RSS

Monthly Archives: ಜುಲೈ 2015

ರಸಧಾರೆ – ೯೦೨

ಮಲಗಿದೋದುಗನ ಕೈಹೊತ್ತಗೆಯು ನಿದ್ದೆಯಲಿ ।
ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ ।।
ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು ।
ಸಡಿಲವುವು ಬಾಳ್ ಮಾಗೆ – ಮಂಕುತಿಮ್ಮ ।।

ಮಲಗಿದೋದುಗನ=ಮಲಗಿದ+ಓದುಗನ

ಕೈಯಲ್ಲಿ ಪುಸ್ತಕವನ್ನು ಹಿಡಿದು ಓದುತ್ತಾ ಮಲಗಿದವನಿಗೆ ನಿದ್ರೆ ಬಂದರೆ ಹೇಗೆ ಕೈಯಲ್ಲಿರುವ ಪುಸ್ತಕ ಜಾರಿ ಬೀಳುತ್ತದೆಯೋ ಹಾಗೆಯೇ, ಪಕ್ವವಾದ ಫಲವೂ ಮರದಿಂದ ಬೀಳುತ್ತದೆ. ಈ ಜಗತ್ತಿನ ಸಂಬಂಧಗಳು, ಸಂಕಲ್ಪಗಳು ಮತ್ತು ನಿಯಮಗಳೂ ಸಹ ನಾವು ಅಂತರಂಗದಲ್ಲಿ ಪಕ್ವವಾದಂತೆ ಸಡಿಲವಾಗುವುವು, ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಸ್ವಲ್ಪ ಹಾಗೇ ಒರಗಿ ಪುಸ್ತಕ ಓದುತ್ತಿರುವವನಿಗೆ ನಿದ್ರೆ ಬಂದೊಡನೆಯೇ, ಕೈಲಿದ್ದ ಪುಸ್ತಕ ಜಾರಿಬೀಳುವುದು. ಏಕೆಂದರೆ ಮಲಗಿ ನಿದ್ರೆಗೆ ಜಾರುವಾಗ, ನಮಗೆ ಪ್ರಾಪಂಚಿಕ ವಸ್ತುಗಳ ಮೇಲೆ ಹಿಡಿತ ಸಡಿಲವಾಗುತ್ತದೆ. ಹಾಗೆಯೇ ಒಂದು ಮರದಲ್ಲಿನ ಕಾಯಿ, ಇನ್ನೂ ಹಸಿಯಾಗಿ ಕಾಯಾಗಿ ಇರುವ ತನಕ ಗಿಡ ತೊಟ್ಟಿನ ಮೂಲಕ ಅದನ್ನು ಭಧ್ರವಾಗಿ ಹಿಡಿದುಕೊಂಡಿರುತ್ತದೆ. ಆ ಕಾಯಿ ಮಾಗಿ ಹಣ್ಣಾದಾಗ, ತಾನೇ ತಾನಾಗಿ ಗಿಡದ ಹಿಡಿತದಿಂದ ಮುಕ್ತವಾಗಿ, ಕೆಳಗೆ ಬೀಳುತ್ತದೆ. ಇವೆರಡು ರೂಪಕಗಳನ್ನಿತ್ತು, ಅಂತರಂಗದಲ್ಲಿ ನಾವು ಪಕ್ವವಾಗುತ್ತಾ ಬಂದಂತೆ, ನಾವು ಅಂಟಿಕೊಂಡಿರುವ ಈ ಜಗತ್ತಿನ ಸಂಬಂಧಗಳು ಮತ್ತು ಆ ಸಂಬಂಧಗಳ ನಿಯಮಗಳೂ ಸಹ, ಸಡಿಲವಾಗುತ್ತವೆ ಎನ್ನುವುದೇ ಈ ಮುಕ್ತಕದ ಹೂರಣ.

ಇಲ್ಲಿ ಪುಸ್ತಕವನ್ನು ಹಿಡಿದಿರುವವನು ವ್ಯಕ್ತಿ, ಅವನನ್ನು ಪುಸ್ತಕ ಹಿಡಿಲ್ಲವಲ್ಲ. ನಿದ್ರೆಯಿಂದ ಹಗುರಾದ ದೇಹ ಭಾರವಾದ ಪುಸ್ತಕವನ್ನು ಬಿಟ್ಟುಬಿಡುತ್ತದೆ. ಹಾಗೆಯೇ ಕಾಯನ್ನು ಗಟ್ಟಿಯಾಗಿ ತೊಟ್ಟಿನ ಬಲದಿಂದ ಹಿಡಿದಿರುವುದು, ಮರ. ಕಾಯಿ ಮಾಗಿ ಹಣ್ಣಾದಾಗ, ತೊಟ್ಟು ಒಣಗಿ ಹಗುರಾಗಿ, ಹಣ್ಣಿನ ತೂಕ ಹೆಚ್ಚಾಗಿ ತೊಟ್ಟು ಅದನ್ನು ಹಿಡಿದಿಡಲಾರದೆ ಬಿಟ್ಟು ಬಿಡುತ್ತದೆ, ಅಲ್ಲವೇ? ಹಾಗೆಯೇ ಈ ಜಗತ್ತಿನ ವಸ್ತು ವಿಷಯ ಮತ್ತು ವ್ಯಕ್ತಿಗಳನ್ನು ನಾವು ಮೋಹ ಮತ್ತು ವ್ಯಾಮೋಹಗಳೆಂಬ ಅಂಟಿನಿಂದ ಹಿಡಿದುಕೊಂಡಿರುತ್ತೇವೆ. ಅವುಗಳಿಂದ ನಮಗೆ ನೋವು ಮತ್ತು ನಲಿವು, ದುಃಖ ಮತ್ತು ಸಂತೋಷ, ಬೇಸರ, ಜಿಗುಪ್ಸೆ ಮಮಕಾರ ಮತ್ತು ಮೋಹಗಳಂತಹ ಭಾವಗಳು ಉಂಟಾಗಿ ಅವು ನಮ್ಮನ್ನು ಈ ಜಗತ್ತಿನ ಎಲ್ಲಕ್ಕೂ ಅಂಟಿಸಿಬಿಡುತ್ತದೆ. ಇದು ಬಿಡಿಸಲಾರದ ಅಂಟು (gum)

ಆದರೆ ನಮಗೆ ಈ ಬದುಕಿನ ನಂಟಿನಿಂದ ಉಂಟಾದ, ವಸ್ತು, ವಿಷಯ ಮತ್ತು ವ್ಯಕ್ತಿಗಳೊಂದಿಗಿನ ಸಂಬಂಧ ಮತ್ತು ಆ ಸಂಬಂಧಕ್ಕೆ ಇರುವ ನಿಬಂಧನೆಗಳಿಗೆ ಅಂಟಿಕೊಂಡಿರುವಷ್ಟು ದಿನ ಮಾತ್ರ ಇರುತ್ತದೆ. ಬದುಕಿನ ಅಶಾಶ್ವತೆಯನ್ನು ಅರಿತಾಗ ಮತ್ತು ಸೃಷ್ಟಿಕರ್ತನನ್ನು ಕುರಿತು ಚಿಂತನೆ ಅರಿವು ಹೆಚ್ಚಾದಾಗ,ಮನಸ್ಸು ಬುದ್ಧಿ, ಹಗುರಾಗಿ, ಈ ಜಗತ್ತಿನ ಬಂಧನಗಳೆಲ್ಲಾ ಭಾರವೆನಿಸಿದಾಗ ಅವು ತಾನೇ ತಾನಾಗಿ, ನಿದ್ದೆ ಬಂದಾಗ ಕೈಲಿದ್ದ ಪುಸ್ತಕ ಜಾರಿ ಬಿದ್ದಂತೆ, ಮಾಗಿದ ಹಣ್ಣು ಮರದ ಹಿಡಿತದಿಂದ ಬಿಡಿಸಿಕೊಂಡು ಕೆಳಗ ಬಿದ್ದಂತೆ, ಒಂದೊಂದಾಗಿ ಬೀಳುತ್ತಾ ಹೋಗುತ್ತವೆ. " ಸಡಿಲವುವು ಬಾಳ್ ಮಾಗೆ " ಎಂದು ಗುಂಡಪ್ಪನವರು ಹೇಳುವಂತೆ ನಮ್ಮ ಬಾಳು ಅನುಭವಗಳ ಪ್ರಭಾವಕ್ಕೊಳಗಾಗಿ ಸತ್ಯವನ್ನು ಮತ್ತು ತನ್ಮೂಲಕ ಸತ್ವವನ್ನೂ ಅರಿತು ಪಕ್ವವಾಗಬೇಕು. ಹಾಗೆ ಪಕ್ವವಾದಾಗ, ಮುಕ್ತಿಯ ಮಾರ್ಗದಲ್ಲಿ ನಮ್ಮ ನಡಿಗೆ ಆರಂಭವಾಗುತ್ತದೆ. ನಮ್ಮ ಬಾಳನ್ನು ಪರತತ್ವದ ಅಡಿದಾವರೆಗಳಲ್ಲಿ ಬಾಗಿಸಬೇಕು ಮತ್ತು ಬದುಕನ್ನು ಮಾಗಿಸಬೇಕು. ಹಾಗಾದಾಗ ಬದುಕು ಸಾರ್ಥಕವಾಗುತ್ತದೆ.

