RSS

Monthly Archives: ಸೆಪ್ಟೆಂಬರ್ 2015

ರಸ ಚೆನ್ನುಡಿ

ನೆನಪಿನಾಳದ ಯೋಚನೆಗಳು ಮತ್ತು ನಾಳಿನಾ ಯೋಜನೆಗಳ ಸುಳಿಯಲ್ಲಿ ಸಿಲುಕಿದರೆ

ಇಂದು ಕೈಲಿರುವ ಅವಕಾಶಗಳನ್ನು ಸಮಪರ್ಕವಾಗಿ ಬಳಸಿ ಸಫಲರಾಗಲಾಗುವುದಿಲ್ಲ – ಅನಾಮಿಕ

Advertisements
 

ರಸಧಾರೆ – ೯೪೫

ಶರಣುವೊಗು ಜೀವನರಹಸ್ಯದಲಿ ಸತ್ವದಲಿ ।
ಶರಣು ಜೀವನವ ಸುಮವೆನಿಪ ಯತ್ನದಲಿ ।।
ಶರಣಂತರಾತ್ಮಗಂಭೀರ ಪ್ರಶಾಂತಿಯಲಿ ।
ಶರಣು ವಿಶ್ವಾತ್ಮದಲಿ – ಮಂಕುತಿಮ್ಮ ।।

ಸುಮವೆನಿಪ =ಸುಮವು+ಎನಿಪ, ಶರಣಂತರಾತ್ಮಗಂಭೀರ ಪ್ರಶಾಂತಿಯಲಿ=ಶರಣು+ಅಂತರಾತ್ಮ+ಗಂಭೀರ+ಪ್ರಶಾಂತಿಯಲಿ, ವಿಶ್ವಾತ್ಮದಲಿ=ವಿಶ್ವ+ಆತ್ಮದಲಿ

ಶರಣುವೊಗು=ಶರಣಾಗು, ಸುಮವೆನಿಪ=ಹೂವಂತೆನಿಸುವ,

ಜೀವನದ ಸತ್ವದ ರಹಸ್ಯಕ್ಕೆ ನೀನು ಶರಣಾಗು. ಈ ಜೀವನವನ್ನು ಹೂವಂತೆ ಸುಂದರವಾಗಿಸುವ ಪ್ರಯತ್ನಕ್ಕೆ ಶರಣಾಗು. ಅಂತರಂಗದ ಪ್ರಶಾಂತತೆಯಲ್ಲಿ ಗಂಭೀರವಾಗಿ ಪರತತ್ವಕ್ಕೆ ಶರಣಾಗು. ಜಗತ್ತಿನಲ್ಲಿರುವ ವಿಶ್ವಾತ್ಮಭಾವಕ್ಕೆ ಶರಣಾಗು ಎಂದು ನಾವು ನಮ್ಮ ನಮ್ಮ ಜೀವನಗಳಲ್ಲಿ ಅಂತಿಮವಾಗಿ ಸಾಧಿಸಿಬೇಕಾದ ಸ್ಥಿತಿಯನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

‘ನಾನು’ ಎಂಬುದನ್ನು ಬಿಟ್ಟು ನಾವು ಆ ರಹಸ್ಯವಾದ, ಆದರೂ ಇಡೀ ಜಗತ್ತಿನ ಮೇಲೆ ಪ್ರಭಾವ ಬೀರುತ್ತಿರುವ ಆ ಪರಮಸತ್ವಕ್ಕೆ ಶರಣಾಗಬೇಕು. ಇದನ್ನೇ ಮಾನ್ಯ ಗುಂಡಪ್ಪನವರು ‘ ಭಾವಕೊಳಪಡದಂತೆ ಅಳತೆಗಳವಡದಂತೆ, ಆ ವಿಚಿತ್ರಕೆ ನಮಿಸೋ'(ಮುಕ್ತಕ -೨) ಎನ್ನುತ್ತಾರೆ. ನಾವು ಜಗತ್ತಿನ ಎಲ್ಲಾ ಅನುಭವಗಳನ್ನೂ ಪಡೆದು ನಂತರ ಅವುಗಳನ್ನು ತೊರೆದು ಅಂತರಂಗದಲ್ಲಿ ಸಂಪೂರ್ಣವಾಗಿ ಈ ಪರತತ್ವಕ್ಕೆ ಶರಣಾಗಬೇಕು.

ಜೀವನವ ‘ಸುಮವೆನಿಪ ಯತ್ನದಲಿ’ ಎಂದಿದ್ದಾರೆ ಡಿವಿಜಿ. ಎಂದರೆ ಬದುಕಿನ ಅನುಭವಗಳನ್ನು ಹಗುರವಾಗಿ ತೆಗೆದುಕೊಂಡು ಹೇಗೆ ನಾವು ಹೂವಿನ ಸುಗಂಧವನ್ನು ಮಾತ್ರ ಹೀರುತ್ತೇವೋ ಹಾಗೆಯೇ ಜೀವನದ ಅನುಭವದ ಸಾರವನ್ನು ಮಾತ್ರ ತೆಗೆದುಕೊಂಡು, ಬದುಕನ್ನು ಜಗತ್ತಿಗೆ ಸುಗಂಧ, ಸುಫಲ ಮತ್ತು ಸುರುಚಿಯನ್ನು ನೀಡುವ ಹೂವಿನಂತಾಗಿಸುವ ನಮ್ಮ ಪ್ರಯತ್ನದಲ್ಲಿ ನಾವು ಶರಣಾಗತರಾದಂತೆ ತೊಡಗಿಕೊಳ್ಳಬೇಕು ಎನ್ನುವ ಆಶಯ ಹೊತ್ತಿರಬೇಕು. ಇದೇ ಭಾವವನ್ನೇ ಮಾನ್ಯ ಡಿವಿಜಿಯವರು ‘ ಸುಫಲ ಸುಮಭರಿತ ಪಾದಪದಂತೆ ನೈಜಮಾದೊಳ್’ ಎನ್ನುತ್ತಾರೆ ತಮ್ಮ ‘ ವನಸುಮ’ ದಲ್ಲಿ.

