RSS

ರಸಧಾರೆ – ೯೪೧

ಮಂಕುತಿಮ್ಮನ ಹೆಸರು ಬಿಂಕಕ್ಕೆ ಸಾಲದೆನೆ ।

ವೆಂಕನಿಗೊ ಕಂಕನಿಗೊ ಶಂಕರಾರ್ಯನಿಗೋ ।।
ಅಂಕಿತವ ಮಾಳ್ಕೆ ಜನರವರೋದಿದರೆ ಸಾಕು ।
ಶಂಕೆ ನಿನಗೇನಿಹುದೋ – ಮಂಕುತಿಮ್ಮ ।।

ಸಾಲದೆನೆ=ಸಾಲದು+ಎನೆ, ಜನರವರೋದಿದರೆ=ಜನರು+ಅವರು+ಓದಿದರೆ, ನಿನಗೇನಿಹುದೋ=ನಿನಗೆ+ಏನು+ಇಹುದೊ.

ವೆಂಕ+ವೆಂಕಟರಮಣ, ಕಂಕ=ಧರ್ಮರಾಯ, ಶಂಕರಾರ್ಯ=ಶಂಕರಾಚಾರ್ಯರು ಶಂಕೆ= ಅನುಮಾನ

ಒಂದು ಹೆಸರಿಡಬೇಕು ಎನ್ನುವ ಬಿಂಕಕ್ಕೆ ‘ ಮಂಕುತಿಮ್ಮ’ನ ಹೆಸರು ಸಾಲದೇನು? ಅದಕ್ಕೆ ವೆಂಕಟರಮಣ, ಧರ್ಮರಾಯ ಅಥವಾ ಶಂಕಾರಾಚಾರ್ಯರಂತಹ ಖ್ಯಾತ ಹೆಸರುಗಳನ್ನೇ ಅಂಕಿತವನ್ನಾಗಿ ಇಡಬೇಕೇನು? ಹೆಸರಿಗಿಂತ ತತ್ವವನ್ನು ಮತ್ತು ಸತ್ವವನ್ನು ಅರಿಯಬೇಕೆಂದು ಜನರು ಓದಿದರೆ ಸಾಕು, ಅದರೊಳಗೆ ನಿನಗೇನೂ ಅನುಮಾನ ? ಎಂದು ಹೆಸರಿಗಿಂತ ಬರಹದಲ್ಲಿನ ತಿರುಳು ಮುಖ್ಯ ಎನ್ನುವಂತೆ ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ಹೆಸರು ಹೊರಗುರುತಿಗೆ ಮತ್ತು ಕೃತಿಯಾ ತಿರುಳು ಒಳಗುರುತಿಗೆ. ಇದೇ ಸತ್ಯ. ಹೆಸರೇನೇ ಆದರೂ ಒಬ್ಬ ವ್ಯಕ್ತಿಯನ್ನು ಗುರುತಿಸುವುದು ಅವರು ಮಾಡುವ ಕೆಲಸದಿಂದ ಮತ್ತು ಆ ಕೆಲಸದ ಪ್ರಯೋಜಕತ್ವದಿಂದ. ಹಾಗಾಗಿ ಕೃತಿ ಮುಖ್ಯವೇ ಹೊರತು ಹೆಸರಲ್ಲ ಎನ್ನುತ್ತಾರೆ ಡಿವಿಜಿಯವರು. ಹಾಗೆ ನೋಡಿದರೆ ಬಹಳಷ್ಟು ಜನರಿಗೆ ಇಟ್ಟ ಹೆಸರಿಗೂ ಅವರಿರುವುದಕ್ಕೂ ಯಾವ ಸಂಬಂಧವೂ ಇರುವುದಿಲ್ಲ. ಉದಾ: ದುಡ್ಡಿಲ್ಲ ಕಾಸಿಲ್ಲ ಸಂಪತ್ತಯ್ಯಂಗಾರ್, ಲಂಗೊಟೀಗೂ ಗತಿಯಿಲ್ಲ ಪೀತಾಂಬರಯ್ಯ, ಬರೀ ಸುಳ್ಳು ಹೇಳುವವ ಸತ್ಯಮೂರ್ತಿ, ನರಪೇತಲ ಆದರೆ ಹೆಸರು ಭೀಮರಾವ್, ಹೀಗೆ

ಮೊಟ್ಟ ಮೊದಲ ಬಾರಿಗೆ ‘೧೯೪೩’ ನೆ ಇಸವಿಯಲ್ಲಿ ಮಂಕುತಿಮ್ಮನ ಕಗ್ಗವನ್ನು ಪ್ರಕಟಿಸಿದಾಗ ಮಾನ್ಯ ಗುಂಡಪ್ಪನವರು ತಮ್ಮನ್ನು ತಾವು ಲೇಖಕರು ಎಂದುಕೊಳ್ಳದೆ ‘ ಸಂಪಾದಕರು ‘ ಎಂದಿದ್ದರು( ಕೃಪೆ:ಶ್ರೀಕಾಂತ್). ಅಂದರೆ ಎಲ್ಲೆಲ್ಲೊ ಇರುವುದನ್ನು ಹೆಕ್ಕಿ ಸಂಪಾದಿಸಿದವನು ಎನ್ನುವಂತೆ. ಅಂತಹ ಮಹನೀಯರು ಕೃತಿಯಲ್ಲಿನ ವಿಷಯಕ್ಕೆ ಮಹತ್ವವನ್ನು ಕೊಟ್ಟಿದ್ದಾರೆಯೇ ಹೊರತು ಕೃತಿಕರ್ತನ ಹೆಸರಿಗಲ್ಲ. ಮಂಕುತಿಮ್ಮ ಎಂದರೆ ಏನೂ ಅರಿಯದವನು ಎಂದರ್ಥ. ವೇದ ವೇದಾಂತಗಳ, ಉಪನಿಷತ್ತುಗಳ, ಸಾರವನ್ನು ತಾವು ಅನುಭವಿಸಿ ತಮ್ಮ ಅನುಭವದ ಸಾರವನ್ನು ಲೋಕಹಿತಕ್ಕಾಗಿ ಉಣಬಡಿಸಿದ ‘ಋಷಿ’ ಸಮಾನರಾದ ಮಾನ್ಯ ಗುಂಡಪ್ಪನವರು ತಮ್ಮನ್ನು ತಾವು ‘ ಮಂಕುತಿಮ್ಮ’ ಎಂದು ಕರೆದುಕೊಂಡು ತಮ್ಮ ಸದ್ಭಾವವನ್ನು, ವಿನಯವನ್ನು ಮೆರೆದಿದ್ದಾರೆ. ಅವರಿಗೆ ನಮ್ಮ ನಮನ.

