RSS

ರಸಧಾರೆ – ೭೭

29 ಏಪ್ರಿಲ್

ತನ್ನ ಹೊಳಹೊಳಪುಗಳ ನೆನೆನೆನೆದು ಮೈಮರೆತ |

ರನ್ನವೋ ಬ್ರಹ್ಮ; ನೋಡವನು – ನಿಜಪಿಂಛ ||

ವರ್ಣದೆಣಿಕೆಯಲಿ ತನ್ನನೆ ಮರೆತ ನವಿಲಿನೊಲು |
ತನ್ಮಯನೋ ಸೃಷ್ಟಿಯಲಿ – ಮಂಕುತಿಮ್ಮ || 

ನಿಜಪಿಂಛ = ನೈಜ ಬಣ್ಣಗಳ ನವಿಲುಗರಿ, ವರ್ಣದೆಣಿಕೆಯಲಿ = ಬಣ್ಣಗಳ ಎಣಿಕೆಯಲಿ, ನವಿಲಿನೊಲು = ನವಿಲಿನಂತೆ 

ತನ್ನ ಹೊಳಹೊಳಪುಗಳ ತಾನೇ ನೆನೆನೆನೆದು ಮೈ ಮರೆತಂತ ರತ್ನವೋ ಆ ಬ್ರಹ್ಮ. ಅಲ್ಲಿ ನೋಡು ಅವನು ಒಂದು ನವಿಲು ತನ್ನ ಗರಿಗಳನ್ನೆಲ್ಲ ಕೆದರಿ ನೃತ್ಯ ಮಾಡುವಾಗ ತನ್ನ ಗರಿಗಳ ಬಣ್ಣ ಗಳನ್ನೂ ಕಂಡು ತನ್ಮಯವಾಗುವಂತೆ, ತನ್ನಿಂದ ಆದ, ತಾನೇ ಆದ ಈ ಸೃಷ್ಟಿಯನ್ನು ಅನುಭವಿಸುವಾಗ ಆ ಪರಮಾತ್ಮನೂ ತನ್ಮಯನೋ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ . ಇಡೀ ಜಗತ್ತು, ಸೃಷ್ಟಿ ಆದದ್ದೇ ಆ ಪರಮ ಶಕ್ತಿಯಿಂದ. ಆ ಪರಮ ಶಕ್ತಿಯೇ ಜಡವನ್ನೂ ಸೃಷ್ಟಿಸಿ, ಆ ಜಡದೊಳಗೆ ಚೇತನವಾಗಿ ಪ್ರವೇಶಿಸಿ ಜಡಕ್ಕೆ ಚೈತನ್ಯವನ್ನು ತುಂಬಿ ಆಯಾಯಾ ಜಡಗಳ ಗುಣಗಳನ್ನು ತಾನೂ ಅನುಭವಿಸುತ್ತ ಆ ಅನುಭವದಲ್ಲಿ ಆ ಪರಮಾತ್ಮನೂ ಮಗ್ನನೋ? ಎನ್ನುವ ಪ್ರಶ್ನೆ. 

ವಾಚಕರೆ ನೋಡಿ ನಾವು ನಮ್ಮ ದೇಹದ ಭಾಗಗಳನ್ನು ಹೇಗೆ ಹೇಳುತ್ತೇವೆ ಎಂದು. ” ನನ್ನ ಕೈ” ನನ್ನ ಕಾಲು” ನನ್ನ ತಲೆ” ನನ್ನ ಮನಸ್ಸು ” ನನ್ನ ಬುದ್ಧಿ ” ಹೀಗೆ ಎಲ್ಲಕ್ಕೂ “ನನ್ನ” ಎಂದು ಸೇರಿಸುತ್ತೇವೆ . ನಮ್ಮಲಿರುವ ಒಂದು ಪುಸ್ತಕಕ್ಕೂ “ನನ್ನ ಪುಸ್ತಕ” ಎನ್ನುತ್ತೇವೆ. ನಾವು ಪುಸ್ತಕವನ್ನು ಹೊಂದಿದ್ದೇನೆ ಆದ್ದರಿಂದ” ನನ್ನ ಪುಸ್ತಕ” ಹಾಗೆಯೇ ” ಕೈ, ಕಾಲು, ಮೈ, ತಲೆ, ಮನಸ್ಸು, ಬುದ್ಧಿ”ಗಳನ್ನು ನಾನು ಹೊಂದಿದ್ದೇನೆ ಆದ್ದರಿಂದ ” ನನ್ನ” ಸೇರಿಸುತ್ತೇವೆ. ಹಾಗಾದರೆ ಇವನ್ನೆಲ್ಲ ಹೊಂದಿರುವ ಆ ” ನಾನು ” ಯಾರು ಎಂದರೆ, ಅದೇ ಆ ಬೃಹತ್ ಚೇತನದ ಒಂದು ಅಂಶ. ಅಂದರೆ ಆ ಬೃಹತ್ ಚೇತನವೇ ಇವನ್ನೆಲ್ಲ ಹೊಂದಿ “ನನ್ನದು ನನ್ನದು” ಎಂದು ಹೇಳುತ್ತಾ ಅದರಿಂದ ಉಂಟಾಗಬಹುದಾದ ನೋವು ನಲಿವು ಆನಂದ ದುಃಖಗಳಂಥಾ ಅನುಭವಗಳನ್ನು ಅನುಭವಿಸುತ್ತಾ ಈ ಸೃಷ್ಟಿಯಲ್ಲೇ ಮಗ್ನವಾಗಿದೆ. ಆ ಬೃಹತ್ ಚೇತನವನ್ನು ನಮ್ಮ ಶಿವನಸಮುದ್ರದಲ್ಲಿ ಉಂಟಾಗುವ ವಿಧ್ಯುತ್ತಿಗೆ ಹೋಲಿಸಿದರೆ, ನಮ್ಮನ್ನು ನಾವು ನಮ್ಮ ಮನೆಗಳಲ್ಲಿ ಬೆಳಗುವ ಒಂದು ಸಣ್ಣ ಬಲ್ಬ್ ಹೋಲಿಸಿಕೊಳ್ಳಬಹುದು. ಇಲ್ಲಿ ಬೆಳಗುವುದು ಯಾವುದೆಂದರೆ ಅಲ್ಲಿನ ವಿಧ್ಯುತ್. ಆದರೆ ಅದು ಬೆಳಗಲು ಸಾಧನ ಈ ಸಣ್ಣ ಬಲ್ಬ್. ಇಡೀ ದೇಶದಲ್ಲಿ ಬೆಳಗುವ ಮತ್ತು ಕೆಲಸ ಮಾಡುವ ಎಲ್ಲ ವಿಧ್ಯುತ್ ಉಪಕರಣಗಳಿಗೂ ಆ ವಿಧ್ಯುತ್ತಿನ ಮೂಲ ಒಂದೇ. ಹಾಗೆಯೇ ಈ ಸೃಷ್ಟಿಯಲ್ಲಿ ನಾವೆಲ್ಲಾ ಒಂದೊಂದು ಬಲ್ಬಗಳು.ನಮ್ಮಲ್ಲಿ ಬೆಳಗುವ ಆ ಜ್ಯೋತಿಯೇ ಆ ಪರಮ ಚೇತನ. 