ಇಂತಹ ಭಾವಗಳನ್ನು ಮನದಲ್ಲಿ ತುಂಬಿಕೊಂಡಾಗ, ಖಂಡಿತವಾಗಿಯೂ ಅಲ್ಲೊಂದು ಮೌನ ಮತ್ತು ಪ್ರಶಾಂತತೆ ತುಂಬಿಕೊಳ್ಳುತ್ತದೆ ಮತ್ತು ಪರತತ್ವವನ್ನೇ ಅನುಸಂಧಾನಮಾಡುವಂತಹ ಭೂಮಿಕೆ ನಮ್ಮ ಮನಸ್ಸುಗಳಲ್ಲಿ ಸಿದ್ಧವಾಗುತ್ತದೆ. ಆಗ ಜಗತ್ತಿನ ಎಲ್ಲ ಬೇಧಗಳೂ ಅಳಿಸಿಹೋಗಿ ವಿಶ್ವಾತ್ಮಭಾವ ನೆಲೆಯಾಗುತ್ತದೆ. ಅಂತಹ ನಿರ್ಮಲವಾದ ಸ್ಥಿತಿಗೆ ನೀನು ಶರಣಾಗಿ ಅಲ್ಲಿ ನೀನು ನೆಲೆನಿಲ್ಲು ಎನ್ನುವಂತಹ ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು.

ಬದುಕಿನ ಎಲ್ಲ ಅನುಭವಗಳ ನಂತರ ಅವುಗಳ ಪ್ರಭಾವವೆಲ್ಲಾ ನಮ್ಮಲ್ಲಿ ಅಳಿಸಿಹೋಗಿ ಅಂತಹ ‘ ವಿಶ್ವಾತ್ಮಭಾವ’ ಕ್ಕೆ ಶರಣಾಗಿ ಅಲ್ಲಿ ನಾವು ಭಧ್ರವಾಗಿ ನೆಲೆನಿಲ್ಲುವಂತಾದರೆ, ಅದಕ್ಕಿಂತ ಬೇರೆ ಭಾಗ್ಯ ಬೇಕೇ? ಅಂತಹ ಸ್ಥಿತಿಯಲ್ಲಿ ನೆಲೆನಿಲ್ಲುವ ಪ್ರಯತ್ನವನ್ನು ನಾವೆಲ್ಲಾ ಮಾಡಬೇಕು.

 

ರಸಧಾರೆ – ೯೪೪

ತಮ್ಮೆಲ್ಲ ಹಸಿವುಗಳ ತಣಿಯಿಪನಿತನ್ಯೋನ್ಯ ।
ಹೊಮ್ಮುಗೌದಾರ್ಯ ಜನಜನಪದಂಗಳಲಿ ।।
ಬೊಮ್ಮನೆಲ್ಲರನಾಳ್ವನಿಹನೆನುವ ನೆನಪಿನಲಿ ।
ನೆಮ್ಮದಿಯ ಪಡೆಗೆ ಜಗ – ಮಂಕುತಿಮ್ಮ ।।

ತಣಿಯಿಪನಿತನ್ಯೋನ್ಯ=ತಣಿಯಿಪ+ಅನಿತ+ಅನ್ಯೋನ್ಯ, ಹೊಮ್ಮುಗೌದಾರ್ಯ=ಹೊಮ್ಮುಗೆ+ಔದಾರ್ಯ, ಜನಜನಪದಂಗಳಲಿ=ಜನ+ಜನಪದಂಗಳಲಿ ಬೊಮ್ಮನೆಲ್ಲರನಾಳ್ವನಿಹನೆನುವ=ಬೊಮ್ಮನು+ಎಲ್ಲರನು+ಆಳ್ವನು+ಎನುವ,

ತಣಿಯಿಪ=ತಣಿಸುವ, ಬೊಮ್ಮನು=ಪರಬ್ರಹ್ಮನು,

ಜಗತ್ತಿನ ಜನರೆಲ್ಲರ ಬಯಕೆಗಳನ್ನು ಈಡೇರಿಸಲು ಇರುವ ಜಗದ್ವಸ್ತುಗಳನ್ನು ಜಗತ್ತಿನ ಜನರೆಲ್ಲರೂ ಸೌಹಾರ್ಧತೆಯಿಂದ, ಔದಾರ್ಯದಿಂದ ಮತ್ತು ಅನ್ಯೋನ್ಯತೆಯಿಂದ ಹಂಚಿಕೊಂಡು ಬಾಳಲಿ. ಎಲ್ಲರನ್ನೂ ಕಾಯುವ ಪರಬ್ರಹ್ಮನೊಬ್ಬನಿರುವನು ಎಂದು ದೃಢವಾಗಿ ನಂಬಿ, ನೆಮ್ಮದಿಯನ್ನು ಈ ಜಗತ್ತು ಪಡೆಯಲಿ ಎಂದು ತುಂಬು ಹೃದಯದ ಆಶಯವನ್ನು ವ್ಯಕ್ತಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

"There is sufficient in this world for everyone’s need and not for greed" ಎನ್ನುವುದು ಸರ್ವವಿಧಿತ. ಹಾಗಾಗಿ ಈ ಜಗತ್ತಿನಲ್ಲಿರುವ ಎಲ್ಲ ಸಂಪನ್ಮೂಲಗಳನ್ನೂ ಎಲ್ಲರೂ ಸಮನಾಗಿ ಹಂಚಿಕೊಂಡು ಅನ್ಯೋನ್ಯತೆಯಿಂದ ಬಾಳಿದರೆ ಜಗತ್ತು ಬಾಳಲು ಒಂದು ಸುಂದರ ತಾಣವಾಗುತ್ತದೆ, ಎಂಬುವುದು ಮಾನ್ಯ ಗುಂಡಪ್ಪನವರ ಅಂದಿನ ಆಶಯ. ಅಂದೂ ಜಗತ್ತಿನ ಪರಿಸ್ಥಿತಿ ಹಾಗಿರಲಿಲ್ಲ, ಇಂದು ಇನ್ನಷ್ಟು ಹದಗೆಟ್ಟಿದೆ. ಕೇವಲ ಸ್ವಾರ್ಥದಿಂದ ಕೂಡಿದ ಮನೋಭಾವದ ಜನರೇ ಅಧಿಕವಾಗಿದ್ದಾರೆ. ‘ಹಂಚಿಕೊಂಡು ಬಾಳಲರಿಯದ ಜನ ವಂಚನೆಯ ಮಾಡುತಿಹರು’ ಎನ್ನುವುದು ಕವಿ ವಾಣಿ.

