RSS

Monthly Archives: ಜೂನ್ 2015

ರಸ ಚೆನ್ನುಡಿ

ಒಳ ನುಗ್ಗುವ ಧೂಳನ್ನು ತಡೆದರೆ ಮನೆ ಸ್ವಚ್ಚವಾಗಿರುವಂತೆ

ನಮ್ಮ ‘ಒಳಗ’ನ್ನು ಪ್ರೇರೇಪಿಸುವ ಹೊರಗನ್ನು ಗೆದ್ದರೆ
ಅಂತರಂಗದ ನಿಯಂತ್ರಣ ಬಹಳ ಸುಲಭವಾಗುತ್ತದೆ – ಅನಾಮಿಕ

Advertisements
 

ರಸ ಚೆನ್ನುಡಿ

ಯಾರಿಗೂ ಸಂಪೂರ್ಣವಾಗಿ ಸಮರ್ಪಕವಾದ ಮತ್ತು ಸಮಸ್ಯೆಗಳೇ ಇಲ್ಲದ ಬದುಕು ಸಿಗುವುದೇ ಇಲ್ಲ.

ಆದರೆ ಕೆಲವರಿಗೆ ಮಾತ್ರ ಬದುಕನ್ನು ಸಮರ್ಪಕವಾಗಿ ನಿಭಾಯಿಸುವ ಕಲೆ ಸಿದ್ಧಿಸಿರುತ್ತದೆ – ಅನಾಮಿಕ

 

ರಸಧಾರೆ – ೮೭೨

ಗುಡಿಸಲೇನೊಣಹುಲ್ಲು ಕಡ್ಡಿ ಮಣ್ಣೆನ್ನುತಲಿ ।
ಬಡವನಲಿ ಕೊರತೆಗಳ ನೆಡುವುದರಿದಲ್ಲ ।।
ಕೆಡಿಸಿದಾ ಗುಡಿಸಿಲಿನ ನೆಮ್ಮದಿಯ ಮತ್ತೆಂತು ।
ಕೊಡಲಹುದವಂಗೆ ನೀಂ – ಮಂಕುತಿಮ್ಮ ।।

ಗುಡಿಸಲೇನೊಣಹುಲ್ಲು=ಗುಡಿಸಲೇನು+ಒಣಹುಲ್ಲು, ಮಣ್ಣೆನ್ನುತಲಿ=ಮಣ್ಣು+ಎನ್ನುತಲಿ, ನೆಡುವುದರಿದಲ್ಲ=ನೆಡುವುದು+ಅರಿದು+ಅಲ್ಲ, ಕೊಡಲಹುದವಂಗೆ=ಕಡಲು+ಅಹುದು+ಅವಂಗೆ