Advertisements
 

ರಸಧಾರೆ – ೯೦೧

ನಾನು ನಾನೇ ನಾನೆನುತ್ತ ಕಿರಿಕೊಡದ ನೀರ್ ।
ಗಾನಗೆಯ್ವುದು ಹೆಮ್ಮೆಯಿಂ ಕಡಲ ಮರೆತು ।।
ನೂನದಿಂದೆಲ್ಲವೆನುವಬ್ಧಿಯೊಳಗದನಿರಿಸೆ ।
ಮೌನವದು ಮಣ್ಕರಗಿ – ಮಂಕುತಿಮ್ಮ ।।

ನಾನೆನುತ್ತ=ನಾನು+ಎನುತ್ತ, ನೂನದಿಂದೆಲ್ಲವೆನುವಬ್ಧಿಯೊಳಗದನಿರಿಸೆ=ನೂನದಿಂದ+ಎಲ್ಲ+ಎನುವ+ಅಬ್ಧಿಯೊಳಗೆ+ಅದನು+ಇರಿಸೆ, ಮಣ್ಕರಗಿ=ಮಣ್ಣು+ಕರಗಿ

ನೂನ = ತತ್ವ( ನಾಣ್ಯ), ಅಬ್ಧಿ=ಕಡಲು, ಸಮುದ್ರ

ನೀರು ತುಂಬಿದ ಒಂದು ಚಿಕ್ಕ ಮಣ್ಣಿನ ಕೊಡ, ತನಗಿಂತ ಕೋಟ್ಯಾಂತರಪಟ್ಟು ಹಿರಿಯದಾದ, ಕಡಲನ್ನು ಮರೆತು, ‘ನಾನು’ ಎಂಬ ಭಾವದಿಂದ, ನಾನೇ ಎಲ್ಲವೂ, ಎನ್ನ ಬಿಟ್ಟರೆ ಬೇರಾವುದೂ ಇಲ್ಲವೆಂಬಂತಹ ಭಾವವನ್ನು ಬೀಗುತ್ತದೆ. ಆದರೆ ಆ ಕೊಡವನ್ನು ತೆಗೆದುಕೊಂಡು ಹೋಗಿ ಸಮುದ್ರದ ನೀರಿನಲ್ಲಿ ಮುಳುಗಿಸಿದರೆ ಆಗ ಆ ಕೊಡದ ನೀರು ಕಡಲ ನೀರಲ್ಲಿ ಸೇರಿ, ಆ ಕೊಡದ ಮಣ್ಣು ಕರಗಿ ಮೌನವಾಗಿ ‘ನಾನು’ ಎಂಬ ಭಾವವಿಲ್ಲದಂತಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಇಲ್ಲಿ ಕೊಡವೆನ್ನುವುದು ಒಂದು ರೂಪಕವಷ್ಟೇ. ಅದನ್ನು ನಮ್ಮ ದೇಹಕ್ಕೆ ಹೋಲಿಸಿಕೊಳ್ಳಬೇಕು ಮತ್ತು ಅದರೊಳಗಿನ ನೀರನ್ನು ನಮಗಿರುವ ಜ್ಞಾನಕ್ಕೆ ಹೋಲಿಸಿಕೊಳ್ಳಬೇಕು. ಹಾಗೆ ಜಗತ್ತಿನ ಅಗಾಧ ಜ್ಞಾನ ಸಾಗರದಲ್ಲಿ ನಮಗೆ ಗೊತ್ತಿರುವುದು ಕೇವಲ ಒಂದು ಬಿಂದುವಿನ ಒಂದು ಲಕ್ಷಪಾಲಿನಷ್ಟೂ ಅಲ್ಲ. ಆದರೆ, ನಾವು ಆ ಕೊಡದಂತೆ, ನಮಗಿರುವ ಅಲ್ಪಜ್ಞಾನವೇ ‘ ಮಹಾಜ್ಞಾನ’ ವೆನ್ನುವಂತೆ ಬೀಗುತ್ತಾ ಅಹಂಕಾರ ತೋರುತ್ತಾ ಅನ್ಯರನ್ನು ವಿಮರ್ಶೆ ಮಾಡುತ್ತಾ, ಪರರನ್ನು ಕುಹಕವಾಡುತ್ತಾ, ಇರುತ್ತೇವೆ. ನಮ್ಮಂತಹವರನ್ನು ನೋಡಿಯೇ ‘ ಅಲ್ಪಜ್ಞಾನಿ ಮಹಾಗರ್ವಿ’ ಎನ್ನುವ ಮಾತನ್ನು ಹೇಳಿರಬೇಕು. ಈ ಜಗತ್ತಿನ ಜ್ಞಾನಗಳು ಮತ್ತು ಈ ಜಗತ್ತನ್ನು ಸೃಜಿಸಿದ ಆ ಪರತತ್ವದ ಕುರಿತಾದ ಜ್ಞಾನ, ನಮಗೆ ಇದ್ಯಾವುದರ ಅರಿವಿಲ್ಲದಿದ್ದರೂ ನಾವು ಮಹಾಜ್ಞಾನಿಗಳ ರೀತಿ ಬೀಗುವುದನ್ನು ನೋಡಿದರೆ, ನಗು ಬರುತ್ತದೆ.

ಕೆಳಗಿರುವವನು ಏಣಿಯ ಸಹಾಯದಿಂದ ಮೇಲೆ ಹತ್ತ ಬಹುದು. ‘ ನಾನು ಮೇಲೆ ಇದ್ದೇನೆ’ ಎನ್ನುವಂತಹ ಭ್ರಮೆಯಲ್ಲಿರುವವನು ಮೇಲೆ ಹತ್ತಲು ಸಾಧ್ಯವೇ ಇಲ್ಲ ಅಲ್ಲವೇ?. ನಾವೆಲ್ಲಾ ಅಂತಹ ಭ್ರಮೆಯಲ್ಲಿದ್ದೇವೆ. ನಮಗೆ ಏನು ಅರಿವಿದೆ ಮತ್ತು ನಮ್ಮ ಜ್ಞಾನವೆಷ್ಟು ಎಂದು ನಮಗೆ ಗೊತ್ತೇ ಇಲ್ಲ, ಆದರೂ, ನಾವು ‘ಕೂಪಸ್ಥ ಮಂಡೂಕ’ ಎಂದರೆ ಬಾವಿಯೊಳಗಿನ ಕಪ್ಪೆ," ಭಾವಿಯನ್ನೇ ಜಗತ್ತೆಂದು, ಅದನ್ನು ಬಿಟ್ಟರೆ ಬೇರೇನೂ ಇಲ್ಲ"ವೆನ್ನುವಂತಹ ಭಾವದಲ್ಲಿರುತ್ತದೆಯಲ್ಲ, ಹಾಗಿದ್ದೇವೆ . ಹಾಗೆ ನಾವೂ ಸಹ ಏನೂ ಅರಿಯದೆ, ಅರಿತ ಭ್ರಮೆಯಲ್ಲಿದ್ದರೆ, ಅರಿವು ಮೂಡುವುದು ಹೇಗೆ?

