RSS

Monthly Archives: ಆಗಷ್ಟ್ 2015

ರಸಧಾರೆ – ೯೨೭

ತೊಲಗು ನಿರ್ಜನದೆಡೆಗೆ; ತೊಲಗು ಮಸಣದ ಕಡೆಗೆ ।
ಒಲವ ಬೇಡಿಸದೆಡೆಗೆ ; ಅಳುವು ಬರದೆಡೆಗೆ ।।
ವಿಲಯವಾಗಿಸಿ ಮನವನ್, ಅಲುಗಾಡಿಸದೆ ತುಟಿಯ ।
ತೊಲಗಿ ಮಲಗಲ್ಲಿ ನೀಂ – ಮಂಕುತಿಮ್ಮ ।।

ನಿರ್ಜನದೆಡೆಗೆ=ನಿರ್ಜನದ+ಎಡೆಗೆ, ಬೇಡಿಸದೆಡೆಗೆ=ಬೇಡಿಸದ+ಎಡೆಗೆ, ಬರದೆಡೆಗೆ=ಬರದ+ಎಡೆಗೆ, ಮಲಗಲ್ಲಿ=ಮಲಗು+ಅಲ್ಲಿ

ನಿರ್ಜನ=ಜನರಿಲ್ಲದ, ವಿಲಯ=ಸೇರಿಬಿಡುವುದು.

ಯಾರೂ ಇಲ್ಲದ ಕಡೆಗೆ, ಸಾವಿನೆಡೆಗೆ ತೊಲಗು. ಯಾರಿಂದಲೂ ಪ್ರೀತಿ ಒಲವು ಬಯಸದ ಮತ್ತು ದುಃಖವಿಲ್ಲದ ಸ್ಥಿತಿಯಲ್ಲಿ ನಿನ್ನ ಮನಸ್ಸನ್ನು ಲಯಗೊಳಿಸು. ಮೌನದಿಂದ ನೀನು ಅಂತಹ ಸ್ಥಿತಿಯಲ್ಲಿ ಮಲಗು ಎಂದು ಆದೇಶಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ

‘ಲೋಕದಿಂದ ನಿರ್ಲೋಕ’ ‘ ಎಲ್ಲರೊಳಗೊಂದಾಗು ‘ ಲೋಕಭಾರವನಾತ್ಮನರಿಯದಿರೆ’ ‘ತ್ಯಾಗಿಯವನ್ ಅಂತರದಿ’ ಎಂದು ಮಾನ್ಯ ಗುಂಡಪ್ಪನವರು ತಮ್ಮ ಹಲವಾರು ಮುಕ್ತಕಗಳಲ್ಲಿ ಒಳಗಿನಿಂದ ಹಗುರಾಗುವುದು ಹೇಗೆ ಎನ್ನುವುದಕ್ಕೆ ದೃಷ್ಟಾಂತ ಸಹಿತ ವಿವರಿಸಿದ್ದಾರೆ. ಹೀಗೆ ಲೋಕದಲ್ಲಿ ಇದ್ದು ನಿರ್ಲೋಕವಾಗುವ, ಲೋಕದ ಭಾರವನ್ನು ಆತ್ಮ ಅರಿತು, ಅಂತರಂಗದಿಂದ ಎಲ್ಲವನ್ನೂ ತ್ಯಾಗಮಾಡಿ, ಜಗತ್ತಿನ ಅಂಟನ್ನು ಬಿಡಿಸಿಕೊಂಡು,ಮನಸ್ಸನ್ನು ಹಗುರಾಗಿಸಿಕೊಂಡು ಲೋಕದಿಂದ ವಿಮುಖನಾಗಬೇಕೆಂಬ ಆದೇಶವನ್ನು ನೀಡಿದ್ದಾರೆ ಡಿವಿಜಿಯವರು.

‘ಒಲವ ಬೇಡಿಸದೆಡೆಗೆ’ ಎಂದರೆ ಎಲ್ಲಿ ನಮಗೆ ಮಮಕಾರ ಅಥವಾ ಮೋಹದಿಂದ ಅನ್ಯರ ಒಲವು ಅಥವಾ ಪ್ರೀತಿಯ ಅವಶ್ಯಕತೆ ಇರುವುದಿಲ್ಲವೋ ಮತ್ತು ‘ಅಳುವು ಬರದೆಡೆಗೆ’ ಎಂದರೆ ಅಂತಹ ಒಲವು ಅಥವಾ ಪ್ರೀತಿಯಯನ್ನು ಬಯಸಿ, ನಮಗದು ಸಿಗದಿದ್ದರೆ, ನಿರ್ಮೋಹಿಯಾಗಿ, ಮನಸ್ಸಿಗೆ ದುಃಖವಾಗದಂತ ಸ್ಥಿತಿಗೆ ತಲುಪಬೇಕು. ಅಂತಹ ಸ್ಥಿತಿಯಲ್ಲಿ ಮೌನವಾಗಿರುತ್ತಾ ಮನಸ್ಸನ್ನು ‘ವಿಲಯ’ವಾಗಿಸು ಎಂದರೆ, ಜಗತ್ತಿನ ವಿಷಯ ಮತ್ತು ವಾಸನೆಗಳಲ್ಲಿ ಲಯವಾಗಿದ್ದ ಮನವನ್ನು ಅವುಗಳಿಂದ ಬಿಡಿಸಿಕೊಂಡು ತನ್ನ ಮೂಲ ಶುದ್ಧ ಸ್ವರೂಪದೊಳಕ್ಕೆ ವಿ-ಲಯ(withdraw) ವಾಗಿಸಿ, ಮೌನವನ್ನು ವಹಿಸಿ ಮಲಗು ಎಂದರೆ ವಿಶ್ರಮಿಸು ಎಂದು ಸಂದೇಶ.

ಕಡೆಯುಸಿರಿರುವ ತನಕ ಜಗತ್ತಿನ ವ್ಯಾಮೋಹಕ್ಕೆ ಅಂಟಿಕೊಂಡು ಬದುಕುವ ನಮಗೆ, ಈ ವ್ಯಾಮೋಹವನ್ನು ಬಿಡಲು ಸಾಧ್ಯವಿಲ್ಲವಾದ್ದರಿಂದ, ಮಾನ್ಯ ಗುಂಡಪ್ಪನವರು ಹೇಳಿರುವ ಸ್ಥಿತಿಗೆ ತಲುಪುವುದು ಅಥವಾ ಅಂತಹ ಸ್ಥಿತಿಯನ್ನು ನಮ್ಮ ಬದುಕಿನಲ್ಲಿ ಊಹಿಸಲೂ ಸಾಧ್ಯವೇ ಇಲ್ಲವೆನ್ನುವಂತಾಗಿದೆ. ಮೈಕೈ ಉಡುಗಿ, ಬದುಕಿನಿಂದ ಏನನ್ನಾದರೂ ಪಡೆಯುವುದಾಗಲೀ ಅಥವಾ ಬದುಕಿಗೆ ಏನನ್ನಾದರೂ ಕೊಡುವುದಾಗಲೀ ನಮ್ಮಿಂದ ಸಾಧ್ಯವಿಲ್ಲವೆಂದಾದಾಗ ಮೌನವಾಗಿ ಬದುಕಿನಿಂದ ತೊಲಗಿಬಿಡುವುದೇ ಒಳ್ಳೆಯದಲ್ಲವೇ? ಅಂತಹ ಸ್ಥಿತಿಗೆ ತಲುಪಲು ಅನುಭವದ ಪಾಠ ಕಲಿತಿರಬೇಕು, ತೃಪ್ತಿಯಿಂದುಂಟಾದ ವಿರಕ್ತ ಭಾವ ನಮ್ಮಲ್ಲಿ ಬರಬೇಕು. ಅಂತಹ ವಿರಕ್ತಿಯನ್ನು ತುಂಬಿಕೊಂಡು ಮೌನವಾಗಿ ಬದುಕನ್ನು ಬಿಡಬೇಕು. ಹಾಗಾದರೆ ನಾವು ಬದುಕನ್ನು ಗೆದ್ದ ಹಾಗೆ ಆಗುತ್ತದೆ.