ಮನುಷ್ಯನೂ ಸಹ ಪರಮಾತ್ಮನ ಸೃಷ್ಟಿಯಲ್ಲಿ ಅನ್ಯ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟ, ಗಿಡ, ಮರಗಳಂತೆ ಅಲ್ಲವೇ? ಆದರೆ ಇವನು ಸೃಷ್ಟಿಯಲ್ಲಿ ಅಧಿಕ ಯೋಚನಾ ಶಕ್ತಿಯನ್ನು ಹೊಂದಿದ್ದಾನೆ ಹಾಗಾಗಿ ಇವನು ಸೃಷ್ಟಿಯ ಎಲ್ಲವನ್ನೂ ಆ ಪರಮಾತ್ಮ ತನಗಾಗಿ ಸೃಷ್ಟಿಸಿದ್ದಾನೆ ಎನ್ನುವಂತಹ ದುರ್ಬುದ್ಧಿಯನ್ನು ಹೊಂದಿದ್ದಾನೆ. ಇದರಿಂದಲೇ ಇವನಿಗೆ ಎಲ್ಲವೂ ತನ್ನದು, ತನಗಾಗಿ ಮತ್ತು ತನಗಾಗಿಯೇ ಸೃಷ್ಟಿಸಲ್ಪಟ್ಟಿದೆ ಎನ್ನುವ ದುರಾಸೆ ಮತ್ತು ದುರ್ಭುದ್ಧಿ. ಈ ರೀತಿಯ ಭಾವ ನಮಗೆ ಕಂಡಲ್ಲೆಡೆಯೆಲ್ಲಾ ಕಾಣಸಿಗುತ್ತದೆ. " ಸರ್ವೇ ಸುಖಿನಃ ಸಂತು, ಸರ್ವೇ ಸಂತು ನಿರಾಮಯಾ: ಸರ್ವೇ ಭಧ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖಮಾಗ್ಭವೇತ್ " ಎನ್ನುವುದು ವೇದೋಕ್ತಿ. ಎಷ್ಟು ಸುಂದರ ನುಡಿಗಳು. ಅದನ್ನು ಪಾಲಿಸಿದರೆ ಜಗತ್ತಿನಲ್ಲಿರುವವರೆಲ್ಲರೂ ಆನಂದದಿಂದ ಇರಬಹುದು.

ಅಂತಹ ಆಶಯವನ್ನೇ ವ್ಯಕ್ತಪಡಿಸುತ್ತಾ ಮಾನ್ಯ ಗುಂಡಪ್ಪನವರು ಜಗತ್ತಿನ ಜನರೆಲ್ಲರೂ ಸದ್ಭಾವದಿಂದ ಬಾಳಲಿ ಎಂದು ಆಶಿಸುತ್ತಾ, ಹಾಗೆ ಬದುಕಿದರೆ ಇಡೀ ಜಗತ್ತೇ ನೆಮ್ಮದಿಯನ್ನು ಪಡೆಯುತ್ತದೆ ಎಂದಿದ್ದಾರೆ. ನಾವೂ ನಮ್ಮ ನಡೆ ಮತ್ತು ನುಡಿ ಗಳಲ್ಲಿ ಅಂತಹ ಸದ್ಭಾವವನ್ನು ಬೆಳೆಸಿಕೊಂಡರೆ ಈ ಜಗತ್ತನ್ನು ಸುಂದರವಾಗಿಸಲು ಮತ್ತು ಆನಂದದಾಯಕವಾಗಿಸಲು ನಮ್ಮ ಕಿರುಕಾಣಿಕೆಯನ್ನು ಸಲ್ಲಿಸುತ್ತಾ ಒಂದು ಸಾರ್ಥಕ ಜೀವನ ಮಾಡಿದಂತಾಗುತ್ತದೆ ಅಲ್ಲವೇ? ಪ್ರಯತ್ನಪಟ್ಟರೆ ಸಾಧ್ಯ .

 

ರಸಧಾರೆ – ೯೪೩

ಬೇಡಿದದನೀವನೀಶ್ವರನೆಂಬ ನಚ್ಚಿಲ್ಲ ।
ಬೇಡಲೊಳಿತಾವುದೆಂಬುದರರಿವುಮಿಲ್ಲ ।।
ಕೂಡಿಬಂದುದನೆ ನೀನ್ ಅವನಿಚ್ಛೆಯೆಂದು ಕೊಳೆ ।
ನೀಡುಗೆದೆಗಟ್ಟಿಯನು – ಮಂಕುತಿಮ್ಮ ।।
ಬೇಡಿದದನೀವನೀಶ್ವರನೆಂಬ=ಬೇಡಿದುದನು+ಈವನು+ಈಶ್ವರನು+ಎಂಬ, ಬೇಡಲೊಳಿತಾವುದೆಂಬುದರರಿವುಮಿಲ್ಲ=ಬೇಡಲು+ಒಳಿತು+ಆವುದು+ಎಂಬುದರ+ಅರಿವುಂ+ಇಲ್ಲ, ಅವನಿಚ್ಛೆಯೆಂದುಕೊಳೆ=ಅವನ+ಇಚ್ಛೆ+ಎಂದು+ಕೊಳೆ

ನಚ್ಚಿಲ್ಲ=ನಂಬಿಕೆಯಿಲ್ಲ. ಅವನಿಚ್ಛೆ=ಪರಮಾತ್ಮನಿಚ್ಚೆ,

ನೀನು ಆ ಪರಮಾತ್ಮನಲ್ಲಿ ಬೇಡಿದುದನ್ನೆಲ್ಲಾ ನಿನಗವನು ಕೊಡುವನು ಎಂದು ನಂಬಿಕೆಯಿಲ್ಲ. ಅಷ್ಟೇ ಅಲ್ಲ ಅವನಲ್ಲಿ ಏನನ್ನು ಬೇಡಬೇಕು ಮತ್ತು ಏನನ್ನು ಬೇಡಬಾರದು ಎಂಬುದರ ಪ್ರಜ್ಞೆಯೂ ನಿನಗಿಲ್ಲ. ಹಾಗಿರುವಾಗ ಆಯಾ ಸಮಯಕ್ಕೆ ಸಿಕ್ಕದ್ದನ್ನು ಆ ಪರಮಾತ್ಮನೇ ಇತ್ತದ್ದೆಂದು ಅರಿತು, ನಂಬಿ ಹಾಗೆ ಬಂದದ್ದನ್ನು ಅನುಭವಿಸಲು ನಿನ್ನ ಎದೆಯನ್ನು ಗಟ್ಟಿಯಾಗಿಸಿಕೋ ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು.