ನಮಗೇನು ಗೊತ್ತಿದೆಯೋ ಅದನ್ನು ದೃಢಪಡಿಸಿಕೊಳ್ಳಬೇಕು. ಮತ್ತಷ್ಟು ಅರಿಯುವ ಜಿಜ್ಞಾಸೆ ಮನದಲ್ಲಿ ಉಂಟಾಗಬೇಕು.’ನನಗೇನೂ ಗೊತ್ತಿಲ್ಲ, ನಾನು ಖಾಲಿ ಕೊಡ ‘ ಎನ್ನುವ ಸತ್ಯವನ್ನು ಅರಿತು ಒಪ್ಪಿಕೊಳ್ಳಬೇಕು. ಅರಿವಿನ ದಾಹವುಂಟಾಗಿ ನಮ್ಮ ‘ಪಾತ್ರ ಶುದ್ಧಿ’ಯಾಗಬೇಕು. ನಂತರ ಸದ್ಗುರುವಿನ ಮಾರ್ಗದರ್ಶನದಲ್ಲಿ, ಸಜ್ಜನರ ಸಂಗದಲ್ಲಿದಲ್ಲಿದ್ದರೆ, ಶಾಂತವಾಗಿ ಮೌನವಾಗಿದ್ದರೆ ‘ಜ್ಞಾನ’ ತಾನೇ ತಾನಾಗಿ ಮೂಡುತ್ತದೆ. ಆಗ ನಮ್ಮ ಅಹಂಕಾರ ‘ಕಡಲ ನೀರಲ್ಲಿ ಕರಗಿದ ಮಣ್ಣಿನ ಕೊಡ’ ದಂತಾಗಿ ನಾವು ಈ ವಿಶ್ವ ಚೈತನ್ಯದಲ್ಲಿ ಒಂದಾಗಬಹುದು. ವಿನೀತನಾಗಿ ಅಹಂಕಾರನ್ನು ತ್ಯಾಗಮಾಡಿದರೆ, ಅಮೃತದಂತಹ ಜ್ಞಾನವನ್ನು ನಮ್ಮ ಕೊಡದೊಳಕ್ಕೆ ಬರಮಾಡಿಕೊಂಡರೆ, ಆಗ ನಾವೂ ಸಹ ಜ್ಞಾನವೆಂಬ ಕಡಲಲ್ಲಿ ಒಂದಾಗಿ, ಆನಂದವಾಗಿ ತೇಲಾಡಬಹುದು.

 

ರಸಧಾರೆ – ೯೦೦

ಸುತ್ತಮುತ್ತಣ ಗಾಳಿಯಾವಗಂ ನಮ್ಮೊಡಲ ।
ನೊತ್ತಿದೊಡಮಾ ಹೊರೆಯ ಮನಸು ಕಾಣದವೋಲ್ ।।
ಬಿತ್ತರದ ಲೋಕಭಾರವನಾತ್ಮನರಿಯದಿರೆ ।
ಮುಕ್ತಲಕ್ಷಣವದುವೆ – ಮಂಕುತಿಮ್ಮ ।।

ಗಾಳಿಯಾವಗಂ=ಗಾಳಿ+ಆವಗಂ, ನಮ್ಮೊಡಲನೊತ್ತಿದೊಡಮಾ=ನಮ್ಮ+ಒಡಲನು+ಒತ್ತಿದೊಡಂ+ಆ ಲೋಕಭಾರವನಾತ್ಮನರಿಯದಿರೆ=ಲೋಕಭಾರವನು+ಆತ್ಮ+ಅರಿಯದಿರೆ,
ಮುಕ್ತಲಕ್ಷಣವದುವೆ=ಮುಕ್ತ+ಲಕ್ಷಣವು+ಅದುವೆ.

ಬಿತ್ತರದ=ವಿಸ್ತಾರವಾದ.

ಸುತ್ತಲಿನ ಗಾಳಿ ನಮ್ಮ ದೇಹವನ್ನು ಯಾವಾಗಲೂ ಒತ್ತಿ ಹಿಡಿದ್ದರೂ, ಹೇಗೆ ಅದರ ಭಾರ ನಮ್ಮ ಮನಸ್ಸಿಗೆ ಭಾಸವಾಗುವುದಿಲ್ಲವೋ, ಹಾಗೆಯೇ ಈ ವಿಸ್ತಾರವಾದ ಲೋಕದ ಭಾರ ನಮ್ಮ ಆತ್ಮಕ್ಕೆ ಭಾಸವಾಗದಿದ್ದರೆ ಅದೇ ‘ಆತ್ಮ’ ದ ಮುಕ್ತ ಸ್ಥಿತಿ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು, ಈ ಮುಕ್ತಕದಲ್ಲಿ

ಪಂಚಭೂತಗಳಲ್ಲಿ ಒಂದಾದ ‘ಗಾಳಿ ‘ ಎಲ್ಲೆಡೆಯಲ್ಲೂ ಇದೆ. ಗಾಳಿಯಿಲ್ಲದ ಸ್ಥಿತಿಗೆ ‘ನಿರ್ವಾತ’ವೆಂದು ಹೆಸರು. ನಿರ್ವಾತದಲ್ಲಿ ಏನೂ ಇರಲು ಸಾಧ್ಯವಿಲ್ಲ. ಗಾಳಿ ನಮ್ಮ ಭೂಮಿಯ ಮೇಲೆ ಹತ್ತು ಸಾವಿರ ಕಿಲೋಮೀಟರ್ ತನಕ ವಿಸ್ತಾರವಾಗಿ ನಾಲ್ಕು ಸ್ಥರಗಳಲ್ಲಿ ವ್ಯಾಪಿಸಿಕೊಂಡಿದೆ. ಗಾಳಿಗೆ ಸರ್ವತೋಮುಖವಾದ ಒತ್ತಡವಿದೆ ಎಂದು ನಾವು ನಮ್ಮ ಪ್ರಾಥಮಿಕ ಶಾಲೆಯ ವಿಜ್ಞಾನದ ಪಾಠಗಳಲ್ಲಿ ಓದಿದ್ದೇವೆ. ಈ ಒತ್ತಡವಿರುವುದರಿಂದ ಮತ್ತು ಭೂಮಿಯ ಗುರುತ್ವದ ಬಲದಿಂದ ಈ ಭೂಮಿಯ ಮೇಲೆ ಜೀವಿಗಳು ಜೀವಿಸಲು ಸಾಧ್ಯ. ನಾವೂ ಸಹ ಅಂತಹ ‘ಗಾಳಿಯ ‘ ಸರ್ವತೋಮುಖವಾದ ಒತ್ತಡಕ್ಕೆ ಒಳಗಾಗಿದ್ದರೂ ಅದನ್ನು ನಾವು ಅನುಭವಿಸುವುದಿಲ್ಲ ಅಥವಾ ಅದು ನಮಗೆ ಭಾಸವಾಗುವುದಿಲ್ಲ, ಅಲ್ಲವೇ? ಏಕೆಂದರೆ ಆ ಒತ್ತಡ ಸಹಜವಾದದ್ದು. ಆದರೆ ಬಿರುಗಾಳಿಯಲ್ಲಿ ನಿಂತರೆ ಆ ಒತ್ತಡದ ಅನುಭವವಾಗಬಹುದು. ಹಾಗಾಗಿ ಸಹಜ ಸ್ಥಿತಿಯಲ್ಲಿ ನಮಗೆ ಆ ಗಾಳಿಯ ಒತ್ತಡದ ಅನುಭವವಾಗುವುದಿಲ್ಲ.

