂರ್ಣರೇ.ನಾವು ಆ ಕೊರತೆಗಳನ್ನು ಹೇಗೆ ಮತ್ತು ಎಷ್ಟನ್ನು
ತಾಳಿಕೊಳ್ಳುತ್ತೇವೆಯೋ ನಮ್ಮ ಪರಸ್ಪರ ಸಂಬಂಧಗಳು ಹಾಗಿರುತ್ತವೆ – ಅನಾಮಿಕ

 

ರಸ ಚೆನ್ನುಡಿ

ಬದುಕು ಕಡಲಂತೆ. ಕೆಲಬಾರಿ ಶಾಂತ, ಕೆಲಬಾರಿ ರೌದ್ರ
ಕಡಲಲ್ಲಿ ಸೌಂದರ್ಯವನ್ನು ಕಂಡಂತೆ ಬದುಕಿನಲ್ಲೂ ಸುಂದರತೆಯನ್ನು ಅನುಭವಿಸಬೇಕು – ಅನಾಮಿಕ

 

ರಸಧಾರೆ – ೮೫೦

ನೃತ್ಯವೋ ಬ್ರಹ್ಮನಟರಾಜನದು ಜಗವೆಲ್ಲ ।
ಪ್ರತ್ಯೇಕ ಜೀವದಶೆಯವನಂಗಭಂಗಿ ।।
ಸತ್ಯಸತ್ವಜ್ವಾಲೆ ವಿಶ್ವಮಾಯಾಲೀಲೆ ।
ಪ್ರತ್ಯಗಾತ್ಮನು ನೀನು – ಮಂಕುತಿಮ್ಮ ।।

ಜೀವದಶೆಯವನಂಗಭಂಗಿ=ಜೀವದಶೆ+ಅವನ+ಅಂಗ+ಬಂಗಿ, ಪ್ರತ್ಯಗಾತ್ಮನು=ಪ್ರತ್ಯಗ್+ಆತ್ಮನು

ಪ್ರತ್ಯಗ್=ವಿಸ್ತೃತ, ವಿಸ್ತರಿಸಿದ.

ಈ ಜಗತ್ತೆಲ್ಲ, ಆ ಪರಬ್ರಹ್ಮನ ನಾಟ್ಯವಿದ್ದಂತೆ. ಇಲ್ಲಿರುವ ಜೀವಿಗಳೆಲ್ಲವೂ ಅವನ ಆ ನಾಟ್ಯದ ಬೇರೆಬೇರೆ ವಿಧದ ಭಂಗಿಗಳು. ಶುದ್ಧಸತ್ವದ ಆ ಬೆಂಕಿಯೇ ಈ ವಿಶ್ವದಲ್ಲಿ ಮಾಯಾಲೀಲೆಯನ್ನು ತೋರುತ್ತಿದೆ. ನೀನು ಕೇವಲ ಆ ಪರಬ್ರಹ್ಮ ವಸ್ತುವಿನ ವಿಸ್ತೃತ ರೂಪವಷ್ಟೆ, ಎಂದು ಒಂದು ಗಹನವಾದ ತತ್ವವನ್ನು ಪ್ರತಿಪಾದಿಸಿದ್ದಾರೆ ಮಾನ್ಯ ಗುಂಡಪ್ಪನವರು.