ಈ ಜಗತ್ತಿನ ಬದುಕಿನಲ್ಲಿ ಆಸೆಗಳ ಬುಗ್ಗೆಗಳು ನಮ್ಮ ಮನಸ್ಸುಗಳಲ್ಲಿ ಸದಾಕಾಲ ಏಳುತ್ತಲೇ ಇರುತ್ತವೆ. ನಮ್ಮ ಪ್ರಯತ್ನ ಮೀರಿದಾಗ ಆ ದೇವರಲ್ಲಿ ನಮ್ಮ ಪ್ರಾರ್ಥನೆ ಸಲ್ಲುತ್ತಿರುತ್ತದೆ. ಹಾಗೆ ನಾವು ಪ್ರಾರ್ಥಿಸಿದ್ದೆಲ್ಲಾ ನಮಗೆ ದಕ್ಕುವುದಿಲ್ಲವಾದ್ದರಿಂದ, ಆ ದೇವರು ನಮ್ಮ ಎಲ್ಲಾ ಪ್ರಾರ್ಥನೆಗಳನ್ನೂ ಮನ್ನಿಸಲಿಲ್ಲವೆಂದೇ ಅರ್ಥವಲ್ಲವೆ?

ಇನ್ನು ನಮ್ಮ ‘ಬೇಕು’ಗಳು ನಮಗೆ ಒಳಿತನ್ನು ಮಾಡುತ್ತವೆಯೋ ಅಥವಾ ಕೆಡುಕನ್ನೇ ಮಾಡುತ್ತವೆಯೋ ಎಂಬ ಪರಿವೆ ನಮಗಿರುವುದಿಲ್ಲ. ಒಟ್ಟಾರೆ ಬಯಸುತ್ತಿರುತ್ತೇವೆ. ಹಾಗೆ ಬಯಸಿ, ಅದನ್ನು ಪಡೆಯಲು ನಾವು ಪ್ರಯತ್ನಿಸಿ, ಪಡೆದುಕೊಂಡದ್ದು ನಮಗೆ ಒಳಿತನ್ನೇ ಮಾಡುತ್ತದೆ ಎಂಬ ಅರಿವೂ ನಮಗಿಲ್ಲ. ಬಹಳಷ್ಟು ಬಾರಿ ನಾವು ಬಯಸಿ ಪಡೆದದ್ದರಿಂದ ತಾತ್ಕಾಲಿಕ ಸುಖವನ್ನು ಪಡೆದು ಧೀರ್ಘಕಾಲದ ಸಂಕಷ್ಟಗಳಲ್ಲಿ ಸಿಲುಕಿಕೊಳ್ಳುತ್ತೇವೆ, ಅಲ್ಲವೇ? ಇದು ಬಹುಶಃ ಎಲ್ಲರ ಅನುಭವವೂ ಹೌದು.

ಹಾಗಾಗಿ ಜೀವನದಲ್ಲಿ, ಏನನ್ನೂ ಬಯಸದೆ, ನಮ್ಮ ಕೃಷಿಯನ್ನು ಸಾಗಿಸುತ್ತಾ, ಅದರಿಂದ ಏನೇ ಸಿಕ್ಕರೂ ಅದು ನಮಗೆ ಆ ಪರಮಾತ್ಮನಿತ್ತ ಪ್ರಸಾದ ಎಂದು ಭಾವಿಸಿ, ನಮ್ಮ ಬಯಕೆಗಳಿಗೆ ನಾವು ಅಂಟಿಕೊಳ್ಳದೆ, ಒಂದು ನಿರ್ಲಿಪ್ತತೆ ಬೆಳೆಸಿಕೊಂಡರೆ ಆಗ ಮಾನ್ಯ ಗುಂಡಪ್ಪನವರು ‘ನೀಡುಗೆದೆಗಟ್ಟಿಯನು’ ಏನು ಹೇಳುವಂತೆ ಧೈರ್ಯದಿಂದ, ಭಯವಿಲ್ಲದೆ ಗಟ್ಟಿಯಾಗಿ ಬದುಕಬಹುದು. ಅಂತಹ ಸ್ಥಿತಿಯಲ್ಲಿ ದುಃಖವಿರುವುದಿಲ್ಲ, ಸಂತಾಪವಿರುವುದಿಲ್ಲ, ವಿಹ್ವಲತೆ ಇರುವುದಿಲ್ಲ. ನಾವೂ ಸಹ ಅಂತಹ ಜೀವನವನ್ನು ರೂಪಿಸಿಕೊಂಡರೆ ಅದೊಂದು ಸಾರ್ಥಕ ಬದುಕಾಗುತ್ತದೆ.

 

ರಸಧಾರೆ – ೯೪೨

ಹರಸುವುದದೇನ ನೀಂ? ವರವದೇನೆಂದರಿವೆ? ।
ಸರಿಯಿಂದು ತೋರುವುದು ನಾಳೆ ಸರಿಯಿಹುದೆ ।।
ನಿರುಕಿಸುವುದೆಂತು ಚಿರಕಾಲದೊಳ್ಳಿತನಿಂದು? ।
ಅರಿವ ದೈವವೇ ಪೊರಗೆ – ಮಂಕುತಿಮ್ಮ ।।

ಹರಸುವುದದೇನ=ಹರಸುವುದು+ಅದು+ಏನ, ವರವದೇನೆಂದರಿವೆ=ವರವು+ಅದು+ಏನೆಂದು+ಅರಿವೇ, ನಿರುಕಿಸುವುದೆಂತು=ನಿರುಕಿಸುವುದು+ಎಂತು, ಚಿರಕಾಲದೊಳ್ಳಿತನಿಂದು=ಚಿರಕಾಲದ+ಒಳ್ಳಿತನು+ಇಂದು

ವರವು=ಉತ್ತಮವಾದದ್ದು, ನಿರುಕಿಸುವುದು=ನಿರೀಕ್ಷಿಸುವುದು, ಚಿರಕಾಲದ=ಧೀರ್ಘಕಾಲದ, ಪೊರಗೆ=ಕಾಪಾಡಲು.