ಅದೇ ರೀತಿ ಆತ್ಮ ಪಂಚಭೂತಗಳಿಂದಾದ ಈ ದೇಹವನ್ನು ಹೊಕ್ಕು ಈ ಜಗತ್ತಿನಲ್ಲಿ ಜೀವಿಸುವಾಗ, ಮನಸ್ಸು ಮತ್ತು ಬುದ್ಧಿಗಳ ಸಂಸರ್ಗದಲ್ಲಿ ನಡೆಸುವಾಗ ಬರುವ ಹಲವಾರು ಬದುಕಿನ ಒತ್ತಡಗಳನ್ನು ಅನುಭವಿಸುತ್ತದೆ. ಆ ಅನುಭವವೇ ಬದುಕಿನ ಜಂಜಾಟವೆನ್ನಬಹುದು. ಹುಟ್ಟಿದಾರಭ್ಯ ನಮ್ಮ ಆಸೆ ಆಕಾಂಕ್ಷೆಗಳ, ನೋವು ನಲಿವುಗಳ, ಪ್ರೀತಿ ಪ್ರೇಮಗಳ, ದ್ವೇಷಾಸೂಯಗಳ, ತೃಪ್ತಿ ಅತೃಪ್ತಿಗಳ, ನಡುವೆ ನಾವು ನಡೆಸುವ ಜೀವನದಲ್ಲಿ ಬರುವ ಪರಿಸ್ಥಿತಿಗಳ ಸರ್ವತೋಮುಖವಾದ ಒತ್ತಡವನ್ನು ಮತ್ತು ಆ ಒತ್ತಡದಿಂದ ಆಗುವ ನೋವು ನಲಿವುಗಳನ್ನು ಅಂತರಂಗಕ್ಕೆ ಇಳಿಸಿಕೊಳ್ಳದೆ, ನಿರ್ಲಿಪ್ತತೆಯಿಂದ ಇದ್ದರೆ, ಅದು ಆತ್ಮವನ್ನು ತಟ್ಟದೇ ಇದ್ದರೆ, ಆಗ ಆತ್ಮ ‘ಮುಕ್ತ ಸ್ಥಿತಿಯಲ್ಲಿರುತ್ತದೆ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಆ ಒತ್ತಡಗಳನ್ನು ಅಂತರಂಗಕ್ಕೆ ಇಳಿಸಿಕೊಂಡರೆ, ಅದು ನಮ್ಮ ಸ್ವಭಾವದೊಳಕ್ಕೆ ಇಳಿದು, ನಮ್ಮ ಗುಣವಾಗಿ ನಮ್ಮನ್ನು ಇನ್ನಷ್ಟು ಈ ಜಗತ್ತಿನೊಂದಿಗೆ ಅಂಟಿಕೊಳ್ಳಲು ಪ್ರೇರೇಪಿಸುತ್ತದೆ. ಹಾಗೆ ಅಂಟಿಕೊಂಡ ಗುಣಗಳು ಆತ್ಮಕ್ಕೆ ಹೊರಯಾಗುತ್ತದೆ ಮತ್ತು ಮುಕ್ತಿಗೆ ಮಾರಕವಾಗುತ್ತದೆ. ಆದರೆ, ನಮಗೆ ಆದ ಎಲ್ಲಾ ಅನುಭವಗಳನ್ನೂ ನಿರ್ಲಿಪ್ತತೆಯಿಂದ ಅನುಭವಿಸಿ, ಅದು ಒಳನುಗ್ಗದಂತೆ ತಡೆದು, ನಿವಾರಿಸಿಕೊಂಡರೆ, ದೇಹದಿಂದ ದೇಹಕ್ಕೆ ಪ್ರಯಾಣಮಾಡುವ ‘ ಆತ್ಮ’ದ ಪ್ರಯಾಣ ಹಗುರವಾಗುತ್ತದೆ. ಎಲ್ಲಿಯ ತನಕ ಮನಸ್ಸು ಬುದ್ಧಿ ದೇಹಗಳು ಈ ಜಗತ್ತಿನ ವಿಷಯಗಳಲ್ಲಿ ಆಂಟಿಕೊಂಡಿರುತ್ತದೆಯೋ ಅಲ್ಲಿಯ ತನಕ ಆತ್ಮ ಸೊರಗಿರುತ್ತದೆ. ಆದರೆ ಪ್ರಯತ್ನ ಪೂರ್ವಕವಾಗಿ ಆತ್ಮದ ಹೊರೆಯನ್ನು ಸಂಪೂರ್ಣವಾಗಿ ನಿವಾರಿಸಿದರೆ ಅದು ‘ಆತ್ಮ’ ವನ್ನು ‘ ಮುಕ್ತ’ ಸ್ಥಿತಿಗೆ ಕೊಂಡು ಹೋಗುತ್ತದೆ. ಇದಕ್ಕೆ ಹಲವಾರು ಮಾರ್ಗಗಳನ್ನು ನಮಗೆ ನಮ್ಮ ಪೂರ್ವಜರು ತೋರಿದ್ದಾರೆ. ಆ ಮಾರ್ಗದಲ್ಲಿ ನಡೆದು ಪ್ರಯತ್ನ ಪಟ್ಟರೆ ನಮಗೂ ‘ ಮುಕ್ತಿ’ ಸಿಗಬಹುದು.

 

ರಸಧಾರೆ – ೮೯೯

ಜಗದೀ ಜಗತ್ತ್ವವನು, ಮಾಯಾವಿಚಿತ್ರವನು ।
ಒಗೆದಾಚೆ ಬಿಸುಡೆಲ್ಲ ಕರಣವೇದ್ಯವನು।।
ಮಿಗುವುದೇಂ? ರೂಪಾಖ್ಯೆಯೊಂದುಮಿಲ್ಲದ ವಸ್ತು ।
ಹೊಗಿಸಾ ಕಡೆಗೆ ಮತಿಯ – ಮಂಕುತಿಮ್ಮ ।।

ಜಗದೀ=ಜಗದ+ಈ, ಒಗೆದಾಚೆ=ಒಗೆದು+ಆಚೆ, ರೂಪಾಖ್ಯೆಯೊಂದುಮಿಲ್ಲದ=ರೂಪ+ಆಖ್ಯೆ+ಒಂದುಂ+ಇಲ್ಲದ, ಹೊಗಿಸಾ=ಹೊಗಿಸು+ಆ

ಕರಣ=ಉಪಕರಣ- ಇಂದ್ರಿಯಗಳು, ಮತಿಯ=ಹೊಗಿಸು

ಜಗತ್ವದಿಂದ(ಜಗತ್ ತತ್ವ) ಆಗಿರುವ ಈ ಜಗತ್ತಿನ ಚಿತ್ರ ವಿಚಿತ್ರವಾದ ಮಾಯಾ ಚಿತ್ರವನ್ನು ತೆಗೆದು ಬಿಸಾಡು, ನಿನಗೆ ಈ ಜಗತ್ತಿನ ಅರಿವುಂಟಾಗಿಸುವ ಎಲ್ಲ ಉಪಕರಣಗಳನ್ನೂ ಒಗೆಯಾಚೆ. ನಂತರ ಮಿಗುವುದು ಏನು? ರೂಪ, ಹೆಸರು ಮುಂತಾದವುಗಳಾವುದೂ ಇಲ್ಲದ ಒಂದು ವಸ್ತು. ಅದನ್ನು ಅರಿಯಲು ನಿನ್ನ ಬುದ್ಧಿಯನ್ನು ಆ ಕಡೆ ತಿರುಗಿಸು ಎಂದು ಉಪದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ

ನಾವು ಈ ಜಗತ್ತಿನಲ್ಲಿ ಇದ್ದೇವೆ ಮತ್ತು ಈ ಜಗತ್ತಿನಲ್ಲಿ ಕಾಣುವುದೆಲ್ಲವನ್ನೂ ಕಾಣುತ್ತಿದ್ದೇವೆ ಮತ್ತು ಕೇಳುವುದೆಲ್ಲವನ್ನೂ ಕೇಳುತ್ತಿದ್ದೇವೆ, ಎಂದರೆ ನಮ್ಮ ಇಂದ್ರಿಯಗಳ ಮೂಲಕ ಈ ಜಗತ್ತನ್ನು ನೋಡುತ್ತಿದ್ದೇವೆ ಮತ್ತು ಅನುಭವಿಸುತ್ತಿದ್ದೇವೆ ಎಂದು ಅರ್ಥ. ಶುದ್ಧಸತ್ವದ ಸಹಾಯದಿಂದ ಬೆಳಗುವ ಪ್ರತಿಯೊಂದನ್ನೂ ನಾವು ರೂಪ ಮತ್ತು ಹೆಸರುಗಳ ಗುರುತನ್ನು ಹಿಡಿದು ನೋಡುತ್ತಿದ್ದೇವೆ. ಇಲ್ಲಿ ಕಾರ್ಯಮಾತ್ರ ಕಾಣುತ್ತಿದೆ, ಕಾರಣವಲ್ಲ. ಶಬ್ಧ ಸ್ಪರ್ಶ, ರೂಪ ರಸ ಗಂಧಗಳ ಅನುಭವ ನಮಗೆ ನಮ್ಮ ಇಂದ್ರಿಯಗಳ ಮೂಲಕ ಆಗುತ್ತದೆ. ಅವುಗಳನ್ನೇ ‘ಕರಣ’ ಎಂದರು ಮಾನ್ಯ ಗುಂಡಪ್ಪನವರು.

ಚಿತ್ರವಿಚಿತ್ರವಾದ ಈ ಜಗತ್ತನ್ನು ನೋಡಲು ನಿನಗೆ ಒದಗುವ ‘ ಕರಣ’ ಗಳನ್ನು ಒಗೆದುಬಿಡು, ಬಿಸಾಡಿಬಿಡು ಎನ್ನುತ್ತಾರೆ ಡಿವಿಜಿ. ಎಂದರೆ ನಮ್ಮ ಇಂದ್ರಿಯಾನುಭವದ ಆಚೆ ಹೋಗು ಎಂದು ಆದೇಶವನ್ನಿತ್ತಿದ್ದಾರೆ. ಹಾಗೆ ನಮ್ಮ ಎಲ್ಲಾ ‘ಕರಣ’ ಗಳ ಕೆಲಸವನ್ನೂ ಸ್ಥಬ್ಧವಾಗಿಸಿ, ಶಾಂತವಾಗಿ ಅಂತರ್ಮುಖಿಗಳಾದರೆ, ಆಗ ನಮ್ಮ ಅನುಭವಕ್ಕೆ ಬರುವುದು ಕೇವಲ ರೂಪ ಅಥವಾ ಆಕಾರವಿಲ್ಲದ ಮತ್ತು ಯಾವ ಹೆಸರನ್ನೂ ಹೊಂದಿರದ ಆ ಶುದ್ಧ ಸತ್ವವೇ ಎನ್ನುತ್ತಾರೆ. ನಿನಗೆ ಅದನ್ನು ಅನುಭವಿಸಬೇಕಾದರೆ ‘ಹೊಗಿಸಾ ಕಡೆಗೆ ಮತಿಯ’ ಎಂದವರು ಹೇಳುವಂತೆ ನಮ್ಮ ದೇಹ, ಮನಸ್ಸು, ಬುದ್ಧಿಗಳನ್ನು ತಮ್ಮ ಜಗತ್ಸಂಬಂಧವಾದ ಎಲ್ಲಾ ಕೆಲಸಗಳನ್ನೂ ನಿಲ್ಲಿಸಿ ಆ ಪರತತ್ವದೆಡೆಗೆ ತಿರುಗಿಸಿದರೆ ಅಲ್ಲಿ ನಮಗೆ ಶುದ್ಧ ಸತ್ವವೇ ಕಾಣುತ್ತದೆ ಎನ್ನುವುದು ‘ತತ್ಯ’

ಕಣ್ಣು ಬಿಟ್ಟರೆ ಸೆಳೆತಗಳು, ಪ್ರತಿ ಶಬ್ಧವೂ ಒಂದು ಸೆಳೆತ. ಮನಸ್ಸಿನಲ್ಲಿ ಮೂಡುವ ಚಿತ್ರವಿಚಿತ್ರ ಆಲೋಚನೆಗಳನ್ನುಂಟು ಮಾಡುತ್ತವೆ ಈ ನೋಡುವ ಮತ್ತು ಕೇಳುವ ಕರಣಗಳು. ಇವುಗಳನ್ನು ನಿರ್ಭಂಧಿಸುವುದು ಅಷ್ಟು ಸುಲಭವಲ್ಲ. ಸಾಧನೆಯಿಂದ ಹಿಡಿತಕ್ಕೆ ತಂದುಕೊಂಡರೆ ಆಗ ಮನಸ್ಸನ್ನು ಬುದ್ಧಿಯನ್ನು ಶುದ್ಧಸತ್ವದ ಕಡೆಗೆ ತಿರುಗಿಸಿ ಅದರ ಬೆಳಕನ್ನು ‘ಜ್ಞಾನ’ ದ ರೂಪದಲ್ಲಿ ನಮ್ಮ ಒಳಕ್ಕೆ ತಂದುಕೊಳ್ಳಬಹುದು. ಪ್ರಯತ್ನಪಟ್ಟರೆ ಎಲ್ಲರಿಗೂ ಸಾಧ್ಯ. ಮೊದಲಿಗೆ ಅದನ್ನು ಪಡೆಯುವ ಪ್ರಭಲವಾದ ಇಚ್ಚೆಯುಂಟಾಗಬೇಕು, ಪೂರಕ ಪ್ರಯತ್ನವಾದಲ್ಲಿ, ಸಾಧನೆ ಖಂಡಿತ ಸಾಧ್ಯ.

 

ರಸಧಾರೆ – ೮೯೮

ನರನರೀ ಚಿತ್ರಗಳು, ನಾಟಕದ ಪಾತ್ರಗಳು ।
ಪರಿಪರಿಯ ವೇಷಗಳು, ವಿವಿಧ ಭಾಷೆಗಳು ।।
ಬರುತಿಹುವು, ಬೆರೆಗೆನಿಸಿ ಮೆರೆಯುವುವು, ತೆರಳುವುವು ।
ಮೆರವಣಿಗೆಯೋ ಲೋಕ – ಮಂಕುತಿಮ್ಮ ।।

ಬೆರೆಗೆನಿಸಿ=ಬೆರಗು+ಎನಿಸಿ,

ಬೆರಗು= ಆಶ್ಚರ್ಯ.