Advertisements
 

ರಸಧಾರೆ – ೯೨೬

ತೊಲಗೆಲವೊ ಮನೆಯಿಂದ ಮನವು ಬರಡಾದಂದೆ ।
ಹೊಲಸ ತೊಳೆಯಲು ತೋಳ್ಗೆ ಬಲ ಕುಗ್ಗಿದಂದೆ ।।
ತೊಲಗು ಜಗದಿಂ ದೂರ, ಇಳೆಗಾಗದಿರು ಭಾರ ।
ತೊಲಗಿ ನೀಂ ಮರೆಯಾಗು – ಮಂಕುತಿಮ್ಮ ।।

ತೊಲಗೆಲವೊ=ತೊಲಗು+ಎಲವೊ, ಬರಡಾದಂದೆ= ಬರದು+ಆದ+ಅಂದೆ, ಕುಗ್ಗಿದಂದೆ=ಕುಗ್ಗಿದ+ಅಂದೆ,ಇಳೆಗಾಗದಿರು=ಇಳೆಗೆ+ಆಗದಿರು

ಇಳೆಗೆ=ಭೂಮಿಗೆ,

ಮನಸ್ಸು ಬರಡಾದಂದು, ಮನದ ಹೊಲಸನ್ನು ತೊಳೆಯಲು ಶಕ್ತಿ ಕುಗ್ಗಿದರೆ, ಜಗಕ್ಕೆ ಮತ್ತು ಜಗದ ಜನರಿಗೆ ಭಾರವಾಗದೆ, ಮನೆ ಬಿಟ್ಟು ದೂರ ಯಾರಿಗೂ ಹೊರೆಯಾಗದ ಹಾಗೆ ಹೊರಟು ಬಿಡು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಬೈರಾಗಿಯಂತೆ ಬದುಕುವ ಸೂತ್ರ, ವಾನಪ್ರಸ್ಥದ ಹಾದಿಯನ್ನು ಮಾನ್ಯ ಗುಂಡಪ್ಪನವರು ತೋರಿದ್ದಾರೆ. ಸಮಾಜದಲ್ಲಿ ಇರುವಾಗ ಅದಕ್ಕೆ ಪೂರಕವಾಗಿ ಬದುಕಬೇಕು. ಸಮಾಜದ ಎಲ್ಲರೊಂದಿಗೆ ಬೆರೆತು ಎಲ್ಲರಲ್ಲೂ ಪ್ರೀತಿ ಸೌಹಾರ್ದತೆಯಿಂದ ಬದುಕಬೇಕು. ನಮ್ಮ ಮನಸ್ಸಿನಲ್ಲಿ ಪ್ರೀತಿಯನ್ನು ತುಂಬಿಕೊಂಡು, ಅದನ್ನು ಎಲ್ಲರಿಗೂ ಹಂಚುತ್ತಾ ಬದುಕಬೇಕು,ಅದು ಸಾರ್ಥಕ ಬದುಕು. ಹಾಗೆ "ಪ್ರೀತಿಯ ಒರತೆ ನಿನ್ನ ಮನದಲ್ಲಿ ಬತ್ತಿದರೆ, ಸಮಾಜಕ್ಕೆ ನೀಡಲು ನಿನ್ನಲ್ಲಿ ಏನೂ ಇಲ್ಲವಾಗುತ್ತದೆ ಮತ್ತು ಮನಸ್ಸು ಬರಡಾಗುತ್ತದೆಯಾದ್ದರಿಂದ, ಸಮಾಜದಿಂದ ದೂರ ತೊಲಗಿ ಹೋಗು" ಎನ್ನುವುದು ಇಲ್ಲಿನ ಆದೇಶ.

ಬದುಕಿನಲ್ಲಿ ಪ್ರತೀ ಕ್ಷಣವೂ ನಮ್ಮನ್ನು ನಾವು ಉತ್ತಮಗೊಳಿಸಿಕೊಳ್ಳುವ ಪ್ರಯತ್ನದಲ್ಲಿರಬೇಕು. ಆ ಪ್ರಯತ್ನದಲ್ಲಿನ ಹೆಜ್ಜೆಗಳೇ ನಮ್ಮೆಲ್ಲಾ ಓದು,ವಿದ್ಯೆ,ಅಧ್ಯಯನ,ಧ್ಯಾನ,ಜಪ,ತಪಗಳು. ಅವುಗಳು ನಮ್ಮ ಒಳಗೆ ಅಂದರೆ ಅಂತರಂಗಕ್ಕೆ ಅಂಟಿಕೊಂಡಿರುವ ಹೊಲಸನ್ನು ತೊಳೆಯಲು ಒದಗುತ್ತವೆ. ಹಾಗೆ ತೊಳೆಯುವ ಪ್ರಕ್ರಿಯೆಯಲ್ಲಿ ಶಕ್ತಿಕುಂದಿದರೆ, ಅಂದು ಬದುಕಿನಿಂದ ನಿರ್ಗಮಿಸಬೇಕು ಎನ್ನುವುದೇ ಇಲ್ಲಿನ ಆಂತರ್ಯ.

ಎಂದು ನಾವು ನಮ್ಮ ಭಾರವನ್ನು ಹೊರಲು ಅಸಮರ್ಥರಾಗುತ್ತೇವೆಯೋ ಮತ್ತು ಅನ್ಯರು ನಮ್ಮ ಭಾರ ಹೊರಬೇಕಾದ ಪರಿಸ್ಥಿತಿ ಏರ್ಪಡುತ್ತದೋ, ಅಂದು ಈ ಬದುಕಿನಿಂದ ದೂರಾಗಬೇಕು. ಹಿಂದೆ ನಮ್ಮ ಸಂಸ್ಕೃತಿಯಲ್ಲಿ ‘ವಾನಪ್ರಸ್ಥ’ ಕ್ಕೆ ಹೋಗುವ ಕ್ರಮವಿತ್ತು. ಎಂದು ನಮ್ಮಿಂದ ನಾವಿರುವ ಸಮಾಜಕ್ಕೆ ಯಾವುದೇ ರೀತಿಯ ಪ್ರಯೋಜನವಿಲ್ಲವೋ ಅಂದು ವನಕ್ಕೆ ತೆರಳಿ ತಪಸ್ಸನ್ನು ಮಾಡುತ್ತಾ ಸಿಕ್ಕ ಆಹಾರವನ್ನು ತಿನ್ನುತ್ತಾ ದೇಹ ತ್ಯಾಗಮಾಡುವ ಪದ್ಧತಿ ಇತ್ತು. ಇಂದು ಅದು ಸಾಧ್ಯವಿಲ್ಲ ಎಂದು ಅನಿಸುತ್ತದೆ ಅಥವಾ ಇಂದಿನ ವೃದ್ಧಾಶ್ರಮಗಳೇ ವಾನಪ್ರಸ್ಥದ ತಾಣಗಳೋ !!!!!