ಮತ್ತೊಬ್ಬರನ್ನು ಹರಸುವುದಾಗಲೀ ಅಥವಾ ತನಗಾಗಿ ಏನನ್ನಾದರೂ ಬೇಡುವುದಾಗಲೀ ಮಾಡಲು ನೀನು ಅದನ್ನು ಸರಿಯಾಗಿ ಅರಿತಿದ್ದೀಯೇನು? ಏಕೆಂದರೆ ಇಂದು ಸರಿಯೆನ್ನಿಸುವುದು, ಸದಾಕಾಲ ಸರಿಯಿರುತ್ತದೆ ಎಂದು ನಿನಗೆ ಗೊತ್ತಿದೆಯೇ? ಅಥವಾ ಏನನ್ನಾದರೂ ಬೇಡುವಾಗ ನಿನಗೆ ಸೂಕ್ತವಾದದ್ದನ್ನೇ ಬೇಡುತ್ತಿದ್ದೇನೆಂದು ನಿನಗೆ ಗೊತ್ತಿದೆಯೇ? ಹಾಗಿರಬೇಕಾದರೆ ಧೀರ್ಘಕಾಲದ ಹಿತವನ್ನು ಇಂದು ಬಯಸುವುದು ಹೇಗೆ ? ಆ ದೈವವೇ ಎಲ್ಲವನ್ನೂ ಅರಿತು ಪೊರೆಯುವುದುಂಟು ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಯಾರೋ ಮತ್ತೊಬ್ಬರಿಗೆ ‘ ಲಾಟರಿ’ಯಲ್ಲಿ ಹಣ ಬರಲಿ ಎಂದು ಹರಸಿಬಿಡುತ್ತಾರೆ. ಹಣ ಬರುತ್ತದೆ ಮತ್ತು ಬಂದ ಮೇಲೆ ಅವರು ಪಡುವ ಪಾಡು, ಅವಸ್ಥೆ ಆ ದೇವರಿಗೇ ಪ್ರೀತಿ. ಹರಸುವುದೇನೋ ಒಳ್ಳೆಯದೇ ಆದರೂ, ಯಾವ ಹಾರೈಕೆ ಒಳ್ಳೆಯದು ಎಂದು ನಮಗೆ ಗೊತ್ತಿರುವುದಿಲ್ಲವಲ್ಲ. ದೇವರಲ್ಲಿ ನಾವು ಏನನ್ನಾದರೂ ಬೇಡುತ್ತೇವೆ. ಹಾಗೆ ಬೇಡುವಾಗ ನಾವು ಬೇಡುವುದು ನಮಗೆ ಒಳಿತೋ ಅಲ್ಲವೋ ಎನ್ನುವ ಪರಿವೆಯೇ ಇಲ್ಲದೆ ಬೇಡುತ್ತೇವೆ ಅಲ್ಲವೇ? ಏಕೆಂದರೆ ನಮಗೇನು ಒಳಿತು ಅಥವಾ ನಮಗೇನು ಕೆಡುಕು ಎಂದು ನಮಗೆ ಗೊತ್ತಿರುವುದೇ ಇಲ್ಲ ಮತ್ತು ಇಂದು ಬೇಡಿ ಪಡೆದದ್ದು ನಾಳೆಗೆ ನಮಗೆ ದುಃಖಕ್ಕೆ ಕಾರಣವಾಗಬಹುದು. ಇಂತಹ ಅನುಭವಗಳು ಪ್ರತಿಯೊಬ್ಬರ ಜೀವನದಲ್ಲೂ, ಒಂದೇ ರೀತಿಯದ್ದಲ್ಲದಿದ್ದರೂ ಆಗಿಯೇ ಇರುತ್ತವೆ. ಒಂದು ಬಾರಿ ನಿಂತಿರುಗಿ ನೋಡಿಕೊಳ್ಳಬೇಕು ಅಷ್ಟೆ.

ವಸ್ತು ಸ್ಥಿತಿ ಹೀಗಿರಬೇಕಾದರೆ ನಾವು, ಅನ್ಯರಿಗೆ ಧೀರ್ಗಕಾಲದ ಒಳಿತನ್ನು ಹರಸುವುದೋ ಅಥವಾ ನಮಗಾಗಿ ಅಂತಹ ಒಳಿತನ್ನು ಬೇಡುವುದೋ ಸಾಧ್ಯವಿಲ್ಲ ಅಲ್ಲವೇ? ಸ್ಥೂಲವಾಗಿ ಇದು ಒಳಿತು ಮತ್ತು ಇದು ಕೆಡುಕು ಎಂದು ಅರಿವಿದ್ದರೂ ಸೂಕ್ಷ್ಮದಲ್ಲಿ ಅದು ಯಾವ ರೀತಿ ನಮ್ಮ ಜೀವನಗಳಲ್ಲಿ ಕೆಲಸಮಾಡುತ್ತದೆ ಎಂದು ನಮಗೆ ಗೊತ್ತಿರುವುದಿಲ್ಲ. ಹಾಗಾಗಿ ಏನು ಮಾಡಬೇಕು ಎಂದರೆ, ಇಂದು ನಾವು ಮಾಡುವ ಕೆಲಸವನ್ನು ನಿರ್ವಂಚನೆಯಿಂದ ಸಮರ್ಪಕವಾಗಿ ಮಾಡಬೇಕು, ಅದರಿಂದ ಏನನ್ನೂ ಬಯಸದೆ ಬಂದದ್ದನ್ನು ಪರಮಾತ್ಮನ ಪ್ರಸಾದವೆಂದು ಅರಿತು ಅನುಭವಿಸಬೇಕು.