‘ಮಂಕುತಿಮ್ಮ’ ಎಂದಲ್ಲದೆ ಬೇರೆ ಏನೇ ಹೆಸರಾಗಿದ್ದಿದ್ದರೂ ಈ ೯೪೫ ಮುಕ್ತಕಗಳ ಸತ್ವದಲ್ಲಿ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ ಅಲ್ಲವೇ? "ಜನರವರೋದಿದರೆ ಸಾಕು" ಎನ್ನುವ ಉದಾತ್ತ ಭಾವದಿಂದ ನಮ್ಮೆಲ್ಲರ ಅಂತರಂಗದ ಉದ್ಧಾರಕ್ಕೆ ಈ ಮಂಕುತಿಮ್ಮನ ಕಗ್ಗವನ್ನು ನಮಗೆ ನೀಡಿ ಮಹದುಪಕಾರವನ್ನು ಮಾಡಿದ್ದಾರೆ ಮಾನ್ಯ ಗುಂಡಪ್ಪನವರು. ನಾವೂ ಸಹ ಇದರಲ್ಲಿನ ತತ್ವವನ್ನು ಮನಗಂಡು, ಒಳಗಿಳಿಸಿಕೊಂಡು, ತಳುಕ ತೊರೆದು, ಸತ್ವಭರಿತರಾದರೆ ಇದನ್ನು ಓದಿದ್ದಕ್ಕೆ ಒಂದು ಸಾರ್ಥಕತೆ ಅಲ್ಲವೇ?:

Advertisements
 

ರಸಧಾರೆ – ೯೪೦

ವ್ಯಾಕರಣ ಕಾವ್ಯಲಕ್ಷಣಗಳನು ಗಣಿಸದೆಯೆ ।
ಲೋಕತಾಪದಿ ಬೆಂದು ತಣಿಪನೆಳಸಿದವಂ ।।
ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು ।
ಸ್ವೀಕರಿಕೆ ಬೇಳ್ಪವರು – ಮಂಕುತಿಮ್ಮ ।।

ತಣಿಪನೆಳಸಿದವಂ=ತಣಿಪನ್ + ಎಳಸಿದವಂ

ಗಣಿಸದೆಯೆ=ಗಣನೆಗೆ ತೆಗೆದುಕೊಳ್ಳದೆ, ಲೋಕತಾಪದಿ=ಬದುಕಿನ ಬೇಗೆಯಲ್ಲಿ, ತಣಿಪನ್=ತಂಪನ್ನು, ಎಳಸಿದವಂ=ಬಯಸಿದವನು, ಕಂತೆ=ಕಟ್ಟು(ನಾಮ ಪದ), ನೆಯ್ದಿಹನು=ಹೆಣೆದಿಹನು, ಸ್ವೀಕರಿಕೆ=ಸ್ವೀಕರಿಸಲು, ಬೇಳ್ಪವರು=ಬೇಕಿದ್ದವರು.

ವ್ಯಾಕರಣ ಮತ್ತು ಕಾವ್ಯ ಲಕ್ಷಣಗಳನ್ನಾವುದನ್ನೂ ಪರಿಗಣಿಸದೆ, ಬದುಕಿನ ಬೇಗೆಯಲ್ಲಿ ಬೆಂದು, ನೊಂದು, ಬವಣೆಯಿಂದ ಸಾಂತ್ವನವನ್ನು ಬಯಸಿದವನು, ಅದರಿಂದ ಪಡೆದ ರಸಾನುಭವವನ್ನು ಮತ್ತು ತಾನು ನಂಬಿದ ವಿಚಾರವನ್ನು, ಈ ‘ ಕಗ್ಗ’ ಎಂಬ ಕಂತೆಯಲ್ಲಿ ಹೆಣೆದಿಹನು. ಬೇಕಿದ್ದವರು ಸ್ವೀಕರಿಸಬಹುದು ಎಂದು, ನಿರ್ಲಿಪ್ತತೆಯ ಪರಮಾವಧಿಯನ್ನು ಮೆರೆಯುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ತತ್ವ ಮತ್ತು ಸತ್ವಕ್ಕೆ, ತತ್ವ ಮತ್ತು ಸತ್ವವೇ ಆಧಾರ ಮತ್ತು ಅಲಂಕಾರ. ವ್ಯಾಕರಣ, ಕಾವ್ಯ, ಛಂದಸ್ಸು ಮುಂತಾದವುಗಳ ಮೆರಗಿನ ಅವಶ್ಯಕತೆ ತತ್ವ ಪ್ರತಿಪಾದೇಯಕ್ಕೆ ಬೇಕಿಲ್ಲ. ಆದ್ದರಿಂದಲೇ ಮಾನ್ಯ ಗುಂಡಪ್ಪನವರು ಈ ‘ಮಂಕುತಿಮ್ಮನ ಕಗ್ಗ’ ವನ್ನು ಬರೆಯುವಾಗ ಆ ರೀತಿಯ ಕಾವ್ಯ ಲಕ್ಷಣಗಳ ಮೆರುಗನ್ನು ಗಣಿಸದೆ ಕೇವಲ ತಮ್ಮ ಬದುಕಿನ ಅನುಭವ ಮತ್ತು ಅಂತರಂಗದ ಚಿಂತನೆಯನ್ನು ಮುಕ್ತಕಗಳ ರೂಪದಲ್ಲಿ ಮಂಡಿಸಿದ್ದಾರೆ. ಈ ರೀತಿಯ ತತ್ವವನ್ನು ಸಾರಲು ಅವರಿಗೆ ಜೀವನದ ನೋವು, ಕ್ಲಿಷ್ಟತೆಯ ಅನುಭವ ಮತ್ತು ಆ ಅನುಭವದಿಂದ ಮುಕ್ತರಾಗಿ ಸಾಂತ್ವವನ್ನು ಕಂಡುಕೊಳ್ಳುವ ಆಸ್ಥೆಯೇ ಕಾರಣವಾಯಿತು.

ಆದರೆ ಅವರು ಅವುಗಳನ್ನು ಅನುಭವಿಸುವಾಗ, ಅವುಗಳಿಂದ ದೂರ ನಿಂತು ಸಾಕ್ಷೀಭೂತರಾಗಿ ಅನುಭವಿಸಿದ್ದರಿಂದ, ಅದು ಕೇವಲ ಅವರ ವೈಯಕ್ತಿಕ ಅನುಭವವಾಗದೆ, ಲೋಕಾನುಭಾವವಾಯ್ತು. ಅಂತಹ ಲೋಕಾನುಭವವನ್ನೇ ನಮ್ಮ ಉದ್ಧಾರಕ್ಕಾಗಿ ಮುಕ್ತಕಗಳ ರೂಪದಲ್ಲಿ ನೀಡಿದ್ದಾರೆ ಮಾನ್ಯ ಗುಂಡಪ್ಪನವರು. ಆದ್ದರಿಂದಲೇ ಈ ಮುಕ್ತಕಗಳಲ್ಲಿ ಒಂದು ಸಾರ್ವಕಾಲಿಕತೆ ಮತ್ತು ಜಗದ್ವೈಶಾಲ್ಯ ಕಾಣಲು ಸಿಗುತ್ತದೆ. ಇದನ್ನೇ ಅವರು "ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು’ ಎಂದಿದ್ದಾರೆ. ತಾನು ಹೇಳಿದ್ದನ್ನು ಎಲ್ಲರೂ ಓದಬೇಕು ಅಥವಾ ಕೇಳಬೇಕು ಎನ್ನುವ ದೌಷ್ಟ್ಯವಿಲ್ಲದೆ, ಬೇಕಾದವರು ಸ್ವೀಕರಿಸಬಹುದು ಎಂದು ಓದುಗನ ಸ್ವಾತಂತ್ರ್ಯವನ್ನು ಗೌರವಿಸಿದ್ದಾರೆ ಮಾನ್ಯ ಗುಂಡಪ್ಪನವರು. ಇದೊಂದು ಧೀಮಂತ ಮತ್ತು ಉದಾತ್ತ ಭಾವವಲ್ಲವೇ?