ಒಬ್ಬ ನಾಟ್ಯ ಕಲಾವಿದ ಬೇರೆ ಉಪಕರಣಗಳ ಸಹಾಯವಿಲ್ಲದೆ ತನ್ನ ದೇಹದ ಅಂಗಾಂಗ ಚಲನೆಯಿಂದಲೇ ಹಲವಾರು ಭಂಗಿಗಳಲ್ಲಿ ತನ್ನ ಭಾವವನ್ನು ಬಿತ್ತರಿಸುವಂತೆ, ಆ ಪರಮಾತ್ಮ ತತ್ವವೂ ಸಹ ತನ್ನೊಳಗಿಂದಲೇ ಇಡೀ ಜಗತ್ತನ್ನು ಸೃಷ್ಟಿಸಿ, ತಾನು ಅದರೊಳಕ್ಕೆ ಚೈತನ್ಯದ ರೂಪದಲ್ಲಿ ಪ್ರವೇಶಿಸಿ, ಈ ಜಗವೆಂಬ ನಾಟಕವನ್ನು ಆಡುತ್ತಿದ್ದಾನೆ ಮತ್ತು ನಲಿಯುತ್ತಿದ್ದಾನೆ. ಹಾಗಾಗಿ ಇದು ಅವನ/ಅದರ ಲೀಲಾವಿನೋದವೆಂದು ಕರೆಯಲ್ಪಟ್ಟಿದೆ. ಜಡವನ್ನು ತನ್ನೊಳಗಿಂದಲೇ ಸೃಷ್ಟಿಸಿ, ತಾನು ಚೇತನದ ರೂಪದಲ್ಲಿ ಆ ಜಡವನ್ನು ಧರಿಸಿ ಈ ಜಗತ್ತಿನ ಸಕಲವನ್ನೂ ಅನುಭವಿಸಿ ಆನಂದಿಸುತ್ತಿದ್ದಾನೆ/ದೆ ಎನ್ನುವುದು ಸನಾತನದ ಸಿದ್ಧಾಂತ. ಹಾಗಾಗಿ ಈ ಜಗತ್ತಿನ ಬೇರೆ ಬೇರೆ ರೂಪಗಳು, ಆ ಪರತತ್ವದಿಂದ ಸಂಪೂರ್ಣವಾಗಿ ಆವೃತವಾಗಿದೆ. "ಇಡೀ ಸೃಷ್ಟಿಯಲ್ಲಿ ಪರತತ್ವದ್ದಲ್ಲದ್ದು/ ಪರತತ್ವವಲ್ಲದ್ದು ಇಲ್ಲವೇ ಇಲ್ಲ".ಎನ್ನುವುದು ಪರಮ ಸತ್ಯ.

ತಾನು ಬಹುವಾಗಿ ಪ್ರಕಟಗೊಳ್ಳಬೇಕು ಎನ್ನುವ ‘ಸ್ವ-ಇಚ್ಛೆ ‘ಯಿಂದ ‘ವಸ್ತು’ (matter) ವನ್ನು ಸೃಷ್ಟಿಸಿ ಆ ವಸ್ತುಗಳೊಳಗೆ ಚೇತನದ ರೂಪವಾಗಿ ತಾನೇ ಸೇರಿಕೊಂಡು, ಎಲ್ಲ ರೂಪಗಳಲ್ಲೂ ಸಿಗುವ ಆನಂದವನ್ನು ತಾನೇ ಅನುಭವಿಸುತ್ತಾ ಆನಂದದಿಂದಿದ್ದಾನೆ ಆ ಪರಮಾತ್ಮ, ಎನ್ನುವದು ನಮ್ಮ ಸನಾತನದ ನಂಬಿಕೆ. ‘ ಈಶಾವಾಸ್ಯಮಿದಂ ಸರ್ವಂ ಯತ್ಕಿಂಚಿತ್ ಜಗತ್ಯಾಂ ಜಗತ್’ ಎನ್ನುವ ವೇದೋಕ್ತಿ ಇದನ್ನು ಪುಷ್ಟೀಕರಿಸುತ್ತದೆ. ಹೀಗೆ ಯಾವುದು ಸೃಷ್ಟಿಸಿತೋ ಅದನ್ನು ಪರಮಾತ್ಮನೆಂದೂ, ಅದು ಯಾವುದನ್ನು ಸೃಷ್ಟಿಸಿತೋ ಅದನ್ನು ಕೋಟ್ಯಾಂತರ ರೂಪಗಳನ್ನೊಳಗೊಂಡ ಜಗತ್ ಎಂದೂ, ಸೃಷ್ಟಿಸಿದ ಅವನು, ಈ ಜಗತ್ತಿನ ಆ ಕೋಟ್ಯಾಂತರ ರೂಪಗಳಲ್ಲಿ ಸೇರಿಕೊಂಡನಲ್ಲಾ, ಅದನ್ನು ಆತ್ಮವೆಂದೂ ಕರೆಯಲ್ಪಟ್ಟಿದೆ. ಒಂದು ಬೃಹತ್ ಆತ್ಮ ಮಿಕ್ಕೆಲ್ಲವೂ ಪ್ರತ್ಯಗಾತ್ಮಗಳು. ಎಂದರೆ ನಾವೆಲ್ಲಾ ಪ್ರತ್ಯಗಾತ್ಮಗಳು. ಹಾಗಾದರೆ ನಮ್ಮ ಅಸ್ತಿತ್ವಕ್ಕೆ ಹೆಸರೇನು? ಎಂದರೆ, ನಮ್ಮ ಅಸ್ತಿತ್ವಕ್ಕೆ ಕೇವಲ ‘ಅಹಂಕಾರ’ ವೆನ್ನವ ಹೆಸರಿಡಬಹುದು.