ಬದುಕಿರುವಾಗ, ಬದುಕಿನಿಂದ ಏನನ್ನಾದರೂ ಪಡೆದು ನಾವು ಸುಧಾರಿಸಬೇಕು ಅಥವಾ ಬದುಕಿಗೆ ಏನನ್ನಾದರೂ ನೀಡಿ ಅನ್ಯರ ಬದುಕು ಸುಧಾರಿಸುವಂತೆ ಆಗಬೇಕು. ಈ ಎರಡೂ ಆಗದಿದ್ದ ಮೇಲೆ ಮಾನ್ಯ ಗುಂಡಪ್ಪನವರು ಹೇಳುವಂತೆ’ ತೊಲಗಿ ಮರೆಯಾಗುವುದೇ ಲೇಸು ಅಲ್ಲವೇ? ಅಂಗಡಿಯಲ್ಲಿ ಸರುಕೆಲ್ಲಾ ಖಾಲಿಯಾದಮೇಲೆ ಅಂಗಡಿಯನ್ನು ಮುಚ್ಚುವುದೇ ಒಳ್ಳೆಯದಲ್ಲವೇ?

 

ರಸಧಾರೆ – ೯೨೫

ಜೋಳಿಗೆಯ ಪಿಡಿದು ನೀನೂರಿನೂರಿಗೆ ನಡೆದು ।
ಹೇಳುತ್ತ ಹಾಡುಗಳ, ಭಾರಗಳ ಮರೆತು ।।
ಬೀಳು ಮೇಲುಗಳೆಣಿಕೆಯಿಂ ಮನವನಲುಗಿಸದೆ ।
ಬಾಳ ನಡಸುವುದೆಂದೊ? – ಮಂಕುತಿಮ್ಮ ।।

ನೀನೂರಿನೂರಿಗೆ=ನೀನು+ಊರಿನ+ಊರಿಗೆ, ಮೇಲುಗಳೆಣಿಕೆಯಿಂ=ಮೆಲುಗಳ+ಎಣಿಕೆಯಿಂ, ಮನವನಲುಗಿಸದೆ=ಮಾನವನು+ಅಲುಗಿಸದೆ, ನಡಸುವುದೆಂದೊ=ನಡಸುವುದು+ಎಂದೋ.

ಪಿಡಿದು+ಹಿಡಿದು,

ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ಒಂದು ವಿರಕ್ತಭಾವದ ಆಶಯವನ್ನು ಹೊತ್ತು, ತಮಗೆ ತಾವೇ, "ನೀನು, ಕಷ್ಟ ಸುಖಗಳ ಗೆರೆಯನ್ನು ದಾಟಿದ ಮನಸ್ಸನ್ನು ಹೊಂದಿದ ಜೋಗಿಯಂತೆ, ಜೋಳಿಗೆಯನು ಹಿಡಿದು, ಊರಿಂದ ಊರಿಗೆ ಹಾಡುತ್ತಾ, ಬದುಕಿನ ಭಾರವನು ಮರೆತು ಬಾಳನ್ನು ನಡೆಸುವುದು ಎಂದೋ?" ಎಂದು ಕೇಳಿಕೊಳ್ಳುತ್ತಾ, ಅಂತಹ ಮುಕ್ತ ಭಾವದ ಬದುಕನ್ನು ನಡೆಸಿದರೆ ಚೆನ್ನ ಎನ್ನುವಂತಹ ಸಂದೇಶವನ್ನು ನಮಗೂ ನೀಡಿದ್ದಾರೆ.

ಬದುಕಿನಲ್ಲಿ ಎಲ್ಲಕ್ಕೂ ಅಂಟಿಕೊಂಡು, ಸಂಬಂಧಗಳನ್ನು ಕಟ್ಟಿಕೊಂಡು ಮತ್ತು ಕಟ್ಟಿಕೊಂಡ ಸಂಬಂಧಗಳನ್ನು ಸಮರ್ಪಕವಾಗಿ ನಿಭಾಯಿಸಲು ಆಗದೆ, ಓಡಿಹೋಗುವುದು ಪಲಾಯನ. ಅದು ಹೇಡಿಗಳ ಹಾದಿ. ಆದರೆ ಬದುಕಿನ ಏಳುಬೀಳುಗಳನ್ನೆಲ್ಲಾ ಎದುರಿಸಿ, ಕಷ್ಟಸುಖಗಳನ್ನೆಲ್ಲಾ ಅನುಭವಿಸಿ ಪಕ್ವಗೊಂಡು, ಬದುಕಿನ ಸತ್ವಹೀನತೆಯನ್ನು ಮನಗಂಡು, ತತ್ವದ ಅನುಸಂಧಾನಮಾಡಿ ಸ್ವಾರ್ಥ ತೊರೆದು ಜಗಕುಪಕರಿಸುವ ಮನವುಂಟಾಗಿ, ತಾನು ಮನಗಂಡ ಸತ್ವವನ್ನು ತತ್ವರೂಪದಲ್ಲಿ ಲೋಕಕ್ಕೆ ಹಂಚುವ ಜೋಗಿಯಂತಾಗಬೇಕು ಎನ್ನುವುದೇ ಈ ಮುಕ್ತಕದ ಆಶಯ. ಮಾನ್ಯ ಗುಂಡಪ್ಪನವರೂ ಸಹ ಜೋಳಿಗೆ ಹಿಡಿದು ಊರಿಂದೂರಿಗೆ ಹೋಗದಿದ್ದರೂ, ತಾವಿದ್ದಲ್ಲೇ ಅಂತಹ ಜೀವನವನ್ನು ನಡೆಸಿದರು.

ಬದುಕಿನ ಅಂಟು ಬಹಳ ಗಟ್ಟಿ, ಇಂದು ಮಾರುಕಟ್ಟೆಯಲ್ಲಿ ಸಿಗುವ ‘ಫೇವಿಕೋಲ್,ಕ್ವಿಕ್ ಫಿಕ್ಸ್’ ,ನಂತಹ ಅಂಟುಗಳಿಗಿಂತ ಸಾವಿರ ಪಟ್ಟು ಹೆಚ್ಚು ಗಟ್ಟಿ. ನಾವು ಅದರಿಂದ ಬಿಡಿಸಿಕೊಳ್ಳುವ ಪ್ರಯತ್ನವನ್ನು ಪಟ್ಟರೂ,
ಅದೇ ನಮ್ಮನ್ನು ಬಿಡದ ಹಾಗೆ ಆಂಟಿಕೊಂಡಿರುತ್ತದೆ. ಅದರಿಂದ ಬಿಡಿಸಿಕೊಳ್ಳುವ ಪ್ರಯತ್ನವನ್ನೇ ಮಾಡದೆ, ಅದೇ ‘ಚೆನ್ನ’ವೆಂಬಂತೆ ಬದುಕುವವರೇ ನಮ್ಮಲ್ಲಿ ಅತ್ಯಧಿಕ. ಹಲವರು ಪ್ರಯತ್ನಮಾಡಬಹುದು. ಆದರೆ ಆ ಪ್ರಯತ್ನದಲ್ಲಿ ಬರುವ ಕ್ಲಿಷ್ಟತೆಗಳನ್ನು ಎದುರಿಸಲು ಮತ್ತು ನಿವಾರಿಸಲು ಸಾಧ್ಯವಾಗದಾಗ, ಕೈಬಿಟ್ಟು, ಒಂದು ರೀತಿಯ ‘ಅಭಾವ ವೈರಾಗ್ಯ’ ವನ್ನು ತಾಳುತ್ತಾರೆ. ಕೇವಲ ಕೆಲವೇ ಕೆಲವು ಜನ, ಛಲ ಬಿಡದೆ ಆ ಮಾರ್ಗದಲ್ಲಿ ಬರುವ ಎಲ್ಲಾ ಏಳು ಬೀಳುಗಳನ್ನೂ ದಾಟಿ ಮುಂದುವರೆಯುತ್ತಾರೆ. ಅವರುಗಳು ನಿಜಾರ್ಥದಲ್ಲಿ ವಿರಾಗಿಗಳು, ವಿರಕ್ತರು.