ಅರಿದು=ಸರಿ,ಸೂಕ್ತ, ಅವಂಗೆ=ಅವನಿಗೆ

ಗುಡಿಸಲನ್ನು ‘ ಅದೇನು ಮಹಾ!!! ಒಣಹುಲ್ಲಿನಿಂದ, ಕಡ್ಡಿ ಮಣ್ಣಿನಿಂದ’ ಕಟ್ಟಿರುವುದು ಎಂದು ತಾತ್ಸಾರದಿಂದ ಅದರಲ್ಲಿ ವಾಸಿಸುವ ಬಡವನನ್ನು ಹೀನಾಯವಾಗಿ ಕಂಡು ಆ ಗುಡಿಸಲನ್ನು ಕೆಡವಿ ಕೆಡಿಸಿದರೆ, ಆ ಗುಡಿಸಿಲಿನಲ್ಲೇ ಅವನಿಗೆ ಸಿಗುತ್ತಿದ್ದ ನೆಮ್ಮದಿಯನ್ನು, ಮತ್ಯಾವುದರಿಂದಲಾದರೂ, ಅವನಿಗೆ ಕೊಡಲಾಗುತ್ತದೆಯೇ? ಎಂದು, ಅವರವರ ಸುಖ ಸಾಧನ ಅವರವರಿಗೆ ಸೂಕ್ತ ಎನ್ನುವಂತಹ ಸೂತ್ರವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಪ್ರತಿಯೊಬ್ಬರೂ ಅವರವರದೇ ರೀತಿಯಲ್ಲಿ ಆನಂದಪಡುತ್ತಾರೆ. ಪ್ರತಿಯೊಬ್ಬರಿಗೂ ಆ ಆನಂದದ ಸಾಧನಗಳು ಅವರವರದೇ ಆಗಿರುತ್ತದೆ. ಅದನ್ನು ಕಂಡು ನಾವು ಕುಹಕವಾಡುವುದೋ, ಅವಹೇಳನಕಾರಿಯಾಗಿ ವರ್ತಿಸುವುದೋ ಮಾಡಿದರೆ ಅದು ನಮ್ಮ ಕು-ಸಂಸ್ಕಾರವನ್ನು ತೋರುತ್ತದೆ. ಒಬ್ಬ ಒಂದು ಮಣ್ಣಿನಿಂದ ಕಟ್ಟಿದ ಮತ್ತು ಹುಲ್ಲು ಮತ್ತು ಗರಿಗಳಿಂದ ಹೊದಿಸಿದ ಮೇಲ್ಛಾವಣಿಯ ಒಂದು ಗುಡಿಸಿಲಲ್ಲಿ ವಾಸಿಸುತ್ತಾ, ತೃಪ್ತಿಯಿಂದ ಆನಂದದಿಂದಿದ್ದಾನೆ ಎಂದಿಟ್ಟುಕೊಳ್ಳಿ, ‘ಈ ಮಣ್ಣಿನ ಗುಡಿಸಿಲೇಕೆ’ ಎಂದು ಅದನ್ನು ಕೆಡವಿಸಿ, ಅವನನ್ನು ಅರಮನೆಯ ಸುಪ್ಪತ್ತಿಗೆಯ ಮೇಲೆ ಮಲಗಿಸಿದರೂ ಅವನಿಗೆ ಆ ಗುಡಿಸಿಲಲ್ಲಿ ಸಿಕ್ಕ ಆನಂದ ಅಥವಾ ತೃಪ್ತಿ ಸಿಕ್ಕೀತೆ? ಖಂಡಿತ ಸಾಧ್ಯವಿಲ್ಲ.

ಹಾಗೆ ಅವನಿಗೆ, ಅವನದಲ್ಲದ ಸುಖದ ಸಾಧನಗಳನ್ನು ತೋರಿ ಅವನನ್ನು ದಾರಿತಪ್ಪಿಸಿದಂತಾಗುತ್ತದೆ ಮತ್ತು ಮತ್ತೊಬ್ಬರ ಮೇಲೆ ಆಧಾರಪಡುವಂತಹ ಸ್ಥಿತಿಗೆ ಅವನನ್ನು ತಳ್ಳಿ ಅವನನ್ನು ದಯನೀಯವಾದ ಸ್ಥಿತಿಗೆ ತಳ್ಳಿದಂತಾಗುತ್ತದೆ. ಅದು ಸರಿಯಲ್ಲವಾದ್ದಾರಿಂದ, ನಾವು ಮತ್ತೊಬ್ಬರ ವಿಷಯದಲ್ಲಿ ಹಸ್ತಕ್ಷೇಪ ಮಾಡದೆ ಅವರವರಿಗೆ ಏನು ದಕ್ಕಿದೆಯೋ ಮತ್ತು ಯಾರ್ಯಾರು ಯಾವುದರಲ್ಲಿ ತೃಪ್ತಿಯಿಂದ ಆನಂದಪಡುತ್ತಿದ್ದಾರೋ ಅವರನ್ನು ಅವರಷ್ಟಕ್ಕೆ ಬಿಟ್ಟರೆ ಸೊಗಸು. ಹಾಗೆ ಅವರು ಬಯಸಿದ್ದನ್ನು ಅವರು ಬಯಸಿದ ಹಾಗೆ, ಯಾವ ನಿಬಂಧನೆಗಳು ಅಥವಾ ಲೇಪನಗಳಿಲ್ಲದೆ, ನಾವು ಕೊಟ್ಟು ಅದರಿಂದ ಅವರು ಸಂತೋಷಪಡುವುದಾದರೆ ಒಳ್ಳೆಯದು. ಆದರೆ ಅಂತಹ ಸ್ಥಿತಿ ಬಹಳ ವಿರಳವಾಗಿ ಸಿಗುತ್ತದೆ.