‘ನಾನು’ ಎನ್ನುವ ಭಾವ ಮಾತ್ರ ನಮ್ಮ ಅಸ್ತಿತ್ವದ ಕುರುಹು. ಆ ನಾನು ಎನ್ನುವದನ್ನು ತೊರೆದರೆ ಪ್ರತ್ಯಗಾತ್ಮ ಮತ್ತು ಪರಮಾತ್ಮನಲ್ಲಿ ಭೇಧವಿರುವುದಿಲ್ಲ. ಉದಾ: ಒಂದು ದೊಡ್ಡ ಕೊಡ. ಕೊಡದ ತುಂಬಾ ನೀರು. ಆ ನೀರನ್ನು ಕೊಡದ ನೀರು ಎನ್ನುತ್ತಾರೆ. ಒಂದು ಲೋಟವನ್ನು ತೆಗೆದುಕೊಂಡು ಆ ಕೊಡದಿಂದ ನೀರನ್ನು ಬಗ್ಗಿಸಿ, ಲೋಟದೊಳಕ್ಕೆ ತುಂಬಿಕೊಂಡರೆ, ಆಗ ಅದು ‘ಲೋಟದ ನೀರಾ’ಗುತ್ತದೆ, ಅಲ್ಲವೇ? ಮತ್ತೆ ಆ ನೀರನ್ನು ಕೊಡದೊಳಕ್ಕೆ ಸುರಿದರೆ ಆ ಲೋಟದಲ್ಲಿದ್ದ ನೀರು ತನ್ನ ಅಸ್ತಿತ್ವವನ್ನು ಕಳೆದುಕೊಂಡು ಮತ್ತೆ ಕೊಡದ ನೀರಾಗುತ್ತದೆ. ಇದೇ ರೀತಿ, ನಮ್ಮ ರೂಪದೊಂದಿಗೆ ನಮ್ಮನ್ನು ನಾವು ಗುರುತಿಸಿಕೊಳ್ಳುವತನಕ ‘ ನಾವು’ ಎನ್ನುವ ಭಾವವಿರುತ್ತದೆ. ರೂಪವನ್ನು ಮೀರಿ ನಮ್ಮನ್ನು ನಾವು ಗುರ್ತಿಸಿಕೊಂಡಾಗ ಆ ಜಗನ್ನಾಟಕ ಸೂತ್ರಧಾರಿಯ ಲೀಲಾವಿನೋದದಲ್ಲಿ ನಾವೂ ಬೆರೆತು ಪರಮಾತ್ಮನಾದ ಅವನು ಎಂತಹ ಆನಂದವನ್ನು ಅನುಭವಿಸುತ್ತಾನೋ ಅದನ್ನೇ ಪ್ರತ್ಯಗಾತ್ಮಗಳಾದ ನಾವೂ ಅನುಭವಿಸಬಹುದು.