ಶ್ರೀ ಪುರಂದರದಾಸರ ಜೀವನವನ್ನು ಓದಿದರೆ ನಮಗೆ ವಿರಕ್ತಿ ಎಂಬುವುದು ಹೇಗೆ ಬರುತ್ತದೆ ಎಂದು ಅರ್ಥವಾಗುತ್ತದೆ. ಕೆಲಬಾರಿ ಕೆಲವರು ಜನ್ಮತಃ ವಿರಕ್ತರಾಗೇ ಹುಟ್ಟುತ್ತಾರೆ. ಅದು ಅವರುಗಳು ಸಂಚಯಿಸಿದ ಪೂರ್ವಕರ್ಮಾನುಸಾರವಿರುತ್ತದೆ. ಬದುಕಿನ ಎಲ್ಲಾ ಕಷ್ಟಸುಖಗಳನ್ನು ಅನುಭವಿಸಿ, ಅವುಗಳ ನೀರಸತೆಯನ್ನು ಮನಗಂಡು ಅವುಗಳಿಂದ ಪ್ರಯತ್ನಪೂರ್ವಕವಾಗಿ ಬಿಡಿಸಿಕೊಂಡು,ಮಾನ್ಯ ಗುಂಡಪ್ಪನವರು ‘ ಮನವನಲುಗಿಸದೆ ಬಾಳ ನಡಸುವುದೆಂದೊ?’ ಎಂದು ಕೇಳುವಂತೆ ನಮ್ಮನ್ನು ನಾವೇ ಪ್ರಶ್ನಿಸಿಕೊಂಡು, ದೃಢ ಮನಸ್ಸಿನಿಂದ ಮುನ್ನಡೆದರೆ, ನಮ್ಮಿಂದ ನಮಗೂ ಪ್ರಯೋಜನವಾಗುತ್ತದೆ ಮತ್ತು ಇತರರಿಗೂ ಉಪಕರಿಸಿದಂತಾಗುತ್ತದೆ. ಆ ಹಾದಿಯಲ್ಲಿದ್ದರೆ ಇಂದೋ, ಮುಂದೆಂದೋ ಒಂದು ದಿನ ನಾವೂ ಸಹ ‘ಮನವನಲುಗಿಸದೆ’ ಬಾಳ ನಡೆಸಬಹುದು.

 

ರಸಧಾರೆ – ೯೨೪

ಮನೆಯ ಮಾಳಿಗೆಗಲ್ಲ, ಮುಡಿಯ ಕೊಪ್ಪಿಗೆಗಲ್ಲ ।
ಇನಿವಣ್ಣು ತನಿಯ ಕಾಳೆಂಬುದೇನಿಲ್ಲ ।।
ಬಣಗು ಕುರಿಚಲು ಗಿಡದ ಬಾಳೇನು? ನೀನಂತು ।
ಒಣಗಿದೊಡೆ ಸವುದೆ ಸರಿ – ಮಂಕುತಿಮ್ಮ ।।

ಮಾಳಿಗೆಗಲ್ಲ=ಮಾಳಿಗೆಗೆ+ಅಲ್ಲ , ಕೊಪ್ಪಿಗೆಗಲ್ಲ=ಕೊಪ್ಪಿಗೆಗೆ=ಅಲ್ಲ, ಕಾಳೆಂಬುದೇನಿಲ್ಲ= ಕಾಳು +ಎಂಬುದು+ಏನು+ಇಲ್ಲ, ಬಾಳೇನು= ಬಾಳು+ಏನು, ನೀನಂತು=ನೀನು+ಅಂತು,

ಕೊಪ್ಪಿಗೆ=ತುರುಬು, ಮುಡಿ, ಇನಿವಣ್ಣು=ಸಿಹಿಯಾದ ಹಣ್ಣು, ಸವುದೆ= ಸೌದೆ, ಉರುವಲು

ನೀನು ಒಂದು ಕುರಿಚಲು ಗಿಡವಿದ್ದಂತೆ. ಹೇಗೆ ಕುರಿಚಲು ಗಿಡ, ಯಾವ ಮನೆಯ ಮಾಳಿಗೆಗೆ ತೊಲೆಯೋ, ಧೂಲವೋ ಆಗುವುದಿಲ್ಲವೋ ಅಥವಾ ಯಾರ ಮುಡಿಗೂ ಅಂದ ಮತ್ತು ಸುಗಂಧವನ್ನೀಯುವ ಹೂಗಳನ್ನು ಅರಳಿಸುವುದಿಲ್ಲವೋ ಅಥವಾ ರುಚಿಯಾದ ಹಣ್ಣೋ ಅಥವಾ ಅಹಾರವಾಗಬಹುದಾದ ಧಾನ್ಯವನ್ನೋ ಕೊಡುವುದಿಲ್ಲವೋ ಹಾಗೆಯೇ ನಿನ್ನ ಜೀವನವೂ ಸಹ, ನಿಷ್ಪ್ರಯೋಜಕ. ಹೇಗೆ ಕುರಿಚಲು ಗಿಡ ಒಣಗಿದರೆ ಕೇವಲ ಒಲೆಗೆ ಒಡ್ಡಲು ಸೌದೆಯಾಗಬಹುದೋ ಅದೇ ರೀತಿ ನೀನು ಎಂದು, ನಮ್ಮೆಲ್ಲರ ಬದುಕಿನ ಪರಿಯನ್ನು ವಿಶ್ಲೇಷಿಸಿದ್ದಾರೆ ಮಾನ್ಯ ಗುಂಡಪ್ಪನವರು.

ಒಂದು ಬೃಹತ್ತಾದ ಮರ, ತನ್ನ ಕೊಂಬೆ ರೆಂಬೆಗಳನ್ನು ವಿಶಾಲವಾಗಿ ಹರಡಿಕೊಂಡು, ಪಕ್ಷಿ, ಉರಗ, ಕ್ರಿಮಿ, ಕೀಟಗಳಿಗೆ ತಂಗುದಾಣವಾಗಿ, ಸುಗಂಧಭರಿತ ಹೂಗಳನ್ನಿತ್ತು, ಸುರುಚಿಯ ಹಣ್ಣುಗಳನ್ನು ಇತ್ತು, ಕಡೆಗೆ ಕಡಿದು ಹಾಕಿದರೆ ಯಾರದಾದರೂ ಮನೆಯ ಮೇಲ್ಛಾವಣಿಗೆ ತೊಲೆ ಅಥವಾ ದೂಲವಾಗಿ, ತನ್ನನ್ನು ಆಶ್ರಯಿಸಿದವರಿಗೆ ನೆರಳನ್ನು ಕೊಟ್ಟು ಬಹೂಪಯೋಗಿಯಾಗಿರುತ್ತದೆ. ಇನ್ನು ಕೆಲವು ಮರಗಳು ಕೇವಲ ಹಣ್ಣನ್ನೋ ಅಥವಾ ಹೂವನ್ನೂ ಕೊಟ್ಟು ಧನ್ಯರಾಗುತ್ತವೆ. ಇನ್ನು ಕೆಲವು ಗಿಡಗಳು ಕಾಳುಗಳನ್ನಾದರೂ ಕೊಟ್ಟು ಧನ್ಯರಾಗುತ್ತವೆ. ಆದರೆ ಮನುಷ್ಯನೋ ಕೇವಲ ಕುರಿಚಲು ಗಿಡವಿದ್ದಂತೆ, ಆಶ್ರಯ, ಹಣ್ಣು, ಹೂವು, ಕಾಯಿ, ಹೀಗೆ ಯಾವುದನ್ನೂ ನೀಡದೆ , ಕೇವಲ ಒಲೆಗೆ ಒಟ್ಟಲು ಸೌದೆ ಅಥವಾ ಉರುವಲಾಗಬಹುದು. ಅಷ್ಟು ಮಿತ ಪ್ರಯೊಜನ. ಅಂತಹ ಮಿತ ಪ್ರಯೋಜನವಿರುವವನೇ ಮನುಷ್ಯ ಪ್ರಾಣಿಯೂ ಸಹ ಎನ್ನುವಂತೆ ಮಾನ್ಯ ಗುಂಡಪ್ಪನವರು, ನಮ್ಮನ್ನು ಕುರಿಚಲು ಗಿಡಗಳಿಗೆ ಹೋಲಿಸಿದ್ದಾರೆ. ಕೂಲಂಕುಶವಾಗಿ ನೋಡಿದರೆ ಇದು ವಾಸ್ತವ ಅಲ್ಲವೇ?