ಅನ್ಯರ ವಿಚಾರವನ್ನು ಮತ್ತು ಅವರ ಅಭಿಪ್ರಾಯಗಳನ್ನು ಗೌರವಿಸುವುದು ಮತ್ತು ಅನ್ಯರ ವಿಷಯದಲ್ಲಿ ಅನಾವಶ್ಯಕವಾಗಿ ಮೂಗತೂರಿಸದಿರುವುದು ಒಳ್ಳೆಯ ಸಂಸ್ಕಾರದ ಲಕ್ಷಣಗಳು. ಅದನ್ನು ಬೆಳೆಸಿಕೊಳ್ಳಬೇಕಾದರೆ ದೃಢವಾದ ಮನಸ್ಸು ಮತ್ತು ಸತ್ಪ್ರಯತ್ನ ಬೇಕು. ನಾವು ಅಂತಹ ಪ್ರಯತ್ನವನ್ನು ಮಾಡಲಾದರೆ ಮತ್ತು ಅಂತಹ ಸಂಸ್ಕಾರಗಳನ್ನು ಬೆಳೆಸಿಕೊಳ್ಳಲಾದರೆ ನಮ್ಮ ಮತ್ತು ಪರರ ಪರಸ್ಪರ ಸಂಬಂಧಗಳು ಗಟ್ಟಿಯಾಗಿ ಬಹಳ ಕಾಲ ನಿಲ್ಲುತ್ತವೆ. ಇಲ್ಲದಿದ್ದರೆ ರಾಗ-ದ್ವೇಷಗಳ, ಕೋಪಾಸೂಯೆಗಳ ಲೇಪನವನ್ನು ಬಳಿದುಕೊಂಡು ಕುಸಿಯುತ್ತದೆ. ಹಾಗಾಗಿ ನಾವು ಜಾಗರೂಕರಾಗಿರಬೇಕು.

 

ರಸ ಚೆನ್ನುಡಿ

ಜೀವನದಲ್ಲಿ ಕಷ್ಟಗಳ ಶಿಖರದಲ್ಲಿ ‘ದೇವರಲ್ಲಿ’ನ ನಮ್ಮ ನಂಬಿಕೆ, ಎರಡು ರೀತಿಯ ಫಲ ನೀಡಬಹುದು.
ನಾವು ಬೀಳುವ ಮುನ್ನ ‘ಅವನು’ ಹಿಡಿದೆತ್ತಬಹುದು ಅಥವಾ ಗರಿಗೆದರಿ ಹಾರಲು ನಮಗೆ ಶಕ್ತಿಯನ್ನು ನೀಡಬಹುದು – ಅನಾಮಿಕ.

 

ರಸಧಾರೆ – ೮೭೧

ಆರಿಗಾವುದು ತಕ್ಕುದಾರಿಗಾವುದು ದಕ್ಕ- ।
ದೀ ರಹಸ್ಯದಿನಾದ ಸಾಹ್ಯವುಪಕಾರ ।।
ತಾರತಮ್ಯವಿವೇಕವರಿಯದಾ ಸಂಸ್ಕಾರ ।
ಪ್ರೇರಕವೋ ಚೌರ್ಯಕ್ಕೆ – ಮಂಕುತಿಮ್ಮ ।।

ಆರಿಗಾವುದು=ಆರಿಗೆ+ಆವುದು, ತಕ್ಕುದಾರಿಗಾವುದು=ತಕ್ಕುದು+ಆರಿಗೆ+ಆವುದು, ದಕ್ಕದೀ=ದಕ್ಕದು+ಈ, ರಹಸ್ಯದಿನಾದ=ರಹಸ್ಯದೀನ್+ಆದ, ಸಾಹ್ಯವುಪಕಾರ=ಸಾಹ್ಯ+ಉಪಕಾರ,
ತಾರತಮ್ಯವಿವೇಕವರಿಯದಾ=ತಾರತಮ್ಯ+ವಿವೇಕವ+ಅರಿಯದಾ,

