RSS

ರಸಧಾರೆ – ೮೬೯

24 ಜೂನ್

ಮಾರ್ಗಣೆಯೆ ಮುಖ್ಯ; ಲಭ್ಯದ ಮಾತದಂತಿರಲಿ ।
ಸ್ವರ್ಗವನು ಭುವಿಗಿಳಿಸಬಲ್ಲವನದಾರು ? ।।
ಅರ್ಗಲ ವಿಹೀನ ಸರ್ವಾರ್ಥ ಸಹಭಾಗಿತೆಯೆ ।
ಅರ್ಘಾರ್ಹ ತತ್ವವೆಲೊ – ಮಂಕುತಿಮ್ಮ ।।

ಮಾತದಂತಿರಲಿ=ಮಾತು+ಅದು+ಅಂತಿರಲಿ, ಭುವಿಗಿಳಿಸಬಲ್ಲವನದಾರು=ಭುವಿಗೆ+ಇಳಿಸಬಲ್ಲವನು +ಅದು+ಯಾರು?

ಮಾರ್ಗಣೆ =ಹುಡುಕಾಟ, ಭುವಿ=ಭೂಮಿ, ಅರ್ಗಲ ವಿಹೀನ+ ಅಡೆ-ತಡೆಯಿಲ್ಲದ, ಅರ್ಘಾರ್ಹ=ಅತ್ಯುತ್ತಮ.

ಎಲ್ಲರೂ ಎಲ್ಲಾ ಕಾಲಕ್ಕೂ ಸುಖದ ಸಾಧನಗಳನ್ನು ಹುಡುಕುವುದೇ ಮುಖ್ಯ. ಅದರಿಂದ ಏನು ಸಿಕ್ಕಿತು ಅಥವಾ ಇಲ್ಲ ಎನ್ನುವ ಮಾತು ಒತ್ತಟ್ಟಿಗಿರಲಿ. ಎಲ್ಲಾ ಸುಖಗಳ ತಾಣವಾದ ಸ್ವರ್ಗವನು ಈ ಭೂಮಿಯಮೇಲೆ
ತರಬಲ್ಲವನು ಯಾರು? ಜಗತ್ತಿನಲ್ಲಿರುವ ಸುಖಸಾಧನಗಳನ್ನು, ಅಬಾಧಿತವಾಗಿ ಅಡೆತಡೆಯಿಲ್ಲದೆ ಸಮಾನವಾಗಿ ಎಲ್ಲರೂ ಹಂಚಿಕೊಂಡು ಬಾಳುವುದೇ ಅತ್ಯುತ್ತಮ ತತ್ವ ಎನ್ನುತ್ತಾರೆ, ಸನ್ಮಾನ್ಯ ಗುಂಡಪ್ಪನವರು.

ಅನಾದಿ ಕಾಲದಿಂದಲೂ ಮಾನವರು ಜಗತ್ತಿನಾದ್ಯಂತ, ತಮ್ಮ ಸುಖಸಾಧನಗಳನ್ನು ಹುಡುಕುತ್ತಲೇ ಇದ್ದಾರೆ. ಅವರು ಹುಡುಕುವ ವಸ್ತು ಅವರಿಗೆ ಸಿಕ್ಕಿಲ್ಲವೆಂದಲ್ಲ. ಆದರೆ ಮನುಷ್ಯನಿಗೆ ಮತ್ತಷ್ಟರಾಸಯಿಂದ ತೃಪ್ತಿ ಸಿಕ್ಕಿಲ್ಲ. ಹಾಗೆ ಇವನು ಬಯಸಿದ ಸಕಲವೂ ಬಯಸಿದಾಕ್ಷಣ ಸಿಕ್ಕಿಬಿಟ್ಟರೆ ಇವನನ್ನು ಹಿಡಿದು ನಿಲ್ಲಿಸುವರಾರು ? ಹಾಗಾಗಿ ಇವನ ಹುಡುಕಾಟ ನಿರಂತರ. ಭೂಮಿಯಮೇಲಿನ ಸುಖಗಳೆಲ್ಲವನ್ನೂ ತಂದುಕೊಟ್ಟು ಈ ಭೂಮಿಯನ್ನು ಸ್ವರ್ಗದಂತೆ ಮಾಡುವವರು ಯಾರೂ ಬಂದಿಲ್ಲ, ಬರುವುದೂ ಇಲ್ಲ. ಏಕೆಂದರೆ ಮನುಷ್ಯನ ಆಸೆಗಳಿಗೆ ಕೊನೆಯೇ ಇಲ್ಲ.