ನಮ್ಮಲ್ಲಿ ಎಷ್ಟು ಜನರಿಗೆ ಪರರಿಗೆ ಉಪಕರಿಸುವ ಬುದ್ಧಿಯಿರುತ್ತದೆ? ಅಕಸ್ಮಾತ್ ಆ ಬುದ್ಧಿಯಿದ್ದರೆ, ಎಷ್ಟು ಜನರಿಗೆ ಉಪಕಾರಮಾಡುವ ಶಕ್ತಿ ಅಥವಾ ಕ್ಷಮತೆ ಇರುತ್ತದೆ. ಕ್ಷಮತೆ ಇದ್ದವನಿಗೆ ಮನಸ್ಸು ಬರುವುದಿಲ್ಲ ಮತ್ತು ಮನಸ್ಸು ಇದ್ದವನಿಗೆ ಕ್ಷಮತೆ ಇರುವುದಿಲ್ಲ. ಒಟ್ಟಾರೆ ಮನುಷ್ಯ ಮತ್ತೊಬ್ಬರಿಗೆ ಉಪಕಾರಿಯಾಗಲಾರ ಅಥವಾ ಪ್ರಯೋಜನಕ್ಕೂ ಯೋಗ್ಯನಲ್ಲ. ಆದರೆ ಸೃಷ್ಟಿಯ ಬೇರೆ ಯಾವುದಕ್ಕೂ ಇಲ್ಲದ ಒಂದು ಅದ್ಭುತ ಶಕ್ತಿ ಮನುಷ್ಯನಿಗೆ ಕೊಟ್ಟಿದ್ದಾನೆ ಪರಮಾತ್ಮ.

ತನ್ನನ್ನು ತಾನು ತಿದ್ದಿಕೊಳ್ಳುವ, ವೃದ್ಧಿಗೊಳಿಸಿಕೊಳ್ಳುವ ಶಕ್ತಿ ಗಳಿಸುವ ಮತ್ತು ಆ ಶಕ್ತಿಯನ್ನು ಹಂಚುವ ಯೋಗ್ಯತೆ ಮತ್ತು ಕ್ಷಮತೆಯನ್ನು ಕೇವಲ ಮನುಷ್ಯನಿಗೆ ಕೊಟ್ಟಿದ್ದಾನೆ ಆ ಪರಮಾತ್ಮ. ಅಂತಹ ಯೋಗ್ಯತೆಯನ್ನು ಸರಿಯಾಗಿ ಪ್ರಯೋಗ ಮತ್ತು ಉಪಯೋಗ ಮಾಡಿದ್ದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರೂ ‘ ಪರೋಪಕಾರಿ’ ಗಳಾಗಿ, ಕ್ರಿಚಲು ಗಿಡಗಳಂತೆ ಅಲ್ಲದೆ ಬೃಹತ್ ವೃಕ್ಷಗಳಂತೆ ಬಾಳಬಹುದು.

 

ರಸಧಾರೆ – ೯೨೩

ನಿನಗಾರು ಗುರುವಹರು? ನೀನೊಬ್ಬ ತಬ್ಬಲಿಗ ।
ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು ।।
ದಿನವ ಕಳೆ ; ಗುರುಶಿಷ್ಯಪಟ್ಟಗಳು ನಿನಗೇಕೆ ?।
ನಿನಗೆ ನೀನೇ ಗುರುವೊ – ಮಂಕುತಿಮ್ಮ ।।

ನಿನಗಾರು=ನಿನಗೆ+ಯಾರು, ಗುರುವಹರು=ಗುರುವು+ಅಹರು, ಸಿಕ್ಕಿದೆಂಜಲನು=ಸಿಕ್ಕಿದ+ಎಂಜಲನು,

ತಬ್ಬಲಿಗ=ಗತಿಯಿಲ್ಲದವ, ಉಣುತ=ತಿನ್ನುತ್ತಾ ಅಥವಾ ಸ್ವೀಕರಿಸುತ್ತ,

ನಿನಗೆ ಯಾರು ಗುರುವಾಗುತ್ತಾರೆ? ನೀನೊಬ್ಬ ಗತಿಯಿಲ್ಲದವ. ದಾರಿಯಲ್ಲಿ ಸಿಕ್ಕಿದೆಂಜಲನ್ನು ತಿನ್ನುತ್ತ ದಿನವನ್ನು ದೂಡು. ನಿನಗೊಬ್ಬ ಗುರು, ನೀನೊಬ್ಬ ಶಿಷ್ಯ ಎಂಬ ಪಟ್ಟಗಳು ನಿನಗೇಕೆ? ನಿನಗೆ ನೀನೆ ಗುರುವೋ, ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ನಮ್ಮೆಲ್ಲರ ಮನಸ್ಸುಗಳಲ್ಲಿ ಪುಟಿದೇಳುವ ಪ್ರಶ್ನೆಗಳೇ ಮಾನ್ಯ ಗುಂಡಪ್ಪನವರ ಮನಸ್ಸಿನಲ್ಲೂ ಉದ್ಭವಿಸಿತ್ತು. ಅಂತಹ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡುವ ಗುರುವು ಅವರಿಗೆ ಸಿಗಲಿಲ್ಲ. ನಮಗೂ ಸಿಗುವುದಿಲ್ಲ. ಹಾಗೆ ಯಾರಾದರೂ ನಮಗೆ ಸಿಕ್ಕಿದ್ದಾರೆ ಎಂದುಕೊಂಡರೆ, ಆ ಗುರುವಿನ ಬೋಧನೆ ನಮಗೆ ಅವರ ದರ್ಶನವನ್ನು ಮಾತ್ರ ಬೋಧಿಸುತ್ತದೆಯೇ ವಿನಃ, ನಾವು ನಮ್ಮ ದರ್ಶನವನ್ನು ಪಡೆಯುವ ಮಾರ್ಗವನ್ನು ತೋರುವುದಿಲ್ಲ. ಹಾಗಾಗಿ ನೀವು ಈ ‘ಜ್ಞಾನ’ ದ ಅರುಸುವಿಕೆಯಲ್ಲಿ ನೀವೊಬ್ಬ ತಬ್ಬಲಿ ಎಂದು ಒಪ್ಪಿಕೊಳ್ಳಲೇ ಬೇಕು. ಆದರೆ ಗುಂಡಪ್ಪನವರು ತಮ್ಮ ಬದುಕಿನ ಹಾದಿಯಲ್ಲಿ ದೊರೆತ ಪ್ರತಿ ಅನುಭವವನ್ನೂ ಒಂದು ಪಾಠದಂತೆ, ಕಲಿಸಿದ ಪ್ರತಿಯೊಬ್ಬರನ್ನೂ ಒಬ್ಬ ಗುರುವಂತೆ ಕಾಣುತ್ತಾ ಮುಂದೆ ಮುಂದೆ ಸಾಗಿ ತಮ್ಮದೇ ದರ್ಶನವನ್ನು ಕಂಡುಕೊಂಡರು. ಋಷಿಗಳೋಪಾದಿ, ಅವರು ಅದನ್ನೇ ಜಗತ್ತಿಗೆ ಜಗತ್ತಿಗೆ ಹಂಚಿದರು.