ಮಾನ್ಯ ಗುಂಡಪ್ಪನವರ ಈ ಮುಕ್ತಕಗಳನ್ನು ಕೇವಲ ಓದಲು ಭಾಷಾ ಪಾಂಡಿತ್ಯವಿದ್ದರೆ ಸಾಕು. ಆದರೆ ಇದನ್ನು ಅರ್ಥೈಸಿಕೊಂಡು, ನಮ್ಮ ಜೀವನದ ಅನುಭವವನ್ನು ಇಲ್ಲಿ ಪ್ರತಿಪಾದಿಸಿರುವ ತತ್ವದೊಂದಿಗೆ ಸಮನ್ವಯ ಮಾಡಿಕೊಂಡು, ನಮ್ಮ ಬದುಕಿನಲ್ಲಿ ‘ಶುದ್ಧ ಆಧ್ಯಾತ್ಮದ ‘ ಬೆಳೆಗೆ ಬೀಜಾಂಕುರವಾಗಿಸಿಕೊಳ್ಳಲು, ಒಂದು ವಿಭಿನ್ನವಾದ ಸಂಸ್ಕಾರದ ಅವಶ್ಯಕತೆ ಇದೆ. ತೀವ್ರವಾಗಿ ಲೌಕಿಕದಲ್ಲಿ ಮುಳುಗಿದವರಿಗೆ, ಈ ಮುಕ್ತಕಗಳು ಹೇಳುವ ವಿಚಾರ ಅರ್ಥವಾದರೂ, ತತ್ವ ಒಳಹೊಗುವುದಿಲ್ಲ. ಹಾಗಾಗಿಯೇ ಮಾನ್ಯ ಗುಂಡಪ್ಪನವರು ‘ ಸ್ವೀಕರಿಕೆ ಬೇಳ್ಪವರು ‘ ಎಂದು ಹೇಳಿ, ಬೇಕಿದ್ದವರು ಇದನ್ನು ಸ್ವೀಕರಿಸಲಿ ಎಂದು ಸೂಚಿಸಿದ್ದಾರೆ. ಸುಮ್ಮನೆ ಓದಿ ಮರೆತುಬಿಡುವುದೋ ಅಥವಾ ಈ ಮುಕ್ತಕಗಳಲ್ಲಿನ ತತ್ವಗಳನ್ನು ಅಂತರಂಗಕ್ಕೆ ಇಳಿಸಿಕೊಂಡು ಉದ್ಧಾರವಾಗುವುದೋ ನಮ್ಮ ನಮ್ಮ ಆಯ್ಕೆಗೆ ಬಿಟ್ಟದ್ದಲ್ಲವೇ?

 

ರಸಧಾರೆ – ೯೩೯

ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ ।
ಇಂದು ನಂಬಿಹುದೆ ಮುಂದೆಂದುಮೆಂದಲ್ಲ ।।
ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು ।
ಇಂದಿಗೀ ಮತ ಉಚಿತ – ಮಂಕುತಿಮ್ಮ ।।

ಸಂದೇಹವೀ=ಸಂದೇಹವು+ಈ, ಕೃತಿಯೊಳಿನ್ನಿಲ್ಲವೆಂದಲ್ಲ=ಕೃತಿಯೊಳು +ಇನ್ನು+ಇಲ್ಲವು+ಎಂದಲ್ಲ, ನಂಬಿಹುದೆ=ನಂಬಿ+ಇಹುದೆ, ಮುಂದೆಂದುಮೆಂದಲ್ಲ=ಮುಂದೆ+ಎಂದುಂ+ಎಂದು+ಅಲ್ಲ, ತೋರ್ದಂದದನು=ತೋರ್ದ+ಅಂದು+ಅದನು, ಇಂದಿಗೀ=ಇಂದಿಗೆ+ಈ

ಕುಂದು = ತಪ್ಪು, ಕೊರತೆ, ಮತ =ಅಭಿಪ್ರಾಯ

ನಾನು ಬರೆದ ಈ ಕೃತಿಯಲ್ಲಿ ಇನ್ನು ‘ಸಂದೇಹವೇ ಇಲ್ಲ’ ಎಂದಲ್ಲ, ಇರಬಹುದು. ಇಂದು ನಾನು ನಂಬಿರುವ ವಿಷಯಗಳೇ ಮುಂದೆಯೂ ಎಂದೆಂದಿಗೂ ಅನ್ವಯ ಎಂದೂ ಅಲ್ಲ. ಯಾರಾದರೂ ನಾ ಬರೆದದ್ದರಲ್ಲಿ ಕೊರತೆ ಅಥವಾ ಕುಂದನ್ನು ತೋರಿದರೆ, ಅದನ್ನು ಒಪ್ಪಿಕೊಂಡು, ನಾನು ನನ್ನನ್ನು ತಿದ್ದಿಕೊಳ್ಳಲು ಸದಾ ಸಿದ್ಧ. ಆದರೆ ಇಂದು ನಾ ಬರೆದಿರುವುದುಇಂದಿಗೆ ಉಚಿತವೆನಿಸುತ್ತದೆ ಎಂದು, ಬಹಳ ವಿನಯವಾಗಿ, ವಿಶಾಲ ಮನೋಭಾವದಿಂದ ತಮ್ಮ ಮನದಾಳವನ್ನು ತೆರೆದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಮಂಕುತಿಮ್ಮನ ಕಗ್ಗದ ಒಟ್ಟು ೯೪೫ ಮುಕ್ತಕಗಳ ಮಾಲಿಕೆಯಲ್ಲಿ ೯೩೦ ಮುಕ್ತಕಗಳಲ್ಲಿ ಅದ್ಭುತ ಜಗತ್ಸತ್ಯಗಳನ್ನು ಪ್ರತಿಪಾದಿಸಿ ಸರ್ವಕಾಲಕ್ಕೂ ಸೂಕ್ತವೆನಿಸುವಂತೆ ಬರೆದು, ಬಹಳ ವಿನಯದಿಂದ ‘ ಈ ಕೃತಿಯಲ್ಲಿ ಸಂದೇಹಗಳು ಇಲ್ಲವೇ ಇಲ್ಲ ಎಂದಲ್ಲ ‘ ಎಂದು ತಮ್ಮನ್ನು ತಾವು ವಿಮರ್ಶೆಗೆ ಒಡ್ಡಿಕೊಳ್ಳುವ ಮಹಾತ್ಮರೇ ಮಾನ್ಯ ಡಿ.ವಿ. ಗುಂಡಪ್ಪನವರು. ಅವರ ಮುಕ್ತ ಭಾವ ಸಾಮಾನ್ಯವಾಗಿ ಎಲ್ಲರಿಗೂ ಬರುವುದಿಲ್ಲ. ಈ ಕೃತಿಯೊಳಗೆ ಕೊರತೆಗಳು ಅಥವಾ ಕುಂದುಗಳು ಇದ್ದಲ್ಲಿ ತಾನು ತಿದ್ದಿಕೊಳ್ಳಲು ಸಿದ್ಧನಿದ್ದೇನೆ ಎಂದು ಬರೆದು ಅವರು ತಮ್ಮ ಔನ್ನತ್ಯವನ್ನು ಮೆರೆದಿದ್ದಾರೆ.