‘ಅರಿವ ದೈವವೇ ಪೊರಗೆ’ ಎಂದಿದ್ದಾರೆ ಮಾನ್ಯ ಗುಂಡಪ್ಪನವರು. ಆ ದೈವ ಎನ್ನುವುದು ತಾಯಿಯಂತೆ. ತಾಯಿಗೆ ತನ್ನ ಮಗುವಿಗೆ ಯಾವುದು ಒಳಿತು, ಯಾವುದು ಒಳಿತಲ್ಲ ಎಂಬ ಅರಿವಿರುತ್ತದೆ. ಮಗು ಬೇಡಿದರೂ ಬೇಡದಿದ್ದರೂ ಆ ಮಗುವಿಗೆ ಏನು ಒಳಿತೋ ಅದನ್ನೇ ಕೊಡುತ್ತಾಳೆ ಆ ತಾಯಿ. ಹಾಗೆಯೇ ದೈವದ ಬಳಿ ನಾವು ಏನನ್ನೂ ಬೇಡದಿದ್ದರೂ ನಮಗೆ ಒಳಿತಾವುದೆಂದು ‘ ಅರಿವ ದೈವವೇ’ ಅರಿತು ಸೂಕ್ತ ಸಮಯಕ್ಕೆ, ಸೂಕ್ತ ವಸ್ತುವನ್ನು ನಮಗೆ ಕೊಟ್ಟು ‘ಪೊರಗೆ’ ಎಂದರೆ ಪೊರೆಯುತ್ತದೆ ಎಂದು ಭಾವಿಸಬೇಕು. ಹಾಗಾಗಿ ಹರಸುವುದನ್ನು ಮತ್ತು ಬಯಸುವುದನ್ನು ಬಿಟ್ಟು ಬಂದದ್ದನ್ನು ಆನಂದವಾಗಿ, ಪೊರೆಯುವವನ ಪ್ರಸಾದವೆಂದು ಬಗೆದು ತೃಪ್ತರಾಗಿರುವುದೇ ಲೇಸು ಎನ್ನುವುದೇ ಈ ಮುಕ್ತಕದ ಹೂರಣ.

 

ರಸಧಾರೆ – ೯೪೧

ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ ।

ವೆಂಕನಿಗೊ ಕಂಕನಿಗೊ ಶಂಕರಾರ್ಯನಿಗೋ ।।
ಅಂಕಿತವ ಮಾಳ್ಕೆ ಜನರವರೋದಿದರೆ ಸಾಕು ।
ಶಂಕೆ ನಿನಗೇನಿಹುದೋ – ಮಂಕುತಿಮ್ಮ ।।

ಸಾಲದೆನೆ=ಸಾಲದು+ಎನೆ, ಜನರವರೋದಿದರೆ=ಜನರು+ಅವರು+ಓದಿದರೆ, ನಿನಗೇನಿಹುದೋ=ನಿನಗೆ+ಏನು+ಇಹುದೊ.

ವೆಂಕ+ವೆಂಕಟರಮಣ, ಕಂಕ=ಧರ್ಮರಾಯ, ಶಂಕರಾರ್ಯ=ಶಂಕರಾಚಾರ್ಯರು ಶಂಕೆ= ಅನುಮಾನ

ಒಂದು ಹೆಸರಿಡಬೇಕು ಎನ್ನುವ ಬಿಂಕಕ್ಕೆ ‘ ಮಂಕುತಿಮ್ಮ’ನ ಹೆಸರು ಸಾಲದೇನು? ಅದಕ್ಕೆ ವೆಂಕಟರಮಣ, ಧರ್ಮರಾಯ ಅಥವಾ ಶಂಕಾರಾಚಾರ್ಯರಂತಹ ಖ್ಯಾತ ಹೆಸರುಗಳನ್ನೇ ಅಂಕಿತವನ್ನಾಗಿ ಇಡಬೇಕೇನು? ಹೆಸರಿಗಿಂತ ತತ್ವವನ್ನು ಮತ್ತು ಸತ್ವವನ್ನು ಅರಿಯಬೇಕೆಂದು ಜನರು ಓದಿದರೆ ಸಾಕು, ಅದರೊಳಗೆ ನಿನಗೇನೂ ಅನುಮಾನ ? ಎಂದು ಹೆಸರಿಗಿಂತ ಬರಹದಲ್ಲಿನ ತಿರುಳು ಮುಖ್ಯ ಎನ್ನುವಂತೆ ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ಹೆಸರು ಹೊರಗುರುತಿಗೆ ಮತ್ತು ಕೃತಿಯಾ ತಿರುಳು ಒಳಗುರುತಿಗೆ. ಇದೇ ಸತ್ಯ. ಹೆಸರೇನೇ ಆದರೂ ಒಬ್ಬ ವ್ಯಕ್ತಿಯನ್ನು ಗುರುತಿಸುವುದು ಅವರು ಮಾಡುವ ಕೆಲಸದಿಂದ ಮತ್ತು ಆ ಕೆಲಸದ ಪ್ರಯೋಜಕತ್ವದಿಂದ. ಹಾಗಾಗಿ ಕೃತಿ ಮುಖ್ಯವೇ ಹೊರತು ಹೆಸರಲ್ಲ ಎನ್ನುತ್ತಾರೆ ಡಿವಿಜಿಯವರು. ಹಾಗೆ ನೋಡಿದರೆ ಬಹಳಷ್ಟು ಜನರಿಗೆ ಇಟ್ಟ ಹೆಸರಿಗೂ ಅವರಿರುವುದಕ್ಕೂ ಯಾವ ಸಂಬಂಧವೂ ಇರುವುದಿಲ್ಲ. ಉದಾ: ದುಡ್ಡಿಲ್ಲ ಕಾಸಿಲ್ಲ ಸಂಪತ್ತಯ್ಯಂಗಾರ್, ಲಂಗೊಟೀಗೂ ಗತಿಯಿಲ್ಲ ಪೀತಾಂಬರಯ್ಯ, ಬರೀ ಸುಳ್ಳು ಹೇಳುವವ ಸತ್ಯಮೂರ್ತಿ, ನರಪೇತಲ ಆದರೆ ಹೆಸರು ಭೀಮರಾವ್, ಹೀಗೆ