ಅಂತಹ ಮಾರ್ಗವನ್ನೇ ನಾವೂ ಸಹ ಅನುಸರಿಸಬೇಕು ಎನ್ನುವುದೇ ಇಲ್ಲಿನ ಸೂಚ್ಯಾರ್ಥ.ನಮ್ಮ ಅನುಭವಗಳಿಂದ ನಮ್ಮ ಮನಸ್ಸುಗಳಲ್ಲಿ ಜಿಜ್ಞಾಸೆಯುಂಟಾಗಬೇಕು, ವಿಚಾರಮಂಥನವಾಗಬೇಕು, ನಮಗೆ ಸತ್ಯದ ಅರಿವಾಗಬೇಕು ಮತ್ತು ಆ ಅರಿವು ನಮಗೆ ಪರತತ್ವದ ದರ್ಶನವನ್ನು ನೀಡಬೇಕು. ಹಾಗೆ ನಮಗೆ ಬದುಕಿನ ಅನುಭವಗಳನ್ನು ನೀಡುವ ಪ್ರತೀ ಅನುಭವವೂ ಬದುಕು ನೀಡುವ ಎಂಜಲಾಹಾರವಾಗಿ, ಅದನ್ನು ನೀಡುವ ವ್ಯಕ್ತಿ ಅಥವಾ ವಿಷಯಗಳೇ ನಮಗೆ ಗುರುಗಳಾಗಬೇಕು. ನಮ್ಮ ಮನಸ್ಸು ಬುದ್ಧಿಗಳಲ್ಲಿ ನಡೆಯುವ ಮಂಥನವೇ ಪಾಠವಾಗಬೇಕು, ನಮಗೆ ನಾವೇ ಗುರುಗಳಾಗಬೇಕು.

ಆದರೆ ಇಂದಿನ ಸ್ಥಿತಿಯನ್ನು ನೋಡಿದರೆ ಯಾರಿಗೂ, ನಿಲ್ಲುವ ಸಮಯವೇ ಇಲ್ಲ. ನಿಂತರೆ ತಾನೇ ನೋಡುವುದು, ನೋಡಿದರೆ ತಾನೇ ಗಮನಿಸುವುದು, ಗಮನಿಸಿದರೆ ತಾನೇ ಪ್ರಶ್ನೆ, ಪ್ರಶ್ನೆ ಎದ್ದರೆ ತಾನೇ ಜಿಜ್ಞಾಸೆ, ಜಿಜ್ಞಾಸೆಯಾದರೆ ಮಾತ್ರ ಸತ್ಯದರಿವು ಮತ್ತು ತತ್ವದ ದರ್ಶನ. ನಾವೆಲ್ಲಾ ಅದರಿಂದ ದೂರವಿದ್ದೇವೆ. ನಮಗೂ ಪ್ರಶ್ನೆಗಳಿವೆ, ಆದರೆ ಪ್ರಶ್ನೆಗಳಲ್ಲೇ ಬಹಳ ಗೊಂದಲಗಳಿರುವಾಗ ಇನ್ನು ಉತ್ತರಗಳು ಸ್ಪಷ್ಟವಾಗಲು ಸಾಧ್ಯವೇ? ನಿಂತು ನೋಡುವ ಅಭ್ಯಾಸಮಾಡಿಕೊಂಡು, ಸತ್ಯದ ಮತ್ತು ಸತ್ವದ ಅನುಭವವನ್ನು ಪಡೆಯಬೇಕೆಂಬ ತೀವ್ರ ಅಪೇಕ್ಷೆ ಉಂಟಾದರೆ, ಆಗ ನಮಗೆ ನಾವೇ ಗುರುಗಳಾಗಿ ಜ್ಞಾನವನ್ನು ಪಡೆಯುವ ಹಾದಿಯಲ್ಲಿ ಮುನ್ನಡೆಯಬಹುದು ಅಲ್ಲವೇ?

 

ರಸಧಾರೆ – ೯೨೨

ಎಲ್ಲರಿಗಮೀಗ ನಮೊ – ಬಂಧುಗಳೆ, ಭಾಗಿಗಳೆ ।
ಉಲ್ಲಾಸವಿತ್ತವರೆ, ಮನವ ತೊಳೆದವರೆ ।।
ಟೊಳ್ಳು ಜಗ, ಸಾಕು ಬಾಳ್ – ಎನಿಸಿ ಗುರುವಾದವರೆ ।
ಕೊಳ್ಳಿರೀ ನಮವವೆನು – ಮಂಕುತಿಮ್ಮ ।।

ಎಲ್ಲರಿಗಮೀಗ=ಎಲ್ಲರಿಗಂ+ಈಗ, ಉಲ್ಲಾಸವಿತ್ತವರೆ=ಉಲ್ಲಾಸ+ಇತ್ತವರೆ, ಗುರುವಾದವರೆ=ಗುರುವು+ಆದವರೆ

ಭಾಗಿಗಳು=ಹಂಚಿಕೊಂಡವರು, ನಮವ=ನಮಸ್ಕಾರವನ್ನು.

