RSS

ರಸಧಾರೆ – ೪೦೯

28 ಮೇ

ಮಾನುಷದ ಚರಿತೆ ಪರಸತ್ವಸಾಕ್ಷಾತ್ಕವಿತೆ ।
ಕಾಣಿಪುದದಾತ್ಮ ಸ್ವಭಾವದುದ್ಗಮವ ॥
ಏನಾಶೆ! ಯೇನು ಸಾಹಸ! ವೇನು ಭಂಗಗಳು ।
ಅನುಭವವೇದವದು – ಮಂಕುತಿಮ್ಮ

ಪರಸತ್ವಸಾಕ್ಷಾತ್ಕವಿತೆ=ಪರಸತ್ವ+ಸಾಕ್ಷಾತ್+ಕವಿತೆ. ಕಾಣಿಪುದದಾತ್ಮ= ಕಾಣಿಪುದು+ಅದು+ಆತ್ಮ, ಸ್ವಭಾವದುದ್ಗಮವ= ಸ್ವಭಾವದ+ಉದ್ಗಮವ, ಏನಾಶೆ= ಏನು+ಆಶೆ,

ಚರಿತೆ=ಚರಿತ್ರೆ, ಪರಸತ್ವ=ಪರಮಾತ್ಮ ಅಥವಾ ಪರಮಚೇತನ, ಕಾಣಿಪುದು=ತೋರುವುದು,

ಈ ಜಗತ್ತಿನಲ್ಲಿ ಮಾನವರ ಅಸ್ತಿತ್ವದ ಚರಿತ್ರೆಯು ಪರಮ ಚೇತನದ ಆತ್ಮಚರಿತ್ರೆಯ ಕವಿತೆಯಂತಿದೆ. ಅದು ಅಭಿವೃದ್ಧ್ಯಾಭಿಮುಖವಾದ ಆತ್ಮದ ಸ್ವಭಾವವನ್ನು ತೋರುತ್ತದೆ. ಮನುಷ್ಯ ದೇಹವನ್ನು ಧರಿಸಿದ ಚೇತನದ ಆಸೆ, ಸಾಹಸ, ಪ್ರಯತ್ನ. ನಿರಾಸೆ ಮುಂತಾದ ಅನುಭವಗಳನ್ನು ಸಮಗ್ರವಾಗಿ ‘ಅನುಭವವೇದ’ವೆಂದು ಕರೆದಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅವ್ಯಾಹತವಾಗಿ ಹರಿಯುತ್ತಿರುವ ಮಾನವನ ಜೀವನದ ಚರಿತ್ರೆಯನ್ನು ಸೂಕ್ಷ್ಮವಾಗಿ ಅವಗಾಹಿಸಿದರೆ ನಮಗೆ ಮನುಷ್ಯನ ಅಭಿವೃದ್ಧಿಯ ಪರಿಚಯವಾಗುತ್ತದೆ. ‘ಚಕ್ರದ’ ಮತ್ತು ‘ಬೆಂಕಿ’ಯ ಆವಿಷ್ಕಾರದಿಂದ ಹಿಡಿದು ಇಂದಿನ ಪರಮೋತ್ತಮ ವೈಜ್ಞಾನಿಕ ಆವಿಷ್ಕಾರದವರೆಗಿನ ಮನುಷ್ಯನ ಚರಿತ್ರೆ ಒಂದು ಮಹಾ ಕಾವ್ಯದಂತೆ ನಮಗೆ ಕಾಣುತ್ತದೆ.