ಮೊಟ್ಟ ಮೊದಲ ಬಾರಿಗೆ ‘೧೯೪೩’ ನೆ ಇಸವಿಯಲ್ಲಿ ಮಂಕುತಿಮ್ಮನ ಕಗ್ಗವನ್ನು ಪ್ರಕಟಿಸಿದಾಗ ಮಾನ್ಯ ಗುಂಡಪ್ಪನವರು ತಮ್ಮನ್ನು ತಾವು ಲೇಖಕರು ಎಂದುಕೊಳ್ಳದೆ ‘ ಸಂಪಾದಕರು ‘ ಎಂದಿದ್ದರು( ಕೃಪೆ:ಶ್ರೀಕಾಂತ್). ಅಂದರೆ ಎಲ್ಲೆಲ್ಲೊ ಇರುವುದನ್ನು ಹೆಕ್ಕಿ ಸಂಪಾದಿಸಿದವನು ಎನ್ನುವಂತೆ. ಅಂತಹ ಮಹನೀಯರು ಕೃತಿಯಲ್ಲಿನ ವಿಷಯಕ್ಕೆ ಮಹತ್ವವನ್ನು ಕೊಟ್ಟಿದ್ದಾರೆಯೇ ಹೊರತು ಕೃತಿಕರ್ತನ ಹೆಸರಿಗಲ್ಲ. ಮಂಕುತಿಮ್ಮ ಎಂದರೆ ಏನೂ ಅರಿಯದವನು ಎಂದರ್ಥ. ವೇದ ವೇದಾಂತಗಳ, ಉಪನಿಷತ್ತುಗಳ, ಸಾರವನ್ನು ತಾವು ಅನುಭವಿಸಿ ತಮ್ಮ ಅನುಭವದ ಸಾರವನ್ನು ಲೋಕಹಿತಕ್ಕಾಗಿ ಉಣಬಡಿಸಿದ ‘ಋಷಿ’ ಸಮಾನರಾದ ಮಾನ್ಯ ಗುಂಡಪ್ಪನವರು ತಮ್ಮನ್ನು ತಾವು ‘ ಮಂಕುತಿಮ್ಮ’ ಎಂದು ಕರೆದುಕೊಂಡು ತಮ್ಮ ಸದ್ಭಾವವನ್ನು, ವಿನಯವನ್ನು ಮೆರೆದಿದ್ದಾರೆ. ಅವರಿಗೆ ನಮ್ಮ ನಮನ.

‘ಮಂಕುತಿಮ್ಮ’ ಎಂದಲ್ಲದೆ ಬೇರೆ ಏನೇ ಹೆಸರಾಗಿದ್ದಿದ್ದರೂ ಈ ೯೪೫ ಮುಕ್ತಕಗಳ ಸತ್ವದಲ್ಲಿ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ ಅಲ್ಲವೇ? "ಜನರವರೋದಿದರೆ ಸಾಕು" ಎನ್ನುವ ಉದಾತ್ತ ಭಾವದಿಂದ ನಮ್ಮೆಲ್ಲರ ಅಂತರಂಗದ ಉದ್ಧಾರಕ್ಕೆ ಈ ಮಂಕುತಿಮ್ಮನ ಕಗ್ಗವನ್ನು ನಮಗೆ ನೀಡಿ ಮಹದುಪಕಾರವನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು. ನಾವೂ ಸಹ ಇದರಲ್ಲಿನ ತತ್ವವನ್ನು ಮನಗಂಡು, ಒಳಗಿಳಿಸಿಕೊಂಡು, ತಳುಕ ತೊರೆದು, ಸತ್ವಭರಿತರಾದರೆ ಇದನ್ನು ಓದಿದ್ದಕ್ಕೆ ಒಂದು ಸಾರ್ಥಕತೆ ಅಲ್ಲವೇ?:

 

ರಸಧಾರೆ – ೯೪೦

ವ್ಯಾಕರಣ ಕಾವ್ಯಲಕ್ಷಣಗಳನು ಗಣಿಸದೆಯೆ ।
ಲೋಕತಾಪದಿ ಬೆಂದು ತಣಿಪನೆಳಸಿದವಂ ।।
ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು ।
ಸ್ವೀಕರಿಕೆ ಬೇಳ್ಪವರು – ಮಂಕುತಿಮ್ಮ ।।

ತಣಿಪನೆಳಸಿದವಂ=ತಣಿಪನ್ + ಎಳಸಿದವಂ

ಗಣಿಸದೆಯೆ=ಗಣನೆಗೆ ತೆಗೆದುಕೊಳ್ಳದೆ, ಲೋಕತಾಪದಿ=ಬದುಕಿನ ಬೇಗೆಯಲ್ಲಿ, ತಣಿಪನ್=ತಂಪನ್ನು, ಎಳಸಿದವಂ=ಬಯಸಿದವನು, ಕಂತೆ=ಕಟ್ಟು(ನಾಮ ಪದ), ನೆಯ್ದಿಹನು=ಹೆಣೆದಿಹನು, ಸ್ವೀಕರಿಕೆ=ಸ್ವೀಕರಿಸಲು, ಬೇಳ್ಪವರು=ಬೇಕಿದ್ದವರು.

ವ್ಯಾಕರಣ ಮತ್ತು ಕಾವ್ಯ ಲಕ್ಷಣಗಳನ್ನಾವುದನ್ನೂ ಪರಿಗಣಿಸದೆ, ಬದುಕಿನ ಬೇಗೆಯಲ್ಲಿ ಬೆಂದು, ನೊಂದು, ಬವಣೆಯಿಂದ ಸಾಂತ್ವನವನ್ನು ಬಯಸಿದವನು, ಅದರಿಂದ ಪಡೆದ ರಸಾನುಭವವನ್ನು ಮತ್ತು ತಾನು ನಂಬಿದ ವಿಚಾರವನ್ನು, ಈ ‘ ಕಗ್ಗ’ ಎಂಬ ಕಂತೆಯಲ್ಲಿ ಹೆಣೆದಿಹನು. ಬೇಕಿದ್ದವರು ಸ್ವೀಕರಿಸಬಹುದು ಎಂದು, ನಿರ್ಲಿಪ್ತತೆಯ ಪರಮಾವಧಿಯನ್ನು ಮೆರೆಯುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ತತ್ವ ಮತ್ತು ಸತ್ವಕ್ಕೆ, ತತ್ವ ಮತ್ತು ಸತ್ವವೇ ಆಧಾರ ಮತ್ತು ಅಲಂಕಾರ. ವ್ಯಾಕರಣ, ಕಾವ್ಯ, ಛಂದಸ್ಸು ಮುಂತಾದವುಗಳ ಮೆರಗಿನ ಅವಶ್ಯಕತೆ ತತ್ವ ಪ್ರತಿಪಾದೇಯಕ್ಕೆ ಬೇಕಿಲ್ಲ. ಆದ್ದರಿಂದಲೇ ಮಾನ್ಯ ಗುಂಡಪ್ಪನವರು ಈ ‘ಮಂಕುತಿಮ್ಮನ ಕಗ್ಗ’ ವನ್ನು ಬರೆಯುವಾಗ ಆ ರೀತಿಯ ಕಾವ್ಯ ಲಕ್ಷಣಗಳ ಮೆರುಗನ್ನು ಗಣಿಸದೆ ಕೇವಲ ತಮ್ಮ ಬದುಕಿನ ಅನುಭವ ಮತ್ತು ಅಂತರಂಗದ ಚಿಂತನೆಯನ್ನು ಮುಕ್ತಕಗಳ ರೂಪದಲ್ಲಿ ಮಂಡಿಸಿದ್ದಾರೆ. ಈ ರೀತಿಯ ತತ್ವವನ್ನು ಸಾರಲು ಅವರಿಗೆ ಜೀವನದ ನೋವು, ಕ್ಲಿಷ್ಟತೆಯ ಅನುಭವ ಮತ್ತು ಆ ಅನುಭವದಿಂದ ಮುಕ್ತರಾಗಿ ಸಾಂತ್ವವನ್ನು ಕಂಡುಕೊಳ್ಳುವ ಆಸ್ಥೆಯೇ ಕಾರಣವಾಯಿತು.