ಈಗ್ಗೆ ೭೨ ವರ್ಷಗಳ ಹಿಂದೆ ಬರೆದಿದ್ದರೂ ಇಂದಿಗೂ ಮತ್ತು ಎಂದೆಂದಿಗೂ ಪ್ರಸ್ತುತವಾಗಿರುವ ಮುಕ್ತಕಗಳ ಸತ್ವವನ್ನು ‘ ಇಂದು ನಂಬಿಹುದೆ ಮುಂದೆಂದುಮೆಂದಲ್ಲ’ ಎಂದು ಹೇಳುತ್ತಾ ಮುಂದೆ ಬರುವ ಚಿಂತಕರನ್ನು ಸ್ವಾಗತಿಸುತ್ತಾರೆ ಗುಂಡಪ್ಪನವರು. ಆದರೆ ಇಂದಿನ ಸಾಹಿತಿಗಳಿಗೆ ಮತ್ತು ಚಿಂತಕರಿಗೆ ಹೋಲಿಸಿಕೊಂಡರೆ ಗುಂದಪ್ಪನರು ಎಷ್ಟು ಉನ್ನತ ಶಿಖರದಲ್ಲಿದ್ದಾರೆ ಎನ್ನುವುದು ಅರ್ಥವಾಗುತ್ತದೆ.

ಹೀಗೆ ತಾವು ಮಾಡಿದ ಕೆಲಸವನ್ನು ತಾವೇ ವಿಮರ್ಶೆ ಮಾಡಿಕೊಳ್ಳುತ್ತಾ, ತನ್ನ ತಪ್ಪಿದ್ದರೆ ತಾನು ತಿದ್ದಿಕೊಳ್ಳಲು ಸಿದ್ಧ ಎಂದು ಹೇಳುತ್ತಾ ವಿನಯ ಸಂಪನ್ನತೆಯ ಉತ್ತುಂಗತೆಯಲ್ಲಿ ನಿಂತಿದ್ದಾರೆ ಮಾನ್ಯ ಗುಂಡಪ್ಪನವರು. ಅವರ ಈ ಭಾವ ನಮಗೆ ದಾರಿದೀಪವಾಗಬೇಕು. ಅವರ ಹಾದಿಯನ್ನು ತುಳಿಯಬೇಕು ಮತ್ತು ನಾವು ನಮ್ಮ ಅಹಂಕಾರವನ್ನು ತೊರೆಯಬೇಕು. ಅಂತಹ ಉನ್ನತಭಾವದ ಮಾನ್ಯ ಗುಂಡಪ್ಪನವರಿಗೆ ಶಿರಬಾಗಿ ನಮಿಸುತ್ತೇನೆ.

 

ರಸಧಾರೆ – ೯೩೮

ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ ।
ಅವನರಿವಿಗೆಟುಕುವವೊಲೊಂದಾತ್ಮನಯವ ।।
ಹವಣಿಸಿದನದನು ಪಾಮರಜನರ ಮಾತಿನಲಿ ।
ಕವನ ನೆನಪಿಗೆ ಸುಲಭ – ಮಂಕುತಿಮ್ಮ ।।

ಅವನರಿವಿಗೆಟುಕುವವೊಲೊಂದಾತ್ಮನಯವ= ಅವನ+ಅರಿವಿಗೆ+ಎಟುಕುವ+ಒಲು+ಒಂದು+ಆತ್ಮ+ನಯವ, ಹವಣಿಸಿದನದನು+ಹವಣಿಸಿದನು+ಅದನು

ತಾರಾಡಿ=ಕೆಲಸವಿಲ್ಲದೆ ಸುಮ್ಮನೆ ಓಡಾಡುವವ, ಹವಣಿಸು=ಹೊಂದಿಸು.

ನಾನು ಕವಿಯಲ್ಲ, ವಿಜ್ಞಾನಿಯೂ ಅಲ್ಲ, ಕೇವಲ ಅಲ್ಲಿಂದಿಲ್ಲಿಗೆ ತಾರಾಡುವವನು. ನನ್ನ ಅರಿವಿಗೆ ಎಟುಕಿದ್ದನ್ನು ಆತ್ಮದೊಂದಿಗೆ ಅನುನಯಿಸಿ ಸಾಮಾನ್ಯ ಜನರ ಮಾತಿನಲ್ಲಿ ಹೊಂದಿಸಿಬರೆದಿದ್ದೇನೆ. ಕವನ ನೆನಪಿಗೆ ಸುಲಭವೆಂದು ಇದನ್ನು ಪದ್ಯದ ರೂಪದಲ್ಲಿ ಬರೆದಿದ್ದೇನೆ, ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು.

ಹೇರಳವಾದ ಸಾಹಿತ್ಯವನ್ನು ಸೃಷ್ಟಿಸಿ ತಮ್ಮ ಸುತ್ತಲಿನ ಜನರ ಮಾನಸಿಕ ವಿಕಸನಕ್ಕೆ ಮತ್ತು ಉದ್ಧಾರಕ್ಕೆ ಕಾರಣರಾದ ಗುಂಡಪ್ಪನವರು, ಪ್ರಕಾಂಡ ಜ್ಞಾನ ಸಮುದ್ರವೇ ಆದ ಅವರು, ‘ ನಾನು ಕವಿಯಲ್ಲ, ವಿಜ್ಞಾನಿಯಲ್ಲ ಬರಿಯ ತಾರಾಡಿ’ ಎಂದು ಹೇಳಿಕೊಳ್ಳುವುದು ಅವರ ಸರಳತೆ ಮತ್ತು ದೀನತೆಯನ್ನು ತೋರುತ್ತದೆ. ಉನ್ನತವಾದ ಅರಿವನ್ನು ಕೈಗೆ ಎಟುಕಿಸಿಕೊಳ್ಳುವ ಅದ್ಭುತ ಸಾಮರ್ತ್ಯವಿದ್ದ ಗುಂಡಪ್ಪನವರು ಕೇವಲ ವಿಜ್ಞಾನಿಯಲ್ಲ ‘ಮಹಾನ್ ಜ್ಞಾನಿ’ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಕನ್ನಡದ ಆಧ್ಯಾತ್ಮಸಾಹಿತ್ಯ ಲೋಕದಲ್ಲಿ ‘ಏಕಮೇವಾದ್ವಿತೀಯ’ರಾಗಿ ನಿಲ್ಲುತ್ತಾರೆ ನಮ್ಮ ಗುಂಡಪ್ಪನವರು.