ಪರಮಾತ್ಮನು ಈ ಜಗತ್ತಿನಲ್ಲಿ ಎಲ್ಲವೂ ತಾನೇ ಆಗಿದ್ದಾನೆ ಮತ್ತು ತಾನೇ ಸೃಷ್ಟಿಸಿದ ಈ ಜಗತ್ತನ್ನು ತಾನೇ ಅನುಭವಿಸುತ್ತಿದ್ದಾನೆ ಮತ್ತು ಬೇರೆ ಬೇರೆ ದೇಹಗಳಲ್ಲಿ ಆತ್ಮದ ರೂಪದಲ್ಲಿ ಪ್ರಕಟಗೊಂಡ ಒಂದೊಂದು ಆತ್ಮವೂ ತನ್ನ ಮೂಲ ಸೇರುವುದಕ್ಕಾಗಿ ಹಲವಾರು ಮಾರ್ಗಗಳನ್ನು ಕಂಡುಕೊಂಡಿದೆ, ಎನ್ನುವುದು ನಮ್ಮ ಸನಾತನ. . ಸೃಷ್ಟಿಯಲ್ಲಿ ಉತ್ತಮೋತ್ತಮ ಸೃಷ್ಟಿಯಾದ ನಮ್ಮ ಮನುಷ್ಯ ಪ್ರಾಣಿ, ‘ನಾದೋಪಾಸನೆ’ಯ ಮೂಲಕ, ‘ಕಲೋಪಾಸನೆ’ಯ ಮೂಲಕ, ‘ವಿಜ್ಞಾನ’ದ ಮೂಲಕ, ‘ಸಾಹಿತ್ಯ’ದ ‘ಜ್ಞಾನ’ದ ಮೂಲಕ, ಜಪ, ತಪ, ಧ್ಯಾನ ಮುಂತಾದವುಗಳ ಮೂಲಕ, ತನ್ನ ಮೂಲವಾದ ಪರಮಾತ್ಮನನ್ನು ಸೇರುವ ಪ್ರಯತ್ನ ಮಾಡಿದ್ದಾನೆ. ಅಂತಹ ಪ್ರಯತ್ನದ ಕಥೆ ಇಂದು ಚರಿತ್ರೆಯ ರೂಪದಲ್ಲಿ ಜಗತ್ತಿನಲ್ಲಿ ಒಂದು ಮಹಾ ಕಾವ್ಯದಂತೆ, ನಿಂತಿದೆ.

ಈ ದಿಶೆಯಲ್ಲಿ ಇವನು ಪಟ್ಟ ಆಶೆಗಳೇನು, ಪ್ರಯತ್ನಗಳೇನು, ಕಂಡ ಜಯವೇನು ಅಪಜಯವೇನು ಸಾಧಿಸಿದ ಸಾಧನೆಗಳೇನು,? ಲೆಕ್ಕಕ್ಕಿಲ್ಲದಷ್ಟು. ಒಬ್ಬ ಕ್ಷತ್ರಿಯ ರಾಜನಾದ ಕೌಶಿಕನು "ಬ್ರಹ್ಮರ್ಷಿ"ಪಟ್ಟಕ್ಕೇರಿ ವಿಶ್ವಾಮಿತ್ರನಾದ ಕತೆ, ತಮ್ಮ ತಪಸ್ಸಿನಿಂದಲೇ ಬೃಹತ್ತಾದ ವೇದ ಜ್ಞಾನ ಸಂಪತ್ತನ್ನು ಪಡೆದು ಈ ಲೋಕಕ್ಕೆ ಸಮರ್ಪಣೆ ಮಾಡಿದ ಋಷಿ ಸಮೂಹದ ಕಥೆ, ರಾಮ,ಕೃಷ್ಣ,ಚಾಣಕ್ಯರಂಥಹ ಮಹನೀಯರು ಈ ಜಗತ್ತಿಗೆ ನೀಡಿದ ಕೊಡುಗೆ ಅಪ್ರತಿಮವಾದದ್ದು. ಇವರೆಲ್ಲರ ಅನುಭವವೂ ಇಂದು ಜಗತ್ತಿನ ಉನ್ನತಿಗೆ ಮಾರ್ಗದರ್ಶನ ಮಾಡುತ್ತಿದೆ. ಅವರ ಅನುಭವವೇ ‘ಅನುಭವವೇದ’. ಅದರ ದರ್ಶನ ನಮಗೆ ಆಗಿ, ನಾವೂ ಸಹ ಈ ಜಗತ್ತನ್ನು ಇನ್ನಷ್ಟು ಸಂಪದ್ಭಾರಿತವನ್ನಾಗಿಸುವ ಕಾರ್ಯದಲ್ಲಿ ನಿರತರಾದರೆ, ನಮ್ಮ ಬದುಕೂ ಸಹ ಸಾರ್ಥಕವಾಗುತ್ತದೆ.

 

ನಿಮ್ಮ ಟಿಪ್ಪಣಿ ಬರೆಯಿರಿ