ಇಲ್ಲಿ ನಾನು ಎನ್ನುವ ಭಾವ ಇದೆ. ಹಾಗಾಗಿ ನಾನು ನೋಡುತ್ತೇನೆ, ಮಾಡುತ್ತೇನೆ, ಓದುತ್ತೇನೆ, ಓಡುತ್ತೇನೆ…. ಇತ್ಯಾದಿಗಳ ಪ್ರಯೋಗ ಮಾಡುತ್ತೇವೆ. ಎಂದು ” ನಾನು” ಎನ್ನುವ ಭಾವವಿಲ್ಲವೋ ಅಂದು ನಾವೂ ಸಹ ಆ ಬೃಹತ್ ಚೇತನದ ರೀತಿಯೇ ಇಲ್ಲಿ ಆನಂದದಿಂದ ಮಗ್ನರಾಗಿರಬಹುದು. ಎರಡೆ೦ದುಕೊಂಡರೆ ಬೇಧ ಮತ್ತು ಅದಕ್ಕನ್ವಯಿತ ಭಾವ. ಒಂದೇ ಆದರೆ ಬೇಧವಿಲ್ಲ. ನವಿಲು ತನ್ನ ಮೈಮೇಲಿನ ಗರಿಗಳ ವಿವಿಧ ಬಣ್ಣಗಳನ್ನು ಕಂಡು ಆನಂದದಿಂದ ಮಗ್ನವಾಗಿ ಹೇಗೆ ನಾಟ್ಯ ಮಾಡುತ್ತದೋ ಹಾಗೆಯೇ ಆ ಪರಮಾತ್ಮ ತನ್ನಿಂದ ಆದ, ತಾನೇ ಇರುವ ಈ ಜಗತ್ತಿನ ಎಲ್ಲದರೊಳಗೂ ಇದ್ದು ಆ ಎಲ್ಲ ವಸ್ತುಗಳಲ್ಲಿ ಉಂಟಾಗುವ ಎಲ್ಲ ಭಾವಗಳನ್ನೂ ತಾನೇ ಅನುಭವಿಸುತ್ತಾ ಮತ್ತನಾಗಿ , ತನ್ಮಯನಾಗಿ ಆನಂದದಿಂದ ಇದ್ದಾನೆ ಎನ್ನುವುದೇ ಈ ಕಗ್ಗದ ಹೂರಣ. 

ನಾನು ನಾನು ಅನುಭವಿಸುತ್ತಿದ್ದೇನೆ ಎಂದು ಭಾವಿಸದೆ, ಎಲ್ಲವೂ ಆ ಪರಮಾತ್ಮನಿಗೆ ಸೇರಿದ್ದು ಎನ್ನುವ ಭಾವ ತಳೆದಾಗ, ನಮ್ಮಲ್ಲಿರುವ ಅಹಂಕಾರವೂ ಕಡಿಮೆಯಾಗಬಹುದು ಅಲ್ಲವೇ ವಾಚಕರೆ? 

 

1 responses to “ರಸಧಾರೆ – ೭೭

  1. Badarinath Palavalli

    ಮೇ 1, 2012 at 2:02 ಫೂರ್ವಾಹ್ನ

    ನಿಜಪಿಂಛ ಎಂತಹ ಒಳ್ಳೆಯ ಪದ ಪ್ರಯೋಗ ಇದು ಗುಂಡಪ್ಪನವರ ಕಾವ್ಯಧಾರೆ!!!

    ಪರಮಾತ್ಮನನ್ನು ನವಿಲಿನ ವರ್ಣ ತಾದಾತ್ಮ್ಯಕ್ಕೆ ಹೋಲಿಸಿ ಜಗತ್ತನ್ನು ಅವನು ಗಮನಿಸುವ ಪರಿ ಹೇಳಿದ್ದೀರಿ. ಇಷ್ಟವಾಯಿತು.

     

ನಿಮ್ಮ ಟಿಪ್ಪಣಿ ಬರೆಯಿರಿ