ಆದರೆ ಅವರು ಅವುಗಳನ್ನು ಅನುಭವಿಸುವಾಗ, ಅವುಗಳಿಂದ ದೂರ ನಿಂತು ಸಾಕ್ಷೀಭೂತರಾಗಿ ಅನುಭವಿಸಿದ್ದರಿಂದ, ಅದು ಕೇವಲ ಅವರ ವೈಯಕ್ತಿಕ ಅನುಭವವಾಗದೆ, ಲೋಕಾನುಭಾವವಾಯ್ತು. ಅಂತಹ ಲೋಕಾನುಭವವನ್ನೇ ನಮ್ಮ ಉದ್ಧಾರಕ್ಕಾಗಿ ಮುಕ್ತಕಗಳ ರೂಪದಲ್ಲಿ ನೀಡಿದ್ದಾರೆ ಮಾನ್ಯ ಗುಂಡಪ್ಪನವರು. ಆದ್ದರಿಂದಲೇ ಈ ಮುಕ್ತಕಗಳಲ್ಲಿ ಒಂದು ಸಾರ್ವಕಾಲಿಕತೆ ಮತ್ತು ಜಗದ್ವೈಶಾಲ್ಯ ಕಾಣಲು ಸಿಗುತ್ತದೆ. ಇದನ್ನೇ ಅವರು "ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು’ ಎಂದಿದ್ದಾರೆ. ತಾನು ಹೇಳಿದ್ದನ್ನು ಎಲ್ಲರೂ ಓದಬೇಕು ಅಥವಾ ಕೇಳಬೇಕು ಎನ್ನುವ ದೌಷ್ಟ್ಯವಿಲ್ಲದೆ, ಬೇಕಾದವರು ಸ್ವೀಕರಿಸಬಹುದು ಎಂದು ಓದುಗನ ಸ್ವಾತಂತ್ರ್ಯವನ್ನು ಗೌರವಿಸಿದ್ದಾರೆ ಮಾನ್ಯ ಗುಂಡಪ್ಪನವರು. ಇದೊಂದು ಧೀಮಂತ ಮತ್ತು ಉದಾತ್ತ ಭಾವವಲ್ಲವೇ?

ಮಾನ್ಯ ಗುಂಡಪ್ಪನವರ ಈ ಮುಕ್ತಕಗಳನ್ನು ಕೇವಲ ಓದಲು ಭಾಷಾ ಪಾಂಡಿತ್ಯವಿದ್ದರೆ ಸಾಕು. ಆದರೆ ಇದನ್ನು ಅರ್ಥೈಸಿಕೊಂಡು, ನಮ್ಮ ಜೀವನದ ಅನುಭವವನ್ನು ಇಲ್ಲಿ ಪ್ರತಿಪಾದಿಸಿರುವ ತತ್ವದೊಂದಿಗೆ ಸಮನ್ವಯ ಮಾಡಿಕೊಂಡು, ನಮ್ಮ ಬದುಕಿನಲ್ಲಿ ‘ಶುದ್ಧ ಆಧ್ಯಾತ್ಮದ ‘ ಬೆಳೆಗೆ ಬೀಜಾಂಕುರವಾಗಿಸಿಕೊಳ್ಳಲು, ಒಂದು ವಿಭಿನ್ನವಾದ ಸಂಸ್ಕಾರದ ಅವಶ್ಯಕತೆ ಇದೆ. ತೀವ್ರವಾಗಿ ಲೌಕಿಕದಲ್ಲಿ ಮುಳುಗಿದವರಿಗೆ, ಈ ಮುಕ್ತಕಗಳು ಹೇಳುವ ವಿಚಾರ ಅರ್ಥವಾದರೂ, ತತ್ವ ಒಳಹೊಗುವುದಿಲ್ಲ. ಹಾಗಾಗಿಯೇ ಮಾನ್ಯ ಗುಂಡಪ್ಪನವರು ‘ ಸ್ವೀಕರಿಕೆ ಬೇಳ್ಪವರು ‘ ಎಂದು ಹೇಳಿ, ಬೇಕಿದ್ದವರು ಇದನ್ನು ಸ್ವೀಕರಿಸಲಿ ಎಂದು ಸೂಚಿಸಿದ್ದಾರೆ. ಸುಮ್ಮನೆ ಓದಿ ಮರೆತುಬಿಡುವುದೋ ಅಥವಾ ಈ ಮುಕ್ತಕಗಳಲ್ಲಿನ ತತ್ವಗಳನ್ನು ಅಂತರಂಗಕ್ಕೆ ಇಳಿಸಿಕೊಂಡು ಉದ್ಧಾರವಾಗುವುದೋ ನಮ್ಮ ನಮ್ಮ ಆಯ್ಕೆಗೆ ಬಿಟ್ಟದ್ದಲ್ಲವೇ?