ನನ್ನ ಬಂಧುಗಳೇ, ನನ್ನ ಬದುಕನ್ನು ಹಂಚಿಕೊಂಡವರೇ, ಎನಗೆ ಸಂತೋಷವನ್ನು ಕೊಟ್ಟವರೇ, ಎನ್ನ ಮನವನ್ನು ತೊಳೆದವರೇ, ಈ ಜಗತ್ತು ಟೊಳ್ಳು, ಈ ಬಾಳು ಸಾಕು ಎನ್ನುವಂತಹ ಭಾವವನ್ನು ಎನಗೆ ಬರುವಂತೆ ಮಾಡಿ, ನನ್ನ ಗುರುಸ್ಥಾನದಲ್ಲಿರುವವರೇ, ನಿಮಗೆಲ್ಲರಿಗೂ ನನ್ನ ನಮಸ್ಕಾರ, ಎಂದು ಹೇಳುತ್ತಾ, ನೀವೂ ಸಹ ಅಂತಹ ಭಾವ ಮನಸ್ಸಿನಲ್ಲಿ ತುಂಬಿಕೊಂಡು ನೀವು ನಮನವನ್ನು ಹೇಳಿ ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಹುಟ್ಟಿನಿಂದ ತಂದೆ, ತಾಯಿ, ಅಕ್ಕ, ಅಣ್ಣ, ತಮ್ಮ, ತಂಗಿ ಮುಂತಾದ ಬಂಧುತ್ವದ ಕೊಂಡಿಗಳು ನಮಗಿರುತ್ತದೆ. ಇನ್ನು ನಾವೇ ಕಟ್ಟಿಕೊಳ್ಳುವ ಬಂಧಗಳು ಹಲವಾರು. ನಮ್ಮ ಪ್ರಮೇಯವೇ ಇಲ್ಲದೆ ನಮ್ಮ ಮೇಲೆ ಪ್ರಭಾವ ಬೀರುವಂತಹ ಜನರು ಮತ್ತು ಅವರ ಜೀವನದಿಂದಲೂ ನಾವು ಬೆಳೆಯುತ್ತೇವೆ, ಪ್ರಭಾವಿತರಾಗುತ್ತೇವೆ ಮತ್ತು ಕಲಿಯುತ್ತೇವೆ. ಬದುಕಿನಲ್ಲಿ ಹೇಗಿರಬೇಕು ಅಥವಾ ಹೇಗಿರಬಾರದು ಎಂದು ಕಲಿಯುತ್ತೇವೆ. ಇವರುಗಳು ನಮಗೆ ಕಲಿಸುವಾಗ ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾರೆ, ಕೈ ಹಿಡಿದು ನಡೆಸುತ್ತಾರೆ, ನಮ್ಮ ಕಷ್ಟವನ್ನು ನಿವಾರಿಸಿ ಸಂತೋಷವನ್ನು ನೀಡುತ್ತಾರೆ ಅಥವಾ ತಮ್ಮ ಕಷ್ಟವನ್ನು ನಮಗಿತ್ತು ದುಃಖವನ್ನೂ ನೀಡುತ್ತಾರೆ. ಬದುಕಿನಲ್ಲಿ ಪ್ರತೀ ಕ್ಷಣವೂ, ಎಲ್ಲರಿಂದ ಮತ್ತು ಎಲ್ಲಾ ಘಟನೆಗಳಿಂದಲೂ ಏನಾದರೊಂದು ಕಲಿಯುತ್ತಲೇ ಇರುತ್ತೇವೆ, ಅಲ್ಲವೇ? ಹಾಗಾಗಿ ಅವರನ್ನೆಲ್ಲಾ ನಮ್ಮ ಗುರುಗಳೆಂದು ಪರಿಗಣಿಸಬೇಕು ಮತ್ತು ಅವರಿಗೆ ಕೃತಜ್ಞತೆಯಿಂದ ನಮಸ್ಕರಿಸಬೇಕು.

ಹೀಗೆ ಕಲಿತ ಪಾಠದಿಂದ ನಮಗೆ ಈ ಜಗತ್ತು ಟೊಳ್ಳು ಅಥವಾ ಇಲ್ಲಿನ ಎಲ್ಲಾ ಸುಖ ದುಃಖಗಳು ತಾತ್ಕಾಲಿಕ ಎಂದು ಅನಿಸುತ್ತದೆ ಮತ್ತು ಹಾಗೆ ಅನಿಸಿದರೆ ಮಾತ್ರ ನಾವು ಏನಾದರೂ ಕಲಿತ ಹಾಗೆ ಆಗುತ್ತದೆ. ಆ ರೀತಿಯ ಕಲಿಕೆಯಿಂದ ನಮ್ಮ ಮನಸ್ಸಿನ ಕಲ್ಮಶಗಳು ತೊಳೆದು, ನಾವು ಮತ್ತಷ್ಟು ಪ್ರಜ್ಞಾವಂತರಾಗುತ್ತೇವೆ. ಇಂತಹ ಅರಿವಿನಿಂದ ಸತ್ಯವಾವುದು, ಅಸತ್ಯವಾವುದು ಎನ್ನುವಂತಹ ಭೇಧವನ್ನು ಅರಿಯಲಾದರೆ, ಆಗ ಸತ್ಯವನ್ನು ಹಿಡಿದು, ಈ ಜಗತ್ತಿನ ಮೇಲೆ ಒಂದು ವಿರಕ್ತ ಭಾವ ಬಂದು, ಮಾನ್ಯ ಗುಂಡಪ್ಪನವರು ಹೇಳುವಂತೆ ‘ ಸಾಕು ಬಾಳ್’ ಎನಿಸಿದರೆ, ಆಗ ನಮ್ಮ ಕಲಿಕೆ ಸಂಪೂರ್ಣ ಎಂದು ಆಗುತ್ತದೆ.

ಹುಟ್ಟಿದನಂತರ ಬದುಕಲೇ ಬೇಕು. ಸುಮ್ಮನೆ ತಿಂದು, ಮಲಗಿ, ಎದ್ದು, ಓಡಾಡಿ, ಬಾಳಿದರೆ ಅದು ನಿಷ್ಪ್ರಯೋಜಕ ಬಾಳು. ಹಾಗಲ್ಲದೆ ಮಾನ್ಯ ಗುಂಡಪ್ಪನವರು ‘ ಲೋಕದಿಂದ ನಿರ್ಲೋಕ ‘ ಎನ್ನುವಂತೆ ಈ ಲೋಕದಿಂದಲೇ ಎಲ್ಲವನ್ನೂ ಕಲಿತು ಈ ಜಗತ್ತಿನ ಜೀವನದ ಅಶಾಶ್ವತೆಯನ್ನು ಮನಗಂಡು, ನಮ್ಮ ಬದುಕಿನಲ್ಲಿ, ನಮ್ಮ ಬದುಕನ್ನು ಹಂಚಿಕೊಂಡು, ಸಂತಸವನ್ನು ಕೊಟ್ಟು, ಅನುಭವಗಳ ಪಾಠವನ್ನು ಕಲಿಸಿ, ಬೆಳೆಯಲು ಸಹಕರಿಸಿದ ಪ್ರತಿಯೊಂದಕ್ಕೂ, ಪ್ರತಿಯೊಬ್ಬರಿಗೂ ಕೃತಜ್ಞತಾಪೂರ್ವಕವಾದ ನಮನಗಳನ್ನು ಸಲ್ಲಿಸಬೇಕು. ಆ ರೀತಿಯ ಭಾವದಿಂದ ನಮಗೆ ‘ಧನ್ಯತೆ’ ಯ ಅನುಭವವಾಗುತ್ತದೆ. ಹೃದಯ ತೃಪ್ತಿಯಿಂದ ತುಂಬುತ್ತದೆ, ಬದುಕು ಸಾರ್ಥಕವಾಗುತ್ತದೆ. ಅಂತಹ ಸಾರ್ಥಕತೆಯನ್ನು ನಾವೂ ಸಹ ಪಡೆಯುವ ಪ್ರಯತ್ನವನ್ನು ಮಾಡಬೇಕು.