ಮಂಕುತಿಮ್ಮನ ಕಗ್ಗವನ್ನು ಬರೆಯುವಾಗ ನಾನು ಅಲ್ಲಿ ಇಲ್ಲಿ ಓಡಾಡುವಾಗ ಹೆಕ್ಕಿ ಹೊಂದಿಸಿದ ವಿಚಾರಗಳನ್ನು ಆತ್ಮಾನುಸಂಧಾನಮಾಡಿಕೊಂಡು ಅವುಗಳನ್ನೆಲ್ಲಾ ಹವಣಿಸಿ ಹೆಣೆದು ಬರೆದಿದ್ದೇನೆ ಎಂದರೂ, ಇಲ್ಲಿರುವ ವಿಚಾರಗಳೆಲ್ಲಾ, ಅವರ ಗ್ರಂಥಾಭ್ಯಾಸ, ಜೀವನಾನುಭವ, ಚಿಂತನ ಮತ್ತು ಮನನಗಳಿಂದ ಅವರ ಅಂತರಂಗದಲ್ಲಿ ಚಿಮ್ಮಿದ ಅಣಿಮುತ್ತುಗಳು. ಕನ್ನಡ ಸಾಹಿತ್ಯದ ದಿಗ್ಗಜರಲ್ಲೊಬ್ಬರಾದ ‘ ಕುವೆಂಪು’, "ವೇದ, ವೇದಾಂತ, ಉಪನಿಷತ್ತು, ಪುರಾಣ’ ಗಳನ್ನೂ ಓದದಿದ್ದರೂ ಪರವಾಗಿಲ್ಲ, ಆತ್ಮೋದ್ಧಾರಕ್ಕೆ ‘ಮಂಕುತಿಮ್ಮನಕಗ್ಗ’ ವನ್ನು ಓದಿದರೆ ಸಾಕು" ಎಂದು ಹೇಳಿದ್ದರಂತೆ.

‘ಪದ್ಯ’ ಭೂಮಿಯಮೇಲೆ ಭಧ್ರವಾಗಿ ನಿಲ್ಲದೆ, ಆಕಾಶಕ್ಕೂ ಏರದೆ ಇರುತ್ತದೆಯಾದರೂ, ‘ ಕವನ ನೆನಪಿಗೆ ಸುಲಭ’ ಎಂದರೆ ಹತ್ತಾರು ಬಾರಿ ಓದಿಕೊಂಡರೆ ನೆನಪಿನಲ್ಲಿ ಇಟ್ಟುಕೊಳ್ಳುವುದು ಸುಲಭವಾದ್ದರಿಂದ, ಇದನ್ನು ಪದ್ಯದಲ್ಲಿ ಬರೆದಿದ್ದೇನೆ ಎಂದು ಹೇಳುತ್ತಾರೆ. ನೆನಪಿನಲ್ಲಿ ಉಳಿದರೆ, ಅದರ ಚಿಂತನೆ ಮತ್ತು ಮನನವಾಗಿ ಅದರೊಳಗಿನ ಸತ್ವ ಮತ್ತು ತತ್ವವನ್ನು ನಮ್ಮೊಳಗೆ ಇಳಿಯಬಹುದು ಎಂದು, ನಮಗೆ ಉಪಕಾರವನ್ನೇ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು. ಅವರ ಚಿಂತನೆಗಳು ನಮಗೆ ದಾರಿದೀಪವಾಗಬೇಕು ಅಲ್ಲವೇ?

 

ರಸಧಾರೆ – ೯೩೭

ಹೃದ್ಯ ಹೃದಯೇಂಗಿತಕೆ ರಾಗ ತಾಳದ ಕಟ್ಟು ।
ಗದ್ಯ ಲೌಕಿಕ ತಾತ್ವಿಕಕ್ಕಚ್ಚುಕಟ್ಟು ।।
ಮಧ್ಯದಲಿ ಮಿಸುಕಿ ನೆಲಬಿಟ್ಟು ಬಾನ್ ಮುಟ್ಟದಿಹ ।
ಪದ್ಯವಧಿಕಪ್ರಸಂಗಿ – ಮಂಕುತಿಮ್ಮ ।।

ಹೃದಯೇಂಗಿತಕೆ=ಹೃದಯ+ಇಂಗಿತಕೆ, ತಾತ್ವಿಕಕ್ಕಚ್ಚುಕಟ್ಟು =ತಾತ್ವಿಕಕ್ಕೆ+ಅಚ್ಚುಕಟ್ಟು, ಮುಟ್ಟದಿಹ=ಮುಟ್ಟದೆ+ಇಹ, ಪದ್ಯವಧಿಕಪ್ರಸಂಗಿ=ಪದ್ಯವು+ಅಧಿಕ+ಪ್ರಸಂಗಿ