 

ರಸಧಾರೆ – ೮೪೯

ಒಮ್ಮನಸಿನಿಂದ ನೀನೀ ತತ್ವವಂ ಗ್ರಹಿಸು ।
ಬ್ರಹ್ಮಲೀಲೆಗೆ ಗೊತ್ತುಗುರಿ ಲೆಕ್ಕವಿಲ್ಲ ।।
ಸುಮ್ಮನಿರು ನಿನ್ನ ಪಾಡನು ಪಡುತ ತುಟಿ ಬಿಗಿದು ।
ನೆಮ್ಮದಿಗೆ ದಾರಿಯಿದು – ಮಂಕುತಿಮ್ಮ ।।

ಒಮ್ಮನಸಿನಿಂದ =ಒಂದೇ ಮನಸ್ಸಿನಿಂದ

ಏಕಾಗ್ರ ಮನಸ್ಸಿನಿಂದ ನೀನು ಈ ತತ್ವವನ್ನು ಗ್ರಹಿಸು. ಪರಮಾತ್ಮನ ಲೀಲಾವಿನೋದಕ್ಕೆ ಮಿತಿಯಿಲ್ಲ, ಗೊತ್ತು ಗುರಿಯಿಲ್ಲ. ನಿನಗೆ ಸಂದ ಪಾಡನ್ನು ಪಡುತ್ತ ಮೌನವಾಗಿ, ಸುಮ್ಮನೆ, ಶಾಂತವಾಗಿರು. ನೆಮ್ಮದಿಯ ಬದುಕಿಗೆ ಇದೇ ದಾರಿ,ಎಂಬ ಸಂದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಲೋಕವ್ಯವಹಾರಕ್ಕೆ ಕಾರಣವಾದ, ಆದರೆ ಅದರಿಂದ ಭಿನ್ನವಾದ ‘ ಪರತತ್ವ’ವನ್ನು ಏಕಾಗ್ರ ಮನಸ್ಸಿನಿಂದ ಧಾರಣೆ ಮಾಡಿ ಅದರ ಸಾರವನ್ನು ಗ್ರಹಿಸಬೇಕೆಂಬುದು ಈ ಮುಕ್ತಕದ ಆಶಯ. ಈ ಜಗತ್ತಿನ ವ್ಯವಹಾರವನ್ನು ಆ ಪರಮಾತ್ಮನ ಲೀಲಾ ವಿನೋದವೆಂದು ಹೇಳಿದ್ದಾರೆ ನಮ್ಮ ಋಷಿಮುನಿಗಳು. ಅದು ಅನೂಹ್ಯ, ಅನಂತ, ಅಸೀಮ. ಹಾಗಾಗಿ ಅದರ ಅಗಲ-ಆಳಗಳು,ವಿನ್ಯಾಸ-ವಿಸ್ತಾರಗಳು ಅರ್ಥವಾಗುವುದೇ ಇಲ್ಲ. ಅದು ಹೇಗೆ ನಡೆಯುತ್ತದೆ, ಏಕೆ ನಡೆಯುತ್ತದೆ, ಅದರ ಆದಿಯೆಂದು, ಅಂತ್ಯವೆಂದು, ಇದಕ್ಕೆ ಕಾರಣವೇನು, ಕಾರಕರಾರು, ಇಂದು ನಡೆಯುತ್ತಿರುವುದು ಮುಂದೆ ಏನಾಗುತ್ತದೆ ಎಂಬ ಸಾವಿರಾರು ಪ್ರಶ್ನೆಗಳು ಉತ್ತರ ಸಿಗದೆ ಪ್ರಶ್ನೆಗಳಾಗಿಯೇ ಉಳಿಯುತ್ತವೆ. ಅದಕ್ಕೇ ಮಾನ್ಯ ಗುಂಡಪ್ಪನವರು ಇದನ್ನು " ಬ್ರಹ್ಮಲೀಲೆಗೆ ಗೊತ್ತುಗುರಿ, ಲೆಕ್ಕವಿಲ್ಲ " ಎಂದಿದ್ದಾರೆ.