ಚೌರ್ಯ=ಕಳ್ಳತನ

ಯಾರು ಯಾರಿಗೆ ಏನು ತಕ್ಕುದ್ದೋ ಅವರವರಿಗೆ ಅದು ದಕ್ಕುತ್ತದೆ. ಆದರೆ ಯಾರಿಗೆ ಏನು ಸೂಕ್ತವಾದದ್ದು ಮತ್ತು ಯಾರಿಗೆ ಏನು ದಕ್ಕುತ್ತದೆ ಎನ್ನುವುದು ರಹಸ್ಯವಾಗಿರುವುದು. ಆ ರಹಸ್ಯವನ್ನು ಅರಿತರೆ ನಮಗೆ ಉಪಕಾರವಾಗುತ್ತದೆ. ನಾವು ಬಯಸಿದ್ದು ಮತ್ತು ನಾವು ಪಡೆದಿದ್ದರ ನಡುವಿನ ಅಂತರವನ್ನು ಅರಿತರೆ ಸಂಸ್ಕಾರ ಬೆಳೆಯುತ್ತದೆ. ಹಾಗೆ ಅರಿಲಾಗದಿದ್ದರೆ, ನಮಗೆ ಸಿಗದ ವಸ್ತುವನ್ನು ಪಡೆಯಲು ಕಳ್ಳತನಮಾಡಲು ನಮ್ಮನ್ನು ಪ್ರೇರೇಪಿಸುತ್ತದೆ, ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಬದುಕಿನಲ್ಲಿ ನಾವು ಬಯಸುವುದೇನೋ!! ಆದರೆ ನಮಗೆ ದಕ್ಕುವುದು ಮತ್ತೇನೋ!! ನಾವು ಬಯಸಿದ್ದು ಸೂಕ್ತವೋ ಅಲ್ಲವೋ ಅಥವಾ ನಾವು ಬಯಸಿದ್ದನ್ನು ಪಡೆದುಕೊಳ್ಳಲು ನಮಗೆ ಯೋಗ್ಯತೆ ಇದೆಯೋ ಇಲ್ಲವೋ ಎಂದು ನಮಗೆ ಅರಿಯಲಾಗುವುದೇ ಇಲ್ಲ, ಅಲ್ಲವೇ? ‘ ದೃಷ್ಯಮಾಣೆ ಭವೇತ್ ಪ್ರೀತಿ: ‘ ಹಾಗಾಗಿ ಕಂಡದ್ದನ್ನೆಲ್ಲಾ ಬಯಸುವ ಜಾಯಮಾನ ನಮ್ಮದು. ಬಯಕೆಗಳನ್ನು ಇಡೇರಿಸಿಕೊಳ್ಳಲು ನಮ್ಮ ಪ್ರಯತ್ನದ ಕೊರತೆ ಇರಬಹುದು ಅಥವಾ ನಾವು ನಮ್ಮ ಯೋಗ್ಯತೆಗೆ ಮೀರಿದ್ದನ್ನು ಬಯಸಿರಬಹುದು ಅಥವಾ ಯೋಗ್ಯತೆಯೂ ಇದ್ದು ಪ್ರಯತ್ನವೂ ಸರಿಯಾಗಿದ್ದರೂ ನಮಗದು ಸಿಗದಿದ್ದಾಗ, ಆ ‘ಮೂರನೆಯವನಾಟಕ್ಕೆ’ ತಲೆಬಾಗುವುದ ಬಿಟ್ಟು ಬೇರೆ ದಾರಿಯಿಲ್ಲ ಎಂದು ಅರಿತುಕೊಂಡು ನಮ್ಮನ್ನು ನಾವು ಸಮಾಧಾನಪಡಿಸಿಕೊಳ್ಳಬೇಕು.