ಬಾನ್ =ಆಕಾಶ, ಮುಗಿಲು, ಅಧಿಕಪ್ರಸಂಗಿ=ತಲೆಹರಟೆ

ನಮ್ಮ ‘ಹೃದಯ’ದ ಇಂಗಿತವನ್ನು ಅರುಹಲು, ರಾಗ ತಾಳ ಮತ್ತು ಲಯಗಳ ಚೌಕಟ್ಟಿನಲ್ಲಿರುವ ‘ಸಂಗೀತ’ ಮಾಧ್ಯಮವಾಗುತ್ತದೆ. ಲೌಕಿಕದ ತತ್ವಗಳನ್ನು ಹೇಳಲು, ಗದ್ಯ ಅಚ್ಚುಕಟ್ಟಾಗಿರುತ್ತದೆ. ಆದರೆ ಇವೆರಡರ ಮಧ್ಯೆ ಇದ್ದು ಇತ್ತ ಭೂಮಿಯ ಮೇಲೂ ನಿಲ್ಲಲಾಗದೆ ಅತ್ತ ಆಕಾಶಕ್ಕೂ ಎರಲಾಗದೆ ಇರುವ ‘ಪದ್ಯ’ ರೂಪ ಅಧಿಕಪ್ರಸಂಗಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಇಲ್ಲಿ ತಾವು ಮುಕ್ತಕಗಳನ್ನು ಪ್ರಸ್ತುತಪಡಿಸಿದ ಪ್ರಯೋಗವನ್ನು ತಾವೇ ವಿಶ್ಲೇಷಿಸುತ್ತಾ ‘ ಪದ್ಯ’ ರೂಪದಲ್ಲಿರುವ ಈ ಮುಕ್ತಕಗಳನ್ನು ಉಪಯೋಗಿಸಿದ ತಾನು ಅಧಿಕಪ್ರಸಂಗಿ ಎಂದು ಕರೆದುಕೊಳ್ಳುತ್ತಾರೆ. ಅವರನ್ನು ವಿಶ್ಲೇಷಣೆ ಮಾಡುವ ಅಧಿಕಾರ ಅವರಿಗೆ ಮಾತ್ರವಿದೆ, ನಮಗಿಲ್ಲ. ಏಕೆಂದರೆ ಅವರ ಜ್ಞಾನದ ಮುಂದೆ ನಮ್ಮದೆಲ್ಲ್ಲ ಕಿಂಚಿನ್ಮಾತ್ರ. ಹಾಗಾಗಿ ವಿಶ್ಲೇಷಣೆ ಸಲ್ಲ.

ಒಂದು ಕಡೆ ಹೃದಯಾಂತರಾಳದ ಪ್ರಸ್ತುತಿಗೆ ಸಂಗೀತ ಮತ್ತು ಲೌಕಿಕದ ವಿಷಯಕ್ಕೆ ಗದ್ಯ ಎಂದು ಹೇಳುತ್ತಾರೆ. ಇಲ್ಲಿ ಇವರ ಮುಕ್ತಕಗಳಲ್ಲಿ ಕಾಣುವುದೇನು? ಜಗತ್ತಿನ ಸೃಷ್ಟಿ, ಸೃಷ್ಟಿಕರ್ತ, ಸೃಷ್ಟಿಸಲ್ಪಟ್ಟ ಈ ಜಗತ್ತು ಮತ್ತು ಈ ಜಗತ್ತಿನ ಮೇಲಿರುವ ಸಕಲ ಜೀವರಾಶಿಗಳ ಎಲ್ಲಾ ಆಯಾಮಗಳನ್ನು ಕುರಿತು ಬರೆದ ಈ ‘ ಮಂಕುತಿಮ್ಮನ ಕಗ್ಗ’ ದ ಮುಕ್ತಕಗಳಲ್ಲಿ ತಾತ್ವಿಕ, ಲೌಕಿಕ, ಪಾರಮಾರ್ಥಿಕ, ಹೀಗೆ ಎಲ್ಲಾ ವಿಷಯಗಳನ್ನೂ ತಮ್ಮ ಹೃದಯಾಂತರಾಳದಿಂದ ‘ ಪದ್ಯ’ ರೂಪದಲ್ಲಿ ನಮಗೆ ಇತ್ತು ತಾವೂ ಧನ್ಯರಾಗಿ ನಮಗೂ ಧನ್ಯತೆಯನ್ನು ಪಡೆಯುವ ಹಾದಿಯನ್ನು ತೋರಿದ್ದಾರೆ ಅಲ್ಲವೇ?

ವಾಚಕರೆ, ಈ ಮುಕ್ತಕಗಳು ಯಾವುದೇ ರೂಪದಲ್ಲಿದ್ದರೂ, ಅವುಗಳು ಪ್ರತಿಪಾದಿಸುವ ತತ್ವಗಳನ್ನು ನಾವು ಓದಿ, ಅರ್ಥೈಸಿಕೊಂಡು ಅದರೊಳಗೆ ಅಡಗಿರುವ ತತ್ವ ಮತ್ತು ಸತ್ವವನ್ನು ನಮ್ಮೊಳಕ್ಕೆ ಇಳಿಸಿಕೊಂಡು ನಮ್ಮ ಜೀವನಗಳನ್ನು ಸುಧಾರಿಸಿಕೊಳ್ಳಲು ನಾವು ಪ್ರಯತ್ನಪಟ್ಟರೆ ಅದುವೇ ನಾವು ಮಾನ್ಯ ಗುಂಡಪ್ಪನವರಿಗೆ ತೋರುವ ಗೌರವ, ಅಲ್ಲವೇ?

 

ರಸಧಾರೆ – ೯೩೬

ವಿಶದಮಾದೊಂದು ಜೀವನಧರ್ಮದರ್ಶನವ- ।
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ।।
ನಿಸದವಂ ಗ್ರಂಥಾನುಭವಗಳಿಂದಾರಿಸುತ ।
ಹೊಸೆದನೀ ಕಗ್ಗವನು – ಮಂಕುತಿಮ್ಮ ।।

ವಿಶದಮಾದೊಂದು=ವಿಶದಂ+ಆದ+ಒಂದು, ಜೀವನಧರ್ಮದರ್ಶನವನುಸುರಿಕೊಳೆ=ಜೀವನ+ಧರ್ಮ+ದರ್ಶನವನು+ಉಸಿರಿಕೊಳೆ, ಗ್ರಂಥಾನುಭವಗಳಿಂದಾರಿಸುತ=ಗ್ರಂಥ+ಅನುಭವಗಳಿಂದ+ಆರಿಸುತ, ಹೊಸೆದನೀ=ಹೊಸೆದೆನು+ಈ

ವಿಶದ=ಸ್ಪಷ್ಟ, ನಿಸದ=ನಿಶ್ಚಯ, ಹೊಸೆ=ಹೆಣೆ, ಕಗ್ಗ = ಹಗ್ಗ

ಹಿಂದಿನ ಎರಡು ಮುಕ್ತಕಗಳಲ್ಲಿ "ನಿನ್ನ ಮನಕೆ ಒಪ್ಪುವ ಮತವನ್ನು ಆಯ್ದುಕೊಂಡು ಅಂತರಂಗದಲ್ಲಿ ಮಥನಮಾಡಿ ನಿನಗೆ ಕಂಡ ಸತ್ಯವನ್ನು ಭದ್ರವಾಗಿ ಹಿಡಿದುಕೊಂಡು ಮುಂದುವರೆ" ಎಂದು ನಮಗೆ ಅರುಹಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ ತಾನು ಸಹ ಹೀಗೆಯೇ ಮಾಡಿದೆ ಎಂದು ಹೇಳುತ್ತಾರೆ ಮಾನ್ಯ ಗುಂಡಪ್ಪನವರು