ಹಾಗಾಗಿ ಅದನ್ನು ಅರಿತುಕೊಳ್ಳಲು ತೀವ್ರತಮ ಪ್ರಯತ್ನವನ್ನು ಪಡದೆ, ಪರಮಾತ್ಮನೇ ತನ್ನ ಇಚ್ಚೆಯಂತೆ ಜಗತ್ತನ್ನು ಸೃಷ್ಟಿಸಿದ್ದಾನೆ. ತನಗೆ ಹೇಗೆ ಬೇಕೋ ಹಾಗೆ ನಡೆಸಿಕೊಳ್ಳುತ್ತಾನೆ, ಅವನ ವಿಧಾನವನ್ನು ಅರಿಯಲು ಸಾಧ್ಯವಿಲ್ಲ ಮತ್ತು ನಾನೂ ಸಹ ಅವನ ವಿನ್ಯಾಸದ ಒಂದು ಬಿಂದು ಎಂದು ಅರಿತು ಒಪ್ಪಿಕೊಂಡು ದೃಢವಾಗಿ ನಂಬಬೇಕು. ನಮಗೆ ಪರ್ಯಾಯ ಮಾರ್ಗವೇನೂ ಇಲ್ಲದಿರುವಾಗ ‘ ಮೌನವಾಗಿ’ ಬಂದ ಪಾಡನ್ನು ಅನುಭವಿಸುತ್ತಾ, ತರ್ಕ,ವಿತರ್ಕ ಮತ್ತು ಕುತರ್ಕಗಳಲ್ಲಿ ಸಮಯವನ್ನು ವ್ಯರ್ಥಮಾಡದೇ ‘ ತುಟಿ ಬಿಗಿಹಿಡಿದು ‘ ಬದುಕಿದರೆ ನೆಮ್ಮದಿ ಎನ್ನುತ್ತಾರೆ ಡಿವಿಜಿಯವರು. ಆದರೆ ನಮಗಿರುವ ‘ ನಾನು ‘ ಎನ್ನುವ ಭಾವ ನಮ್ಮನ್ನು ‘ ಪರತತ್ವ’ವನ್ನು ಸಂಪೂರ್ಣವಾಗಿ ಧಾರಣೆ ಮಾಡಲು ಬಿಡುವುದಿಲ್ಲ. ‘ ನಾನು ಎಂಬುದ ಬಿಟ್ಟು ಜ್ಞಾನಿಗಳೊಡಗೂಡಿ ಏನೆಲ್ಲಕೆ ದೇವ ಪ್ರೇರಣೆಯೆಂದು’ ಎಂದು ಬದುಕುವಂತೆ ಪೂಜ್ಯ ಪುರಂದರದಾಸರು ಬಹಳ ಸೂಕ್ತವಾಗಿ ಸೂಚಿಸಿದ್ದಾರೆ.

ನಮಗೆ ಜೀವನದಲ್ಲಿ ಆನಂದ ಬೇಕು. ನಾವು ಮಾಡುವ ಪ್ರತೀ ಕೆಲಸದಲ್ಲೂ ನಾವು ಆನಂದವನ್ನು ಹುಡುಕುತ್ತೇವೆ. ಆದರೆ ನಮಗೆ ಸಿಗುವ ಫಲಗಳ ವಿಶ್ಲೇಷಣೆಯನ್ನು ಮಾಡುತ್ತಾ ಅದರ ಬಗ್ಗೆ ತರ್ಕಮಾಡುತ್ತಾ ಹೋದರೆ ನಿಜವಾದ ಆನಂದದಿಂದ ನಾವು ವಂಚಿತರಾಗುತ್ತೇವೆ. ಹಾಗಾಗಿ ಪರತತ್ವದ ವಿನ್ಯಾಸಕ್ಕೆ ಶರಣಾಗಿ ಸಂದ ಬದುಕನ್ನು ಕೊರಗು ಚಿಂತೆಗಳಿಲ್ಲದೆ ಬದುಕುವುದೇ ಆನಂದಕ್ಕೆ ನಿಜವಾದ ಮಾರ್ಗವೆನ್ನುವುದು ಈ ಮುಕ್ತಕದ ಹೂರಣ.