ಪ್ರತಿಯೊಬ್ಬರಿಗೂ ಯಾವ ಯಾವ ಸಮಯಕ್ಕೆ, ಏನೇನು, ಎಷ್ಟೆಷ್ಟು ಸಿಗಬೇಕೋ ಅದು ಸಿಕ್ಕೇ ಸಿಗುತ್ತದೆ, ಎನ್ನುವುದು ನಮ್ಮ ಸಿದ್ಧಾಂತ. ಕೆಲವರಿಗೆ ಅಧಿಕ, ಕೆಲವರಿಗೆ ಕಡಿಮೆ. ಕೆಲವರಿಗೆ ಕೆಲಕಾಲಕ್ಕೆ ಕಡಿಮೆ ಕೆಲಕಾಲಕ್ಕೆ ಅಧಿಕ, ಕೆಲವರಿಗೆ ಜೀವನದುದ್ದಕ್ಕೂ ಬವಣೆ, ಕಾರ್ಪಣ್ಯ, ಕಷ್ಟ ಮತ್ತು ದಾರಿದ್ರ್ಯ. ಕೆಲವರಿಗೆ ಇಡೀ ಜೀವನ ಸುಖದ ಸುಪ್ಪತ್ತಿಗೆ. ಏಕೆ ಹೀಗೆ ? ಈ ತಾರತಮ್ಯಕ್ಕೆ ಕಾರಣವೇನು? ಎಂದು ಯೋಚಿಸಿದರೆ, ಅದು ನಮಗೆ ಅರ್ಥವಾಗದ ರಹಸ್ಯ. ಇದನ್ನು ಅರಿಯುವುದೇ ಸಂಸ್ಕಾರ. ಈ ರಹಸ್ಯ ಅರ್ಥವಾಗದಿದ್ದರೆ, ನಾವು ಬಯಸಿದ್ದು ನಮಗೆ ಸಿಗದಿದ್ದಾಗ ಅದನ್ನು ಹೇಗಾದರೂ ಪಡೆದುಕೊಳ್ಳುವ ಪ್ರಯತ್ನದಲ್ಲಿ, ಅದನ್ನು ಅನ್ಯರಿಂದ
‘ಕಸಿದುಕೊಳ್ಳು’ ವಂತಹ ಬುದ್ಧಿಯೂ ಬರಬಹುದು, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಒಂದು ವಸ್ತು(ವಿಷಯ ಮತ್ತು ವ್ಯಕ್ತಿ)ವನ್ನು ನಾವು ಬಯಸಿದಾಗ, ಅದು ನಮಗೆ ಬೇಕೆ ಎಂದು ಮೊದಲು ನಿಶ್ಚಯವಾಗಬೇಕು. ಹೌದಾದರೆ ಅದನ್ನು ಪಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಪಡಬೇಕು. ಸಿಕ್ಕರೆ ಸಿಕ್ಕಷ್ಟರಲ್ಲಿ ತೃಪ್ತರಾಗಿ ಅಹಂಕಾರಪಡದೆ ಸಂತೋಷಪಡಬೇಕು. ಸಿಗದಿದ್ದರೆ ನಮಗದರ ಪ್ರಾಪ್ತಿಯಿಲ್ಲ ಎಂದು’ ಅರಿತು’ ಸುಮ್ಮನಿರುವುದೇ ಒಳ್ಳೆಯದು. ಹಾಗೆ ಸಿಗದಿದ್ದದ್ದನ್ನು ಕುರಿತು ಚಿಂತೆಮಾಡುವುದೋ,
ಮತ್ತೆಮತ್ತೆ ವ್ಯರ್ಥಪ್ರಯತ್ನ ಮಾಡುವುದೋ ಅಥವಾ ಸಿಕ್ಕವರ ಕಂಡು ಮತ್ಸರದಿಂದ ಕರುಬುವುದೋ ಅಥವಾ ಅವರಿಂದ ಕಸಿದುಕೊಳ್ಳುವ ಪ್ರಯತ್ನವನ್ನು ಮಾಡುವುದೋ ಅಥವಾ ಎಂದಾದರೂ ಹಿಂತಿರುಗಿ ಕೊಡಲೇಬೇಕಾದ ಋಣವನ್ನು ಕಟ್ಟಿಕೊಳ್ಳಲು,’ಎರವಲು’ ಪಡೆದುಕೊಳ್ಳುವುದೋ ಮಾಡಿದರೆ ಅದು ಸುಖವನ್ನೂ ನೀಡುವುದಿಲ್ಲ ಸಂತೋಷವನ್ನೂ ತರುವುದಿಲ್ಲ. ಹಾಗಾಗಿ ನಮ್ಮ ಪ್ರಯತ್ನದಿಂದ ನಮಗೆ ಸಿಕ್ಕಿದ್ದನ್ನು ಆ ಪರಮಾತ್ಮನ ಪ್ರಸಾದವೆಂದು ಅರಿತು ತೃಪ್ತಿಯಿಂದಿರುವುದೇ, ಸುಖ ಸಂತೋಷ ಮತ್ತು ಆನಂದಕ್ಕೆ ದಾರಿ.

 

ರಸ ಚೆನ್ನುಡಿ

ದಿನಕ್ಕೊಂದು ಚೆನ್ನುಡಿ

ಬದುಕಿನಲ್ಲಿ ಉಂಡಂತಹ ನೋವನ್ನು ಮರೆತುಬಿಡಬೇಕು
ಆದರೆ ಆ ನೋವು ಕಲಿಸಿದ ಪಾಠವನ್ನು ಎಂದಿಗೂ ನೆನಪಿಡಬೇಕು – ಅನಾಮಿಕ

 

ರಸ ಚೆನ್ನುಡಿ

‘ನಮ್ಮೊಳ’ಗನ್ನು ಶುದ್ಧವಾಗಿರಿಸಿಕೊಂಡರೆ ನಮಗೆ ಜಗತ್ತು ಶುದ್ಧವಾಗಿ ಕಾಣುವುದು.
ಅಂತರಂಗದಲ್ಲಿ ಹೊಲಸನ್ನು ತುಂಬಿಕೊಂಡು ಜಗವನ್ನು ತೊಳೆಯುವ ಪ್ರಯತ್ನ, ಶುದ್ಧ ಮೂರ್ಖತನ – ಅನಾಮಿಕ