ಮನುಷ್ಯ ಬಯಸಿದ ಸುಖ ಸಾಧನಗಳು ಸಿಕ್ಕಿಲ್ಲವೇ ಎಂದರೆ, ಸಿಕ್ಕಿವೆ ಆದರೆ ಅವು ಸಂಪೂರ್ಣ ತೃಪ್ತಿಯನ್ನು ಕೊಟ್ಟಿಲ್ಲ. ಆದರೆ ಸಿಕ್ಕ ಸುಖಗಳನ್ನು ಮತ್ತು ಆ ಸುಖದ ಸಾಧನಗಳನ್ನು ಎಲ್ಲರಿಗೂ ತಲುಪುವಂತೆ ಮಾಡಿ ಎಲ್ಲರಿಗೂ ಆ ಸುಖದಲ್ಲಿ ಸಹಭಾಗಿತ್ವವನ್ನು ನೀಡುವಂತಹ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳುವುದು ಅತ್ಯುತ್ತಮ ವಿಚಾರ. ಆದರೆ ಅದು ಸಾಧ್ಯವೇ? ಬುದ್ಧಿಶಕ್ತಿಯ, ಜ್ಞಾನದ, ಸಂಸ್ಕಾರಗಳ ‘ಅಸಮತೆ’ಯಿಂದಲೇ ಹುಟ್ಟಿರುವ ಜಗತ್ತಿನ ಜನರು ‘ಸಮಾನ’ ವಾಗಿ ಯೋಚಿಸುವುದು ಸಾಧ್ಯವೇ? ನಾವು ಕನಸು ಕಾಣಬಹುದು. ಹಾಗಾಗುವುದು ಒಂದು ಅದ್ಭುತ ತತ್ವ ಎನ್ನುತ್ತಾರೆ.

ಆದರೆ ಪೈಪೋಟಿಯಿಂದ ಕೂಡಿದ ಈ ಜಗತ್ತಿನಲ್ಲಿ, ಸ್ವಾರ್ಥವೇ ಮೂಲ ಸ್ವಾಭಾವವಾಗಿರುವಾಗ, ‘ಹಂಚಿಕೊಂಡು’ ಬಾಳುವ ವಿಚಾರ ಹಿಂದಿಗಿಂತ ಇಂದು ಬಹಳ ದೂರಾಗಿದೆ. ನಮ್ಮ ಬಾಳು ಈ ಜಗತ್ತಿನಲ್ಲಿ ಶಾಶ್ವತವಲ್ಲ ಎಂದು ಅರಿತಿದ್ದರೂ ಮನುಷ್ಯ, ತಾನು ಈ ಜಗತ್ತಿನಲ್ಲಿ ಶಾಶ್ವತವಾಗಿ ಇರುತ್ತೇನೆ ಎನ್ನುವಂತೆ ಸ್ವಾರ್ಥನಾಗಿ, ಹಂಚಿಕೊಂಡು ಬಾಳುವುದನ್ನು ಬಹಳ ಹಿಂದೆಯೇ ಮರೆತು ಹೋಗಿದ್ದಾನೆ. ಈ ವಿಚಾರವನ್ನು ನಾವು ನಮ್ಮ ಮನಸ್ಸುಗಳಲ್ಲಿ ತಂದುಕೊಂಡು ‘ಹಂಚಿಕೊಂಡು’ ಬಾಳುವ ಸಮಸ್ಕಾರಗಳನ್ನು ಬೆಳೆಸಿಕೊಳ್ಳಲಾದರೆ, ನಮ್ಮದು ವಿಶಾಲ ಮನೋಭಾವವಾಗಿ, ಜೀವೋನ್ನತಿಯಡೆಗೆ ಹೆಜ್ಜೆಯಿಟ್ಟಂತಾಗುತ್ತದೆ.

 

ನಿಮ್ಮ ಟಿಪ್ಪಣಿ ಬರೆಯಿರಿ