ವಾಚಕರೆ ಒಂದು ವಿಷಯವನ್ನು ನಾವು ಚೆನ್ನಾಗಿ ಅರಿತುಕೊಳ್ಳಬೇಕು. ಮಾನ್ಯ ಗುಂಡಪ್ಪನವರು ಏನನ್ನು ನಂಬಿದ್ದರೋ, ಏನನ್ನು ಯೋಚಿಸಿದರೋ ಅದನ್ನೇ ಹೇಳಿದರು ಮತ್ತು ಏನನ್ನು ಹೇಳಿದರೋ ಹಾಗೆಯೇ ಬದುಕಿದರು. ಅಂತಹ ವ್ಯಕ್ತಿಗಳು ನಮಗೆ ಬದುಕಿನಲ್ಲಿ ಸಿಗುವುದು ಬಹಳ ದುರ್ಲಭ, ಹಾಗಾಗಿಯೇ ಮಾನ್ಯ ಗುಂಡಪ್ಪನವರು ಇಂದಿಗೂ ಮತ್ತು ಎಂದೆಂದಿಗೂ ಪ್ರಸ್ತುತವಾಗಿ ಉಳಿಯುತ್ತಾರೆ. ಅವರು ‘ ನಾನು ಸ್ಪಷ್ಟವಾದ ಒಂದು ವಿಚಾರವನ್ನು ನನ್ನ ಜೀವನದ ಧರ್ಮದ ದರ್ಶನವೆಂದು ಬಗೆದು, ಅದರ ವಿಚಾರವನ್ನು ಗ್ರಂಥಗಳಿಂದ ಮತ್ತು ಬದುಕಿನ ಅನುಭವಗಳಿಂದ ಆರಿಸಿಕೊಂಡು, ಅರಿತುಕೊಂಡು ಈ ಕಗ್ಗವೆಂಬ ಹಗ್ಗವನ್ನು ಹೊಸೆದಿದ್ದೇನೆ ಎಂದು ಹೇಳುತ್ತಾರೆ. ಅದು ಅವರ ಮಾರ್ಗವಾಯಿತು.

ನಾವೂ ಸಹ ಅದನ್ನೇ ಅನುಸರಿಸಬೇಕೇ? ಎಂದರೆ, ಮುಕ್ತಕ್ಕ ೯೩೪ ರಲ್ಲಿ ‘ಬೇರೆ ಮತಿ ಬೇರೆ ಮತ’ ಎಂದು ಹೇಳಿದಂತೆ ನಮ್ಮ ಮತಿಗೆ ತಕ್ಕಂತೆ ನಮ್ಮ ಮತವನ್ನು ನಾವು ಆಯ್ದುಕೊಳ್ಳಬಹುದು. ಆದರೆ ನಮ್ಮ ವಿಚಾರ ಸ್ಪಷ್ಟವಾಗಿರಬೇಕು ಮತ್ತು ನಿಶ್ಚಯವಾಗಿರಬೇಕು. ಹಾಗಾದರೆ ನಾವೂ ಸಹ ಅಂತಿಮ ಸತ್ಯದ ದರ್ಶನವನ್ನು ಪಡೆಯಬಹುದು. ಆದರೆ ಅವರು ನಮಗೊಂದು ಮಾರ್ಗವನ್ನು ತೋರಿದ್ದಾರೆ. ಆ ಮಾರ್ಗದಲ್ಲಿ ನಡೆದು ಕ್ರಮಿಸಿದರೆ ನಾವು ನಮ್ಮದೇ ಆದ ಗಮ್ಯವನ್ನು ಕಂಡುಕೊಳ್ಳಬಹುದು. ಅದಕ್ಕೆ ನಮಗೆ ಅದರಲ್ಲಿ, ಎಂದರೆ ಪರತತ್ವವನ್ನು ಅರಿಯುವ ಆಸಕ್ತಿಯುಂಟಾಗಬೇಕು. ಆ ದಿಕ್ಕಿನಲ್ಲಿ, ಹಿಂದೆ ನಡೆದವರ ಮತ್ತು ಯಶಸ್ಸನ್ನು ಕಂಡವರ ಮರವನ್ನು ಅನುಸರಿಸಿ ನಮ್ಮದೇ ಆದ ಸತ್ಯವನ್ನು ಕಂಡುಕೊಳ್ಳಬಹುದು.

ಇಂದಿನ ವ್ಯಸ್ತ ಜೀವನ ಶೈಲಿಯಲ್ಲಿ, ಹಿಂದೆ, ಅಕ್ಕ, ಪಕ್ಕ ಮತ್ತು ಮುಂದೆಯೂ ನೋಡಲಾಗದ ಸ್ಥಿತಿಯಲ್ಲಿರುವ ನಮಗೆ ಈ ಮುಕ್ತಕಗಳು ಒಂದು ದಾರಿದೀಪವೆನ್ನುವುದರಲ್ಲಿ ಸಂದೇಹವೇ ಇಲ್ಲ. ಇವುಗಳಲ್ಲಿರುವ ಸತ್ವವನ್ನು ಮತ್ತು ತತ್ವವನ್ನು ಅನುಸಂಧಾನಮಾಡಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಮಾನ್ಯ ಗುಂಡಪ್ಪನವರ ಪ್ರತಿ ಶ್ರದ್ಧೆ ಮತ್ತು ಗೌರವ ತೋರಿದಂತಾಗುತ್ತದೆ ಮತ್ತು ನಮಗೆ ಮುನ್ನಡೆಯಲು ಮಾರ್ಗವಾಗುತ್ತದೆ.

 

ರಸಧಾರೆ – ೯೩೫

ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ ।
ಅನುವಪ್ಪುದೊಂದೊಂದು ರೋಗಕೊಂದೊಂದು ।।
ನಿನಗಮಂತೆಯೆ ನೂರು ನೀತಿಸೂತ್ರಗಳಿರಲು ।
ಅನುವನರಿವುದೆ ಜಾಣು – ಮಂಕುತಿಮ್ಮ ।।

ಅನುವಪ್ಪುದೊಂದೊಂದು=ಅನುವು+ಅಪ್ಪು+ಒಂದೊಂದು, ನಿನಗಮಂತೆಯೆ=ನಿನಗಂ+ಅಂತೆಯೆ ಅನುವನರಿವುದೆ=ಅನುವನ್+ಅರಿವುದೆ,

ಅಪ್ಪು=ಆಗುತ್ತದೆ ಅನುವನ್=ಸೂಕ್ತವಾದದ್ದನ್ನು, ಜಾಣು=ಜಾಣತನ.