 

ರಸಧಾರೆ – ೯೨೧

ಇಳಿಯುವೆನು ಮುಳುಗುವೆನು ವಿಶ್ವಾತ್ಮ ಸಾಗರದಿ ।
ಮುಳುಮುಳುಗಿ ಕಳೆಯುವೆನು ಬೇರೆತನದರಿವ ।।
ಇಳೆಬಾನ್ಗಳಾಟದಲಿ ಕುಣಿಯುವೆನು ಮೈಮರೆತು ।
ಗಳಿಸೀ ಮನಃಸ್ಥಿತಿಯ – ಮಂಕುತಿಮ್ಮ ।।

ಬೇರೆತನದರಿವ ।=ಬೇರೆತನದ+ಅರಿವ, ಇಳೆಬಾನ್ಗಳಾಟದಲಿ=ಇಳೆ+ಬಾನುಗಳ+ಆಟದಲಿ,

ಇಳೆ=ಭೂಮಿ, ಬಾನು+ಆಗಸ,

ನಾನು ಬೇರೆ, ನಾನು ಎಲ್ಲರಿಗಿಂತ ಭಿನ್ನ ಎನ್ನುವ ಭಾವವನ್ನು ಕಳೆದುಕೊಂಡು, ವಿಶ್ವಾತ್ಮಭಾವದ ಸಾಗರಲ್ಲಿ ನಾನು ಇಳಿಯುತ್ತೇನೆ, ಮುಳುಗುತ್ತೇನೆ, ಈ ಆಕಾಶ ಮತ್ತು ಧಾರೆಗಳ ನಡುವಿನ ಬಾಳಿನಲ್ಲಿ ಮೈ ಮರೆತು ಕುಣಿಯುತ್ತೇನೆ, ಎನ್ನುವಂತಹ ಆಶಯಗಳನ್ನು ತುಂಬಿಕೊಂಡ ಮನಸ್ಸಿನ ಸ್ಥಿತಿಯನ್ನು ಬೆಳೆಸಿಕೊಳ್ಳುತ್ತೇನೆ ಎಂದು ಹೇಳುತ್ತಾ, ನಮಗೂ ಅಂತಹ ಸ್ಥಿತಿಗೆ ಹೋಗಲು ಮಾರ್ಗವನ್ನು ಸೂಚಿಸಿದ್ದಾರೆ ನಮ್ಮ ಗುಂಡಪ್ಪನವರು.

ನಮ್ಮ ಬದುಕಿನಲ್ಲಿ ನಾವು ಎಲ್ಲಿಯ ತನಕ ‘ ನಾನು, ನನ್ನದು, ನನ್ನಿಂದ, ನನಗೆ ‘ ಎನ್ನುವ ‘ ನಾನತ್ವದ’ ಭಾವಗಳನ್ನು ಪ್ರದರ್ಶಿಸುತ್ತಾ ಇರುತ್ತೇವೆಯೋ ಅಲ್ಲಿಯ ತನಕ ನಮಗೆ ವಿಶಾಲ ಮನೋಭಾವ ಮತ್ತು ವಿಶ್ವಾತ್ಮ ಭಾವ ಬರುವುದಿಲ್ಲ. ಈ ನಾನತ್ವದ ಭಾವಗಳು ನಮ್ಮ ಅಂತರಂಗದ ಬೆಳೆವಣಿಗೆಗೆ ತಡೆಯೊಡ್ಡುವ ಗೋಡೆಗಳು. ಅವುಗಳನ್ನು ಕೆಡವಿದ ಹೊರತು ನಾವು ಔನ್ನತ್ಯವನ್ನು ಪಡೆಯಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ಮಾನ್ಯ ಗುಂಡಪ್ಪನವರು ‘ಕಳೆಯುವೆನು ಬೇರೆತನದರಿವ’ ಎಂದರು. ಹಾಗೆ ನಾವು ನಮ್ಮ ‘ಬೇರೆತನದ’ ಅರಿವನ್ನು ತೊರೆದರೆ ಮಾತ್ರ ನಮಗೆ ಎಲ್ಲರೊಳಗೆ ಒಂದಾಗಿ ಬೆರೆಯಲು ಸಾಧ್ಯ.

ಮೇಲೆ ಆಕಾಶ ಕೆಳಗೆ ಭೂಮಿ, ನಡುವೆ ನಮ್ಮ ಜೀವನ. ಇಲ್ಲಿರುವ ಎಲ್ಲರೊಡನೆ ನಮ್ಮ ಸಂಪರ್ಕ. ಭಾವನಾತ್ಮಕ, ಸಾಮಾಜಿಕ, ಸಾಂಸ್ಕೃತಿಕ, ವೈಯಕ್ತಿಕ ಹೀಗೆ ಹತ್ತು ಹಲವಾರು ರೀತಿಯ ನಂಟು ಇರುತ್ತದೆ. ಆದರೆ ಈ ನಂಟಿಗೆಲ್ಲಾ ಕಾರಣವನ್ನು ಹುಡುಕಲಾಗುವುದಿಲ್ಲ. ಏಕೆಂದರೆ ನಮ್ಮ ಜೀವನವೂ ಪರಮಾತ್ಮನ ಲೀಲಾವಿನೋದದ ಒಂದು ಅಂಕವಷ್ಟೇ!!!!! ಅದನ್ನು ಮನಗಾಣಬೇಕು, ಅದರಲ್ಲಿ ಒಂದಾಗಿ ಮೆರೆಯಬೇಕು ಪರಮಾತ್ಮಾನುಭಾವದ ಉನ್ಮತ್ತತೆಯಲ್ಲಿ ತಮ್ಮ ಬದುಕನ್ನು ಕಳೆದು, ಇಡೀ ಜಗತ್ತಿಗೆ ಭಕ್ತಿಯ ಪಾರವಶ್ಯದ ಸೊಗಡನ್ನು ಪಸರಿಸಿದ ಭಕ್ತರ ಕಥೆಗಳು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೇರಳವಾಗಿ ಸಿಗುತ್ತದೆ ಅಲ್ಲವೇ? ಅವರ ಜೀವನವನ್ನು ಗಮನಿಸಿ ನಾವೂ ಸಹ ಪಾಲಿಸಿದರೆ ನಾನತ್ವವನ್ನು ಹೋಗಲಾಡಿಸಿಕೊಳ್ಳಬಹುದು, ಅಹಂಕಾರವನ್ನು ತೊರೆಯಬಹುದು.

ನಮ್ಮ ಸನಾತನದ ಋಷಿಮುನಿಗಳೂ ಸಹ, ಅವರ ಜಪ, ತಪಸ್ಸು, ಧ್ಯಾನ, ಜ್ಞಾನಗಳನ್ನೆಲ್ಲಾ ಸದಾಕಾಲ ಲೋಕಕಲ್ಯಾಣಕ್ಕಾಗಿಯೇ ಮೀಸಲಿಟ್ಟು ‘ಬೇರೆತನದರಿವ’ನ್ನು ಸಂಪೂರ್ಣವಾಗಿ ನೀಗಿಕೊಂಡು ವಿಶ್ವಾತ್ಮಭಾವದಲ್ಲಿ ಮುಳುಗಿ ಮೆರೆಯಲ್ಲಿಲ್ಲವೇ? ಅಂತಹ ಸ್ಥಿತಿಗೆ ತಲುಪು ಎಂದು ಆದೇಶಿಸಿದ್ದಾರೆ ಮಾನ್ಯ ಡಿವಿಜಿಯವರು. ಈ ಜೀವನದ, ಎಂದರೆ ಅವರು ಹೇಳುವ ‘ಇಳೆಬಾನ್ಗಳಾಟದಲಿ’ ಮತ್ತು ಇಲ್ಲಿನ ಸೆಳೆತಗಳಿಂದ ಮುಕ್ತರಾಗಿ ಆ ಸ್ಥಿತಿಗೆ ತಲುಪಲು, ಬಹಳ ಕಷ್ಟ. ಆದರೆ ಅಸಾಧ್ಯವಲ್ಲ. ಆಶಯವಿದ್ದರೆ ಮತ್ತು ಅದಕ್ಕೆ ಪೂರಕವಾದ ಪ್ರಯತ್ನವಿದ್ದರೆ ಎಲ್ಲರಿಗೂ ಸಾಧ್ಯ, ಅಲ್ಲವೇ?