ಈ ಜಗತ್ತನ್ನು ಒಂದು ಮೆರವಣಿಗೆ ಎಂದು ಹೇಳಿ, ಈ ಮೆರವಣಿಗೆಯಲ್ಲಿರುವುದು, ಪ್ರಕೃತಿ ಮತ್ತು ಪುರುಷರ ಚಿತ್ರಗಳು, ಕೇವಲ ನಾಟಕಕದ ಪಾತ್ರಗಳಂತೆ ಇವೆ, ಇವು ಆಡುವ ಭಾಷೆಗಳು ಬೇರೆ ಬೇರೆ. ಇವರು ತೊಡುವ ವೇಷಗಳು ಪರಿಪರಿಯಾದದ್ದು. ಈ ಪಾತ್ರಗಳು ಬರುತ್ತವೆ, ಆ ಪಾತ್ರದಲ್ಲಿ ಮೆರೆಯುತ್ತವೆ ಮತ್ತು ನೇಪತ್ಯಕ್ಕೆ ಸರಿದು ಹೋಗುತ್ತವೆ. ಪರಮಾತ್ಮ ಸೃಷ್ಟಿಯಾದ ಈ ಲೋಕ ಒಂದು ಮೆರವಣಿಗೆಯಂತೆ ಅನಿಸುತ್ತದೆ ಎಂದು, ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಾವೂ ಸಹ ಆ ಮೆರವಣಿಗೆಯ ಒಂದು ಪಾತ್ರವಷ್ಟೇ!!! ಪರಮಾತ್ಮನ ಸೃಷ್ಟಿಯ ಎಲ್ಲದರ ನಿರಂತರ ಮೆರವಣಿಗೆ. ಕೋಟಿ ಕೋಟಿ ವೈವಿಧ್ಯತೆಯಿಂದ ಕೂಡಿದ ರೂಪಗಳನ್ನು ಹೊತ್ತ ಜೀವಿಗಳ, ಸಾವಿರಾರು ವಿಧವಾದ ಭಾಷೆಗಳನ್ನು ಆಡುವ ಜೀವಿಗಳ, ಆ ಭಾಷೆಯಲ್ಲೇ ಘಳಿಗೆ ಘಳಿಗೆಗೆ ಬದಲಾಗುವ ಭಾವಗಳನ್ನು ಹೊತ್ತ ಮತ್ತು ವ್ಯಕ್ತಪಡಿಸುವ ಜೀವಿಗಳ, ಮನುಷ್ಯನಂತಹ ವಿಕಸಿತ ಪ್ರಾಣಿಗಳ, ತಮ್ಮ ಮಿತಿಗಳಲ್ಲೇ ಜೀವಿಸುವ ಜೀವಿಗಳ, ಗಗನದಲ್ಲಿ ಹಾರಾಡುವ ಚಿತ್ರವಿಚಿತ್ರವಾದ ವಿನ್ಯಾಸಗಳಲ್ಲಿ ಸೃಷ್ಟಿಸಲ್ಪಟ್ಟ ಮತ್ತು ನಯನ ಮನೋಹರವಾದ ಬಣ್ಣಗಳನ್ನು ಧರಿಸಿರುವ ಪಕ್ಷಿಗಳ. ಭೂಮಿಯ ಮೇಲಿನ ಕೀಟಗಳ, ಹಾವುಗಳ, ಕ್ರೂರ ಮತ್ತು ಸಾಧು ಸ್ವಭಾವದ ಪ್ರಾಣಿಗಳ ಒಂದು ಸುಂದರವಾದ ಮೆರವಣಿಗೆ.

ಈ ಮೆರವಣಿಗೆಗೆ ಮೆರಗು ಕೊಡುವಂತಹ, ಹಲ ಕೋಟಿ ವೈವಿಧ್ಯತೆಯಿಂದ ಕೂಡಿದ, ತೀರ ಸಣ್ಣದರಿಂದ ಹಿಡಿದು ಬೃಹತ್ತಾಗಿರುವ, ಚಿತ್ರವಿಚಿತ್ರ ಅಕಾರಗಳಿಂದ, ಸುಂದರ ವಿನ್ಯಾಸಗಳಿಂದ, ಆಹ್ಲಾದವೀಯುವ ಸುಗಂಧಗಳಿಂದ ಕೂಡಿದ ಹೂಗಳಿಂದ, ಅನ್ಯ ಜೀವಿಗಳಿಗೆ ಆಹಾರವಾಗುವ ರುಚಿರುಚಿಯಾದ ಹಣ್ಣುಗಳಿಂದ, ಬಹೂಪಯೋಗಿಯಾಗಿರುವ, ಗಿಡ, ಮರ, ಬಳ್ಳಿಗಳ ಸಸ್ಯವರ್ಗವೂ ಇದೆ. ಸ್ಥಿರ ಜೀವಿಗಳಾದ ಈ ಗಿಡಮರಗಳ ಮತ್ತು ಚರ ಜೀವಿಗಳಾದ ಅನ್ಯ ಜೀವಿಗಳ ಅಸ್ತಿತ್ವದ ಪರಸ್ಪರ ನಿರ್ಭರತೆಯೇ ಈ ಸೃಷ್ಟಿಯ ಒಂದು ಸುಂದರ ಆಯಾಮ.

ಇಂತಹ ಒಂದು ಸುಂದರ, ಅದ್ಭುತ ಮತ್ತು ನಿರಂತರ ಮೆರವಣಿಗೆಯಲ್ಲಿ ನಮ್ಮದು ಒಂದು ಪಾತ್ರ. ಈ ಮೆರವಣಿಗೆಯನ್ನು ನೋಡುವ ಮತ್ತು ಅದರ ಒಂದು ಪಾತ್ರವನ್ನು ವಹಿಸುವ ಸೌಭಾಗ್ಯ ನಮ್ಮದು. ನಮ್ಮನ್ನೂ ಸೇರಿಸಿ, ಈ ಮೆರವಣಿಗೆಯ ಎಲ್ಲಾ ಪಾತ್ರಗಳೂ ಮತ್ತು ಈ ಮೆರವಣಿಗೆ ಇರಬೇಕಾದ ವಿನ್ಯಾಸವೂ ಆ ಪರಮಾತ್ಮನ ಸೃಷ್ಟಿ. ಪರಮಾತ್ಮ, ತನ್ನ ಸಂತೋಷಕ್ಕೆ ತಾನೇ ತನ್ನಿಂದಲೇ ಸೃಷ್ಟಿಸಿಕೊಂಡಂತಹ ಒಂದು ಸುಂದರ ಮೆರವಣಿಗೆ. ಇಲ್ಲಿಗೆ ಬಂದು, ಇಲ್ಲಿ ಇದ್ದು, ಇದನ್ನು ಅನುಭವಿಸಿ, ಹೊಸತಿಗೆ ತಾವು ಮಾಡುತ್ತಾ ಹಳತು ನಿರ್ಗಮಿಸುತ್ತಾ ಇರುತ್ತದೆ , ತನ್ನ ಹೊಸತನವನ್ನು, ಆಕರ್ಷಣೆಯನ್ನು ಸದಾ ನವನವೀನವಾಗಿ ಇಟ್ಟುಕೊಂಡಿರುವ ಈ ಪರಮಾತ್ನ ಮೆರವಣಿಗೆಯಲ್ಲಿ ನಾವು ನಮ್ಮ ವಿಧಿತ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸಿ ನಿರ್ಗಮಿಸಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ.

 

ರಸಧಾರೆ – ೮೯೭

ಶೂನ್ಯವೆಲ್ಲವುಮೆಂಬೊಡಂತೆನಿಸುವುದದೇನು? ।
ಅನ್ಯವಿಲ್ಲೆನುವರಿವದೊಂದಿರ್ಪುದಲ್ತೆ? ।।
ಚಿನ್ಮಯವದನೆ ನೀಂ ಸತ್ಯವೆಂದಾಶ್ರಯಿಸು ।
ಶೂನ್ಯವಾದವೆ ಶೂನ್ಯ – ಮಂಕುತಿಮ್ಮ ।।

ಶೂನ್ಯವೆಲ್ಲವುಮೆಂಬೊಡಂತೆನಿಸುವುದದೇನು? =ಶೂನ್ಯವು+ಎಲ್ಲವುಂ+ಎಂಬೊಡೆ+ಅಂತೆ+ ಅನಿಸುವುದು+ಅದೇನು?
ಅನ್ಯವಿಲ್ಲೆನುವರಿವದೊಂದಿರ್ಪುದಲ್ತೆ=ಅನ್ಯವು+ಇಲ್ಲ+ಎನುವ+ಅರಿವು+ಅದೊಂದು+ಇರ್ಪುದು+ಅಲ್ತೆ. ಚಿನ್ಮಯವದನೆ=ಚಿನ್ಮಯವು+ಅದನೆ, ಸತ್ಯವೆಂದಾಶ್ರಯಿಸು=ಸತ್ಯವು+ಎಂದು+ಆಶ್ರಯಿಸು,

ಎಂಬೊಡೆ=ಎನ್ನುವಂತಾದರೆ, ಶೂನ್ಯ= ಏನೂ ಇಲ್ಲದ ಸ್ಥಿತಿ, ಇರ್ಪುದು=ಇದೆ, ಅಲ್ತೆ=ಅಲ್ಲವೇ?