ಮೆಣಸು ಹಿಪ್ಪಲಿ ಶುಂಠಿ ಜೀರಿಗೆ ಮುಂತಾದ ಪದಾರ್ಥಗಳು ಔಷಧೀಯ ಗುಣಗಳನ್ನು ಹೊಂದಿದ್ದು, ನಮ್ಮ ದೇಹದ ಒಂದೊಂದು ರೋಗಕ್ಕೆ ಒಂದೊಂದು ಔಷಧಿಯಂತೆ ಸೂಕ್ತವಾಗಿರುತ್ತವೆ. ಅದೇ ರೀತಿ ನಮ್ಮ ಮಾನಸಿಕ ಮತ್ತು ಆಧ್ಯಾತ್ಮಿಕ ರುಗ್ಣತೆ ಅಥವಾ ಖಾಯಿಲೆಯನ್ನು ವಾಸಿಮಾಡಲು ನೂರಾರು ನೀತಿ ಸೂತ್ರಗಳು ಇರುವಾಗ, ನಿನಗೆ ಸೂಕ್ತವಾದದ್ದನ್ನು ಆರಿಸಿಕೊಳ್ಳುವುದೇ ಜಾಣತನ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

‘ಮೆಣಸು ಹಿಪ್ಪಲಿ ಶುಂಠಿ ಜೀರಿಗೆ’ ಇವುಗಳೆಲ್ಲ ಔಷಧೀಯ ಗುಣಗಳುಳ್ಳ ಸಾಂಬಾರ ಪದಾರ್ಥಗಳು. ಅವುಗಳನ್ನು ಶೀತಕ್ಕೆ, ವಾತಕ್ಕೆ, ಪಿತ್ತಕ್ಕೆ ಎಂಬಂತೆ ಬೇರೆ ಬೇರೆಯಾಗಿಯೂ ಮತ್ತು ಹಲವಾರು ರೀತಿಯ ಮಿಶ್ರಣಗಳಲ್ಲಿಯೂ ಬಳಸಿ ಕಷಾಯಗಳನ್ನು ಮಾಡಿ ಬಳಸುತ್ತಾರೆ, ಜಗತ್ತಿನಾದ್ಯಂತ, ಮುಖ್ಯವಾಗಿ ‘ಭಾರತ ಖಂಡದಲ್ಲಿ’. ಇದನ್ನು ಉದಾಹರಣೆಯನ್ನು ನೀಡುತ್ತಾ ಡಿವಿಜಿಯವರು, ಇದೇ ರೀತಿ ಬೇರೆ ಬೇರೆ ಮಾರ್ಗಗಳು ಆಧ್ಯಾತ್ಮ ಸಾಧನೆಗೂ ಇವೆ, ಅವುಗಳಲ್ಲಿ ನೀನು ಆವುದನ್ನು ಆಯ್ದುಕೊಂಡರೂ ಗುರಿಮುಟ್ಟಬಹುದು, ಅದರ ಸೂಕ್ತಾಸೂಕ್ತತೆಯನ್ನು ನೀನೇ ಜಾಣತನದಿಂದ ನಿರ್ಧರಿಸಿ, ನಿನಗೆ ಅನುವಾದ ಮಾರ್ಗವನ್ನು ನೀನೆ ಅಯ್ದುಕೋ, ಎಂದಿದ್ದಾರೆ ಮಾನ್ಯ ಗುಂಡಪ್ಪನವರು

ಯೋಗ, ಧ್ಯಾನ, ಜಪ, ತಪ, ಪೂಜೆ, ಅಧ್ಯಯನ, ಅಧ್ಯಾಪನ, ತೀರ್ಥಯಾತ್ರೆ, ಯಾಗ, ಹೋಮ, ಹವನ, ಪರೋಪಕಾರ, ಜಗದುಪಕಾರ ಹೀಗೆ ಹಲವಾರು ಮಾರ್ಗಗಳು ಇವೆ, ನಮ್ಮ ಅಂತರಂಗದ ಶುದ್ದಿಗೆ. ಯಾವ ಮಾರ್ಗವನ್ನು ಅನುಸರಿಸಿದರೂ ಆ ಪರತತ್ವದ ಅನುಭವ ಮತ್ತು ದರ್ಶನವಾಗುತ್ತದೆ. ಆದರೆ ಒಂದು ಮಾರ್ಗವನ್ನು ಆಯ್ದುಕೊಂಡು ಅಥವಾ ಒಂದೆರಡು ಮಾರ್ಗಗಳ ಸೂಕ್ತ ಮಿಶ್ರಣದ ಮಾರ್ಗವನ್ನು ತೀವ್ರತೆಯಿಂದ ಸಾಧನೆಮಾಡಿದರೆ ಮಾತ್ರ ಸಾಧ್ಯ. ಯಾವುದರಲ್ಲೂ ಆಳವಾದ ಆಸಕ್ತಿ ಮತ್ತು ಅಭ್ಯಾಸವಿಲ್ಲದೆ ಇದ್ದರೆ ಯಾವುದನ್ನೂ ಸಾಧಿಸಿದಂತಾಗುವುದಿಲ್ಲ.

ಅದೆಲ್ಲಕ್ಕಿಂತ ಮೊದಲು ನಮಗೆ ರೋಗವಿದೆ ಎಂದು ನಮಗೆ ಅರಿವಾಗಬೇಕು ಮತ್ತು ನಾವು ನಮ್ಮ ರೋಗದ ಲಕ್ಷಣವನ್ನು ಅರಿತುಕೊಳ್ಳಬೇಕು. ನಂತರ ಸೂಕ್ತ ಔಷಧಿಯ ಆಯ್ಕೆಯಾಗಬೇಕು ಮತ್ತು ಆ ಔಷಧಿಯನ್ನು ರೋಗ ಸುಧಾರಿಸುವವರೆಗೂ ಶ್ರದ್ಧೆಯಿಂದ ಸೇವಿಸಬೇಕು. ಆತ್ಮೋದ್ಧಾರದ ಮಾರ್ಗದಲ್ಲಿ ನಮಗೆ ಬಾಧಕವಾಗಿರುವುದೆಲ್ಲವನ್ನೂ ನಿವಾರಿಸಿ ನಮ್ಮನ್ನು ಔನ್ನತ್ಯಕ್ಕೆ ಕೊಂಡುಹೋಗುವ, ಪರತತ್ವದ ದರ್ಶನ ಮತ್ತು ಅರಿವನ್ನು ಮೂಡಿಸುವ ಯಾವುದೇ ಮಾರ್ಗವಾದರೂ ಸರಿ ನಾವೇ ಆಯ್ದುಕೊಳ್ಳಬೇಕು ಮತ್ತು ಆಯ್ದುಕೊಂಡ ಮಾರ್ಗದಲ್ಲಿ ಶ್ರದ್ಧೆಯಿಂದ ಮುನ್ನಡೆದರೆ ಎಂದೋ ಒಂದು ದಿನ ನಮ್ಮ ರೋಗವು ವಾಸಿಯಾಗಿ ಆತ್ಮ ಹಗುರಾಗಿ ಪರಮಾತ್ಮನನ್ನು, ಪರತತ್ವವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ ಮಾರ್ಗ ನಮ್ಮದೇ ಆಗಿರಬೇಕು. ಯಾರದೋ ಮಾರ್ಗವನ್ನು ತುಳಿದರೆ ನಮ್ಮ ನಮ್ಮದೇ ಆದಂತಹ ‘ದರ್ಶನ’ ದಿಂದ ವಂಚಿತರಾಗುತ್ತೇವೆ.