ದೇವರಿಲ್ಲ, ಎಲ್ಲವೂ ಶೂನ್ಯ ಎಂದು ನೀನು ಹೇಳುವುದಾದರೆ, ಹಾಗೆ ಹೇಳುವುದಕ್ಕೆ, ನಿನಗೆ, ಆ ಅರಿವಿಲ್ಲದೆ, ಹೇಗೆ ಅನಿಸುತ್ತದೆ?. ದೇವರು ಇಲ್ಲ ಎಂದು ಹೇಳುವ ಅರಿವಾದರೂ ಅಲ್ಲಿ ಇದೆಯಲ್ಲ. ಆ ಅರಿವೇ ಸತ್ವ, ಚಿನ್ಮಯ ಸ್ವರೂಪವಾದ ಪರಮಾತ್ಮ. ಹಾಗಾಗಿ ನೀನು ಅದನ್ನು ಆಶ್ರಯಿಸು. ಶೂನ್ಯ ಎಂದು ಹೇಳಲು ಒಂದು ವ್ಯಕ್ತಿ ಮತ್ತು ಶೂನ್ಯವೆಂದು ಹೇಳುವ ಅರಿವು, ಎಂದರೆ ಜ್ಞಾನವು, ಇದೆಯಾದ್ದರಿಂದ ಶೂನ್ಯವಾದವೇ, ‘ಶೂನ್ಯ’ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ದೇವರಿಲ್ಲ ಎಂದು ಹೇಳುವವರದು ‘ನಿರೀಶ್ವರ’ ವಾದ. ಎಂದರೆ ದೇವರು ಎಂಬುವುದು ಇಲ್ಲ ಎಂದು ಅವರ ಅಭಿಪ್ರಾಯ.ಕಾಣುವ ಪ್ರಯತ್ನವನ್ನು ಮಾಡದೆ, ಕಣ್ಣಿಗೆ ಕಾಣದ್ದು ಇಲ್ಲವೆಂದು ವಾದಿಸುವ ಜನ ಅವರು. ಆದರೆ ಮಾನ್ಯ ಗುಂಡಪ್ಪನವರು ಕೇಳುವ ಪ್ರಶ್ನೆ ಬಹಳ ಸೂಕ್ತವಾಗಿದೆ. ‘ ಹಾಗೆ, ದೇವರು ಇಲ್ಲ ಎಂದು ಅನ್ನುವುದಾದರೆ, ಹಾಗೆ ಅನ್ನುವವರು ಯಾರು? ಮತ್ತು ಹಾಗೆ ಅನಿಸುವುದು ಯಾರಿಗೆ? " ಎನ್ನುವ ಪ್ರಶ್ನೆಗಳಿಗೆ ನಮಗೆ ಬಹಳ ಸೂಕ್ತವಾದ ಉತ್ತರಗಳು ಸಿಗುತ್ತವೆ. ನಿರೀಶ್ವರವಾದಿಗೆ ‘ ಏನೂ ಇಲ್ಲ, ಎಂದರೆ ಎಲ್ಲವೂ ಶೂನ್ಯ’ ಎಂದು ಅನಿಸಬೇಕಾದರೆ ಹಾಗೆ ಅನ್ನಿಸುವ ‘ಅವನಿರ’ಬೇಕು ಮತ್ತು ಹಾಗೆ ಅನಿಸಬೇಕಾದರೆ ಅಂತಹ ‘ ಅರಿವು’ ಇರಬೇಕು, ಅಲ್ಲವೇ? ಹಾಗೆ ಅವನೂ ಇದ್ದು, ಅವನಿಗೆ ದೇವರಿಲ್ಲ ಎಂಬ ‘ಅರಿವೂ’ ಇದ್ದರೆ, ಶೂನ್ಯ ಹೇಗಾಗುತ್ತದೆ. ಹಾಗಾಗಿ ಶೂನ್ಯವೆಂಬುದೇ ಇಲ್ಲ, ಎನ್ನುತ್ತಾರೆ ಮಾನ್ಯ ಡಿವಿಜಿಯವರು.

ನಿರೀಶ್ವರವಾದಿಗೆ ‘ ದೇವರಿಲ್ಲ’ ಎಂದು ಅನಿಸುವ ಅನಿಸಿಕೆಗೆ ಕಾರಣವೇ ಆ ಶುದ್ಧ ಜ್ಞಾನ. ಆ ಜ್ಞಾನವೇ ಪರಮಾತ್ಮನ ಪ್ರತೀಕ. ಆದ್ದರಿಂದಲೇ’ ಚಿನ್ಮಯವದನೆ ನೀಂ ಸತ್ಯವೆಂದಾಶ್ರಯಿಸು’ ಎಂದು ಚಿತ್ ಸ್ವರೂಪವಾದ ಶುದ್ಧ ಜ್ಞಾನವೇ ಅದು ಅದನ್ನು ನೀನು ಆಶ್ರಯಿಸು ಎಂದು ಆದೇಶ ನೀಡಿದ್ದಾರೆ ಮಾನ್ಯ ಡಿವಿಜಿಯವರು. ನಂಬುವವನು ಮತ್ತು ನಂಬದವನು, ಎಲ್ಲರಿಗೂ ಆಶ್ರಯವೇ, ಪರತತ್ವ. ಅದರಲ್ಲಿ ನಿಂತು, ಅದೇನೆಂದು ಅರಿಯದೆ, ‘ಅದು ಇಲ್ಲ’ ಎಂದರೆ ಹೇಗೆ ಸಾಧ್ಯ?. ಚಾರ್ವಾಕರೆಂದು ಕರೆಯಲ್ಪಡುತ್ತಿದ್ದ, ಈ ನಿರೀಶ್ವರವಾದಿಗಳು ಹಿಂದೆಯೂ ಇದ್ದರು, ಇಂದೂ ಇದ್ದಾರೆ. ಅವರಿರುವುದೂ ಸಹ, ಪರಮಾತ್ಮನ ಲೀಲಾವಿನೋದದ ಒಂದು ಪಾತ್ರವೆಂದು ನಾವು ತಿಳಿಯಬೇಕು.

‘ ಇಲ್ಲ’ ಎನ್ನುವ ವ್ಯಕ್ತಿ ತಾನಿರುವುದು ಎಲ್ಲಿ ಮತ್ತು ಯಾವುದರಲ್ಲಿ ಎಂದು ಯೋಚಿಸುವುದಿಲ್ಲ ಅಥವಾ ಯೋಚಿಸಲು ನಿರಾಕರಿಸುತ್ತಾನೆ. ಅದು ಮೂರ್ಖತನ. ಜಗತ್ತಿನ ಬೇಧಗಳಿಗೆ ಅತೀತನಾಗಿ, ಶುದ್ಧಸತ್ವಾತ್ಮಕವಾದಂತಹ, ಜ್ಞಾನಸ್ವರೂಪವಾದ ಆ ಪರತತ್ವವನ್ನು, ಆಶ್ರಯಿಸಬೇಕು. ಕುತರ್ಕ ಮತ್ತು ವಿತಂಡವಾದಗಳನ್ನು ತೊರೆದು ನಿರ್ಮಲ ಮನಸ್ಸಿನಿಂದ, ಅಹಂಕಾರ ರಹಿತವಾದ ಮನಸ್ಸಿನಿಂದ ಚಿನ್ಮಯವಾದ ಆ ‘ ಜ್ಞಾನವನ್ನು’ ಆಶ್ರಯಿಸಬೇಕು. ಅದೇ ಆಧ್ಯಾತ್ಮ ಸಾಧನೆ.

 

ರಸಧಾರೆ – ೮೯೬

ಭೌತವಿಜ್ಞಾನ ವಿವರಗಳಿನೇನಾತ್ಮಂಗೆ ? ।
ಪ್ರೇತಪ್ರಯಾಣಕಥೆಯೆಂತಿರ್ದೊಡೇನು ? ।।
ಜಾತಿ ನೀತಿ ಸಮಾಜ ವರ್ಗಭೇದದಿನೇನು ? ।
ಘಾತಿಯಿಲ್ಲಾತ್ಮಂಗೆ – ಮಂಕುತಿಮ್ಮ ।।

ವಿವರಗಳಿನೇನಾತ್ಮಂಗೆ= ವಿವರಗಳಿನ್+ಏನು+ಆತ್ಮಂಗೆ, ಪ್ರೇತಪ್ರಯಾಣಕಥೆಯೆಂತಿರ್ದೊಡೇನು ?=ಪ್ರೇತ+ಪ್ರಯಾಣ+ಕಥೆಯು+ಎಂಟೆ+ಇರ್ದೊಡೆ+ಏನು? ವರ್ಗಭೇದದಿನೇನು=ವರ್ಗಭೇದದಿನ್+ಏನು?ಘಾತಿಯಿಲ್ಲಾತ್ಮಂಗೆ=ಘಾತಿ+ಇಲ್ಲ+ಆತ್ಮಂಗೆ

ಭೌತ ವಿಜ್ಞಾನದ ವಿವರಗಳಿಂದ ಆತ್ಮನಿಗೇನಾಗಬೇಕಾಗಿದೆ? ಆತ್ಮ, ಈ ದೇಹವನ್ನು ಬಿಟ್ಟಮೇಲೆ ಏನಾಗುವುದು ಎನ್ನುವ ವಿಚಾರ ಹೇಗಿದ್ದರೇನು?ಅದರಿಂದ ಆತ್ಮಕ್ಕೇನು? ಜಾತಿ, ನೀತಿ, ಸಮಾಜ ಮತ್ತು ವರ್ಗ ಭೇಧದಿಂದ ಅದಕ್ಕೆ ಏನಾಗಬೇಕು? ಇವಾವುಗಳಿಂದಲೂ ಆತ್ಮನಿಗೆ ಯಾವ ರೀತಿಯ ಧಕ್ಕೆಯೂ ಉಂಟಾಗುವುದಿಲ್ಲ, ಎಂದು ಹೊರಗಿನ ರೂಪ ಮತ್ತು ಅದರೊಳಗಿರುವ ಚೇತನದ ವಿಷಯಗಳನ್ನು ಪ್ರಸ್ತಾಪಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಗುಣ ರೂಪ ಮತ್ತು ಆಕಾರಗಳನ್ನು ಹೊಂದಿರುವ ಈ ಜಗತ್ತಿನ ವಸ್ತುಗಳನ್ನು ಪರೀಕ್ಷಿಸಿ ನೋಡುವುದು, ಅವುಗಳ ಗುಣಗಳನ್ನು ವಿಶ್ಲೇಷಿಸುವುದು ಮತ್ತು ಅವುಗಳಿಂದ, ಬೇರೆ ಬೇರೆ ರೂಪಗಳನ್ನು ಹೊಂದಿರುವ ಜೀವಿಗಳ ಜೀವನದ ಮೇಲೆ ಆಗುವ ಪ್ರಭಾವವನ್ನು ಅಳೆಯುವುದು, ಭೌತವಿಜ್ಞಾನದ ಕೆಲಸ. ಆದರೆ ಯಾವ ಗುಣ, ರೂಪ ಮತ್ತು ಆಕಾರಗಳನ್ನೂ ಹೊಂದಿರದ ಮತ್ತು ಕೇವಲ ಶುದ್ಧ ಸತ್ವವನ್ನು ತನ್ನ ಗುಣವಾಗಿಟ್ಟುಕೊಂಡಿರುವ ‘ಆತ್ಮ’ ಈ ಭೌತ ವಿಜ್ಞಾನದ ಪರೀಕ್ಷೆಗಳಿಗೆ ಅತೀತವಾಗಿ ನಿಲ್ಲುತ್ತದೆ. ಆದ್ದರಿಂದ ಭೌತ ವಿಜ್ಞಾನದಿಂದ ‘ಆತ್ಮ’ಕ್ಕೇನೂ ಆಗಬೇಕಿಲ್ಲ ಎನ್ನುತ್ತಾರೆ ಡಿವಿಜಿಯವರು.

ಈ ‘ ಆತ್ಮ’ ದೇಹವನ್ನು ಹೊಂದಿದೆ. ಹಾಗೆ ಹೊಂದಿದ್ದಷ್ಟು ದಿನ ಆ ದೇಹದೊಂದಿಗೆ ಈ ಜಗತ್ತಿನ ಜೀವನ. ಕಾಲಾನುಕಾಲಕ್ಕೆ ಈ ದೇಹವನ್ನು ಬಿಟ್ಟು ಪ್ರೇತವಾಗಿ ಹೋಗುತ್ತದೆ. ಆದರೆ ಈ ದೇಹದಲ್ಲಿರುವಾಗ, ಸತ್ತ ನಂತರದ ಕಥೆಯೋ ಅಥವಾ ಈ ದೇಹಕ್ಕೆ ಬರುವ ಮುನ್ನಿನ ಕಥೆಯೋ, ಇದ್ಯಾವುದೂ ಆತ್ಮಕ್ಕೆ ಬೇಕಾಗಿಲ್ಲ. ಹಿಂದಿನ ದೇಹದಲ್ಲಿ ಸಂಚಯಿಸಿದ ಕರ್ಮಶೇಷಗಳನ್ನು ಇಂದಿನ ದೇಹಕ್ಕೆ ಮತ್ತು ಇಂದಿನ ದೇಹವನ್ನು ಬಿಡುವಾಗ ಉಳಿದಿರುವ ಕರ್ಮವನ್ನು ಮುಂದಿನ ದೇಹಕ್ಕೆ ತಲುಪಿಸುವ ‘ ರವಾನೆ ಗುಮಾಸ್ತೆ'(dispatch clerk) ಯ ಕೆಲಸವನ್ನು, ತನಗೆ ಏನನ್ನೂ ಅಂಟಿಸಿಕೊಳ್ಳದೆ, ಕೇವಲ ಸಾಕ್ಷೀ ಭಾವದಿಂದ ಮಾಡುತ್ತದೆ. ಅಷ್ಟೇ ಅಲ್ಲ ನಮ್ಮ ಮನಸ್ಸು, ಬುದ್ಧಿ, ದೇಹಗಳು, ಈ ಜಗತ್ತಿನ ಈ ಜೀವನದಲ್ಲಿ ಅನುಸರಿಸುವ ಜಾತಿ, ನೀತಿ, ಸಮಾಜ ಮತ್ತು ವರ್ಗಭೇಧಗಳಿಗೆಲ್ಲಾ ಅತೀತವಾಗಿ ನಿಂತುಕೊಳ್ಳುವುದರಿಂದ, ಆತ್ಮಕ್ಕೆ ಇವಾವುದರ ನಂಟೂ ಅಂಟುವುದಿಲ್ಲ.

ಹೀಗೆ ಇಲ್ಲಿ ಇದ್ದರೂ ಮತ್ತು ಇಲ್ಲಿ ಇರುವುದಕ್ಕೆ, ಎಂದರೆ ನಮ್ಮ ಅಸ್ತಿತ್ವಕ್ಕೆ ಕಾರಣವಾದ ಚೇತನಾ ಸ್ವರೂಪವಾದ ಆತ್ಮ, ಇಲ್ಲಿ ಇರುವು ಯಾವುದಕ್ಕೂ ಅಂಟದೆ, ನಿತ್ಯವಾಗಿ ಮತ್ತು ಶುದ್ಧವಾಗಿ ಇರುತ್ತದೆ ಎನ್ನುವ ವಿಷಯವನ್ನು ಮನಗಂಡು ನಾವು ‘ ಆತ್ಮ’ ಎಂದು ಅರಿತು ಬಾಳಿದರೆ ಸುಖ ಮತ್ತು ಆನಂದ. ಹಾಗಲ್ಲದೆ ನಾವು, ನಮ್ಮನ್ನು ಈ ಜಗತ್ತಿನಲ್ಲಿರುವ ರೂಪ ಎಂದು ಭಾವಿಸಿ ಈ ಜಗತ್ತಿನ ಎಲ್ಲಕ್ಕೂ ಅಂಟಿಕೊಂಡರೆ ದುಃಖ. ಆಯ್ಕೆ ಮಾಡುವ ಸ್ವಾತಂತ್ರ್ಯ ನಮಗೆ ಕರುಣಿಸಿದ್ದಾನೆ ಆ ಪರಮಾತ್ಮ. ಹಾಗಾಗಿ ಆಯ್ಕೆ ನಮ್ಮದೇ ಅಲ್ಲವೇ?